ಮೈಸೂರು : ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯೋಬ್ಬರ ಮೇಲೆ ಕಾಡಾನೆಯೊಂದು ಹಠಾತ್ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕು ಬಿ.ಮಟಕೆರೆ ಎಸ್.ಟಿ. ಕಾಲೋನಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ನಿವಾಸಿ ಮಾದ (70) ಎಂಬುವರೇ ಆನೆ ದಾಳಿಗೆ ಬಲಿಯಾದ ವ್ಯಕ್ತಿ. ಇಂದು ಬೆಳಗಿನ ಜಾವ ಬಹಿರ್ದಸೆಗೆಂದು ತೆರಳುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಮೃತರಿಗೆ ಪತ್ನಿ, ಮೂವರು ಪುತ್ರರು, ಪುತ್ರಿ ಇದ್ದಾರೆ.
ಘಟನೆಯ ವಿವರ
ಮಂಗಳವಾರ ರಾತ್ರಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೊಳೆಯೂರು ಅರಣ್ಯ ವಲಯ ಪ್ರದೇಶದಿಂದ ಮೇವು ಅರಸಿ ಹೊರಬಂದ ಆನೆ ಹಳೇ ಹೆಗ್ಗುಡಿಲು, ಹಳೆಯೂರು, ಬೆದ್ದಲಪುರ, ದಡದಹಳ್ಳಿ ಗ್ರಾಮಗಳಲ್ಲಿ ಓಡಾಡಿಕೊಂಡು ಹಂಚೀಪುರ ಗ್ರಾಮದ ಕೆರೆಯ ಬಳಿ ಪೊದೆಯಲ್ಲಿ ತಂಗಿತ್ತು. ಬುಧವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ಮತ್ತೆ ಕಾಡಿಗೆ ಓಡಿಸಲು ಯತ್ನಿಸಿದ್ದರು. ಆಗ ಆನೆ ಮಸಹಳ್ಳಿ, ದೇವಲಾಪುರ ಮಾರ್ಗವಾಗಿ ಕಲ್ಲಹಳ್ಳ ಗ್ರಾಮದ ಸಮೀಪದ ಮೊಳೆಯೂರು ಕಾಡಿನೊಳಗೆ ಹೋಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ವಾಪಸ್ ಬಂದಿದ್ದರು.
ಮತ್ತೆ ಕಾಡಿನಿಂದ ಹೊರಬಂದ ಆನೆ ವಲ್ಲಹಳ್ಳಿ ಗ್ರಾಮದ ರಸ್ತೆ ಮಾರ್ಗವಾಗಿ ಬಿ.ಮಟಕೆರೆ ಎಸ್ಟಿ ಹಾಡಿ ಕಾಲನಿ ನೀರಿನ ಟ್ಯಾಂಕ್ ಬಳಿ ಹೋಗುವಾಗ ಗುರುವಾರ ಬೆಳಗ್ಗೆ ಬಹಿರ್ದೆಸೆಗೆ ಬಂದ ಮಾದನ ಮೇಲೆ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಒಂದು ತಾಸಿನ ಬಳಿಕ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಕಾಡಾನೆ ದಾಳಿಗೆ ಬಲಿಯಾದ ಮಾದ ಅವರ ಮೃತದೇಹವನ್ನು ಕಂಡು ಹಾಡಿ ಜನರಿಗೆ ವಿಷಯ ತಿಳಿಸಿದ್ದಾರೆ. ಸರಗೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
ಕಾಡಾನೆಗಳ ದಾಳಿಯಿಂದ ಕಾಡಂಚಿನ ಗ್ರಾಮಗಳ ರೈತರಿಗೆ ಸೂಕ್ತ ರಕ್ಷಣೆ ಇಲ್ಲದಾಗಿದೆ. ಪ್ರತಿನಿತ್ಯ ಭಯದಿಂದ , ಜೀವ ಕೈಯಲ್ಲಿ ಹಿಡಿದು ಜಮೀನಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಸಿಎಫ್ ಎಸ್.ಪ್ರಭಾಕರನ್, ಇಲಾಖೆ ವತಿಯಿಂದ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ‘‘ಮೃತರ ಪತ್ನಿಗೆ ಐದು ವರ್ಷದವರೆಗೆ ಮಾಸಿಕ ವೇತನ 4 ಸಾವಿರ ರೂ. ನೀಡಲಾಗುವುದು. ಕುಟುಂಬದ ಒಬ್ಬ ಸದಸ್ಯರಿಗೆ ಇಲಾಖೆಯಲ್ಲಿ ಕೆಲಸ ನೀಡಲಾಗುವುದು. ಎಂದು ಭರವಸೆ ನೀಡಿದರು ಆನೆಗಳು ಕಾಡಿನಿಂದ ಹೊರಬರದಂತೆ ಎಚ್ಚರಿಕೆ ಕ್ರಮವಾಗಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಇದರಿಂದ ಕಾಡುಪ್ರಾಣಿಗಳ ಹಾವಳಿ ತಡೆಗೆ ಅನುಕೂಲವಾಗಲಿದೆ,’’ ಎಂದು ಹೇಳಿದರು.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಚಿಕ್ಕಮಾದು “ಇಂಥ ಘಟನೆ ಮರುಕಳಿಸಬಾರದು. ಕಾಡುಪ್ರಾಣಿ ಮಾನವ ಸಂಘರ್ಷ ತಡೆಗೆ ಕ್ರಮ ವಹಿಸಲಾಗುವುದು. ಕಾಡಂಚಿನ ಗ್ರಾಮಗಳ ಜನರ ಸಮಸ್ಯೆಗಳನ್ನು ಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸಿ, , ಆನೆ ಕಂದಕಗಳಲ್ಲಿ ಹೂಳು ಎತ್ತಿಸಿ ಆನೆ ಬರದಂತೆ ಕ್ರಮವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಮೃತರ ಮನೆಗೆ ತೆರಳಿ ಸಾಂತ್ವನ ಹೇಳುತ್ತೇನೆ” ಎಂದು ತಿಳಿಸಿದ್ದಾರೆ


