ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಸೇರಿಸಲು ಕಾಂಗ್ರೆಸ್ ‘ಸಂಚು’ ರೂಪಿಸಿತ್ತೇ?

Most read

1946ರ ಕ್ಯಾಬಿನೆಟ್‌ ಮಿಷನ್‌ನ ಪ್ರಯತ್ನವನ್ನು ಬಹಳ ಜಾಣ್ಮೆಯಿಂದ ಇಲ್ಲಿ misinterpret ಮಾಡಲಾಗಿದೆ. ಗೋಪಿನಾಥ್‌ ಬರ್ದೋಲೊಯ್‌ ಅವರು ಕ್ಯಾಬಿನೆಟ್‌ ಪ್ರಸ್ತಾಪದ ಗ್ರೂಪಿಂಗ್‌ ವಿರುದ್ಧ ಬಂಡೆದ್ದಿದ್ದು ನಿಜ, ಆದರೆ ಆ ಬಂಡಾಯಕ್ಕೆ ಕಾಂಗ್ರೆಸ್ ನಾಯಕರ ವಿರೋಧವಿರಲಿಲ್ಲ. ಬದಲಿಗೆ ಮಹಾತ್ಮ ಗಾಂಧಿಯವರ ಪ್ರತ್ಯಕ್ಷ ಮತ್ತು ನೆಹರೂ ಅವರ ಪರೋಕ್ಷ ಬೆಂಬಲಗಳಿದ್ದವು –  ಮಾಚಯ್ಯ ಎಂ ಹಿಪ್ಪರಗಿ.

ದಿನಾಂಕ: 20 ಡಿಸೆಂಬರ್ 2025. ಸ್ಥಳ: ಗುವಾಹತಿ, ಅಸ್ಸಾಂ

“ಸ್ವಾತಂತ್ರ್ಯ ಪೂರ್ವದಲ್ಲೇ ಮುಸ್ಲಿಂ ಲೀಗ್‌ ಮತ್ತು ಬ್ರಿಟಿಷರ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್‌, ಅಸ್ಸಾಂ ರಾಜ್ಯವನ್ನು ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶ)ಕ್ಕೆ ಸೇರಿಸುವ ಸಂಚು ನಡೆಸಿತ್ತು. ಆದರೆ ಅಸ್ಸಾಂನ ಮೊದಲ ಸಿಎಂ ಗೋಪಿನಾಥ್‌ ಬರ್ದೊಲೋಯ್‌ ತಮ್ಮದೇ ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದು ನಿಂತಿದ್ದರಿಂದ ಇವತ್ತು ಅಸ್ಸಾಮ್ ಭಾರತದ ಭಾಗವಾಗಿ ಉಳಿಯಲು ಸಾಧ್ಯವಾಗಿದೆ.”

ಭಾರತದ ಪ್ರಪ್ರಥಮ nature-themed airport ಉದ್ಘಾಟನೆಗೆಂದು ಅಸ್ಸಾಮಿಗೆ ತೆರಳಿದ್ದಾಗ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿಯವರ ಬಾಯಿಯಿಂದ ಹೊರಬಿದ್ದ ಮಾತುಗಳು ಇವು.

ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕುರುಸೇನೆಯ ದ್ರೋಣಾಚಾರ್ಯರನ್ನು ಯಾಮಾರಿಸಲು ಕೃಷ್ಣ ಒಂದು ತಂತ್ರ ಹೂಡುತ್ತಾನೆ. ಸತ್ಯವಂತ ಧರ್ಮರಾಯನಿಂದ ದ್ರೋಣಾಚಾರ್ಯರ ಮಗ ಅಶ್ವತ್ಥಾಮ ಸತ್ತುಹೋದ ಎಂದು ಹೇಳಿಸಲು ಪ್ರಯತ್ನಿಸುತ್ತಾನೆ. ಅದರಿಂದ ಆಚಾರ್ಯರ ಮನಸ್ಸು ಆಘಾತಕ್ಕೆ ತುತ್ತಾಗಿ ಶಸ್ತ್ರತ್ಯಾಗ ಮಾಡಲಿ ಎಂಬುದು ಕೃಷ್ಣನ ಉದ್ದೇಶ. ಸುಳ್ಳು ನುಡಿಯಲು ಧರ್ಮರಾಯ ಹಿಂದೇಟು ಹಾಕಿದಾಗ  ‘ಅಶ್ವತ್ಥಾಮ ಹತಾ ಕುಂಜರ’ (ಅಶ್ವತ್ಥಾಮ ಹೆಸರಿನ ಆನೆ ಸತ್ತುಹೋಯಿತು) ಎಂದು ಹೇಳು, ಆದರೆ ಇದರಲ್ಲಿ ‘ಕುಂಜರ’ (ಆನೆ) ಎಂಬುದನ್ನು ಪಿಸುದನಿಯಲ್ಲಿ ಹೇಳು ಎಂದು ಸಲಹೆ ನೀಡುತ್ತಾನೆ. ಧರ್ಮರಾಯ ಅದರಂತೆಯೇ ಮಾಡುತ್ತಾನೆ. ಯುದ್ಧದ ಗದ್ದಲ ಮತ್ತು ಕೃಷ್ಣನ ಶಂಖನಾದದ ಮಾಯೆಯಿಂದ ವಾಕ್ಯದ ಕೊನೆಯ ‘ಕುಂಜರ’ವನ್ನು ಕೇಳಿಸಿಕೊಳ್ಳದ ದ್ರೋಣಾಚಾರ್ಯರು, ಧರ್ಮರಾಯ ಸುಳ್ಳು ಹೇಳಲಾರ ಎಂಬ ವಿಶ್ವಾಸದಲ್ಲಿ ಮಗನ ಸಾವಿನ ಸುದ್ದಿಗೆ ಧೃತಿಗೆಡುತ್ತಾರೆ. ಕೃಷ್ಣನ ತಂತ್ರ ಫಲಿಸುತ್ತದೆ.

