ಧರ್ಮಸ್ಥಳದ ಪದ್ಮಲತಾ ಕೊಲೆ ಆರೋಪಿಗಳನ್ನು ರಕ್ಷಿಸಿದ ಕಾಂಗ್ರೆಸ್ ಶಾಸಕ ಯಾರು ಗೊತ್ತಾ? ಇನ್ನೇನು ಒಂದೆರಡು ದಿನದಲ್ಲಿ ಅರೆಸ್ಟ್ ಆಗಬೇಕಿದ್ದ ಕೊಲೆಗಡುಕರು ಬಚಾವ್ ಆಗಿದ್ದು ಹೇಗೆ ?

Most read

ಕುಮಾರಿ ಪದ್ಮಲತಾಳ ಸಾವಿನ ಬಗ್ಗೆ ಸಿಒಡಿ ಸರ್ಕಲ್ ಇನ್ಸ್ ಸ್ಪೆಕ್ಟರ್ ಜಗನ್ನಾಥ ರೈ ಇವರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿ ಅವರು ಒಂದು ಹಂತದಲ್ಲಿ ತಪ್ಪಿತಸ್ಥರನ್ನು ಗೊತ್ತು ಮಾಡಿ ಬಂಧಿಸುವ ಹಂತದಲ್ಲಿರುವಾಗ ಅಂದು ಕಾಂಗ್ರೆಸ್ ಶಾಸಕ ವಿನಯಕುಮಾರ್ ಸೊರಕೆಯವರು ಮಧ್ಯೆ ಪ್ರವೇಶಿಸಿ ಗೃಹ ಮಂತ್ರಿಯವರಿಗೆ ʼಇನ್ಸ್ ಪೆಕ್ಟರ್ ಜಗನ್ನಾಥ್‌ ರೈಯವರು ಅದೇ ಸ್ಥಳದವರಾಗಿದ್ದು, ಅವರಿಂದಲೇ ತನಿಖೆಯನ್ನು ಮುಂದುವರೆಸುವುದು ಸೂಕ್ಷ್ಮವಲ್ಲʼ ವೆಂದು ಮನವಿ ಸಲ್ಲಿಸಿದ್ದರು. ಹಾಗಾಗಿ, ಗೃಹ ಮಂತ್ರಿಯವರು ಪ್ರಕರಣದ ತನಿಖೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಲು ಆದೇಶಿಸಿದರು. ಇದು ವಿಧಾನಸಭೆಯ ದಾಖಲೆಗಳು ಹೇಳುವ ಸತ್ಯನವೀನ್ ಸೂರಿಂಜೆ, ಪತ್ರಕರ್ತರು.

80 ರ ದಶಕದಲ್ಲಿ ಧರ್ಮಸ್ಥಳದಲ್ಲಿ ದೊಡ್ಡದೊಂದು ಕ್ರಾಂತಿ ನಡೆದಿತ್ತು. ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಚುನಾವಣೆಯೇ ನಡೆಯುತ್ತಿರಲಿಲ್ಲ. ಮುಂ**ಸುಧಾರಿ ವ್ಯಕ್ತಿಯೇ ತನಗೆ ಬೇಕಾದವರನ್ನು ಪಂಚಾಯತ್ ಸದಸ್ಯರನ್ನಾಗಿಯೂ, ಅಧ್ಯಕ್ಷರನ್ನಾಗಿಯೂ ‘ಅವಿರೋಧ’ ಆಯ್ಕೆ ಮಾಡುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವ ಈ ಫ್ಯೂಡಲ್ ಪದ್ಧತಿಯನ್ನು ಕೊನೆಗಾಣಿಸಬೇಕು ಎಂದು ಸಿಪಿಐಎಂ ಪಕ್ಷವು ಧರ್ಮಸ್ಥಳ ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿತು. ಪಂಚಾಯತ್ ಚುನಾವಣೆಯ ನಾಮಪತ್ರವನ್ನು ವಾಪಸ್ ಪಡೆಯುವಂತೆ ಬೆಳ್ತಂಗಡಿಯ ಸಿಪಿಐಎಂ ಮುಖಂಡ ಎ ಕೆ ದೇವಾನಂದ ಅವರಿಗೆ ಮುಂ**ಸುಧಾರಿಗಳು ಹೇಳಿಕಳುಹಿಸಿದರು. ‘ನಮ್ಮದು ಸಿಪಿಐಎಂ ಪಕ್ಷ. ಕಾಂಗ್ರೆಸ್ ಬಿಜೆಪಿಯಂತಹ ಪಕ್ಷ ಅಲ್ಲ. ನಾಮಿನೇಶನ್ ವಾಪಸ್ ಪಡೆಯಬೇಕಾದರೆ ನಮಗೆ ರಾಜ್ಯ ಸಮಿತಿ ಸೂಚನೆ ಕೊಡಬೇಕೇ ಹೊರತು ಇನ್ಯಾರೋ ಅಲ್ಲ’ ಎಂದು ಎ ಕೆ ದೇವಾನಂದ ಉತ್ತರ ನೀಡಿದ್ದರು.

