ವಿಶ್ವ ಹವ್ಯಕ ಸಮ್ಮೇಳನ : ಇತಿಹಾಸ ಮತ್ತು ಭವಿಷ್ಯ

Most read

ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ‌ ! – ನವೀನ್ ಸೂರಿಂಜೆ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿಸೆಂಬರ್ 27 ರಿಂದ 29 ರ ತನಕ ವಿಶ್ವ ಹವ್ಯಕ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ “ನಾಡಿನ ವಿವಿಧ ಸಮಾಜದ ಸಂಸ್ಥೆಗಳಿಗೆ ಸೌಹಾರ್ದ ಗೌರವ ಸನ್ಮಾನ” ಎಂಬ ಕಾರ್ಯಕ್ರಮವನ್ನು ಮುದ್ರಿಸಿದೆ. ಇದು ಕರ್ನಾಟಕದ ಹವ್ಯಕ ಬ್ರಾಹ್ಮಣ ಸಮುದಾಯದ ಇತಿಹಾಸ ಮತ್ತು ಭವಿಷ್ಯದ ಅವಲೋಕನಕ್ಕೆ ಮುನ್ನುಡಿಯಂತಿದೆ.

ಶತಶತಮಾನಗಳಿಂದ ಬ್ರಾಹ್ಮಣರು ಪಾಲಿಸಿಕೊಂಡು ಬಂದ ಅಸ್ಪೃಶ್ಯತೆ, ಮಡಿ ಮೈಲಿಗೆಯನ್ನು ವಿಶ್ವ ಹವ್ಯಕರ ಸಮ್ಮೇಳನದಲ್ಲಿ ಕೊಂಚ ಬದಲಿಸಿ, ಶೋಷಿತ, ಶೂದ್ರ ವರ್ಗಗಳನ್ನು ಬಹಿರಂಗವಾಗಿ ಅಧಿಕೃತ ಬ್ರಾಹ್ಮಣ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಅಪ್ಪಿಕೊಳ್ಳಲು ಹವ್ಯಕರು ಮುಂದಾಗಿದ್ದಾರೆ. ಈ ಬಾರಿಯ ಸಮ್ಮೇಳನದಲ್ಲಿ ಸುಮಾರು 50 ಕ್ಕೂ ಅಧಿಕ ಬ್ರಾಹ್ಮಣ ಸಂಘಟನೆಗಳ ಜೊತೆ 21 ದಲಿತ, ಶೂದ್ರ ಸಂಘಟನೆಗಳಿಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸನ್ಮಾನ ನಡೆಯಲಿದೆ. ಆರ್ಯ ವೈಶ್ಯ ಮಹಾಸಭಾ, ವೀರಶೈವ ಮಹಾಸಭಾ, ಒಕ್ಕಲಿಗರ ಸಂಘ, ಕುರುಬರ ಸಂಘ, ಬಂಟರ ಸಂಘ, ಬಿಲ್ಲವರ ಸಂಘ, ಆದಿವಾಸಿ ಸಂಘಟನೆ, ವಿಶ್ವಕರ್ಮ ಸಂಘಟನೆ, ಮಾದಿಗ ಸಮಾಜದ ಸಂಘಟನೆ, ಹಾಲಕ್ಕಿ ಒಕ್ಕಲು ಸಮಾಜ, ಈಡಿಗರ ಸಂಘ, ಹರಿಕಾಂತ ಸಮಾಜ, ಬಲಿಜ ಸಂಘ, ಉಪ್ಪಾರ ಸಮಾಜ, ಯಾದವ ಸಮಾಜ, ಮಡಿವಾಳರ ಸಂಘ, ಗಾಣಿಗ ಸಮಾಜ, ದೇವಾಡಿಗ ಸಮಾಜ, ಬಂಜಾರ ಸಮಾಜ, ಕಾರ್ವಿ ಸಮಾಜ, ಭೋವಿ ಸಮಾಜದ ಸಂಘಟನೆಗಳಿಗೆ ಹವ್ಯಕರ ವೇದಿಕೆಯಲ್ಲಿ ಸನ್ಮಾನ ನಡೆಯಲಿದೆ.

ಇದು ಹವ್ಯಕರ ಐತಿಹಾಸಿಕ ನಡೆ. ಇದು ಕೇವಲ ಒಂದು ದಿನದ ವೇದಿಕೆಗೆ ಸೀಮಿತವಾಗ ಕೂಡದು. ಹಾಗಾಗಿ ಹವ್ಯಕರ ಇತಿಹಾಸ ಮತ್ತು ಭವಿಷ್ಯದ ಸ್ಪಷ್ಟತೆ ಸಂಘಟಕರಿಗೆ ಇದ್ದರೆ ಒಳ್ಳೆಯದು.

