ಕೇವಲ ಕಳೆದ ಒಂದು ದಶಕದ ಅವಧಿಯಲ್ಲಿ ಸ್ವಾತಂತ್ರ್ಯಗಳ ಕತೆ ಏನಾಗಿದೆ? ನಿಮಗೆ ಇಷ್ಟವಾಗುವ ಉಡುಪು ಧರಿಸುವ, ಇಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯದ ಕತೆ ಏನಾಗಿದೆ? ಜಾತಿ ಮತಗಳನ್ನು ಮೀರಿ ನಿಮಗೆ ಇಷ್ಟವಾದವರನ್ನು ಮದುವೆಯಾಗಿ ನೆಮ್ಮದಿಯ ಬದುಕು ಸಾಗಿಸುವ ಸ್ವಾತಂತ್ರ್ಯ ಮುಕ್ತವಾಗಿದೆಯೇ? ಮತಧರ್ಮಕ್ಕೆ ಸಂಬಂಧಿಸಿದ ಆಚರಣೆಗಳನ್ನು ನಿರ್ಭೀತಿಯಿಂದ ನಡೆಸುವ ಸ್ವಾತಂತ್ರ್ಯ ಎಲ್ಲ ಮತಧರ್ಮೀಯರಿಗೆ ಇದೆಯೇ? ಅಂದ ಮೇಲೆ ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ? – ಶ್ರೀನಿವಾಸ ಕಾರ್ಕಳ, ಚಿಂತಕರು.
ʼಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ?ʼ ಎಂದು ಹಾಡಿನ ಮೂಲಕ ಪ್ರಶ್ನಿಸಿದ್ದರು ನಮ್ಮ ದಲಿತ ಕವಿ, ದಿವಂಗತ ಸಿದ್ದಲಿಂಗಯ್ಯ. ವ್ಯವಸ್ಥೆಯ ಬಗ್ಗೆ ಅವರು ಈ ಪ್ರಶ್ನೆ ಎತ್ತಿದ್ದು ಸರಿ ಸುಮಾರು ಅರ್ಧ ಶತಮಾನದ ಹಿಂದೆ. ಇನ್ನು ಇಪ್ಪತ್ತೆರಡು ವರ್ಷ ಕಳೆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ನೂರು ವರ್ಷವಾಗಲಿದ್ದು, ಸಿದ್ದಲಿಂಗಯ್ಯ ಅವರು ಅಂದು ಕೇಳಿದ ಪ್ರಶ್ನೆ ಇಂದಿಗೂ ಪ್ರಸ್ತುತವಾಗಿರುವುದು, ಮುಂದೆಯೂ ಪ್ರಸ್ತುತವಾಗುವಂತಹ ಪರಿಸ್ಥಿತಿಯೇ ಇರುವುದು ಎಂತಹ ದೌರ್ಭಾಗ್ಯವಲ್ಲವೇ?
ಸಾಮಾಜಿಕ ನ್ಯಾಯ ದಕ್ಕಿತೇ?