22.12.1986 ರಂದು ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿಗೆ ಹೋದ ಕಮ್ಯೂನಿಸ್ಟ್ ಲೀಡರ್ ಎ ಕೆ ದೇವಾನಂದರ 19 ವರ್ಷದ ಮಗಳು ಪದ್ಮಲತಾ ಕಾಣೆಯಾಗುತ್ತಾರೆ. ಎ ಕೆ ದೇವಾನಂದರು ಧರ್ಮಸ್ಥಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸುತ್ತಾರೆ. ಆ ಸಂದರ್ಭದಲ್ಲೂ ಎ ಕೆ ದೇವಾನಂದರಿಗೆ ವ್ಯಕ್ತಿಯೊಬ್ಬ ಸಂದೇಶ ತಲುಪಿಸುತ್ತಾನೆ. ‘ಧಣಿಗಳು ಹೇಳಿದ್ದಾರೆ. ಕಂಪ್ಲೇಂಟಿನಿಂದ ಏನೂ ಆಗಲ್ಲ. ನಾಳೆಯವರೆಗೆ ಟೈಮಿದೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಕಡೇ ದಿನ. ನಾಮಪತ್ರ ವಾಪಸ್ ಪಡೆದರೆ ಮಗಳು ಸುರಕ್ಷಿತವಾಗಿ ಬರುತ್ತಾಳೆ’ ! ಎ ಕೆ ದೇವಾನಂದರು ಈ ಮಾಹಿತಿಯನ್ನೂ ಪೊಲೀಸರಿಗೆ ನೀಡಿದರೇ ವಿನಹ ಯಾವ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯಲಿಲ್ಲ. ಇದಾಗಿ 52 ದಿನಗಳಲ್ಲಿ ಎ ಕೆ ದೇವಾನಂದರ ಮಗಳು ಪದ್ಮಲತಾರ ಶವ ನೇತ್ರಾವತಿ ನದಿಯಲ್ಲಿ ತೇಲುತ್ತಿರುತ್ತದೆ. ವಾಚು ಮತ್ತು ವಸ್ತ್ರದ ಆಧಾರದಲ್ಲಿ ಶವ ಪದ್ಮಲತಾರದ್ದು ಎಂದು ಗುರುತಿಸಲಾಯಿತು.

ಕಮ್ಯೂನಿಷ್ಟರು ದೊಡ್ಡ ಮಟ್ಟದಲ್ಲಿ ಇದರ ವಿರುದ್ದ ಚಳವಳಿ ನಡೆಸುತ್ತಾರೆ. ಪೊಲೀಸರು ಮೊತ್ತಮೊದಲ ಬಾರಿಗೆ ನೇತ್ರಾವತಿ ನದಿಯಲ್ಲಿ ಸಿಕ್ಕ ಶವ ಸಂಬಂಧ ‘ಕೊಲೆ ಪ್ರಕರಣ’ ದಾಖಲಿಸುತ್ತಾರೆ. ಧರ್ಮಸ್ಥಳದ ಇತಿಹಾಸದಲ್ಲೇ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸಿಕ್ಕ ಶವ ಸಂಬಂಧ ಕೊಲೆ ಪ್ರಕರಣ ದಾಖಲಿಸಿರುವುದು ಪದ್ಮಲತಾ ಪ್ರಕರಣದಲ್ಲೇ ಮೊದಲನೆಯದ್ದು ! ಇಷ್ಟಕ್ಕೆ ಕಮ್ಯೂನಿಷ್ಟರು ಸುಮ್ಮನಾಗದೇ ಚಳವಳಿಯನ್ನು ತೀವ್ರಗೊಳಿಸುತ್ತಾರೆ. ಸಾಮಾಜಿಕ ಜಾಲತಾಣ ಬಿಡಿ, ಕನಿಷ್ಠ ಫೋನ್, ಟಿವಿ, ಸರಿಯಾದ ವಿದ್ಯುತ್ ಇಲ್ಲದ, ಹಳ್ಳಿಗಳಿಗೆ ಪತ್ರಿಕೆಯೂ ಬಾರದ ದಿನಗಳಲ್ಲೂ ಕಮ್ಯೂನಿಷ್ಟರು ರಾಜ್ಯ ಸರ್ಕಾರವನ್ನೂ,  ಮುಂ**ಸುಧಾರಿಯ ಸಾಮ್ರಾಜ್ಯವನ್ನೂ ನಡುಗಿಸುತ್ತಾರೆ. ಕಮ್ಯೂನಿಷ್ಟರ ಹೋರಾಟಕ್ಕೆ ಮಣಿದು ಪದ್ಮಲತಾ ಪ್ರಕರಣವನ್ನು ಸರ್ಕಾರ ‘ಸಿಒಡಿ’ಗೆ ವಹಿಸಿತ್ತು. ಸಿಒಡಿಯ ದಕ್ಷ, ಪ್ರಾಮಾಣಿಕ ಇನ್ಸ್ ಪೆಕ್ಟರ್ ಎಂದು ಖ್ಯಾತರಾಗಿದ್ದ ಜಗನ್ನಾಥ ರೈಯವರು 27.03.1987 ರಂದು ತನಿಖೆ ಪ್ರಾರಂಭಿಸಿದರು.