ಸಂಘ ಪರಿವಾರ ಚರಿತ್ರೆಯ selective factಗಳನ್ನು contextಗಳಿಂದ ಪ್ರತ್ಯೇಕಿಸಿ ಇದೇ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿದೆ. ಕಾಂಗ್ರೆಸ್‌ ಮೇಲಿನ ಮೋದಿಯವರ ಈ ಆರೋಪ ಕೂಡಾ ಇಂತದ್ದೇ ಪ್ರಯತ್ನ.

ಗೋಪಿನಾಥ್‌ ಬರ್ದೋಲೊಯ್‌

1946ರ ಕ್ಯಾಬಿನೆಟ್‌ ಮಿಷನ್‌ನ ಪ್ರಯತ್ನವನ್ನು ಬಹಳ ಜಾಣ್ಮೆಯಿಂದ ಇಲ್ಲಿ misinterpret ಮಾಡಲಾಗಿದೆ. ಗೋಪಿನಾಥ್‌ ಬರ್ದೋಲೊಯ್‌ ಅವರು ಕ್ಯಾಬಿನೆಟ್‌ ಪ್ರಸ್ತಾಪದ ಗ್ರೂಪಿಂಗ್‌ ವಿರುದ್ಧ ಬಂಡೆದ್ದಿದ್ದು ನಿಜ, ಆದರೆ ಆ ಬಂಡಾಯಕ್ಕೆ ಕಾಂಗ್ರೆಸ್ ನಾಯಕರ ವಿರೋಧವಿರಲಿಲ್ಲ. ಬದಲಿಗೆ ಮಹಾತ್ಮ ಗಾಂಧಿಯವರ ಪ್ರತ್ಯಕ್ಷ ಮತ್ತು ನೆಹರೂ ಅವರ ಪರೋಕ್ಷ ಬೆಂಬಲಗಳಿದ್ದವು. ಮೊಹಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌ನ ದೇಶ ವಿಭಜನೆ ಯತ್ನಕ್ಕೆ ಆಸ್ಪದಕೊಡಬಾರದೆಂಬ ಏಕೈಕ ಕಾರಣಕ್ಕೆ ನೆಹರೂ ಮತ್ತು ಸರ್ದಾರ್ ಪಟೇಲರು ಕ್ಯಾಬಿನೆಟ್‌ ಮಿಷನ್‌ ಪ್ರಸ್ತಾವಗಳಿಗೆ ಷರತ್ತುಬದ್ಧ ಸಮ್ಮತಿ ನೀಡಿದ್ದರು. ಕಾಂಗ್ರೆಸ್‌ ನಾಯಕರು ಸಮ್ಮತಿಸಿದ್ದ ಕ್ಯಾಬಿನೆಟ್ ಕಮೀಷನ್‌ ವಿರುದ್ಧ ಗೋಪಿನಾಥ್‌ ಬರ್ದೊಲೊಯ್‌ ಬಂಡೆದ್ದಿದ್ದರಿಂದ, ಅವರು ಕಾಂಗ್ರೆಸ್‌ನ ವಿರುದ್ಧವೇ ಬಂಡೆದ್ದು ಅಸ್ಸಾಮನ್ನು ಉಳಿಸಿಕೊಂಡರು ಎಂಬುದು ಮೋದಿಯವರ ಮಾತಿನ ಸಾರಾಂಶ. ಆದರೆ ಈ ಕ್ಯಾಬಿನೆಟ್‌ ಕಮೀಷನ್‌ನ ಪ್ರಸ್ತಾವನೆಗಳು ಏನಿದ್ದವು? ಆ ಪ್ರಸ್ತಾವನೆಗೆ ಜಿನ್ನಾ ಒಪ್ಪಿದ್ದು ಯಾಕೆ? ಕಾಂಗ್ರೆಸ್‌ ನಾಯಕರು ಸಮ್ಮಿತಿಸಿದ್ದು ಯಾಕೆ? ಅಸ್ಸಾಮಿನ ಗೋಪಿನಾಥರು ಬಂಡೆದ್ದಾಗ, ಅವರ ಪರವಾಗಿ ಗಾಂಧಿ ಏನು ಹೇಳಿದರು? ಜುಲೈ 10, 1946ರ ಬಾಂಬೆ ಪತ್ರಿಕಾಗೋಷ್ಠಿಯಲ್ಲಿ ನೆಹರೂ ಹೇಳಿದ್ದೇನು? ಕ್ಯಾಬಿನೆಟ್‌ ಮಿಷನ್‌ ಸಂಧಾನವೇ ಮುರಿದುಬಿದ್ದಿದ್ದೇಕೆ? ಎನ್ನುವ ಸತ್ಯಸಂಗತಿಗಳನ್ನು ವಿವರವಾಗಿ ತಿಳಿದುಕೊಂಡಾಗ ಮೋದಿಯವರ ‘ಹತಾ ಕುಂಜರ’ದ ಕಥೆಯ ಅಸಲಿ ಚಿತ್ರಣ ಅರಿವಾಗುತ್ತದೆ.