ಭಾರತದ ಸಂವಿಧಾನ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿ ಸಂವಿಧಾನ ನಿರ್ಮಾತೃ ಎನಿಸಿಕೊಂಡ ಡಾ ಬಿ ಆರ್ ಅಂಬೇಡ್ಕರ್ ಅವರು ಭಾರತದ ಜನರಿಗೆ ಸಾಮಾಜಿಕ ಸ್ವಾತಂತ್ರ್ಯ ದೊರೆಯದೆ, ರಾಜಕೀಯ ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಇಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದರು. ಮೇಲ್ನೋಟಕ್ಕೆ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತಂತೆ ಕಾಣುತ್ತದೆ (ದೇಶದ ಜನಸಾಮಾನ್ಯರಿಗೆ ಅಧಿಕಾರ ಸಿಕ್ಕಿಲ್ಲ, ಬದಲಾಗಿ, ಅಧಿಕಾರವು ಬ್ರಿಟಿಷ್ ಪ್ರತಿಷ್ಠಿತರ ಕೈಯಿಂದ ಭಾರತದ ಪ್ರತಿಷ್ಠಿತರ ಕೈಗೆ ಹೋಗಿದೆ ಅಷ್ಟೇ ಎಂದು ಅನೇಕ ಪ್ರಜ್ಞಾವಂತರು ಬೆಟ್ಟು ಮಾಡಿದ್ದರು), ಆದರೆ ದೇಶದ ಶೋಷಿತ ಸಮುದಾಯಕ್ಕೆ ಇಂದಿಗೂ ಸಾಮಾಜಿಕ ನ್ಯಾಯ ದಕ್ಕಿದೆಯೇ? ತಥಾಕಥಿತ ಸವರ್ಣೀಯರ ದಬ್ಬಾಳಿಕೆಗಳಿಂದ ಅವರು ಮುಕ್ತರಾಗಿದ್ದಾರೆಯೇ? ದೇಶದ ಸ್ವಾತಂತ್ರ್ಯ, ಸಂವಿಧಾನಾತ್ಮಕ ಹಕ್ಕುಗಳ ಫಲಗಳು ಅವರಿಗೆ ದಕ್ಕಿವೆಯೇ? ಇಲ್ಲ ಎನ್ನುವುದೇ ಇದಕ್ಕೆ ಉತ್ತರವಾದ ಮೇಲೆ ನಾವು ಯಾವ ಸ್ವಾತಂತ್ರ್ಯವನ್ನು ಈಗ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಿರುವುದು?
ನಾವು ಯಾವುದನ್ನಾದರೂ ಉಳಿಸಿಕೊಳ್ಳಬೇಕಾದರೆ, ಮೊದಲು ನಾವು ಸರಿಯಾಗಿ ಅದನ್ನು ಅರ್ಥಮಾಡಿಕೊಳ್ಳಬೇಕು, ಅದರ ಇಂದಿನ ಸ್ಥಿತಿಗತಿಯನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದು ದೇಶದ ಸ್ವಾತಂತ್ರ್ಯಕ್ಕೂ ಅನ್ವಯಿಸುತ್ತದೆ. ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದ ಫಲವಾಗಿ ದೇಶಕ್ಕೆ ದಕ್ಕಿದ ಸ್ವಾತಂತ್ರ್ಯದ ಪರಿಸ್ಥಿತಿ ಇಂದು ಹೇಗಿದೆ ಎಂದು ಆತ್ಮ ವಿಮರ್ಶೆ ಮಾಡಿಕೊಂಡು ಸರಿಯಾದ ಹಾದಿಯಲ್ಲಿ ಸಾಗುವುದೇ ನಿಜ ಅರ್ಥದ ಸ್ವಾತಂತ್ರ್ಯ ದಿನಾಚರಣೆ. ಇದನ್ನು ಹೊರತುಪಡಿಸಿ ಮಾಡುವ ಎಲ್ಲ ಆಚರಣೆಗಳೂ ಬರಿಯ ಅರ್ಥ ಹೀನ ಒಣ ಆಚರಣೆಗಳು.
ಗಾಂಧಿ ಈಗ ಖಳನಾಯಕ!
ಭಾರತ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಜಾತಿ ನೆಲೆಯ ಶೋಷಣೆಗೆ ಅವಕಾಶ ಇಲ್ಲದ ಮತ್ತು ಎಲ್ಲ ಮತಧರ್ಮೀಯರಿಗೂ ಸೇರಿದ ʼಸರ್ವ ಧರ್ಮ ಸಮಭಾವʼದ ಒಂದು ಭಾರತದ ಕನಸು ಕಂಡರು (ಇದೇ ಕಾರಣಕ್ಕೆ ಗೋಡ್ಸೆ ಗ್ಯಾಂಗ್ ನಿಂದ ಹತರಾದರು). ನಿಜ ಅರ್ಥದ ಹಿಂದೂ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಂತಿದ್ದ ಮತ್ತು ನಿಜ ಅರ್ಥದ ಹಿಂದೂ ಧರ್ಮ ಹೇಗಿರಬೇಕು ಎಂಬುದನ್ನು ಬದುಕಿ ತೋರಿದ ಗಾಂಧಿ ಚಿಂತನೆಗಳ ಸ್ಥಿತಿ ಇಂದು ಏನಾಗಿದೆ? ದೇಶದ ಎಲ್ಲ ಸಮಸ್ಯೆಗಳಿಗೂ ಗಾಂಧಿಯೇ ಕಾರಣ, ಆತನನ್ನು ಕೊಂದುದು ಸರಿ ಎಂದು ನಂಬಿಕೊಂಡ ಮತ್ತು ವಾದಿಸುವ, ವಾಟ್ಸಪ್ ಶಿಕ್ಷಿತ ಯುವಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಇವರು ಗಾಂಧಿ ಜಯಂತಿಯ ದಿನವೇ ʼಗೋಡ್ಸೆ ಜಿಂದಾಬಾದ್ʼ ಎಂಬ ಸೋಶಿಯಲ್ ಮೀಡಿಯಾ ಅಭಿಯಾನ ಚಲಾಯಿಸುತ್ತಾರೆ!
ಗಾಂಧಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸರ್ವ ಧರ್ಮ ಸಮಭಾವದ ಪರಿಕಲ್ಪನೆ ಈಗ ಅಸ್ಪೃಶ್ಯ ಸಂಗತಿಯಾಗಿದ್ದು, ದೇಶವನ್ನು ಈಗ ಆಳುವವರೇ ಅದಕ್ಕೆ ಎಳ್ಳು ನೀರು ಬಿಟ್ಟು, ಇದರ ವಿರುದ್ಧದ ಸಿದ್ಧಾಂತವನ್ನು ಬಹಿರಂಗವಾಗಿಯೇ ಪ್ರೋತ್ಸಾಹಿಸುತ್ತಿದ್ದಾರೆ. ಗಾಂಧಿ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾಗಿದ್ದ ಮತ್ತು ಗೋಡ್ಸೆಯ ಗುರುವಾಗಿದ್ದ ಸಾವರ್ಕರ್ ನನ್ನು ದೇಶದ ಪ್ರಧಾನಿಯೇ ಪೂಜಿಸುತ್ತಿದ್ದಾರೆ!
ಇದು ಎಲ್ಲ ಮತಧರ್ಮೀಯರಿಗೂ ಸೇರಿದ ದೇಶ ಎಂಬುದನ್ನು ಒಪ್ಪದ ಸಿದ್ಧಾಂತವನ್ನು ಹೊಂದಿರುವ ನಿರ್ಧಿಷ್ಟ ರಾಜಕೀಯ ಪಕ್ಷ ನಡೆಸುತ್ತಿರುವ ಸರಕಾರ ಈ ದೇಶವನ್ನು ಈಗಾಗಲೇ ಒಂದು ಮತಧರ್ಮದ ದೇಶವನ್ನಾಗಿ ಮಾಡಿಯಾಗಿದೆ. ಒಂದು ದೇಶ, ಒಂದು ಸಂಸ್ಕೃತಿ, ಒಂದು ಭಾಷೆ, ಹೀಗೆ ಒಂದು ಒಂದು ಒಂದುಗಳ ವ್ಯಸನದಲ್ಲಿ ಈಗ ಈ ದೇಶವನ್ನು ಅನಧಿಕೃತವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾಡಿಯಾಗಿದೆ. ಈಗ ಇಲ್ಲಿ ಹಿಂದೂಗಳು ʼಇದು ನನ್ನ ದೇಶʼ ಎಂದು ತಲೆ ಎತ್ತಿ ನಡೆಯಬಹುದು, ಮುಸ್ಲಿಂ, ಕ್ರೈಸ್ತ ಮತ್ತು ಇತರ ಧರ್ಮೀಯರು ʼನಾನು ಈ ದೇಶಕ್ಕೆ ಸೇರಿದವನಲ್ಲವೇನೋʼ ಎಂದು ಅಳುಕಿನಿಂದ ಬದುಕುವ ಸ್ಥಿತಿಯನ್ನು ಈಗಾಗಲೇ ನಿರ್ಮಿಸಿಯಾಗಿದೆ. ಅಲ್ಪಸಂಖ್ಯಾತ ಸಮುದಾಯದ ಮೇಲಣ ದಬ್ಬಾಳಿಕೆ ನಿತ್ಯದ ಸಂಗತಿಯಾಗಿದೆ. ಒಂದು ನಿರ್ದಿಷ್ಟ ಧರ್ಮೀಯರಿಗೆ ಅವರ ʼಜಾಗ ತೋರಿಸುವʼ ತ್ರಿವಳಿ ತಲಾಖ್, ಸಿಎಎ, ವಕ್ಫ್ ಕಾಯಿದೆ ಮೊದಲಾದವನ್ನು, ಎಲ್ಲರನ್ನೂ ಸಮಾನವಾಗಿ ನೋಡಬೇಕಾದ ಸರಕಾರವೇ ಜಾರಿಗೆ ತಂದಿದೆ ಎಂದ ಮೇಲೆ ದೇಶದಲ್ಲಿ ಸಂವಿಧಾನದ ಆಶಯದ ಕತೆ ಏನಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕೇ?
