ಕೊ*ಲೆಯಾಗಲು, ಕೊ*ಲ್ಲಲು ಅವರೀಗ ‘ಗೌಡ’ರನ್ನು ಹುಡುಕಿಕೊಂಡು ಬಂದಿದ್ದಾರೆ ಎಚ್ಚರ !

Most read

ಮಂಗಳೂರಿನ ಹಿಂದುತ್ವ ಯುವಕರನ್ನು ರೌಡಿಶೀಟರ್ ಮಾಡಿ, ಗಡಿಪಾರಿಗೆ ಆದೇಶ ಹೊರಟ ಬಳಿಕ ಅವರು ಮಂಗಳೂರು ಬಿಟ್ಟು ಮದ್ದೂರಿಗೆ ಬಂದರು. ಮದ್ದೂರಿನಲ್ಲಿ ರೌಡಿಶೀಟರ್ ಗಳ ಪಟ್ಟಿ ಸಿದ್ದವಾದ ಬಳಿಕ ಇನ್ಯಾರೂ ಕಾಲಾಳು ಸಿಗಲ್ಲ ಎಂದಾಗ ಮುಂದೊಂದು ದಿನ ಮದ್ದೂರು ಬಿಟ್ಟು ಇನ್ನೊಂದೂರಿಗೆ ಹೋಗುತ್ತಾರೆ. ಹಾಗಾಗಿ ಮಂಡ್ಯ, ಮದ್ದೂರಲ್ಲೇ ನಮ್ಮ ಜೀವನ ಎಂದುಕೊಳ್ಳುವವರು ಯೋಚಿಸಬೇಕು – ನವೀನ್ ಸೂರಿಂಜೆ, ಪತ್ರಕರ್ತರು.

ಮಂಡ್ಯ- ಮದ್ದೂರಿನ ಜನರಿಗೆ ಕೋಮುಶಾಪಗ್ರಸ್ತ ಮಂಗಳೂರು ಜಿಲ್ಲೆ ಪಾಠವಾಗಬೇಕು. ಈಗ ನಾಯಕರ ಪ್ರಚೋದನಾಕಾರಿ ಭಾಷಣ ಕೇಳಿದ ಮಂಡ್ಯದ ಹಿಂದೂ ಯುವಕರಲ್ಲಿ ಉತ್ಸಾಹ ಇರುತ್ತದೆ. ಎಲ್ಲಾ ತಣ್ಣಗಾಗಿ, ನ್ಯಾಯಾಲಯದಲ್ಲಿ ಕೇಸ್ ವಿಚಾರಣೆ ಪ್ರಾರಂಭವಾಗಿ ಮುಗಿಯುವಾಗ 10 ವರ್ಷ ದಾಟಿರುತ್ತದೆ. ಆಗ ಪ್ರಚೋದಾನಾತ್ಮಕ ಭಾಷಣ ಮಾಡಿದವರು ಶಾಸಕರೋ ಸಂಸದರೋ ಆಗಿರುತ್ತಾರೆ. ಕೇಸು ಹಾಕಿಸಿಕೊಂಡ ಬಡ ಯುವಕರು ಅಸ್ತಿಪಾಸ್ತಿ, ಮನೆ, ಹೊಲ ಕಳೆದುಕೊಂಡು ಕೋರ್ಟ್ ಅಲೆದಾಡುತ್ತಿರುತ್ತಾರೆ. ಪೆಟ್ರೋಲ್ ಪಂಪ್ ನಲ್ಲಿ ಹದಿನೈದು ಸಾವಿರ ರೂ ಸಂಬಳಕ್ಕೆ ಕೆಲಸ ಮಾಡುವ ಜ್ಯೋತಿ ಗೌಡ ಮೇಲೆ ಪ್ರಕರಣ ದಾಖಲಾದರೆ, ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುವುದಿಲ್ಲ.