ಪದ್ಮಲತಾ ಕೊಲೆ ಪ್ರಕರಣವನ್ನು ತನಿಖೆ ಮಾಡುತ್ತಿದ್ದ ಸಿಒಡಿ ಇನ್ಸ್ ಪೆಕ್ಟರ್ ಜಗನ್ನಾಥ್ ರೈಗಳು ತನಿಖೆ ಪೂರ್ಣಗೊಳಿಸಿ ಇನ್ನೇನು ಒಂದೆರಡು ದಿನಗಳಲ್ಲಿ ಕೊಲೆ ಆರೋಪಿಗಳನ್ನು ಸಾಕ್ಷ್ಯ ಸಮೇತ ಬಂಧಿಸಲು ಸಿದ್ಧತೆ ನಡೆಸುತ್ತಿದ್ದರು. ಅದಕ್ಕಾಗಿ ಹೆಚ್ಚಿನ ಪೊಲೀಸ್ ಭದ್ರತೆಗಾಗಿ ಸಿದ್ಧತೆಯನ್ನೂ ಮಾಡಿಕೊಂಡಿದ್ದರು. ಅಷ್ಟರಲ್ಲಿ ಏನಾಯಿತು ? ಪದ್ಮಲತಾ ಕೊಲೆ ಆರೋಪಿಗಳನ್ನು ಬಂಧಿಸದಂತೆ ಕೆಲಸ ಮಾಡಿದ ಕಾಂಗ್ರೆಸ್ ಶಾಸಕ ಯಾರು ಎಂಬ ಬಗ್ಗೆ ದಿನಾಂಕ 21.01.1988ರ ವಿಧಾನಸಭೆ ಅಧಿವೇಶನದ ದಾಖಲೆಗಳಲ್ಲಿ ದಾಖಲಾಗಿದೆ. ಅದರ ಯಥಾವತ್ತು ಇಲ್ಲಿದೆ.

ದಿನಾಂಕ 21.01.1988 ರ ವಿಧಾನಸಭೆ ಅಧಿವೇಶನ ಕಲಾಪ

ವಿಷಯ :  ಉಜಿರೆ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳ ಸಾವಿನ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು.

