ಸಚಿವೆಯ ಚಾರಿತ್ರ್ಯಹರಣ; ನಿಂದಕನ ಬಂಧನಕ್ಕೆ ಸಂವಿಧಾನ ಕಾರಣ

Most read

ಲಿಂಗ ಸಮಾನತೆ ಇರುವ, ಶೋಷಿತ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ಇರುವ ಅಂಬೇಡ್ಕರ್ ರವರ ಸಂವಿಧಾನವನ್ನು ಉಳಿಸಿ ಕೊಳ್ಳುವುದರಲ್ಲಿಯೇ ಸ್ವಾಭಿಮಾನದ ಬದುಕಿದೆ. ಸಿ.ಟಿ.ರವಿಯಂತಹ ಪುರುಷಹಂಕಾರಿಗಳನ್ನು ನಿಯಂತ್ರಿಸಲು ಅಂಬೇಡ್ಕರ್ ರವರ ಸಂವಿಧಾನವೊಂದೇ ದಾರಿ ಹಾಗೂ ಗುರಿಯಾಗಿದೆ – ಶಶಿಕಾಂತ ಯಡಹಳ್ಳಿ

ಕೆಲವು ಗಂಡಸರೇ ಹೀಗೆ, ಸೋಲುವ ಆತಂಕ ಹೆಚ್ಚಾದರೆ ಹೆಂಗಸರ ಚಾರಿತ್ರ್ಯ ಹರಣ ಮಾಡಲು ಯತ್ನಿಸಿ ಅವರ ನೈತಿಕ ಬಲವನ್ನೇ ಕುಸಿಯುವಂತೆ ಮಾಡುತ್ತಾರೆ.

ಕೆಲವು ಹೆಣ್ಮಕ್ಕಳೂ ಸಹ ಹಾಗೇನೇ! ಚಾರಿತ್ರ್ಯವಧೆ ಮಾಡುವ ಗಂಡಸರಿಗೆ ಸವಾಲು ಹಾಕಿ ನಿಲ್ಲುವ ಬದಲಾಗಿ ಕಣ್ಣೀರು ಹಾಕಿ ತಮ್ಮ ದೌರ್ಬಲ್ಯವನ್ನು ತೋರಿಸಿಕೊಳ್ಳುತ್ತಾರೆ. ಕೆಲವೇ ಕೆಲವು ಹೆಣ್ಣುಮಕ್ಕಳು ಕಾನೂನಿನ ರಕ್ಷಣೆ ಪಡೆದು ನಿಂದಕರ ಬಂಧನಕ್ಕೂ ಕಾರಣರಾಗುತ್ತಾರೆ.

ಈಗ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನದ ಕೊನೆಯ ದಿನ ಆಗಿದ್ದೂ ಇದೇ ರೀತಿಯ ಘಟನೆ. ಪುರುಷಹಂಕಾರದ ಮದವೇರಿದ ಸನಾತನಿ ಸಂಘಿ ಶಾಸಕನೊಬ್ಬ ಸಚಿವೆಯೊಬ್ಬರಿಗೆ ಮೇಲ್ಮನೆಯ ಸದನದಲ್ಲಿಯೇ ಮಾಡಿದ ಚಾರಿತ್ರ್ಯಹರಣ ಪ್ರಕರಣವೇ ಮೇಲಿನ ಮಾತುಗಳಿಗೆ ಸಾಕ್ಷಿಯಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಮತ್ತು ಸಿ ಟಿ ರವಿ

