ಮಹಿಳಾ ದಿನ ವಿಶೇಷ | ಸಮಾನತೆಯ ಹಾದಿಯಲಿ ಸಾಹಚರ್ಯ

Most read

ಸಬಲೀಕರಣ ಅವಳ ಸಂತಸದ ಹಾದಿಯಾದಂತೆ ಸವಾಲಿನ ಹಾದಿಯೂ ಆಗುತ್ತಿದೆ. ಮಹಿಳಾ ಸಬಲೀಕರಣವು ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯಗಳಿಗೆ ಕಾರಣವಾಗುತ್ತಾ ಕತ್ತಿಯಂತೆ ಹೋಗುವಲ್ಲಿ ಬರುವಲ್ಲಿ ಅವಳನ್ನು ಕೊಯ್ಯತ್ತಿದೆ. ಅದರಲ್ಲೆ ಬೆಂದು ಬಿಕ್ಕಳಿಸುತ್ತಿರುವ ಅವರ ನೋವಿನ ಕಥೆಗಳು, ಚಂದ ಕಾಣುವ ಅವರ ಹೊರ ಬದುಕಿನ ಕಾರಣ ಮುಚ್ಚಿಹೋಗುತ್ತಿವೆ. ಮಹಿಳೆಯರ ಸಂಕಟ ಸವಾಲುಗಳಿಗೆ ಉತ್ತರ ಹುಡುಕ ಬೇಕಾದದ್ದು ಈ ಹೊತ್ತಿನ ಜರೂರಾಗಿದೆ ಡಾ. ಆಶಾ ಬಗ್ಗನಡು, ಪ್ರಾಧ್ಯಾಪಕರು.

ಮತ್ತೊಂದು ಮಹಿಳಾ ದಿನಾಚರಣೆ. ಅವಳ ಸಾಧನೆ, ಮಮತೆ, ಕರುಣೆ, ವಾತ್ಸಲ್ಯ ಕುರಿತಾದ ಉದ್ದುದ್ದದ ಸಾಲುಗಳು, ಸಂದೇಶಗಳು, ಮತ್ತೆ ಅವವೇ ಘೋಷಣೆಗಳು, ಸಾಂಪ್ರದಾಯಿಕ ಕಾರ್ಯಕ್ರಮಗಳು, ಸಾಧಕಿಯರ ಸಂದರ್ಶನ ಸನ್ಮಾನ ಸಂಭ್ರಮಾಚರಣೆಗಳು…..

ಅದೊಂದು ಅದ್ದೂರಿ ಮಹಿಳಾ ದಿನಾಚರಣೆಯ ವೇದಿಕೆ, ಮಾತಿಗೆ ನಿಂತ ಭಾಷಣಕಾರ್ತಿ ವಾಚಾಮಗೋಚರ ಪುರುಷರನ್ನು  ಜರೆದು ಕೆಳಗಿಳಿದಾಗ, ಅದುವರೆಗೂ ಪ್ರಶಂಸೆ ಬೆರೆತ ಕೌತುಕದಲ್ಲಿ ಕಣ್ಣು, ಕಿವಿ, ಬಾಯಿ ಬಿಟ್ಟುಕೊಂಡು ಆಕೆಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ನೀರೆಯರು ತಮ್ಮೆಲ್ಲಾ ಒಳ ಬೇಗುದಿಗಳಿಗೆ ದನಿಯಾದ ಆಕೆಯನ್ನು ಸುತ್ತುಗಟ್ಟಿ ಮೆಚ್ಚಿಗೆಯ ಮಹಾಪೂರವನ್ನೇ ಹರಿಸುತ್ತಿದ್ದರೆ, ಇವರಿಂದ ಬಿಡಿಸಿ ಹೊರಡುವ ಬರದಲ್ಲಿದ್ದ ಆಕೆ ನಾನು ಇನ್ನಷ್ಟು ಬಾಯಿ ಬಿಟ್ಟರೆ ಈ ಪುರುಷ ಜಾತಿಯ ಬಣ್ಣಗೇಡು ಬಿಡಿ ಎಂಬ ದಾಟಿಯಲ್ಲಿ ಅಲ್ಲಿಂದ ದೌಡಾಯಿಸಿದರು.

