ವ್ಯಾಸರ ಮಹಾಭಾರತ ಮಹಾಕಾವ್ಯಕ್ಕೆ ವಿಭಿನ್ನ ರಂಗ ಆಯಾಮವನ್ನು ಕೊಡುವ ವಿಶಿಷ್ಟ ನಾಟಕ ‘ಮಹಾಯುಗ’. ಜೋಸೆಫ್ ಜಾನ್ ರವರು ಈ ರಂಗ ಪ್ರಯೋಗವನ್ನು ನಿರ್ದೇಶಿಸಿದ್ದು, ಏಳು ಕಲಾವಿದರ ದೇಹಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಮಹಾಭಾರತದ ಪ್ರಮುಖ ಸನ್ನಿವೇಶಗಳನ್ನು ಕಟ್ಟಿಕೊಟ್ಟು ರಂಗದಂಗಳದಲ್ಲಿ ಸಂಚಲನವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾಭಾರತದ ಪಠ್ಯವನ್ನು ಕೆ.ಎಸ್.ರಂಗೇಗೌಡ ಹಾಗೂ ಕೆ.ಎನ್.ತ್ಯಾಗರಾಜರವರು ರಂಗಪಠ್ಯವಾಗಿ ವಿಸ್ತರಿಸಿದ್ದು ಬೆಂಗಳೂರಿನ ‘ಸುಸ್ಥಿರ ಪ್ರತಿಷ್ಠಾನ’ವು ನಿರ್ಮಿಸಿ ಪ್ರಾಯೋಜಿಸಿದ ‘ಮಹಾಯುಗ’ ವು ಫೆಬ್ರುವರಿ 15 ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಆಯೋಜಿಸಿದ್ದ “ಶಿವರಾತ್ರಿ ರಂಗ ಸಂಗಮ” ದಲ್ಲಿ ಪ್ರದರ್ಶನಗೊಂಡಿತು.
ಪಗಡೆಯಾಟದಲಿ ಪಾಂಡವರು ದ್ರೌಪತಿಯನ್ನು ಪಣಕ್ಕಿಟ್ಟು ಸೋತಿದ್ದು, ಕೃಷ್ಣ ಸಂಧಾನ ವಿಫಲವಾಗಿದ್ದು, ಕುರುಕ್ಷೇತ್ರ ಮಹಾಯುದ್ಧ ಘೋಷಣೆಯಾಗಿದ್ದು, ಕರ್ಣನ ವಿರೋಧದ ನಡುವೆಯೂ ಭೀಷ್ಮರನ್ನು ಸೈನ್ಯಾಧಿಪತಿ ಮಾಡಿದ್ದು ಭೀಷ್ಮರ ನಂತರ ಯುದ್ದಕ್ಕಿಳಿದ ಕರ್ಣ ಮೋಸದಿಂದ ಹತನಾಗಿದ್ದು ಕೊನೆಗೆ ವೈಶಂಪಾಯಣ ಸರೋವರದಲ್ಲಿ ಅಡಗಿದ ದುರ್ಯೋಧನನ್ನು ಭೀಮ ತೊಡೆ ಮುರಿದು ಹತ್ಯೆ ಮಾಡಿದ್ದು.. ಈ ಎಲ್ಲಾ ಘಟನೆಗಳು ಮಹಾಭಾರತದ ಅರಿವು ಇರುವವರಿಗೆ ಗೊತ್ತಿರುವಂತಹುದೇ. ಆದರೆ ಈ ಗೊತ್ತಿರುವ ಘಟನೆಗಳನ್ನು ದೃಶ್ಯಕಾವ್ಯದಂತೆ ಮರುಸೃಷ್ಟಿ ಮಾಡಿದ ಪರಿಯನ್ನು ಈ ನಾಟಕ ನೋಡಿಯೇ ಅನುಭವಿಸಬೇಕು.

