ಮಾಧವ ಗಾಡಗೀಳ್ ನುಡಿ ನಮನ
ಪರಿಸರವನ್ನೇ ಬದುಕಾಗಿಸಿಕೊಂಡ ಹಿರಿಯ ಪರಿಸರ ವಿಜ್ಞಾನಿ, ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮವಿಭೂಷಣ ಗೌರವಗಳನ್ನು ಪಡೆದ ಮಾಧವ ಗಾಡಗೀಳರನ್ನು ಕಳೆದ ಜನವರಿ 7ರಂದು ನಾವು ಕಳೆದುಕೊಂಡಿದ್ದೇವೆ. ಬಹುಶಃ ಪಶ್ಚಿಮ ಘಟ್ಟಕ್ಕೂ ಅನಾಥ ಭಾವ ಕಾಡಿರಬೇಕು! ಅವರನ್ನು ನೆನೆದು ವಿಜ್ಞಾನ ಬರಹಗಾರ್ತಿ ಸರೋಜಾ ಪ್ರಕಾಶ್ ಅವರು ಬರೆದ ನುಡಿನಮನ ಇಲ್ಲಿದೆ.
ಇತ್ತೀಚೆಗಷ್ಟೇ ಧಾರವಾಡದ ಕಾರ್ಯಕ್ರಮವೊಂದರಲ್ಲಿ ಮಾಧವ ಗಾಡಗೀಳರ ಆತ್ಮಕಥೆಯ ಕನ್ನಡ ಆವೃತ್ತಿ ʼಏರುಘಟ್ಟದ ನಡಿಗೆʼಯ ಕುರಿತು ಉಪನ್ಯಾಸ ನೀಡುವ ಜವಾಬ್ದಾರಿ ನನ್ನದಾಗಿತ್ತು. ಸಂತೋಷದಿಂದಲೇ ಒಪ್ಪಿಕೊಂಡಿದ್ದೆ. ಕಾರಣಗಳು ಎರಡಿದ್ದವು.
ಮೊದಲನೆಯದಾಗಿ, ಮಾಧವ ಗಾಡಗೀಳರು ನಮ್ಮ ಉತ್ತರಕನ್ನಡದಲ್ಲಿ ಅದೂ ಸಿರ್ಸಿ ಸುತ್ತಲ ಗುಡ್ಡಬೆಟ್ಟಗಳಲ್ಲಿ ಓಡಾಡಿದವರು, ಕನ್ನಡವನ್ನು ಸಲೀಸಾಗಿ ಮಾತನಾಡಬಲ್ಲವರು, ಅಂದರೆ ನಮ್ಮವರೇ ಎಂಬ ಭಾವ ಮನದಲ್ಲಿ ತುಂಬಿತ್ತು. ಎರಡನೆಯ ಕಾರಣವೆಂದರೆ ಅತಿ ಸುಂದರವಾಗಿ, ಮೂಲ ಕನ್ನಡದ್ದೇ ಎನ್ನುವಷ್ಟು ಸೊಗಸಾಗಿ ಮೂಡಿ ಬಂದ ಅನುವಾದ ಕೃತಿಯಾಗಿತ್ತದು. ಪ್ರತಿ ಅಧ್ಯಾಯದ ಆರಂಭದ ಗೀತಗುಚ್ಛವಂತೂ ಸಾರ ಹಿಡಿದಿಟ್ಟ ವಿಜ್ಞಾನ ರೂಪಕದಂತಿತ್ತು.

