ದೇವರು ಅನ್ನೋದು ನಂಬಿಕೆಯ ವಿಷಯದ ಹೊರತಾಗಿ, ಅದು ವ್ಯವಸ್ಥೆಯ ಗುಣಮಟ್ಟ. ಅಲ್ಲಿನ ಜನರ ಶಿಸ್ತಿನ ಜೀವನಶೈಲಿ, ನಿಯಮಗಳ ಮೇಲಿನ ಗೌರವ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಮನುಷ್ಯತ್ವಕ್ಕೆ ಕೊಡುವ ಮೌಲ್ಯ… ಇವೆಲ್ಲವನ್ನು ನೋಡಿದಾಗ ದೇವರು ದೇವಸ್ಥಾನದಲ್ಲಿಲ್ಲ, ವ್ಯವಸ್ಥೆಯಲ್ಲಿ ಇದ್ದಾನೆ ಅನ್ನೋ ಭಾವನೆ ಮೂಡಿತು – ಅಷ್ಪಾಕ್. ಎಂ. ಜಿ, ಬಿ. ಎ ಪದವಿ ವಿದ್ಯಾರ್ಥಿ.
ಕೇರಳವನ್ನು “ದೇವರ ನಾಡು” ಎಂದು ಕರೆಯುವುದನ್ನು ನಾನು ನಾಸ್ತಿಕನ ದೃಷ್ಟಿಯಿಂದಲೇ ಪ್ರಶ್ನಿಸುತ್ತಾ ಅಲ್ಲಿಗೆ ಹೊರಟಿದ್ದೆ. “ದೇವರು ಇದ್ದರೆ ಎಲ್ಲೆಲ್ಲೂ ಇರಬೇಕು, ಒಂದು ರಾಜ್ಯಕ್ಕೆ ಮಾತ್ರ ಯಾಕೆ?” ಎಂಬ ಪ್ರಶ್ನೆ ನನ್ನೊಳಗಿತ್ತು. ಆದರೆ ಕೇವಲ ಐದು ದಿನಗಳ ಸುತ್ತಾಟದಲ್ಲೇ ಒಂದು ಸತ್ಯ ಸ್ಪಷ್ಟವಾಯಿತು. ಏನೆಂದರೆ —
ದೇವರು ಅನ್ನೋದು ನಂಬಿಕೆಯ ವಿಷಯದ ಹೊರತಾಗಿ, ಅದು ವ್ಯವಸ್ಥೆಯ ಗುಣಮಟ್ಟ. ಅಲ್ಲಿನ ಜನರ ಶಿಸ್ತಿನ ಜೀವನಶೈಲಿ, ನಿಯಮಗಳ ಮೇಲಿನ ಗೌರವ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಮನುಷ್ಯತ್ವಕ್ಕೆ ಕೊಡುವ ಮೌಲ್ಯ — ಇವೆಲ್ಲವನ್ನು ನೋಡಿದಾಗ ದೇವರು ದೇವಸ್ಥಾನದಲ್ಲಿಲ್ಲ, ವ್ಯವಸ್ಥೆಯಲ್ಲಿ ಇದ್ದಾನೆ ಅನ್ನೋ ಭಾವನೆ ಮೂಡಿತು.

ಕೇರಳದಲ್ಲಿ ದೇವರು ಅಂದ್ರೆ ಪೂಜೆ ಅಲ್ಲ, ಅದು ಸಂಸ್ಕೃತಿ, ಶಿಸ್ತು, ಮತ್ತು ಒಬ್ಬರಿಗೊಬ್ಬರು ಕೊಡುವ ಗೌರವ. ಅಭಿವೃದ್ಧಿ ಅಂದ್ರೆ ಕೇವಲ ಕಟ್ಟಡಗಳಲ್ಲ. ನಮ್ಮಲ್ಲಿ ಅಭಿವೃದ್ಧಿ ಅಂದ್ರೆ ಎತ್ತರದ ಕಟ್ಟಡಗಳು, ದೊಡ್ಡ ಘೋಷಣೆಗಳು. ಆದರೆ ಕೇರಳದಲ್ಲಿ ಅಭಿವೃದ್ಧಿ ಅಂದ್ರೆ ಜನರ ದಿನಬದುಕು ಸುಲಭವಾಗುವ ವ್ಯವಸ್ಥೆ. ರಸ್ತೆ ನಿರ್ಮಾಣಕ್ಕೆ ಜಾಗವಿದ್ದರೂ ವರ್ಷಗಟ್ಟಲೆ ತಡಮಾಡುವ ನಾವು, ಜಾಗವಿಲ್ಲದಿದ್ದರೂ ಗುಡ್ಡ–ಬೆಟ್ಟಗಳ ನಡುವೆ ಪರಿಸರಕ್ಕೆ ಸಾಧ್ಯವಾದಷ್ಟು ಹಾನಿ ಕಡಿಮೆ ಮಾಡಿ ರಸ್ತೆ ನಿರ್ಮಾಣ ಮಾಡಿದವರನ್ನು ನೋಡಿದೆ.
