ಇಂದು ವಿದ್ಯಾರ್ಥಿಗಳಿಂದ ಪ್ರತಿರೋಧ ಬಾರದೆ ಇದ್ದರೆ ಇನ್ನು ಎರಡು ಮೂರು ವರ್ಷಗಳಲ್ಲಿ ಬಡವರಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಉನ್ನತ ಶಿಕ್ಷಣ ಆಶಾಗೋಪುರವಾಗುತ್ತದೆ. ವೃತ್ತಿಗಳನ್ನು ಕಲಿಸಿ ಬಡವರನ್ನು ಅವರ ವೃತ್ತಿಗಳಿಗೆ ಹಿಂದಕ್ಕೆ ತಳ್ಳುವ ಮೂಲಕ ಜಾತಿ ಶ್ರೇಣೀಕರಣವನ್ನು ಮತ್ತಷ್ಟು ವಿಸ್ತರಿಸುತ್ತಾರೆ ಮತ್ತು ಜಾತಿ ಸಮಾಜವನ್ನು ಸ್ಥಿರೀಕರಿಸಬಹುದು. ಶಿಕ್ಷಣದ ಹಕ್ಕುಗಳನ್ನು ದಮನ ಮಾಡಬಹುದು – ಪ್ರೊ.ಆರ್.ಸುನಂದಮ್ಮ, ವಿಶ್ರಾಂತ ಪ್ರಾಧ್ಯಾಪಕರು.
ಯು.ಜಿ.ಸಿ.ಯು ಹೊರಡಿಸಿರುವ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಹೊಸ ಕರಡು ನಿಯಮಾವಳಿಯನ್ನು ಅವಲೋಕಿಸಿದರೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ನಂಬಿಕೆಯನ್ನೇ ಕಳೆಯುವಂತಿದೆ. ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳ ನೇಮಕಾತಿಯಲ್ಲಿ ರಾಜ್ಯಸರ್ಕಾರದ ಪಾತ್ರವನ್ನೇ ಮೊಟಕುಗೊಳಿಸಲು ಹೊರಟಿರುವ ಯು.ಜಿ.ಸಿ.ಯು ಹೊಸ ಶಿಕ್ಷಣ ನೀತಿಯ ಅಂಶಗಳನ್ನು ಜಾರಿಗೆ ತರಲು ಮುಂದಾಗಿದೆ. ಉನ್ನತ ಶಿಕ್ಷಣವನ್ನು ಪ್ರೈವೇಟ್ ಪಬ್ಲಿಕ್ ಜಂಟಿಯಾಗಿ ನಡೆಸುವುದಾಗಿ ಹೊಸ ಶಿಕ್ಷಣ ನೀತಿಯಲ್ಲಿ ನೀಡಲಾಗಿತ್ತು. ಅದರ ಅನುಷ್ಠಾನದ ಮುಂದಿನ ಹೆಜ್ಜೆಯಾಗಿ ಕುಲಪತಿಗಳ ಹುದ್ದೆಗೆ ಆಡಳಿತಾತ್ಮಕ ಅನುಭವವಿರುವ ಖಾಸಗಿ ಸಂಸ್ಥೆಯವರನ್ನು ನೇಮಿಸುವುದನ್ನು ಜಾರಿಗೊಳಿಸುವ ಉದ್ದೇಶದ ಈ ನಿಯಮವನ್ನು ತರಲು ಚಿಂತಿಸಿದೆ ಅನಿಸುತ್ತದೆ.