ಮೊದಲಿಗೆ ಈ ಕ್ಯಾಬಿನೆಟ್‌ ಮಿಷನ್‌ ರಚನೆಯ ಹಿನ್ನೆಲೆ ನೋಡೋಣ. ಎರಡನೇ ಮಹಾಯುದ್ಧ ಮುಗಿದು ಅಮೆರಿಕಾ ಮುಂದಾಳತ್ವದ ನ್ಯಾಟೋ ಮಿತ್ರರಾಷ್ಟ್ರಗಳು (ಇಂಗ್ಲೆಂಡ್‌ ಒಳಗೊಂಡಂತೆ) ಮತ್ತು ಕಮ್ಯುನಿಸ್ಟ್‌ ರಷ್ಯಾ ನಡುವೆ ಶೀತಲ ಸಮರ ಶುರುವಾಗುವ ವೇಳೆಗೆ, ಯುದ್ಧ ಮತ್ತು ಜಾಗತಿಕ ಒತ್ತಡಗಳಿಂದ ಜರ್ಜರಿತವಾಗಿದ್ದ ಆಂಗ್ಲರಿಗೆ ಭಾರತಕ್ಕೆ ಸ್ವಾತಂತ್ರ್ಯ ನೀಡದೆ ಬೇರೆ ವಿಧಿಯಿರಲಿಲ್ಲ. ಒಂದೆಡೆ ದೇಶದಲ್ಲಿ ಗಾಂಧಿ ನೇತೃತ್ವದಲ್ಲಿ ಉತ್ತುಂಗಕ್ಕೇರಿದ್ದ ಸ್ವಾತಂತ್ರ್ಯ ಚವಳಿಯ ಕಾವು, ಮತ್ತೊಂದೆಡೆ ಯುದ್ಧವೆಚ್ಚದಿಂದಾಗಿ ಹದಗೆಟ್ಟ ಇಂಗ್ಲೆಂಡಿನ ಆರ್ಥಿಕ ಪರಿಸ್ಥಿತಿ, ಹಾಗೂ ಜಾಗತಿಕವಾಗಿ ರಷ್ಯಾದ ಪ್ರಭಾವವನ್ನು ಕುಗ್ಗಿಸಬೇಕಾದ ಅನಿವಾರ್ಯತೆ. ಇವು ಆಂಗ್ಲರನ್ನು ಮೆತ್ತಗಾಗಿಸಿದ್ದವು. ಯಾವುದೇ ಕಾರಣಕ್ಕೂ ದಕ್ಷಿಣ ಏಷ್ಯಾದ ಸಮುದ್ರ ಮಾರ್ಗಗಳಿಗೆ ರಷ್ಯಾ ತನ್ನ ನಂಟು ವಿಸ್ತರಿಸದಂತೆ ಮತ್ತು ಗಲ್ಫ್‌ ರಾಷ್ಟ್ರಗಳ ತೈಲ ನಿಕ್ಷೇಪಗಳಿಗೆ ಸನಿಹವಾಗದಂತೆ ತಡೆಯುವುದು ಬ್ರಿಟಿಷರ ಪ್ರಥಮ ಆದ್ಯತೆಯಾಗಿತ್ತು. ಅದಕ್ಕಾಗಿ ಅವರಿಗೆ ಏಷ್ಯಾದಲ್ಲಿ ಒಂದು buffer ದೇಶ ಬೇಕಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ಅದನ್ನು ರಷ್ಯಾಕ್ಕೆ ಕಡಿವಾಣ ಹಾಕುವ buffer ನೆಲವಾಗಿ ಬಳಸಲು ಆಂಗ್ಲರು ತೀರ್ಮಾನಿಸಿದ್ದರು. ಇದು ಸಾಧ್ಯವಾಗಬೇಕೆಂದರೆ ದೇಶ ವಿಭಜನೆಗೆ ಆಸ್ಪದ ಕೊಡದಂತೆ ಭಾರತಕ್ಕೆ ಇಡಿಯಾಗಿ ಸ್ವಾತಂತ್ರ್ಯ ನೀಡಬೇಕಿತ್ತು. ಯಾಕೆಂದರೆ, ದೇಶ ವಿಭಜನೆ ಮಾಡಿದರೆ ಹೊಸದಾಗಿ ಹುಟ್ಟಿಕೊಳ್ಳುವ ಎರಡು ದೇಶಗಳು ಅಧಿಕಾರ ಮತ್ತು ಗಡಿವ್ಯಾಜ್ಯದಲ್ಲಿ ತಮ್ಮತಮ್ಮೊಡನೆ ಸಂಘರ್ಷಕ್ಕೆ ಇಳಿಯುತ್ತವೆ. ದಕ್ಷಿಣ ಏಷ್ಯಾದಲ್ಲಿ ಈ ಅನಗತ್ಯ ಭೌಗೋಳಿಕ-ರಾಜಕೀಯ ಪ್ರಕ್ಷುಬ್ಧತೆ ಉಂಟಾದರೆ ಅದು ರಷ್ಯಾಗೆ ಅನುಕೂಲವಾಗಲಿದೆ ಮತ್ತು ಭಾರತವನ್ನು ತಾವು ಬಫರ್‍‌ ದೇಶವಾಗಿ ಉಪಯೋಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಬ್ರಿಟಿಷರ ಯೋಜನೆ. ಆದರೆ ಜಿನ್ನಾ ದೇಶವಿಭಜನೆಯ ಹಠ ಹಿಡಿದು ಕೂತಿದ್ದರೆ, ಕಾಂಗ್ರೆಸ್‌ ನಾಯಕರು ದೇಶ ವಿಭಜನೆಗೆ ಅವಕಾಶ ನೀಡುವುದಿಲ್ಲ ಎಂಬ ನಿಲುವಿಗೆ ಬದ್ಧವಾಗಿದ್ದರು. ಕಾಂಗ್ರೆಸ್‌ ನಾಯಕರ ನಿಲುವೇ ಬ್ರಿಟಿಷರಿಗೂ ಬೇಕಾಗಿತ್ತು. ಜಿನ್ನಾರ ಮನವೊಲಿಸಿ ದೇಶ ವಿಭಜನೆಯನ್ನು ತಪ್ಪಿಸುವ ಸಲುವಾಗಿ ಅಂದಿನ ಇಂಗ್ಲೆಂಡ್ ಪ್ರಧಾನಿ ಕ್ಲೆಮೆಂಟ್‌ ಅಟ್ಲೀಯವರು ತಮ್ಮ ಸಂಪುಟದ ಮೂವರು ಸಚಿವರುಗಳಾದ ಲಾರ್ಡ್ ಪೆಥಿಕ್‌ ಲಾರೆನ್ಸ್‌, ಸರ್‍‌ ಸ್ಟಾಫರ್ಡ್‌ ಕ್ರಿಪ್ಸ್‌ ಮತ್ತು ಎ ವಿ ಅಲೆಕ್ಸಾಂಡರ್ ಒಳಗೊಂಡ ತ್ರಿಸದಸ್ಯ ನಿಯೋಗವನ್ನು ಭಾರತಕ್ಕೆ ಕಳಿಸುತ್ತಾರೆ. ಅದುವೇ ಕ್ಯಾಬಿನೆಟ್ ಮಿಷನ್‌.

