ಧರ್ಮಸ್ಥಳ ಎಸ್ಐಟಿ : ಪರ-ವಿರೋಧ ಹೋರಾಟದ ಹಣದ ಮೂಲ ತನಿಖೆಯಾಗಲಿ !

Most read

ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ವಿಷ್ಣುಮೂರ್ತಿ, ಪದ್ಮಲತಾ ಸಹೋದರಿ ಇಂದ್ರವತಿಯಿಂದ ಹಿಡಿದು ಎಲ್ಲಾ ಎಡ ಹೋರಾಟಗಾರರ, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಎಲ್ಲಾ ಬಲಪಂಥೀಯ ಹೋರಾಟಗಾರರ, ಧರ್ಮಸಂರಕ್ಷಣಾ ಯಾತ್ರೆ ಆಯೋಜಕರು, ಎಸ್ಐಟಿ ಕಾರ್ಯಾಚರಣೆಯ ವಿರೋಧಿಗಳು, ಸಂತ್ರಸ್ತರ ಟೀಕಾಕಾರರ ಹಣದ ಮೂಲ ತನಿಖೆಯಾಗಲಿ. ಆದರೆ, ಕನಿಷ್ಠ 1986 ರಿಂದ ಪ್ರಾರಂಭವಾಗಬೇಕು. ನವೀನ್‌ ಸೂರಿಂಜೆ, ಪತ್ರಕರ್ತರು.

ಧರ್ಮಸ್ಥಳ ಅಸ್ತಿಪಂಜರ ಕೇಸ್ ನಲ್ಲಿ ಎಸ್ಐಟಿ ಪೊಲೀಸರು ಹಣದ ಮೂಲದ ಬಗ್ಗೆಯೂ ತನಿಖೆ ನಡೆಸಬೇಕು. ಧಣಿಗಳ ಪರ ಇರುವವರಂತೂ ಹೋರಾಟದ ಹಣದ ಮೂಲದ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹಾಗಾಗಿ, ಹಣದ ಮೂಲದ ಬಗ್ಗೆ ತನಿಖೆ ನಡೆಸುವುದರ ಬಗ್ಗೆ ಪರ-ವಿರೋಧಗಳು ಇಲ್ಲ. ಎಡ-ಬಲ-ಪರ-ವಿರೋಧ ಹೋರಾಟಗಾರರೆಲ್ಲರ ಸಹಮತ ಇದೆ.

ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ಬಿ ಎಂ ಭಟ್, ವಿಷ್ಣುಮೂರ್ತಿ, ಪದ್ಮಲತಾ ಸಹೋದರಿ ಇಂದ್ರವತಿಯಿಂದ ಹಿಡಿದು ಎಲ್ಲಾ ಎಡ ಹೋರಾಟಗಾರರ ಹಣದ ಮೂಲ ತನಿಖೆಯಾಗಲಿ. ಅದೇ ರೀತಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಎಲ್ಲಾ ಬಲಪಂಥೀಯ ಹೋರಾಟಗಾರರ ಹಣದ ಮೂಲವೂ ತನಿಖೆಯಾಗಲಿ‌. ಧರ್ಮಸಂರಕ್ಷಣಾ ಯಾತ್ರೆ ಆಯೋಜಕರು, ಎಸ್ಐಟಿ ಕಾರ್ಯಾಚರಣೆಯ ವಿರೋಧಿಗಳು, ಸಂತ್ರಸ್ತರ ಟೀಕಾಕಾರರ ಹಣದ ಮೂಲವೂ ತನಿಖೆಯಾಗಲಿ.

