ಸ್ವಾತಂತ್ರ್ಯ ಹೋರಾಟಗಾರ, ಸ್ವತಂತ್ರ ಭಾರತದ 2ನೇ ಪ್ರಧಾನಿ, ಭಾರತ ಕಂಡ ಶ್ರೇಷ್ಠ ಮುತ್ಸದ್ದಿ ರಾಜಕಾರಣಿ, ಸರಳ ಸಜ್ಜನಿಕೆಯ ಲಾಲ್ ಬಹದ್ದೂರ್ ಶಾಸ್ತ್ರಿಯವರ 121 ನೇ ಜನುಮ ದಿನದಂದು ಅವರನ್ನು ಸ್ಮರಿಸಿ ಹವ್ಯಾಸಿ ಲೇಖಕಿ ರೋಶ್ನಿ ಅನಿಲ್ ರೊಜಾರಿಯೊ ಬರೆದ ಬರಹ ಇಲ್ಲಿದೆ
ಬಹುಶಃ ಬಹುತೇಕರಿಗೆ ಇದು ಜ್ಞಾಪಕಕ್ಕೆ ಬಾರದ ವಿಷಯ. ಗಾಂಧೀಜಿಯವರನ್ನು ಮಾತ್ರ ಹೈಲೈಟ್ ಮಾಡಲಾಗುತ್ತದೆ, ಉಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ಕಡೆಗಣಿಸಲಾಗುತ್ತದೆ ಎಂದು ಧ್ವನಿಗಳನ್ನು ಎಬ್ಬಿಸುವವರಿಗೆ ಗಾಂಧಿ ಜಯಂತಿಯಲ್ಲಿ ಮರೆಯಾದ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಬಗ್ಗೆ ಮಾತಾಡಿ ರಾಡಿ ಎಬ್ಬಿಸಲು ಸದವಕಾಶ.
ಸೌಜನ್ಯ ನ್ಯಾಯಪರ ಹೋರಾಟದಲ್ಲಿ ಸಾವಿರಾರು ಜನರಿದ್ದಾರೆ. ವೇದಿಕೆಗಳಲ್ಲಿ ಧ್ವನಿಗಳನ್ನು ಎತ್ತುವ ಹತ್ತಾರು ನಾಯಕರಿದ್ದಾರೆ. ಆದರೆ ಮುಂಚೂಣಿಯಲ್ಲಿ ಗುರುತಿಸಿಕೊಂಡವರು ಮಹೇಶ್ ಶೆಟ್ಟಿ ತಿಮರೋಡಿ. ಹೌದು ….. ಪ್ರತಿಯೊಂದು ರಂಗದಲ್ಲೂ ಹೀಗೇ. ಅದಕ್ಕಾಗಿ ಹೋರಾಟದ ಚುಕ್ಕಾಣಿಯನ್ನು ಹಿಡಿದಿರುವವರನ್ನು, ಮುನ್ನಡೆಸುವವರನ್ನು ಟೀಕಿಸುವುದು, ಜರೆಯುವುದು ಸಮಂಜಸವಲ್ಲ. ಯಾರು ಏನೇ ಹೇಳಲಿ, ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಹಾತ್ಮ ಗಾಂಧೀಜಿಯವರ ಪರಮನಿಷ್ಠ ಅನುಯಾಯಿಗಳು ಎಂಬ ಸತ್ಯವನ್ನು ಇತಿಹಾಸದಿಂದ ಅಳಿಸಿ ಹಾಕಲಾಗದು.
ಬ್ರಿಟಿಷ್ ಆಡಳಿತವನ್ನು ಬೆಂಬಲಿಸುತ್ತಿದ್ದ ದೇಶದ ರಾಜರುಗಳ ವಿರುದ್ಧ ಮಹಾತ್ಮಾ ಗಾಂಧೀಜಿಯವರು ಮಾಡುತ್ತಿದ್ದ ಖಂಡನೆಗಳಿಂದ ಮತ್ತು ಅವರ ಆದರ್ಶಗಳಿಂದ ಅತ್ಯಂತ ಪ್ರಭಾವಿತರಾದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಅತಿ ಸಣ್ಣ ವಯಸ್ಸಿನಲ್ಲಿಯೇ ಗಾಂಧೀಜಿಯವರ ಅನುಯಾಯಿಯಾದರು.