ಸಾಮಾನ್ಯವಾಗಿ ಶೋಷಿತ ಮಹಿಳೆಯ ಹತಾಶ ದೃಷ್ಟಿ ಪುರುಷನ ಮೇಲೆ ನೆಡುವಂತೆ ವ್ಯವಸ್ಥೆ ಹುನ್ನಾರಗಳನ್ನು ಹೆಣೆದಿದೆ. ಗಂಡು ಹೆಣ್ಣನ್ನು ಪರಸ್ಪರ ವಿರುದ್ಧ ಧ್ರುವಗಳಲ್ಲಿ ನಿಲ್ಲಿಸಿ ಪರಸ್ಪರ ಶತ್ರುಗಳನ್ನಾಗಿಸಿದೆ. ಅವರಿಬ್ಬರನ್ನು ಒಂದಾಗದ ಹಾಗೆ ಇರಿಸಿರುವ ವ್ಯವಸ್ಥೆಯ ಕೌರ್ಯವನ್ನು ಅಸಂಖ್ಯ ಮಹಿಳಾ ಪರ ವೇದಿಕೆಗಳು ಸಮರ್ಥಿಸುತ್ತಾ, ಅವರಿರ್ವರ ನಡುವಿನ ದ್ವೇಷವನ್ನು ನಿರಂತರವಾಗಿ ಕಾಪಿಡುತ್ತಿರುವುದು ವಿಪರ್ಯಾಸವೇ ಹೌದು. ಲೈಂಗಿಕವಾದಿ ಶೋಷಣೆಗಳನ್ನು ಕುರಿತಂತೆ ಸಾರ್ವಜನಿಕವಾಗಿ ಟೀಕಿಸುವುದರಿಂದ ಹಲವು ಗಂಡಸರು ಸುಧಾರಿಸಬಹುದೇನೋ ಆದರೆ ಇದರಿಂದ ಸಾಂಸ್ಥಿಕವಾಗಿ ನೆಲೆಗೊಂಡಿರುವ ದೌರ್ಜನ್ಯಗಳ ಮೇಲೆ ನಿರೀಕ್ಷಿತ ಪರಿಣಾಮಗಳಂತೂ  ಬೀರುವುದಿಲ್ಲ.

ಜಗತ್ತಿನ ನೀತಿ ನಿಯಮಗಳನ್ನೆಲ್ಲಾ ಹೆಣ್ಣೊಡಲೊಳಗಿಟ್ಟು ಗಂಡನ್ನು ಬಿಡು ಬೀಸಾಗಿ ಬಿಟ್ಟು ಬಿಡುವ ವ್ಯವಸ್ಥೆ ಅವನೊಳಗಿನ ಮನುಷತ್ವವನ್ನೇ ಕಳೆದು ಕಣ್ಣೀರೂ ಬಾರದ ಅಧಿಕಾರಸ್ಥನನ್ನಾಗಿಸುತ್ತದೆ. ಹೆಣ್ಣನ್ನು ತನ್ನ ಅಧೀನಲಿಂಗಿಯಾಗಿ, ಮನೆಯೊಳಗೊರಗಿನ ನೋಟದಿಂದ ಶಾಲೆಯೊಳಗಿನ ಪಾಠದವರೆಗೆ ಕಲಿಯುತ್ತಾ ಹೋಗುವ ಗಂಡು ತಾನು ಶ್ರೇಷ್ಠನೆಂಬ ಅಹಂಕಾರದೊಳಗೆ ನೈತಿಕ ಕಟ್ಟುಕಟ್ಟಳೆಗೆ ಒಳಗಾಗದೆ ಆಕ್ರಮಣಶೀಲತೆ ಅಹಂಕಾರದ ಮುಖವಾಡ ಧರಿಸಿ ಗಂಡಾಗಿ ಬೆಳೆಯುತ್ತಾ ಅಸ್ವಸ್ಥತೆಯಿಂದ ಬಳಲುತ್ತಾ ಹೋಗುತ್ತಾನೆ.