ಹಣದ ಮೂಲದ ತನಿಖೆ ಕನಿಷ್ಠ 1986 ರಿಂದ ಪ್ರಾರಂಭವಾಗಬೇಕು. ಪದ್ಮಲತಾ ಕೊಲೆ ಪ್ರಕರಣದಲ್ಲಿ ಸಿಒಡಿ ದಕ್ಷ ಪೊಲೀಸ್ ಇನ್ಸ್ ಪೆಕ್ಟರ್ ಜಗನ್ನಾಥ ರೈಯವರು ಇನ್ನೇನು ಆರೋಪಿಗಳನ್ನು ಬಂಧಿಸುವ ಹಂತಕ್ಕೆ ಬಂದಾಗ ಕಾಂಗ್ರೆಸ್ ನ ಶಾಸಕರೊಬ್ಬರು ಗೃಹ ಸಚಿವರಿಗೆ ಜಗನ್ನಾಥ ರೈಯವರನ್ನು ವರ್ಗಾವಣೆ ಮಾಡುವಂತೆ ಪತ್ರ ಬರೆಯುತ್ತಾರೆ. ಆಗಿನ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಗನ್ನಾಥ ರೈಯವರನ್ನು ಕಡತ ಸಮೇತ ಬೆಂಗಳೂರಿಗೆ ಕರೆಸಿಕೊಂಡು, ಕಡತವನ್ನು ವಶಕ್ಕೆ ತೆಗೆದುಕೊಂಡು ಜಗನ್ನಾಥ ರೈಯವರನ್ನು ರಜೆಯ ಮೇಲೆ ಕಳುಹಿಸುತ್ತಾರೆ. ಇವೆಲ್ಲ ದಾಖಲೆಗಳು ವಿಧಾನಸಭೆಯ ರೆಕಾರ್ಡ್ಸ್ ನಲ್ಲಿದ್ದು ಈಗಾಗಲೇ ದಾಖಲೆ ಪ್ರತಿ  ಎಸ್ಐಟಿ ಕೈಸೇರಿದೆ. ಈ ಕಾಂಗ್ರೆಸ್ ಶಾಸಕರು ಈಗಲೂ ಮಾಜಿಯಾಗಿ ಸೌಜನ್ಯ ಹೋರಾಟದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಆ ಮಾಜಿ ಶಾಸಕರು ಪತ್ರ ಬರೆಯಲು ಕಾರಣವೇನು ? ಅವರ ಪತ್ರದ ಬಳಿಕ ಇನ್ಸ್ ಪೆಕ್ಟರ್ ಜಗನ್ನಾಥ ರೈ ವರ್ಗಾವಣೆಯಾಗಿ ಸಿಒಡಿ ಡಿವೈಎಸ್ಪಿಯವರು ತನಿಖೆ ನಡೆಸಿ ಪತ್ತೆಯಾಗದ ಪ್ರಕರಣ ಎಂದು ಮುಚ್ಚಿ ಹಾಕಲು ಕಾರಣವೇನು ? ಎಂಬುದು ತನಿಖೆ ಆಗಬೇಕು.

ಉತ್ಖನನದಲ್ಲಿ ಮೂಳೆ ಪತ್ತೆ

ಎಲ್ಲಕ್ಕಿಂತ ಮುಖ್ಯವಾಗಿ ಪದ್ಮಲತಾ ಪ್ರಕರಣದಲ್ಲಿ ಕೈಯಾಡಿಸಿದ ಈ ಶಾಸಕ ಆ ಬಳಿಕದ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಶಾಸಕರಾಗಿಯೂ, ಪರಾಜಿತರಾಗಿಯೂ, ಮಂತ್ರಿಯಾಗಿಯೂ ಸಕ್ರಿಯರಾಗಿದ್ದರು. ಇವರು ಚುನಾವಣೆಗೆ ಸ್ಪರ್ಧಿಸಿದಾಗಲೆಲ್ಲಾ ಬೆಳ್ತಂಗಡಿ ಮೂಲದ ಆ ‘ಧಣಿ’ ನೀಡಿದ ಎಲೆಕ್ಷನ್ ಫಂಡ್ ಎಷ್ಟು ? ಕಳೆದ 2023 ರ ಎಲೆಕ್ಷನ್ ನಲ್ಲಿ ಶಾಸಕ ಅಭ್ಯರ್ಥಿಯಾಗಿದ್ದ ಆ ಮಾಜಿ ಶಾಸಕರಿಗೆ ಕೊಟ್ಟ ಎಲೆಕ್ಷನ್ ಫಂಡ್ ಎಷ್ಟು ? ಅದರ ಮೂಲ ಯಾವುದು ಎಂಬುದು ತನಿಖೆಯಾಗಬೇಕು. ಆ ಮಾಜಿ ಶಾಸಕರಿಗೆ ನೀಡಿದ ಹಣ ಮತ್ತು ಅದರ ಮೂಲ ಪತ್ತೆಯಾದರೆ, ಯಾರು ಪದ್ಮಲತಾ ಪ್ರಕರಣದಿಂದ ಬಚಾವ್ ಆಗಲು ಶಾಸಕರ ಪ್ರಭಾವ ಬಳಸಿದರು ಎಂದು ಸರಳವಾಗಿ ತಿಳಿಯುತ್ತದೆ.