ಉನ್ನತ ಶಿಕ್ಷಣಕ್ಕೆ ಹಣ ಹಾಕುವ ಇಚ್ಛೆ ಸರ್ಕಾರಗಳಿಗಿಲ್ಲ. ಭಾರತದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂದು ಶೇ.30ರಷ್ಟು ಖಾಯಂ ಬೋಧಕರಿಲ್ಲ. ಎಲ್ಲ ಅರೆಕಾಲಿಕ ಶಿಕ್ಷಕರು ಬೋಧಿಸುತ್ತಿದ್ದಾರೆ. ಬೋಧಕರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಮತ್ತು ಅವರನ್ನು ನಿರಂತರವಾಗಿ ಅತಂತ್ರದಲ್ಲಿ ಇಡುವ ಇರಾದೆ ಸರ್ಕಾರಗಳಿಗಿವೆ. ಇದು ಬಂಡವಾಳಿಗರ ಮನಸ್ಥಿತಿಯನ್ನು ಅನುಮೋದಿಸುವಂತಿದೆ. ಈಗ ವಿದ್ಯಾರ್ಥಿಗಳನ್ನು ಗ್ರಾಹಕರನ್ನಾಗಿ ನೋಡಲಾಗುತ್ತಿದೆ. ಉನ್ನತ ಶಿಕ್ಷಣವನ್ನು ಉತ್ತಮ ಸಂಸ್ಥೆಗಳಲ್ಲಿ ಕಲಿಯಬೇಕೆಂದರೆ ನೀವು ಅರ್ಹರಾಗಿದ್ದರೆ ಸಾಲದು ಆ ಸಂಸ್ಥೆ ವಿಧಿಸುವಷ್ಟು ಫೀ ತುಂಬುವ ಶಕ್ತಿಯೂ ಬೇಕಾಗಿದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಆಡಳಿತ ಮಾಡುತ್ತಿರುವವರನ್ನು ನೇಮಿಸಿಕೊಂಡರೆ ಅವರಿಗೆ ವಿಶ್ವವಿದ್ಯಾನಿಲಯಗಳಿಗೆ ಬಂಡವಾಳ ಸಂಗ್ರಹಿಸುವುದು ಹೇಗೆ ಎಂಬುದು ತಿಳಿದಿರುತ್ತದೆ. ಅದಕ್ಕಾಗಿ ಸರ್ಕಾರ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸರ್ಕಾರಗಳು ಈ 5 ವರ್ಷಗಳಿಂದೀಚೆಗೆ ವಿಶ್ವವಿದ್ಯಾನಿಲಯಗಳಿಗೆ ಕೊಡುವ ಅನುದಾನವನ್ನೇ ಕಡಿಮೆ ಮಾಡಿವೆ. ಈಗ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳು ಕಟ್ಟುವ ಫೀ ಹಣದಲ್ಲೇ ಎಲ್ಲವನ್ನೂ ಸಂಭಾಳಿಸಬೇಕಾಗಿದೆ. ಖಾಯಂ ಬೋಧಕರು ಇಲ್ಲ, ಖಾಯಂ ಬೋಧಕೇತರ ಸಿಬ್ಬಂದಿಯೂ ಇಲ್ಲ. ಖಾಯಂ ನೌಕರರೆಲ್ಲರೂ ನಿವೃತ್ತಿಯಾದರೆ ಅವರಿಗೆ ನೀಡುವ ಸಂಬಳವು ನಿಲ್ಲುತ್ತದೆ.
ವಿಶ್ವವಿದ್ಯಾನಿಲಯಗಳು ಇಂದು ವಿಭಾಗಗಳ ಮುಖ್ಯಸ್ಥರಿಗೆ ನೀಡುವ ಸಾದಿಲ್ವಾರು ಹಣವನ್ನು ನೀಡದೆ, ಆಯಾ ವಿಭಾಗದ ಮುಖ್ಯಸ್ಥರಿಗೆ ಅದನ್ನು ನಿರ್ವಹಿಸಲು ಬಿಟ್ಟಿದೆ. ಹಾಗಾದರೆ ಮುಖ್ಯಸ್ಥರು ಯಾರಿಂದ ಹಣ ಪಡೆಯಬೇಕು? ಇಂಥ ಸ್ಥಿತಿಗೆ ವಿಶ್ವವಿದ್ಯಾನಿಲಯಗಳನ್ನು ದೂಡುವ ಮೂಲಕ ಅವುಗಳನ್ನು ಖಾಸಗಿಯವರಿಗೆ ವಹಿಸಿಕೊಡುವ ಎಲ್ಲ ತಳಪಾಯವನ್ನು ಹಾಕುತ್ತಿವೆ. ಸಾವಿರಾರು ಕೋಟಿ ಕಾರ್ಖಾನೆಗಳನ್ನು ಈಗಾಗಲೆ ಖಾಸಗಿಯವರಿಗೆ ಮಾರಿರುವಂತೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಖಾಸಗಿಯವರಿಗೆ ವಹಿಸುವ ಕಾಲ ದೂರವಿಲ್ಲ. ಇದನ್ನು ಹಂತ ಹಂತವಾಗಿ ಮಾಡಲಾಗುತ್ತದೆ ಎಂಬುದನ್ನು ಊಹಿಸಬಹುದು. ಭಾರತದಲ್ಲಿ ಶಿಕ್ಷಣವನ್ನು ದುಬಾರಿ ಮಾಡುವ ಮೂಲಕ ಬಡವರು, ಮಹಿಳೆಯರು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಶಿಕ್ಷಣಕ್ಕೆ ಕುತ್ತು ತರಬಹುದು.
ಇಂದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವವರು ಶೇ.85ರಿಂದ ಶೇ.90ರಷ್ಟು ಬಡವರು, ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು. ಈ ಸಂಸ್ಥೆಗಳು ಖಾಸಗಿಯವರ ಪಾಲಾದರೆ ಇವರ ಶಿಕ್ಷಣ ನಿಂತಂತೆ. ಖಾಸಗಿ ಕಂಪನಿಗಳಿಗೆ ನೀರು, ವಿದ್ಯುತ್ತು ಮತ್ತು ಭೂಮಿ ನೀಡುವಂತೆ ಶಿಕ್ಷಣ ಸಂಸ್ಥೆಗಳಿಗೂ ನೀಡುತ್ತಾ ಬಂದಿದ್ದಾರೆ. ಇನ್ನು ಮುಂದೆ ಈಗಿರುವ ಶಿಕ್ಷಣ ಸಂಸ್ಥೆಗಳನ್ನೆ ಅವರಿಗೆ ನೀಡಬಹುದು ಮತ್ತು ಅದರ ಮೂಲಕ ಉನ್ನತ ಶಿಕ್ಷಣದ ತ್ರಾಸದಿಂದ ಕೈ ತೊಳೆದುಕೊಳ್ಳಬಹುದು. ಆಗ ಅಧ್ಯಾಪಕರು ಖಾಸಗಿ ಸಂಸ್ಥೆಗಳು ಹೇಳುವ ಸಂಶೋಧನೆಗಳನ್ನು ಮಾಡುವ ಮೂಲಕ ಅವರ ಏಜಂಟರಂತೆ ಕೆಲಸ ಮಾಡಿ ವಿದ್ಯಾರ್ಥಿಗಳನ್ನು ಆ ಮೂಲಕ ಸೆಳೆಯಬಹುದಾಗಿದೆ. ಅಂತಹವರಿಗೆ ಅಲ್ಲಿ ಉದ್ಯೋಗ ಇರುತ್ತದೆ. ಇಲ್ಲದವರಿಗೆ ಇಲ್ಲ. ಇಂಥ ವ್ಯವಸ್ಥೆಯಿಂದ ಅನ್ಯಾಯವಾಗುವುದು ಜಾತಿ ಶ್ರೇಣೀಕರಣದಲ್ಲಿ ಕೆಳಗಿರುವವರಿಗೆ ಮಾತ್ರ.
ಇಂದು ವಿದ್ಯಾರ್ಥಿಗಳಿಂದ ಪ್ರತಿರೋಧ ಬಾರದೆ ಇದ್ದರೆ ಇನ್ನು ಎರಡು ಮೂರು ವರ್ಷಗಳಲ್ಲಿ ಬಡವರಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಉನ್ನತ ಶಿಕ್ಷಣ ಆಶಾಗೋಪುರವಾಗುತ್ತದೆ. ವೃತ್ತಿಗಳನ್ನು ಕಲಿಸಿ ಬಡವರನ್ನು ಅವರ ವೃತ್ತಿಗಳಿಗೆ ಹಿಂದಕ್ಕೆ ತಳ್ಳುವ ಮೂಲಕ ಜಾತಿ ಶ್ರೇಣೀಕರಣವನ್ನು ಮತ್ತಷ್ಟು ವಿಸ್ತರಿಸುತ್ತಾರೆ ಮತ್ತು ಜಾತಿ ಸಮಾಜವನ್ನು ಸ್ಥಿರೀಕರಿಸಬಹುದು. ಶಿಕ್ಷಣದ ಹಕ್ಕುಗಳನ್ನು ದಮನ ಮಾಡಬಹುದು. ನಿರ್ಣಾಯಕ ಹುದ್ದೆಗಳಿಗೆ ಹೇಗಿದ್ದರೂ ಮೀಸಲಾತಿಯಿಲ್ಲ ಮತ್ತು ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿಯಿಲ್ಲ. ಇದನ್ನು ಮೇಲುಜಾತಿಯ ಮತ್ತು ಶ್ರೀಮಂತರ ಕೈಗೆ ವೀಳ್ಯ ನೀಡಿ ಆಹ್ವಾನಿಸಬಹುದು. ಇದಕ್ಕೆ ನಾವೇ ಕಾರಣರಾಗುತ್ತೇವೆ ಎಂಬುದನ್ನು ಗ್ರಹಿಸದಿದ್ದರೆ ನಮ್ಮನ್ನು ನಾವೇ ಅಪಾಯದಲ್ಲಿ ದೂಡಿಕೊಳ್ಳುತ್ತೇವೆ.