ನೆಹರೂ ಕನಸಿನ ವೈಜ್ಞಾನಿಕ ಮನೋಧರ್ಮದ ಆಧುನಿಕ ಭಾರತದ ಕತೆ ಏನಾಗಿದೆ?
ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಮತ್ತು ದೇಶದ ಮೊದಲ ಪ್ರಧಾನಿಯಾಗಿ ಆಧುನಿಕ ಭಾರತಕ್ಕೆ ಅಡಿಗಲ್ಲು ಇರಿಸಿದ ಜವಾಹರಲಾಲ್ ನೆಹರೂ ಅವರು ಮೌಢ್ಯ ಮುಕ್ತವಾದ, ವೈಜ್ಞಾನಿಕ ಚಿಂತನೆ, ವೈಚಾರಿಕ ಮನೋಭಾವದಲ್ಲಿ ನಂಬಿಕೆ ಇರಿಸಿ ಆ ಹಾದಿಯಲ್ಲಿ ನಡೆಯುವ ಒಂದು ಆಧುನಿಕ ಭಾರತದ ಕನಸು ಕಂಡರು. ಪ್ರತಿಮೆ, ದೇಗುಲ ನಿರ್ಮಾಣಕ್ಕೆ ಆದ್ಯತೆ ನೀಡದೆ ಆಧುನಿಕ ದೇವಾಲಯಗಳೆನಿಸಿದ ಅಣೆಕಟ್ಟುಗಳು, ಕೈಗಾರಿಕೆಗಳು, ಶಾಲೆಗಳು, ಆಸ್ಪತ್ರೆಗಳು, ಐಐಟಿ, ಐಐಎಮ್, ಏಮ್ಸ್, ಇಸ್ರೋದಂತಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು.
ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಈ ನೆಹರೂ ಆಲೋಚನೆಗಳ ಕತೆ ಏನಾಗಿದೆ? ನಮ್ಮಲ್ಲಿ ವೇದಕಾಲದಲ್ಲಿಯೇ ವಿಮಾನ, ಮೊಬೈಲ್, ಇಂಟರ್ ನೆಟ್ ಇತ್ತು, ಟಿವಿ ಇತ್ತು, ಮನುಷ್ಯನಿಗೆ ಆನೆಯ ತಲೆ ಜೋಡಿಸುವ ವೈದ್ಯಕೀಯ ತಂತ್ರಜ್ಞಾನ ಇತ್ತು, ಪುರಾಣ ಕಾಲದಲ್ಲಿ ಪ್ರನಾಳ ಶಿಶು ತಂತ್ರಜ್ಞಾನ ಇತ್ತು, ಚರಂಡಿಯ ಗ್ಯಾಸ್ ನಿಂದ ಒಲೆ ಉರಿಸಬಹುದು, ಮೋಡ ಇದ್ದಾಗ ರಾಡಾರ್ ಕಣ್ಣು ತಪ್ಪಿಸಬಹುದು, ಹವಾಮಾನ ಬದಲಾವಣೆ ಆಗಿಲ್ಲ, ನಮ್ಮ ಚರ್ಮವೇ ಸೂಕ್ಷ್ಮವಾಗಿದೆ, ಎಕ್ಸ್‌ಟ್ರಾ 2ಎಬಿ ಎಲ್ಲಿಂದ ಬಂತು, ದನದ ಮೂತ್ರ ಸೆಗಣಿಯಿಂದ ಕ್ಯಾನ್ಸರ್ ನಂತಹ ಕಾಯಿಲೆಗಳನ್ನೂ ಗುಣಪಡಿಸಬಹುದು, ಎಂದೆಲ್ಲ ನಂಬಿರುವ ಮತ್ತು ಮುಗ್ಧ ಜನರನ್ನು ನಂಬಿಸುವ ನಾಯಕರು ದೇಶದ ವೈಜ್ಞಾನಿಕ ಮತ್ತು ವೈಚಾರಿಕ ಸ್ಥಿತಿಯನ್ನು ಎಲ್ಲಿಗೆ ತಂದು ಇರಿಸಿದ್ದಾರೆ ನೀವೇ ಊಹಿಸಿ.
