ಎಲ್ಲರಂತೆ ಇರಲಿಲ್ಲ ಶಿವಮೊಗ್ಗದ ಈ ಅಲೆಮಾರಿ ಮಕ್ಕಳ ಸಾಧನೆ

Most read

ಮೊನ್ನೆ ಪಿಯುಸಿ ಫಲಿತಾಂಶಗಳನ್ನು ಪ್ರಕಟವಾಗುತ್ತಿದ್ದಂತೆ ಶಿವಮೊಗ್ಗದ ಬೈಪಾಸ್ ನಲ್ಲಿರುವ ಅಲೆಮಾರಿ  ಕ್ಯಾಂಪಿನ 40-50 ಕುಟುಂಬಗಳಲ್ಲಿ ಒಂದು ಬಗೆಯ ಸಂಭ್ರಮದ ವಾತಾವರಣ ತುಂಬಿಕೊಂಡಿತ್ತು. ಈ ಅಲೆಮಾರಿ ಕ್ಯಾಂಪಿನ ಇಬ್ಬರು ಪಿಯುಸಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸ್ ಆಗಿದ್ದೇ ಅದಕ್ಕೆ ಕಾರಣ. ಶಿವಮೊಗ್ಗದ ಡಿವಿಎಸ್ ಕಾಲೇಜಿನ ಕಾಮರ್ಸ್ ವಿಭಾಗದಲ್ಲಿ ಎರಡನೇ ಪಿಯುಸಿ ಓದುತ್ತಿದ್ದ ಗೀತಾ ಎನ್ ಎಂಬ ವಿದ್ಯಾರ್ಥಿನಿ 600 ಕ್ಕೆ 507 ಮತ್ತು ಗಣೇಶ್ ಎಂ 600 ಕ್ಕೆ 403 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ.

ಹಾಗೆ ನೋಡಿದರೆ ಸಾಮಾನ್ಯ ಸಂದರ್ಭದಲ್ಲಿ ಇಷ್ಟು ಅಂಕ ಗಳಿಸಿ ಪಾಸಾಗುವುದೇನೂ ದೊಡ್ಡ ವಿಷಯವಲ್ಲ. ಆದರೆ, ಶಿವಮೊಗ್ಗ ಬೈಪಾಸ್‌ ಅಲೆಮಾರಿ ಕ್ಯಾಂಪಿನಲ್ಲಿ ಹುಟ್ಟಿ ಬೆಳೆದ ಈ ಇಬ್ಬರು ಮಕ್ಕಳು ಈ  ಮಟ್ಟಿಗಿನ ಸಾಧನೆ ಮಾಡಿರುವುದು  ಸಾಮಾನ್ಯ ಸಂಗತಿಯಲ್ಲ. ಯಾಕೆಂದರೆ, ಅವರು ಶಾಲೆ ಕಲಿತಿದ್ದು, ಹೈಸ್ಕೂಲ್‌ ಪಾಸಾಗಿ ಪಿಯು ಕಾಲೇಜು ಸೇರಿ ಈಗ ಪಾಸಾಗಿದ್ದು ಎಲ್ಲವೂ ಸಹ ಕೆಲವೇ ವರ್ಷಗಳ ಹಿಂದೆ ಇಂತಹದೊಂದನ್ನು ಕನಸು ಮನಸಿನಲ್ಲಿಯೂ ಊಹಿಸಲು ಸಾಧ್ಯವಾಗದ,  ಅತ್ಯಂತ ಅಸಂಭವವೆನಿಸುವ ವಾತಾವರಣದಲ್ಲಿ.

ಈ ಇಬ್ಬರು ಮಕ್ಕಳು ಪಿಯುಸಿ ಪಾಸಾಗಿರುವ ಸಂದರ್ಭದಲ್ಲಿ ಕನ್ನಡ ಪ್ಲಾನೆಟ್‌ ಅವರಿಬ್ಬರನ್ನೂ ಸಂಪರ್ಕಿಸಿ ಮಾತಾಡಿಸಿತು. ಮೊದಲಿಗೆ ವಿದ್ಯಾರ್ಥಿನಿ ಗೀತಾಳನ್ನು ಮಾತಾಡಿಸಿದಾಗ ಅವರು ಅವರು ಪ್ರತಿಕ್ರಿಯಿಸಿದ್ದು ಹೀಗೆ:

ಕನ್ನಡ ಪ್ಲಾನೆಟ್:‌ ಗೀತಾ ಅವರೆ, ನಿಮಗೆ ಕಾಂಗ್ರಾಜುಲೇಶನ್ಸ್.‌

ಗೀತಾ: ಥ್ಯಾಂಕ್ಯು ಸರ್.