ವ್ಯಾಸ ಭಾರತವನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಜೊತೆಗೆ ಯುದ್ಧದ ನಿರರ್ಥಕತೆ ಹಾಗೂ ಅದರ ದುಷ್ಪರಿಣಾಮಗಳನ್ನು ತೋರಿಸುವಲ್ಲಿ ಈ “ಮಹಾಯುಗ” ಸಫಲವಾಗಿದೆ. ಮಹಾಭಾರತದ ಕರ್ತೃ ವ್ಯಾಸರನ್ನೇ ಪಾತ್ರವಾಗಿ ತಂದು ಪ್ರಶ್ನಿಸುವುದರೊಂದಿಗೆ ಈ ನಾಟಕದ ಆಶಯ ವಿಭಿನ್ನವೆನಿಸುತ್ತದೆ. “ಅಹಿಂಸೆಯ ಪಠ್ಯವೇ ನಿಮ್ಮ ಕಾವ್ಯದಲ್ಲಿಲ್ಲವಲ್ಲಾ” ಎಂದು ವ್ಯಾಸರನ್ನು ಪ್ರಶ್ನಿಸುವ ಮೂಲಕ ಇಡೀ ಕುರುಕ್ಷೇತ್ರ ಯುದ್ಧದ ಹಿಂಸಾಕಾಂಡವನ್ನು ಅನಾವರಣಗೊಳಿಸಲಾಗಿದೆ. “ನಾನು ರಾಜರು ಹಾಗೂ ಸೈನಿಕರ ಪರಾಕ್ರಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾವ್ಯ ರಚಿಸಿದೆನೇ ಹೊರತು ಯುದ್ಧದಿಂದ ಜನಸಾಮಾನ್ಯರಿಗಾದ ನೋವು ಹತಾಶೆ ಬಗ್ಗೆ ಗಮನವನ್ನೇ ಕೊಡಲಾಗಲಿಲ್ಲ” ಎಂದು ವ್ಯಾಸರೇ ತಮ್ಮ ಅಸಹಾಯಕತೆಯನ್ನು ಹೇಳುವ ಮೂಲಕ ವಿಭಿನ್ನ ವ್ಯಾಖ್ಯಾನವನ್ನು ಕೊಡಲಾಗಿದೆ.
ಇದೊಂದು ಪಕ್ಕಾ ಯುದ್ಧವಿರೋಧಿ ನಾಟಕವಾಗಿದೆ. ಮಹಾಭಾರತವನ್ನು ರೂಪಕವಾಗಿರಿಸಿಕೊಂಡು ಪ್ರಸ್ತುತ ವಿಶ್ವದಲ್ಲಿ ದೇಶದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ಅದರಿಂದ ಜನಸಾಮಾನ್ಯರ ಮೇಲಾಗುವ ದುಷ್ಪರಿಣಾಮಗಳು “ಮಹಾಯುಗ”ದಲ್ಲಿ ಪ್ರತಿಬಿಂಬಿತವಾಗಿವೆ. ಒಂದು ಕಡೆಯವರು ಬಾಂಬು ಮಿಸೈಲು ಎಂದರೆ ಇನ್ನೊಂದು ಕಡೆಯವರು ಯುದ್ಧ ಟ್ಯಾಂಕರು ಕ್ಷಿಪಣಿ ಎಂದು ಹೂಂಕರಿಸುತ್ತಾರೆ. ಈ ದ್ವಂಸಕಾರಿ ಆಯುಧಗಳ ಹಿಂಸಾಚಾರಕ್ಕೆ ಕುರುಕ್ಷೇತ್ರದಲ್ಲಾದ ಸರ್ವನಾಶವೇ ಉದಾಹರಣೆಯಾಗಿದೆ. ಆದರೂ ಈಗಲೂ ಯುದ್ಧಗಳು ನಿಂತಿಲ್ಲ, ನಿಲ್ಲುವುದೂ ಇಲ್ಲ. ಯಾವುದೋ ಆಳುವ ಪ್ರಭುಗಳ ಪ್ರತಿಷ್ಠೆ ಹಾಗೂ ದುರಾಸೆಗೆ ಸಮಸ್ತ ಪ್ರಜೆಗಳು ತೆರಬೇಕಾದ ಬೆಲೆ ಅಸಹನೀಯ.