ಹೀಗೆ ಸಾಮಾಜಿಕ ಪ್ರಕ್ರಿಯೆಯೊಳಗೆ ರೂಪುಗೊಳ್ಳುವ ಪುರುಷರನ್ನು ಕುರಿತ ವಾಗಾಂಡಬರಗಳಿಂದ, ಪುರುಷರಾದ್ದರಿಂದ ಅವರೂ ಎಂದಿದ್ದರೂ ನಮ್ಮ ಶತ್ರುಗಳು ಎಂದು ಅವರನ್ನು ದೂರ ಬದಿಗೆ ಸರಿಸಿಬಿಡುವುದರಿಂದ ಹೆಚ್ಚಿನದೇನೋ ಸಾಧಿತವಾಗುತ್ತಿಲ್ಲ ಎನ್ನುತ್ತಾಳೆ ಬೆಲ್‌ ಹುಕ್ಸ್. ಹಾಗೆಂದು ಪುರುಷರು ಹೆಣ್ಣುಮಕ್ಕಳ ಮೇಲೆ ನಡೆಸುವ ಶೋಷಣೆಯನ್ನು ಹಗುರವಾಗಿ ಕಾಣಬೇಕೆಂದಲ್ಲ. ವ್ಯವಸ್ಥೆಯಡಿಯಲ್ಲಿ ಸಂತ್ರಸ್ತನಾಗಿರುವ ಅವನ ನೋವಿನ ಅನುಭವಗಳನ್ನು ಸಹಾನುಭೂತಿಯಿಂದ ಗುರುತಿಸಿ ಅವನನ್ನು ಒಡಲುಗೊಂಡು ಜೊತೆಗಿಬ್ಬರು ಮುನ್ನುಡಿಗಳನ್ನು ಇಡಬೇಕಿದೆ. ಸಾಮಾಜೀಕರಣ ಕಲಿಸಿದ ಪಾಠಗಳನ್ನು ನೀಗಿಕೊಳ್ಳುವ ಹಾದಿಯಲ್ಲಿ ಇಬ್ಬರೂ ಜೊತೆಗೂಡಿ ಹೆಜ್ಜೆಹಾಕುವ ಮೂಲಕವಷ್ಟೇ ವ್ಯವಸ್ಥೆಯ ಹುನ್ನಾರಗಳನ್ನು ತುಂಡರಿಸಲು ಸಾಧ್ಯ. ಎನ್ನುತ್ತಾಳೆ ಬೆಲ್‌ ಹುಕ್ಸ್.

ಭರ್ತಿ ಮಹಿಳೆಯರಿಂದಲೇ ತುಂಬಿ ಆಚರಣೆಗೊಳ್ಳುವ ಮಹಿಳಾ ದಿನಾಚರಣೆಗಳು ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿಚಾರ ಎಂಬ ಮೌಢ್ಯವನ್ನು ಕಳಚಿಕೊಂಡು ಪುರುಷರನ್ನು ಒಳಗೊಂಡು ಅರ್ಥಪೂರ್ಣಗೊಳ್ಳಬೇಕಿದೆ. ಲಿಂಗ ತಾರತಮ್ಯದ ಬಗೆಗೆ ಜಾಗೃತಿ ಮೂಡಿಸುವ, ಮಹಿಳಾ ಸಮಾನತೆಗಾಗಿ ಜೊತೆಗೂಡಿ ಹೆಜ್ಜೆಹಾಕುವ ಮನಸ್ಸುಗಳನ್ನು ರೂಪುಗೊಳಿಸುವ ನೆಲೆಯಲ್ಲಿ ಮಹಿಳಾ ಪರ ಆಚರಣೆಗಳು ಅರ್ಥಪೂರ್ಣಗೊಳ್ಳಬೇಕಿದೆ.

ʼAccelerate Actionʼ  ಈ ವರ್ಷದ ಮಹಿಳಾ ದಿನದ ಆಶಯವಾಗಿದೆ. ಜಾಗತಿಕವಾಗಿ ಪೂರ್ಣ ಲಿಂಗ ಸಮಾನತೆ ಸಾಧಿಸಲು 2158 ರ ವರೆಗೂ ಕಾಯಬೇಕಾಗುತ್ತದೆ. ಅಂದರೆ ಇದು ಸುಮಾರು ಐದು ತಲೆಮಾರುಗಳಷ್ಟು ಸಮಯಾವಕಾಶ ತೆಗೆದುಕೊಳ್ಳುತ್ತದೆ. ಲಿಂಗ ಸಮಾನತೆಯನ್ನು ಸಾಧಿಸಲು ಸಾಕಷ್ಟು ಅಡೆ ತಡೆಗಳಿದ್ದು ತ್ವರಿತ ಹಾಗೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯದ ಹಾದಿಯಲ್ಲಿ ಅವನೂ ಜೊತೆಗೂಡಬೇಕಾದ ಅಗತ್ಯವನ್ನು ಈ ಬಾರಿಯ ಆಶಯ ಸಾರಿ ಹೇಳುತ್ತಿದೆ.