ಅಂಬೇಡ್ಕರ್ ರೂಪಿಸಿದ ಭಾರತ ಸಂವಿಧಾನ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅನೇಕ ಸ್ವಾತಂತ್ರ್ಯಗಳನ್ನು ಆಯ್ಕೆಯ ಹಕ್ಕುಗಳ ರೂಪದಲ್ಲಿ ಕೊಟ್ಟಿದೆ. ಏನನ್ನು ಉಣ್ಣಬಹುದು, ಏನನ್ನು ಉಡಬಹುದು, ಹೇಗೆ ವರ್ತಿಸಬಹುದು, ಯಾರನ್ನು ಮದುವೆಯಾಗಬಹುದು, ಬೇರೆಯವರಿಗೆ ತೊಂದರೆಯಾಗದ ಹಾಗೆ ಏನನ್ನು ಆಡಬಹುದು ಮೊದಲಾದ ಆಯ್ಕೆಗಳ ವಿಚಾರದಲ್ಲಿ ಅದು ಸ್ಪಷ್ಟವಿದೆ. ಆದರೆ ಕೇವಲ ಕಳೆದ ಒಂದು ದಶಕದ ಅವಧಿಯಲ್ಲಿ ಆ ಸ್ವಾತಂತ್ರ್ಯಗಳ ಕತೆ ಏನಾಗಿದೆ? ನಿಮಗೆ ಇಷ್ಟವಾಗುವ ಉಡುಪು ಧರಿಸುವ ಸ್ವಾತಂತ್ರ್ಯ ಇದೆಯೇ? ನಿಮಗೆ ಇಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯದ ಕತೆ ಏನಾಗಿದೆ (ಈಗ ಸ್ವಾತಂತ್ರ್ಯ ದಿನದಂದು ಮಾಂಸ ಮಾರಾಟ ಮಾಡಬಾರದು ಎಂದು ಸರಕಾರವೇ ನಿರ್ಬಂಧ ವಿಧಿಸಲಾರಂಭಿಸಿದೆ)? ಜಾತಿ ಮತಗಳನ್ನು ಮೀರಿ ನಿಮಗೆ ಇಷ್ಟವಾದವರನ್ನು ಮದುವೆಯಾಗಿ ನೆಮ್ಮದಿಯ ಬದುಕು ಸಾಗಿಸುವ ಸ್ವಾತಂತ್ರ್ಯ ಮುಕ್ತವಾಗಿದೆಯೇ? ಮತಧರ್ಮಕ್ಕೆ ಸಂಬಂಧಿಸಿದ ಆಚರಣೆಗಳನ್ನು ನಿರ್ಭೀತಿಯಿಂದ ನಡೆಸುವ ಸ್ವಾತಂತ್ರ್ಯ ಎಲ್ಲ ಮತಧರ್ಮೀಯರಿಗೆ ಇದೆಯೇ? ಅಂದ ಮೇಲೆ ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ?