ಯು.ಜಿ.ಸಿ. ನೀಡುತ್ತಿದ್ದ ಸಂಶೋಧನಾ ಯೋಜನೆಗಳನ್ನು ಈಗಾಗಲೇ ನಿಲ್ಲಿಸಲಾಗಿದೆ. ಹಾಗೆಯೇ ಸಂಶೋಧನಾ ಶಿಷ್ಯವೇತನಗಳನ್ನು ನಿಲ್ಲಿಸುವ ಮೂಲಕ ಈಗಾಗಲೇ ಕಾರ್ಯವನ್ನು ಮುನ್ನಡೆಸಿದೆ. ಜೆ.ಆರ್.ಎಫ್. ಪಾಸು ಮಾಡಿದವರಿಗೆ ಮಾತ್ರ ಸಂಶೋಧನಾ ಶಿಷ್ಯವೇತನ ನೀಡಲಾಗುತ್ತಿದೆ. ಉಳಿದ ಎಲ್ಲ ಶಿಷ್ಯವೇತನಗಳನ್ನು ನಿಲ್ಲಿಸಲಾಗಿದೆ. ಇದು ಅರಿತಿದ್ದರೂ ಏನೂ ಮಾಡಲಾರದಂತೆ ಕುಳಿತಿರುವ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತರು ಶೇ.80ರಷ್ಟು ಜನಸಂಖ್ಯೆ ತಮಗಾಗುವ ಅನ್ಯಾಯದ ಕುರಿತು ಚಿಂತಿಸುತ್ತಿಲ್ಲ. ಅವರು ಮೆತ್ತಿರುವ ಧರ್ಮದ ಮಾಯಾಲೋಕದಲ್ಲಿ ದೇವಸ್ಥಾನಗಳಿಗೆ ಮುಗಿ ಬೀಳುತ್ತಾ ಕಾಲು ತುಳಿತಕ್ಕೆ ಜೀವ ತೆರುವ ಮೂಲಕ ಕರ್ಮಸಿದ್ಧಾಂತಕ್ಕೆ ನೇತು ಬಿದ್ದಿದ್ದಾರೆ. ಟಿ.ವಿ.ಗಳು ಬಿತ್ತರಿಸುವ ಜೋತಿಷಿಗಳ ಮನೆಬಾಗಿಲಿಗೆ ತಿರುಗುತ್ತಿದ್ದಾರೆ. ಇಂಥ ಮೂಢನಂಬಿಕೆಗಳನ್ನು ಕಲಿತವರೂ ಅನುಸರಿಸುತ್ತಾ ತಮ್ಮ ಮುಂದಿನ ಪೀಳಿಗೆಗೂ ಹಂಚುತ್ತಿದ್ದಾರೆ.
ವಿವೇಕಾನಂದರು ಹೇಳಿದ ಮಾತನ್ನು ಈಗಲಾದರೂ ಜನರು ಆಲಿಸಲಿ, ‘ಏಳಿ ಎದ್ದೇಳಿ ನಿಮ್ಮ ಏಳ್ಗೆಗೆ ನೀವೇ ಶಿಲ್ಪಿ’ ಎಂಬ ಮಾತನ್ನು ಅನುಷ್ಠಾನಕ್ಕೆ ತರಲು ಈಗ ಯು.ಜಿ.ಸಿ. ಹೊರಡಿಸಿರುವ ಕರಡಿನ ಪ್ರತಿಯನ್ನು ನಿಲ್ಲಿಸಲು ಪ್ರಯತ್ನಿಸಿ. ಮುಂದಿನ ಅಪಾಯವನ್ನು ತಡೆಯಲು ಕಾರ್ಯಪ್ರವೃತ್ತರಾಗಿ.
ಪ್ರೊ.ಆರ್.ಸುನಂದಮ್ಮ
ವಿಶ್ರಾಂತ ಪ್ರಾಧ್ಯಾಪಕರು.
ಇದನ್ನೂ ಓದಿ- ಹೊಸ ಯುಜಿಸಿ ಕರಡು ನಿಯಮಾವಳಿ – ವಿಶ್ವವಿದ್ಯಾನಿಲಯಗಳನ್ನು ಲಯ ಮಾಡುವ ಹುನ್ನಾರ