ಅವನ ಬೆಂಬಲವಿಲ್ಲದೇ ಅವಳ ಸಾಧನೆ ಸಾಧ್ಯವೇ ಇಲ್ಲ ಅಂತಲ್ಲ ಅವಳ ಕನಸು ಅವಳ ಮಹತ್ವಾಕಾಂಕ್ಷೆ ಅವಳೊಬ್ಬಳದೇ, ಅದರಲ್ಲಿ ತನ್ನ ಪಾತ್ರವಿಲ್ಲ ಎಂದು ಗಂಡು ಪರಿಭಾವಿಸಿದಾಗ ಹೆಣ್ಣು ಮಕ್ಕಳ ದಾರಿ ತುಸು ನಿಧಾನಗೊಳ್ಳುತ್ತದೆ.  ಅಷ್ಟೆ ಅಲ್ಲ  ಶ್ರಮವೂ ಹೆಚ್ಚುತ್ತದೆ. ಅವನ ಸಾಹಚರ್ಯವಿಲ್ಲದೇ ಅವಳು ಸಾಗಬಲ್ಲಳು ಸಾಧಿಸಬಲ್ಲಳು. ಆದರೆ ಸಂಭ್ರಮಿಸುವ ಸಂದರ್ಭಗಳು ತುಸು ಕಡಿಮೆಯೇ. ಹಾಗಾಗಿಯೇ ಅವನ ಸಾಹಚರ್ಯ ಅವಳು ಸಾಗುವ ಹಾದಿಯನ್ನು ಸರಾಗವಾಗಿಸಬಹುದಲ್ಲದೆ ಅವಳ ಒಟ್ಟಾರೆ ಬದುಕನ್ನು ಸುಂದರ ಗೊಳಿಸಬಲ್ಲದು ಸಹ್ಯಗೊಳಿಸಬಲ್ಲದು.

ಲಿಂಗ ಸಮಾನತೆಯೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮಹಿಳಾ ಸಮಸ್ಯೆ ಸವಾಲುಗಳನ್ನು ಅರಿಯುವುದು, ಶಿಕ್ಷಣ, ಉದ್ಯೋಗ ಅವಕಾಶಗಳಿಂದ ವಂಚಿತರಾಗಿರುವ ಹೆಣ್ಣುಮಕ್ಕಳಿಗೆ, ಸಾರ್ವಜನಿಕ ವಲಯಗಳ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶ ದೊರೆಯುವ ನಿಟ್ಟಿನ ಪ್ರಯತ್ನಗಳು ಮಹಿಳಾ ಸಮಾನತೆಯ ಹಾದಿಯಲ್ಲಿ ಅವನು ಜೊತೆಗೂಡಿದಾಗ ತೀವ್ರತೆ ಪಡೆಯುವುದರ ಜೊತೆ ಜೊತೆಗೆ ಮಹಿಳಾ ಸ್ವಾತಂತ್ರ್ಯ ಸಮಾನತೆಗಳು ವಾಸ್ತವ ನೆಲೆಯಲ್ಲಿ ಸಾಕಾರಗೊಳ್ಳುತ್ತವೆ.