ಕನ್ನಡ ಪ್ಲಾನೆಟ್:‌  ಅಲೆಮಾರಿ ಕ್ಯಾಂಪಿನ ಮಕ್ಕಳಾಗಿ ನೀವು ಡಿ ವಿ ಎಸ್‌ ಕಾಲೇಜಿನಲ್ಲಿ ಪಿಯುಸಿ ಓದಿ ಉತ್ತಮ ಅಂಕಗಳಿಸಿ ಪಾಸಾಗಿದ್ದೀರಿ. ಈ ಸಂದರ್ಭದಲ್ಲಿ ಏನನ್ನು ಹೇಳಲು ಬಯಸುತ್ತೀರ?

ಗೀತಾ: ಸರ್‌, ನಮಗೆ ತುಂಬಾ ಖುಶಿಯಾಗಿದೆ. ಇಲ್ಲಿ ಜಾರ್ಜ್‌ ಸರ್‌ ಅಂತ ಇದ್ದಾರೆ. ನಮಗೆ ಒಂದನೇ ಕ್ಲಾಸಿಂದ ಹಿಡಿದು ಅವರೇ ನಮ್ಮನ್ನು ಓದಿಸಿರುವುದು ಸರ್.‌  ನಮ್ಮ ಮನೆಯಲ್ಲಿ ಓದಲು ಲೈಟಿಲ್ಲ ಸರ್.‌ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ದೇವರಾಜ ಅರಸು ಭವನದ ಆಫೀಸನ ಮೆಟ್ಟಿಲು ಮೇಲೆ ಪ್ರತಿದಿನ ಜಾರ್ಜ್‌ ಸರ್‌ ಸಂಜೆ ಬಂದು ನಮಗೆ ಓದಿಸುತ್ತಿದ್ದರು. ರಾತ್ರಿ ಹತ್ತು ಗಂಟೆಯವರೆಗೂ ಅವರು ನಮ್ಮನ್ನು ಓದಿಸ್ತಿದ್ರು. ನಾವು ಒಂದನೇ ತರಗತಿಯಿಂದ ಇಲ್ಲಿಯವರೆಗೆ ಒಂದು ದಿನವೂ ತಪ್ಪದೇ ಅವರು ಬಂದು ಪಾಠ ಹೇಳಿಕೊಟ್ಟು ಓದಿಸಿದ್ದರಿಂದಲೇ  ನಾವು ಓದಲು ಸಾಧ್ಯವಾಯ್ತು ಸರ್.‌ ನಾವು ಇಲ್ಲಿಗಂಟ ಬರೋದಕ್ಕೆ ಜಾರ್ಜ್‌ ಸರ್‌ ಅವರೇ ಕಾರಣ ಸರ್.‌ ನಮ್ಮ ಮನೆಯಲ್ಲಿ ಓದಲು ತುಂಬಾ ಕಷ್ಟ. ಅಪ್ಪ ಅಮ್ಮ ಸ್ಟವ್‌ ರಿಪೇರಿ ಯಾಪಾರಕ್ಕೆ ಹೋಗ್ತಾರೆ. ಅಮ್ಮನೂ ಅಷ್ಟೇ.

ಕನ್ನಡ ಪ್ಲಾನೆಟ್:‌ ಮುಂದೆ ಏನು ಓದಬೇಕು ಅಂತಿದೀರಾ? ನಿಮ್ಮ ಕನಸೇನಿದೆ?

ಗೀತಾ: ನಾನು ಬ್ಯಾಂಕ್‌ ನಲ್ಲಿ ಕೆಲಸ ಮಾಡಬೇಕು ಅಂತ ಇದೆ ಸರ್.‌ ನಾವು ಓದಿ ಏನಾದರೂ ಸಾಧನೆ ಮಾಡಿದ್ರೆ ಇಲ್ಲಿರೋರೆಲ್ಲಾ ನಮ್ಮನ್ನು ನೋಡಿ ಕಲಿತಾರಲ್ಲ, ಮುಂದೆ ಎಲ್ಲರೂ ತಮ್ಮ ಮಕ್ಕಳನ್ನು ಓದಿಸುತ್ತಾರಲ್ಲ ಅಂತ ಆಸೆ ಇದೆ ಸರ್.‌

ಕನ್ನಡ ಪ್ಲಾನೆಟ್:‌ ಬೇರೆ ಯಾರಾದ್ರೂ ಓದಿದ್ದಾರಾ ನಿಮ್ಮ ಕ್ಯಾಂಪಿನಲ್ಲಿ?