ಪುಸ್ತಕ ಓದಿ ಮುಗಿಸಿದ ಮೇಲೆ ಮಾಧವ ಗಾಡಗೀಳರು ಯಾರೆಂದು ಒಂದು ಶಬ್ದದಲ್ಲಿ ಹೇಳಲು ಸಾಧ್ಯವೆ ಎಂದು ಯೋಚಿಸಿದಾಗ ಅದು ಕಷ್ಟಸಾಧ್ಯ ಎನಿಸಿತ್ತು. ಆತ ಅಪ್ಪಟ ವಿಜ್ಞಾನಿ – ಅಂಕಿಅಂಶಗಳಿಲ್ಲದ, ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲದ, ವೈಚಾರಿಕ ದೃಷ್ಟಿಯಿಲ್ಲದ ಯಾವುದನ್ನೂ ನಂಬದವರು. ಆತ ತಳಮಟ್ಟದ ಪರಿಸರ ಹೋರಾಟಗಾರ – ಈ ನೆಲ, ಜಲ ಉಳಿಯಬೇಕೆಂದರೆ ಅಲ್ಲಲ್ಲಿ ಸ್ಥಳೀಯ ಜನ, ಅವರ ನಂಬಿಕೆ, ಆಚರಣೆಗಳ ಆಧಾರವಾಗಿಟ್ಟುಕೊಂಡು ಅಭಿವೃದ್ಧಿಗೆ ಮುಂದಾಗಬೇಕೆಂದವರು. ಆತ ಪ್ರಾಧ್ಯಾಪಕ – ಹಲವಾರು ವಿದ್ಯಾರ್ಥಿಗಳು ಅವರಿಂದ ಮಾರ್ಗದರ್ಶನ ಪಡೆದು ಡಾಕ್ಟೋರೇಟ್ ಪಡೆದಿದ್ದಾರೆ.
ಭಾರತ ಸ್ವಾತಂತ್ರ್ಯ ಪಡೆಯುವ ಐದು ವರ್ಷಗಳ ಮೊದಲು ಪೂನಾದಲ್ಲಿ ಜನಿಸಿದವರು ಮಾಧವ. ಅಪ್ಪ ಧನಂಜಯ್ ಗಾಡಗೀಳ್ ಜೊತೆ ಮಾತಾಡುತ್ತ ಮನೆಯ ಸುತ್ತಮುತ್ತಲ ಪಕ್ಷಿವೀಕ್ಷಣೆ ನಡೆಸುವುದು, ವಿಸ್ತಾರವಾದ ಭೂಮಿಯ ಜೀವಕೋಟಿಗಳ ಕುರಿತು ಚರ್ಚಿಸುವುದು ಬಾಲಕ ಮಾಧವನ ಹೊರ ಹವ್ಯಾಸವಾದರೆ, ಒಳಗಡೆ ʼಬಾಬಾʼನ ಸುಸಜ್ಜಿತ ಪುಸ್ತಕಾಲಯ ಆತನ ಆಳಜ್ಞಾನ ಹೆಚ್ಚಿಸುವ ತಾಣವಾಗಿತ್ತು.
ಪಶ್ಚಿಮ ಘಟ್ಟಗಳು ಬಾಲಕ ಮಾಧವನನ್ನು ಸೆಳೆಯಲು ಆತ ಓದಿದ ಕ್ಯಾಪ್ಟನ್ ಜೇಮ್ಸ್ ಡಫ್ ಬರೆದ ಪುಸ್ತಕದ ಈ ಸಾಲುಗಳೂ ಕಾರಣ, ʼಪಶ್ಚಿಮ ಘಟ್ಟಗಳನ್ನು ಏರುತ್ತೇರುತ್ತ ಹೋದಂತೆ ಅದು ನಿಮ್ಮೆದುರು ತೆಗೆದುಕೊಳ್ಳುವ ರೀತಿ ಅದ್ಭುತ. ಒಂದು ಪರ್ವತ ಇನ್ನೊಂದಕ್ಕೆ ಜನ್ಮ ಕೊಟ್ಟಂತೆ, ಒಂದರ ಬಸಿರಲ್ಲಿ ಇನ್ನೊಂದು ಅವಿತಿರುವಂತೆ. ಮೂರೋ, ನಾಲ್ಕೋ ಸಾವಿರ ಅಡಿ ಎತ್ತರ, ಅದರ ಮೇಲೆ ಬೃಹತ್ ಮರಗಳ ಹಸಿರಿನ ಕವಚ. ಅವಿಚ್ಛಿನ್ನ ಹಸಿರಿನ ಸಾಲು ಸಾಲು. ಮುಂಗಾರು ಮಳೆ ಘಟ್ಟಗಳು ಒಂದು ಬದಿಯಿಂದ ಬಡಿಯುತ್ತಿದ್ದಾಗಲಂತೂ ಆ ನೋಟ ರಮ್ಯಾತಿರಮ್ಯ, ವರ್ಣಿಸಲಸದಳʼ
ಉನ್ನತ ಶಿಕ್ಷಣಕ್ಕೆಂದು ಹಾರ್ವರ್ಡ್ ವಿಶ್ವವಿದ್ಯಾಲಯ ಸೇರಿದ ಗಾಡಗೀಳರ ಕನಸು ಪರಿಸರ ವಿಜ್ಞಾನದಲ್ಲಿ ಇನ್ನೂ ಆಳವಾದ ಜ್ಞಾನ ಪಡೆದು ಭಾರತದಲ್ಲಿ ಪರಿಸರ ಸಂಶೋಧನೆ ನಡೆಸಬೇಕು ಎಂಬುದಾಗಿತ್ತು. ಕಲಿತಾದ ನಂತರ ವಿದೇಶದಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ ಬಂದಿತ್ತು. ಆದರೆ ವಿದೇಶೀ ಹಣದ ಆಕರ್ಷಣೆಗಿಂತ ಭಾರತದ ಸೆಳೆತ ಅಧಿಕವಾಗಿತ್ತು. ಗಣಿತೀಯ ಜೀವವಿಜ್ಞಾನಿ ಮಾಧವ ಮತ್ತು ಅವರ ಪತ್ನಿ ಹವಾಮಾನ ವಿಜ್ಞಾನಿ ಸುಲೋಚನಾ ತಾಯ್ನಾಡಿಗೆ ಮರಳಿದರು.