ನಿನ್ನೆ ಅಂದರೆ ಸೆಪ್ಟೆಂಬರ್ 08, 2025 ರಂದು ಮಂಗಳೂರಿನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದವರು 26 ವರ್ಷಗಳ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾದವರು ! 1998 ರ ಡಿಸೆಂಬರ್ ನಲ್ಲಿ ನಡೆದ ಕೋಮುಗಲಭೆಯಲ್ಲಿ ಪೊಲೀಸರು ಸುಮಾರು 300 ಎಫ್ಐಆರ್ ದಾಖಲಿಸಿದ್ದರು. ಸುರತ್ಕಲ್ ಠಾಣೆಯೊಂದರಲ್ಲೇ 200 ಕ್ಕೂ ಅಧಿಕ ಎಫ್ಐಆರ್ ದಾಖಲಾಗಿತ್ತು. ನೂರಾರು ಜನ ಇರುವಾಗ ಇದ್ದ ಜೋಶ್ ನಲ್ಲಿ ಗಲಭೆಯಲ್ಲಿ ಪಾಲ್ಗೊಂಡಿದ್ದವರು ಈಗ 26 ವರ್ಷದ ಬಳಿಕ ಅರೆಸ್ಟ್ ಆಗುವಾಗ ಅವರಿಗೆ 50-60ರ ಇಳಿ ವಯಸ್ಸು ! 1998 ರಿಂದ ಬಾಕಿ ಇದ್ದ ವಾರೆಂಟ್ ಅನ್ನು ನಿನ್ನೆ ಜಾರಿ ಮಾಡಿದ್ದಾರೆ. ದೂರದೂರಿಗೆ ಉದ್ಯೋಗಕ್ಕೆಂದು ಹೋದವರು ವಾಪಸ್ ಊರಿಗೆ ಬಂದು ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸಿಸಬೇಕು ಎಂದುಕೊಂಡವರು ಇಳಿವಯಸ್ಸಿನಲ್ಲಿ ಜೈಲು ಸೇರಿದ್ದಾರೆ. ಇದು ಕೋಮುಗಲಭೆಗಳ ವಾಸ್ತವ !

ಹಿಂದುತ್ವ ಸಂಘಟನೆಗಳಿಗೆ ಕರ್ನಾಟಕದ ಕರಾವಳಿಯಲ್ಲಿ ಇತ್ತೀಚೆಗೆ ರಿಕ್ರೂಟ್ಮೆಂಟ್ ಕಡಿಮೆಯಾಗುತ್ತಿದೆ. ಕರಾವಳಿಯಲ್ಲಿ ಕೋಮುಗಲಭೆಗಳಲ್ಲಿ ಗಲಭೆ ಮಾಡಲು, ಸಾಯಲು, ಸಾಯಿಸಲು ಹಿಂದುಳಿದ ವರ್ಗದ ಜನ ಸಿಗುತ್ತಿಲ್ಲ. ‘ಯಾಕೆ ಹಿಂದುಳಿದ ವರ್ಗಗಳೇ ಸಾ*ಯಲು, ಸಾ*ಯಿಸಲು, ಜೈಲಿಗೆ ಹೋಗಲು ಬೇಕು ? ಮೇಲ್ವರ್ಗಗಳು ಯಾಕೆ ಈ ಮಾದರಿಯ ಧರ್ಮ ರಕ್ಷಣೆ ಮಾಡುತ್ತಿಲ್ಲ ?’ ಎಂಬ ಪ್ರಶ್ನೆಯ ಮೇಲೆ ಕಳೆದ ಹಲವು ದಶಕಗಳಿಂದ ನಡೆದ ಚರ್ಚೆಯ ಪರಿಣಾಮದಿಂದಾಗಿ ಹಿಂದುಳಿದ ವರ್ಗಗಳು ಕರಾವಳಿಯ ಮತೀಯ ಗಲಭೆಗಳಿಂದ ದೂರ ನಿಂತಿವೆ. ಕೋಮುವಾದದ ಮನಸ್ಥಿತಿ ಕಡಿಮೆಯಾಗಿಲ್ಲವಾದರೂ ಬೀದಿ ಹೆಣವಾಗುವುದು, ಜೈಲು ಸೇರುವುದರಿಂದ ತಪ್ಪಿಸಿಕೊಳ್ಳುತ್ತಿದೆ. ಹಾಗಾಗಿಯೇ ಇತ್ತೀಚೆಗೆ ಕೋಮುಗಲಭೆಗಳಲ್ಲಿ ‘ಧರ್ಮದ ಕಾರಣಕ್ಕಾಗಿ ಕೊಂ*ದು ಸತ್ತವರೆಲ್ಲರೂ ರೌಡಿಗಳು’ ! ಕ್ರಿಮಿನಲ್ ಹಿನ್ನಲೆಯ ವ್ಯಕ್ತಿಗಳನ್ನು ಬಳಸಿಕೊಂಡು ಹಿಂದುತ್ವ ಸಂಘಟನೆಗಳು ಕರಾವಳಿಯಲ್ಲಿ ಕೊ*ಲೆ ರಾಜಕಾರಣವನ್ನು ಮಾಡುತ್ತಿವೆ.