ಗೀತಾ: ನಮ್ಮ ತರಾನೇ ನಮ್ಮ ಅಕ್ಕ ಒಬ್ರು ಪಿಯುಸಿ ಪಾಸಾಗಿ ಈಗ ಡಿಗ್ರಿ ಓದ್ತಾ ಇದಾರೆ ಸರ್.‌ ಸಧ್ಯ ಕಾಲೇಜು ಮೆಟ್ಟಿಲು ಹತ್ತಿರುವುದು ನಾವು ಮೂರೇ ಜನ ಸರ್‌

ಕನ್ನಡ ಪ್ಲಾನೆಟ್:‌ ನಿಮ್ಮ ಕ್ಯಾಂಪಿನ ಮಕ್ಕಳಿಗೆ ಓದಲು ಸರ್ಕಾರ ಯಾವ ರೀತಿ ಬೆಂಬಲ ನೀಡಬೇಕು?

ಗೀತಾ: ಸರ್‌, ನಮಗೆ ಇಲ್ಲಿ ಓದಿಕೊಳ್ಳಲು ಲೈಟ್‌ ವ್ಯವಸ್ಥೆ ಇಲ್ಲ. ಇಲ್ಲಿ ನಮ್ಮ ಮನೆಗಳಲ್ಲಿ ಓದಲು ಮನಸೇ ಬರುವುದಲ್ಲ. ಅಷ್ಟು ಕೆಟ್ಟ ಪರಿಸ್ಥಿತಿಯಲ್ಲಿದ್ದೀವಿ. ಜಾರ್ಜ್‌ ಸರ್‌, ನಾವು ಚಿಕ್ಕವರಿದ್ದಾಗ ನಮ್ಮ ಟೆಂಟ್‌ ಮನೆಗಳಲ್ಲಿಯೇ ಬಂದು ಪಾಠ ಮಾಡ್ತಾ ಇದ್ರು. ಈಗ ಅಲ್ಲಿ ಪಾಠ ಹೇಳಿಕೊಡ್ತಾರೆ.

ಗೀತಾ ಅವರ ಜೊತೆ ಮಾತಿನ ನಂತರ ಮತ್ತೊಬ್ಬ ವಿದ್ಯಾರ್ಥಿ ಗಣೇಶ್‌ ಅವರನ್ನು ಕನ್ನಡ ಪ್ಲಾನೆಟ್‌ ಮಾತಾಡಿಸಿದಾಗ:

ಕನ್ನಡ ಪ್ಲಾನೆಟ್:‌ ಹಾಯ್‌ ಗಣೇಶ್‌, ಕಂಗ್ರಾಜುಲೇಶನ್ಸ್‌, ಮತ್ತೆ ಏನನುಸ್ತಾ ಇದೆ?

ಗಣೇಶ್:‌ ಥ್ಯಾಂಕ್ಯು ಸರ್.‌ ಇಲ್ಲಿ ನಾವು ಕಷ್ಟಪಟ್ಟಿರೋದಕ್ಕಿಂತಲೂ ನಮ್ಮ ಸರ್‌ ಇದ್ದಾರಲ್ಲಾ ಜಾರ್ಜ್‌ ಸರ್‌, ಅವರೇ ನಮ್ಮನ್ನೆಲ್ಲಾ ಶಾಲೆಗೆ ಕಳಿಸಿ ಓದಿಸುವುದಕ್ಕೆ.ತುಂಬಾ ಕಷ್ಟಪಟ್ಟಿರೋದು. ನಾವು ಓದಿ ಸುಮ್ನೆ ಅಂಕಗಳಿಸಿದ್ದೀವಿ ಸರ್‌

ಕನ್ನಡ ಪ್ಲಾನೆಟ್:‌ ಮುಂದೆ ಏನು ಮಾಡಬೇಕು ಅಂತ ಇದ್ದೀರ? ಯಾಕೆ ಕಾರ್ಮಸ್‌ ತಗೊಂಡಿದ್ರಿ?

ಗಣೇಶ್:‌ ನಾನು ಮುಂದೆ ಸಿಎ ಮಾಡಬೇಕು ಸರ್.‌ ಈಗ ಬಿಕಾಂ ಸೇರಿಕೊಂಡು ಮುಂದೆ ಸಿಎ ಪರೀಕ್ಷೆ ಬರೀಬೇಕಂತಿದ್ದೀನಿ. ಅದು ನನ್ನ ಗುರಿ ಸರ್.‌ ಸಿಎ ಮಾಡಿದ್ರೆ ಒಂದು ರೆಸ್ಪೆಕ್ಟ್‌ ಇರತ್ತೆ ಸರ್.‌ ಸರ್‌ ಇಲ್ಲಿ ಇರೋ ಅಲೆಮಾರಿ ಮಕ್ಕಳ ತಂದೆ ತಾಯಿ, ಮುಂದೆ ಓದಿ ಏನು ಮಾಡೋದೈತಿ ಅಂತ ಓದುವುದರ ಬಗ್ಗೆ ನಿರ್ಲಕ್ಷ್ಯ ಮಾಡ್ತಾ ಇದ್ದಾರೆ. ಅದೇ ನಾವು ಓದಿ ಒಳ್ಳೆ ಕೆಲಸ ತಗೊಂಡ್ರೆ ಉಳಿದವರಿಗೂ ಚನ್ನಾಗಿ ಓದಲು ಆಸೆ ಬರುತ್ತೆ ಸರ್.‌