ಇಡೀ ಕರಾವಳಿಯ ಜನಸಮುದಾಯ ಎಸ್ಐಟಿ ತನಿಖೆಯ ಪರವಾಗಿದೆ. ದೂರುದಾರ/ಅಪ್ರೂವರ್ ಮತ್ತು ಹೋರಾಟಗಾರರ ಧೈರ್ಯ, ಬದ್ಧತೆಯನ್ನು ಕರಾವಳಿಯ ಎಲ್ಲರೂ ಪ್ರಶಂಸಿಸುತ್ತಿದ್ದಾರೆ. ಧಣಿಗಳಿಗೆ ಓಟಿನ ಬಲವಿಲ್ಲ. ಧಣಿಗಳು ಇಂತವರಿಗೇ ಓಟು ಕೊಡಿ ಎಂದು ಕೇಳಿದ ದಿನ ಅವರ ಧಾರ್ಮಿಕ ಪ್ರಭಾವಳಿ ಕುಸಿದು ಬೀಳುತ್ತದೆ. ಹಾಗಾಗಿ ಅವರು ಇಂತವರಿಗೇ ಓಟು ಕೊಡಿ ಎಂದು ಯಾವ ಕಾರಣಕ್ಕೂ ಯಾವ ಕಾಲಕ್ಕೂ ಕೇಳುವಂತಿಲ್ಲ. ಧಣಿಗಳ ಖಾಸಾ ವ್ಯಕ್ತಿಯನ್ನೇ ಧಣಿಗಳ ಅನುಯಾಯಿಗಳೇ ಇರುವ ಕ್ಷೇತ್ರದಲ್ಲೂ ಗೆಲ್ಲಿಸಲಾಗಲ್ಲ. ಜನಬಲ, ಓಟಿನ ಬಲ ಇಲ್ಲದೇ ಇದ್ದರೂ ಧಣಿಯನ್ನು ಬೆಂಬಲಿಸಿ ಕರಾವಳಿಯ ಕೆಲವು ಶಾಸಕರು, ಶಾಸಕ ಅಭ್ಯರ್ಥಿಗಳು ಮಾತ್ರ ಎಸ್ಐಟಿ ಕಾರ್ಯಾಚರಣೆ, ಹೋರಾಟವನ್ನು ಟೀಕಿಸುತ್ತಿದ್ದಾರೆ. ಬಹಳಷ್ಟು ಶಾಸಕ ಅಭ್ಯರ್ಥಿಗಳಿಗೆ ಧಣಿಗಳಿಂದ ಪ್ರತಿ ಎಲೆಕ್ಷನ್ ಗೆ ಬರುವ ಎಲೆಕ್ಷನ್ ಫಂಡ್ ಎಷ್ಟು ಎನ್ನುವುದು ತನಿಖೆಯಾಗಬೇಕು. ಯಾಕೆ ಆ ಧಣಿಗಳು ಎಲೆಕ್ಷನ್ ಫಂಡ್ ಕೊಡುತ್ತಾರೆ ? ಎಲೆಕ್ಷನ್ ಫಂಡ್ ನೀಡಿ ತನ್ನನ್ನು ತಾನು ರಕ್ಷಿಸಿಕೊಳ್ಳುವಂತಹ ದರ್ದು ಆ ‘ಸಜ್ಜನ’ರಿಗೆ ಬಂದಿದ್ದು ಯಾಕೆ ? ಕರಾವಳಿಯ ಎರಡೂ ಪಕ್ಷಗಳ ಹತ್ತಾರು ಶಾಸಕ ಅಭ್ಯರ್ಥಿಗಳಿಗೆ ಒಂದೇ ಕಡೆಯಿಂದ ಎಲೆಕ್ಷನ್ ಫಂಡ್ ನೀಡುವುದು ಈ ದೇಶದ ದೊಡ್ಡ ಹಗರಣ ಅಲ್ಲವೇ ? ಚುನಾವಣಾ ಆಯೋಗವು ಅಭ್ಯರ್ಥಿಯೊಬ್ಬರಿಗೆ ನಿಗದಿಪಡಿಸಿದ ವೆಚ್ಚಕ್ಕಿಂತಲೂ ಹೆಚ್ಚು ಈ ಧಣಿಯೇ ಫಂಡ್ ಮಾಡ್ತಾರೆ ಎನ್ನುವುದು ತನಿಖೆಗೆ ಅರ್ಹವಾದ ವಿಷಯ ಅಲ್ಲವೆ ? ಹಣ ನೀಡಿ ಶಾಸಕರ, ರಾಜಕಾರಣಿಗಳ ಪ್ರಭಾವ ಬಳಸಿಕೊಂಡು ಯಾವುದರಿಂದ ಅವರು ಬಚಾವ್ ಆಗಲು ಯತ್ನಿಸುತ್ತಿದ್ದಾರೆ ಎಂಬುದು ತನಿಖೆಯಾದರೆ ಎಲ್ಲಾ ದಂಧೆ, ಅನಾಚಾರ, ಅತ್ಯಾಚಾರ, ಕೊಲೆಗಳು ಬಯಲಾಗುತ್ತವೆ.