ಹವ್ಯಕರು ಶಂಕರಾಚಾರ್ಯರ ಅನುಯಾಯಿಗಳು. ಶಂಕರಾಚಾರ್ಯರ ಪಂಥವು ಮಾಧ್ವರಷ್ಟು ಕರ್ಮಠ ಪಂಥವಲ್ಲ. (ಹಾಗಂತ ಇತಿಹಾಸದಲ್ಲಿ ಹವ್ಯಕ ಬ್ರಾಹ್ಮಣರು, ಹವ್ಯಕರು ಶ್ಯಾನುಭೋಗರು, ಪಟೇಲರು ನಡೆಸಿದ ದೌರ್ಜನ್ಯವೇನೂ ಕಡಿಮೆಯೇನಲ್ಲ !) ಶಂಕರಾಚಾರ್ಯರ ಮೂಲ ಸಿದ್ಧಾಂತವನ್ನು ಮಧ್ವಾಚಾರ್ಯರ ಮೂಲ ಸಿದ್ಧಾಂತದೊಂದಿಗೆ ಹೋಲಿಸಿದರೆ ಇವೆರಡರಲ್ಲಿ ಶಂಕರಾಚಾರ್ಯರ ಸಿದ್ಧಾಂತ ತಕ್ಕಮಟ್ಟಿಗೆ ಹೆಚ್ಚು ಪ್ರಗತಿಪರವಾಗಿದೆ.

ಹವ್ಯಕರ ಜಾತಿಯ ಸೌಹಾರ್ದತೆ ಕೇವಲ ವಿಶ್ವ ಹವ್ಯಕರ ಸಮ್ಮೇಳನದ ವೇದಿಕೆಗೆ ಸೀಮಿತ ಆಗಬಾರದು. ಅದು ಹವ್ಯಕರ ಮಠಗಳಿಗೂ ವಿಸ್ತರಿಸಬೇಕು. ಮಠ ಪರಂಪರೆಯನ್ನು ಬುದ್ಧಿಸಂ (Buddhism)ನಿಂದ ಶಂಕರಾಚಾರ್ಯರು ಹಿಂದೂ ಧರ್ಮಕ್ಕೆ ತಂದಿದ್ದೇ ಇಂತಹ ಸದುದ್ದೇಶಕ್ಕಾಗಿ‌ ! ಮಠವೆಂದರೆ ಬುದ್ಧನ ವಿದ್ಯಾರ್ಥಿ ನಿಲಯವಷ್ಟೆ‌. ಬೌದ್ಧರ ಮಠ ಪರಂಪರೆಯ ಮಾದರಿಯನ್ನೇ ಶಂಕರಾಚಾರ್ಯರು ನಕಲು ಮಾಡಿ ಹಿಂದೂ ಧರ್ಮದಲ್ಲಿ ಮಠಗಳನ್ನು ಪ್ರಾರಂಭ ಮಾಡಿದರು. (ಆಧಾರ ಗ್ರಂಥ : ಹವ್ಯಕ ಸಮಾಜ ಮತ್ತು ಶ್ರೀ ಗುರುಮಠದ ಇತಿಹಾಸ, ಮುದ್ರಣ – 1954, ಪುಟ ಸಂಖ್ಯೆ-4, ಪ್ರಕಾಶಕರು : ಶ್ರೀ ಮದ್ರಾಮಚಂದ್ರಾಪುರ ಮಠದ ಇತಿಹಾಸ ಪ್ರಕಾಶನ ಸಮಿತಿ, ತೀರ್ಥಹಳ್ಳಿ)

ಹಾಗಾಗಿ, ಹವ್ಯಕ ಮಠಗಳು ಶಂಕರಾಚಾರ್ಯರ ಅದ್ವೈತ ಸಿದ್ಧಾಂತದೊಂದಿಗೆ ಬೌದ್ಧ ತತ್ವವನ್ನೂ ಮೈಗೂಡಿಸಿಕೊಳ್ಳಬೇಕಿದೆ.