ಕನ್ನಡ ಪ್ಲಾನೆಟ್:‌ ತುಂಬಾ ಸಂತೋಷ ಗಣೇಶ್.‌ ಚನ್ನಾಗಿ ಓದಿ. ಆಲ್‌ ದ ಬೆಸ್ಟ್‌

ಗಣೇಶ್:‌ ಥ್ಯಾಂಕ್ಯು ಸರ್‌

ವಿದ್ಯಾರ್ಥಿನಿ ಗೀತಾ ಅವರ ಅಮ್ಮ ಮಂಜುಳಾ ಅವರನ್ನು ಮಾತಾಡಿಸಿದಾಗ, ಅವರೂ ತಮಗಾಗಿರುವ ಖುಶಿಯನ್ನು ವ್ಯಕ್ತಪಡಿಸಿದರು. ಇಡೀ ಕ್ಯಾಂಪಿನ ಎಲ್ಲರಿಗೂ ಸಂತೋಷವಾಗಿದೆ, ʼಇದೆಲ್ಲಾ ಆಗಿದ್ದು ಜಾರ್ಜ್‌ ಸರ್‌ ಅವರಿಂದಲೇ ಸರ್‌ʼ ಎಂದರು.

ಹೌದು, ಶಿವಮೊಗ್ಗ ಬೈಪಾಸ್‌ ಅಲೆಮಾರಿ ಕ್ಯಾಂಪಿನ ಮಕ್ಕಳ ಈ ಪ್ರಗತಿಯ ಹಿಂದೆ ಶಿವಮೊಗ್ಗದ ಹಿರಿಯ ಪ್ರಗತಿಪರ ಚಿಂತಕ ಜಾರ್ಜ್‌ ಸಾಲ್ಡಾನಾ ಅವರ 15 ವರ್ಷಗಳ ಶ್ರಮವಿದೆ, ಅವರ ಸಾಮಾಜಿಕ ಬದ್ಧತೆಯಿದೆ.

ಒಂದಷ್ಟು ಕುಟುಂಬಗಳು ಟೆಂಟ್‌ ಹಾಕಿಕೊಂಡಿದ್ದ ಈ ಕ್ಯಾಂಪಿಗೆ ನಮ್ಮನಾಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಜಾರ್ಜ್‌ ಸಾಲ್ಡಾನಾ ಅವರು ಮೊದಲ ಸಲ ಭೇಟಿ ಕೊಟ್ಟಾಗ ಇಲ್ಲಿ ಒಂದೇ ಒಂದು ಮಗುವೂ ಶಾಲೆ ಮೆಟ್ಟಿಲು ಹತ್ತಿರಲಿಲ್ಲ. ಓದುವ ವಯಸ್ಸಿನ ಮಕ್ಕಳೆಲ್ಲಾ ಬೀದಿಯಲ್ಲೇ ಇದ್ದು ಬೇಡದ ಚಟಗಳನ್ನು ಅಂಟಿಸಿಕೊಂಡು ಹಾಳಾಗಿ ಹೋಗುತ್ತಿದ್ದರು. ಅವರ ಪೋಷಕರಿಗೂ ಶಾಲೆ ಎಂಬುದರ ಕಲ್ಪನೆಯೇ ಇರಲಿಲ್ಲ. ಅಸಲಿಗೆ ಅವರ ಬಳಿ ಯಾವುದೇ ಗುರುತು ಪತ್ರವಾಗಲೀ, ಕನಿಷ್ಟ ರೇಶನ್‌ ಕಾರ್ಡ್‌ ಆಗಲೀ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಮಕ್ಕಳನ್ನು ಓದಿಸುವ ಹೊಣೆಯನ್ನು ತಮ್ಮ ಮೇಲೆ ಹಾಕಿಕೊಂಡ ಜಾರ್ಜ್‌ ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ಕುರಿತಂತೆ ಜಾರ್ಜ್‌ ಅವರನ್ನು ಮಾತಾಡಿಸಿದಾಗ ಅವರು  ಆ ದಿನಗಳನ್ನು ನೆನಪಿಸಿಕೊಂಡು ಕನ್ನಡ ಪ್ಲಾನೆಟ್‌ ನೊಂದಿಗೆ ಹಂಚಿಕೊಂಡರು.

