ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರಿಗೆ ವಂದೇಮಾತರಂ ಹೇಗೆ ಅರ್ಥವಾದೀತು?; ಬಿಜೆಪಿ ವಿರುದ್ಧ ವಿಪಕ್ಷಗಳ ಆಕ್ರೋಶ

Most read

ನವದೆಹಲಿ: ಜ್ವಲಂತ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಅವರು ವಂದೇ ಮಾತರಂ ಬಗ್ಗೆ ಚರ್ಚೆ ಆರಂಭಿಸಿದ್ದಾರೆ. ಆದರೆ ಸತ್ಯವನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿ ಟೀಕಿಸಿದ್ದಾರೆ.

ಬಿಜೆಪಿ ಚುನಾವಣೆಗಾಗಿ ಮಾತ್ರ ದೇಶಭಕ್ತಿಯನ್ನು ಪ್ರದರ್ಶಿಸುತ್ತಿದೆ. ಆದರೆ ನಾವು ಎಷ್ಟೇ ಚುನಾವಣೆಗಳಲ್ಲಿ ಸೋತರೂ ಇಲ್ಲಿ ಕುಳಿತು ನಿಮ್ಮ ಮತ್ತು ನಿಮ್ಮ ಸಿದ್ಧಾಂತದ ವಿರುದ್ಧ ಹೋರಾಟ ನಡೆಸುವುದನ್ನು ಮುಂದುವರಸುತ್ತೇವೆ ಅದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ ಇದ್ದವರಿಗೆ ವಂದೇ ಮಾತರಂ ಬಗ್ಗೆ ಏನು ಅರ್ಥವಾದೀತು ಎಂದು ಸಮಾಜವಾದಿ ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬ್ರಿಟಿಷರ ಮಾದರಿಯಲ್ಲಿ ಬಿಜೆಪಿ ದೇಶ ವಿಭಜನೆಗಾಗಿ ವಂದೇ ಮಾತರಂ ಗೀತೆಯನ್ನು ಬಳಸುತ್ತಿದೆ. ಬ್ರಿಟಿಷರಂತೆ ಇವರೂ ವಿಭಜನೆ ಮತ್ತು ಆಳ್ವಿಕೆ ನೀತಿಯನ್ನು ಇನ್ನೂ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿಯವರು ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇಲ್ಲ. ವಂದೇ ಮಾತರಂ ಗೀತೆ ಕೇವಲ ಆಡಂಬರ ಪ್ರದರ್ಶನಕ್ಕಾಗಲೀ ಅಥವಾ ರಾಜಕೀಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವ ಸಾಧನ ಅಲ್ಲ ಎಂದು ಯಾದವ್‌ ಪ್ರಧಾನಿ ಮೋದಿ ವಿರುದ್ಧ ಕೆಂಡಾಮಂಡಲರಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ವಂದೇ ಮಾತರಂಗೆ 50 ವರ್ಷ ತುಂಬಿದಾಗ ದೇಶವು ವಸಾಹತುಶಾಹಿಯ ಅಡಿಯಲ್ಲಿತ್ತು. ನೂರು  ವರ್ಷ ತುಂಬಿದಾಗ ತುರ್ತು ಪರಿಸ್ಥಿತಿ ಜಾರಿಯಲ್ಲಿತ್ತು ಎಂದು ಹೇಳಿದ್ದರು.

More articles

Latest article