ಹಿಂದೂ ಧರ್ಮದ 21 ದಲಿತ- ಶೂದ್ರರನ್ನು ಹವ್ಯಕರು ತಮ್ಮ ಧಾರ್ಮಿಕ ಸಮ್ಮೇಳನದ ವೇದಿಕೆ ಹತ್ತಿಸಿಕೊಂಡಿದ್ದು ಶ್ಲಾಘನೀಯ.‌ ಆದರೆ ಅದರ ಜೊತೆಗೆ ಮುಸ್ಲೀಮರನ್ನೂ, ಮುಸ್ಲಿಂ  ಸಂಘಟನೆಗಳನ್ನೂ ಒಳಗೊಂಡಿದ್ದರೆ ಹವ್ಯಕ ಬ್ರಾಹ್ಮಣ ಸಮಾವೇಶ ಐತಿಹಾಸಿಕವಾಗಿ ಇನ್ನಷ್ಟೂ ಗಟ್ಟಿಯಾಗಿ ದಾಖಲಾಗುತ್ತಿತ್ತು.

ಹಿಂದೂ ಮತ್ತು ಮುಸ್ಲೀಮರಿಗೆ ಐತಿಹಾಸಿಕ ಸಂಬಂಧವಿದೆ. ಈ ಸಂಬಂಧವೇ ಹಲವು ಮತ, ಪರಂಪರೆಯನ್ನು ಕನ್ನಡದ ನೆಲದಲ್ಲಿ ಹುಟ್ಟು ಹಾಕಿದೆ. “ಹಿಂದೂ ಮತ್ತು ಇಸ್ಲಾಂ ಧರ್ಮಗಳ ಒಂದೆರಡು ಉಚ್ಚ ಸಿದ್ಧಾಂತಗಳು ಪರಸ್ಪರ ಹೋಲುತ್ತವೆ. ಇವೆರಡೂ ಧರ್ಮಾನುಯಾಯಿಗಳ ಬಾಹ್ಯ ಆಚಾರಗಳು ತೀರಾ ಭಿನ್ನವಾಗಿವೆ. ಈ ಪರಿಸ್ಥಿತಿಯಲ್ಲಿ ಪರಸ್ಪರ ಸೌಹಾರ್ದ ಬೆಳೆಸುವ ಅನೇಕ ಪ್ರಯತ್ನಗಳ ಫಲಿತಾಂಶವಾಗಿ ‘ಸಿಖ್ ಮತ, ಕಬೀರಪಂಥ, ಸಂತ ಸಂಪ್ರದಾಯ’ ಮುಂತಾದವು ಹುಟ್ಟಿಕೊಂಡವು. ಮುಸ್ಲಿಂ ಧರ್ಮದಲ್ಲಿ ಹಿಂದೂ ಧರ್ಮದಿಂದ ಪ್ರಭಾವಿತವಾದ ‘ಸೂಫೀ ಸಂಪ್ರದಾಯ’ವು ಅಸ್ತಿತ್ವಕ್ಕೆ ಬಂತು  ಎಂದು ‘ಹವ್ಯಕ ಸಮಾಜ ಮತ್ತು ಶ್ರೀ ಗುರುಮಠದ ಇತಿಹಾಸ’ ಎಂಬ ಗ್ರಂಥ (ಮುದ್ರಣ – 1954, ಪುಟ ಸಂಖ್ಯೆ-5)ದಲ್ಲಿ ಹೇಳಲಾಗಿದೆ‌.

ರಾಮಚಂದ್ರಾಪುರ ಮಠ

ಹವ್ಯಕರ ರಾಮಚಂದ್ರಾಪುರ ಮಠ, ಶೃಂಗೇರಿ ಶಾರದಾ ಪೀಠ, ಸ್ವರ್ಣವಲ್ಲಿ ಮಠಕ್ಕೂ ಹೈದರಾಲಿಗೂ, ಟಿಪ್ಪು ಸುಲ್ತಾನ್ ಗೂ ಅವಿನಾನುಭಾವ ಸಂಬಂಧವಿದೆ. ಶೃಂಗೇರಿ ಪೀಠದ ಮೇಲೆ ಮರಾಠರು ದಾಳಿ ಮಾಡಿ ದರೋಡೆ ಮಾಡಿದಾಗ ಮತ್ತೆ ಶೃಂಗೇರಿ ಮಠದ ಗತವೈಭವ ಮರಳುವಂತೆ ಧನಸಹಾಯ, ರಕ್ಷಣೆ ನೀಡಿದ್ದು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಎಂಬುದು ಇತಿಹಾಸದ ಪುಟದಲ್ಲಿ ದಾಖಲಾದ ಸತ್ಯ.