ರಾಜರುಗಳ ದುರಹಂಕಾರ ಮತ್ತು ದ್ವೇಷಕ್ಕೆ ಸೈನಿಕರು ಮತ್ತು ಅವರ ಕುಟುಂಬದವರು ಬಲಿಯಾಗುವ ಅನಿವಾರ್ಯತೆಯನ್ನು ಯುದ್ಧಗಳು ಸೃಷ್ಟಿಸುತ್ತವೆ. ಯುದ್ಧಭೂಮಿಯಲ್ಲಿ ವಾಸವಿದ್ದ ಜನಸಮುದಾಯದವರು ತಮ್ಮದೆಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿ ವಲಸೆ ಹೋಗುವಂತಹ ಕರುಣಾಜನಕ ದೃಶ್ಯಸೃಷ್ಟಿ ಈ ನಾಟಕದ ಯುದ್ಧವಿರೋಧಿ ನೀತಿಗೆ ಹಾಗೂ ಜನಪರ ಬದ್ಧತೆಗೆ ಸಾಕ್ಷಿಯಾಗಿದೆ.
ಇಷ್ಟೆಲ್ಲವನ್ನೂ ಕೇವಲ ನಟರ ಆಂಗಿಕಾಭಿನಯದ ಮೂಲಕವೇ ತೋರಿಸುವ ನಿರ್ದೇಶಕರ ಪ್ರಯತ್ನ ಅತ್ಯಂತ ಮಾರ್ಮಿಕವಾಗಿ ಮೂಡಿಬಂದಿದೆ. ಅಗತ್ಯವಿರುವಷ್ಟೇ ಸಂಭಾಷಣೆಗಳನ್ನು ಬಳಸಿಕೊಂಡು, ಕಲಾವಿದರುಗಳ ದೇಹಭಾಷೆಯನ್ನೇ ಪಳಗಿಸಿ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟ ನಿರ್ದೇಶಕರ ಶ್ರಮ ಹಾಗೂ ಕಲಾವಿದರುಗಳ ಪರಿಶ್ರಮ ಸಾರ್ಥಕವಾಗಿದೆ. ನೋಡುಗರಿಗೆ ಒಂದು ಗಳಿಗೆಯೂ ಬಿಡುವುಕೊಡದಂತೆ ದೃಶ್ಯಗಳು ಒಂದಾದ ನಂತರ ಒಂದು ಬರುತ್ತಲೇ ಇದ್ದು, ಪ್ರತಿಯೊಂದು ದೃಶ್ಯವೂ ಕಲಾತ್ಮಕ ಸಂಯೋಜನೆಯಾಗಿದೆ. ಆಂಗಿಕ ಮತ್ತು ಸಾತ್ವಿಕ ಅಭಿನಯದಲ್ಲಿ ಪ್ರತಿಯೊಬ್ಬ ಕಲಾವಿದರುಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಅಗೋಚರ ಪ್ರತಿಭೆಗಳಾದ ವಾದ್ಯ ಸಂಗೀತ ಸಂಯೋಜಕರು ಹಾಗೂ ಹಾಡುಗಾರರು ಈ ನಾಟಕದ ಯಶಸ್ಸಿನಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಸ್. ಪ್ರಸನ್ನಕುಮಾರರವರ ಸಾರಥ್ಯದಲ್ಲಿ ಮೂಡಿಬಂದ ಲೈವ್ ಮ್ಯೂಸಿಕ್ ಮಾಂತ್ರಿಕತೆಯು ನಾಟಕದ ಪ್ರತಿ ದೃಶ್ಯಗಳ ಮೂಡನ್ನು ಕೇಳುಗರ ಮನದಾಳಕ್ಕೆ ಮುಟ್ಟಿಸುವಂತೆ ಮೂಡಿಬಂದಿದೆ. ಮಂಜು ನಾರಾಯಣರವರ ಬೆಳಕಿನ ವಿನ್ಯಾಸವಂತೂ ನಾಟಕದ ಹೈಲೈಟ್ ಆಗಿದ್ದು, ಸ್ಟೇಜ್ ಮೇಲೆ ಬಣ್ಣದ ಬೆಳಕಿನ ಬಳಕೆಯು ಹೆಚ್ಚುವರಿ ಆಕರ್ಷಣೆ ಹಾಗೂ ಅರ್ಥವನ್ನು ಹೊರಹೊಮ್ಮಿಸಿದೆ. ಈ ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿ ನೃತ್ಯ ಸಂಯೋಜನೆಯನ್ನು ಮಾಡಿದ ಅಮೂಲ್ಯ ಶರಣಾ ಎನ್ನುವ ಯುವತಿಯ ಪ್ರತಿಭೆಯನ್ನು ನಾಟಕ ವೀಕ್ಷಿಸಿಯೇ ಸವಿಯಬೇಕಿದೆ. ಯುವ ರಂಗಕರ್ಮಿ ಪಲ್ಲಕ್ಕಿಯವರ ಕೈಚಳಕದಲ್ಲಿ ತಯಾರಾದ ಸರಳ ಹಾಗೂ ಪರಿಣಾಮಕಾರಿಯಾದ ವಸ್ತ್ರವಿನ್ಯಾಸ ಪ್ರತಿಯೊಂದೂ ಪಾತ್ರಸೃಷ್ಟಿಯಲ್ಲಿ ಮಹತ್ತರವಾದ ಕೊಡುಗೆ ಕೊಟ್ಟಿದೆ. ಯಾವುದೇ ಸ್ಥಾವರ ಸೆಟ್ ಹಾಗೂ ಪರಿಕರಗಳಿಲ್ಲದೇ ಅಗತ್ಯಕ್ಕೆ ತಕ್ಕಷ್ಟೇ ಬಟ್ಟೆಗಳು, ಹಗ್ಗಗಳನ್ನು ಬಳಸಿದ್ದು ಈ ನಾಟಕದ ವಿಶೇಷತೆಯಾಗಿದೆ.