ಜಿನ್ನಾ

ದೇಶ ವಿಭಜನೆಯ ಹಠದಿಂದ ಜಿನ್ನಾ ಅವರನ್ನು ಮನವೊಲಿಸಲು ಅದು ಪ್ರಧಾನವಾಗಿ ಎರಡು ಪ್ರಸ್ತಾಪಗಳನ್ನು ಮುಂದಿಡುತ್ತದೆ. ಮೊದಲನೆಯದ್ದು ಮೂರು ಪದರಗಳ ಆಡಳಿತ ವ್ಯವಸ್ಥೆ ಮತ್ತು ಎರಡನೆಯದ್ದು, ಪ್ರಾಂತ್ಯಗಳ ಗುಂಪೀಕರಣ. ಮೂರು ಪದರ ವ್ಯವಸ್ಥೆಯಲ್ಲಿ ಎಲ್ಲಕ್ಕೂ ಮೇಲೆ ಕೇಂದ್ರ ಸರ್ಕಾರವಿರುತ್ತದೆ, ತಳಮಟ್ಟದಲ್ಲಿ ರಾಜ್ಯ/ಪ್ರಾಂತ್ಯಗಳ ಸ್ವಾಯತ್ತ ಆಡಳಿತವಿರುತ್ತದೆ. ಇವೆರಡರ ಮಧ್ಯದಲ್ಲಿ ಹಲವು ಪ್ರಾಂತ್ಯಗಳನ್ನು ಒಟ್ಟುಗೂಡಿಸಿದ ಗುಂಪುಗಳ ಮಧ್ಯಂತರ ಆಡಳಿತವಿರುತ್ತದೆ. ಇದಕ್ಕಾಗಿ ಭಾರತವನ್ನು ಅವರು ಮೂರು ಗುಂಪುಗಳಾಗಿ ವಿಂಗಡಿಸಿದ್ದರು. ಮದ್ರಾಸ್, ಬಾಂಬೆ, ಕೇಂದ್ರ ಪ್ರಾಂತ್ಯ, ಬಿಹಾರ, ಒರಿಸ್ಸಾಗಳನ್ನು ಒಳಗೊಂಡ ಹಿಂದೂ ಪ್ರಾಬಲ್ಯದ ಪ್ರಾಂತ್ಯಗಳನ್ನು ಗ್ರೂಪ್‌ ಎ ಆಗಿಯೂ; ಪಂಜಾಬ್‌, ಸಿಂಧ್, ವಾಯುವ್ಯ ಗಡಿನಾಡು ಪ್ರಾಂತ್ಯಗಳನ್ನು (ಇಂದಿನ ಪಾಕಿಸ್ತಾನ ಭಾಗ) ಗ್ರೂಪ್‌ ಬಿ ಆಗಿಯೂ; ಮತ್ತು, ಬಂಗಾಳ (ಮುಸ್ಲಿಂ ಬಾಹುಳ್ಯದ ಇಂದಿನ ಬಾಂಗ್ಲಾದೇಶ ಒಳಗೊಂಡಂತೆ) ಹಾಗೂ ಅಸ್ಸಾಂಗಳನ್ನು (ಹಿಂದೂಗಳ ಬಾಹುಳ್ಯದ) ಗ್ರೂಪ್‌ ಸಿ  ಆಗಿಯೂ ವಿಂಗಡಿಸಿದ್ದರು. ಇವುಗಳು ತಮ್ಮದೇ ಪ್ರತ್ಯೇಕ ಸಂವಿಧಾನ ರಚಿಸಿಕೊಳ್ಳುವ ಅವಕಾಶವನ್ನೂ ಬ್ರಿಟಿಷರು ಮುಂದೊಡ್ಡಿದ್ದರು.

ದೇಶ ವಿಭಜನೆಗೆ ಹಠ ಹಿಡಿದಿದ್ದ ಜಿನ್ನಾ ಕೂಡಾ ಇದಕ್ಕೆ ಒಪ್ಪಿದರು. ಹಾಗೆ ಒಪ್ಪಲು ಕಾರಣಗಳಿದ್ದವು. ಕೇಂದ್ರ ಸರ್ಕಾರ ಎಂಬುದು ಇರುತ್ತದೆಯಾದರೂ, ಅದಕ್ಕೆ ಕೇವಲ ರಕ್ಷಣೆ, ವಿದೇಶಾಂಗ ಮತ್ತು ಸಂವಹನಗಳ ಆಡಳಿತ ಮಾತ್ರ ನೀಡಲಾಗಿತ್ತು. ಇನ್ನುಳಿದ ಬಹುಪಾಲು ಆಡಳಿತ ಆಯಾ ಗುಂಪಿನ ರಾಜ್ಯ/ಪ್ರಾಂತ್ಯಗಳ ಅಧೀನದಲ್ಲಿ ಇರಲಿತ್ತು. ಅಂದರೆ ಒಂದು ದುರ್ಬಲ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿತ್ತು. ಅಲ್ಲದೇ, ಅಸ್ಸಾಂ ರಾಜ್ಯವನ್ನೂ ಪೂರ್ವಪಾಕಿಸ್ತಾನ ಪರಿಕಲ್ಪನೆಯ ಬಂಗಾಳಕ್ಕೆ ಸೇರಿಸಿದ್ದರಿಂದ ಜಿನ್ನಾಗೆ ಇದು ಲಾಭದಾಯಕ ಎನಿಸಿತು. ಹೇಗೂ ಬಹುಪಾಲು ಅಧಿಕಾರ ಪ್ರಾಂತೀಯ ಸರ್ಕಾರಗಳಲ್ಲೆ ಉಳಿಯುವುದರಿಂದ, ನಿಧಾನಕ್ಕೆ ಪ್ರತ್ಯೇಕ ದೇಶಕ್ಕೆ ಭೂಮಿಕೆ ಸಿದ್ದಮಾಡಿಕೊಳ್ಳಬಹುದು ಎನ್ನುವುದು ಜಿನ್ನಾ ಆಲೋಚನೆ.