ಬ್ರಿಟಿಷ್ ಆಡಳಿತದ ವಿರುದ್ಧ ಅಸಹಕಾರ ತೋರಲು ಗಾಂಧೀಜಿಯವರು ಭಾರತೀಯರಿಗೆ ನೀಡಿದ ಅಸಹಕಾರ ಕರೆಗೆ ಸ್ಪಂದಿಸಿ, ಆ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ವಿದ್ಯಾಭ್ಯಾಸವನ್ನೇ ಅರ್ಧದಲ್ಲಿ ತ್ಯಜಿಸಿದವರು ಲಾಲ್ ಬಹದ್ದೂರ್ ಶಾಸ್ತ್ರಿಯವರು .
ಗಾಂಧೀಜಿಯವರ ಜೊತೆ ಉಪ್ಪಿನ ಸತ್ಯಾಗ್ರಹ ಮತ್ತು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿದರು. 9 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸಿಯಾದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರೂ ಒಬ್ಬರಾಗಿದ್ದರು. ಪ್ರಧಾನಿ ಜವಾಹರಲಾಲ್ ನೆಹರುರವರ ಸಂಪುಟದಲ್ಲಿ ರೈಲ್ವೇ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾಗ, ತಮ್ಮ ಸೇವಾವಧಿಯಲ್ಲಾದ ಒಂದು ರೈಲು ಅಪಘಾತಕ್ಕೆ ಮನನೊಂದು ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೇ ರಾಜೀನಾಮೆ ಕೊಟ್ಟು ಅವರು ಮೆರೆದ ಸೈದ್ಧಾಂತಿಕ ಬದ್ಧತೆ, ನೈತಿಕತೆ…. ಅವರ ಅಚಲ ನಿಲುವಿನ ಹಿಂದಿನ ದೃಢತೆಯ ಮುಂದೆ ಇಂದಿನ ರಾಜಕಾರಣಿಗಳು ಮೂರು ಕಾಸಿಗೂ ಅಪ್ರಯೋಜಕರು. ಪ್ರಶ್ನಾರ್ಹರು.
ಭಾರತದ ಸ್ವಾತಂತ್ರ್ಯಕ್ಕಾಗಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಮಾಡಿದ ಹೋರಾಟ, ಸ್ವಾತಂತ್ರ್ಯದ ತರುವಾಯ ಇಬ್ಬಾಗವಾಗಲು ಮುಂದಾದ ಭಾರತದ ಜನರನ್ನು ಒಗ್ಗೂಡಿಸಲು ಮತ್ತು ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದ ವೈಖರಿ, ಅಮೋಘ ದೇಶಪ್ರೇಮ ಇತ್ಯಾದಿಗಳಿಂದಾಗಿ ದೇಶದ 2ನೇ ಪ್ರಧಾನಿಯಾಗುವ ಅವಕಾಶ ತಾನಾಗಿಯೇ ಅವರನ್ನು ಹುಡುಕಿಕೊಂಡು ಬಂತು.