“ನಾನು ಇಲ್ಲಿ ಮೊದಲು ಬಂದಾಗ ಮಕ್ಕಳು ಶಾಲೆಗೆ ಹೋಗ್ತಾ ಇರಲಿಲ್ಲ. ಆಗ ಈ ಅಲೆಮಾರಿಗಳಿಗೆ  ಯಾವುದೇ ದಾಖಲಾತಿಗಳೂ ಇರಲಿಲ್ಲ. ಅವರಿಗೆ ದಾಖಲಾತಿ ಕೊಡಿಸಬೇಕು ಎಂದು ಎರಡು ವರ್ಷ ಪ್ರಯತ್ನಪಟ್ಟರೂ ಆಗಲಿಲ್ಲ.  ಆಗ ಇದ್ದ ಜಿಲ್ಲಾಧಿಕಾರಿ ಪಾಂಡೆಯವರನ್ನು ನಾನು ಸಂಪರ್ಕಿಸಿ ಕೇಳಿದಾಗ, ಅವರು ಅಲ್ಲಿನ ಮಕ್ಕಳಿಗೆ ಯಾವುದಾದರೂ ಒಂದು ಶಾಲೆಗೆ ಸೇರಿಸಿ, ಅಲ್ಲಿಂದ ಲೆಟರ್‌ ತಗೊಂಡು ಬಾ ಎಂದರು. ಆಗ ನಾನು ಅಲ್ಲಿದ್ದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಶಾಲೆಯಿಂದ ಬರೆಸಿಕೊಂಡು ಬಂದ ಮೇಲೆ ಇವರಿಗೆ ರೇಶನ್‌ ಕಾರ್ಡ್‌ ಸಿಕ್ಕಿತು. ಅದರ ನಂತರ ಒಂದೊಂದೇ ದಾಖಲಾತಿ ಕೊಡಿಸುತ್ತಾ ಬಂದೆವು, ಕೆಲವರಿಗೆ ವೃದ್ದಾಪ್ಯ ವೇತನ ಕೂಡಾ ಮಾಡಿಸಿಕೊಟ್ಟೆ. ಇಷ್ಟು ವರ್ಷಗಳಲ್ಲಿ ಈಗ ಸ್ವಲ್ಪ ಸುಧಾರಿಸಿದ್ದಾರೆʼ ಎಂದರು ಜಾರ್ಜ್‌ ಸಾಲ್ಡಾನಾ