ಈಗ ಹಿಂದುತ್ವಕ್ಕಾಗಿ ಜೈಲು ಸೇರಲು, ಕೊಲೆ ಮಾಡಲು ಮತ್ತು ಕೊಲೆಯಾಗಲು ಕಾಲಾಳುಗಳು ಅವಶ್ಯಕತೆ ಹಿಂದುತ್ವದ ಸಂಘಟನೆಗಿದೆ. ಅದಕ್ಕಾಗಿ ಮಂಡ್ಯವನ್ನು ಕೇಂದ್ರೀಕರಿಸಿಕೊಂಡು ಹಿಂದುತ್ವ ಸಂಘಟನೆಗಳು ಕಾರ್ಯಾಚರಣೆ ಶುರು ಮಾಡಿದೆ. ಹಿಂದೂ ಸಂಘಟನೆಗಳ ಈ ಕೋಮುರಾಜಕೀಯಕ್ಕೆ ಬಲಿಯಾಗುವ ಮುನ್ನ ಮಂಡ್ಯದ ಯುವಕರು ಕರಾವಳಿಯನ್ನೊಮ್ಮೆ ಅವಲೋಕಿಸಬೇಕು. ಕೋಮು ಗಲಭೆಯಲ್ಲಿ ಭಾಗಿಯಾಗಿ ಜೈಲು ಸೇರುತ್ತಿರುವುದು ಮಾತ್ರವಲ್ಲದೆ ಕೋಮು ಗಲಭೆಯಲ್ಲಿ ಕೊ*ಲೆಯಾದವರೂ ಕೂಡಾ ಬಹುತೇಕರು ಬಿಲ್ಲವ/ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉದಯ ಪೂಜಾರಿ, ಜಗದೀಶ್ ಪೂಜಾರಿ, ಕ್ಯಾಂಡಲ್ ಸಂತು, ಪೊಳಲಿ ಅನಂತು, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಪ್ರೇಮ್ ಕೋಟ್ಯಾನ್, ಸುನೀಲ್ ಪೂಜಾರಿ, ಹೇಮಂತ್, ಪ್ರವೀಣ್ ಪೂಜಾರಿ… ಹೀಗೆ ಬಿಲ್ಲವ ಹೆಸರುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹರೀಶ್ ಭಂಡಾರಿ, ಸುಖಾನಂದ ಶೆಟ್ಟಿ, ಕೋಡಿಕೆರೆ ಶಿವರಾಜ್, ಪ್ರಕಾಶ್ ಕುಳಾಯಿ, ಮಣಿಕಂಠ ಸುರತ್ಕಲ್, ಹೇಮಂತ್ ಸುರತ್ಕಲ್ ಹೀಗೆ ಸಾವಿಗೀಡಾದ ಬ್ರಾಹ್ಮಣೇತರ ವರ್ಗಗಳ ಯುವಕರ ಪಟ್ಟಿ ಸಿಗುತ್ತದೆ. ಮೃತನಾದ ಶರತ್ ಮಡಿವಾಳ ಕೂಡಾ ಅತ್ಯಂತ ಹಿಂದುಳಿದ ಅಗಸ ಸಮುದಾಯಕ್ಕೆ ಸೇರಿದವರು. ಶರತ್ ಮಡಿವಾಳ ಶವಯಾತ್ರೆಯ ಸಂದರ್ಭ ಮುಸ್ಲಿಂ ಯುವಕನಿಗೆ ಇರಿದ ಪ್ರಕರಣಗಳಲ್ಲಿ ಜೈಲು ಸೇರಿದವರೆಲ್ಲರೂ ಬಿಲ್ಲವ ಸಮುದಾಯದವರು. ಕೊಲೆಯಾದ ಪ್ರವೀಣ್ ನೆಟ್ಟಾರ್ ಕೂಡಾ ಹಿಂದುಳಿದ ವರ್ಗಕ್ಕೆ ಸೇರಿದವರು.