ಪ್ರಧಾನಿಯಾಗಿದ್ದಾಗಲೂ ಸರ್ವ ಧರ್ಮಗಳ ಜನರನ್ನು ಸಮಾನವಾಗಿ ಕಾಣುತ್ತಾ ತಮ್ಮ ಸರಳತೆಯಿಂದ ಜನಮನ ಗೆದ್ದ ರಾಜಕಾರಣಿ ಅವರು. ಬಸ್ ನಿಲ್ದಾಣಕ್ಕೇ ಹೋಗಿ ಜನರನ್ನು ಭೇಟಿ ಮಾಡಿ ಸಾಮಾಜಿಕ ಕಳಕಳಿ ತೋರಿದವರು. ಪ್ರಧಾನಿಯಾಗಿ ಸಂಬಳ, ಸರಕಾರಿ ಭತ್ಯೆಗಳನ್ನು ಪಡೆಯುತ್ತಿದ್ದರೂ ತಮ್ಮ ಖರ್ಚುಗಳನ್ನು ಕಡಿಮೆ ಮಾಡಿ ಕುಟುಂಬ ನಿರ್ವಹಣೆಗೆ ತಮಗೆ ಕೇವಲ 40 ರುಪಾಯಿ ಸಾಕೆಂದು, ಉಳಿದ ಹಣವನ್ನು ಸಂಕಷ್ಟದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಜೀವನ ನಿರ್ವಹಣೆಗೆ ನೀಡಬೇಕೆಂದು ಪತ್ರ ಬರೆದು ಮನವಿ ಮಾಡಿ ತಮ್ಮನ್ನು ತಾವೇ ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡವರು.
ಪ್ರಧಾನಿಯಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿಯವರು “ಜೈ ಜವಾನ್, ಜೈ ಕಿಸಾನ್”….. ದೇಶದ ಗಡಿ ಕಾಯುವ ಸೈನಿಕರಿಗೆ ಮತ್ತು ದೇಶದ ಜನರ ಹೊಟ್ಟೆಯ ಹಸಿವನ್ನು ತಣಿಸುತ್ತಿರುವ ರೈತರಿಗೆ ಜಯವಾಗಲಿ ಎಂಬ ಘೋಷಣೆಯ ಮೂಲಕ ದೇಶವನ್ನು ಮುನ್ನಡೆಸಿದರು.
ವಿಶ್ವದ ಅತಿ ಆಧುನಿಕ ತಂತ್ರಜ್ಞಾನದ ಟಾಪ್ 10 ದೇಶಗಳಲ್ಲಿ 10ನೇ ಸ್ಥಾನದಲ್ಲಿರುವ ಭಾರತ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೂ ಇಂದಿನ ಆಡಳಿತ ಕಾಲದಲ್ಲಿ ಭಾರತದ ಅದೆಷ್ಟೋ ಸೈನಿಕರು ಶತ್ರುದೇಶದ ಸೈನಿಕರಿಗೆ, ಭಯೋತ್ಪಾದಕರಿಗೆ, ಉಗ್ರರಿಗೆ ಬಲಿಯಾಗುವುದನ್ನು ಅಸಹಾಯಕರಾಗಿ ಭಾರತ ದೇಶದ ಜನರು ನೋಡಬೇಕಾಗಿದೆ. ಎಲ್ಲಿದೆ ಜವಾನರ ಜೀವಗಳಿಗೆ ಭದ್ರತೆ ಎಂದು ಪ್ರಶ್ನಿಸಬೇಕಾಗಿದೆ.
ಕಾರ್ಪೊರೇಟ್ ಕಂಪೆನಿಗಳ ಪರವಾಗಿ ನಿಂತು ಅಧಿಕಾರ ದುರುಪಯೋಗ ಮಾಡುತ್ತಾ, ಆಗಿಂದಾಗ ರೈತ ವಿರೋಧಿ ಕಾನೂನುಗಳನ್ನು ತರುತ್ತಿರುವ ಮೋದಿಯವರ ಸರಕಾರದ ವಿರುದ್ಧ ಸಿಡಿದೆದ್ದು ರೈತರು ದೇಶದಾದ್ಯಂತ ದಂಗೆ ಎದ್ದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾಗ, ಸರಕಾರದ ಕುಮ್ಮಕ್ಕಿನಿಂದ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದನ್ನು ದೇಶದ ಜನರು ಶಾಶ್ವತ ನೆನಪಿನಲ್ಲಿಟ್ಟುಕೊಳ್ಳುವಂತಾಗಿದೆ. ಪ್ರತಿಭಟನಾನಿರತ ರೈತರನ್ನು ‘ಅರೆಹುಚ್ಚರು, ಆಂದೋಲನಜೀವಿಗಳು’ ಎಂದು ಕರೆದ, ಜರೆದ ಮೋದಿಯವರ ಟೀಕೆಗಳನ್ನು ಮೌನವಾಗಿ ಕೇಳಿ ಹೃದಯದಾಳದಲ್ಲಿ ದುಃಖಿಸಬೇಕಾಗಿದೆ. ಶಾಸ್ತ್ರಿಯವರಿಗಿದ್ದ ಕಿಸಾನರ ಮೇಲಿನ ಪ್ರೀತಿ ಈಗಿನವರಲ್ಲಿ ಎಲ್ಲಿದೆ ಎಂದು ಕೇಳಬೇಕಾಗಿದೆ.
