ದೇಶ ಕಾಲ ಯಾವುದಾದರೇನು ದುಡ್ಡಿನ ಹಿಂದೆ ಬಿದ್ದು ಒದ್ದಾಡುವ, ಹಣವನ್ನೇ ಮುದ್ದಾಡುವ ಜನತೆಯ ಪರದಾಟ ಬಲು ಸೋಜಿಗ. ಈಗಿನ ಕಾಲಘಟ್ಟದಲ್ಲಿ ಹಣವೇ ಸರ್ವಸ್ವ ಆಗಿರುವಂತೆಯೇ ಆಗಿನ ಅಂದರೆ 2400 ವರ್ಷಗಳ ಹಿಂದೆಯೂ ಕುರುಡು ಕಾಂಚಾಣ ಕುಣಿಯುವ ಬಗೆಯನ್ನು ಆರಿಸ್ಟೋಫೇನಸ್ ಎನ್ನುವ ಗ್ರೀಕ್ ನಾಟಕಕಾರ ತನ್ನ ‘ಪ್ಲಟಸ್’ ಎನ್ನುವ ನಾಟಕದಲ್ಲಿ ಅನಾವರಣಗೊಳಿಸಿದ್ದು ಸೋಜಿಗದ ಸಂಗತಿ. ಈ ಕಾಸಿನ ಮಹಿಮೆಯೇ ಅಂತಹುದು, ಎಲ್ಲ ಸಂಬಂಧಗಳನ್ನೂ ಮೀರಿ ಮೆರೆಯುವಂತಹುದು. ಕಾಲಿಗೆ ಬಿದ್ದವರ ತುಳಿಯುವಂತಹುದು.
ಈ ಗ್ರೀಕ್ ನಾಟಕವನ್ನು ಮೈಸೂರಿನ ಪ್ರೊ.ಎಚ್.ಎಸ್.ಉಮೇಶರವರು ಕನ್ನಡಕ್ಕೆ ಅನುವಾದಿಸಿದ್ದು ಕಾರ್ಪೋರೇಟ್ ಕ್ಷೇತ್ರದ ಹರೀಶ್ ಆತ್ರೇಯರವರು ತಮ್ಮ ಆರ್ಥಿಕ ಆಲೋಚನೆಗೆ ತಕ್ಕಂತೆ ಮರು ರೂಪಾಂತರಿಸಿದ್ದಾರೆ. ಈ “MONEYಯೇ ದೇವರು” ಹೆಸರಿನ ನಾಟಕವನ್ನು ಡಾ.ಬಿ.ವಿ.ರಾಜಾರಾಂರವರು ತಮ್ಮ ಕಲಾಗಂಗೋತ್ರಿ ರಂಗತಂಡಕ್ಕೆ ನಿರ್ದೇಶಿಸಿದ್ದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆಗೊಂಡ ‘ ಹೊನ್ನಾರು’ ರಂಗೋತ್ಸವದಲ್ಲಿ ಫೆ.24 ರಂದು ಪ್ರದರ್ಶನಗೊಂಡಿತು.
ಹಣ ಎನ್ನುವುದು ಬದುಕಿಗೆ ಪೂರಕವಾಗಿ ಬೇಕಾದ ಅಗತ್ಯ ಸರಕು. ಆದರೆ ಹಣ ಸಂಪಾದನೆಯೇ ಬದುಕಾದರೆ, ಹಣವೇ ದೇವರಾದರೆ ಏನೆಲ್ಲಾ ಅವಘಡಗಳಾಗುತ್ತವೆ ಎನ್ನುವುದನ್ನು ವಿಡಂಬನಾತ್ಮಕವಾಗಿ ತೋರಿಸುವ ಪ್ರಯತ್ನವನ್ನು “ಹಣವೇ ದೇವರು” ನಾಟಕದಲ್ಲಿ ಮಾಡಲಾಗಿದೆ.
ದುಡ್ಡು ಎನ್ನುವುದು ಮನುಷ್ಯನ ನಿಯಂತ್ರಣದಲ್ಲಿರಬೇಕು. ಆದರೆ ಹಣವೇ ಮನುಷ್ಯರನ್ನು ನಿಯಂತ್ರಿಸುವ ವಿಸ್ಮಯಗಳು ಈ ನಾಟಕದಲ್ಲಿ ಮೂಡಿಬಂದಿದೆ.