ಇತ್ತ ಕಾಂಗ್ರೆಸ್‌ ನಾಯಕರು ದೇಶ ವಿಭಜನೆ ತಪ್ಪಲಿದೆ ಎಂಬ ಕಾರಣಕ್ಕೆ ಇದಕ್ಕೆ ಸಮ್ಮತಿಸಿದ್ದರಾದರೂ, ಹಲವು ನಿಬಂಧನೆಗಳಿಗೆ ತಕರಾರು ತೆಗೆದಿದ್ದರು. ಮುಖ್ಯವಾಗಿ, ಯಾವ ಪ್ರಾಂತ್ಯ ಯಾವ ರಾಜ್ಯಕ್ಕೆ ಸೇರಬೇಕು ಎನ್ನುವುದನ್ನು ಆಯಾ ರಾಜ್ಯಗಳಿಗೇ ಬಿಡಬೇಕು; ಬೇರೆಯವರು ಒತ್ತಡ ಹಾಕಿ ಕಡ್ಡಾಯಗೊಳಿಸಬಾರದು ಎಂಬುದು ನೆಹರೂ ಅವರ ವಾದವಾಗಿತ್ತು. ಅಸ್ಸಾಮಿನ ಗೋಪಿನಾಥ್‌ ಬರ್ದೊಲೊಯ್‌ ಕ್ಯಾಬಿನೆಟ್‌ ಮಿಷನ್‌ ವಿರುದ್ಧ ಸಿಡಿದೇಳಲು ಒತ್ತಾಸೆ ನೀಡಿದ್ದೆ ಕಾಂಗ್ರೆಸ್‌ ನಾಯಕರ ಈ ಬೇಡಿಕೆ. ಯಾಕೆಂದರೆ, ಅಂದಿನ ಶಾಸನಸಭೆಯಲ್ಲಿ ಬಂಗಾಳದ ಬಳಿ 60 ಜನಪ್ರತಿನಿಧಿ ಸ್ಥಾನಗಳ (ಬಹುಪಾಲು ಮುಸ್ಲಿಂ ಲೀಗ್‌ನ ಸದಸ್ಯರು) ಸಾಮರ್ಥ್ಯವಿದ್ದರೆ, ಅಸ್ಸಾಂ ಬಳಿ ಕೇವಲ 10 ಸದಸ್ಯರ ಬಲವಿತ್ತು. ಒಂದುವೇಳೆ, ‘ಗ್ರೂಪ್‌ ಸಿ’ ಅಡಿ ಬಂಗಾಳದ ಜೊತೆ ಸೇರುವುದು ಅಸ್ಸಾಂಗೆ ಕಡ್ಡಾಯ ಮಾಡಿದರೆ, ಅಸೆಂಬ್ಲಿಯಲ್ಲಿ ಮುಸ್ಲೀಂ ಲೀಗ್‌ ತನ್ನ ಬಹುಮತ ಬಳಸಿ, ಅಸ್ಸಾಮನ್ನೂ ಭವಿಷ್ಯದಲ್ಲಿ ಪೂರ್ವಪಾಕಿಸ್ತಾನದ ಭಾಗವೆಂದು ತೀರ್ಮಾನ ತೆಗೆದುಕೊಳ್ಳುವ ಅಪಾಯವಿತ್ತು.

ಹಾಗಾಗಿಯೇ ಗೋಪಿನಾಥ್‌ ಅವರು ಗ್ರೂಪ್‌ ಸಿ ಹೆಸರಿನಲ್ಲಿ ಬಂಗಾಳದ ಜೊತೆ ಅಸ್ಸಾಂ ಅನ್ನು ಸೇರಿಸಿದ್ದರ ವಿರುದ್ಧ ಬಂಡೆದ್ದರು. ನೆಹರೂ ಒಳಗೊಂಡಂತೆ ಕಾಂಗ್ರೆಸ್‌ ನಾಯಕರ ವಾದವೂ, ಆಯಾ ಪ್ರಾಂತ್ಯಗಳಿಗೆ ಯಾವ ಗುಂಪಿನ ಜೊತೆ ಸೇರಬೇಕೆಂಬ ಸ್ವಾತಂತ್ರ್ಯ ನೀಡಬೇಕು ಎಂಬುದಾಗಿತ್ತು. ಇದರಲ್ಲಿ ಕಾಂಗ್ರೆಸ್‌ ಪಕ್ಷ ಮತ್ತು ಗೋಪಿನಾಥರ ನಡುವೆ ವೈರುಧ್ಯವೇನಿದೆ?