ಕೆ. ವಸಂತ ಬಂಗೇರ(ಬೆಳ್ತಂಗಡಿ ಶಾಸಕರು) : ಮಾನ್ಯ ಅಧ್ಯಕ್ಷರೇ, ಕೆಲವು ಸಮಯದ ಹಿಂದೆ ನನ್ನ ಕ್ಷೇತ್ರವಾದ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ, ಇಲ್ಲಿಯ ವಿದ್ಯಾರ್ಥಿನಿಯಾದ ಕುಮಾರಿ ಪದ್ಮಲತಾ ಇವಳ ಸಾವಿನ ಬಗ್ಗೆ ಸಿಓಡಿ ತನಿಖೆ ನಡೆಸಬೇಕೆಂದು ವಿಧಾನಸಭೆಯಲ್ಲಿ ಒತ್ತಾಯಪಡಿಸಿದಂತೆ, ಸರ್ಕಾರ ಸಿಓಡಿ ತನಿಖೆಗೆ ಆಜ್ಞಾಪಿಸಿತ್ತು. ಸಿಒಡಿ ಸರ್ಕಲ್ ಇನ್ಸ್ ಸ್ಪೆಕ್ಟರ್ ಜಗನ್ನಾಥ ರೈ ಇವರ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಯಿತು. ಅವರು ತನಿಖೆ ನಡೆಸಿ ಒಂದು ಹಂತದಲ್ಲಿ ತಪ್ಪಿತಸ್ಥರನ್ನು ಗೊತ್ತು ಮಾಡಿ ಬಂಧಿಸುವ ಹಂತದಲ್ಲಿರುವಾಗ, ಸಿಓಡಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ,  ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ಫೈಲು ಸಮೇತ ಬೆಂಗಳೂರಿಗೆ ವಾಪಸು ಬರಬೇಕೆಂದು ಆಜ್ಞಾಪಿಸಿಸಲಾಯಿತು. ಹಿರಿಯ ಅಧಿಕಾರಿಗಳ ಆದೇಶದಂತೆ ಇನ್ಸ್ ಸ್ಪೆಕ್ಟರ್ ಜಗನ್ನಾಥ ರೈಗಳು ತನಿಖೆಯನ್ನು ತಕ್ಷಣ ನಿಲ್ಲಿಸಿ ತನಿಖೆಯ ಫೈಲು ಸಮೇತ ವಾಪಸು ಬೆಂಗಳೂರಿಗೆ ಬಂದು ಫೈಲನ್ನು ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿದರು. ಆ ಬಳಿಕ ಇನ್ಸ್ ಸ್ಪೆಕ್ಟರ್ ಜಗನ್ನಾಥ ರೈಗಳು  ರಜೆಯ ಮೇಲೆ ಮನೆಗೆ ಹೋಗುವಂತೆ ಆಜ್ಞೆಯಾಯಿತು. ಜಗನ್ನಾಥ  ರೈಗಳು ರಜೆ ಹಾಕಿ ಮನೆಗೆ ಹೋದರು. ಅದರ ನಂತರ ಸದರಿ ಕೇಸಿನ ತನಿಖೆಗಾಗಿ ಡಿವೈಎಸ್ಪಿ ಯವರನ್ನು ಕಳುಹಿಸಲಾಯಿತು, ಡಿವೈಎಸ್ಪಿ ಯವರು ಸಿಓಡಿ ಹಿರಿಯ ಆಧಿಕಾರಿಗಳ ಆದೇಶದಂತೆ ಬೆಳ್ತಂಗಡಿ ತಾಲ್ಲೂಕಿಗೆ ಬಂದು ಒಂದು ತಿಂಗಳು ಕಾಲಹರಣ ಮಾಡಿ, ಯಾವುದೇ ರೀತಿಯ ತನಿಖೆ ನಡೆಸದೆ ‘ತಪ್ಪಿತಸ್ಥರ ಪತ್ತೆಯಾಗುವುದಿಲ್ಲ’ ಎಂದು ಕೇಸ್ ಫೈಲನ್ನು ಪೂರ್ಣಗೊಳಿಸಿ ತನಿಖೆಗೆ ಇತಿಶ್ರೀ ಹಾಡಿ ಫೈಲನ್ನು ಕ್ಲೋಸ್ ಮಾಡಿದ್ದಾರೆ. ಪದ್ಮಲತಾ ಮರ್ಡರ್ ಕೇಸ್ ನಲ್ಲಿ ಶಾಮೀಲಾಗಿರುವ ಕೊಲೆಗಡುಕನನ್ನು ಸಿಓಡಿ ಅಧಿಕಾರಿಗಳು ಬಂಧಿಸಿ, ಕೇಸು ದಾಖಲು