ರಾಮಚಂದ್ರಾಪುರ ಮಠಕ್ಕೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ನಡೆದುಕೊಳ್ಳುತ್ತಿದ್ದರು.‌ ಮತ್ತು ರಾಮಚಂದ್ರಾಪುರ ಮಠವನ್ನು ಅತೀವವಾಗಿ ಗೌರವಿಸುತ್ತಿದ್ದರು. (ಆಧಾರ: RAMACHANDRAPURA MATHA : ITS HISTORY AND ANTIQUITIES)

ಆಗ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾದ ಹವ್ಯಕರ ಸ್ವರ್ಣವಲ್ಲಿ ಸಂಸ್ಥಾನದ ಮಠಕ್ಕೂ ಹೈದರ್ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. 1740 ರಿಂದ 1761 ರ ಅವಧಿಯಲ್ಲಿ ಮರಾಠ ಪೇಶ್ವೆ ಬಾಳಾಕಿ ಬಾಜೀರಾಯನು ಸ್ವರ್ಣವಲ್ಲಿ ಮಠದ ವ್ಯಾಪ್ತಿಯ ಪ್ರದೇಶಗಳಿಗೆ ದಾಳಿ ಮಾಡಿ ದರೋಡೆ ನಡೆಸಿದನು. ಹೈದರ್ ಹಾಗೆ ಮಾಡಲಿಲ್ಲ. ಹೈದರ್ ಅಲಿಯವರ ಸಂಪರ್ಕಕ್ಕೆ ಸ್ವರ್ಣವಲ್ಲಿ ಮಠ ಬಂದ ನಂತರ ಸ್ವರ್ಣವಲ್ಲಿ ಮಠದ ಶ್ರೀಗಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಹೈದರಾಲಿ ಮತ್ತು ಸ್ವರ್ಣವಲ್ಲಿ ಮಠಕ್ಕೆ ಇರುವ ಸಂಬಂಧದ ಬಗ್ಗೆ ಹೈದರಾಲಿ ಕಾಲದ ದಾಖಲೆಗಳು ಸಾಕ್ಷ್ಯ ನುಡಿಯುತ್ತಿದ್ದು, ದಾಖಲೆಗಳು ಸ್ವರ್ಣವಲ್ಲಿ ಮಠದಲ್ಲಿವೆ.

ಸ್ವರ್ಣವಲ್ಲಿ ಗುರು ಪರಂಪರೆಯಲ್ಲಿ 45ನೆಯವರಾದ ಶ್ರೀ ಗಂಗಾಧರೇಂದ್ರ ಸರಸ್ವತಿಗಳು (1778-1816) ಟಿಪ್ಪುವಿನ ಸಮಕಾಲೀನರು. ಟಿಪ್ಪು ಸುಲ್ತಾನ್ ಮತ್ತು ಕೆನರಾದ ಹವ್ಯಕರ ಸ್ವರ್ಣವಲ್ಲಿ ಮಠದ ಸಂಬಂಧಗಳ ಬಗ್ಗೆ ಸ್ವರ್ಣವಲ್ಲಿ ಮಠದಲ್ಲಿ ಟಿಪ್ಪು ಕಾಲದ ಒಟ್ಟು ಎಂಟು ದಾಖಲೆಗಳು ಇವೆ.

ಟಿಪ್ಪು ಕಾಲದ ಈ ಎಂಟು ದಾಖಲೆಗಳು, ಸ್ವರ್ಣವಲ್ಲಿ ಮಠಕ್ಕೆ ಟಿಪ್ಪು ನೀಡಿದ ಉಡುಗೊರೆಯ ಬಗ್ಗೆ ಎರಡು ಪ್ರತ್ಯೇಕ ದಾಖಲೆಗಳು ಇವೆ. ಸೋಂದಾ ಸ್ವರ್ಣವಲ್ಲೀ ಮಠದ ರಕ್ಷಣೆಗಾಗಿ ಟಿಪ್ಪು ಸರಕಾರವು ಸ್ವರ್ಣವಲ್ಲೀ ಮಠಕ್ಕೆ ಶಿರಸಿ ಮತ್ತು ಯಲ್ಲಾಪುರಗಳಲ್ಲಿ ಒಟ್ಟು 108 ಗ್ರಾಮಗಳಿಗೆ ಉಂಬಳಿಯಾಗಿ ಉಡುಗೊರೆ ನೀಡಿದ್ದರು. ಇದು ಸ್ವರ್ಣವಲ್ಲಿ ಮಠದಲ್ಲಿರುವ ಪ್ರಾಚೀನ ದಾಖಲೆಗಳಿಂದ ವೇದ್ಯವಾಗುತ್ತದೆ. ಟಿಪ್ಪು ಮತ್ತು ಸ್ವರ್ಣವಲ್ಲಿ ಮಠ, ಸೋಂದೆಯ ಹವ್ಯಕರು ಅನ್ಯೋನ್ಯ ಸಂಬಂಧವನ್ನು ಹೊಂದಿದ್ದರು ಎಂದು ಸೋಂದೆ ಸ್ವರ್ಣವಲ್ಲಿ ಮಠದ ಇತಿಹಾಸ ಹೇಳುತ್ತದೆ.