ಯು ಟ್ಯೂಬರ್ಸ್‌ ಮೇಲೆ ಹಲ್ಲೆ

ಎಸ್ಐಟಿ ಕಾರ್ಯಾಚರಣೆ ಮತ್ತು ಎಸ್ಐಟಿ ಕಾರ್ಯಾಚರಣೆಯ ಪರವಾಗಿ ಇರುವ ಹೋರಾಟಗಾರರನ್ನು ಹಿಂದೂ ವಿರೋಧಿಗಳೆಂದೂ, ಧರ್ಮ ಸಂರಕ್ಷಣೆಯಾಗಬೇಕು ಎಂದೂ ನಡೆಯುವ ಸಭೆಗಳಿಗೆ ಜನಸಾಮಾನ್ಯರು ಬರುವುದಿಲ್ಲ. ಹಾಗಾಗಿ ಕೆಲವು ಸಂಸ್ಥೆಗಳ ಸಿಬ್ಬಂದಿಗಳು ಕಡ್ಡಾಯ ಹಾಜರಿ ಇರಬೇಕು ಎಂದು ಪೂರ್ವಸೂಚನೆ ನೀಡಲಾಗಿದೆ. ಈ ರೀತಿ ಸೂಚನೆ ನೀಡಿರುವವರು ಯಾರು ? ಅವರು ಯಾರನ್ನು ಬಚಾವ್ ಮಾಡಲು ನೋಡುತ್ತಿದ್ದಾರೆ ? ಅದರ ಹಣದ ಮೂಲ ಯಾವುದು  ಎಂದು ತನಿಖೆಯಾದರೆ ಆರೋಪಿಗಳ ಪತ್ತೆ ತುಂಬಾ ಸರಳ !

ಇದಲ್ಲದೇ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯಾವೆಲ್ಲಾ ರಾಜಕಾರಣಿಗಳು ವಾಸ್ತವ್ಯ ಹೂಡಿದ್ದರು ? ಯಾವೆಲ್ಲಾ ರೀತಿಯ ವ್ಯವಸ್ಥೆಯನ್ನು ಯಾವ್ಯಾವ ರಾಜಕಾರಣಿಗಳಿಗೆ ಒದಗಿಸಲಾಗಿತ್ತು ? ಅದು ಉಚಿತ ಸೇವೆಯೇ ? ಅಥವಾ ಪಾವತಿ ಸೇವೆಯೇ ? ಈ ಸೇವೆಗೆ ಆ ರಾಜಕಾರಣಿಗಳು ಪ್ರತಿಯಾಗಿ ಏನು ಕೊಡುಗೆ ನೀಡಿದ್ದಾರೆ ? ಇದೆಲ್ಲವೂ ತನಿಖೆಯಾದರೆ ದೂರುದಾರ/ಳು, ಹೋರಾಟಗಾರರ ವಿರುದ್ಧ ಮಾತನಾಡುವ ರಾಜಕಾರಣಿಗಳ ಹಕೀಕತ್ತು ಬಯಲಾಗುತ್ತದೆ.

ಹಾಗಾಗಿ, ಧರ್ಮಸ್ಥಳ ಎಸ್ಐಟಿ ಕಾರ್ಯಾಚರಣೆ, ದೂರುದಾರ/  ಸಂತ್ರಸ್ತರ ಪರ ವಿರೋಧ ನಡೆಯುತ್ತಿರುವ ಎಲ್ಲಾ ಹೋರಾಟಗಳ ಹಣದ ಮೂಲದ ಬಗ್ಗೆ ತನಿಖೆಯಾಗಬೇಕು. ಸಂತ್ರಸ್ತರ ಪರ, ಆರೋಪಿಗಳ ಪರ ಇರುವವರ ಹಣದ ಮೂಲ ತನಿಖೆಯಾದರೆ ಆರೋಪಿಗಳ ಪತ್ತೆ ಕಾರ್ಯ ಸುಲಭವಾಗುತ್ತದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- http://ಧರ್ಮಸ್ಥಳದ ಪದ್ಮಲತಾ ಕೊಲೆ ಆರೋಪಿಗಳನ್ನು ರಕ್ಷಿಸಿದ ಕಾಂಗ್ರೆಸ್ ಶಾಸಕ ಯಾರು ಗೊತ್ತಾ? ಇನ್ನೇನು ಒಂದೆರಡು ದಿನದಲ್ಲಿ ಅರೆಸ್ಟ್ ಆಗಬೇಕಿದ್ದ ಕೊಲೆಗಡುಕರು ಬಚಾವ್ ಆಗಿದ್ದು ಹೇಗೆ ? https://kannadaplanet.com/do-you-know-which-congress-mla-protected-padmalatha-murder-accused/

More articles

Latest article