ಅಧಿವೇಶನದ ಕೊನೆಯ ದಿನ ಮೇಲ್ಮನೆಯಲ್ಲಿ ಅಂಬೇಡ್ಕರ್ ರವರಿಗೆ ಕೇಂದ್ರ ಗೃಹ ಸಚಿವರು ಮಾಡಿದ ಅವಮಾನದ ಕುರಿತು ಆರೋಪ ಪ್ರತ್ಯಾರೋಪಗಳ ಗದ್ದಲ ನಡೆದಿರುವಾಗ ಎಂ ಎಲ್ ಸಿ ಸಿ.ಟಿ.ರವಿ ಮೈಮೇಲೆ ದೇವರು ಬಂದಂತೆ ಕುಣಿಯತೊಡಗಿದ್ದು ಸೋಜಿಗದ ಸಂಗತಿಯಾಗಿರಲಿಲ್ಲ. ಯಾವಾಗ ಮಾತಿಗೆ ಮಾತು ಬೆಳೆದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ರವರವರು ಸಿ.ಟಿ.ರವಿಗೆ ಕೊಲೆಗಡುಕ ಎಂದು ಮೂದಲಿಸಿದರೋ ಆಗ ಈ ರವಿ ಎನ್ನುವ ಸಂಘಿ ಸಂತಾನದೊಳಗಿನ ಪುರುಷಹಂಕಾರಕ್ಕೆ ಕೊಡಲಿ ಪೆಟ್ಟು ಬಿದ್ದಂತಾಯ್ತು. ಕಳ್ಳಿ, ಸುಳ್ಳಿ, ಮಳ್ಳಿ ಎಂದು ವಾಪಸ್ ಬೈದಿದ್ದರೂ ಅಂತಹ ಅನಾಹುತವೇನೂ ಆಗುತ್ತಿರಲಿಲ್ಲ. ಆದರೆ ಗಂಡಸರು ಹೆಣ್ಮಕ್ಕಳ ಬಾಯಿ ಮುಚ್ಚಿಸಲು ಹೂಡುವ ಕೊನೆಯ ಚಾರಿತ್ರ್ಯಹರಣದ ಅಸ್ತ್ರ ಇದೆಯಲ್ಲಾ ಅದನ್ನು ಈ ರವಿ ಮಹಾಶಯ ಪ್ರಯೋಗಿಸಿದರು. ಒಂದಲ್ಲಾ ಎರಡಲ್ಲಾ ಹತ್ತು ಬಾರಿ ಪ್ರಾಸ್ಟಿಟ್ಯೂಟ್ ಎಂದು ಎಲ್ಲರ ಮುಂದೆ ನಿಂದಿಸಿ ತಮ್ಮ ಗಂಡಾಳ್ವಿಕೆಯ ದುರಹಂಕಾರವನ್ನು ಮೆರೆದರು.

ಈ ಒಂದು ಕೆಟ್ಟ ಪದ ಈ ಸಂಘಿಯ ಮಹಿಳಾ ವಿರೋಧಿ ಸಂಸ್ಕೃತಿಯನ್ನು ಬೆತ್ತಲುಗೊಳಿಸಿತು. ಕಳ್ಳಿ ಅಂದ್ರೆ ನೀನು ಕಳ್ಳ ಎನ್ನಬಹುದು. ಆದರೆ ಮಹಿಳೆಗೆ ವೇಶ್ಯೆ ಎಂದು ನಿಂದಿಸಿದರೆ ಅದಕ್ಕೆ ಬದಲಾಗಿ ಬೈಬಹುದಾದ ಅಷ್ಟೇ ತೀವ್ರತೆಯ ಪದವನ್ನು ಈ ಸಮಾಜ ಇನ್ನೂ ಸೃಷ್ಟಿಸಿಲ್ಲ. ಗಂಡು ಸೂಳೆ ಎಂದು ನಿಂದಿಸಬಹುದಾದರೂ ಅದನ್ನು ಸಮಾಜ ಒಪ್ಪುವುದಿಲ್ಲ. ‘ಸೂಳೆತನ ಎನ್ನುವುದು ಹೆಂಗಸರು ಮಾತ್ರ ಮಾಡಬಹುದೇ ವಿನಃ ಗಂಡಸರು ಮಾಡಲಾರರು’ ಎನ್ನುವುದೇ ಈ ಗಂಡು ಸಮಾಜದ ಪುಂಡ ನಂಬಿಕೆ.

ಹೀಗಾಗಿ ಸಚಿವೆಗೆ ವಾಪಸ್ ನಿಂದಿಸಲು ಬೈಗಳು ಸಿಗದೇ ಇರುವುದರಿಂದ ನಿನಗೆ ತಾಯಿ ಮಗಳು ಇಲ್ವಾ? ಎಂದು ಪ್ರಶ್ನಿಸಿದರು. ಹೋಗಿ ಕೆನ್ನೆಗೆ ಬಾರಿಸಬಹುದಾಗಿತ್ತು. ಆದರೆ ಹಾಗೆ ಮಾಡದೆ ಅತ್ಯಂತ ಸಂಯಮದಿಂದಲೇ ವರ್ತಿಸಿದರು.  ಆದರೆ, ಪುರುಷ ಸಮಾಜ ಸೃಷ್ಟಿಸಿದ ಆ ಒಂದು ನಿಂದನಾತ್ಮಕ ಪದ ಅಂತಹ ಗಟ್ಟಿಗಿತ್ತಿಯನ್ನೂ ಆ ಕ್ಷಣದಲ್ಲಿ ದುರ್ಬಲಗೊಳಿಸಿಬಿಟ್ಟಿತ್ತು. ಅವಮಾನದ ಆತಂಕದಿಂದ ಅಳುತ್ತಲೇ ಸಚಿವೆ ಸದನದಿಂದ ಹೊರಗೆ ಹೊರಟರು. ರವಿ ಎನ್ನುವ ಗಂಡು ಗೂಳಿ ನಿಂದನಾಸ್ತ್ರ ಬಳಸಿ ಗೆದ್ದೆ ಎನ್ನುವ ಅಹಂಕಾರದಲ್ಲಿ ಮೆರೆಯಿತು.