ಆತ ಒಬ್ಬ ಮಧ್ಯಮವರ್ಗದ ಪ್ರಾಮಾಣಿಕ ವ್ಯಕ್ತಿ. ಹೆಂಡತಿಯ ಒತ್ತಾಸೆಯಂತೆ ಫ್ಯಾಮಲಿ ಗುರೂಜಿಯವರನ್ನು ಭೇಟಿಯಾಗುತ್ತಾನೆ. ಆ ಗುರುವಿನ ಮಾತಿನಂತೆ ಹೊರಗೆ ಕಂಡ ಮೊದಲ ವ್ಯಕ್ತಿಯನ್ನು ಹಿಂಬಾಲಿಸಿದಾಗ ಭಿಕಾರಿ ವೇಷದ ಕುರುಡ ‘ದುಡ್ಡಪ್ಪ’ ಸಿಕ್ಕುತ್ತಾನೆ. ‘ತಾನೇ ದುಡ್ಡಿನ ದೇವರು, ಶ್ರೀಮಂತರು ತನ್ನ ಕಣ್ಣು ಕಿತ್ತು ಬಂಧನದಲ್ಲಿರಿಸಿದ್ದರು, ಹೇಗೋ ಪಾರಾಗಿ ಬಂದು ವೇಷ ಮರೆಸಿಕೊಂಡಿರುವೆ” ಎಂದು ದುಡ್ಡಪ್ಪ ಹೇಳುತ್ತಾನೆ. ಅದನ್ನು ನಂಬಿ ತನ್ನ ಮನೆಗೆ ಆ ವ್ಯಕ್ತಿ ಕರೆದೊಯ್ಯುತ್ತಾನೆ. ಎಲ್ಲಾ ಜನರಿಗೂ ಬೇಕಾದಷ್ಟು ಹಣ ಹಂಚುವ ಮಾತಾಗುತ್ತದೆ. ಹಾಗೆ ಹಣದ ಹಂಚಿಕೆಯಾದರೆ ಏನೆಲ್ಲಾ ತಾಪತ್ರಯಗಳಾಗುತ್ತವೆ ಎನ್ನುವುದನ್ನು ಈ ನಾಟಕ ತೋರಿಸುತ್ತದೆ.
‘ಎಲ್ಲರೂ ಹಣವಂತರಾದರೆ ಕೆಲಸ ಮಾಡುವವರು ಯಾರು? ಸಮಾನತೆ ಎಂಬುದು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ’ ಎಂಬ ಬಂಡವಾಳಶಾಹಿ ಸಿದ್ಧಾಂತವನ್ನು ಈ ನಾಟಕ ಪ್ರತಿಪಾದಿಸುತ್ತದೆ. ಹಾಗೆ ಪುಕ್ಕಟೆಯಾಗಿ ಹಣವನ್ನು ಹಂಚಿದಾಗ ‘ಎಲ್ಲರೂ ಶ್ರೀಮಂತರಾಗಿ ಕೆಲಸ ಮಾಡಲು ಜನರು ಸಿಗದಂತಾಗುತ್ತದೆ. ಹೇಗೆ ಐದು ಬೆರಳು ಸಮವಾಗಿರಲು ಸಾಧ್ಯವಿಲ್ಲವೋ ಹಾಗೆಯೇ ಎಲ್ಲರೂ ಸಮಾನವಾಗಿರಲು ಸಾಧ್ಯವಿಲ್ಲ. ಅಸಮಾನತೆಯೇ ಈ ಸೃಷ್ಟಿಯ ವೈಚಿತ್ರ್ಯ, ಹೊಟ್ಟೆ ತುಂಬಿದರೆ ಯಾರೂ ದುಡಿಯುವುದಿಲ್ಲ, ಅದರಿಂದ ಸೋಮಾರಿತನ ಬರುತ್ತದೆ, ಸೋಮಾರಿತನದಿಂದ ರೋಗಗಳು ಬರುತ್ತವೆ, ಹೀಗಾಗಿ ದುಡಿಯುವವರು ದುಡಿಯುತ್ತಲೇ ಇರಬೇಕು’ ಸಮಾನತೆ ಸಾಧ್ಯವಾಗಬಾರದು’ ಎನ್ನುವುದು ಈ ನಾಟಕದ ನಿರ್ದೇಶಕರ ಆಶಯವಾಗಿದೆ. ಅದೇ ‘ಹಣದ ದೇವರು’ ನಾಟಕದಾದ್ಯಂತ ವ್ಯಕ್ತವಾಗಿದೆ. ಎಲ್ಲರಿಗೂ ಹಣವನ್ನು ಸಮಾನವಾಗಿ ಹಂಚಿದರೆ ಆಗುವ ಅನಾಹುತಗಳನ್ನು ನಾಟಕದ ಮೂಲಕ ಹೇಳುವ ಹಾಗೂ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮಹತ್ಕಾರ್ಯವನ್ನು ಪ್ರದರ್ಶಿಸುವ ಪ್ರಯತ್ನವನ್ನು ಈ ನಾಟಕದಾದ್ಯಂತ ಮಾಡಲಾಗಿದೆ.