ಅಲ್ಲಿನ ಮಕ್ಕಳು ನಿಮ್ಮ ಹೆಸರನ್ನೇ ಹೇಳುತ್ತಿದ್ದಾರೆ, ಅವರ ಯಶಸ್ಸಿನ ಕ್ರೆಡಿಟ್‌ ನಿಮಗೇ ಅರ್ಪಿಸಿದ್ದಾರೆ ಎಂದದ್ದಕ್ಕೆ ಜಾರ್ಜ್‌, ಖಂಡಿತಾ ಇಲ್ಲ. ನಿಜವಾಗಿಯೂ ಈ ಅಲೆಮಾರಿ ಕ್ಯಾಂಪಿನ ಎಲ್ಲಾ ಮಕ್ಕಳೂ ಅತ್ಯಂತ ಬುದ್ಧಿವಂತರು. ಅದಕ್ಕೆ ಒಂದು ಅವಕಾಶ ಮಾಡಿಕೊಟ್ಟಿದ್ದಷ್ಟೇ ನಾವುʼ ಎಂದರು. ಶಿವಮೊಗ್ಗದಲ್ಲಿ 90ರ ದಶಕದ ಪ್ರಗತಿಪರ ಚಳವಳಿಗಳ ಆರಂಭ ಕಾಲದಲ್ಲೇ ಕಾರ್ಮಿಕ ಸಂಘಟನೆಗಳ ಭಾಗವಾಗಿ ತೊಡಗಿಕೊಂಡಿದ್ದವರು ಜಾರ್ಜ್‌ ಸಾಲ್ಡಾನಾ. ಮಹಾನ್‌ ಬದ್ಧತೆಯ ಮನುಷ್ಯ. ಕಳೆದ 15-20 ವರ್ಷಗಳಿಂದಲೂ ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾರೆ. ಸಂಜೆ ಪೇಪರ್‌ ಗಂಟನ್ನು ಬಸ್ಸುಗಳಿಗೆ ಹಾಕಿ ತಮ್ಮ ಸೈಕಲ್‌ ಹತ್ತಿಕೊಂಡು ಸೀದಾ ಬೈಪಾಸ್‌ ಅಲೆಮಾರಿ ಕ್ಯಾಂಪಿಗೆ ಹಾಜರಾಗುತ್ತಾರೆ. ಮಕ್ಕಳನ್ನು ಕೂರಿಸಿಕೊಂಡು ರಾತ್ರಿ 10ರ ವರೆಗೂ ಓದಿಸುತ್ತಾರೆ. ಈ ಮಕ್ಕಳನ್ನು ಶಾಲೆಗೆ ಸೇರಿಸುವ ಸಂಬಂಧಪಟ್ಟಂತೆ ಒಂದು ಕುತೂಹಲಕಾರಿ ಘಟನೆಯನ್ನೂ ಜಾರ್ಜ್‌  ಹಂಚಿಕೊಂಡರು. ಈ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕೆಂದುಕೊಂಡ ಜಾರ್ಜ್‌ ಅವರು ಶಿವಮೊಗ್ಗದ ಪ್ರತಿಷ್ಠಿತ ಆದಿಚುಂಚನಗಿರಿ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದರಂತೆ. ಆಗ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಈ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸಿಕೊಂಡರೆ ಗುಣಮಟ್ಟ ಕುಸಿಯುತ್ತದೆ, ಯಾಕೆಂದರೆ ತಮ್ಮ ಮಕ್ಕಳು ಬುದ್ಧಿವಂತರೂ, ಈ ಅಲೆಮಾರಿ ಮಕ್ಕಳು ಅಷ್ಟೊಂದು ಬುದ್ದಿವಂತರಲ್ಲದವರೂ ಆಗಿರುತ್ತಾರೆ, ಹಾಗಾಗಿ ಸೇರಿಸಿಕೊಳ್ಳಲು ಆಗುವುದಿಲ್ಲ ಎಂದರಂತೆ. ಇದರಿಂದ ಕುಪಿತರಾದ ಜಾರ್ಜ್‌ ಆ ಸ್ವಾಮೀಜಿಗೆ ‌ ಅಲ್ಲೇ ಚಾಲೆಂಜ್ ಮಾಡಿ, ನೋಡಿ ಸ್ವಾಮೀಜಿ, ನಾನು