ಇಡೀ ದಕ್ಷಿಣ ಕನ್ನಡದ ಮತೀಯವಾದಿ ರಕ್ತ ಚರಿತೆಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾಗಲೀ, ನಾಯಕನಾಗಲೀ ಜೈಲು ಸೇರಿಲ್ಲ ಅಥವಾ ಹಿಂದುತ್ವಕ್ಕಾಗಿ ಜೀವ ನೀಡಿಲ್ಲ (?) ಎಂಬುದು ಗಮನಾರ್ಹ. ಅತ್ತ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‍ವೆಲ್‌ ರಂತಹ ಹಿಂದುತ್ವವಾದಿ ಮುಖಂಡರು ಮೈಮೇಲೆಲ್ಲಾ ಪೊಲೀಸ್ ಕೇಸು ಜಡಿಸಿಕೊಡು ಹೆಣಗಾಡುತ್ತಿದ್ದರೆ ಪ್ರಭಾಕರ ಭಟ್ಟರು ಮಾತ್ರ ಆರಾಮವಾಗಿದ್ದಾರೆ.

ಮಂಡ್ಯ- ಮದ್ದೂರಿನ ಗಲಭೆಯಲ್ಲಿ ಜ್ಯೋತಿ ಗೌಡ

ನಾನು ಕಳೆದ 20 ವರ್ಷಗಳಿಂದ ಮಂಗಳೂರಿನಲ್ಲಿ ಹಲವು ಕೋಮುಗಲಭೆಗಳನ್ನು ಕಂಡಿದ್ದೇನೆ. ಕೋಮುಗಲಭೆಯಲ್ಲಿ ಪಾಲ್ಗೊಂಡು ಜೈಲು ಸೇರಿದವರ ಬದುಕು ಈಗ ಹೇಗಿದೆ ಎಂಬುದನ್ನು ನೋಡಬೇಕು. ರಾಜಕಾರಣಿಗಳು, ಹಿಂದುತ್ವ ನಾಯಕರು ಪ್ರಚೋದನೆಯ ಮಾತುಗಳನ್ನಾಡಿ ಧರ್ಮರಕ್ಷಣೆಗಾಗಿ ಹೊಡೆದಾಟಕ್ಕಿಳಿಸುತ್ತಾರೆ. ಕೇಸು ದಾಖಲಾಗಿ ಜೈಲಿಗೆ ಹೋಗಿ ನ್ಯಾಯಾಲಯದಲ್ಲಿ ಕೇಸು ನಡೆಸುವ ಕಾಲದಲ್ಲಿ ಯಾರೂ ಜೊತೆಗಿರುವುದಿಲ್ಲ. ಪತ್ನಿ ಅಥವಾ ತಾಯಿಯ ಮಾಂಗಲ್ಯ ಅಡವಿಟ್ಟು ನ್ಯಾಯಾಲಯದ ಕೇಸುಗಳನ್ನು ನಡೆಸಲು ಖರ್ಚು ಮಾಡಬೇಕಾಗುತ್ತದೆ.

