ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭವನೀಯ ಯುದ್ಧವನ್ನು ನಿಲ್ಲಿಸಲು ನಿರ್ಣಾಯಕ ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಸಂಸತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
ಆದರೆ ನಿನ್ನೆಯಷ್ಟೇ ಡೊನಾಲ್ಡ್ ಟ್ರಂಪ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಗೆ ಪಾಕಿಸ್ತಾನ ಸರ್ಕಾರ ಶಿಫಾರಸು ಮಾಡಿದೆ. ನಾನು ನಾಲ್ಕೈದು ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಬೇಕಿತ್ತು. ಆದರೆ, ಯಾರೂ ನನ್ನ ಕೊಡುಗೆಯನ್ನು ನೆನಪಿಸಿಕೊಳ್ಳುವುದಿಲ್ಲ. ನನಗೆ ಪ್ರಶಸ್ತಿಯನ್ನೂ ನೀಡುವುದಿಲ್ಲ. ಏಕೆಂದರೆ ಆ ಪ್ರಶಸ್ತಿಯನ್ನು ಉದಾರವಾದಿಗಳಿಗೆ ಮಾತ್ರ ನೀಡುತ್ತಾರೆ ಎಂದು ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಭಾರತ- ಪಾಕಿಸ್ತಾನ, ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ಸಂಘರ್ಷ ಸಮಯದಲ್ಲಿ ಶಾಂತಿ ಮಾತುಕತೆ ಮೂಲಕ ಶಮನ ಮಾಡಿಕೊಳ್ಳಲು ಸಲಹೆ ನೀಡಿದ್ದೆ. ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದರು.
ಕಾಂಗೊ ಮತ್ತು ರುವಾಂಡಾ ನಡುವಿನ ಸಂಘರ್ಷ ಬಗೆಹರಿಸಲೂ ಕ್ರಮ ಕೈಗೊಂಡಿದ್ದು ಎರಡು ದೇಶಗಳ ನಡುವೆ ಒಪ್ಪಂದವನ್ನು ಏರ್ಷಡಿಸಿದ್ದೇನೆ. ರುವಾಂಡಾ ಮತ್ತು ಕಾಂಗೊದ ಪ್ರತಿನಿಧಿಗಳು ಸೋಮವಾರ ವಾಷಿಂಗ್ಟನ್ ಗೆ ಆಗಮಿಸಿ ಒಪ್ಪಂದದ ದಾಖಲೆಗಳಿಗೆ ಸಹಿ ಹಾಕಲಿದ್ದಾರೆ. ಈ ಬೆಳವಣಿಗೆ ಆಫ್ರಿಕಾಕ್ಕೆ ಶ್ರೇಷ್ಠ ದಿನವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಇಂತಹ ಅನೇಕ ಸಂಘರ್ಷದ ಸಮಯಗಳಲ್ಲಿ ಮಧ್ಯಸ್ಥಿಕೆ ವಹಿಸಿ ಹೆಚ್ಚಿನ ರಕ್ತಪಾತವಾಗದಂತೆ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹಲವು ದೇಶಗಳಿಗೆ ಸಲಹೆ ನೀಡಿದ್ದೇನೆ. ಭೀಕರ ಯುದ್ಧಗಳು ನಡೆಯದಂತೆ ತಡೆಯುವಲ್ಲಿ ನನ್ನ ಪಾತ್ರವೇನು ಎಂಬುದು ಜನರಿಗೆ ತಿಳಿದಿದೆ. ಅಷ್ಟೇ ಸಾಕು, ಯಾವ ಪ್ರಶಸ್ತಿಯೂ ಬೇಡ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷ ನನ್ನ ಮಧ್ಯಸ್ಥಿಕೆಯಿಂದ ನಿಂತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನೇಕ ಬಾರಿ ಹೇಳಿಕೊಂಡಿದ್ದರು. ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವವರ ಜತೆಗೆ ನಮ್ಮ ಆಡಳಿತವು ಯಾವುದೇ ವ್ಯಾಪಾರ ನಡೆಸುವುದಿಲ್ಲ ಎಂಬುದನ್ನು ಉಭಯ ದೇಶಗಳಿಗೆ ಮನದಟ್ಟು ಮಾಡಿಕೊಡುವ ಮೂಲಕ ಭಾರತ ಮತ್ತು ಪಾಕ್ ನಡುವಿನ ಹೋರಾಟವನ್ನು ನಾವು ನಿಲ್ಲಿಸಿದ್ದೇವೆ. ಇಲ್ಲದಿದ್ದರೆ ಇದು ಪರಮಾಣು ವಿಪತ್ತಾಗಿ ಬದಲಾಗುವ ಸಂಭವ ಇತ್ತು ಎಂದೂ ಹೇಳಿಕೆ ನೀಡಿದ್ದರು.