ಕ್ಯಾಬಿನೆಟ್‌ ಮಿಷನ್‌ ಮುಂದೊಡ್ಡಿದ್ದ ದುರ್ಬಲ ಕೇಂದ್ರ ಸರ್ಕಾರದ  ಮಾದರಿಯಿಂದ ಸ್ವತಂತ್ರ ದೇಶವನ್ನು ಸದೃಢವಾಗಿ ರೂಪಿಸಲು ಸಾಧ್ಯವಿಲ್ಲ ಎಂಬುದು ನೆಹರೂ ಮತ್ತು ಪಟೇಲರ ವಾದವಾಗಿತ್ತು. ಆದರೆ, ಸಂವಿಧಾನ ರಚನಾ ಸಭೆಯ ಅಧಿಕಾರವನ್ನು ನಮಗೆ ನೀಡಿ, ಬ್ರಿಟಿಷರು ಹೊರಹೋದ ನಂತರ, ಶಾಸನ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕಿರುವ ಸಂಖ್ಯಾಬಲದ ಆಧಾರದಲ್ಲಿ ಸದೃಢ ಕೇಂದ್ರ ಸರ್ಕಾರ ರಚನೆಗೆ ಬೇಕಾದಂತೆ ಸಂವಿಧಾನ ರೂಪಿಸಿಕೊಳ್ಳಬೇಕೆನ್ನುವುದು ಕಾಂಗ್ರೆಸ್‌ ನಾಯಕರ ಉದ್ದೇಶ. ಜುಲೈ 10, 1946ರಂದು ಬಾಂಬೆಯ ಕಾಂಗ್ರೆಸ್‌ ಹೌಸ್‌ ಪತ್ರಿಕಾಗೋಷ್ಠಿಯಲ್ಲಿ ನೆಹರೂ ಅವರು ಮಾತುಗಳು ಕಾಂಗ್ರೆಸ್‌ ಯೋಜನೆಯನ್ನು ಸ್ಪಷ್ಟಪಡಿಸಿದ್ದವು.

“…ಮೊದಲನೆಯದಾಗಿ, ನಾವು ಸಂವಿಧಾನ ರಚನಾ ಸಭೆಗೆ ಮಾತ್ರ ಒಪ್ಪಿಕೊಂಡಿದ್ದೇವೆಯೆ ವಿನಾ ಬೇರಾವುದಕ್ಕೂ ಅಲ್ಲ, ಅಲ್ಲಿ ಏನು ಮಾಡಬೇಕು? ಹೇಗೆ ಮಾಡಬೇಕು? ಅನ್ನೋದನ್ನು ಸಂಪೂರ್ಣ ನಾವೇ ನಿರ್ಧರಿಸಿಕೊಳ್ಳುತ್ತೇವೆ. ಇದರಲ್ಲಿ ಯಾವ ವಿಚಾರದ ಅಧಿಕಾರವನ್ನೂ ಹೊರಗಿನವರಿಗೆ ನೀಡುವುದಿಲ್ಲ..” ಅಂದರೆ ಸಂವಿಧಾನ ಶಾಸನ ಸಭೆಯ ತೀರ್ಮಾನಗಳು ಅಂತಿಮವೇ ಹೊರತು, ಬ್ರಿಟಿಷರ ನಿಯಮಗಳಲ್ಲ ಎಂಬುದನ್ನು ಅವರು ಒತ್ತಿಹೇಳಿದ್ದರು. ಪ್ರಾಂತ್ಯಗಳ ಗುಂಪೀಕರಣದ ಬಗ್ಗೆ ಮಾತನಾಡುತ್ತಾ, “ಮುಸ್ಲಿಮರೇ ಹೆಚ್ಚು ಸಂಖ್ಯೆಯಲ್ಲಿರುವ ವಾಯುವ್ಯ ಪ್ರಾಂತ್ಯಗಳಲ್ಲೂ ಜನ ಕಾಂಗ್ರೆಸ್‌ಗೆ ಹೆಚ್ಚು ಮತಹಾಕಿದ್ದಾರೆ. ಜೂಜಿನ ಪರಿಭಾಷೆಯಲ್ಲಿ ಹೇಳಬೇಕೆಂದರೆ, ಈ ಗುಂಪೀಕರಣವನ್ನು ಆ ಭಾಗದ ಜನ 4:1 ಅನುಪಾತದಲ್ಲಿ ತಿರ್‍ಕಸರಿಸಲಿದ್ದಾರೆ. ಹಾಗಾಗಿ ಗ್ರೂಪ್‌ ಬಿ ಬಿದ್ದು ಹೋಗಲಿದೆ” ಎಂದಿದ್ದರು. ಇನ್ನು ನಿರ್ದಿಷ್ಟವಾಗಿ ಅಸ್ಸಾಮಿಗೆ ಸಂಬಂಧಿಸಿದಂತೆ “ಬಂಗಾಳದ ಜೊತೆ ಗ್ರೂಪ್‌ ಸಿ ಸೇರಲು ಅಸ್ಸಾಂ ಖಂಡಿತ ಒಪ್ಪಲಾರದು. ಎಂತದ್ದೇ ಪರಿಸ್ಥಿತಿಯಲ್ಲೂ ಈ ಗುಂಪೀಕರಣವನ್ನು ಅಸ್ಸಾಂ ಒಪ್ಪಲಾರದು ಎಂಬ ವಿಶ್ವಾಸವಿರುವುದರಿಂದ ಆ ಗುಂಪೂ ಬಿದ್ದುಹೋಗಲಿದೆ…” ಎಂದಿದ್ದರು. ಅಂದರೆ, ಅಸ್ಸಾಮ್‌ನ ಇಚ್ಛೆಗೆ ವಿರುದ್ಧವಾಗಿ ಅದನ್ನು ಬಂಗಾಳದ ಜೊತೆ ಸೇರಿಸಿದ್ದು ನೆಹರೂ ಅವರಿಗೂ ಇಷ್ಟವಿರಲಿಲ್ಲ. ಅದನ್ನು ಉಲ್ಲಂಘಿಸುವ ಅಸ್ಸಾಮಿನ ಸ್ವಾತಂತ್ರ್ಯ ವನ್ನು ಅವರು ನಿರೀಕ್ಷಿಸಿದ್ದರು ಮತ್ತು ಅವಿಭಜಿತ ಭಾರತದ ದೃಷ್ಟಿಯಿಂದ ಅದನ್ನು ಸ್ವಾಗತಿಸಿದ್ದರು.