ಅಲ್ಲಿ ರಸ್ತೆ ಅಂದ್ರೆ ರಾಜಕೀಯ ಘೋಷಣೆ ಅಲ್ಲ, ಅದು ಜನರ ದಿನನಿತ್ಯದ ಅಗತ್ಯ. ಅಭಿವೃದ್ಧಿಯನ್ನು ಅವರು ಪ್ರದರ್ಶನವನ್ನಾಗಿ ಮಾಡಲ್ಲ, ಅದನ್ನು ಜೀವನಶೈಲಿಯ ಭಾಗವನ್ನಾಗಿ ಮಾಡುತ್ತಾರೆ. ಆರೋಗ್ಯ ಐಶ್ವರ್ಯವಲ್ಲ, ಸಾಮಾಜಿಕ ಹೊಣೆಗಾರಿಕೆ. ಕೇರಳದ ಸರ್ಕಾರಿ ಆಸ್ಪತ್ರೆಗಳು ನನಗೆ ಆಶ್ಚರ್ಯ ತಂದವು. ಶ್ರೀಮಂತರಿಗೆ ಮಾತ್ರವಲ್ಲ, ಬಡವರಿಗೂ ಅಲ್ಲಿನ ಆಸ್ಪತ್ರೆಗಳು ಕೊಡುವ ಗೌರವ, ಚಿಕಿತ್ಸೆಯ ಗುಣಮಟ್ಟ, ಸ್ವಚ್ಛತೆ — ಇವೆಲ್ಲವೂ ಒಂದು ಪಾಠ. ಅಲ್ಲಿ ಆರೋಗ್ಯ ಅಂದ್ರೆ ವೈಯಕ್ತಿಕ ಐಶ್ವರ್ಯವಲ್ಲ,ಅದು ಸಾಮಾಜಿಕ ಹೊಣೆಗಾರಿಕೆ. ಕೋವಿಡ್ ಕಾಲದಲ್ಲಿ ಕೇರಳ ತೋರಿಸಿದ ನಿರ್ವಹಣೆ ಇಂದಿಗೂ ಮಾದರಿಯಾಗಿದೆ. ಅದು ಅದೃಷ್ಟವಲ್ಲ. ಅದು ವರ್ಷಗಳಿಂದ ಕಟ್ಟಿಕೊಂಡ ವ್ಯವಸ್ಥೆಯ ಫಲ.
ನಿಷೇಧಗಳು ಅಲ್ಲ ಜವಾಬ್ದಾರಿ
ಒಂದು ಕಡೆ ನಾವು ತಂಬಾಕು, ಮದ್ಯದ ಜಾಹೀರಾತುಗಳನ್ನು ಸರಕಾರಿ ಬಸ್ಸುಗಳ ಮೇಲೆಯೇ ಹಾಕಿ ಪ್ರೋತ್ಸಾಹಿಸುವವರು. ಇನ್ನೊಂದು ಕಡೆ ಕೇರಳ ಅವುಗಳನ್ನು ನಿಯಂತ್ರಿಸಿ ಆರೋಗ್ಯಕರ ಸಮಾಜ ಕಟ್ಟಲು ಯತ್ನಿಸುವ ರಾಜ್ಯ. ಅಲ್ಲಿ ಸರ್ಕಾರ “ಮಾಡಬೇಡಿ” ಅಂತ ಹೇಳುವುದಿಲ್ಲ, “ಇದರಿಂದ ಸಮಾಜಕ್ಕೆ ಏನು ಆಗುತ್ತದೆ” ಅಂತ ತಿಳಿಸುತ್ತಾರೆ. ಅದರ ಹಿಂದೆ ಶಿಕ್ಷಣ ಇದೆ, ಜಾಗೃತಿ ಇದೆ.