(ಆಧಾರ : ಸ್ವರ್ಣವಲ್ಲೀ ಮಹಾಸಂಸ್ಥಾನದ 54ನೆಯ ಪೀಠಾಧಿಪತಿಗಳಾದ ಶ್ರೀ ಗಂಗಾಧರೇಂದ್ರ ಸರಸ್ವತಿ ನೇತೃತ್ವದ ಭಗವತ್ಪಾದ ಪ್ರಕಾಶನ ಪ್ರಕಟಿಸಿರುವ ‘ಶ್ರೀ ಶಂಕರಾಚಾರ್ಯ ಅದ್ವೈತ ದರ್ಶನ’ ಗ್ರಂಥ)

ಟಿಪ್ಪು ಸುಲ್ತಾನ್ ಬದುಕಿದ್ದಾಗ ಶಂಕರ ಪರಂಪರೆಯ ಹವ್ಯಕರು ರಾಜಮರ್ಯಾದೆ ಪಡೆಯುತ್ತಿದ್ದರು. ಟಿಪ್ಪು ಹುತಾತ್ಮರಾದ ಬಳಿಕ ಟಿಪ್ಪುವಿನ ದಿವಾನರಾಗಿದ್ದ, ಮಾಧ್ವ ಪಂಥಾನುಯಾಯಿ ಪೂರ್ಣಯ್ಯನವರು ಬ್ರಿಟೀಷರೊಂದಿಗೆ ಸೇರಿಕೊಂಡರು. ಹಾಗಾಗಿ ಧರ್ಮಸ್ಥಳ ಮಂಜುನಾಥೇಶ್ವರ ದೇಗುಲವೂ ಸೇರಿದಂತೆ ಸ್ಥಾನಿಕ/ಹವ್ಯಕರ ದೇವಸ್ಥಾನಗಳೆಲ್ಲವೂ ಮಾಧ್ವರ ಪಾಲಾಯಿತು. ಹವ್ಯಕರು / ಸ್ಥಾನಿಕರು ಟಿಪ್ಪು ಪ್ರೇರಿತ ಸ್ವಾತಂತ್ರ್ಯ ಹೋರಾಟವಾದ ‘ಕಲ್ಯಾಣಪ್ಪನ ದಂಗೆ’ಯಲ್ಲಿ ಭಾಗಿಯಾಗಿ ಎಲ್ಲವನ್ನೂ ಕಳೆದು ಕೊಂಡರು. ( ಆಧಾರ : ಉಡುಪಿ ಜಿಲ್ಲೆಯ ನೈಜ ಇತಿಹಾಸ. ಲೇ : ಡಾ ಮ.ಸು ಅಚ್ಯುತ ಶರ್ಮ ಮತ್ತು ‘ತುಳುನಾಡು’ ಲೇಖಕರು : ಗುರುರಾಜ ಭಟ್)

ಹಾಗಾಗಿ ವಿಶ್ವ ಹವ್ಯಕ ಸಮ್ಮೇಳನವು ‘ಒಳಗೊಳ್ಳುವ’ ನಿಟ್ಟಿನಲ್ಲಿ ಇಟ್ಟ ಪುಟ್ಟ ಹೆಜ್ಜೆಯನ್ನು ದಾಪುಗಾಲಾಗಿಸಿಕೊಂಡು ಐತಿಹಾಸಿಕವಾಗಿ ಇನ್ನಷ್ಟೂ ಗಟ್ಟಿಗೊಳಿಸಬೇಕು. ಅದು ಹವ್ಯಕ ಸಮುದಾಯದ ಹೆಜ್ಜೆ ಗುರುತುಗಳಾಗಿ ಇತಿಹಾಸದಲ್ಲಿ ಉಳಿದುಕೊಳ್ಳಲಿದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಅಂಬೇಡ್ಕರ್ ಹೆಗಲ ಮೇಲೆ ಬಂದೂಕಿಟ್ಟು ಬ್ರಾಹ್ಮಣ್ಯವಾದಿಗಳ ಹೊಸ ಅಭಿಯಾನ

More articles

Latest article