ಸಾರ್ವಜನಿಕ ಜೀವನದ ಸರ್ವರಂಗಗಳಲ್ಲೂ ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯ ಸಮಾನ ವೇತನ ದೊರೆತರೆ, ಮಹಿಳಾ ಬದುಕು ಹಸನಾಗಿ ಬಿಡಬಹುದು ಎಂಬ ಆಶಾವಾದ ಹುಸಿಯಾಗುತ್ತಿದೆ ಕೂಡಾ.  ಉದ್ಯೋಗ, ಶಿಕ್ಷಣ, ಆರ್ಥಿಕ ಸ್ವಾಯತ್ತತೆಯಂತಹ ಆಧುನಿಕ ಸೌಲಭ್ಯಗಳು ಮಹಿಳೆಯರ ಹೊರಮೈ ಬದಲಾವಣೆಗೆ ಮಾತ್ರ ಕಾರಣವಾಗುತ್ತಿವೆ. ಮಹಿಳೆಯ ಉಡುಗೆ-ತೊಡುಗೆ, ಅವಳ ಜೀವನ ಶೈಲಿ ಹೊರನೋಟದಲ್ಲಿ ಬದಲಾಗಿ ಅವಳು ಪುರುಷರಿಗೆ ಸಮಾನಳಾಗಿ ಸ್ವಾತಂತ್ರ್ಯ ಪಡೆದವಳಾಗಿ ಬಿಂಬಿತಳಾಗುತ್ತಿದ್ದಾಳೆ ಹೊರತು, ಬಹಳಷ್ಟು ಸಂದರ್ಭಗಳಲ್ಲಿ ಅವಳ ಬದುಕು ಶೋಷಣಾಮಯವಾಗಿಯೇ ಇದೆ.

ಆಧುನಿಕತೆಯ ಈ ಸಾಧನ ಸೌಲಭ್ಯಗಳಿಗೆ ಮಹಿಳೆಯರ ಬದುಕಿನ ಶೋಷಣೆಗಳನ್ನು ಪವಾಡ ಮಾಡಿದಂತೆ ಬದಲಾಯಿಸಲು ಸಾಧ್ಯವಾಗಲಿಲ್ಲ. ಅದು ಸಾಧ್ಯವೂ ಇಲ್ಲ. ಏಕೆಂದರೆ, ಆಧುನಿಕತೆಯಾಗಲಿ, ಬಂಡವಾಳಶಾಹಿಯಾಗಲಿ ಯಾಜಮಾನ್ಯ ನೆಲೆಯೇ ಆಗಿವೆ. ಮಹಿಳೆ ಇಂದು ತೀವ್ರ ಸೂಕ್ಷ್ಮಗಳಲ್ಲಿ ಎಚ್ಚೆತ್ತುಕೊಳ್ಳುತ್ತಿದ್ದಾಳಾದರೂ ಅವಳೆದುರಿನ ವಾಸ್ತವ ಕ್ರೂರವಾಗುತ್ತಾ, ಸಾಧಿಸುತ್ತಿರುವವಳಾದರು ಸಂತಸವಾಗಿರುವ ಸಂದರ್ಭಗಳು ಕಾಣದಾಗುತ್ತಿವೆ.

