“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಹಾಸನ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಹಳೆಯ ತಲೆಮಾರಿನ ವೈದ್ಯ ಹೆಣ್ಣು ಬೇರುಗಳು, ಇಂದಿನ ತಲೆಮಾರಿನ ಹೆಣ್ಣು ಬೇರುಗಳಿಗೆ ಸ್ಪೂರ್ತಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಇಮ್ಮಡಿಯಾಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಅದಕ್ಕೆ ಬಹು ದೊಡ್ಡ ಕೊಡುಗೆಯಾಗಿರುವವರು ಹಾಸನ ಜಿಲ್ಲೆಯ ಮೊದಲ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುಟ್ಟಮ್ಮನವರು – ಮನು.ಕೆ.ಬಿ
ಐದಾರು ದಶಕಗಳ ಹಿಂದೆ ಆರೋಗ್ಯ ಕ್ಷೇತ್ರದಲ್ಲಿ ಸ್ತ್ರೀ ರೋಗತಜ್ಞರು ಮತ್ತು ಮಕ್ಕಳ ರೋಗತಜ್ಞರು ಹೆಚ್ಚಾಗಿ ಪುರುಷರೇ ಇರುತ್ತಿದ್ದರು. ಆ ಕಾರಣಕ್ಕೇ ಹೆಚ್ಚಿನ ಮಹಿಳಾ ರೋಗಿಗಳು, ಬಸುರಿ, ಬಾಣಂತಿಯರು ವೈದ್ಯರಲ್ಲಿ ಹೋಗಲು ಸಂಕೋಚ ಪಡುತ್ತಿದ್ದರು. ನಂತರದ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಮಹಿಳೆಯರು ಹೆಚ್ಚೆಚ್ಚು ಶಿಕ್ಷಣ ಪಡೆಯಲು ಪ್ರಾರಂಭಿಸಿದಂತೆ, ಒಂದಿಷ್ಟಾದರೂ ಮಂದಿ ಉನ್ನತ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಲಾರಂಭಿಸಿದರು. ನಂತರದ ದಿನಗಳಲ್ಲಿ ಮಹಿಳಾ ಸ್ತ್ರೀ ರೋಗ ತಜ್ಞರು ಕೂಡ ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಡಾ.ಆನಂದಿ ಬಾಯಿಯವರಂತಹ ಪ್ರವರ್ತಕರಿಂದ ಹಿಡಿದು ಇಂದಿನ ತಜ್ಞರವರೆಗೆ ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಯೊಂದಿಗೆ, ವೈದ್ಯವೃತ್ತಿ ಜೀವನದ ಬಹು ದೊಡ್ಡ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ, ನಿಭಾಯಿಸುತ್ತಾ ಸಮಾಜ ಸುಧಾರಣೆಗೆ, ಬದಲಾವಣೆಗೆ ಶ್ರಮಿಸುತ್ತಿದ್ದಾರೆ. ಹಾಸನ ಜಿಲ್ಲೆಯ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಹಳೆಯ ತಲೆಮಾರಿನ ವೈದ್ಯ ಹೆಣ್ಣು ಬೇರುಗಳು, ಇಂದಿನ ತಲೆಮಾರಿನ ಹೆಣ್ಣು ಬೇರುಗಳಿಗೆ ಸ್ಪೂರ್ತಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧನೆ ಇಮ್ಮಡಿಯಾಗುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಅದಕ್ಕೆ ಬಹು ದೊಡ್ಡ ಕೊಡುಗೆಯಾಗಿರುವವರು ಹಾಸನ ಜಿಲ್ಲೆಯ ಮೊದಲ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಪುಟ್ಟಮ್ಮನವರು.