ಪ್ಲಾಸ್ಟಿಕ್ ಇಲ್ಲದೆ ಜೀವನವೇ ಇಲ್ಲ ಎನ್ನುವ ನಮಗೆ, ಪ್ಲಾಸ್ಟಿಕ್ ಮುಕ್ತ ರಾಜ್ಯದ ಕನಸನ್ನು ಕಾರ್ಯರೂಪಕ್ಕೆ ತಂದಿರುವ ಕೇರಳ
ಅಭಿವೃದ್ಧಿ ಅಂದ್ರೆ ಜಾಗೃತಿ ಅನ್ನೋದನ್ನು ಸ್ಪಷ್ಟಪಡಿಸುತ್ತದೆ.
ಪ್ರವಾಸಿ ತಾಣಗಳಲ್ಲಿ ಮನುಷ್ಯತ್ವ
ಕೇರಳದ ಪ್ರವಾಸಿ ತಾಣಗಳಲ್ಲಿ ನನಗೆ ಹೆಚ್ಚು ಗಮನ ಸೆಳೆದದ್ದು ಕೇವಲ ಪ್ರಕೃತಿಯ ಸೌಂದರ್ಯವಲ್ಲ, ಅಲ್ಲಿನ ಜನರ ವರ್ತನೆ.
ಪ್ರವಾಸಿಗರನ್ನು ಅವರು “ಗ್ರಾಹಕರು” ಎಂದು ನೋಡದೆ, “ಅತಿಥಿಗಳು” ಎಂದು ನೋಡುತ್ತಾರೆ ಅನ್ನೋ ಭಾವನೆ ಅನೇಕ ಸಂದರ್ಭಗಳಲ್ಲಿ ಅನುಭವಕ್ಕೆ ಬಂದಿತು.
ದಾರಿ ತಪ್ಪಿದಾಗ ಕೇಳಿದ ಪ್ರಶ್ನೆಗೆ ನಿರ್ಲಕ್ಷ್ಯವಲ್ಲ, ಸಮಯ ತೆಗೆದುಕೊಂಡು ವಿವರಿಸುವ ಸಹನೆ; ಭಾಷೆ ಗೊತ್ತಿಲ್ಲದಿದ್ದರೂ ಮುಖದ ನಗು ಕಳೆದುಕೊಳ್ಳದ ಆತಿಥ್ಯ; ಪ್ರವಾಸಿ ಸ್ಥಳಗಳಲ್ಲಿ ಹಣದ ಮೇಲೆ ಮಾತ್ರ ಗಮನವಲ್ಲದೆ, ಪ್ರವಾಸಿಗನ ಅನುಭವದ ಮೇಲಿರುವ ಕಾಳಜಿ ಇವೆಲ್ಲವೂ ಗಮನಾರ್ಹ. ಹೋಟೆಲ್, ಹೋಂಸ್ಟೇ, ಬೋಟ್ ಜೆಟ್ಟಿ, ಚಹಾ ಅಂಗಡಿ ಅಥವಾ ಸರ್ಕಾರಿ ಬಸ್ — ಎಲ್ಲೆಲ್ಲೂ ಪ್ರವಾಸಿಗನಿಗೆ “ನಿಮಗೆ ಇಲ್ಲಿ ಸ್ವಾಗತ” ಅನ್ನೋ ಭಾವನೆ ಮೂಡಿಸುವ ನಡವಳಿಕೆ ಕಂಡುಬಂತು. ಅಲ್ಲಿ ಪ್ರವಾಸೋದ್ಯಮ ಅಂದ್ರೆ ಕೇವಲ ಆದಾಯದ ಮೂಲವಲ್ಲ; ಅದು ಸಂಸ್ಕೃತಿಯ ಭಾಗ. ನಾವು ರಾಜ್ಯಭಿಮಾನವನ್ನು ನವೆಂಬರ್ 1ರಂದು ಮಾತ್ರ ನೆನಪಿಸಿಕೊಳ್ಳುವವರು. ಆದರೆ ಕೇರಳದಲ್ಲಿ ರಾಜ್ಯಭಿಮಾನ ಅಂದ್ರೆ ಪ್ರತಿದಿನದ ನಡೆ. ಸಾರ್ವಜನಿಕ ಆಸ್ತಿಯನ್ನು