ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ದೆಹಲಿಗೆ ತೆರಳಲಿದ್ದು ಅವರ ಈ ಭೇಟಿ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರೈಸಿದ ಬೆನ್ನಲ್ಲೇ ಚಿನ್ನಸ್ಡಾಮಿ ಕ್ರೀಡಾಂಗಣದಲ್ಲಿ 11 ಮಂದಿ ಸಾರ್ವಜನಿಕರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಈ ಘಟನೆ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಈ ಪ್ರಕರಣ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವೊದಗಿಸಿತ್ತು. ನಾಳೆ ಅವರು ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಘಟನಾವಳಿಗಳ ವಿವರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಪರಿಷತ್ ಸದಸ್ಯರ ನಾಮಕರಣ ಕುರಿತೂ ಮುಖ್ಯಮಂತ್ರಿಗಳು ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರವೇ ದೆಹಲಿ ತಲುಪಿದ್ದಾರೆ. ಅವರು, ಮಾತನಾಡಿ ಬೆಂಗಳೂರು ಮಹಾನಗರ ಪಾಲಿಕೆಯ, ನಗರ ಯೋಜನೆಯ 10-15 ಸದಸ್ಯರು ದೆಹಲಿಗೆ ಭೇಟಿ ನೀಡುತ್ತಿದ್ದೇವೆ. ನಮ್ಮಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಇದೆ. ಹೈದರಾಬಾದ್, ಚೆನ್ನೈಗೂ ಭೇಟಿ ಕೊಟ್ಟಿದ್ದೇನೆ. ಕೆಲವು ಪ್ರಸ್ತಾವಗಳು ಸರ್ಕಾರದ ಮುಂದಿವೆ. ದೆಹಲಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ವಿಶಿಷ್ಠ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಅದರ ಬಗ್ಗೆ ತಿಳಿಯಲು ನಮ್ಮ ತಂಡವನ್ನು ಅವರು ಆಹ್ವಾನಿಸಿದ್ದಾರೆ. ಹಾಗಾಗಿ, ನಾವು ತೆರಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.