ನೆಹರು ಮತ್ತು ಗಾಂಧಿ

ಇನ್ನು ಮಹಾತ್ಮ ಗಾಂಧಿಯವರ ನಿಲುವು ಏನಾಗಿತ್ತು? ಈ ಗುಂಪೀಕರಣದ ವಿರುದ್ಧ ಅಸ್ಸಾಂ ಶಾಸನಸಭೆಯಲ್ಲಿ ನಿರ್ಣಯ ಮಂಡಿಸಲು ಮುಂದಾಗುವ ಮೊದಲು ಗೋಪಿನಾಥ್‌ ಬರ್ದೊಲೊಯ್‌ ಅವರು ಗಾಂಧಿಯವರ ಅಭಿಪ್ರಾಯ ತಿಳಿಯಲು ಬಿಜೇನ್‌ ಚಂದ್ರ ಭಗವತಿ ಮತ್ತು ಮಹೇಂದ್ರ ಮೋಹನ್‌ ಚೌಧರಿ ಎಂಬಿಬ್ಬರು ಸಂಗಾತಿಗಳನ್ನು ಗಾಂಧಿಯವರ ಬಳಿ ಕಳಿಸುತ್ತಾರೆ. ಗೋಪಿನಾಥ್‌ ತೀರ್ಮಾನವನ್ನು ಬೆಂಬಲಿಸಿ, ಗಾಂಧಿಯವರು ಅಸ್ಸಾಂ ಜನತೆಗೆ ಒಂದು ಸ್ಪಷ್ಟ ಸಂದೇಶ ರವಾನಿಸುತ್ತಾರೆ. ಡಿಸೆಂಬರ್‍‌ 29, 1946ರ ಹರಿಜನ ಪತ್ರಿಕೆಯಲ್ಲಿ “ಅಸ್ಸಾಂ ಜನರಿಗೆ ಗಾಂಧಿ ಸಲಹೆ” ಎಂಬ ತಲೆಬರಹದಡಿ ಆ ಸಂದೇಶ ಪ್ರಕಟವಾಗಿತ್ತು. “ಈಗ ನೀವು ಸರಿಯಾದ ತೀರ್ಮಾನ ತೆಗೆದುಕೊಳ್ಳದಿದ್ದರೆ ಅಸ್ಸಾಂ ಕತೆ ಮುಗಿದಂತೆ. ಈ ವಿಚಾರದಲ್ಲಿ ಯಾವ ಅಳುಕೂ ಇಟ್ಟುಕೊಳ್ಳಬೇಡಿ ಎಂದು ಬರ್ದೊಲೊಯ್‌ (ಆ ಇಬ್ಬರು ಸಂದೇಶಕರನ್ನು ಉದ್ದೇಶಿಸಿ) ಅವರಿಗೆ ತಿಳಿಸಿ. ನನ್ನ ನಿಲುವು ಸ್ಪಷ್ಟ. ಯಾವುದೇ ಕಾರಣಕ್ಕೂ ಅಸ್ಸಾಂ ತನ್ನ ಅಸ್ಮಿತೆ ಕಳೆದುಕೊಳ್ಳಬಾರದು. ಅಸ್ಸಾಂನ ಜನರಿಗೆ ಹೇಳಿ, ಒಂದುವೇಳೆ ಸ್ವತಃ ಗಾಂಧಿಯವರೇ ನಿಮ್ಮ ಈ ಹೋರಾಟವನ್ನು ತಣ್ಣಗಾಗಿಸಲು ಪ್ರಯತ್ನಿಸಿದರು, ಈ ಒಂದು ವಿಚಾರದಲ್ಲಿ ನಾವು ಗಾಂಧಿಯ ಮಾತನ್ನೂ ಕೇಳುವುದಿಲ್ಲ ಎಂಬ ದೃಢನಿರ್ಧಾರ ತೆಗೆದುಕೊಳ್ಳಲಿ. ನಿಮ್ಮ ಪ್ರತಿರೋಧವನ್ನು ಶಾಸನಸಭೆಯಲ್ಲಿ ದಾಖಲಿಸಿ.” ಎಂದು ಗಾಂಧಿ ಹೇಳಿದ್ದರು. ಆನಂತರವೇ ಬರ್ದುಲೊಯ್‌ ತಮ್ಮ ಹೋರಾಟ ತೀವ್ರಗೊಳಿಸಿದ್ದು.