ಅದೊಂದು ದಿನ ಮಂಗಳೂರಿನ ಹಿರಿಯ ವಕೀಲರಾದ ದಿನೇಶ್ ಹೆಗ್ಡೆ ಉಳೆಪಾಡಿಯವರು ಕರೆ ಮಾಡಿದ್ದರು. “ಒಂಚೂರು ಆಫೀಸ್ ಗೆ ಬನ್ನಿ. ಇಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತನ ತಾಯಿ ಬಂದಿದ್ದಾರೆ” ಎಂದರು. ಶ್ರೀರಾಮ ಸೇನೆಯ ಪ್ರಚೋದನೆಯಲ್ಲಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿ ಕೋರ್ಟ್ ಅಲೆಯುತ್ತಿದ್ದ ದಿನಕರ್ (ಹೆಸರು ಬದಲಿಸಲಾಗಿದೆ) ಅವರ ತಾಯಿ ಅವರು. ಕೋರ್ಟ್ ಗೆ ಅಲೆದೂ ಅಲೆದೂ, ವಕೀಲರಿಗೆ ಫೀಸ್ ನೀಡಿ, ಕೆಲಸಕ್ಕೂ ಹೋಗಲು ಸಮಯವಿಲ್ಲದೆ ಅವರು ಹೈರಾಣಾಗಿದ್ದರು. “ಕೇಸ್ ವಾಪಸ್ ತೆಗೆಸಿದರೆ ಬದುಕುತ್ತೇವೆ” ಎಂದು ಆ ತಾಯಿ ದಿನೇಶ್ ಹೆಗ್ಡೆಯವರನ್ನು ಮನವಿ ಮಾಡುತ್ತಿದ್ದರು. ನಾವು ಆ ಕಾರ್ಯಕರ್ತನ ಬಗ್ಗೆ ವಿಚಾರಿಸಿದಾಗ ಆತನ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗಿ ಯಾವುದೋ ಕಾಲವಾಗಿತ್ತು. ಬದುಕು ಸಂಪೂರ್ಣ ಕತ್ತಲೆಯಾಗಿತ್ತು. ಮಗನ ಕೋರ್ಟ್ ಕೇಸ್ ಗಾಗಿ ತಾಯಿ ತನ್ನ ಮಾಂಗಲ್ಯವನ್ನೇ ಮಾರಿದ್ದರು. ಮತ್ತೆ ನಾವು ಯೋಚಿಸದೇ ಕೇಸ್ ವಾಪಸ್ ಪಡೆದುಕೊಂಡೆವು. ಇದು ಕೋಮುಗಲಭೆಗಳಲ್ಲಿ ಪಾಲ್ಗೊಂಡವರ ಮನೆ ಮನೆ ಕಥೆ. ಮದ್ದೂರಿನವರಿಗೆ ಮಂಗಳೂರು ಪಾಠವಾಗಲಿ.

ಮಂಗಳೂರಿನ ಹಿಂದುತ್ವ ಯುವಕರನ್ನು ರೌಡಿಶೀಟರ್ ಮಾಡಿ, ಗಡಿಪಾರಿಗೆ ಆದೇಶ ಹೊರಟ ಬಳಿಕ ಅವರು ಮಂಗಳೂರು ಬಿಟ್ಟು ಮದ್ದೂರಿಗೆ ಬಂದರು. ಮದ್ದೂರಿನಲ್ಲಿ ರೌಡಿಶೀಟರ್ ಗಳ ಪಟ್ಟಿ ಸಿದ್ದವಾದ ಬಳಿಕ ಇನ್ಯಾರೂ ಕಾಲಾಳು ಸಿಗಲ್ಲ ಎಂದಾಗ ಮುಂದೊಂದು ದಿನ ಮದ್ದೂರು ಬಿಟ್ಟು ಇನ್ನೊಂದೂರಿಗೆ ಹೋಗುತ್ತಾರೆ. ಹಾಗಾಗಿ ಮಂಡ್ಯ, ಮದ್ದೂರಲ್ಲೇ ನಮ್ಮ ಜೀವನ ಎಂದುಕೊಳ್ಳುವವರು ಯೋಚಿಸಬೇಕು.

ನವೀನ್‌ ಸೂರಿಂಜೆ

ಪತ್ರಕರ್ತರು.

ಇದನ್ನೂ ಓದಿ- ಸೋನಿಯಾರಿಗೆ ಮಹಿಳಾ ಸಂಘಟನೆಗಳ ಪತ್ರ | ಸೋಮಣ್ಣನವರ ಮೂರ್ಖತನದ ಪ್ರತಿಕ್ರಿಯೆ

More articles

Latest article