ಕಲರಿ ಮೂವ್ಮೆಂಟ್ಗಳು, ಯಕ್ಷಗಾನದ ಹೆಜ್ಜೆಗಳು ಹಾಗೂ ಇನ್ನೂ ಅನೇಕ ದೇಸಿ ನೃತ್ಯ ಪ್ರಕಾರಗಳ ಸಾಧ್ಯತೆಗಳನ್ನು ಸಮ್ಮಿಶ್ರಗೊಳಿಸಿ ಸೃಜನಾತ್ಮಕವಾಗಿ ಪ್ರತಿಯೊಂದು ದೃಶ್ಯಗಳನ್ನು ಕಟ್ಟಿಕೊಟ್ಟ ನಿರ್ದೇಶಕರು ಅಂತಾರಾಷ್ಟ್ರೀಯ ಗುಣಮಟ್ಟದ ರಂಗಪ್ರಯೋಗ ಸಾಧ್ಯತೆಯನ್ನು ಕನ್ನಡ ರಂಗಭೂಮಿಯಲ್ಲಿ ಸೃಷ್ಟಿಸುವಲ್ಲಿ ಸಫಲರಾಗಿದ್ದಾರೆ.
ಎಷ್ಟೇ ಹೇಳಿದರೂ, ಅದೆಷ್ಟೇ ಬರೆದರೂ ಲೈವ್ ಆಗಿ ನೋಡಿಯೇ ಈ ವಿಶಿಷ್ಟ ನಾಟಕವನ್ನು ಅನುಭವಿಸಬೇಕಿದೆ. ರಂಗ ಸಾಧ್ಯತೆಗಳನ್ನು ಹೀಗೂ ಬಳಸಬಹುದು ಎನ್ನುವ ವಿಸ್ಮಯವನ್ನು ಈ ನಾಟಕ ಹುಟ್ಟುಹಾಕಿದೆ. ಈ ಯುದ್ಧ ವಿರೋಧಿ ದೃಶ್ಯಕಾವ್ಯ ರಂಗ ಪ್ರಯೋಗವು ಇನ್ನೂ ಹೆಚ್ಚು ಹೆಚ್ಚು ಪ್ರಯೋಗಗಳನ್ನು ಕಾಣಬೇಕಿದೆ, ಹೆಚ್ಚು ಪ್ರೇಕ್ಷಕರನ್ನು ತಲುಪಬೇಕಿದೆ. ಇದರಲ್ಲಿ ಅಳವಡಿಸಿಕೊಳ್ಳಲಾದ ರಂಗಭೂಮಿಯ ಕ್ರಿಯಾಶೀಲ ಸಾಧ್ಯತೆಗಳನ್ನು ಯುವ ತಲೆಮಾರಿನ ರಂಗನಿರ್ದೇಶಕರು ಹಾಗೂ ಕಲಾವಿದರು ಮಾದರಿಯಾಗಿ ಪರಿಗಣಿಸಬೇಕಿದೆ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ.ಪುಟ್ಟಮ್ಮ