ಯಾವಾಗ ನೆಹರೂ, ಬಾಂಬೆಯ ಪತ್ರಿಕಾಗೋಷ್ಠಿಯಲ್ಲಿ “ನಮ್ಮ ತೀರ್ಮಾನಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ಸಂವಿಧಾನ ರಚನಾ ಸಭೆಯ ತೀರ್ಮಾನಗಳೇ ಅಂತಿಮ” ಎಂದು ಕ್ಯಾಬಿನೆಟ್‌ ಮಿಷನ್‌ನ ಪ್ರಸ್ತಾಪಗಳ ಸೀಮಿತತೆಯನ್ನು ಒತ್ತಿಹೇಳಿದರೋ, ಆಗ ಜಿನ್ನಾ ಗಾಬರಿಗೊಳ್ಳುತ್ತಾರೆ. ಬ್ರಿಟಿಷರು ನಿರ್ಗಮಿಸಿದ ನಂತರ ಕಾಂಗ್ರೆಸ್‌, ಶಾಸನಸಭೆಯಲ್ಲಿ ತನ್ನ ಸಂಖ್ಯಾಬಲವನ್ನು ಬಳಸಿಕೊಂಡು, ಗುಂಪೀಕರಣ ಮತ್ತು ದುರ್ಬಲ ಕೇಂದ್ರ ಸರ್ಕಾರದ ನಿಯಮಗಳನ್ನು ಪುನರ್‍‌ರಚಿಸಲಿದೆ; ಆಗ ಪಾಕಿಸ್ತಾನ ರಚನೆಯ ತನ್ನ ಯೋಜನೆ ಬಿದ್ದುಹೋಗಲಿದೆ ಎಂದು ಆತಂಕಗೊಳ್ಳುವ ಜಿನ್ನಾ ಕ್ಯಾಬಿನೆಟ್‌ ಮಿಷನ್‌ ಒಪ್ಪಂದವನ್ನು ತಿರಸ್ಕರಿಸಿ ಹೊರನಡೆಯುತ್ತಾರೆ. ಬ್ರಿಟಿಷರ ಕ್ಯಾಬಿನೆಟ್‌ ಮಿಷನ್‌ ಸಂಧಾನ ಯತ್ನ ಮುರಿದುಬೀಳುತ್ತದೆ. ಆಗಸ್ಟ್‌ 16, 1946ರಂದು ಜಿನ್ನಾ ಡೈರೆಕ್ಟ್‌ ಆಕ್ಷನ್‌ಗೆ ಕರೆನೀಡಿ, ದೇಶದಲ್ಲಿ ಕೋಮುಗಲಭೆಗಳು ಭುಗಿಲೆದ್ದ ನಂತರ, ದೇಶ ವಿಭಜನೆ ಬ್ರಿಟಿಷರಿಗೆ ಅನಿವಾರ್ಯವಾಗುತ್ತದೆ. ನಾಗರಿಕ ಯುದ್ದದಿಂದ ದೇಶವನ್ನು ಬಚಾವು ಮಾಡಲು ಕಾಂಗ್ರೆಸ್‌ ನಾಯಕರೂ, ಗಾಂಧಿಯ ವಿರೋಧದ ನಡುವೆ ಒಪ್ಪಿಕೊಳ್ಳಬೇಕಾಗುತ್ತದೆ.

ಇಲ್ಲಿ ನಮಗೆ ಸ್ಪಷ್ಟವಾಗುವ ಸಂಗತಿಗಳು ಹೀಗಿವೆ:

ದೇಶ ವಿಭಜನೆಯನ್ನು ತಪ್ಪಿಸಲು ಕ್ಯಾಬಿನೆಟ್‌ ಮಿಷನ್‌ ಪ್ರಸ್ತಾಪಗಳಿಗೆ ಕಾಂಗ್ರೆಸ್‌ ನಾಯಕರು ಒಪ್ಪಿದ್ದರು ಕೂಡಾ, ರಾಜ್ಯಗಳ/ಪ್ರಾಂತ್ಯಗಳ ಅಭಿಪ್ರಾಯ ಪಡೆಯದೆ ಗುಂಪುಗಳಿಗೆ ಸೇರ್ಪಡೆ ಮಾಡುವುದರ ವಿರುದ್ಧವಿದ್ದರು. ಕಾಂಗ್ರೆಸ್‌ ನಾಯಕರ ಈ ಒತ್ತಾಸೆಯನ್ನು ಬಳಸಿಕೊಂಡೇ ಅಸ್ಸಾಮ್‌ನಲ್ಲಿ ಗೋಪಿನಾಥ್‌ ಬುರ್ದೊಲೊಯ್‌ ಮುಸ್ಲಿಂ ಲೀಗ್‌ ಮತ್ತು ಬ್ರಿಟಿಷರ ಪ್ರಸ್ತಾಪದ ವಿರುದ್ಧ ತಿರುಗಿಬಿದ್ದರು. ಈ ಪ್ರತಿರೋಧಕ್ಕೆ ಗಾಂಧಿಯವರ ಬೆಂಬಲವಿತ್ತು. ನೆಹರೂ ಕೂಡಾ ಅಸ್ಸಾಮ್‌ನ ಅಸ್ಮಿತೆಯ ಪರವಾಗಿದ್ದರು. ಈ ವಿಚಾರದ ದೃಢ ನಿಲುವಿನ ನೆಹರೂ ಅವರ ಪತ್ರಿಕಾಗೋಷ್ಠಿ ಹೇಳಿಕೆಯಿಂದಾಗಿಯೇ, ಕ್ಯಾಬಿನೆಟ್‌ ಮಿಷನ್‌ ಪ್ರಸ್ತಾಪಗಳು ಮುರಿದುಬಿದ್ದವು.

ಇದಿಷ್ಟೂ ಸಂಗತಿಯನ್ನು ಬದಿಗೆ ಸರಿಸಿ, ಕ್ಯಾಬಿನೆಟ್‌ ಮಿಷನ್‌ ನ ಗುಂಪೀಕರಣವನ್ನು ಗೋಪಿನಾಥ್‌ ವಿರೋಧಿಸಿದ್ದರು ಎಂಬ ಸಂಗತಿಯನ್ನಷ್ಟೇ ಉಲ್ಲೇಖಿಸಿ ಕಾಂಗ್ರೆಸ್‌ ಮೇಲೆ `ಸಂಚಿ’ನ ಆರೋಪ ಹೊರಿಸುವುದು ಇತಿಹಾಸಕ್ಕೆ ಎಸಗಿದ ಅಪಚಾರವಲ್ಲದೆ ಇನ್ನೇನು?

ಮಾಚಯ್ಯ ಎಂ ಹಿಪ್ಪರಗಿ

ರಾಜಕೀಯ ವಿಶ್ಲೇಷಕರು

More articles

Latest article