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ 1927 ಮಾರ್ಚ್ 20ರಂದು ಗೌಡಯ್ಯ ಮತ್ತು ನಂಜಮ್ಮ ದಂಪತಿಗಳ ನಾಲ್ಕು ಮಂದಿ ಹೆಣ್ಣುಮಕ್ಕಳ ನಂತರದ ಕಿರಿಯ ಸಹೋದರಿಯಾಗಿ ಜನಿಸಿದವರು ಹೆಮ್ಮೆಯ ಪುತ್ರಿ ಪುಟ್ಟಮ್ಮ. ತಮ್ಮ ಪ್ರಾಥಮಿಕ ಶಿಕ್ಷಣದಿಂದ ಇಂಟರ್ ಮೀಡಿಯೇಟ್ ವರೆಗಿನ ಶಿಕ್ಷಣವನ್ನು ಮೈಸೂರಿನ ಮಹಾರಾಣಿ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿದರು. ಹೆಣ್ಣುಮಕ್ಕಳಿಗೆ ಕನಿಷ್ಠ ಮಟ್ಟದ ಶಿಕ್ಷಣ ಪಡೆಯುವುದೇ ಕಷ್ಟಕರ ಕಾಲವಾಗಿದ್ದ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಎಂಬಿಬಿಎಸ್‍ನಂತಹ ಉನ್ನತ ಶಿಕ್ಷಣವನ್ನು ಪಡೆದುಕೊಂಡಿರುವ ಪುಟ್ಟಮ್ಮ ಅವರ ಸಾಧನೆ ಅಪರೂಪದ್ದು. ಪದವಿಯನ್ನು ಪಡೆಯುತ್ತಿರುವಾಗಲೇ 1947ರಲ್ಲಿ ಸೋದರಮಾವನವರಾದ ವಿಷಕಂಠೇಗೌಡರೊಂದಿಗೆ ಮದುವೆಯಾಗುತ್ತದೆ. ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಪತಿಯ ಸಹಕಾರ, ಪ್ರೋತ್ಸಾಹದಿಂದ ಮುಂದುವರಿಸಿದ್ದರು.
ನಂತರದ ಉನ್ನತ ವೈದ್ಯಕೀಯ ಶಿಕ್ಷಣವನ್ನು ವಿದೇಶಿ ರಾಷ್ಟ್ರವಾದ ಲಂಡನ್‍ನಲ್ಲಿ ಪಡೆಯುವ ಹಂಬಲದಿಂದ ಅರ್ಜಿಯನ್ನು ಸಲ್ಲಿಸಿ ಅವಕಾಶವನ್ನೂ ಪಡೆದುಕೊಂಡಿದ್ದರು. ಆದರೆ ಪ್ರವೇಶಾತಿಯನ್ನು ಪಡೆಯುವಷ್ಟರಲ್ಲಿ ಚೀನಾ ಮತ್ತು ಭಾರತಗಳ ನಡುವಿನ ಯುದ್ಧ ಘೋಷಣೆಯಿಂದಾಗಿ ವಿದೇಶದಲ್ಲಿ ಹೆಚ್ಚಿನ ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕೆಂಬ ಅವರ ಕನಸಿಗೆ ತಣ್ಣೀರೆರಚಿದಂತಾಯಿತು. ಆದರೆ ಪುಟ್ಟಮ್ಮ ಅವರು ಉನ್ನತ ಶಿಕ್ಷಣ ಪಡೆಯುವ ಹಂಬಲವನ್ನು ಕೈ ಬಿಡದೆ ತಮಿಳುನಾಡಿನ ಮಧುರೈನಲ್ಲಿ ಡಿಜಿಓ (ಸ್ತ್ರೀರೋಗ ಮತ್ತು ಪ್ರಸೂತಿ ಸಂಬಂಧಿತ ಡಿಪ್ಲೊಮೋ)ಪದವಿಯನ್ನು ಪಡೆದರು. ತಮ್ಮ ಚೊಚ್ಚಲ ವೃತ್ತಿ ಸೇವೆಯನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಪ್ರಾರಂಭಿಸಿದ ಪುಟ್ಟಮ್ಮ ಅವರು, ನಂತರ ಬೆಂಗಳೂರಿನ ಬೋರಿಂಗ್ ಆಸ್ಪತ್ರೆ, ಮೈಸೂರಿನ ವಾಣಿವಿಲಾಸ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಗ್ರಾಮೀಣ ಸೇವೆಗಾಗಿ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಸುಮಾರು ಆರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸುವ ಮೂಲಕ ಜನಮನ್ನಣೆಯನ್ನು ಪಡೆದರು.