ಬೆಂಗಳೂರಿನ IISc ಯಲ್ಲಿ ಅಧ್ಯಾಪಕರಾಗಿ ಕೆಲಸ ಆರಂಭಿಸಿದರೂ ಗಾಡಗೀಳರು ತಮ್ಮ ಸಂಶೋಧನೆಗಳಿಗಾಗಿ ಕಾಡುಮೇಡು ಸುತ್ತಿದರು. ಬೆಟ್ಟ ಗುಡ್ಡ ಹತ್ತುವುದರಲ್ಲಾಗಲಿ, ಹಳ್ಳಿಯವರೊಂದಿಗೆ ತಂಗಿ ಮಾಹಿತಿ ಪಡೆಯುವುದರಲ್ಲಾಗಲಿ, ಇನಿತೂ ಬೇಸರವಿರಲಿಲ್ಲ, ಬದಲಾಗಿ ಅದವರಿಗೆ ಉತ್ಸಾಹದ, ಹುರುಪು ತುಂಬುವ ಕೆಲಸವಾಗಿತ್ತು. ಅವರೊಳಗಿನ ವಿಜ್ಞಾನಿ ಡೇಟಾ ಸಂಗ್ರಹಿಸಲು ಸದಾ ತಯಾರಾಗಿರುತ್ತಿದ್ದ.
1980 ರಲ್ಲಿ ಭಾರತ ಸರಕಾರದ ʼಪರಿಸರ ಇಲಾಖೆʼ ಆರಂಭವಾಯಿತು. ಸುಸ್ಥಿರ ಅಭಿವೃದ್ಧಿಯ ಅಧ್ಯಯನ ಮತ್ತು ಕಾರ್ಯಾಚರಣೆಯ ಅಗತ್ಯವನ್ನು ಪತ್ತೆ ಹಚ್ಚಲೆಂದು ಮಾಧವ ಗಾಡಗೀಳ್ ಮತ್ತು ಕೈಲಾಶ್ ಮಲ್ಹೋತ್ರಾ ದೇಶದ ಅನೇಕ ಭಾಗಗಳನ್ನು ಸಂದರ್ಶಿಸಿದರು. ಆರ್ಥಿಕ ಅಭಿವೃದ್ಧಿ ನಿತ್ಯನಿರಂತರ ಇರಬೇಕೆಂದರೆ ಮಣ್ಣು, ನೀರು, ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಜಾಗರೂಕತೆಯಿಂದ ಬಳಸಬೇಕು ಆದರೆ ನಾವದನ್ನು ಚಿನ್ನದ ಮೊಟ್ಟೆಯಿಡುವ ಕೋಳಿಯನ್ನೇ ನುಂಗಿದ ಹಾಗೆ ನಡೆಸಿಕೊಳ್ಳುತ್ತಿದ್ದೇವೆ ಎಂದು ವರದಿಯಿತ್ತರು.
