ಅಪಪ್ರಚಾರದಲ್ಲೇ 11 ವರ್ಷ ಕಳೆದ ಪ್ರಧಾನಿ ಮೋದಿ; ರಾಹುಲ್‌ ಗಾಂಧಿ ಕಟುಟೀಕೆ

Most read

ನವದೆಹಲಿ: 11 ವರ್ಷಗಳ ತಮ್ಮ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಪಪ್ರಚಾರದಲ್ಲಿ ಕಾಲ ಕಳೆದರೇ ಹೊರತು ಯಾವುದೇ ಬದ್ಧತೆಯನ್ನು ಪ್ರದರ್ಶಿಸಲಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅವರ ಸರ್ಕಾರ 11 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಎಕ್ಸ್‌ ಮೂಲಕ ವಾಗ್ದಾಳಿ ನಡೆಸಿದ್ದಾರೆ.  ವಾಸ್ತವದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿರುವ ಕೇಂದ್ರ ಸರ್ಕಾರ ಈಗ 2047ರ ಕನಸುಗಳನ್ನು ಮಾರಾಟ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಲೋಕಲ್ ರೈಲಿನಿಂದ ಬಿದ್ದು, ನಾಲ್ವರು ಮೃತಪಟ್ಟು, 6 ಮಂದಿ ಗಾಯಗೊಂಡ ಪ್ರಕರಣವನ್ನು ಅವರು ಪ್ರಸ್ತಾಪಿಸಿ ಟೀಕಿಸಿದ್ದಾರೆ. ದೇಶಕ್ಕೆ 11 ವರ್ಷಗಳು ಸೇವೆ ಮಾಡಿರುವುದಾಗಿ ಮೋದಿ ಸರ್ಕಾರ ಸಂಭ್ರಮಿಸುತ್ತಿದೆ. ದೇಶದ ವಾಸ್ತವವನ್ನು ಮುಂಬೈನಿಂದ ಬರುತ್ತಿರುವ ದುರಂತದ ಸುದ್ದಿಯು ಪ್ರತಿಬಿಂಬಿಸುತ್ತಿದೆ. ರೈಲಿನಿಂದ ಬಿದ್ದು ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

ಭಾರತೀಯ ರೈಲ್ವೆ ಕೋಟ್ಯಂತರ ಜನರ ಜೀವನದ ಬೆನ್ನೆಲುಬಾಗಿತ್ತು. ಆದರೆ, ಇಂದು ಅದು ಅಭದ್ರತೆ, ಜನದಟ್ಟಣೆ ಮತ್ತು ಅವ್ಯವಸ್ಥೆಯ ಸಂಕೇತವಾಗಿ ಬದಲಾಗಿದೆ. ಮೋದಿ ಸರ್ಕಾರದ 11 ವರ್ಷಗಳ ಆಡಳಿತದಲ್ಲಿ ಯಾವುದೇ ಹೊಣೆಗಾರಿಕೆ ಪ್ರದರ್ಶಿಸಿಲ್ಲ. ಬದಲಾವಣೆ ಇಲ್ಲ, ಕೇವಲ ಅಪಪ್ರಚಾರ ಮಾಡುತ್ತಾ ಬಂದಿದೆ. ಸರ್ಕಾರ 2025ರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದು, ಈಗ 2047ರ ಕನಸುಗಳನ್ನು ಮಾರಾಟ ಮಾಡುತ್ತಿದೆ ಎಂದು ರಾಹುಲ್ ಕುಟುಕಿದ್ದಾರೆ.

More articles

Latest article