ಮೋದಿಯವರ ರೈತ ವಿರೋಧಿ ನೀತಿಗಳನ್ನು ವಿರೋಧಿಸುತ್ತಾ, ವಿರೋಧ ಪಕ್ಷದ ನಾಯಕರುಗಳೂ ತಮ್ಮ ಪಕ್ಷದ ಸ್ವಾಧೀನದಲ್ಲಿರುವ ರಾಜ್ಯಗಳಲ್ಲಿ ಅಂತಹುದೇ ನೀತಿಗಳನ್ನು ಅನುಸರಿಸುವುದನ್ನು ನೋಡುವಾಗ ಎಲ್ಲಿದೆ ಸಾಮಾಜಿಕ ನ್ಯಾಯ ಎಂದು ಆಕ್ರೋಶ ಮೂಡುತ್ತದೆ. ಏನು ಮಾಡೋದು ಹೇಳಿ? ವ್ಯವಸ್ಥೆಯನ್ನು ಬದಲಾಯಿಸುವುದು ಅಷ್ಟು ಸುಲಭವಲ್ಲ.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಜವಾನ್ ಮತ್ತು ಕಿಸಾನ್ ಪ್ರೀತಿಯು, ಭ್ರಷ್ಟಾಚಾರ ರಹಿತ ನಾಯಕತ್ವವು, ಉನ್ನತ ಸ್ಥಾನದಿಂದ ಹಿಡಿದು ಕೆಳಮಟ್ಟದ ಸ್ಥಾನದಲ್ಲಿರುವ ಎಲ್ಲಾ ರಾಜಕಾರಣಿಗಳಿಗೆ ….. ಈಗಿನ ಮಾತ್ರವಲ್ಲ, ಮುಂದಿನ ಪೀಳಿಗೆಗೂ ಮಾದರಿಯಾಗಲಿ. ಸಜ್ಜನರ ಆಶಯಗಳನ್ನು ನಿರ್ಬಂಧಿಸಲು ಕಡಿವಾಣ ಹಾಕಲು ಸರಕಾರಗಳಿಗೆ ಸಾಧ್ಯವಿಲ್ಲ ಅಲ್ಲವೇ?
ರಾಜಕಾರಣಿಗಳಿಗೆ ಮಾತ್ರವಲ್ಲ ಭಾರತದ ಪ್ರತಿಯೊಬ್ಬ ನಾಗರಿಕ ಪ್ರಜೆಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ವ್ಯಕ್ತಿತ್ವ ಸ್ಪೂರ್ತಿಯಾಗಲಿ, ಆದರ್ಶವಾಗಲಿ ಎಂದು ಹಾರೈಸೋಣ. ಅಮರ್ ರಹೇ ಲಾಲ್ ಬಹದ್ದೂರ್ ಶಾಸ್ತ್ರೀಜೀ.
ರೋಶ್ನಿ ಅನಿಲ್ ರೊಜಾರಿಯೊ, ಬಜ್ಪೆ
ಹವ್ಯಾಸಿ ಲೇಖಕಿ
ಇದನ್ನೂ ಓದಿ- ವಿಶೇಷ | ಗಾಂಧಿ ಪ್ರಸ್ತುತತೆ ಭಿನ್ನ ಆಯಾಮಗಳಲ್ಲಿ