ಕಳೆದ 2-3 ದಶಕಗಳಿಂದ ಮಹಿಳೆಯರ ಮೇಲಿನ ಶೋಷಣೆಯ ತೀವ್ರತೆ ಹೆಚ್ಚುತ್ತಿದ್ದು ಇದಕ್ಕೆ ಜಾಗತೀಕರಣ ಬಂಡವಾಳಶಾಹಿ ಯಾಜಮಾನ್ಯದ ಧೋರಣೆಗಳೇ ಕಾರಣವಾಗಿದೆ. ಲಿಂಗ ಅಸಮಾನತೆಯ ಕಂದರಗಳು ಜಾಗತೀಕರಣದ ನೆರಳಿನಲ್ಲಿ ಮತ್ತಷ್ಟು ಹೆಚ್ಚುತ್ತಿದ್ದು ಪರಂಪರೆಯಿಂದ ಅವಕಾಶ ವಂಚಿತಳಾಗಿ ಗುಲಾಮಳಾಗಿ, ದಾಸಿಯಾಗಿ ಬದುಕುತ್ತಿದ್ದವಳು ಬದಲಾದ ಜಾಗತಿಕ ಬಂಡವಾಳಶಾಹಿ ಯಾಜಮಾನ್ಯದಡಿಯಲ್ಲಿ ಸರಕಾಗಿ, ಅಗ್ಗದ ಬೆಲೆಯ ಕೆಲಸಗಾರಳಾಗಿ ಶೋಷಣೆಗೆ ಒಳಪಡುತ್ತಿದ್ದಾಳೆ. ಜಾಗತೀಕರಣದ ನೆರಳಲ್ಲಿ ಬೆಳೆಯುತ್ತಿರುವ ಭೋಗೀಕರಣ ಸಂಸ್ಕೃತಿಯೊಂದರ ಪರಿಣಾಮ ಮಹಿಳೆಯ ಮೇಲಿನ ಶೋಷಣೆಯ ನೆಲೆಗಳು ಸಂಕೀರ್ಣಗೊಳ್ಳುತ್ತಾ, ಅತ್ಯಾಚಾರ, ಹೆಣ್ಣು ಭ್ರೂಣಹತ್ಯೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ, ವೇಶ್ಯಾ ಸಮಸ್ಯೆಗಳು ಹೆಚ್ಚುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಪ್ರತಿವರ್ಷ ಪ್ರಕಟಿಸುವ ‘ಭಾರತದಲ್ಲಿ ಅಪರಾಧ’ ವರದಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಸಬಲೀಕರಣ ಅವಳ ಸಂತಸದ ಹಾದಿಯಾದಂತೆ ಸವಾಲಿನ ಹಾದಿಯೂ ಆಗುತ್ತಿದೆ. ಮಹಿಳಾ ಸಬಲೀಕರಣವು ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯಗಳಿಗೆ ಕಾರಣವಾಗುತ್ತಾ ಕತ್ತಿಯಂತೆ ಹೋಗುವಲ್ಲಿ ಬರುವಲ್ಲಿ ಅವಳನ್ನು ಕೊಯ್ಯತ್ತಿದೆ. ಅದರಲ್ಲೆ ಬೆಂದು ಬಿಕ್ಕಳಿಸುತ್ತಿರುವ ಅವರ ನೋವಿನ ಕಥೆಗಳು, ಚಂದ ಕಾಣುವ ಅವರ ಹೊರ ಬದುಕಿನ ಕಾರಣ ಮುಚ್ಚಿಹೋಗುತ್ತಿವೆ. ಮಹಿಳೆಯರ ಸಂಕಟ ಸವಾಲುಗಳಿಗೆ ಉತ್ತರ ಹುಡುಕ ಬೇಕಾದದ್ದು ಈ ಹೊತ್ತಿನ ಜರೂರಾಗಿದ್ದು ಇನ್ನಷ್ಟು ವರ್ಷಗಳ ಕಾಲ ಶೋಷಿತಳಾಗಿಯೇ ಕಾಲಿನ ಸರಪಣಿ ಇಲ್ಲದ ಹೊರತು ಓಡಲು ಸಾಧ್ಯವಿಲ್ಲದ ಸ್ಥಿತಿಯಲ್ಲೇ ಬದುಕಬೇಕಾಗುತ್ತದೆ.

ವಿದ್ಯಾರ್ಥಿಗಳೊಂದಿಗೆ, ಸಮುದಾಯಗಳೊಂದಿಗೆ, ಲಿಂಗಸಮಾನತೆಯ ವ್ಯಾಪಕ ಚರ್ಚೆ ನಡೆಸುವ ಮೂಲಕ ಮಹಿಳಾ ಸಮಾನತೆ ಹೋರಾಟಗಳಲ್ಲಿ ಪುರುಷರನ್ನು  ಒಳಗೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ’ ನಡೆ ಬಹಳ ಗಮನಾರ್ಹವಾಗಿದ್ದು ವಾಸ್ತವ ನೆಲೆಯಲ್ಲಿ ಮಹಿಳಾ ಸಮಾನತೆ ಒಡಮೂಡಿಸುವ ಇಂತಹ ಪ್ರಯತ್ನಗಳು ಎಲ್ಲೆಡೆ ಹರಡಿಕೊಳ್ಳಬೇಕು, ನಾವೆಲ್ಲರೂ ಅದರ ಪಾಲುದಾರರಾಗಬೇಕು.

ಡಾ. ಆಶಾ ಬಗ್ಗನಡು

ತುಮಕೂರು ವಿ ವಿಯಲ್ಲಿ ಕನ್ನಡ ಲೆಕ್ಚರರ್‌ ಆಗಿರುವ ಇವರು ಪ್ರಗತಿಪರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರು

ಇದನ್ನೂ ಓದಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧೀ ಒಕ್ಕೂಟ : ಕಿರುನೋಟ

More articles

Latest article