ಸ್ವಾತಂತ್ರ್ಯಕ್ಕೆ ಬೇಡಿ ತೊಡಿಸಲಾಗಿದೆ
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನಿಮಗೆ ಗೊತ್ತೇ ಇದೆ. ಇವತ್ತು ದೇಶದ ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದು ಅಹಿಂಸೆಯ ಕರೆಯೊಂದಿಗೆ ಶಾಂತಿಯುತ ಹೋರಾಟದಲ್ಲಿ ಭಾಗಿಯಾದ ಕಾರಣಕ್ಕೆ ಉಮರ್ ಖಾಲಿದ್, ಖಾಲಿದ್ ಸೈಫಿ, ಶರ್ಜಿಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೊದಲಾದವರನ್ನು ವಿಚಾರಣೆಯೂ ಇಲ್ಲದೆ ಐದು ವರ್ಷಗಳಿಂದ ಜೈಲಿನಲ್ಲಿ ಇರಿಸಿ ಈ ದೇಶ ಸಂಭ್ರಮ ಮತ್ತು ಸಡಗರದಿಂದ ಸ್ವಾತಂತ್ರ್ಯ ದಿನ ಆಚರಿಸುತ್ತಿದೆ.
ದೇಶವನ್ನು ವಿಪಕ್ಷ ಮುಕ್ತವಾಗಿಸುವ ಕಾರ್ಯಕ್ರಮ ಜೋರಾಗಿ ನಡೆದಿದೆ. ಮಾಧ್ಯಮ, ನ್ಯಾಯಾಂಗ ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳ್ನೂ ಆಳುವವರ ಮುಂದೆ ನಡುಬಗ್ಗಿಸುವಂತೆ ಮಾಡಲಾಗಿದೆ. ಸಿಬಿಐ, ಐಟಿ, ಈಡಿ, ಸಿಎಜಿ, ಸಿಇಸಿ, ಸಿವಿಸಿ, ಪ್ರತಿಯೊಂದು ಸಂಸ್ಥೆಗಳೂ ಆಳುವವರ ಕೈಗೊಂಬೆಯಾಗಿ ವಿಪಕ್ಷಗಳನ್ನು ಮತ್ತು ಭಿನ್ನ ದನಿಗಳನ್ನು ಹತ್ತಿಕ್ಕುವ ಹತಾರಗಳಾಗಿವೆ. ಪ್ರಜಾತಂತ್ರದ ಶವಪೆಟ್ಟಿಗೆಗೆ ಅಂತಿಮ ಮೊಳೆಯೆಂಬಂತೆ ಈಗ ಚುನಾವಣಾ ಆಯೋಗವೂ ಆಳುವ ಪಕ್ಷದ ವಿಸ್ತರಣಾ ಶಾಖೆಯಂತೆ ಕೆಲಸ ಮಾಡಲಾರಂಭಿಸಿದೆ. ಪ್ರಜೆಗಳೇ ಪ್ರಭುಗಳ ದೇಶದಲ್ಲಿ ಈಗ ಅಹಿಂಸಾತ್ಮಕ, ಸಂವಿಧಾನಬದ್ಧ, ಪ್ರಜಾಸತ್ತಾತ್ಮಕ ಪ್ರತಿಭಟನೆಯನ್ನು ಮಾಡಲು ಸರಕಾರದ ಅನುಮತಿ ಪಡೆಯಬೇಕಾಗಿದೆ! ಎಲ್ಲೆಂದರಲ್ಲಿ ನೀವು ಪ್ರತಿಭಟನೆ ಮಾಡುವಂತಿಲ್ಲ, ಸರಕಾರ ಹೇಳಿದಲ್ಲಿಯೇ ಮಾಡಬೇಕು! ಸ್ವಾತಂತ್ರ್ಯ ಕಾಲದಿಂದಲೂ ಭಾರತ ಪ್ಯಾಲೆಸ್ಟೈನ್ ನ ಆಪ್ತ ದೇಶವಾಗಿದೆ. ಆದರೆ ಈಗ ಪ್ಯಾಲೆಸ್ಟೈನ್ ನ ಗಾಜಾದಲ್ಲಿ ಇಸ್ರೇಲ್ ನಿಂದ ನಡೆಯುತ್ತಿರುವ ನರಮೇಧವನ್ನು ಶಾಂತಿಯುತವಾಗಿಯೂ ಪ್ರತಿಭಟಿಸುವ ಸ್ವಾತಂತ್ರ್ಯ ನಿಮಗಿಲ್ಲ!, ಫಾದರ್ ಸ್ಟಾನ್ ಸ್ವಾಮಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮ ನಡೆಸುವ ಸ್ವಾತಂತ್ರ್ಯ ನಿಮಗಿಲ್ಲ!
