ಬೆಂಗಳೂರು: ಕರಗ ಬೆಂಗಳೂರಿನ ಜಾನಪದ ಹಬ್ಬ. ಇಲ್ಲಿನ ಪುರಾತನ ಸಮುದಾಯಗಳಲ್ಲಿ ಒಂದಾದ ತಿಗಳ ಅಥವಾ ವಹ್ನಿಕುಲ ಸಮುದಾಯ ಕರಗವನ್ನು ಆಚರಿಸಿಕೊಂಡು ಬರುತ್ತಿದೆ. ಇವರು ದ್ರೌಪದಿ ಮತ್ತು ಪಾಂಡವರ ಅಗ್ರಜ ಧರ್ಮರಾಯನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ದ್ರೌಪದಿಯನ್ನು
ತಮ್ಮ ಕುಲ ದೇವತೆ ಎಂದೂ ಭಾವಿಸಿರುವ ತಿಗಳ ಸಮುದಾಯ 800 ವರ್ಷಗಳ ಹಿಂದೆ ಧರ್ಮರಾಯಸ್ವಾಮಿ ದೇವಸ್ಥಾನವನ್ನು ನಿರ್ಮಿಸಿದೆ.
ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು, ಏಪ್ರಿಲ್ 4ರಿಂದ 14 ರವರೆಗೆ ನಡೆಯಲಿದೆ. ಏಪ್ರಿಲ್ 12ರ ಚೈತ್ರ ಪೌರ್ಣಮಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಮಹೋತ್ಸವ ನಡೆಯಲಿದ್ದು, ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ಆಚರಣೆ ಸಂಬಂಧ ಸೋಮವಾರ ರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕರಗ ಹೊರಲು ಈ ಬಾರಿಯೂ ಜ್ಞಾನೇಂದ್ರ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಇವರು 14 ವರ್ಷಗಳಿಂದ ಬೆಂಗಳೂರು ಕರಗ
ಹೊರುತ್ತಿದ್ದು, ಕೊನೆಯ ಬಾರಿ ಕರಗ ಹೊರಲಿದ್ದಾರೆ.
ಆದಿಶಕ್ತಿ ದ್ರೌಪದಿಯನ್ನು ಆರಾಧಿಸುವ ಹಬ್ಬವೇ ಕರಗ. ಶತಮಾನಗಳಿಂದ ಕರಗವನ್ನು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಆಚರಣೆಯ ಗುಟ್ಟುಗಳು ಅರ್ಚಕರನ್ನು ಹೊರತುಪಡಿಸಿ ಬೇರೆ ಯಾರಿಗೂ ತಿಳಿದಿರುವುದಿಲ್ಲ. ಪೂಜಾ ವಿಧಾನಗಳನ್ನು
ಬಹಿರಂಗಪಡಿಸಿದರೆ ತಿಳಿದವರಿಗೆ ಮತ್ತು ತಿಗಳ ಸಮುದಾಯಕ್ಕೆ ಶ್ರೇಯಸ್ಸು ಅಲ್ಲ ಎಂಬ ಪ್ರತೀತಿ ಇದೆ. ಈ ಸಂಪ್ರದಾಯ ಮತ್ತು ಪೂಜೆಯನ್ನು ಬೆಂಗಳೂರು ಮೂಲದ ತಿಗಳರೇ ನಡೆಸುವುದು ವಾಡಿಕೆ. ಇವರ ಮೂಲಪುರುಷ ರಾಜ ವೀರವಹ್ನಿ ಬೆಂಕಿಯಿಂದ ಜನಿಸಿದ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಗ್ನಿಯ ಅಧಿದೇವತೆಯಾದ ದೌಪದಿಯ ಹೆಸರಿನಲ್ಲಿ ಕರಗವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಹಿನ್ನೆಲೆ ಏನು?