ಡಾ.ಪುಟ್ಟಮ್ಮ ಅವರಿಗೆ ಪತಿ ವಿಷಕಂಠೇಗೌಡರು- ಶಿಕ್ಷಣಕ್ಕೆ ಮತ್ತು ವೃತ್ತಿಗೆ ಅವಿರತ ಬೆಂಬಲವನ್ನು ನೀಡುತ್ತಾ ಬಂದವರು. ಅದರಂತೆ ಪುಟ್ಟಮ್ಮ ಅವರು ತಾವೂ ಸಹ ಪತಿಯವರ ಕೃಷಿ ಬದುಕನ್ನು ಬೆಂಬಲಿಸುವ ಸಲುವಾಗಿ ಮತ್ತು ತಮ್ಮ ಮಕ್ಕಳ ಶಿಕ್ಷಣದ ಕಾರಣಕ್ಕಾಗಿಯೇ 1968ರಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿ ವರ್ಗಾವಣೆ ಮಾಡಿಸಿಕೊಂಡು ಬಂದು ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಆ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯ ಸ್ಥಿತಿಯು ಮೂಲ ಸೌಲಭ್ಯಗಳ ಕೊರತೆ, ಹೆರಿಗೆ ವಾರ್ಡ್‍ಗಳ ಕೊರತೆ, ಸಿಬ್ಬಂದಿ ಕೊರತೆ… ಮುಂತಾದ ವೈದ್ಯಕೀಯ ಸೌಲಭ್ಯಗಳ ಕೊರತೆಗಳಿಂದ ಬಳಲುತ್ತಿತ್ತು. ಇದರ ನಡುವೆಯೂ ‘ಜನ ಮರುಳೋ ಜಾತ್ರೆ ಮರುಳೋ’ ಎಂಬಂತೆ ಬಡ ಗರ್ಭಿಣಿಯರು, ಮಹಿಳಾ ರೋಗಿಗಳು- ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರಂತೆ. ನೂಕುನುಗ್ಗಲಿನಲ್ಲಿ ಕಾದು ಇವರಿಂದಲೇ ಚಿಕಿತ್ಸೆ ಪಡೆಯುತ್ತಿದ್ದರಂತೆ. ಇದನ್ನು ಕಣ್ಣಾರೆ ಕಂಡವರು, ಅನುಭವಿಸಿದ ಪ್ರತ್ಯಕ್ಷ ಸಾಕ್ಷಿಗಳು ಈಗಲೂ ಈ ಅನುಭವಗಳನ್ನು ರಸವತ್ತಾಗಿ ವರ್ಣಿಸುತ್ತಾರೆ. ಡಾ.ಪುಟ್ಟಮ್ಮ ಅಷ್ಟೊಂದು ಜನಾನುರಾಗಿಗಳಾಗಿದ್ದರು.
“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.