ಆದರೆ ಇದು ಹೊಟ್ಟೆ ತುಂಬಿದವರು ಪ್ರತಿಪಾದಿಸುವ ಪ್ರವಚನವಾಗಿದೆ. ಸಮಾನತೆ ಎನ್ನುವ ಮಾನವೀಯ ಸಿದ್ದಾಂತದ ವಿರುದ್ಧ ಶ್ರೇಣಿಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಮನುವಾದಿಗಳ ಹುನ್ನಾರವಾಗಿದೆ. ಸಮಾನತೆಯ ಆಶಯವನ್ನೇ ತಿರುಚುವ ಪ್ರಜ್ಞಾಪೂರ್ವಕ ಯತ್ನವಾಗಿದೆ. ಅದಕ್ಕಾಗಿ ಸರಕಾರಗಳು ಬಡವರಿಗೆ ಕೊಡಮಾಡುವ ಉಚಿತ ಹಣ ಹಂಚಿಕೆಯನ್ನು ಪರೋಕ್ಷವಾಗಿ ಲೇವಡಿ ಮಾಡಲಾಗಿದೆ.
ಬಾಹುಬಲ, ಬುದ್ಧಿ ಬಲ, ವಂಚನೆಯ ಜಾಲಗಳನ್ನು ಬಲ್ಲವರು ಜನರನ್ನು ಶೋಷಿಸಿ ಶ್ರೀಮಂತರಾಗುತ್ತಲೇ ಹೋದರೆ ದುಡಿಯುವ ಬಹುಸಂಖ್ಯಾತ ಜನರು ಬಡತನದಲ್ಲಿ ಬೇಯಬೇಕಾಗುತ್ತದೆ. ಆಗ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕ ಹೆಚ್ಚಾಗುತ್ತಾ ಅಸಮಾನತೆ ತೀವ್ರವಾಗುತ್ತದೆ. ಆಗ ಜನರ ದಂಗೆ ಅರಾಜಕತೆಗಳು ಹೆಚ್ಚಾಗುತ್ತವೆ. ಹೀಗಾಗದಂತೆ ನಿಯಂತ್ರಿಸಲು ಸರಕಾರಗಳಿರಬೇಕು. ಸಂಪತ್ತಿನ ಮರು ಹಂಚಿಕೆ ಮಾಡಬೇಕು. ಬಂಡವಾಳಿಗರು ಬಹುಜನರ ಶ್ರಮದ ಸುಲಿಗೆಯಿಂದ ಗಳಿಸಿದ ಸಂಪತ್ತನ್ನು ಮತ್ತೆ ಬಡಜನರಿಗೆ ವಿತರಿಸಬೇಕು. ಅದು ದುಡಿಯುವ ಜನರಿಗೆ ಕೊಡುವ ಭಿಕ್ಷೆಯಲ್ಲ, ಶ್ರಮಿಕರ ಹಕ್ಕು. ಶ್ರಮಿಕರು ಇಲ್ಲದೇ ಹೋದರೆ ಶ್ರೀಮಂತರು ಹೇಗೆಲ್ಲಾ ಬಾಧೆ ಪಡುತ್ತಾರೆ ಎಂಬುದನ್ನು ಈ ನಾಟಕದಲ್ಲಿಯೇ ಹೇಳಲಾಗಿದೆ. ದುಡಿಯುವ ವರ್ಗಗಳಿಗೆ ಸಂಪನ್ಮೂಲದ ಹಂಚಿಕೆಯನ್ನು ಲೇವಡಿ ಮಾಡಲಾಗಿದೆ.

