ಬೆಳಗಾವಿ: ನೀನು ಪ್ರಾಸ್ಟಿಟ್ಯೂಟ್ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ 12 ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಹೇಳಿದ್ದಾರೆ. ಇದು ದಾಖಲೆಯಲ್ಲಿದೆ. ಘಟನೆ ನಡೆದ ಬಳಿಕ ಸಭಾಪತಿ ಅವರು ಚರ್ಚೆಗೆ ಅವಕಾಶ ಕೊಡಬೇಕಿತ್ತು. ಅವರ ನಡೆ ನನಗೆ ಇಷ್ಟವಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಕ್ಕೆ ಚರ್ಚೆ ಆರಂಭವಾಗಿದೆ. ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಿಂದಿಸಿದಾಗ ಅವರ ವಿರುದ್ಧ ಹೋರಾಟ ಮಾಡಬೇಕಾಯಿತು. ಅದೇ ವೇಳೆ ಇವರು ಹೆಣ್ಣುಮಗಳಿಗೆ ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆ. ಮಾಧ್ಯಮಗಳಿಗೆ ಬೇಕಾದರೆ ನಾನೇ ದಾಖಲೆ ಕೊಡುತ್ತೇನೆ ಎಂದರು.
ರವಿ ಅವರ ನಡೆ ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತೀಯ ಸಂಸ್ಕೃತಿಯೇ ಅಥವಾ ಬಿಜೆಪಿ ಸಂಸ್ಕೃತಿಯೇ? ಸಭಾಪತಿ ಅವರು ಕೂಡಾ ಏನಾಗಿದೆ ಎಂದು ಪರಿಶೀಲನೆ ಮಾಡಬೇಕಿತ್ತು. ಲಕ್ಷ್ಮೀ ಅವರ ತಪ್ಪಿದ್ದರೆ ಅವರಿಗೇ ತಪ್ಪು ಎಂದು ಹೇಳಬೇಕಿತ್ತು. ರವಿ ತಪ್ಪಿದ್ದರೆ ಅವರಿಗೆ ಹೇಳಬೇಕಿತ್ತು. ಹಿರಿಯ ರಾಜಕಾರಣಿ ಆದ ಅವರಿಗೆ ಇದು ಗೊತ್ತಿರಬೇಕಿತ್ತು. ಅವರು ಯಾವುದೇ ಪಕ್ಷದವರಾಗಿರಲಿ, ಆದರೆ ಅವರ ಹುದ್ದೆ ಪಕ್ಷಾತೀತವಾಗಿ ಇರಬೇಕಾದದ್ದು ಎಂದೂ ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಏನು ಮಾಡಿದರು ಎಂದು ನನಗೆ ಗೊತ್ತಿಲ್ಲ. ಬಿಜೆಪಿ ನಾಯಕರು ಖಾನಾಪುರ ಪೋಲೀಸ್ ಠಾಣೆಯಲ್ಲಿ ಕುಳಿತು ಸಭೆ ಮಾಡಿದ್ದು ಸರಿಯಲ್ಲ. ಒಬ್ಬ ಆರೋಪಿಯನ್ನು ಭೇಟಿ ಮಾಡಲು ಬಿಟ್ಟಿದ್ದು ತಪ್ಪು. ಹಿರಿಯ ನಾಯಕರಿಗೆ ಅವಕಾಶ ನೀಡಿದರೆ ಇವರು ಠಾಣೆಯಲ್ಲೇ ಸಭೆ ಮಾಡಿದ್ದಾರೆ, ಪೊಲೀಸರು ಸೌಜನ್ಯದಿಂದ ಬಿಜೆಪಿ ನಾಯಕರೊಂದಿಗೆ ವರ್ತಿಸಿದ್ದಾರೆ. ಒಂದು ಅರ್ಥದಲ್ಲಿ ಪೊಲೀಸರ ನಡೆತೆಯೂ ಸರಿ ಇಲ್ಲ ಎಂದರು. ಬಿಜೆಪಿ ನಾಯಕರು ಏಕೆ ಪ್ರತಿಭಟನೆ ಮಾಡುತ್ತಿದ್ಸಾರೆ ಎನ್ನುವುದೇ ಅರ್ಥವಾಗುತ್ತಿಲ್ಲ. ಕೊಳಕು ಬಾಯಿಗೆ ಏನೋ ಆಗಿದೆ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಚಿಕ್ಕಮಗಳೂರು ಜನರಿಗೆ ಇಂತಹ ಸಂಸ್ಕೃತಿ ಇಲ್ಲ. ಹರಕಲು ಬಾಯಿಯ ಇವರೊಬ್ಬರಿಗೆ ಮಾತ್ರ ಇದೆ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.