ಅಂದಿನ ದಿನಗಳೆಂದರೆ ಭಾರತದಲ್ಲಿ ಔದ್ಯಮಿಕ ಉನ್ನತಿ ಆಗಬೇಕು, ಅದಕ್ಕಾಗಿ ಯಾವುದೇ ತ್ಯಾಗವಾದರೂ ಸರಿ, ಮಾಡಲು ಸಿದ್ಧರಿರಬೇಕು ಎಂಬ ಭಾವನೆ ಭಾರತದ ಹೆಚ್ಚಿನ ಮುಖಂಡರದ್ದು. ಆದರೆ ನೆಲ, ನೀರು ಅದನ್ನು ನಂಬಿದ ಜನರು ಮತ್ತು ಪ್ರಾಣಿಗಳನ್ನು ಹೊಸಕಿ ಹಾಕಿ ಕಾರ್ಯರೂಪಕ್ಕೆ ತರುವ ಯೋಜನೆಗಳು ಸುಸ್ಥಿರವಲ್ಲ ಎನ್ನುವುದು ಮಾಧವ ಗಾಡಗೀಳ, ಕೈಲಾಶ್ ಮಲ್ಹೋತ್ರಾ, ಚಂಡಿಪ್ರಸಾದ್ ಭಟ್, ಸುಂದರಲಾಲ್ ಬಹುಗುಣ ಇಂಥವರ ನಿಲುವು.
ಒಂದಾದ ಮೇಲೊಂದರಂತೆ ಅಧ್ಯಯನ, ಸಂಶೋಧನೆಗಳು ಅರಸಿ ಬಂದವು. ಓಡಾಟ, ಅಧ್ಯಯನ ವರದಿ ತಯಾರಿಕೆ ಅದರ ಕುರಿತಾದ ಸಾಮಾನ್ಯ ಜನರಿಗೂ ಅರ್ಥವಾಗುವಂಥಹ ಲೇಖನಗಳ ಬರವಣಿಗೆ ಇತ್ಯಾದಿಗಳಲ್ಲಿ ಗಾಡಗೀಳರು ಸದಾ ನಿರತರು. ನಿಷ್ಠುರ ಸತ್ಯದ, ಅಂಕಿಅಂಶಗಳ ಆಧಾರದ ಅವರ ವರದಿಗಳು ಎಷ್ಟೋ ಬಾರಿ ಅಧಿಕಾರರೂಢರಿಗೆ ರುಚಿಸುತ್ತಿರಲಿಲ್ಲ. ಆದರೆ ತಾನೇ ಸ್ವತಃ ಪರೀಕ್ಷಿಸಿ ತನಗೆ ಸರಿ ಎನಿಸಿದ್ದನ್ನು ಎತ್ತಿ ಸಾರುವುದರಲ್ಲಿ ಗಾಡಗೀಳರು ಎಂದಿಗೂ ಹಿಂಜರಿಯಲಿಲ್ಲ. ತಮ್ಮ ಲೇಖನದಲ್ಲಾಗಲೀ, ಆತ್ಮಕತೆಯಲ್ಲಾಗಲೀ ಗಾಡಗೀಳರು ಯಾರನ್ನೂ ದೂಷಿಸಲಿಲ್ಲ, ಬೈಯ್ಯಲಿಲ್ಲ. ನಿರ್ಲಿಪ್ತರಾಗಿ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿ ಇದ್ದುದನ್ನು ಇದ್ದ ಹಾಗೆ ಬರೆಯುವ ಕಲೆಯನ್ನು ರೂಢಿಸಿಕೊಂಡರು.