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುವ ಸಂದರ್ಭದಲ್ಲಿ ದ್ರೌಪದಿ ಮೂರ್ಚೆ ಹೋಗುತ್ತಾಳೆ. ಇದು ತಿಳಿಯದೆ ಪಾಂಡವರು ಮುಂದೆ ಸಾಗುತ್ತಾರೆ. ಆಕೆ ಎಚ್ಚರಗೊಂಡಾಗ ತಿಮಿರಾಸುರ ಎಂಬ ರಾಕ್ಷಸ ಎದುರಿಗೆ ನಿಂತಿರುತ್ತಾನೆ. ಆಗ ದ್ರೌಪದಿ
ತಿಮಿರಾಸುರನ ವಿರುದ್ದ ಹೋರಾಡಲು ವೀರಕುಮಾರರ ಪಡೆಯನ್ನು ಸೃಷ್ಟಿಸುತ್ತಾಳೆ. ಯುದ್ಧದಲ್ಲಿ ತಿಮಿರಾಸುರ ಅಸುನೀಗುತ್ತಾನೆ. ವೀರಕುಮಾರರು ದ್ರೌಪದಿಯನ್ನು ಸ್ವರ್ಗಕ್ಕೆ ಹೋಗದಂತೆ ತಡೆಯುತ್ತಾರೆ. ಆಗ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದಾಗಿ
ಭರವಸೆ ನೀಡುತ್ತಾಳೆ. ಹೀಗೆ ದ್ರೌಪದಿ ಪ್ರತಿ ವರ್ಷ ಭೂಲೋಕಕ್ಕೆ ಆಗಮಿಸುವುದನ್ನು ಆಚರಿಸುವ ಹಬ್ಬವೇ ಕರಗ.
ಹುಣ್ಣಿಮೆಯಂದು ಸಂಜೆ ಪೂಜಾರಿ ಹೆಣ್ಣಿನ ವೇಷ ಧರಿಸಿ ಸೀರೆಯುಟ್ಟು, ಕೈಗಳಿಗೆ ಬಳೆ ತೊಟ್ಟುಕೊಳ್ಳುತ್ತಾರೆ. ಮತ್ತೆ ರಾತ್ರಿ ಸಂಪಂಗಿ ಕೆರೆಯ ಬಳಿ ಎಲ್ಲರೂ ಸೇರುತ್ತಾರೆ. ಪೂಜಾರಿಯು ಅಚ್ಚಮಲ್ಲಿಗೆ, ಜಡೆಕುಚ್ಚು, ಹೂವಿನ ಹಾರ ಹರಿಶಿನ ಬಣ್ಣದ ಸೀರೆಯುಟ್ಟು ಒಡವೆಗಳನ್ನು ಧರಿಸಿ ಮಧುಮಗಳಂತೆ ಸಿದ್ದವಾಗುತ್ತಾರೆ. ವೀರಕುಮಾರರಿಂದ ಪೂಜೆಯಾದ ನಂತರ ಕರಗ ಹೊರುವ ಪೂಜಾರಿಯ ಮುಖದಲ್ಲಿ ಆದಿಶಕ್ತಿ ಅವಾಹನೆಗೊಳ್ಳುತ್ತಾಳೆ. ಗಂಟೆಯ ಸದ್ದಿನೊಂದಿಗೆ ಇವರು ಗರ್ಭಗುಡಿ ಪ್ರವೇಶಿಸುತ್ತಾರೆ. ಕರಗವನ್ನು ಮಲ್ಲಿಗೆ ಹೂಗಳಿಂದ
ಅಲಂಕರಿಸಲಾಗಿರುತ್ತದೆ. ಮಹಾಮಂಗಳಾರತಿ ನಂತರ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆ ಸಾಗುವ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಸೇರಿರುತ್ತಾರೆ. ಅರಳೆಪೇಟೆಯ ಮಸ್ತಾನ್ ಸಾಹೇಬ ದರ್ಗಾದಲ್ಲಿಯೂ ಕರಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕರಗವು ಸೂರ್ಯೋದಯಕ್ಕೂ ಮುನ್ನ ದೇವಸ್ಥಾನವನ್ನು ಸೇರಬೇಕಾಗಿದ್ದು, 6 ಗಂಟೆಗೂ ಮುನ್ನ ದೇವಾಲಯ ತಲುಪುತ್ತದೆ. ನಂತರ ಜಾತಿ ಮತಧರ್ಮಗಳ ಭೇದವಿಲ್ಲದೆ ಪೂಜೆ ನಡೆಯುತ್ತದೆ.