ಡಾ.ಪುಟ್ಟಮ್ಮ ಅವರು ಮುಂದೆ ಹಾಸನ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿ ಬಡ್ತಿ ಹೊಂದಿ, 1975ರಿಂದ 1978ರವರೆಗೆ ಸೇವೆ ಸಲ್ಲಿಸಿ, ಜಿಲ್ಲೆಯ ಅತ್ಯುತ್ತಮ ಮಹಿಳಾ ವೈದ್ಯರಾಗಿ ಪ್ರಸಿದ್ಧಿಯನ್ನು ಪಡೆದರು. ಸೇವಾವಧಿ ಇನ್ನೂ ಒಂದು ವರ್ಷವಿದ್ದಾಗಲೇ ಸ್ವಯಂನಿವೃತ್ತಿಯನ್ನು ಪಡೆದ ನಂತರ, ಖಾಸಗಿಯಾಗಿ ತಮ್ಮದೇ ಪ್ರಸೂತಿ ಮತ್ತು ಸ್ತ್ರೀರೋಗ ಕೇಂದ್ರವಾಗಿ ‘ಶಾರದಾ ನರ್ಸಿಂಗ್ ಹೋಮ್’ ಸ್ಥಾಪಿಸಿ ಸೇವೆಯನ್ನು ಆರಂಭಿಸಿದರು. ಆಗ ಜಿಲ್ಲೆಯಲ್ಲಿ ಒಂದೇ ಒಂದೂ ಪ್ರಸೂತಿ ಮತ್ತು ಸ್ತ್ರೀರೋಗಕ್ಕೆ ಸಂಬಂಧಿಸಿದ ಪ್ರತ್ಯೇಕ ಖಾಸಗಿ ಆಸ್ಪತ್ರೆ ಇರಲಿಲ್ಲ. ಹಾಗೂ ಸರ್ಕಾರಿ ಆಸ್ಪತ್ರೆಯೂ ಸದಾ ತುಂಬಿ ತುಳುಕುತ್ತಿರುತ್ತಿತ್ತು. ಈ ಎಲ್ಲಾ ಸಮಸ್ಯೆಯಿಂದ ವಿಪರೀತ ತೊಂದರೆ ಅನುಭವಿಸುತ್ತಿದ್ದ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಹಿಳಾ ರೋಗಿಗಳಿಗೆ ಆಶಾಕಿರಣದಂತೆ ಈ ಆಸ್ಪತ್ರೆಯ ಬಾಗಿಲು ಸದಾ ತೆರೆದು ಕೊಂಡಿರುತ್ತಿತ್ತು. ಡಾ.ಪುಟ್ಟಮ್ಮ ಅವರು ಬಡ ಗರ್ಭಿಣಿಯರಿಗೆ, ಬಡ ಸ್ತ್ರೀರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದ್ದು, ಹಗಲಿರುಳೆನ್ನದೇ ಸಾವಿರಾರು ಸಹಜ ಹೆರಿಗೆಗಳನ್ನು ಮಾಡಿಸುವುದರ ಮೂಲಕ ಅವರುಗಳ ಬಾಳಿಗೆ ಬೆಳಕಾಗಿದ್ದಾರೆ. ಗರ್ಭಿಣಿ ಸ್ತ್ರೀಯರ ಹೆರಿಗೆ ಸಂದರ್ಭದಲ್ಲಿ ಶಿಶು ಸಾವನ್ನಪ್ಪಿದರೆ ಅವರಿಂದ ಯಾವುದೇ ಶುಲ್ಕವನ್ನೂ ಪಡೆಯದೇ ಸಾಂತ್ವನ ಹೇಳಿ ಕಳಿಸುತ್ತಿದ್ದರೆಂದೂ ಬಲ್ಲವರು ಹೇಳುತ್ತಾರೆ. ಈ ಎಲ್ಲ ಸಹೃದಯ ನಡವಳಿಕೆಗಳಿಂದಾಗಿಯೇ ತಮ್ಮ ವೃತ್ತಿ ಬದುಕಿನುದ್ದಕ್ಕೂ ಪುಟ್ಟಮ್ಮ ಅವರು ಅಪಾರ ಜನ ಮೆಚ್ಚುಗೆಯನ್ನು ಪಡೆದದ್ದನ್ನು ಮರೆಯುವಂತಿಲ್ಲ.
ಡಾ.ಪುಟ್ಟಮ್ಮ ಅವರು ತಮ್ಮ ಮೂರು ಮಂದಿ ಹೆಣ್ಣುಮಕ್ಕಳನ್ನು ಸುಶಿಕ್ಷಣವಂತರನ್ನಾಗಿ ಮಾಡಿದ್ದಾರೆ. ಅವರ ಮೊದಲನೆಯ ಮಗಳಾದ ಶ್ರೀಮತಿ ಪ್ರಫುಲ್ಲಾರವರು ಜಿಲ್ಲೆಯ ಪ್ರತಿಷ್ಠಿತ ಹೆಣ್ಣುಮಕ್ಕಳ ಎವಿಕೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಅವರ ಎರಡನೆಯ ಮಗಳಾದ ಡಾ.ಶೀಲಾ ಅವರು ವೈದ್ಯಕೀಯ ಶಿಕ್ಷಣವನ್ನು ಪಡೆದು ವಿದೇಶದಲ್ಲಿ ನೆಲೆಸಿದ್ದಾರೆ. ಕೊನೆಯ ಮಗಳಾದ ಸುಜಿತಾ ಅವರು ಕಲಾವಿಭಾಗದಲ್ಲಿ ಪದವಿಯನ್ನು ಪಡೆದುಕೊಂಡು ಗೃಹಿಣಿಯಾಗಿದ್ದಾರೆ. ಪ್ರಸ್ತುತ ಇವರ ಮೊಮ್ಮಗಳಾದ ಡಾ.ಅಂಜನಾರವರು ಹಾಸನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಮುದಾಯ ಸೇವಾ ವಿಭಾಗದ, ಔಷಧ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ- ಅಮೇರಿಕಾದಲ್ಲಿ ಸಾಧನೆ ಮಾಡಿದ ಭೌತವಿಜ್ಞಾನಿ- ಹಾಸನದ ಡಾ.ರತ್ನಾನಾಯಕ್
ಡಾಕ್ಟರ್ ಪುಟ್ಟಮ್ಮನವರ ಅನನ್ಯ ವೈದ್ಯಕೀಯ ಸೇವೆಯನ್ನು ಗುರುತಿಸಿ ಅಂದಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಒಕ್ಕಲಿಗ ಸಮುದಾಯದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಸಹ ಇವರು ಪಾತ್ರರಾಗಿದ್ದಾರೆ. ಆದಿಚುಂಚನಗಿರಿ ಮಹಿಳಾ ಸಮಾಜಕ್ಕೆ ಇವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ, ಕಟ್ಟಡ ನಿರ್ಮಾಣಕ್ಕಾಗಿ ಸಂಘಟನೆಗಳ ವಲಯದಿಂದ ಹಣ ಸಂಗ್ರಹಿಸಿ, ಮಹಿಳಾ ಸಮಾಜದ ಕಟ್ಟಡವನ್ನು ಪೂರ್ಣಗೊಳಿಸುವಲ್ಲಿ ಡಾ.ಪುಟ್ಟಮ್ಮ ಅವರ ಮುಂದಾಳತ್ವ ಯಶಸ್ವಿಯಾಗಿದೆ. ವೈದ್ಯಕೀಯ ಕ್ಷೇತ್ರದ ಮಹಿಳಾ ಚೇತನವಾದ ಡಾ.ಪುಟ್ಟಮ್ಮ ಅವರು 2014ರಲ್ಲಿ ಚಿರನಿದ್ರೆಗೆ ಜಾರಿದರು. ಅವರು ಈಗ ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅದೆಷ್ಟೋ ವೈದ್ಯಕೀಯ ಕ್ಷೇತ್ರದ ಹೆಣ್ಣು ಚಿಗುರುಗಳಿಗೆ ದಾರಿದೀಪವಾಗಿ, ಸ್ಪೂರ್ತಿಯ ಸೆಲೆಯಾಗಿ, ಐತಿಹ್ಯವಾಗಿರುವುದು ಅದೃಷ್ಟವೇ ಸರಿ. ಅತ್ಯಂತ ಕ್ಲಿಷ್ಟ ಮತ್ತು ತುರ್ತು ಸಂದರ್ಭದಲ್ಲಿ ಡಾಕ್ಟರ್ ಪುಟ್ಟಮ್ಮನಂತವರು ವೈದ್ಯಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಜನಸೇವೆಯಲ್ಲಿ ತೊಡಗಿದ್ದು, ಇಂದಿನ ವೈದ್ಯಕೀಯ ಕ್ಷೇತ್ರದ ಸ್ತ್ರೀರೋಗ ತಜ್ಞರಿಗೆ ದೊಡ್ಡ ಮಾದರಿ ಮತ್ತು ಆದರ್ಶವೆಂದರೆ ಉತ್ಪ್ರೇಕ್ಷೆಯಾಗಲಾರದು.
ಮನು.ಕೆ.ಬಿ
ಇದನ್ನೂ ಓದಿ- ಸ.ಉಷಾ- ಕನ್ನಡ ಕಾವ್ಯದ ಪರಿಪಕ್ವ ಧ್ವನಿ