ಮಾಡುವ ಬದಲು ಅವರಿಗೆ ರಕ್ಷಣೆ ಕೊಟ್ಟು ಇನ್ನೂ ಹೆಚ್ಚು ಕೊಲೆ ಮಾಡುವಂತೆ ಪ್ರೋತ್ಸಾಹವನ್ನು ಕೊಟ್ಟರು. ಅಲ್ಲದೇ, ಕಳೆದ ವಿಧಾನ ಸಭೆಯಲ್ಲಿ ಈ ವಿಚಾರದಲ್ಲಿ ಗೃಹ ಸಚಿವರಿಗೆ ಪ್ರಶ್ನೆ ಹಾಕಿದಾಗ ಅಧಿಕಾರಿಗಳಿಂದ ಬಂದ ಸತ್ಯಕ್ಕೆ ದೂರವಾದ ಉತ್ತರವನ್ನು ಗೃಹ ಸಚಿವರು ಸದನದಲ್ಲಿ ಓದಿದರು. ಪದ್ಮಲತಾ ಮರ್ಡರ್ ಕೇಸಿನಲ್ಲಿ ಶಾಮೀಲಾದ ಕೊಲೆಗಡುಕರನ್ನು ಪತ್ತೆಹಚ್ಚಲು  ಜಗನ್ನಾಥ ರೈ, ಸರ್ಕಲ್‌ ಇನ್ಸ್‌ಪೆಕ್ಟರ್ ಆಫ್ ಪೋಲಿಸ್ (ಸಿಓಡಿ) ಇವರನ್ನೆ ತನಿಖೆ ಮಾಡಲು ಕಳುಹಿಸಿಕೊಡಬೇಕೆಂದು ಈ ಮೂಲಕ ವಿನಂತಿಸುತ್ತೇನೆ. ಅಲ್ಲದೇ ಕೊಲೆಗಡುಕರಿಗೆ ರಕ್ಷಣೆ ಒದಗಿಸಿ ಕೊಲೆಯನ್ನು ಮರೆ ಮಾಡಲು ಪ್ರಯತ್ನಿಸಿದ ಸಿಓಡಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ಎ. ಲಕ್ಷ್ಮೀಸಾಗರ್, ಕಾನೂನು ಸಚಿವರು (ಗೃಹ ಸಚಿವರ ಪರವಾಗಿ) : ಮಾನ್ಯ ಅಧ್ಯಕ್ಷರೇ, ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪದ್ಮಲತಾರವರ ಕೊಲೆ ಸಂಬಂಧವಾದ ಬೆಳ್ತಂಗಡಿ ಠಾಣೆಯ ಅಪರಾಧ ಸಂಖ್ಯೆ 17/87 ಐಪಿಸಿ ಕಲಂ 302, 201 ಅಡಿಯಲ್ಲಿ ಮೊಕದ್ದಮೆ ದಾಖಲು ಮಾಡಿಕೊಂಡಿದ್ದು, ಅದನ್ನು ಸಿಓಡಿ ತನಿಖೆಗೆ ವಹಿಸಲಾಯಿತು. ಸಿಓಡಿ ಇನ್ಸ್‌ ಪೆಕ್ಟರ್‌ರಾದ ಜಗನ್ನಾಥ ರೈ ಅವರಿಗೆ ಈ ಕೇಸಿನ ತನಿಖೆಯನ್ನು ಒಪ್ಪಿಸಲಾಗಿತ್ತು. ಈ ಬಗ್ಗೆ ಶಾಸಕರಾದ ವಿನಯಕುಮಾರ್ ಸೊರಕೆಯವರು ದಿನಾಂಕ 25 ನೇ ಮಾರ್ಚ್ 1987 ರಂದು ಗೃಹ ಮಂತ್ರಿಯವರಿಗೆ ʼಇನ್ಸ್ ಪೆಕ್ಟರ್ ಜಗನ್ನಾಥ್‌ ರೈರವರು ಅದೇ ಸ್ಥಳದವರಾಗಿದ್ದು, ಅವರಿಂದಲೇ ತನಿಖೆಯನ್ನು ಮುಂದುವರೆಸುವುದು ಸೂಕ್ತವಲ್ಲʼ ವೆಂದು ಮನವಿ ಸಲ್ಲಿಸಿದ್ದರು. ಹಾಗಾಗಿ, ಗೃಹ ಮಂತ್ರಿಯವರು ಪ್ರಕರಣದ ತನಿಖೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಲು ಆದೇಶಿಸಿದರು. ಸದರಿ ಆದೇಶದಂತೆ ಸಿಓಡಿ ಡೆಪ್ಯುಟಿ ಪೊಲೀಸ್ ಸೂಪರಿಂಟೆಂಡೆಂಟ್ ಹೆಚ್ ಎಂ ಮರಿಸ್ವಾಮಿ ಅವರಿಗೆ ತನಿಖೆಯನ್ನು ವಹಿಸಲಾಯಿತು. ತನಿಖೆಯಲ್ಲಿ ಅಂತಹ ವ್ಯತ್ಯಾಸವೇನೂ ಕಾಣಲ್ಲ.