ಚಾಲೆಂಜ್‌ ಮಾಡ್ತೀನಿ, ಈ ಅಲೆಮಾರಿ ಕ್ಯಾಂಪಿನ 3-4ನೇ ತರಗತಿಯ ಮಕ್ಕಳು ನಿಮ್ಮ ಶಾಲೆಯ ಒಂಭತ್ತು 10ನೇ ಮಕ್ಕಳಿಗಿಂತಲೂ ಬುದ್ಧಿವಂತರು ಎಂದು ಸಾಬೀತು ಪಡಿಸ್ತೀನಿ ಎಂದರಂತೆ. ಸವಾಲನ್ನು ಸ್ವೀಕರಿಸಿದ ಸ್ವಾಮೀಜಿ ಹಾಗಾದರೆ ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದರಂತೆ. ಕೊನೆಗೆ ಜಾರ್ಜ್‌ ಅಲೆಮಾರಿ ಮಕ್ಕಳನ್ನು ಕರೆದುಕೊಂಡು ಬಂದರು. ಅವರ ಎದುರು ಆದಿಚುಂಚನಗಿರಿ ಶಾಲೆಯ ಹತ್ತನೇ ತರಗತಿ ಮಕ್ಕಳನ್ನು ಕರೆಸಲಾಯಿತು. ಜಾರ್ಜ್‌ ತಮ್ಮ ಅಲೆಮಾರಿ ಮಕ್ಕಳಿಗೆ 2ರಿಂದ 20ರ ವರೆಗೆ ಮಗ್ಗಿಗಳನ್ನು ಉಲ್ಟಾ ಹೇಳಿ ಅಂದರಂತೆ. ಆ ಮಕ್ಕಳು ಅಲ್ಲಿದ್ದ ಎಲ್ಲರೂ ದಂಗಾಗುವ ರೀತಿಯಲ್ಲಿ ಉಲ್ಟಾಮಗ್ಗಿಗಳನ್ನು ಹೇಳಿದರಂತೆ. ನಂತರ ಆ ಶಾಲೆಯ ಮಕ್ಕಳು ಉಲ್ಟಾ ಹೇಳುವುದು ಹೋಗಲಿ ಸೀದಾ ಮಗ್ಗಿಯನ್ನೂ 20ರ ವರೆಗೆ ಹೇಳಲು ಆಗಲಿಲ್ಲ. ಇದನ್ನು ನೋಡಿದ ಸ್ವಾಮೀಜಿಗೆ ಮುಜುಗರವದಂತೆ ಆಗಿ ಕೊನೆಗೆ ಒಪ್ಪಿಕೊಂಡು ʼಆಗಲಿ ಮಕ್ಕಳನ್ನು ಸೇರಿಸಿ” ಎಂದ ನಂತರ ಜಾರ್ಜ್‌ ಅವರು  12-13 ಮಕ್ಕಳನ್ನು ಅಲ್ಲಿಗೆ ತಂದು ಸೇರಿಸಿದರಂತೆ. ಈ ರೀತಿಯಲ್ಲಿ ಅಲೆಮಾರಿ ಕ್ಯಾಂಪಿನ ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ಓದಲು ಅವಕಾಶವಾಗಿತ್ತು.  “ನಿಜವಾಗಿಯೂ ಈ ಮಕ್ಕಳು ತುಂಬಾ ಬುದ್ಧಿವಂತರು ಸರ್.‌ ಓದುವ ಜೊತಗೆ ಇತರ ಕೌಶಲ್ಯಗಳಲ್ಲೂ ಇವರು ಮುಂದಿದ್ದಾರೆ. ಈಗ ಪಿಯುಸಿ ಪಾಸಾಗಿರುವ ಗೀತಾ ಕರಾಟೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗಳಿಸಿದ್ದಾಳೆ. ಈ ಎಲ್ಲಾ ವಿದ್ಯಾರ್ಥಿಗಳಿಗೂ ರಂಗಾಯಣದ ಮೂಲಕ ರಂಗ ತರಬೇತಿ ನೀಡಿ, ಹಲವಾರು ಜಿಲ್ಲೆಗಳಲ್ಲಿ ರಂಗಪ್ರಯೋಗ ನಡೆಸಿದ್ದಾರೆ. ಸೈಕಲ್‌ ಎಂಬ ನಾಟಕವನ್ನು ಅಭಿನಯಿಸಿ ಭೇಷ್‌ ಎನಿಸಿಕೊಂಡಿದ್ದಾರೆ. ನಿಜಕ್ಕೂ ಪ್ರತಿಭಾವಂತ ಮಕ್ಕಳಿವರು” ಎನ್ನುತ್ತಾರೆ ಜಾರ್ಜ್