ಉತ್ತರಕನ್ನಡದ ಬೇಡ್ತಿನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಹೊರಟ ಸರಕಾರ ಅದರ ಸಾಧಕಬಾಧಕಗಳ ಮೌಲ್ಯಮಾಪನ ಸಮಿತಿ ಅಣೆಕಟ್ಟು ಕಟ್ಟಬಹುದೆಂದು ಸೂಚಿಸಿತ್ತು. ಮರುಮೌಲ್ಯಮಾಪನ ನಡೆಸಿತು ಗಾಡಗೀಳರ ತಂಡ. ಯೋಜನೆಗೆ ಅನುಮತಿ ಸಿಗುವ ಮೊದಲೇ ಅತ್ಯಮೂಲ್ಯ ಬೇಡ್ತಿಕಣಿವೆಯ ಧ್ವಂಸಕಾರ್ಯ ಆರಂಭವಾಗಿತ್ತು. ಆರ್ಥಿಕ, ಪಾರಿಸರಿಕ ಯಾವ ದೃಷ್ಟಿಯಿಂದ ನೋಡಿದರೂ ಬೇಡ್ತಿ ಅಣೆಕಟ್ಟು ಸಾಧುವಲ್ಲ ಎಂದು ತಂಡ ನೀಡಿದ ವರದಿಗೆ ಬೇರೆ ತಜ್ಞರೂ ಸಮ್ಮತಿಸಿದ್ದರಿಂದ ಇಡೀ ಯೋಜನೆಯನ್ನು ಸರಕಾರ ಕೈಬಿಟ್ಟಿತು (ಈಗ ಉತ್ತರಕನ್ನಡದ ಪವಿತ್ರ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ತಿರುಗಿಸುವ ಯೋಜನೆಗೆ ಸರಕಾರ ಕೈಹಾಕುತ್ತಿದೆ, ಇಡೀ ಜಿಲ್ಲೆಯ ಜನರು ಅದನ್ನು ವಿರೋಧಿಸಿ ಎದ್ದು ನಿಂತಿದ್ದಾರೆ).
ಕೇರಳದ ಮೌನಕಣಿವೆಯ ಬಗ್ಗೆ ತಿಳಿಯದವರು ಯಾರು? ಎತ್ತರದಿಂದ ಹರಿದು ಬರುವ ಕುಂತಿಪುಜಾ ನದಿ ಕಣಿವೆಗಳನ್ನೂ, ಅಪಾರ ಜೀವವೈವಿಧ್ಯತೆಯನ್ನೂ ಹುಟ್ಟು ಹಾಕಿದೆ. ಅಲ್ಲಿ 16 ಜಲವಿದ್ಯುತ್ ಯೋಜನೆಗಳಿಗೆಂದು ಕೇರಳ ಸರಕಾರ ಮುಂದಾಗಿತ್ತು. ಹಿನ್ನೀರಿನ 89 ಚದರ ಕಿಮೀ ವಿಸ್ತಾರದ ಕಾಡು ಮುಳುಗಡೆಯಾಗಲಿತ್ತು. ಸಿಂಹಬಾಲದ ಕೋತಿಯಂಥಹ ಅಳಿವಿನಂಚಿನಲ್ಲಿರುವ ಪ್ರಾಣಿಗಳು, ನೂರಾರು ಪ್ರಾಣಿಪಕ್ಷಿಗಳು ಆವಾಸ ಕಳೆದುಕೊಳ್ಳಲಿದ್ದವು. ವಿನಾಶವಿಲ್ಲದ ಅಭಿವೃದ್ಧಿ ಬೇಕು ಎಂದು ವಾದಿಸುತ್ತಿದ್ದ ಕೇರಳದ ಎಂ. ಕೆ. ಪ್ರಸಾದ್ ಅವರ ನೇತೃತ್ವದಲ್ಲಿ 1980ರ ರಾಷ್ಟ್ರೀಯ ವಿಜ್ಞಾನ ದಿನ ಫೆಬ್ರುವರಿ 28 ರಂದು ವಿಜ್ಞಾನ ಸಂಸತ್ತು ನಡೆಯಿತು. ಅಪಾರ ಜನಸಂದಣಿ, ಜನಸಾಮಾನ್ಯರ ಪ್ರಶ್ನೆಗಳಿಗೆ ವಿಜ್ಞಾನಿಗಳ ವಿವರಣೆಗಳಿದ್ದ ಆ ಅಪೂರ್ವ ಸಮಾವೇಶದಲ್ಲಿ ಗಾಡಗೀಳರೂ ಹಾಜರಿದ್ದರು. ಅದರ ಸದ್ದು ದಿಲ್ಲಿಗೂ ತಲುಪಿ ಪ್ರಧಾನಿ ಇಂದಿರಾ ಗಾಂಧಿಯವರು ಒಂದು ಸಲಹಾ ಸಮಿತಿಯನ್ನು ನೇಮಿಸಿದರು. ಅದರಲ್ಲಿ ಗಾಡಗೀಳರು ಕೇಂದ್ರಸರಕಾರ ಪರವಾದ ಸದಸ್ಯರು. ಕೇರಳದ ವನಸಿರಿಯ ಮಡಿಲಲ್ಲಿ ಮತ್ತೊಮ್ಮೆ ಓಡಾಡಿ ಪರಿಸರವಷ್ಟೇ ಅಲ್ಲ, ಆರ್ಥಿಕ, ಸಾಮಾಜಿಕ ಮತ್ತು ತಾಂತ್ರಿಕ ಕಾರಣಗಳಿಗಾಗಿಯೂ ಈ ಯೋಜನೆ ಲಾಭದಾಯಕವಲ್ಲ ಎಂದು ಸಮಿತಿ ವರದಿ ನೀಡಿತು.