ಆದರೆ.. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿ ನೊಂದ ಮಹಿಳೆಯ ಸಹಾಯಕ್ಕೆ ಬರುವುದೇ ಅಂಬೇಡ್ಕರ್ ರವರ ಸಂವಿಧಾನ. ಆ ಸಂವಿಧಾನ ಶೋಷಿತ ಮಹಿಳೆಯರಿಗೆ ಕೊಟ್ಟ ಕಾನೂನಿನ ಬಲ ಎಷ್ಟಿದೆ ಎಂದರೆ, ಮುಂದಿನ ಕೆಲವೇ ಗಂಟೆಗಳಲ್ಲಿ ಎಂಎಲ್ಸಿ ರವಿ ಪೊಲೀಸ್ ಬಂಧನದಲ್ಲಿದ್ದ. ನೊಂದ ಮಹಿಳೆಯ ಕಣ್ಣೀರಿಗೆ ಸಾಂತ್ವನ ಹೇಳಿ ಬಲ ತುಂಬುವ ಕೆಲಸವನ್ನು ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಮಾಡಿಟ್ಟು ಹೋಗಿದ್ದರು.

ಸಿ ಟಿ ರವಿ

ಅಪಮಾನದಿಂದ ಅಳುತ್ತಾ ಹೋಗಿದ್ದ ಸಚಿವೆ ಪೊಲೀಸ್ ಕಂಪ್ಲೆಂಟ್ ಕೊಟ್ಟಾಯಿತು. ಸಭಾಪತಿಗಳಿಗೂ ದೂರು ಕೊಟ್ಟರು. ಗಂಡಸ್ತನದ ಅಹಂಕಾರದ ಗೂಳಿಯ ಮೇಲೆ ದೂರು ದಾಖಲಾಯ್ತು. ತನ್ನ ಮೇಲೆ ಸಚಿವೆಯ ಬೆಂಬಲಿಗರು  ಹಲ್ಲೆ ಮಾಡಿದರು ಎಂದು ಸರಕಾರಕ್ಕೆ ಧಿಕ್ಕಾರ ಕೂಗುತ್ತಾ ಬಿಜೆಪಿಗರ ಗುಂಪಲ್ಲಿದ್ದ ಸಿ.ಟಿ.ರವಿಯನ್ನು ಅನಾಮತ್ತಾಗಿ ಎತ್ತಿಕೊಂಡು ಹೋದ ಪೋಲೀಸರು ಜೀಪೇರಿಸಿ ಸ್ಟೇಶನ್ನಿಗೆ ಎಳೆದೊಯ್ದರು. ಸೆಕ್ಷನ್ 75 ಹಾಗೂ ಸೆಕ್ಷನ್ 79 ರ ಅಡಿಯಲ್ಲಿ ನಾನ್ ಬೇಲೇಬಲ್ ಕೇಸ್ ಹಾಕಿ ಎಫ್ಐಆರ್ ಮಾಡಲಾಗಿದೆ. ಜೈಲಿಗೆ ಹೋಗುವುದೂ ಗ್ಯಾರಂಟಿಯಾಗಿದೆ.

ಚಾರಿತ್ರ್ಯವಧೆ ಮಾಡಿ ಮಹಿಳೆಯರನ್ನು ಅಪಮಾನಿಸುವ ಗಂಡಸರ ಪುರುಷಹಂಕಾರವನ್ನು ಇಳಿಸಲು ಸಹಾಯಕ್ಕೆ ಬರುವುದು ಸಂವಿಧಾನಾತ್ಮಕ ಕಾನೂನು. ಲಿಂಗತಾರತಮ್ಯವನ್ನು ಅಳಿಸಿ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ಕೊಟ್ಟಿರುವುದೂ ಸಹ ಅಂಬೇಡ್ಕರ್ ರವರ ಸಂವಿಧಾನ. ಸಾಮಾನ್ಯ ಮಹಿಳೆಯಿಂದ ಸಚಿವೆಯ ವರೆಗೆ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಸಂವಿಧಾನದ ರಕ್ಷಣೆ ಇದೆ. ಅದು ಇರಬಾರದು ಎನ್ನುವುದೇ ಸನಾತನ ಮನಸ್ಥಿತಿಯವರ ಉದ್ದೇಶವಾಗಿದೆ.