ದೇಶದ ಸಂವಿಧಾನವು ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರಭಾವದ ಬಗ್ಗೆ ಮಾತನಾಡುತ್ತದೆ. ಇದು ದೇಶದಲ್ಲಿ ಸಾಕಾರಗೊಂಡಿದೆಯೇ? ಸಂವಿಧಾನ ಪೀಠಿಕೆಯು ಸಮಾನತೆ, ನ್ಯಾಯ, ಸ್ವಾತಂತ್ರ್ಯ, ಭ್ರಾತೃತ್ವ, ಸಮಾಜವಾದ, ಸೆಕ್ಯುಲರಿಸಂ ಬಗ್ಗೆ ಹೇಳುತ್ತದೆ. ಇದೊಂದು ಅತ್ಯಗತ್ಯವಾದ ಆದರ್ಶ ಪರಿಕಲ್ಪನೆ. ಆದರೆ ಬಲಪಂಥೀಯ ಪಕ್ಷದ ಮಂದಿಗೆ ಸಮಸಮಾಜದ ಕನಸು ಕಾಣುವ ʼಸಮಾಜವಾದʼ, ಸರ್ವ ಧರ್ಮಗಳನ್ನು ಸಮಭಾವದ ದಿಂದ ನೋಡುವ ʼಸೆಕ್ಯುಲರಿಸಂʼ ಪರಿಕಲ್ಪನೆಯಲ್ಲಿ ಭಯಂಕರ ಸಮಸ್ಯೆ ಕಾಣುತ್ತದೆ; ಅದೂ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಮುಕ್ಕಾಲು ಶತಮಾನಗಳ ಬಳಿಕವೂ!
ಹೀಗೆ ದೇಶದ ಸಂವಿಧಾನ ಮತ್ತು ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಇಲ್ಲದಂತೆ, ಮಾಡಿ ಪ್ರತೀ ವರ್ಷವೂ ಸಂಭ್ರಮ ಮತ್ತು ಸಡಗರದಿಂದ ಸ್ವಾತಂತ್ರ್ಯವನ್ನು ಆಚರಿಸಲಾಗುತ್ತಿದೆ. ದೇಶದ ಜನತೆಯ ಪ್ರತಿಯೊಂದು ಸ್ವಾತಂತ್ರ್ಯವನ್ನೂ ಹರಣ ಮಾಡುವ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ ದೇಶದ ಮುಖ್ಯಸ್ಥರು, ಫ್ಯಾನ್ಸಿ ಉಡುಗೆ ತೊಟ್ಟು, ಮೊಗಲರ ಕೆಂಪು ಕೋಟೆಯ ಮೇಲೆ ನಿಂತು ಸ್ವಾತಂತ್ರ್ಯದ ಮಹತ್ತ್ವದ ಕುರಿತು ವೀರಾವೇಶದ ಭಾಷಣ ಬಿಗಿಯುತ್ತಾರೆ ಮತ್ತು ನಾವು ಪ್ರಜೆಗಳು ಅದನ್ನು ಅಷ್ಟೇ ನಿಷ್ಠೆಯಿಂದ, ಶ್ರದ್ಧೆಯಿಂದ ಆಲಿಸಿ ಜೈ ಜೈ ಎನ್ನುತ್ತಾ ಮನೆಗೆ ತೆರಳುತ್ತೇವೆ. ಅಲ್ಲಿಗೆ ದೇಶದ ಇಂದಿನ ಸ್ವಾತಂತ್ರ್ಯ ದಿನಾಚರಣೆ ಮುಗಿಯುತ್ತದೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆ ಮುಂದಿನ ವರ್ಷ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಮತಗಳ್ಳತನ ; ಕೇಸರಿ ಪಾಳಯದಲಿ ತಲ್ಲಣ