“ನಂತರದಲ್ಲಿ ಇವರು ಪಿಯುಸಿ ಬಂದ ಮೇಲೆ ಡಿ ವಿ ಎಸ್‌ ಕಾಲೇಜಿಗೆ ಸೇರಿಸಿದೆವು. ಅಲ್ಲೂ ಇವರಿಗೆ ಉಚಿತವಾಗಿ ಸೀಟು ದೊರಕುವಂತೆ ಮಾಡಲು ಕೆಲವಾರು ಸ್ನೇಹಿತರು ನೆರವಾದರು” ಎನ್ನುವ ಜಾರ್ಜ್‌, ತಾವು ಇಲ್ಲಿ ಅಲೆಮಾರಿ ಮಕ್ಕಳಿಗೆ ಟ್ಯೂಶನ್‌ ಹೇಳಲು ಆರಂಭಿಸಿದ ಆರಂಭದಲ್ಲಿ ತಮ್ಮ ಕುರಿತು ನಡೆದ ಅಪಪ್ರಚಾರಗಳ ಕುರಿತು ಮಾತಾಡುತ್ತಾ, “ಈ ಅಲೆಮಾರಿ ಕ್ಯಾಂಪಿನ ಪಕ್ಕದಲ್ಲಿ ಈಶ್ವರಪ್ಪ ಅವರ ಒಡೆತನದ ಶಿಕ್ಷಣ ಸಂಸ್ಥೆಯಿದೆ. ನಾವು ಯಾವಾಗ ಈ ಅಲೆಮಾರಿಗಳಿಗೆ ಇಲ್ಲಿ ಸೌಲಭ್ಯಗಳಿಗೆಗಾಗಿ ಹೋರಾಟ ನಡೆಸತೊಡಗಿದ್ದೆವೋ ಆಗ ಅವರ ಕಣ್ಣು ಕೆಂಪಗಾಯ್ತು. ಏಕೆಂದರೆ ಈ ಜಾಗವನ್ನೆಲ್ಲಾ ತಮ್ಮ ಕಾಲೇಜಿನ ಪ್ಲೇಗ್ರೌಂಡ್‌ ಗಾಗಿ ಕಬ್ಜಾ ಮಾಡಲು ಬಯಸಿದ್ದರು. ಹೀಗಾಗಿ, ನಂತರ ನನ್ನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡಿದರು. ಇವನು ಕ್ರಿಶ್ಚಿಯನ್.‌ ಅಲೆಮಾರಿಗಳನ್ನು ಮತಾಂತರ ಮಾಡಲು ಇಲ್ಲಿಗೆ ಬರುತ್ತಿದ್ದಾನೆ ಎಂದು ಹರಡಲು ನೋಡಿದರು. ಆಗ ಗಲಾಟೆಯೇ ಆಯಿತು. ಶೃಂಗೇಶ್‌, ಅನಿಲ್‌ ಎಲ್ಲಾ ಬಂದು ಅಲೆಮಾರಿಗಳಿಗೆ ಬೆಂಬಲವಾಗಿ ನಿಂತರು. ಇಂದು ಇಲ್ಲಿ ಈ ಮಕ್ಕಳಿಗೆ ಪಾಠ ಹೇಳಿಕೊಡಲು ಒಂದು ಚರ್ಚ್ ಒಬ್ಬ ಟೀಚರ್‌ ನೇಮಿಸಿದೆ. ಒಂದು ಮುಸ್ಲಿಂ ಸಂಘಟನೆ ಪ್ರತಿದಿನ ಬೆಳಿಗ್ಗೆ ಮಕ್ಕಳಿಗೆ ತಿಂಡಿ ತಂದು ಕೊಟ್ಟು ಮದ್ಯಾಹ್ನಕ್ಕೆ ಬಾಕ್ಸ್‌ ಗೂ ಕೊಡುತ್ತಿದ್ದಾರೆ. ಹೀಗೆ ಇಲ್ಲಿ ಯಾವ ಜಾತಿ ಧರ್ಮಗಳ ಹಂಗಿಲ್ಲದೆ ಈ ಅಲೆಮಾರಿ ಮಕ್ಕಳ ಓದಿಗೆ ಕೆಲವರು ಸಹಾಯ ಮಾಡುತ್ತಿದ್ದಾರೆ” ಎನ್ನುವ ಜಾರ್ಜ್‌ ಗೆ ಇಲ್ಲಿ ಈಗ ಸ್ವಲ್ಪ ಅನುಕೂಲತೆ ಪಡೆದಿರುವ ದೊಡ್ಡವರು ಪುಡಾರಿ ರಾಜಕಾರಣಿಗಳ ಬಾಲಂಗೋಚಿಗಳಾಗಿರುವುದರ ಕುರಿತು ಬೇಸರವಿದೆ.  ಹಿಂದೆ ದಯಾನಂದ್‌ ಅವರು ಡಿಸಿಯಾಗಿದ್ದಾಗ, ಹಲವರನ್ನು ಜೊತೆ ಸೇರಿಸಿಕೊಂಡು ಅವರ ಮನೆಗೆ ಹೋಗಿ ಮಾತನಾಡಿದ್ದ ಜಾರ್ಜ್‌, ಈ ಅಲೆಮಾರಿ ಕ್ಯಾಂಪನ್ನು ಮಹಾನಗರ ಪಾಲಿಕೆಯ ಮೂಲಕ ಸ್ಲಂ ಎಂದು ಘೋಷಣೆಯಾಗುವಂತೆ ಮಾಡಿದರು. ಆದರೆ, ಯಾವ ರಾಜಕಾರಣಿಗಳೂ ಈ ಜನರಿಗೆ ಕನಿಷ್ಟ ಮೂಲಸೌಕರ್ಯ ಒದಗಿಸುವುದಾಗಲೀ, ಅವರ ಜಾತಿ ಪ್ರಮಾಣ ಪತ್ರದ ಸಮಸ್ಯೆಗಳನ್ನು ಬಗೆಹರಿಸುವುದಾಗಲೀ ಮಾಡುತ್ತಿಲ್ಲ ಎಂಬ ಬೇಸರದ ನಡುವೆಯೇ “ಈ ಅಲೆಮಾರಿ ಮಕ್ಕಳು ಶಿಕ್ಷಿತರಾಗಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಅವರು ಯಾವುದನ್ನೂ ಸುಮ್ಮನೇ ಒಪ್ಪಿಕೊಂಡು ಹೋಗುವುದಿಲ್ಲ. ಮುಂದೆ ಇವರ ಮಕ್ಕಳ ಕಾಲಕ್ಕೆ ಎಲ್ಲರೂ ತಮ್ಮ ಮಕ್ಕಳನ್ನು ಚನ್ನಾಗಿ ಓದಿಸುತ್ತಾರೆ ಎಂಬ ಭರವಸೆ ಇದೆ, ಅಷ್ಟು ಸಾಕು” ಎಂದು ಇಷ್ಟು ವರ್ಷಗಳ ಪರಿಶ್ರಮಕ್ಕೆ ಸಾರ್ಥಕತೆಯನ್ನು ಹುಡುಕಿಕೊಳ್ಳುತ್ತಾರೆ ಜಾರ್ಜ್.‌

ಕನ್ನಡ ಪ್ಲಾನೆಟ್‌ ವಿಶೇಷ ವರದಿ

(ನೆರವು- ಪ್ರಕಾಶ್ ಮಂಡಘಟ್ಟ)

More articles

Latest article