ಕಾಪಾಡುವುದು, ಕಾನೂನು ಪಾಲನೆ, ತೆರಿಗೆ ಕಟ್ಟುವುದು, ಸಾಮಾನ್ಯನಿಗೂ ಗೌರವ ಇವೇ ಅವರ ರಾಜ್ಯಭಕ್ತಿ. ನಾವು ವಿಶಾಲ ಹೃದಯದವರೇ ಸರಿ, ಆದರೆ ರಾಜ್ಯಭಿಮಾನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಬೇಕಾಗಿರುವುದು ವಿಶಾಲ ಹೃದಯವಲ್ಲ, ಸ್ಪಷ್ಟ ನಿಲುವು..
ಮಹಿಳೆ, ಶ್ರಮ, ಸಮಾನತೆ
ಕೇರಳದಲ್ಲಿ ಮಹಿಳೆಯರ ಸಾರ್ವಜನಿಕ ಭಾಗವಹಿಸುವಿಕೆ, ಸ್ವತಂತ್ರ ನಿರ್ಣಯ, ಶ್ರಮಕ್ಕೆ ಕೊಡುವ ಗೌರವ — ಇವೆಲ್ಲವೂ ಸಮಾಜದ ಆರೋಗ್ಯದ ಸೂಚಕ. ಅಲ್ಲಿ ಕೆಲಸ ಚಿಕ್ಕದು–ದೊಡ್ಡದು ಅನ್ನೋ ಭಾವನೆ ಕಡಿಮೆ. ಶ್ರಮಕ್ಕೆ ಗೌರವ ಇದೆ. ಅದೇ ನಿಜವಾದ ಸಂಸ್ಕೃತಿ. ಎಲ್ಲದರ ಬೇರು ಶಿಕ್ಷಣ ಮತ್ತು ಪ್ರಾದೇಶಿಕ ರಾಜಕೀಯ.

ಇವೆಲ್ಲವನ್ನು ಗಮನಿಸಿದಾಗ ಒಂದು ವಿಷಯ ಮಾತ್ರ ಸ್ಪಷ್ಟವಾಯಿತು – ದೇಶದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ ಕೇರಳ ಏಕೆ ಅನ್ನೋದಕ್ಕೆ, ಶಿಕ್ಷಣವೇ ಉತ್ತರ. ಅಲ್ಲಿ ಶಿಕ್ಷಣ ಅಂದ್ರೆ ಕೇವಲ ಅಕ್ಷರ ಜ್ಞಾನವಲ್ಲ. ಅದು ಪ್ರಶ್ನಿಸುವ ಶಕ್ತಿ, ಸಮಾನತೆಯ ಅರಿವು, ಸಾಮಾಜಿಕ ಹೊಣೆಗಾರಿಕೆ. ಇದರ ಜೊತೆಗೆ ಒಂದು ಮಹತ್ವದ ಅಂಶ ಇದೆ. ಅದು ಪ್ರಾದೇಶಿಕ ರಾಜಕೀಯದ ಬಲ. ಕೇರಳದ ಆಡಳಿತಗಳು ದಿಲ್ಲಿಯ ರಾಜಕೀಯಕ್ಕಿಂತ ತಮ್ಮ ರಾಜ್ಯದ ಅಗತ್ಯಗಳಿಗೆ ಆದ್ಯತೆ ನೀಡಿವೆ. ಪ್ರಾದೇಶಿಕ ಪಕ್ಷಗಳು ವಿಭಜನೆಯ ಸಂಕೇತವಲ್ಲ. ಅವು ಸ್ಥಳೀಯ ಸಮಸ್ಯೆಗಳಿಗೆ ನೆಲಮಟ್ಟದ ಪರಿಹಾರ ನೀಡುವ ರಾಜಕೀಯ.