ಯಾವಾಗಲೂ ಹಣ ಚಲಾವಣೆಯಲ್ಲಿದ್ದರೆ ಆರ್ಥಿಕ ವ್ಯವಸ್ಥೆ ಸುಸ್ಥಿರವಾಗಿರುತ್ತದೆ. ಇಲ್ಲದೇ ಹೋದರೆ ಶ್ರೀಮಂತರು ಈ ನಾಟಕದ ದುಡ್ಡಪ್ಪನ ಕಣ್ಣು ಕಿತ್ತು ಬಂಧಿಸಿ ಇಟ್ಟಂತೆ ಹಣದ ಚಲನೆ ನಿಲ್ಲಿಸಿದರೆ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗುತ್ತದೆ. ಹಣ ಚಲಾವಣೆಯಲ್ಲಿರಬೇಕಾದರೆ ಅದು ದುಡಿಯುವ ಜನರಿಗೆ ಹಂಚಿಕೆಯಾಗಬೇಕು. ಉಚಿತವಾಗಿ ಕೊಟ್ಟರೂ ತೊಂದರೆ ಏನಿಲ್ಲ. ಯಾಕೆಂದರೆ ಬಹುಸಂಖ್ಯಾತ ದುಡಿಯುವ ವರ್ಗವೇ ದೇಶದ ಆರ್ಥಿಕತೆಯ ಬೆಳವಣಿಗೆಗೆ ಅಪಾರವಾದ ಕೊಡುಗೆ ಕೊಡುತ್ತಿರುವುದು, ಪರೋಕ್ಷವಾಗಿ ತೆರಿಗೆ ಕಟ್ಟುತ್ತಲೇ ಇರುವುದು. ಅವರ ಬೆವರಿನ ಪಾಲನ್ನು ಮರು ಹಂಚಿಕೆ ಮಾಡುವುದನ್ನು ವಿರೋಧಿಸುವುದೇ ಜನವಿರೋಧಿ ನಿಲುವಾಗಿದೆ. ಈ ನಾಟಕದ ನಿರ್ಮಾತೃಗಳು ಕಾರ್ಲ್ ಮಾರ್ಕ್ಸ್ ರವರು ಆರ್ಥಿಕತೆಯ ಬಗ್ಗೆ ಬರೆದಿರುವ ಬಂಡವಾಳ ಪುಸ್ತಕವನ್ನು ಓದಿ ಅರ್ಥ ಮಾಡಿಕೊಳ್ಳಬೇಕಿದೆ.
ದುಡಿಯದ ಕೈಗಳಿಗೆ ಹಣವನ್ನು ಪುಕ್ಕಟೆ ಹಂಚಬಾರದು ಎನ್ನುವುದನ್ನು ಈ ನಾಟಕ ಹೇಳುತ್ತದೆ. ಹೌದು. ಹಣ ಕೊಡದೇ ಇದ್ದರೂ ಉದ್ಯೋಗವನ್ನಾದರೂ ಒದಗಿಸಬೇಕಲ್ಲವೇ?. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ, ಓದಿಗೆ ತಕ್ಕ ಉದ್ಯೋಗವಿಲ್ಲ, ದುಡಿಮೆಗೆ ತಕ್ಕ ಪ್ರತಿಫಲವಿಲ್ಲ. ವಾಸ್ತವ ಹೀಗಿರುವಾಗ ಕಂಫರ್ಟ್ ಜೋನ್ ನಲ್ಲಿರುವವರು ಈ ರೀತಿಯ ನಾಟಕದ ಮೂಲಕ ಪ್ರವಚನ ನೀಡಬಹುದಾಗಿದೆ, ಅಸಮಾನತೆಯನ್ನು ಸಮರ್ಥಿಸಿಕೊಳ್ಳಬಹುದಾಗಿದೆ.
ಹೌದು, ಈ ನಾಟಕದಲ್ಲಿ ತೋರಿಸಿದ ಹಾಗೆ ಇಲ್ಲಿ ಎಲ್ಲಾ ಸೇವೆಗಳೂ ಮಾರಾಟಕ್ಕಿವೆ. ಶಿಕ್ಷಣ, ಆರೋಗ್ಯ ಅಷ್ಟೇ ಯಾಕೆ ಸಮಾಜ ಸೇವೆ, ಧಾರ್ಮಿಕ ಸೇವೆಗಳೂ ಮಾರಾಟಕ್ಕಿವೆ. ಈ ಎಲ್ಲಾ ಸೇವೆಗಳ ಹೆಸರಲ್ಲಿ ಹಣ ಸುಲಿಗೆ ಮಾಡುವವರು ಉಳ್ಳವರೇ ಹೊರತು ಇಲ್ಲದವರಲ್ಲ. ಹೀಗೆ ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟ ವ್ಯವಸ್ಥೆಯನ್ನು, ಆರ್ಥಿಕ ಸಾಮಾಜಿಕ ಅಸಮಾನತೆಯ ಸೃಷ್ಟಿಗೆ ಕಾರಣವಾದ ಸರಕಾರಗಳನ್ನು ಪ್ರಶ್ನಿಸುವ ಕೆಲಸವನ್ನು ಈ ನಾಟಕ ಮಾಡಬೇಕಿತ್ತು. ದುಡಿಯುವ ಜನರ ಹಣದ ಆಸೆಯನ್ನು ಹೇಳುವ ಮುನ್ನ ಶ್ರೀಮಂತರ ದುರಾಸೆಯ ಬಗ್ಗೆ ಈ ನಾಟಕ ಮಾತಾಡಬೇಕಿತ್ತು. ಬಡತನವನ್ನು ಲೇವಡಿ ಮಾಡುವುದು ಸುಲಭ, ಆದರೆ ಅದಕ್ಕೆ ಕಾರಣೀಕರ್ತರಾದ ಬಂಡವಾಳಿಗರನ್ನು, ಕಾರ್ಪೋರೇಟ್ ಹುನ್ನಾರಗಳನ್ನು, ಇವರನ್ನು ಬೆಂಬಲಿಸುವ ಅಧಿಕಾರಸ್ಥರನ್ನು, ಒಟ್ಟಾರೆಯಾಗಿ ಉಳ್ಳವರ ಹಿತಾಸಕ್ತಿಯ ಪರವಾಗಿರುವ ಆಳುವ ವ್ಯವಸ್ಥೆಯನ್ನು ತೀವ್ರವಾಗಿ ಪ್ರಶ್ನಿಸಬೇಕಿತ್ತು. ಅಸಮಾನತೆಗೆ ಕಾರಣಗಳು ಹಾಗೂ ಪರಿಹಾರವನ್ನು ತೋರಿಸಬೇಕಿತ್ತು. ಆದರೆ ಅಸಮಾನತೆಯೇ ಸೃಷ್ಟಿಯ ವಿಧಾನ ಎನ್ನುವ ಸಮರ್ಥನೆಯೇ ಅಪಾಯಕಾರಿ. ಸಮಾಜದ ಆರ್ಥಿಕ, ಸಾಮಾಜಿಕ ಅಸಮಾನತೆ ಸೃಷ್ಟಿ ಸೃಷ್ಟಿಸಿದ್ದಲ್ಲಾ, ಬಂಡವಾಳಿಗರ ಪರವಾಗಿರುವ ವ್ಯವಸ್ಥೆ ಹುಟ್ಟಿಸಿದ್ದು. ಸಾಮಾಜಿಕ ಅವ್ಯವಸ್ಥೆಯನ್ನು ಹೇಳುತ್ತಲೇ ಅದಕ್ಕೆ ಮೂಲ ಕಾರಣವಾದ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವೇ ವಿತಂಡವಾದದಂತಿದೆ. ಈ ನಾಟಕದಲ್ಲಿ ಹೇಳಿದಂತೆ ಹೊಟ್ಟೆ ತುಂಬಿದರೆ ಸೋಮಾರಿತನ ಬರುತ್ತದೆ ಎನ್ನುವುದೇ ನಿಜವಾದರೆ ಈಗ ಇರುವ ಶ್ರೀಮಂತರು, ಉದ್ಯಮಪತಿಗಳು, ಅಂಬಾನಿ ಆದಾನಿಗಳು ಸೋಮಾರಿಗಳಾಗಿರಬೇಕಾಗಿತ್ತು, ಯಾಕಿಲ್ಲ ? ಎಂಬುದಕ್ಕೆ ಈ ನಾಟಕದಲ್ಲಿ ಉತ್ತರವಿಲ್ಲ. ಈಗಿರುವ ಶ್ರೀಮಂತರುಗಳು ಸೋಮಾರಿಗಳಾಗಿರದೇ ತಮ್ಮ ಆರ್ಥಿಕ ವ್ಯವಹಾರಗಳನ್ನು ವಿಸ್ತರಿಸುತ್ತಲೇ ಇರುವಾಗ, ಬಡಜನರಿಗೆ ಶ್ರೀಮಂತಿಕೆ ಬಂದರೆ ಸೋಮಾರಿಗಳಾಗುತ್ತಾರೆ ಎಂಬ ಸಿದ್ಧಾಂತವೇ ಜನವಿರೋಧಿಯಾಗಿದೆ. ಈ ನಾಟಕ ಅದನ್ನೇ ಪ್ರತಿಪಾದಿಸುತ್ತದೆ.

ನಾಟಕದ ಉದ್ದೇಶವನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಎರಡೂ ಕಾಲು ಗಂಟೆ ಅವಧಿಯ ಸುದೀರ್ಘ ನಾಟಕ ನೋಡುಗರ ಸಹನೆಯನ್ನು ಬಯಸುತ್ತದೆ. ದೃಶ್ಯಗಳ ಮೂಲಕ ಕಟ್ಟಿಕೊಡಬಹುದಾದ್ದನ್ನು ದೀರ್ಘ ಸಂಭಾಷಣೆಗಳ ಮೂಲಕ ಅನೇಕಾನೇಕ ವಿಷಯಗಳನ್ನು ಹೇಳಿಸಲಾಗಿದೆ. ಮೊದಲ ಪ್ರದರ್ಶನವಾಗಿದ್ದರಿಂದಲೋ ಏನೋ ಇನ್ನೂ ಈ ಪ್ರದರ್ಶನ ತಾಲಿಂ ಹಂತದಲ್ಲಿದೆ. ಭಾಷಣಗಳಂತಿರುವ ಸರಣಿ ಮಾತುಗಳನ್ನು ತುಂಡರಿಸಿದರೆ, ಅನಗತ್ಯ ದೃಶ್ಯಗಳನ್ನು ಕಡಿತಗೊಳಿಸಿದರೆ, ದೃಶ್ಯದಿಂದ ದೃಶ್ಯಕ್ಕೆ ಲಿಂಕ್ ಕೊಟ್ಟಿದ್ದರೆ, ತುಂಬಾ ವಿಷಯಗಳನ್ನು ಒಂದೇ ನಾಟಕದಲ್ಲಿ ಹೇಳುವ ಧಾವಂತಕ್ಕೆ ಕಡಿವಾಣ ಹಾಕಿದ್ದರೆ, ಕನಿಷ್ಟ ಒಂದು ಗಂಟೆಯಷ್ಟು ಎಡಿಟ್ ಮಾಡಿದರೆ ಈ ನಾಟಕ ಸಹ್ಯವಾಗಬಹುದಾಗಿದೆ. ನೋಡುಗರನ್ನು ರಂಜಿಸಬಹುದಾಗಿದೆ. ಅನುಭವಿ ನಿರ್ದೇಶಕರ ಮೇಲೆ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ನೋಡುಗರ ಸಹನೆ ಪರೀಕ್ಷಿಸದೇ ಮನರಂಜಿಸಿದರೆ ಅವರ ಪರಿಶ್ರಮ ಸಾರ್ಥಕವಾಗಬಹುದಾಗಿದೆ.