ಮುಂದೆ ನಡೆದಿದ್ದು ಈಗ ಇತಿಹಾಸ.
ಇಡೀ ಸೈಲೆಂಟ್ ವ್ಯಾಲಿಯನ್ನು ಸಂರಕ್ಷಿತ ಪ್ರದೇಶವೆಂದು ಪ್ರಧಾನಿ ಘೋಷಿಸಿದರು. ಅದು ರಾಷ್ಟ್ರೀಯ ಉದ್ಯಾನವೆಂದು ಪರಿಗಣಿತವಾಯಿತು.
ಪಶ್ಚಿಮ ಘಟ್ಟಗಳ ಕುರಿತಾದ 38 ಅಂಶಗಳ ಗಾಡ್ಗೀಳ್ ವರದಿ ಸುಸ್ಥಿರ ಅಭಿವೃದ್ಧಿಗೆ ದಾರಿ ತೋರುವ ಮಾರ್ಗದರ್ಶಕ ಸೂತ್ರಗಳಾಗಿವೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಜನರಲ್ಲಿ ತಪ್ಪು ಗ್ರಹಿಕೆ ಉಂಟಾಯಿತು. ವರದಿಯನ್ನು ಬಹಿರಂಗಪಡಿಸದೆ ಸರಕಾರವೂ ಬಹಳ ಸಮಯದವರೆಗೆ ಅದನ್ನು ಬಚ್ಚಿಟ್ಟಿತ್ತು. ಈಗ ಗಾಡಗೀಳ್ ವರದಿ ಸಾರ್ವಜನಿಕರಿಗೆ ಲಭ್ಯವಿದೆ. ಜಾಗತಿಕ ಪರಿಸರ ಕಾರ್ಯಪಾಲನಾ ಸೂಚ್ಯಂಕದಲ್ಲಿ 180 ನೇ ಸ್ಥಾನದಲ್ಲಿರುವ ಭಾರತ ದೇಶದ ಪ್ರಮುಖ ಪರಿಸರಾಗಾರವಾದ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಗಾಡಗೀಳ ವರದಿಯನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ.
ಭಾರತ ಸರಕಾರದಿಂದ ಪದ್ಮಶ್ರೀ, ಪದ್ಮವಿಭೂಷಣ ಗೌರವಗಳನ್ನು ಪಡೆದ ಮಾಧವ ಗಾಡಗೀಳರ ಪಶ್ಚಿಮ ಘಟ್ಟದ ಜೀವವೈವಿಧ್ಯ ಕುರಿತಾದ ಕಾರ್ಯಸಾಧನೆಗಾಗಿ ವಿಶ್ವಸಂಸ್ಥೆಯೂ ʼಛಾಂಪಿಯನ್ ಆಫ್ ಅರ್ಥ್ʼ ಪ್ರಶಸ್ತಿ ನೀಡಿದೆ. ಇಂಥ ಮಹಾನುಭಾವನನ್ನು ನಾವು ಕಳೆದ ಜನವರಿ 7ರಂದು ನಾವು ಕಳೆದುಕೊಂಡಿದ್ದೇವೆ.
ಬಹುಶಃ ಪಶ್ಚಿಮ ಘಟ್ಟಕ್ಕೂ ಅನಾಥ ಭಾವ ಕಾಡಿರಬೇಕು!
ಸರೋಜಾ ಪ್ರಕಾಶ್, ಮಂಗಳೂರು
ಇವರು ವಿಜ್ಞಾನ ಕೃತಿಗಳು ಸೇರಿದಂತೆ ಹಲವು ವಿಭಿನ್ನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಇದನ್ನೂ ಓದಿ- ಅತಿದಾರಿದ್ರ್ಯದ ನಿರ್ಲಕ್ಷಿತ ರೋಗ: ‘ನೋಮ’