ಅದಕ್ಕಾಗಿಯೇ ಎಲ್ಲರಿಗೂ ಸಮಾನತೆ ಹಾಗೂ ಘನತೆಯನ್ನು ಕೊಡುವ ಸಂವಿಧಾನವನ್ನು ಬದಲಿಸಿ ಪಿತೃ ಪ್ರಧಾನ ವ್ಯವಸ್ಥೆಯ ಮನುಧರ್ಮಶಾಸ್ತ್ರವನ್ನು ಸಂವಿಧಾನವನ್ನಾಗಿಸಲು ಬಿಜೆಪಿ ಹಾಗೂ ಅದರ ಮಾತೃ ಸಂಸ್ಥೆ ಆರೆಸ್ಸೆಸ್ ಪ್ರಯತ್ನಿಸುತ್ತಲೇ ಇದೆ. ಅದರ ಭಾಗವಾಗಿಯೇ ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ರವರು ಸಂವಿಧಾನದ ಕರ್ತೃ ಅಂಬೇಡ್ಕರ್ ರವರನ್ನು ಅಪಮಾನಿಸಿದ್ದಾರೆ. ಅಂಬೇಡ್ಕರ್ ಸ್ಮರಣೆಯನ್ನೇ ಶೋಕಿ ಎಂದು ಹೀಯಾಳಿಸಿದ್ದಾರೆ. ‘ಅಂಬೇಡ್ಕರ್ ಬದಲಾಗಿ ದೇವರ ಹೆಸರು ಹೇಳಿದ್ದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಮನುವಾದವನ್ನು ಪ್ರತಿಪಾದಿಸಿದ್ದಾರೆ.

ಮುಂದೊಮ್ಮೆ ಈ ಹಿಂದುತ್ವವಾದಿಗಳ ಉದ್ದೇಶ ಈಡೇರಿ ಮನುವಾದಿ ಸಂವಿಧಾನ ಜಾರಿಯಾದರೆ ಅದರ ಮೊದಲ ಬಲಿಪಶು ಮಹಿಳೆಯರೇ ಆಗಿರುತ್ತಾರೆ. ಅಂಬೇಡ್ಕರ್ ಸಂವಿಧಾನ ಕೊಟ್ಟ ಲಿಂಗಸಮಾನತೆಯನ್ನು ಕಿತ್ತುಹಾಕಿ ಅಪಘಾನಿಸ್ತಾನದ ತಾಲಿಬಾನಿಗಳ ಹಾಗೆ ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಮಾಡಲಾಗುವ ಸಾಧ್ಯತೆಗಳೆ ಹೆಚ್ಚಾಗಿವೆ. ಈಗ ನೊಂದ ಹೆಣ್ಮಕ್ಕಳ ಕಣ್ಣೀರನ್ನು ಒರೆಸಿ ನ್ಯಾಯ ಕೊಡಿಸುವ ಕಾನೂನುಗಳಿವೆ. ಆದರೆ ಸಂಘಿ ಸಂವಿಧಾನದಲ್ಲಿ ಇಂತಹುದಕ್ಕೆ ಅವಕಾಶಗಳೇ ಕಮ್ಮಿ.

ಹೀಗಾಗಿ ಹಿಂದುತ್ವವಾದಿಗಳ ಹಿಂದೂರಾಷ್ಟ್ರ ನಿರ್ಮಾಣದ ವಿರುದ್ದ ಸಮಸ್ತ ಮಹಿಳೆಯರು ಪ್ರತಿಭಟಿಸಬೇಕಿದೆ. ಲಿಂಗ ಸಮಾನತೆ ಇರುವ, ಶೋಷಿತ ಮಹಿಳೆಯರಿಗೆ ಕಾನೂನಾತ್ಮಕ ರಕ್ಷಣೆ ಇರುವ ಅಂಬೇಡ್ಕರ್ ರವರ ಸಂವಿಧಾನವನ್ನು ಉಳಿಸಿಕೊಳ್ಳುವುದರಲ್ಲಿಯೇ ಸ್ವಾಭಿಮಾನದ ಬದುಕಿದೆ. ಸಿ.ಟಿ.ರವಿಯವರಂತಹ ಪುರುಷಹಂಕಾರಿಗಳನ್ನು ನಿಯಂತ್ರಿಸಲು ಅಂಬೇಡ್ಕರ್ ರವರ ಸಂವಿಧಾನವೊಂದೇ ದಾರಿ ಹಾಗೂ ಗುರಿಯಾಗಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಸಾಹಿತ್ಯ ಸಮ್ಮೇಳನವೂ ಬಾಡೂಟದ ಚರ್ಚೆಯೂ

More articles

Latest article