ವಿನಯಕುಮಾರ್ ಸೊರಕೆ :  ಮಾನ್ಯ ಅಧ್ಯಕ್ಷರೇ,….

(ಹಲವು ಸದಸ್ಯರು ಎದ್ದು ಮಾತನಾಡುತ್ತಿದ್ದರು)

(ಗದ್ದಲ)


ಅಧ್ಯಕ್ಷರು : ಈಗ ದಯವಿಟ್ಟು ತಾವು ಕುಳಿತುಕೊಳ್ಳಬೇಕು. ತಾವು ಹೊಸಬರು, ಮೂರು ವರ್ಷಗಳಾದರೂ ಬೇಕಾಗುತ್ತದೆ. ತಾವು ಇನ್ನೂ ನಿಯಮಗಳನ್ನು ಓದಿಲ್ಲ. ಕುಳಿತುಕೊಳ್ಳಿ.

(ಗೊಂದಲ)

ಅಧ್ಯಕ್ಷರು : ನೀವು ಹೀಗೆ ಗಲಾಟೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ.

ಇದು ವಿಧಾನಸಭೆಯ ದಾಖಲೆಗಳು ಹೇಳುವ ಸತ್ಯ. 80 ರ ದಶಕದಿಂದಲೂ ಧರ್ಮಸ್ಥಳ ಗ್ರಾಮದ ಕೊಲೆ ಆರೋಪಿಗಳನ್ನು ಕಾಂಗ್ರೆಸ್ ರಕ್ಷಿಸುತ್ತಲೇ ಬಂದಿದೆ. ಈಗ ಮಹಿಳಾ ಆಯೋಗ ಹೇಳಿದರೂ, ಸುಪ್ರಿಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು  ಮನವಿ ಮಾಡಿದರೂ ಸಿದ್ದರಾಮಯ್ಯ ಸರ್ಕಾರ ಬಗ್ಗದೇ ಕೊಲೆ ಆರೋಪಿಗಳನ್ನು ರಕ್ಷಿಸುತ್ತಿದೆ ಎಂಬ ಅನುಮಾನ ಜನರಲ್ಲಿದೆ.

ಅಂದು ಕಾಂಗ್ರೆಸ್ ಶಾಸಕ ಮಧ್ಯಪ್ರವೇಶ ಮಾಡಿ ಪತ್ರ ನೀಡದೇ ಇದ್ದಲ್ಲಿ ಪದ್ಮಲತಾ ಕೊಲೆ ಆರೋಪಿಗಳು ಬಂಧನ ಆಗುತ್ತಿದ್ದರು. ಅಂದು ಪದ್ಮಲತಾ ಕೊಲೆ ಆರೋಪಿಗಳನ್ನು ರಕ್ಷಿಸಿದ್ದ ಅದೇ ಕಾಂಗ್ರೆಸ್ ಶಾಸಕ ಸೌಜನ್ಯ ಕೊಲೆ ಆರೋಪಿಗಳನ್ನು ರಕ್ಷಿಸುವ ಸಮಾವೇಶಕ್ಕೆ ಹಾಜರಾಗಿ ವೀರಾವೇಶದ ಮಾತುಗಳನ್ನಾಡಿದ್ದರು. ನೂರಾರು ಕೊಲೆಯ ಹಿಂದಿರುವ ಫ್ಯೂಡಲ್ ಮುಂ**ಸುಧಾರಿ ಪ್ರಾರಂಭದಿಂದ ಇಂದಿನವರೆಗೂ ಫ್ಯಾಸಿಸಂನ  ಪೋಷಕರಾಗಿದ್ದಾರೆ. ಅವರನ್ನು ರಕ್ಷಿಸುತ್ತಿರುವ ಕಾಂಗ್ರೆಸ್ ನ ಇಂತಹ ನಿಲುವುಗಳೇ ಕರಾವಳಿಯಲ್ಲಿ ಕಾಂಗ್ರೆಸ್ ನಾಶವಾಗಲು ಕಾರಣವಾಗಿದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಧರ್ಮಸ್ಥಳದಲ್ಲಿ ಹೂತ ಶವಗಳಿಗೆ ಸಾಕ್ಷ್ಯ ! ಪ್ರತ್ಯಕ್ಷದರ್ಶಿಗಳು ನಾಪತ್ತೆ, ಹೆಣ ಕೇಳಿದವರಿಗೆ ಚಿತ್ರಹಿಂಸೆ !

More articles

Latest article