ಸ್ವಾತಂತ್ರ್ಯ ದಿನವೆಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ರ್ಯ. ಈ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ನಿರಾಳವಾಗಿ ಅನುಭವಿಸುವ ದಿನಗಳನ್ನು ಎದುರು ನೋಡೋಣ – ಸುಮನ್ ಪಾಟೀಲ್, ಜರ್ನಲಿಸಂ ಸ್ಟೂಡೆಂಟ್, ವಿಜಯಪುರ.
79 ನೇ ಸ್ವಾತಂತ್ರ್ಯ ದಿನ ನಮ್ಮ ಕಣ್ಣೆದುರೇ ಇದೆ.
ಭಾರತ ಬಾಹ್ಯಾಕಾಶ , ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪ್ರಗತಿ ಸಾಧಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ ಕೂಡ ಭಾರತ ದೇಶದಲ್ಲಿ ಮಹಿಳೆ ಎಷ್ಟು ಸುರಕ್ಷಿತವಾಗಿದ್ದಾಳೆ ಎಂಬ ಪ್ರಶ್ನೆ ಎದುರಾದಾಗ ನಾವೆಲ್ಲಾ ತಲೆ ತಗ್ಗಿಸಬೇಕಾದ ಸಂದರ್ಭ ಬರುತ್ತದೆ.
ಆ ದಿನ ನಾನು ಒಂದು ಸಾಹಿತ್ಯಿಕ ಕಾರ್ಯಕ್ರಮ ಮುಗಿಸಿ ಬಾಗಲಕೋಟೆಯಿಂದ ವಿಜಯಪುರಕ್ಕೆ ತೆರಳ ಬೇಕಾಗಿತ್ತು. ಸಮಯಕ್ಕೆ ಸರಿಯಾಗಿ ಬಸ್ಸು ಸಿಗದೆ ಸಂಜೆ 7 ರ ಬಸ್ಸಿಗೆ ಕೂತೆ. ಬಸ್ಸಿನ ಕಿಟಕಿಗೆ ಒರಗಿ ಹಾಗೆ ಒಂದತ್ತು ನಿಮಿಷ ಬ್ಯಾಗನ್ನು ಎದೆಗವಚಿ ನಿದ್ದೆ ಹೋಗಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಏನೋ ಎದೆ ಭಾರವಾದಂತೆನಿಸಿ ಎಚ್ಚೆತ್ತು ನೋಡಿದಾಗ ಯಾರೋ ಒಬ್ಬ ವಯಸ್ಸಾದ ವ್ಯಕ್ತಿ ನನ್ನೆದೆ ಮೇಲೆ ಕೈ ಇಟ್ಟಿದ್ದ. ಕೂಡಲೇ ಕೂತ ಜಾಗದಿಂದ ಎದ್ದು ಅವನ ಕೈಯನ್ನು ಕಿತ್ತೆಸೆದು ಒಂದೇ ಸಮನೆ ಭಯದಲ್ಲಿ ಬಾಯಿಗೆ ಬಂದದ್ದು ಬೈಯತೊಡಗಿದೆ . ಆತ ಏದ್ದೇನೋ ಬಿದ್ದೆನೋ ಎಂಬಂತೆ ಹಿಂದಿನ ಸಿಟಿಗೆ ಹೋಗಿ ಕೂತ.
ಕಂಡಕ್ಟರ್ ಬಂದು ಏನಾಯಿತು ಎಂದು ಕೇಳಿದುದು ಬಿಟ್ಟರೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದವರೆಲ್ಲ ತಮ್ಮ ಪಾಡಿಗೆ ತಾವು ನಿದ್ರಿಸುತ್ತಿದ್ದರು .
ಈ ಘಟನೆಯನ್ನು ನನ್ನ ಕೆಲವು ಸ್ನೇಹಿತರ ಬಳಿ ಹಂಚಿಕೊಂಡಾಗ ಅವರೆಲ್ಲ ಅಷ್ಟು ಹೊತ್ತಿನಲ್ಲಿ ನೀನು ಪ್ರಯಾಣ ಮಾಡುವುದು ಸರಿಯಲ್ಲ, ಹೆಣ್ಣು ಮಕ್ಕಳು ಸಂಜೆ ಏಳು ಗಂಟೆಯ ಒಳಗೆ ಮನೆಯೊಳಗಿರಬೇಕು, ಹೊರಗಡೆ ಹೋದಾಗ ನಾಜೂಕಾಗಿರಬೇಕು ಎಂದೆಲ್ಲ ಉಪದೇಶ ನೀಡಿದರು. ನೀನು ಹೀಗಿರಬೇಕು ಹಾಗಿರಬೇಕು ಎಂಬಿತ್ಯಾದಿ ನಿಯಮಗಳು ʼಅವಳಿಗೆʼ ಮಾತ್ರ ಏಕೆ???