ಈ ನಾಟಕದ ಮೂಲಕ ರಂಗಭೂಮಿಗೆ ಯುವ ತಲೆಮಾರಿನ ಯುವಕ ಯುವತಿಯರು ಬಂದಿರುವುದು ಸಂತಸದ ಸಂಗತಿ. ಹೊಸ ಚಿಗುರು ಎಷ್ಟೇ ಮಿಂಚಿದರೂ ಹಳೆಯ ಬೇರಿನಂತಿರುವ ಶ್ರೀನಿವಾಸ ಮೇಷ್ಟ್ರ ಅಭಿನಯಕ್ಕೆ ಸಾಟಿಯಾಗಲಾರರು. ದುಡ್ಡಪ್ಪನಾಗಿ ಮೇಷ್ಟ್ರ ಅಭಿನಯ ಈ ನಾಟಕದ ಜೀವಾಳ. ಪ್ರವೀಣ್ ಹಾಗೂ ಪ್ರದೀಪ್ ರವರ ಸಂಗೀತ ಸಂಯೋಜನೆ ಹಾಗೂ ಹಾಡುಗಳು ಕೇಳುಗರಲ್ಲಿ ಸಂಚಲನವನ್ನು ಹುಟ್ಟಿಸಿತು. ದೃಶ್ಯಗಳನ್ನು ಬೆಳಗಿರುವ ಬೆಳಕು ಅಗತ್ಯ ಮೂಡ್ ಸೃಷ್ಟಿಸುವಂತೆ ವಿನ್ಯಾಸಗೊಳಿಸಬೇಕಿತ್ತು.
ಅರ್ಧ ವೇದಿಕೆಯನ್ನು ಆಕ್ರಮಿಸಿರುವ ಸೆಟ್ ಈ ನಾಟಕಕ್ಕೆ ಯಾಕೋ ಭಾರವಾದಂತಿದೆ. ಜಾಲರಿಯಂತಹ ಪರದೆಗಳನ್ನು ಅದ್ಯಾಕೆ ಇಳಿಬಿಟ್ಟಿದ್ದರೋ, ಅದರ ಕೆಳಗೆ ಟೇಬಲ್ ನಂತೆ ಪ್ಲಾಟ್‌ಫಾರಂಗಳನ್ನು ಯಾಕೆ ಇಟ್ಟಿದ್ದರೋ ಗೊತ್ತಾಗಲಿಲ್ಲ. ರಾವಣನ ಪ್ರತಿಮೆಯ ಉದ್ದೇಶ ಕಮ್ಯೂನಿಕೇಟ್ ಆಗಲಿಲ್ಲ. ಮೊಟ್ಟ ಮೊದಲ ಪ್ರದರ್ಶನವಾಗಿದ್ದರಿಂದ ನ್ಯೂನತೆಗಳನ್ನು ನೋಡುಗರು ಮನಸಿಗೆ ಹಾಕಿಕೊಳ್ಳದೇ ಹೊಟ್ಟೆಗೆ ಹಾಕಿಕೊಳ್ಳಬೇಕಿದೆ. ಟಿಕೆಟ್ಟಿಗೆ ಕೊಟ್ಟ ಇನ್ನೂರು ಮುನ್ನೂರು ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದೆ ಅಂದುಕೊಳ್ಳಬೇಕಿದೆ. ಮುಂದಿನ ಪ್ರದರ್ಶನಗಳಲ್ಲಿ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿಗಳು
ಇದನ್ನೂ ಓದಿ- http://ನಾಟಕ ವಿಮರ್ಶೆ | “ನೀರಗನ್ನಡಿ”ಯಲ್ಲಿ ಸಂದೇಹ ತಂದ ದುರಂತದ ಪ್ರತಿಬಿಂಬ https://kannadaplanet.com/drama-review-neeragannadi/


