ನವದೆಹಲಿ: ಯಾವ ಯಾವ ವಿಷಯಗಳನ್ನು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಮೂರು ರಾಷ್ಟ್ರಗಳ ಪ್ರವಾಸದ ಮುಗಿಸಿ ಹಿಂತಿರುಗಿದ ಕೂಡಲೇ ಪ್ರಧಾನಿ ಮೋದಿ ಸರ್ವಪಕ್ಷ ಸಭೆಯನ್ನು ಕರೆದು ವಿಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದೂ ಆಗ್ರಹಪಡಿಸಿದೆ. ಎಕ್ಸ್ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಈ ಆಗ್ರಹ ಮಾಡಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರಿಗೆ ಡೊನಾಲ್ಡ್ ಟ್ರಂಪ್ ಔತಣಕೂಟ ಏರ್ಪಡಿಸಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಕಾಂಗ್ರೆಸ್, ಇದು ಭಾರತದ ಪಾಲಿಗೆ ಆಘಾತಕಾರಿ ಹಿನ್ನಡೆ ಎಂದು ಬಣ್ಣಿಸಿದೆ. ಈ ಬೆಳವಣಿಗೆ ಕುರಿತು ದೂರವಾಣಿ ಸಂಭಾಷಣೆ ನಡೆಸುವಾಗ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಬೇಕಿತ್ತು ಎಂದು ತಿಳಿಸಿದೆ.
ಕಾರ್ಗಿಲ್ ಪರಿಶೀಲನಾ ಸಮಿತಿ ರೀತಿಯಲ್ಲಿ ಪಹಲ್ಗಾಮ್ ಪರಿಶೀಲನಾ ಸಮಿತಿಯನ್ನು ರಚಿಸಬೇಕು. ಭಾರತೀಯ ರಾಜತಾಂತ್ರಿಕತೆಗೆ ತ್ರಿವಳಿ ಆಘಾತ ಎದುರಾಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯನ್ನು ರೂಪಿಸಿರುವ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಫೀಲ್ಡ್ ಮಾರ್ಷಲ್ ಮುನೀರ್ ಅವರು ಟ್ರಂಪ್ ಅವರೊಂದಿಗೆ ಔತಣಕೂಟದಲ್ಲಿ ಭಾಗಿಯಾಗಲಿರುವುದು ಭಾರತದ ಪಾಲಿಗೆ ದೊಡ್ಡ ಹಿನ್ನಡೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್ ಪ್ರಮುಖ ಪಾಲುದಾರ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥರಾದ ಜನರಲ್ ಮೈಕೆಲ್ ಕುರಿಲ್ಲಾ ಹೇಳಿದ್ದಾರೆ. 2011ರಲ್ಲಿ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ನೀಡಿದ್ದ ಪಾಕಿಸ್ತಾನ ಹೇಗೆ ಪಾಲುದಾರನಾಗುತ್ತದೆ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
‘ಮೂರನೆಯದಾಗಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದು ತಾನೇ ಎಂದು ಟ್ರಂಪ್ ಈಗಾಗಲೇ 14 ಬಾರಿ ಹೇಳಿಕೆ ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಈವರೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಸುಮಾರು 35 ನಿಮಿಷ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ತಿಳಿಸಿದ್ದಾರೆ.