ಅವಳ ಎದೆ ಅಂಗಾಂಗಗಳು ಗಂಡಸರ ಆಸ್ತಿಯೇ ? ಅದು ಹೇಗೆ ಒಬ್ಬ ಅಪರಿಚಿತ ಹೆಣ್ಣನ್ನು ಆ ರೀತಿ ಮುಟ್ಟುತ್ತಾರೆ? ಒಂದು ಹೆಣ್ಣಿಗೆ ಸಂಬಂಧ, ಕಟ್ಟುಪಾಡುಗಳು, ನಿಯಮಗಳನ್ನು ಹೇಗೆ ಹಾಕಿದ್ದಾರೋ ಅಷ್ಟೇ ನೈತಿಕತೆಯನ್ನು ಹೆಣ್ಣನ್ನು ಹೇಗೆ ಗೌರವಿಸುವುದೆಂದು ಗಂಡಸರಿಗೆ ಮೊದಲೇ ಕಲಿಸಿದ್ದರೆ ಇಂದು ನಾವೆಲ್ಲಾ ಧರ್ಮಸ್ಥಳದ ಸೌಜನ್ಯ, ಕೋಲ್ಕತ್ತಾ ವೈದ್ಯೆಯ ಮೇಲಿನ ಅತ್ಯಾಚಾರ ಹೀಗೆ ಸಮಾಜದ ಒಂದಿಲ್ಲೊಂದು ಮೂಲೆಯಲ್ಲಿ ನಡೆಯುವ ಅತ್ಯಾಚಾರಕ್ಕೆ ನಾವು ಮರುಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಅತ್ಯಾಚಾರ ಎಸಗಿದವರೆಲ್ಲ ಹೆಣ್ಣನ್ನು ಕೇವಲ ಒಂದು ಭೋಗದ ವಸ್ತುವಾಗಿ ಕಂಡಿದ್ದಾರೆ. ಅವರೆಲ್ಲ ನಿಜವಾಗಿಯೂ ಹೆಣ್ಣನ್ನು ಗೌರವಿಸುವ ಜಾತಿಯವರಾಗಿದ್ದರೆ ಹೆಣ್ಣುಮಕ್ಕಳು ಬೇಕೆಂದಾಗಲೆಲ್ಲ ಸೀದಾ ಮನೆಯಿಂದ ಹೊರಹೋಗಬಹುದಿತ್ತು.
ಸಾರ್ವಜನಿಕ ಸ್ಥಳಗಳಲ್ಲಾಗಲಿ, ಬೇರೆ ಯಾವುದೇ ಸ್ಥಳದಲ್ಲಾಗಲಿ ಹೆಣ್ಣು ತಾನು ಸುರಕ್ಷಿತಳೇ ಎಂಬ ಪ್ರಶ್ನೆ ಎದುರಿಸುತ್ತಾಳೆ. ಇದಕ್ಕೆಲ್ಲ ಕಾರಣ ಅವಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಅವಳ ದೇಹದ ಬಗ್ಗೆ ಮಾಡುವ ಟೀಕೆಗಳು, ಇವೆಲ್ಲವನ್ನು ನೋಡಿದಾಗ ನಮ್ಮ ಸಮಾಜದ ಮೇಲೆ ಒಂದು ರೀತಿಯ ಅಸಹ್ಯ ಭಾವನೆ ಮೂಡುತ್ತದೆ.
ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವ ಅವರಿಗೆ ತಮ್ಮ ಮನೆಯ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ಇದೆಯೆಂದು ಹೇಗೆ ಹೇಳುವುದು?
ಕೆಲವೊಬ್ಬರು ಸಮಾಜದ ಮುಂದೆ ಬಂದು ತಮಗಾದ ತೊಂದರೆಯನ್ನು ಹೇಳಿಕೊಂಡರೆ, ಮತ್ತೆ ಕೆಲವರು ಯಾರಲ್ಲೂ ಹೇಳದೆ ಮನಸಿನಲ್ಲೇ ಕೊರಗಿ ನರಳುವವರು. ಈ ರೀತಿಯ ಭಯದಲ್ಲಿ ಇಂದು ನಮ್ಮ ತಾಯಂದಿರು, ಸಹೋದರಿಯರು ಬದುಕುತ್ತಿದ್ದಾರೆ. ಇದು ನಿಜವಾದ ಸ್ವಾತ್ರಂತ್ರ್ಯವೆ?
ಸ್ವಾತಂತ್ರ್ಯ ದಿನವೆಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯ ಹಕ್ಕು ಮತ್ತು ಸ್ವಾತಂತ್ರ್ಯ. ಈ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ನಿರಾಳವಾಗಿ ಅನುಭವಿಸುವ ದಿನಗಳನ್ನು ಎದುರು ನೋಡೋಣ.
ಸುಮನ್ ಪಾಟೀಲ್
ಜರ್ನಲಿಸಂ ಸ್ಟೂಡೆಂಟ್, ವಿಜಯಪುರ.
ಇದನ್ನೂ ಓದಿ- ಕನಸುಗಳನ್ನು ಹೊತ್ತ ಭಾರತ 79ರ ಹೊಸ್ತಿಲಲ್ಲಿ
47 ರ ಸ್ವಾತಂತ್ರ್ಯ – ಯಾರಿಗೆ ಬಂತು, ಎಲ್ಲಿಗೆ ಬಂತು?