ದೋಷ ಎಲ್ಲಿದೆ…?
ಇವೆಲ್ಲವನ್ನ ನೋಡಿದ ಮೇಲೆ ಒಂದು ಪ್ರಶ್ನೆ ನನ್ನೊಳಗೆ ತೀವ್ರವಾಗಿ ಮೂಡಿತು —ದೋಷ ವ್ಯವಸ್ಥೆಯಲ್ಲಿದೆಯೇ? ಜನರಲ್ಲಿದೆಯೇ? ರಾಜಕೀಯದಲ್ಲಿದೆಯೇ?ಪ್ರಾಮಾಣಿಕವಾಗಿ ಹೇಳಬೇಕಾದರೆ, ದೋಷ ಒಂದೇ ಕಡೆ ಇಲ್ಲ.ವ್ಯವಸ್ಥೆ ಜನರಿಂದ ಹುಟ್ಟುತ್ತದೆ,ರಾಜಕೀಯ ಜನರಿಂದ ಆಯ್ಕೆಯಾಗುತ್ತದೆ,ಜನರ ನಡೆ ವ್ಯವಸ್ಥೆಯನ್ನು ರೂಪಿಸುತ್ತದೆ.ನಾವು ವ್ಯವಸ್ಥೆಯನ್ನು ಶಪಿಸುತ್ತೇವೆ . ರಾಜಕೀಯವನ್ನು ದೂರುತ್ತೇವೆ,ಆದರೆ ಮತ ಹಾಕುವಾಗ ವಿಚಾರಕ್ಕಿಂತ ಭಾವನೆ ಮುಖ್ಯವಾಗುತ್ತದೆ.
ಕೇರಳ ಪರಿಪೂರ್ಣ ಸಮಾಜವಲ್ಲ. ಅಲ್ಲಿಯೂ ಸಮಸ್ಯೆಗಳಿವೆ. ಆದರೆ ಒಂದು ವ್ಯತ್ಯಾಸ ಇದೆ. ಅಲ್ಲಿ ಜನರು ವ್ಯವಸ್ಥೆಯನ್ನು ತಮ್ಮದೇ ಅಂತ ಭಾವಿಸುತ್ತಾರೆ. ಆಗ ನನಗೆ ಅರ್ಥವಾಯಿತು ದೇವರು ಆಕಾಶದಿಂದ ಇಳಿದು ಬರುವ ಶಕ್ತಿ ಅಲ್ಲ.ಅದು ಶಿಕ್ಷಣದಲ್ಲಿ ಬೆಳೆದ ಮನಸ್ಸುಗಳಲ್ಲಿ, ವ್ಯವಸ್ಥೆಯಲ್ಲಿ ನಿಂತ ಮೌಲ್ಯಗಳಲ್ಲಿ, ಮನುಷ್ಯತ್ವದಲ್ಲಿ ಜೀವಿಸುವ ಸಂಸ್ಕೃತಿಯಲ್ಲಿ ಇರುತ್ತಾನೆ. ನಾನು ನಾಸ್ತಿಕನಾಗಿದ್ದರೂ, ಕೇರಳವನ್ನು ನೋಡಿದ ಮೇಲೆ “ದೇವರೇ ಅಲ್ಲಿ ನೆಲೆಸಿದ್ದಾನೆ” ಎಂದು ಒಪ್ಪಿಕೊಳ್ಳಬೇಕಾಯಿತು.
ಕೇರಳ ದೇವರ ನಾಡು ಆಗಿರೋದು ನಂಬಿಕೆಯ ಕಾರಣಕ್ಕೆ ಅಷ್ಟೇ ಅಲ್ಲ ವಿಚಾರ ಮತ್ತು ವ್ಯವಸ್ಥೆಯ ಕಾರಣಕ್ಕೆ…
ಅಷ್ಪಾಕ್. ಎಂ. ಜಿ
ಬಿ. ಎ ಪದವಿ ಅಂತಿಮ ವರ್ಷ
ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ

