ಒಂದು ರೋಚಕ ಸ್ಟೋರಿ!
ಇವತ್ತಿನ ಈ ಕಥೆ ನಿಮ್ಮನ್ನು ನಡುಗಿಸಿಬಿಡುತ್ತದೆ, ಆತಂಕಕ್ಕೆ ತಳ್ಳುತ್ತದೆ, ಕಣ್ಣಾಲಿಗಳನ್ನು ತೇವಗೊಳಿಸುತ್ತೆ. ನೀವು ಇವತ್ತು ಈ ಕಥೆಗೆ ಕಿವಿಯಾಗಬೇಡಿ, ಕಣ್ಣಾಗಬೇಡಿ, ಹೃದಯವಾಗಿ ಎಂದು ಹೇಳುತ್ತಾ- ಸಿರಿಯಾ ಎಂಬ ಸುಂದರ ಹೂವೊಂದು ಮುರುಟಿಹೋದ ಭೀಕರ ಕಥೆಯನ್ನು ಹೇಳ್ತೀನಿ ಕೇಳಿ -ರಾ ಚಿಂತನ್, ಪತ್ರಕರ್ತರು.
ಒಬ್ಬ ಹದಿನಾಲ್ಕು ವರ್ಷದ ಬಾಲಕ ಒಂದು ದೇಶದ ರಕ್ತಕ್ರಾಂತಿಗೆ ನಾಂದಿ ಹಾಡುತ್ತಾನೆ ಎಂದರೆ ನೀವು ನಂಬುತ್ತೀರಾ? ನಂಬಲೇಬೇಕು.
ಸಿರಿಯಾ ದೇಶದಲ್ಲಿ ಶೇಕಡಾ 74ರಷ್ಟು ಸುನ್ನಿ ಮುಸಲ್ಮಾನರಿದ್ದಾರೆ. ಶೇಕಡಾ 26ರಷ್ಟು ಶಿಯಾ ಮುಸಲ್ಮಾನರಿದ್ದಾರೆ. ಸಿರಿಯಾದಲ್ಲಿ ಮೊನ್ನೆಯವರೆಗೆ ಆಡಳಿತದಲ್ಲಿದ್ದದ್ದು ಶಿಯಾ ಜನಾಂಗಕ್ಕೆ ಸೇರಿದ ಬಶರ್ ಅಲ್ ಅಸದ್ ಸರ್ಕಾರ. ಆತ ತನ್ನ ಸರ್ಕಾರದ ಆಡಳಿತದ ಆಯಕಟ್ಟಿನ ಜಾಗದಲ್ಲಿ ಶಿಯಾ ಮುಸಲ್ಮಾನರಿಗೆ ಪ್ರಾಶಸ್ತ್ಯ ನೀಡಿದ್ದ. ದೊಡ್ಡ ಸಂಖ್ಯೆಯಲ್ಲಿದ್ದ ಸುನ್ನಿ ಮುಸಲ್ಮಾನರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದ. ಈ ಅಸಾಧ್ಯ ಬೆಳವಣಿಗೆಗೆ ಒಂದು ಹಿನ್ನೆಲೆಯಿದೆ.
1970ರ ದಶಕದಲ್ಲಿ ಬಶರ್ ಅಲ್ ಅಸಾದ್ ತಂದೆ ಹಾಫಿಜ್ ಅಲ್ ಅಸಾದ್‌ಗೆ ಸಿರಿಯಾದ ಮಿಲಿಟರಿ ಮೇಲೆ ದೊಡ್ಡ ಪ್ರಮಾಣದ ಹಿಡಿತವಿತ್ತು. ಸಿರಿಯಾದ ವಾಯುಸೇನೆಯೇ ಈತನ ನಿಯಂತ್ರಣದಲ್ಲಿತ್ತು. 1970 ನವಂಬರ್ 17ನೇ ತಾರೀಕು ಸಿರಿಯಾದಲ್ಲಿ ದಂಗೆಯೆಬ್ಬಿಸಿ ತನ್ನನ್ನು ತಾನು ಸಿರಿಯಾ ಅಧ್ಯಕ್ಷ ಎಂದು ಘೋಷಿಸಿಕೊಂಡ. ಸಿರಿಯಾದಲ್ಲಿ ಸುನ್ನಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದರಿಂದ ಮುಂದೊಂದು ದಿನ ಅವರು ಅಧಿಕಾರಕ್ಕೆ ಬರುತ್ತಾರೆ ಎಂಬ ಕಾರಣಕ್ಕೆ; ಆತ ತನ್ನ ಅಧಿಕಾರ ಬಳಸಿ ಸುನ್ನಿ ಸಮುದಾಯ ಹೆಚ್ಚಿರುವ ಪ್ರದೇಶದ ಮೇಲೆ ವಿಶೇಷ ನಿಗಾ ಇರಿಸಿದ. ಅಲ್ಲಿ Active ಆಗಿದ್ದ ಸುನ್ನಿ ರಾಜಕೀಯ ಪಕ್ಷಗಳನ್ನು, ಸಂಘಟನೆಗಳನ್ನು ಹತ್ತಿಕ್ಕಿದ. ಸಿರಿಯಾದ ಎಲ್ಲಾ ಮಾನವಹಕ್ಕುಗಳನ್ನು ಮುಗಿಸಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸತೊಡಗಿದ. ಈ ಕಾರಣಕ್ಕೆ ಆತ ದೊಡ್ಡ ಪ್ರಮಾಣದಲ್ಲಿ ಜನವಿರೋಧವನ್ನು ಕಟ್ಟಿಕೊಂಡಿದ್ದ.
ಇಸವಿ 2000ದಲ್ಲಿ ಹಾಫೀಜ್ ಅಲ್ ಅಸಾದ್ ತೀರಿದ ನಂತರ ಅವನ ಮಗ ಬಶರ್ ಅಲ್ ಅಸಾದ್ ಸಿರಿಯಾದ ಅಧ್ಯಕ್ಷನಾದ. ಈತ ಕೂಡ ಅಪ್ಪನ ಸರ್ವಾಧಿಕಾರದ ಆಡಳಿತದ ವೈಖರಿಯನ್ನೇ ಮುಂದುವರಿಸಿದ. ದೊಡ್ಡ ಸಂಖ್ಯೆಯಲ್ಲಿದ್ದ ಸುನ್ನಿ ಮುಸಲ್ಮಾನರು ಬಶರ್ ಸರ್ಕಾರದ ಸರ್ವಾಧಿಕಾರದ ದುರಾಡಳಿತದ ವಿರುದ್ಧ ಹೋರಾಟ ಮಾಡುತ್ತಿದ್ದರೂ ಈತ ಕ್ಯಾರೇ… ಅನ್ನಲಿಲ್ಲ.
ಹೀಗಿರುವಾಗ 2006ರಿಂದ 2010ರ ಅವಧಿಯಲ್ಲಿ ಸಿರಿಯಾದಲ್ಲಿ ಪ್ರಕೃತಿಯ ವಿಕೋಪದಿಂದ ಮಳೆ ಕೊರತೆಯಾಯಿತು. ಒಂದು ಕಡೆ ಸರ್ವಾಧಿಕಾರ, ಇನ್ನೊಂದು ಕಡೆ ಮಳೆ ಕೊರತೆ; ಇಂತಹ ಪ್ರಬಲ ಕಾರಣದಿಂದ ಸಿರಿಯಾದ ಆರ್ಥಿಕತೆ ಕುಸಿದಿತ್ತು. ಜನರ ಕೈಲಿ ದುಡ್ಡಿಲ್ಲದಂತಾಯಿತು, ನಿರುದ್ಯೋಗ ಬಾಧಿಸತೊಡಗಿತು. ಅದಕ್ಕಿಂತ ಭೀಕರವೆಂದರೆ ಆಹಾರದ ಕೊರತೆಯಿಂದ ಜನರು ಕಂಗೆಟ್ಟು ಹೋದರು. ಇದೇ ಸಂದರ್ಭದಲ್ಲಿ ಸಿರಿಯಾದ ಆಸುಪಾಸಿನ ದೇಶಗಳಾದ, ಸರ್ವಾಧಿಕಾರಿಗಳ ಹಿಡಿತದಲ್ಲಿದ್ದ ಟುನೇಶಿಯಾ, ಈಜಿಪ್ಟ್, ಲಿಬಿಯ, ಓಮನ್, ಜೋರ್ಡಾನ್‌ನಲ್ಲಿ ನಾಗರೀಕ ದಂಗೆ ಶುರುವಾಗಿತ್ತು. ಸರ್ವಾಧಿಕಾರ ನಿಲ್ಲಿಸಿ, ಚುನಾವಣೆ ಮೂಲಕ ಪ್ರಜಾಪ್ರಭುತ್ವ ಸ್ಥಾಪಿಸಿ, ನಾಗರೀಕರಿಗೆ ಸ್ವತಂತ್ರ ಬದುಕನ್ನು ಕಲ್ಪಿಸಿ ಎಂಬ ಹೋರಾಟವದು. ಈ ಹೋರಾಟಗಳು ಅರಬ್ ದೇಶಗಳ ಒಳಗೆ ಒಂದು ರೀತಿಯ ಸಂಘರ್ಷದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಇದರಿಂದ ಆಯಾ ದೇಶಗಳಲ್ಲಿದ್ದ ಸರ್ವಾಧಿಕಾರಿಗಳು ಹೆದರತೊಡಗಿದರು. ಲಿಬಿಯಾದ ಜನ ಗದ್ದಾಫಿಯನ್ನು ಕೊಂದು ಚುನಾವಣೆ ಹೋದರು. ಟುನೇಶಿಯಾದಲ್ಲಿ 23 ವರ್ಷಗಳ ಕಾಲ ಸರ್ವಾಧಿಕಾರದ ಆಡಳಿತ ನಡೆಸಿದ ಬೆನ್ ಅಲಿ ದೇಶ ಬಿಟ್ಟು ಓಡಿಹೋದ. ಈಜಿಪ್ಟ್‌ನಲ್ಲಿ 30 ವರ್ಷ ಸರ್ವಾಧಿಕಾರ ನಡೆಸಿದ ಹೊಸ್ನಿ ಮುಬಾರಕ್ ನಾಗರೀಕರ ದಂಗೆಯನ್ನು ಹತ್ತಿಕ್ಕಲು ಮಿಲಿಟರಿ ಬಲ ಬಳಸಿದ. ಆದರೆ ಜನದಂಗೆಯ ಮುಂದೆ ಇವನ ಆಟ ನಡೆಯಲಿಲ್ಲ, ಕುರ್ಚಿಬಿಟ್ಟು ಹೊರನಡೆದ.
ಸಿರಿಯಾದ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ನಾಗರೀಕರ ದಂಗೆ, ದಂಗೆಗೆ ಕಾರಣವಾದ ಪ್ರಜಾಪ್ರಭುತ್ವದ ಅಪೇಕ್ಷೆಯ ಕೂಗು, ಮತ್ತದರ ಯಶಸ್ಸಿನ ಸುದ್ದಿಗಳು ರೆಡಿಯೋ, ಟೀವಿ, ಪತ್ರಿಕೆಗಳು, ಇನ್ನಿತರೆ ಮಾಧ್ಯಮಗಳ ಮೂಲಕ ಸಿರಿಯನ್ನರನ್ನು ತಲುಪುತ್ತಿತ್ತು. ಅದಾಗಲೇ ಬಶರ್ ಸರ್ಕಾರದ ಸರ್ವಾಧಿಕಾರದಿಂದ ನೊಂದಿದ್ದ, ನಿರುದ್ಯೋಗದಿಂದ ಕಂಗೆಟ್ಟಿದ್ದ, ಹಸಿವಿನಿಂದ ತತ್ತರಿಸಿದ್ದ ಅಲ್ಲಿನ ನಾಗರೀಕರು ಯಾವ ಕ್ಷಣದಲ್ಲಾದರೂ ತನ್ನ ವಿರುದ್ಧ ಸಿಡಿದು ಬೀಳಬಹುದು ಎಂದು ಹೆದರಿದ ಬಶರ್ ಎಲ್ಲಾ ಪರಿಸ್ಥಿತಿಯನ್ನು ಎದುರಿಸಲು ತನ್ನ ಮಿಲಿಟರಿಯನ್ನು ಸನ್ನದ್ದಗೊಳಿಸಿ ಇಟ್ಟುಬಿಟ್ಟಿದ್ದ. ಯಾವುದೇ ಕಾರಣಕ್ಕೂ ಅಕ್ಕಪಕ್ಕದ ರಾಷ್ಟ್ರಗಳಲ್ಲಿ ನಡೆಯುತ್ತಿರುವ ದಂಗೆ ನನ್ನ ದೇಶದಲ್ಲಿ ನಡೆಯಬಾರದು ಎಂದು ಸಣ್ಣಪುಟ್ಟ ಸಂಗತಿಯನ್ನೂ ಗಂಭೀರವಾಗಿ ಪರಿಗಣಿಸತೊಡಗಿದ. ಆದರೆ ಅವನು ಅಂದುಕೊಂಡಂತೆ ಆಗಲಿಲ್ಲ! ಜನಾಕ್ರೋಶದ ಕಿಚ್ಚಿನ ಮುಂದೆ ಅವನು ನಿಲ್ಲಲು ಸಾಧ್ಯವೇ ಇರಲಿಲ್ಲ.
ಅದು 2011ರ ಫೆಬ್ರವರಿ ತಿಂಗಳು. ಸಿರಿಯಾದ ದಕ್ಷಿಣ ಭಾಗದಲ್ಲಿ ದರಾ ಎಂಬ ಸ್ಥಳದ ನಲವತ್ತು ಕಿಲೋಮೀಟರ್ ದೂರದಲ್ಲಿ ಅಲ್ ಓಮರಿ ಎಂಬ ಮಸೀದಿಯ ಬಳಿ ಒಂದು ಶಾಲೆಯಿತ್ತು. ಆ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಹದಿನಾಲ್ಕು ವರ್ಷದ ಬಾಲಕ ಮೌಆವಿಯ ಸ್ಯಾಸ್ನೇಹ್ ಓದುತ್ತಿದ್ದ. ನಿಮಗೆ ಆಶ್ಚರ್ಯ ಆಗಬಹುದು, ಸುಮಾರು 13 ವರ್ಷಗಳ ಕಾಲದ ಸಿರಿಯಾದ ಸಂಘರ್ಷ, ಯುಎಸ್, ರಷ್ಯಾ, ಇರಾನ್, ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳು ಎದುರುಬದುರಾಗಿ ಕಾದಾಡಿದ್ದು, ಕೋಟ್ಯಾಂತರ ಬಾಂಬುಗಳು ಸುರಿದಿದ್ದು, ಲಕ್ಷಾಂತರ ಹೆಣಗಳು ಬಿದ್ದಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದು ಇವೆಲ್ಲದರ ಪರಿಣಾಮ ಇದೀಗ ಸಿರಿಯಾದ ಸರ್ವಾಧಿಕಾರಿ ಬಶರ್ ದೇಶಬಿಟ್ಟು ಓಡಿಹೋಗಿದ್ದು, ಸಿರಿಯಾ ಎಂಬ ನೆಲದಲ್ಲಿ ನರಕ ಮೂಡಿದ್ದಕ್ಕೆ ನಾಂದಿ ಹಾಡಿದ್ದೇ ಈ ಬಾಲಕ.
ಮೌಆವಿಯ ಸ್ಯಾಸ್ನೇಹ್ ಹಾಗೂ ಅವನ ಜೊತೆಗಿದ್ದ ಹದಿನಾಲ್ಕು ವಿದ್ಯಾರ್ಥಿಗಳು ಅಕ್ಕಪಕ್ಕದ ಅರಬ್ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ನಾಗರೀಕರ ದಂಗೆ, ಸರ್ವಾಧಿಕಾರಿ ಸರ್ಕಾರಗಳ ದಬ್ಬಾಳಿಕೆಯ ಸುದ್ದಿಗಳನ್ನು ಟೀವಿಗಳಲ್ಲಿ ನೋಡುತ್ತಿದ್ದರು, ರೆಡಿಯೋಗಳಲ್ಲಿ ಆಲಿಸುತ್ತಿದ್ದರು, ಪತ್ರಿಕೆಗಳಲ್ಲಿ ಓದುತ್ತಿದ್ದರು.
ಫೆಬ್ರವರಿ 26, 2011ರಂದು ತಾವು ಓದುತ್ತಿದ್ದ ಶಾಲೆಯ ಗೋಡೆಯ ಮೇಲೆ ಮೌಆವಿಯ, ಅರಬ್ಬಿ ಭಾಷೆಯಲ್ಲಿ “Next your turn Doctor“ ಅಂದರೇ, ”ಇನ್ನು ನಿಮ್ಮ ಸರದಿ ಡಾಕ್ಟರ್’ ಎಂದು ಬರೆಯುತ್ತಾನೆ.
ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸದ್ ಲಂಡನ್ನಿನ ವೆಸ್ಟರ್ನ್ ಐ ಹಾಸ್ಪಿಟಲ್‌ನಲ್ಲಿ ಡಾಕ್ಟರ್ ಪದವಿ ಮುಗಿಸಿದ್ದ. ಹಾಗಾಗಿ ಸಿರಿಯಾದಲ್ಲಿ ಈತನಿಗೆ ಡಾಕ್ಟರ್ ಎಂದು ಕರೆಯುತ್ತಿದ್ದರು. ಆದರೆ ಡಾಕ್ಟರ್, ಡಿಕ್ಟೇಟರ್ ಆಗಿದ್ದು ಅವನ ಅಪ್ಪನಿಂದ ಬಂದ ಬಳುವಳಿ. ಬಾಲಕ ಮೌಆವಿಯ ಆಕ್ರೋಶದಿಂದ ಶಾಲೆಯ ಗೋಡೆಯ ಮೇಲೆ ಇನ್ನು ನಿಮ್ಮ ಸರದಿ ಡಾಕ್ಟರ್ ಎಂದೇನೋ ಬರೆದ. ಆದರೆ ಈ ಬರಹ ಮುಂದೆ ಸಿರಿಯಾದಲ್ಲಿ ಅದೆಂತಹಾ ಕ್ರಾಂತಿಯ ಹುಟ್ಟಿಗೆ ಕಾರಣವಾಗಬಹುದು ಎಂಬ ಅರಿವಿರಲಿಲ್ಲ. ಇದನ್ನು ಬರೆದ ಮೇಲೆ ಶಾಲೆ ಮುಗಿಸಿ ಮನೆಗೆ ಮರಳಿದ. ಗೋಡೆ ಬರಹದ ವಿಚಾರವನ್ನು ತನ್ನ ತಂದೆಗೆ ತಿಳಿಸಿದ. ಅಪ್ಪ ಹೆದರಿಬಿಟ್ಟ. ಅವನಿಗೆ ಗೊತ್ತಿತ್ತು; ಸರ್ಕಾರ ಈ ವಿಚಾರಕ್ಕೆ ಕ್ರೂರ ಶಿಕ್ಷೆಯನ್ನು ನೀಡಲಿದೆ. ತನ್ನ ಮಗನನ್ನು ಅಜ್ಞಾತ ಸ್ಥಳದಲ್ಲಿ ಮುಚ್ಚಿಡಲು ಪ್ರಯತ್ನಿಸಿದ. ಆದರೆ ಅಷ್ಟರಲ್ಲಾಗಲೇ ತಡವಾಗಿತ್ತು. ಆ ಗೋಡೆ ಬರಹವನ್ನು ತುಂಬಾ ಜನ ನೋಡಿಯಾಗಿತ್ತು. ದಾರಾ ಪ್ರದೇಶದ ಸೆಕ್ಯುರಿಟಿ ಚೀಫ್ – ಬಶರ್ ಅಲ್ ಅಸದ್ ಕುಟುಂಬದವನೇ ಆದ ಅತೇಫ್ ನಜೀಬ್ ಗಮನಕ್ಕೆ ಬಂತು. ಅಕ್ಕಪಕ್ಕದ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ನಾಗರೀಕ ದಂಗೆಗೆ ಹೆದರಿದ್ದ ಆತ, ಈ ಬರಹ ಸಿರಿಯಾದ ನಾಗರೀಕ ದಂಗೆಗೆ ಅಡಿಪಾಯ ಆಗಬಹುದು ಎಂದು ಆಕ್ರೋಶದಿಂದ ಫೆಬ್ರವರಿ 27, 2011ರಂದು ಅಂದರೇ ಆ ಗೋಡೆಬರಹ ಬರೆದ ಮಾರನೇ ದಿನ ಆ ಶಾಲೆಗೆ ತನ್ನ Security Force ಸಮೇತ ಬಂದ.
ಇದನ್ನು ಬರೆದವರು ಯಾರು ಎಂದು ತನಿಖೆ ಮಾಡಲು ಶುರುಮಾಡಿದ. ಅಲ್ಲಿದ್ದವರು ನಮಗೆ ಗೊತ್ತಿಲ್ಲ ಎನ್ನತೊಡಗಿದರು. ಕಡೆಗೆ ಹದಿನೈದು ಮಕ್ಕಳನ್ನು ತನಿಖೆಗೆ ಎಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸಿರಿಯ ಸೆಕ್ಯುರಿಟಿ ಫೋರ್ಸ್ ಅಧಿಕಾರಿಗಳು ಕರೆದುಕೊಂಡು ಹೋಗುತ್ತಾರೆ. ಚಿಕ್ಕಮಕ್ಕಳೆಂದು ನೋಡದೆ ಅವರಿಗೆ ಭಯಂಕರ ಟಾರ್ಚರ್ ಕೊಡುತ್ತಾರೆ. ಅವರ ಉಗುರನ್ನು ಕೀಳುತ್ತಾರೆ, ನೀರು ಹಾಯಿಸಿ ಕರೆಂಟ್ ಕೊಡುತ್ತಾರೆ, ತಲೆಕೆಳಗಾಗಿಸಿ ಕಟ್ಟಿಹಾಕುತ್ತಾರೆ. ಇದೇ ಸಂದರ್ಭದಲ್ಲಿ ಮೌಆವಿಯ ತಂದೆ ಹಾಗೂ ಮಿಕ್ಕ ಮಕ್ಕಳ ಪೋಷಕರು ಪೊಲೀಸರ ಮುಂದೆ ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾರೆ. ಅಧಿಕಾರಿಗಳು, `ನಿಮ್ಮ ಮಕ್ಕಳನ್ನು ಮರೆತುಬಿಡಿ, ಬದಲಿಗೆ ಬೇರೆ ಮಕ್ಕಳನ್ನು ಹುಟ್ಟಿಸಿ, ನಿಮ್ ಕೈಲಿ ಆಗಿಲ್ಲ ಅಂದರೆ, ನಿಮ್ಮ ಮನೆ ಹೆಣ್ಣುಮಕ್ಕಳನ್ನು ನಮ್ಮ ಬಳಿ ಕಳುಹಿಸಿ, ನಾವು ಮಕ್ಕಳನ್ನು ಹುಟ್ಟಿಸುತ್ತೇವೆ’ ಎಂದು ಹೇಳಿ ಕಳುಹಿಸುತ್ತಾರೆ. ಈ ಮಾತನ್ನು ಕೇಳಿದ ಮೇಲೆ ಜನರು ಆಕ್ರೋಶದಿಂದ ಕುದಿಯತೊಡಗುತ್ತಾರೆ. ದಾರಾದಲ್ಲಿ ಪ್ರತಿಭಟನೆ ಶುರುಮಾಡುತ್ತಾರೆ. ನಮ್ಮ ಮಕ್ಕಳನ್ನು ಬಿಡಿ ಎಂಬ ಬೇಡಿಕೆಯಿಟ್ಟು ಶಾಂತಿಯಿಂದಲೇ ಪ್ರತಿಭಟನೆ ಮಾಡುತ್ತಾರೆ. ಅಲ್ಲಿನ ಕಾನೂನಿನ ಪ್ರಕಾರ ಪ್ರತಿಭಟನೆಯಲ್ಲಿ ದೊಂಬಿ ಎಬ್ಬಿಸಿದರೆ ಅವರಿಗೆ ಮರಣಶಿಕ್ಷೆ ಖಚಿತ ಎಂಬುದು ಗೊತ್ತಿತ್ತು. ಆದರೆ ಅಧಿಕಾರಿಗಳು ಮಕ್ಕಳನ್ನು ಬಿಡುವುದಿರಲಿ, ಬದಲಿಗೆ ಪ್ರತಿಭಟಿಸುತ್ತಿದ್ದ ಹಲವರನ್ನು ಬಂಧಿಸಿ ಹಿಂಸಿಸತೊಡಗಿದರು.
ಈ ಸುದ್ದಿ ದಾರಾದಿಂದ ಇಡೀ ಸಿರಿಯಾಕ್ಕೆ ಹರಡತೊಡಗುತ್ತೆ. ಅವರಿಗೆ ದಾರಾದಲ್ಲಿ ಆಗುತ್ತಿರುವ ಕ್ರೌರ್ಯದ ಅರಿವಾಗುತ್ತದೆ. ಸಿರಿಯಾದಾದ್ಯಂತ ಪ್ರತಿಭಟನೆ ಶುರುವಾಗುತ್ತದೆ. ಮಾರ್ಚ್ 15, 2011ರ ವೇಳೆಗೆ ಸಿರಿಯಾದ ಪ್ರಮುಖ ನಗರಗಳಾದ ಡಮಸ್ಕಸ್, ಅಲೆಪ್ಪೋ, ಹೋಮ್ಸ್, ಲಟಾಕಿಯ, ಹಾಮಾದಲ್ಲಿ ಸರ್ಕಾರದ ವಿರುದ್ಧ ನಾಗರೀಕರು ದೊಡ್ಡಮಟ್ಟದಲ್ಲಿ ಪ್ರತಿಭಟನೆಗಿಳಿದು ಮಕ್ಕಳನ್ನು ಬಿಡುವಂತೆ ಒತ್ತಾಯಿಸುತ್ತಾರೆ. ಮಕ್ಕಳನ್ನು ಮುಟ್ಟಿ ತಪ್ಪು ಮಾಡಿದ್ದೇವೆ ಎಂದು ಹೆದರಿದ ಬಶರ್ ಸರ್ಕಾರ ಮಕ್ಕಳನ್ನು ಬಂಧಿಸಿದ 45 ದಿನಗಳ ನಂತರ ಅವರನ್ನು ಬಿಡುಗಡೆಗೊಳಿಸಿತ್ತು. ಆದರೆ ಬಿಡುಗಡೆಗೊಂಡ ಮಕ್ಕಳ ಪರಿಸ್ಥಿತಿ ನೋಡಿ ಇಡೀ ಸಿರಿಯ ಆಕ್ರೋಶದಿಂದ ಧಗಧಗಿಸತೊಡಗಿತ್ತು. ನಿತ್ರಾಣಗೊಂಡ, ವಿರೂಪಗೊಂಡ ಮಕ್ಕಳು ತಾವು ಅನುಭವಿಸಿದ ಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಇದರಿಂದ ಇಡೀ ಸಿರಿಯಾ ಅಕ್ಷರಶಃ ಮೈಕೊಡವಿ ಎದ್ದುನಿಂತಿತ್ತು. ವಾಪಾಸು ಸಿರಿಯಾದಾದ್ಯಂತ ಪ್ರತಿಭಟನೆಗಳು ಶುರುವಾದವು.
ಏಪ್ರಿಲ್ 22, 2011ರ ಶುಕ್ರವಾರದ ನಮಾಜಿನ ನಂತರ ಜನರು ದೊಡ್ಡ ಗುಂಪುಗೂಡಿ ಪ್ರತಿಭಟನೆಗಿಳಿಯುತ್ತಾರೆ. ಆದರೆ ಈ ಸಲ ಅವರು ಶಾಂತಿಯುತ ಪ್ರತಿಭಟನೆ ನಡೆಸುವುದಿಲ್ಲ. ಬದಲಿಗೆ ಹಿಂಸಾತ್ಮಕ ಪ್ರತಿಭಟನೆಗಿಳಿಯುತ್ತಾರೆ. ಆ ಪ್ರತಿಭಟನೆಯನ್ನು “Friday in Dignity” ಎಂದು ಕರೆಯಲಾಗುತ್ತೆ. ಈ ಗುಂಪನ್ನು ಚದುರಿಸಲು ಸಿರಿಯ ಸರ್ಕಾರದ ಪೊಲೀಸ್ ವ್ಯವಸ್ಥೆ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ, ಕಡೆಗೆ ಗುಂಡು ಹೊಡೆಯತೊಡಗುತ್ತಾರೆ. ಗೋಲಿಬಾರಿಗೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪುತ್ತಾರೆ. ಮಾರನೇ ದಿನ ಸತ್ತವರ ಹೆಸರಲ್ಲಿ ನಮಾಜನ್ನು ಮುಗಿಸಿದ ನಂತರ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರತೊಡಗುತ್ತಾರೆ. ಇವರನ್ನು ಹತ್ತಿಕ್ಕಲೇಬೇಕೆಂದು ಪೂರ್ಣ ಪ್ರಮಾಣದಲ್ಲಿ ಅಖಾಡಕ್ಕಿಳಿದ ಸರ್ಕಾರ ಹೆಲಿಕಾಪ್ಟರ್, ಟ್ಯಾಂಕರ್‌ಗಳನ್ನು ಬಳಸಿ ಗುಂಡಿನ ದಾಳಿ ನಡೆಸಿ ಅನೇಕ ನಾಗರೀಕರ ಹೆಣ ಬೀಳಿಸುತ್ತದೆ. ಆದರೆ ಇದರಿಂದ ದಂಗೆ ನಿಲ್ಲುವುದಿಲ್ಲ, ಬದಲಿಗೆ ಅಲ್ಲಲ್ಲಿ ನಡೆಯುತ್ತಿದ್ದ ದಂಗೆ ಇಡೀ ಸಿರಿಯಾವನ್ನು ಆವರಿಸಿಬಿಡುತ್ತದೆ. ಬಶರ್ ಅಲ್ ಅಸದ್ ರಾಜೀನಾಮೆ ಕೊಡುವಂತೆ ತಾಕೀತು ಮಾಡುತ್ತಾರೆ. ಅಕ್ಕಪಕ್ಕದ ರಾಷ್ಟ್ರಗಳಲ್ಲಿ ಆದಂತೆ ಆಗಬಾರದು ಎಂದು ಬಶರ್ ಭಾವಿಸಿದ್ದ, ಕಡೆಗೆ ಮಕ್ಕಳನ್ನು ಮುಟ್ಟಿ ಆ ಪರಿಸ್ಥಿತಿಗೆ ಬಂದು ತಲುಪಿದ್ದ.
ನಾಗರೀಕರು ಹಾಗೂ ಮಿಲಿಟರಿ ನಡುವೆ ನೇರ ಸಮರ ಶುರುವಾಗಿತ್ತು. ಅವರ ಬಳಿ ಆಧುನಿಕ ವೆಪನ್ಸ್ ಇತ್ತು, ಇವರ ಬಳಿ ಕಲ್ಲು ದೊಣ್ಣೆಗಳನ್ನು ಹೊರತುಪಡಿಸಿ ಮತ್ತೇನಿರಲು ಸಾಧ್ಯ? ಇದರಿಂದ ನಾಗರೀಕರ ಹೆಣಗಳು ಸಾಲುಸಾಲಾಗಿ ಬೀಳತೊಡಗಿದವು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವ ಸ್ಥಿತಿಯಲ್ಲೂ ಇರಲಿಲ್ಲ. ಅಲ್ಲಿ ಬಶರ್ ಸರ್ಕಾರ ಪೊಲೀಸರನ್ನು ಬಿಟ್ಟು ಗಾಯಗೊಂಡವರನ್ನು ಜೈಲಿಗೆ ಹಾಕುವ ಕ್ರೌರ್ಯ ಮೆರೆದಿತ್ತು. ಅವರು ಜೈಲಿನಲ್ಲೇ ನರಳಿ ಪ್ರಾಣಬಿಡತೊಡಗಿದರು. ಹೀಗಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ನಿಲ್ಲಿಸಿದರು. ಬದಲಿಗೆ ಮಸೀದಿಗಳಲ್ಲೇ ಚಿಕಿತ್ಸೆ ನೀಡತೊಡಗಿದರು. ಹೇಗೂ ಪ್ರತಿಭಟಿಸುತ್ತಿದ್ದವರಲ್ಲಿ ಡಾಕ್ಟರ್ ಗಳು ಇದ್ದರಲ್ಲ. ಆದರೆ ಈ ವಿಚಾರ ಸಿರಿಯದ ಸರ್ಕಾರದ ಗಮನಕ್ಕೆ ಬಂದು ಅಲ್ಲಿಗೂ ಸಿರಿಯನ್ ಫೋರ್ಸ್ ಕಳುಹಿಸಿ, ಅವರ ಮೇಲೆ ಗುಂಡು ಹಾರಿಸಿತು. ರೋಗಿಗಳು ಸೇರಿದಂತೆ ಡಾಕ್ಟರ್ಗಳ ಹೆಣಗಳು ಉರುಳಿದವು. ಇದರಿಂದ ಸಿರಿಯಾದ ನಾಗರೀಕರು ಅಕ್ಷರಶಃ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಇಳಿದುಬಿಟ್ಟರು. ಮಕ್ಕಳು, ಮಹಿಳೆಯರೆನ್ನದೆ ಸಿರಿಯಾದ ಪೊಲೀಸರ ಮೇಲೆ ಕಲ್ಲು ಬೀಸತೊಡಗಿದರು. 2011 ಮುಗಿಯುವ ಹೊತ್ತಿಗೆ ಕೆಲ ಸಿರಿಯನ್ ಫೋರ್ಸ್ ಪೊಲೀಸರು ಸೇರಿ ಸಾವಿರಾರು ನಾಗರೀಕರ ಹೆಣ ಬಿದ್ದಿತ್ತು. ಸಿರಿಯನ್ ಫೋರ್ಸ್ ನಲ್ಲಿದ್ದ ಅನೇಕ ಅಧಿಕಾರಿಗಳು ನಾಗರೀಕರ ಮೇಲೆ ಗುಂಡಿನ ದಾಳಿಯನ್ನು ಖಂಡಿಸಿದ್ದಕ್ಕೆ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಅಲ್ಲಿಗೆ ಸಿರಿಯಾದ ಬಹುಸಂಖ್ಯಾತರಾಗಿದ್ದ ಸುನ್ನಿ ಮುಸಲ್ಮಾನರು ಅಂತಿಮ ತೀರ್ಮಾನಕ್ಕೆ ಬಂದೇ ಬಿಟ್ಟರು. ಹೆಂಗೂ ನಮ್ಮ ಜೀವ ಹೋಗೋದು ಗ್ಯಾರಂಟಿ; ಬಶರ್‌ನನ್ನು ಒದ್ದೋಡಿಸಲು ಅದೆಷ್ಟು ಪ್ರಾಣಗಳು ಬೇಕಾದರೂ ಉರುಳಲಿ ಎಂಬ ಭಯಂಕರ ತೀರ್ಮಾನವದು. ಮಕ್ಕಳು, ಮಹಿಳೆಯರೆನ್ನದೇ ಸಿರಿಯಾ ಸರ್ವಾಧಿಕಾರಿಯ ವಿರುದ್ದ ಸಂಘರ್ಷಕ್ಕೆ ನಿಂತೇಬಿಟ್ಟರು. ಈ ಸಂಘರ್ಷದ ತಳಪಾಯವಾಗಿದ್ದ ಗೋಡೆಬರಹ ಮೂಲಕ ರಕ್ತಕ್ರಾಂತಿಗೆ ನಾಂದಿ ಹಾಡಿದ್ದ ಮೌಆವಿಯ ಕೂಡ ಅವರಲ್ಲಿ ಒಬ್ಬನಾಗಿದ್ದ!
ಆದರೆ ಈ ಸಂಘರ್ಷ ಇದೇ ರೀತಿ ಮುಂದುವರಿಯಲಿಲ್ಲ. ಏಕೆಂದರೆ ನಾಗರೀಕರ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದ ಸಿರಿಯನ್ ಮಿಲಿಟರಿ ಪಡೆಯ ಯೋಧರು ಕೆಲಸವನ್ನು ಬಿಟ್ಟು ಸಿರಿಯ ಸರ್ಕಾರದ ವಿರುದ್ಧದ ದಂಗೆಗೆ ಕೈ ಜೋಡಿಸತೊಡಗಿದರು. ಸಿರಿಯನ್ ಆರ್ಮಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ರಿಯದ್ ಅಲ್ ಅಸದ್ ದಂಗೆಯ ಜೊತೆ ನಿಂತರು. ಆರಂಭದಲ್ಲಿ ಚಾರ್ಟಡ್ ಅಕೌಂಟೆಟ್ ಆಗಿದ್ದ ಮಹರೂಂ ಎಂಬಾತ ನ್ಯಾಶನಲ್ ಸರ್ವಿಸ್ ಅಡಿಯಲ್ಲಿ ಫೈಟರ್ ಪೈಲಟ್ ತರಬೇತಿ ಪಡೆದಿದ್ದ. ಆತ ಸಿರಿಯ ಸರ್ಕಾರದ ವಿರುದ್ಧ ದಂಗೆಯೆದ್ದಿದ್ದ ಗುಂಪಿನಿಂದ ಒಂದಿಷ್ಟು ಜನರನ್ನು ಹೆಕ್ಕಿ ಸಣ್ಣ ಸಣ್ಣ ಫೈಟಿಂಗ್ ಯೂನಿಟ್ ಮಾಡತೊಡಗಿದ. ಜುಲೈ 29, 2011ರಂದು ಅದಕ್ಕೆ ಒಂದು ಹೆಸರು ಕೊಟ್ಟ; ಫ್ರೀ ಸಿರಿಯನ್ ಆರ್ಮಿ. ರಿಯದ್ ಅಲ್ ಅಸದ್ ಅದರ ಸ್ಥಾಪಕ ಅಧ್ಯಕ್ಷನಾದ.
`ನಾಗರೀಕರ ಮೇಲೆ ದಾಳಿ ಮಾಡುತ್ತಿದ್ದ ಸಿರಿಯನ್ ಸೆಕ್ಯುರಿಟಿ ಫೋರ್ಸ್ ಮೇಲೆ ಹತ್ಯಾರಗಳ ಮೂಲಕ ದಾಳಿ ಮಾಡೋದು, ಸಿರಿಯಾದಿಂದ ಬಶರ್ ಸರ್ಕಾರವನ್ನು ಕಿತ್ತೊಗೆದು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಿಸೋದು’ ಫ್ರೀ ಸಿರಿಯನ್ ಆರ್ಮಿಯ ಗುರಿಯಾಗಿತ್ತು. ಸುನ್ನಿ ರಾಷ್ಟ್ರಗಳು ಆ ಆರ್ಮಿಯ ಬೆಂಬಲಕ್ಕೆ ನಿಂತವು. ದೇಶಬಿಟ್ಟುಹೋಗಿದ್ದ ಸುನ್ನಿ ಸಮುದಾಯಕ್ಕೆ ಸೇರಿದ ಭಿನ್ನವಿಭಿನ್ನ ತಂತ್ರಜ್ಞರು ವಾಪಾಸು ಬಂದು ಈ ಆರ್ಮಿ ಜೊತೆ ಸೇರಿಕೊಂಡರು. ಬಶರ್ ಅಲ್ ಅಸದ್ ಸರ್ಕಾರದ ವಿರುದ್ಧ ಕ್ರಾಂತಿಯ ಕಹಳೆ ಊದಿದ್ದ ಅನೇಕ ಗುಂಪುಗಳು ಆ ಆರ್ಮಿಗೆ ಸೇರಿದರು. ಸಾವಿರಾರು ಗುಂಪುಗಳು, ಲಕ್ಷಾಂತರ ಫೈಟರ್‌ಗಳು ಸೇರಿ ಫ್ರೀ ಸಿರಿಯನ್ ಆರ್ಮಿ ಬಲಿಷ್ಠವಾಗಿ ಬೆಳೆದು ನಿಂತಿತ್ತು.
ಇದೇ ಹೊತ್ತಿನಲ್ಲಿ ಇರಾಕಿನಲ್ಲಿ ತನ್ನ ಸಾಮ್ರಾಜ್ಯ ಸ್ಥಾಪನೆಗೆ ಹೋರಾಡುತ್ತಿದ್ದ ಐಎಸ್‌ಐ ಅಂದರೇ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಂಘಟನೆಗೆ ಸಿರಿಯಾದಲ್ಲಿ ಸುನ್ನಿ ಮುಸಲ್ಮಾನರನ್ನು ಬೆಂಬಲಿಸುವ ಜೊತೆಗೆ ಆ ಮೂಲಕ ತನ್ನ ಸಾಮ್ರಾಜ್ಯ ವಿಸ್ತರಿಸುವ ಅವಕಾಶ ಕಾಣಿಸುತ್ತದೆ. ಅವರು ಫ್ರೀ ಸಿರಿಯನ್ ಆರ್ಮಿಗೆ ಬೆಂಬಲ ಘೋಷಿಸುತ್ತಾರೆ. ಲೆಬನಾನ್ ಹಾಗೂ ಇತರೆ ರಸ್ತೆಗಳ ಮೂಲಕ ನಿಧಾನವಾಗಿ ಸಿರಿಯದೊಳಗೆ ಬಂದು ಸೇರಿಕೊಳ್ಳುತ್ತಾರೆ. ನೀವಿಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಏನೆಂದರೆ, ಅವರು ಐಎಸ್‌ಐ ಅನ್ನು ಐಎಸ್‌ಐಎಸ್ ಎಂದು ಮರು ನಾಮಕರಣ ಮಾಡಿಕೊಳ್ಳುತ್ತಾರೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂತಿದ್ದದ್ದನ್ನು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯ ಎಂದು ಮಾಡಿಕೊಳ್ಳುತ್ತಾರೆ.
ಇಲ್ಲಿಂದ ಕಲ್ಲು, ದೊಣ್ಣೆಗಳನ್ನು ಹಿಡಿದ ನಾಗರೀಕರನ್ನು ಅನಾಯಾಸವಾಗಿ ಹತ್ತಿಕ್ಕುತ್ತಿದ್ದ ಬಶರ್ ಅಲ್ ಅಸದ್ ಸರ್ಕಾರಕ್ಕೆ ದೊಡ್ಡಪ್ರಮಾಣದ ಅಪಾಯ ಎದುರಾಗಿತ್ತು. ಅತ್ಯಾಧುನಿಕ ವೆಪನ್ಸ್ , ಗೆರಿಲ್ಲಾ ತಂತ್ರಗಳ ಮೂಲಕ ಸಿರಿಯನ್ ಆರ್ಮಿ ಫೋರ್ಸ್ ವಿರುದ್ಧ ಫ್ರೀ ಸಿರಿಯನ್ ಆರ್ಮಿ ರಕ್ತಕ್ರಾಂತಿಗಿಳಿಯಿತು. ಸಿರಿಯಾದ ಪ್ರಮುಖ ನಗರಗಳಾದ ಅಲೆಪ್ಪೋ, ರಖ್ಖಾಹ್ ಸೇರಿದಂತೆ ಅನೇಕ ನಗರಗಳನ್ನು ವಶಪಡಿಸಿಕೊಂಡು ತಮ್ಮ ಬೇಸ್ ನಿರ್ಮಿಸಿಕೊಳ್ಳತೊಡಗಿದರು. ಬಶರ್ ಸರ್ಕಾರ ಹೆದರಿ ಹೈರಾಣಾಗಿಹೋಯಿತು. ಇದೇ ಸಂದರ್ಭದಲ್ಲಿ ಕುರ್ದಿಸ್ಥಾನ ದೇಶಕ್ಕಾಗಿ ಹೋರಾಡುತ್ತಿದ್ದ ಸಿರಿಯಾದ ಉತ್ತರ ಭಾಗದಲ್ಲಿ ಹಾಗೂ ಟರ್ಕಿಯ ದಕ್ಷಿಣ ಭಾಗದಲ್ಲಿದ್ದ ದೊಡ್ಡ ಸಂಖ್ಯೆಯ ಕುರ್ದಿಷ್‌ಗಳು – ಸಿರಿಯಾ ಸರ್ಕಾರದ ವಿರುದ್ಧ ಫ್ರೀ ಸಿರಿಯನ್ ಆರ್ಮಿ ನಡೆಸುತ್ತಿದ್ದ ಯುದ್ಧವನ್ನು ಸದ್ಬಳಕೆ ಮಾಡಿಕೊಳ್ಳಲು ಹವಣಿಸಿತು. ತನ್ನದೊಂದು ಕುರ್ದಿಶ್ ಆರ್ಮಿ ಕಟ್ಟಿಕೊಂಡು ಸಿರಿಯಾದ ಉತ್ತರ ಭಾಗವನ್ನು ವಶಪಡಿಸಿಕೊಳ್ಳತೊಡಗಿತು.
ಅಲ್ಲಿಗೆ ಸಿರಿಯಾದೊಳಗೆ ಸಿರಿಯಾ ಸರ್ಕಾರ, ಐಸಿಸ್, ಫ್ರೀ ಸಿರಿಯನ್ ಆರ್ಮಿ, ಕುರ್ದ್ ಫೋರ್ಸಸ್ ನಡುವೆ ಬೇರೆ ಬೇರೆ ಉದ್ದೇಶಗಳಿಗೆ ಸಂಘರ್ಷ ಶುರುವಾದಂತಾಗಿತ್ತು. ಹೊರಗಿನ ರಾಷ್ಟ್ರಗಳಾದ ಲೆಬನಾನಿನ ಹಿಜ್ಬುಲ್ಲಾ, ಇರಾನ್, ಯುಎಸ್, ರಷ್ಯಾ, ಟರ್ಕಿ, ಜೋರ್ಡಾನ್, ಗಲ್ಫ್ ರಾಷ್ಟ್ರಗಳು – ತಮ್ಮ ತಮ್ಮ ಹಿತಾಸಕ್ತಿಗಾಗಿ ಈ ನಾಲ್ಕು ಗುಂಪುಗಳಿಗೆ ಬೇರೆ ಬೇರೆಯಾಗಿ ಬೆಂಬಲ ನೀಡತೊಡಗುತ್ತವೆ. ಇದರಿಂದ ಸಣ್ಣದಾಗಿ ಶುರುವಾದ ನಾಗರೀಕ ದಂಗೆ ಸಿರಿಯಾವನ್ನು ಯುದ್ಧದ ನೆಲವಾಗಿ ಪರಿವರ್ತಿಸಿಬಿಡುತ್ತದೆ. ಅಷ್ಟಕ್ಕೂ ಹೊರಗಿನ ದೇಶಗಳು ಸಿರಿಯಾ ರಣಾಂಗಣವನ್ನು ಪ್ರವೇಶಿಸಲು ಕಾರಣವೇನೆಂದರೆ; ಮಧ್ಯಪ್ರಾಚ್ಯದ ಅಯಿಲ್ ರಿಚ್ ಸುನ್ನಿ ದೇಶಗಳಾದ ಸೌದಿ ಅರೇಬಿಯಾ, ಕತಾರ್; ಸಿರಿಯಾದಲ್ಲಿ ಶೇಕಡಾ 74ರಷ್ಟಿರುವ ಸುನ್ನಿ ಜನರನ್ನು ಕೇವಲ 26ರಷ್ಟಿರುವ ಶಿಯಾ ಸಮುದಾಯದವರು ಆಳುತ್ತಿರುವುದನ್ನು ಸಹಿಸುತ್ತಿರಲಿಲ್ಲ. ಹೀಗಾಗಿ ಸಿರಿಯಾ ಸರ್ಕಾರದ ವಿರುದ್ಧ ಸಂಘರ್ಷಕ್ಕಿಳಿದ ಫ್ರೀ ಸಿರಿಯನ್ ಆರ್ಮಿಗೆ ಹಣ ಹಾಗೂ ವೆಪನ್ ಅನ್ನು ಪೂರೈಕೆ ಮಾಡಿತು. ಅತ್ತ ಶೇಕಡಾ 95%ರಷ್ಟು ಶಿಯಾ ಮೆಜಾರಿಟಿಯಿದ್ದ ಇರಾನ್ ದೇಶಕ್ಕೆ ಸಿರಿಯಾದಲ್ಲಿ ಶಿಯಾ ಆಡಳಿತ ಇರಬೇಕು ಎಂಬ ಹೆಬ್ಬಯಕೆಯಿತ್ತು; ಹಾಗಾಗಿ ಅದು ಬಶರ್ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಅತ್ಯಾಧುನಿಕ ಆಯುಧ, ಹಣಕಾಸಿನ ನೆರವು ಒದಗಿಸಿತ್ತು. ಇದು ಅರಬ್ ರಾಷ್ಟ್ರಗಳ ಕಥೆಯಾದರೇ, ರಷ್ಯಾ ದೇಶಕ್ಕೆ ಮಿಡಲ್ ಈಸ್ಟ್‌ನಲ್ಲಿ ಹಿಡಿತ ಹೊಂದಲು ಸಿರಿಯಾದಲ್ಲಿ ಬಶರ್ ಸರ್ಕಾರ ಇರಲೇಬೇಕಾದ ಅನಿವಾರ್ಯತೆಯಿತ್ತು. ಹಾಗಾಗಿ ರಷ್ಯ ಸಿರಿಯಾ ಸರ್ಕಾರದ ಪರವಾಗಿ ನಿಂತುಬಿಟ್ಟಿತ್ತು, ಯುಎಸ್ ತನ್ನ ಸಿಎಎಯನ್ನು ಕಳುಹಿಸಿ ಸ್ವಾತಂತ್ರ್ಯದ ಹಕ್ಕಿಗಾಗಿ ಹೋರಾಡುತ್ತಿದ್ದ ಫ್ರೀ ಸಿರಿಯನ್ ಆರ್ಮಿಗೆ ಯುದ್ಧ ತರಬೇತಿ ನೀಡಿ ವೆಪನ್ಸ್ ಪೂರೈಸುವಂತೆ ಸೂಚಿಸಿತ್ತು.
ಇದಾದ ಮೇಲೆ ಸತತವಾಗಿ AIRSTRIKES ಶುರುವಾಯಿತು.
ಜುಲೈ 18, 2012ರಂದು ಡಮಸ್ಕಸ್‌ನಲ್ಲಿರುವ ರವಾಡ ಸ್ಕ್ವೆರ್ ನಲ್ಲಿ ಸಿರಿಯ ಸರ್ಕಾರ ಸೆಂಟ್ರಲ್ ಕ್ರೈಸಿಸ್ ಮ್ಯಾನೆಜ್‌ಮೆಂಟ್ ಸೆಲ್ ಮೀಟಿಂಗ್ ಕರೆದಿತ್ತು. ಈ ಮೀಟಿಂಗಿನಲ್ಲಿ ಸಿರಿಯಾ ಸರ್ಕಾರದ ಪ್ರಮುಖ ವ್ಯಕ್ತಿಗಳಿದ್ದರು. ಬಹಳ ದಿನಗಳಿಂದ ಫ್ರೀ ಸಿರಿಯನ್ ಆರ್ಮಿ ಈ ಮೀಟಿಂಗಿನ ಮೇಲೆ ಕಣ್ಣಿಟ್ಟಿತ್ತು. ಪ್ಲಾನ್‌ನಂತೆ ರವಾಡ ಸ್ಕ್ವೆರ್ ಬಿಲ್ಡಿಂಗ್ ಅನ್ನೇ ಬಾಂಬಿಟ್ಟು ಉಡಾಯಿಸಿಬಿಟ್ಟಿತ್ತು. ಈ ದಾಳಿಯಲ್ಲಿ ಸಿರಿಯಾದ ಡಿಫೆನ್ಸ್ ಮಿನಿಸ್ಟರ್ ದಾವೂದ್ ರಾಜೀಹ, ಬಶರ್ ಅಲ್ ಅಸಾದ್‌ನ ಸೋದರ ಮಾವ ಹಸನ್ ತರ‍್ಕ್ಮನಿ ಸೇರಿದಂತೆ ಸಿರಿಯನ್ ಸರ್ಕಾರದ ಅನೇಕ ಘಟಾನುಘಟಿಗಳು ದುರ್ಮರಣವನ್ನುಪ್ಪುತ್ತಾರೆ. ಈ ಘಟನೆಯ ನಂತರ ಬಶರ್ ಕೋಪದಿಂದ ಉರಿದುಬೀಳುತ್ತಾನೆ. ಫ್ರೀ ಸಿರಿಯನ್ ಆರ್ಮಿ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ಆದೇಶಿಸುತ್ತಾನೆ. ಅಮೆರಿಕಾ ಸೇರಿದಂತೆ ಅನೇಕರ ಬೆಂಬಲ ಅವರಿಗೆ ಸಿಗುತ್ತಿದ್ದುದರಿಂದ ಅದೇನೇ ಮಾಡಿದರೂ ಫ್ರೀ ಸಿರಿಯನ್ ಆರ್ಮಿಯನ್ನು ಮಟ್ಟ ಹಾಕಲು ಸರ್ಕಾರದ ಕೈಯಿಂದ ಆಗುತ್ತಿರಲಿಲ್ಲ. ಸಿರಿಯ ಸರ್ಕಾರದ ಆಡಳಿತ ಕಛೇರಿಯಿದ್ದ ಡಮಸ್ಕಸ್ ಸಂಪೂರ್ಣವಾಗಿ ಸುನ್ನಿ ಮುಸಲ್ಮಾನರ ಪಾರುಪತ್ಯದಿಂದ ಕೂಡಿತ್ತು. ಸರ್ಕಾರದ ಆಡಳಿತ ವ್ಯವಸ್ಥೆಯ ಜಾಗದಲ್ಲಿ ನೇರವಾದ ಸಂಘರ್ಷವಿತ್ತು. ಈ ಏರಿಯಾಕ್ಕೆ ಜೋರ್ಡಾನ್ ಮೂಲಕ ಆಯುಧಗಳು ಸರಬರಾಜಾಗುತ್ತಿದ್ದವು.
ಆಗಸ್ಟ್ 21, 2013ರಂದು ಮಧ್ಯ ರಾತ್ರಿ 2.30 ಹಾಗೂ ಬೆಳಗಿನ ಜಾವ 5 ಗಂಟೆಗೆ ನಾಗರೀಕರ ಮೇಲೆ ಸಿರಿಯಾ ಸರ್ಕಾರ ಕೆಮಿಕಲ್ ದಾಳಿಯನ್ನು ಮಾಡುತ್ತದೆ. ಮಕ್ಕಳು, ಮಹಿಳೆಯರು ಎನ್ನದೆ ಸಾವಿರಾರು ಜನರು ಸತ್ತುಹೋಗುತ್ತಾರೆ. 193 ರಾಷ್ಟ್ರಗಳ ಒಪ್ಪಂದದ ಪ್ರಕಾರ ಕೆಮಿಕಲ್ ಆಯುಧ ಬಳಸದಂತೆ ನಿರ್ಬಂಧವಿದ್ದರೂ ಸಿರಿಯಾ ಸರ್ಕಾರ ಅತ್ಯಂತ ಅಪಾಯಕಾರಿಯಾದ ನಿರ್ಧಾರ ತೆಗೆದುಕೊಂಡಿತ್ತು. ಇದನ್ನು ದೊಡ್ಡ ಕ್ರೈಂ ಎಂದೇ ಪರಿಗಣಿಸಲಾಗಿದ್ದು ಯುದ್ಧಾಪರಾದ ಎಸಗಿದ ಆರೋಪ ಬಶರ್ ಮೇಲೆ ಹೊರಿಸಲಾಯಿತು. ಪ್ರಪಂಚದ ಅನೇಕ ರಾಷ್ಟ್ರಗಳು ಬಶರ್ ಸರ್ಕಾರದ ಕೃತ್ಯವನ್ನು ಖಂಡಿಸಿದವು. ಹ್ಯೂಮನ್ ರೈಟ್ಸ್ ವಾಚ್, ಅಮ್ನೆಸ್ಟಿ ಇಂಟರ್ ನ್ಯಾಶನಲ್ ವಿಶ್ವಸಂಸ್ಥೆಯ ಕ್ರಿಮಿನಲ್ ನ್ಯಾಯಾಲಯಕ್ಕೆ ಈ ಪ್ರಕರಣ ತಗೆದುಕೊಂಡುಹೋಗುವಂತೆ ಸೂಚಿಸಿತು. ಚೀನಾ ಮತ್ತು ರಷ್ಯಾ ವೀಟೊ ಅಧಿಕಾರ ಬಳಸಿ ಈ ಪ್ರಯತ್ನಕ್ಕೆ ಹಿನ್ನಡೆಯುಂಟಾಗುವಂತೆ ಮಾಡಿದರು. 2017ರವರೆಗೆ ಸುಮಾರು ಏಳು ಬಾರಿ ಬಶರ್ ಸರ್ಕಾರದ ಪರವಾಗಿ ವೀಟೋ ಅಧಿಕಾರವನ್ನು ರಷ್ಯಾ ಬಳಸಿತು. ಇದರಿಂದ ಬಶರ್ ಅಕ್ಷರಶಃ ಜಾಗತಿಕ ದಾಳಿಯಿಂದ ಬಚಾವಾದ. ಆದರೆ ಅಮೆರಿಕಾ ಕೆಮಿಕಲ್ ದಾಳಿಯ ವಿರುದ್ಧ ಆಕ್ರೋಶಗೊಂಡು ಸಿರಿಯಾದ ಮೇಲೆ Airstrike ಮಾಡಿತು. ಆದರೆ ಅದು ಐಎಸ್‌ಐಎಸ್ ವಿರುದ್ಧದ ದಾಳಿ ಎಂದೂ ಹೇಳಿತು. ಏಕೆಂದರೇ ಫ್ರೀ ಸಿರಿಯನ್ ಆರ್ಮಿ ಜೊತೆ ಅಮೆರಿಕಾ ಹಾಗೂ ಅಮೆರಿಕಾದ ವಿರೋಧಿ ಐಎಸ್‌ಐಎಸ್ ಕೂಡ ನಿಂತಿತ್ತು. ಅಲ್‌ಕೈದಾ ಬೆಂಬಲಿತ ಐಎಸ್‌ಐಎಸ್ ಅಮೆರಿಕಾದ ವಿರೋಧಿಯಾಗಿತ್ತು. ಅಮೆರಿಕಾ ಕೇವಲ ಸಿರಿಯಾದ ನಾಗರೀಕರ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಫ್ರೀ ಸಿರಿಯನ್ ಆರ್ಮಿಗೆ ಬೆಂಬಲ ನೀಡಿತ್ತು. ಅತ್ತ ಸಿರಿಯಾದ ಉತ್ತರ ಹಾಗೂ ಟರ್ಕಿಯ ದಕ್ಷಿಣ ಭಾಗದಲ್ಲಿ ಆಕ್ಟೀವ್ ಆಗಿದ್ದ ಕುರ್ದ್ ಫೋರ್ಸ್ ಗುರಿಯಾಗಿಸಿ ಟರ್ಕಿ ಕೂಡ ದಾಳಿ ಆರಂಭಿಸಿತು. ರಷ್ಯಾ ಕೂಡ ಸಿರಿಯಾದಲ್ಲಿ ಬೇಸ್ ಮಾಡಿಕೊಂಡು ಬೇರೆ ಬೇರೆ ಜಾಗದಲ್ಲಿ Airstrike ಮಾಡತೊಡಗಿತು.
ಇಷ್ಟಾಗುವಾಗ ಸಿರಿಯಾ ಒಂದು ರಾಷ್ಟವಾಗಿ ಉಳಿದುಕೊಂಡಿರಲಿಲ್ಲ, ಬದಲಿಗೆ ಕುರ್ಚಿಗೆ ಅಂಟಿಕೊಂಡು ಕುಂತ ಸರ್ವಾಧಿಕಾರಿಯ, ಸೂಪರ್ ಪವರ್ ರಾಷ್ಟ್ರಗಳ, ನಾಗರೀಕ ದಂಗೆಯ, ಆತಂಕವಾದಿಗಳ ಇಚ್ಚೆ ಪೂರೈಸಿಕೊಳ್ಳಲು ನಿರ್ಮಾಣವಾಗಿದ್ದ ಅಡ್ಡೆಯಂತಾಗಿತ್ತು. ಹಕ್ಕಿಗಾಗಿ ಶುರುವಾದ ಕದನ ಅಸ್ತಿತ್ವದ ಕಣವಾಗಿ ಮಾರ್ಪಟ್ಟಿತ್ತು. ಇದರಿಂದ ಲಕ್ಷಗಳ ಸಂಖೆಯಲ್ಲಿ ಅಲ್ಲಿನ ಅಮಾಯಕ ನಾಗರೀಕರು ಮಕ್ಕಳು, ಮಹಿಳೆಯರು ಬಲಿಯಾದರು. 2016ರಲ್ಲಿ ಯುಎಸ್ ಅಧ್ಯಕ್ಷರಾಗಿ ಆಯ್ಕೆಯಾದ ಟ್ರಂಪ್ ಸಿರಿಯಾದಿಂದ ಅಮೆರಿಕಾವನ್ನು ದೂರವಿಟ್ಟರು. ಇದು ಮುಗಿಯುವ ಸಂಘರ್ಷವಲ್ಲ; ಇದರಲ್ಲಿ ನಾವಿಲ್ಲ ಎಂದರು. ಆದರೆ 2017ರಲ್ಲಿ ಬಶರ್ ಸರ್ಕಾರ ಮತ್ತೆ ಕೆಮಿಕಲ್ ದಾಳಿ ನಡೆಸಿ ನಾಗರೀಕರನ್ನು ಕೊಂದು ಹಾಕಿತು. ಇದರಿಂದ ಆಕ್ರೋಶಗೊಂಡ ಅಮೆರಿಕಾ ಬಶರ್ ಸರ್ಕಾರದ ವಿರುದ್ಧವಾಗಿ ಅಧಿಕೃತವಾಗಿ Airstrike ಮಾಡತೊಡಗಿತು.
ಪ್ರಪಂಚದ ಅತ್ಯಂತ ದೊಡ್ಡದಾದ ಸಿರಿಯ ಸಿವಿಲ್ ವಾರ್‌ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಶೇಕಡಾ 80ಕ್ಕಿಂತ ಹೆಚ್ಚು ಸಿರಿಯನ್ ನಾಗರೀಕರು ಬಡವರಾಗಿದ್ದಾರೆ. ಹಸಿವಿನಿಂದ ಸಾವಿಗೀಡಾಗಿದ್ದಾರೆ. ತೀರಾ ನಾಯಿ, ಬೆಕ್ಕನ್ನು ತಿಂದು ಬದುಕೋ ಪ್ರಯತ್ನ ಮಾಡಿದ್ದಾರೆ. ದೇಶ ಬಿಟ್ಟು ಓಡಿಹೋಗಿದ್ದಾರೆ. ಸಮುದ್ರದ ಮೂಲಕ ದೇಶಬಿಡುವ ಪ್ರಯತ್ನಮಾಡುವಾಗ; ದೋಣಿ ಮಗುಚಿ ಅನೇಕರು ನೀರು ಪಾಲಾಗಿದ್ದಾರೆ. ಸಿರಿಯಾದ ಸಮುದ್ರದ ದಡದಲ್ಲಿ ಅಂಗಾತ ಬಿದ್ದಿದ್ದ ಆಯ್ಲನ್ ಕುರ್ದಿಯ ಶವ ಅಲ್ಲಿನ ಕ್ರೌರ್ಯದ ಭೀಕರತೆಯನ್ನು ಜಗತ್ತಿಗೆ ತಿಳಿಸಿಕೊಟ್ಟಿತ್ತು.
ಸಿರಿಯಾವನ್ನು ನರಕ ಮಾಡಿಹಾಕಿದ ಕೆಟ್ಟ ಕ್ರೆಡಿಟ್ಟು ಅಂತೇನಾದರೂ ಸಿಕ್ಕರೆ ಅದು ಸೋಶಿಯಲ್ ಮೀಡಿಯಾಕ್ಕೆ. ಸೋಶಿಯಲ್ ಮೀಡಿಯಾದ ಮೂಲಕವೇ Narrative ಸೆಟ್ ಮಾಡಲಾಯಿತು. ಜಾಗತಿಕವಾಗಿ ಸಿರಿಯಾ ಪರಿಸ್ಥಿತಿಯನ್ನು ಮಾರ್ಕೆಟ್ ಮಾಡಲಾಯಿತು. ಸಿರಿಯಾದಲ್ಲಿ ಸುಮಾರು 800ಕ್ಕೂ ಅಧಿಕ ಪತ್ರಕರ್ತರನ್ನು ಹತ್ಯೆ ಮಾಡಲಾಯಿತು. ಒಬ್ಬ ಹದಿನಾಲ್ಕು ವರ್ಷದ ಬಾಲಕನ ಗೋಡೆ ಬರಹದಿಂದ ಶುರುವಾದ ಸಣ್ಣ ಸಂಘರ್ಷ. ಸಿರಿಯಾವನ್ನು ಸ್ಮಶಾನ ಮಾಡಿಹಾಕುವವರೆಗೆ ಬಂದು ನಿಂತಿತ್ತು.
ಇದೀಗ ಹಯಾತ್ ತಹ್ರೀರ್ ಅಲ್ ಶಾಮ್ ಸಿರಿಯಾದ ಡಮಸ್ಕಸ್ ವಶಪಡಿಸಿಕೊಳ್ಳುವ ಮೂಲಕ ಸಿರಿಯಾದಲ್ಲಿ ಅಸದ್ ಕುಟುಂಬದ ಕ್ರೌರ್ಯ ಅಂತ್ಯವಾಗಿದೆ. 2015ರ ನಂತರ ಫ್ರೀ ಸಿರಿಯನ್ ಆರ್ಮಿ, ಐಸಿಸ್ ಸೇರಿದಂತೆ, ಅನೇಕ ಗುಂಪುಗಳನ್ನು ಒಂದುಗೂಡಿಸಿ – ಅಲ್ ಜೊಲಾನಿ ಹಯಾತ್ ತಹ್ರೀರ್ ಅಲ್ ಶಾಮ್ ಸಂಘಟನೆ ಕಟ್ಟಿ ಸಿರಿಯಾ ಸರ್ಕಾರದ ವಿರುದ್ಧ ಅಪಾಯಕಾರಿ ಸಮರ ಸಾರಿದ್ದ. ಪ್ರಪಂಚದ ಅನೇಕ ರಾಷ್ಟ್ರಗಳ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಗುರುತಿಸಿಕೊಂಡಿರುವ ಈತ ಆ ಆರೋಪವನ್ನು ನಿರಾಕರಿಸಿ ತಾನೊಬ್ಬ ಹೋರಾಟಗಾರ ಎಂದು ಹೇಳಿಕೊಳ್ಳುತ್ತಾನೆ. ಬಶರ್ ಅಲ್ ಅಸಾದ್‌ನ ಸಿರಿಯಾದ ಕ್ರೌರ್ಯ ಚರಿತ್ರೆಯಲ್ಲಿ ಸದ್ಯಕ್ಕೆ ದಿಗ್ವಿಜಯ ಈತನದ್ದೇ!
ಈ ಸಿವಿಲ್ ವಾರ್‌ನಲ್ಲಿ ಸತ್ತ ನಾಲ್ಕು ಲಕ್ಷಕ್ಕೂ ಅಧಿಕ ಜನರಲ್ಲಿ ಮುಕ್ಕಾಲು ಜನರು ಸಾಮಾನ್ಯ ನಾಗರೀಕರು. ವಿಶ್ವಸಂಸ್ಥೆಯ ಪ್ರಕಾರ 76 ಲಕ್ಷಕ್ಕೂ ಹೆಚ್ಚು ನಾಗರೀಕರು ಸಂತ್ರಸ್ತರಾಗಿದ್ದಾರೆ. 2011ರಲ್ಲಿ ಸಿರಿಯಾ ಬಿಟ್ಟವರ ಸಂಖ್ಯೆ 50 ಸಾವಿರ ಇದ್ದರೆ, 2015ರ ವೇಳೆಗೆ ಈ ಪ್ರಮಾಣ 38 ಲಕ್ಷಕ್ಕೇರಿತ್ತು. 2020ರ ಹೊತ್ತಿಗೆ 70 ಲಕ್ಷ ದಾಟಿತ್ತು. ಅವರೆಲ್ಲ ನೆರೆಯ ದೇಶಗಳಾದ ಟರ್ಕಿ, ಜೋರ್ಡಾನ್, ಲೆಬನಾನ್, ಈಜಿಪ್ಟ್, ಯುರೋಪ್ ದೇಶಗಳು, ಇರಾಕ್ ಮತ್ತು ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದಾರೆ. ನಿರಾಶ್ರಿತ ಶಿಬಿರ ಸೇರಿದ್ದಾರೆ. ಕೊನೆಕೊನೆಗೆ ಆಫ್ರಿಕನ್ ದೇಶದಿಂದ ಮತ್ತು ಯುದ್ಧ ಸಂತ್ರಸ್ತ ದೇಶಗಳಾದ ಸಿರಿಯ, ಇರಾಕ್‌ನಿಂದ ಸಂತ್ರಸ್ತ ವಲಸೆಗಾರರು ಬರದಂತೆ ತಡೆಯಲು ಸಮುದ್ರ ತೀರಗಳಲ್ಲಿ ಯುರೋಪಿಯನ್ ಒಕ್ಕೂಟದ ತಟ ರಕ್ಷಣಾ ಪಡೆಗಳಿಂದ ನಿರಂತರ ಗಸ್ತು ಇರಿಸಲಾಯಿತು. ಆದರೆ ಅವರಿಗೆಲ್ಲಾ ನೆರವು ಕಲ್ಪಿಸಬೇಕು ಎಂಬ ಕೂಗು ಮಾನವ ಹಕ್ಕು ಸಂಘಟನೆಗಳದ್ದಾಗಿತ್ತು. ಆ ಕಥೆ ಇನ್ನಷ್ಟು ಭೀಕರ. ಮುಂದೆಂದಾದರು ಬರೆಯುತ್ತೇನೆ.
ಕೊನೆಯದಾಗಿ…
ಬಶರ್ ಅಲ್ ಅಸದ್ ದೇಶಬಿಟ್ಟು ಹೋಗಿದ್ದಾನೆ. 54 ವರ್ಷಗಳ ಅಸದ್ ಕುಟುಂಬದ ಸರ್ವಾಧಿಕಾರ ಅಂತ್ಯವಾಗಿದೆ. ಆತ ಈಗ ಜೀವದ ಗೆಳೆಯ ರಷ್ಯಾದ ಆಶ್ರಯದಲ್ಲಿದ್ದಾನೆ. ಅವನ ಮೇಲೆ ಯುದ್ಧಾಪರಾಧದ ಗಂಭೀರ ಅಪರಾಧಗಳಿವೆ. ಹಯಾತ್ ತಹ್ರೀರ್ ಅಲ್ ಶಾಮ್ ಮುಖಂಡ ಅಲ್ ಜೊಲಾನಿ ಬಶರನನ್ನು ಬೆಂಬಲಿಸುತ್ತಾ ಬಂದ ಇರಾನ್‌ಗೆ ಎಚ್ಚರಿಕೆಯನ್ನು ಹೇಳಿದ್ದಾನೆ. ಸಿರಿಯಾ ಮೂಲಕ ಲೆಬನಾನಿನ ಹಿಜ್ಬುಲ್ಲಾಗಳಿಗೆ ಆಯುಧ ಪೂರೈಸುತ್ತಿದ್ದ ಇರಾನ್‌ಗೆ ಹಿನ್ನಡೆಯಾಗಿದ್ದು ಆತಂಕದಲ್ಲಿದ್ದ ಇಸ್ರೆಲ್ ಹಾಗೂ ಯುಎಸ್ ಖುಷಿಯಲ್ಲಿದೆ. ಅಮೆರಿಕಾ ಇಸ್ರೇಲ್ ಸಿರಿಯಾದ ಕೆಮಿಕಲ್ ಹಾಗೂ ಮಿಲಿಟರಿ ನೆಲೆ ಮೇಲೆ Airstrike ಮಾಡುವ ಮೂಲಕ ಎಲ್ಲವನ್ನೂ ನಾಶಪಡಿಸಿದೆ. ಹೆಚ್ಚುಕಮ್ಮಿ ಸಿರಿಯಾದ ಒಳಗಿನ ಆಯಕಟ್ಟಿನ ಜಾಗದಲ್ಲಿ ಸೂಪರ್ ಪವರ್ ದೇಶಗಳ ಮಿಲಿಟರಿ ಪಡೆಗಳು ಬೀಡುಬಿಟ್ಟಿವೆ. ಅದಿನ್ನು ಬಂಡುಕೋರರ ಕೈಗೆ ಸಿಗುವುದಿಲ್ಲ. ಸಿರಿಯ ಕಟ್ಟಲು ಈ ದೇಶಗಳು ನೆರವಾಗಬಹುದೇನೋ? ಆದರೆ ಸಕಾರಣಕ್ಕೆ ಶುರುವಾದ ಸಿರಿಯಾದ ಕ್ರಾಂತಿ, ಅನೇಕ ಮಗ್ಗಲುಗಳನ್ನು ದಾಟಿ ರಕ್ತ ಮೆತ್ತಿಕೊಂಡವರ ಕೈಗೆ ಸಿಕ್ಕಿದೆ. ಆದರೆ ಅವರು ಡೆಮಾಕ್ರಸಿ, ಸ್ವಾತಂತ್ರ್ಯದ ಮಾತನಾಡುತ್ತಿದ್ದಾರೆ. ಎಲ್ಲರೂ ಸೇರಿ ಸಿರಿಯಾ ಕಟ್ಟುತ್ತಾರಾ? ಒಂಟಿ ಕಾಲಿನಲ್ಲಿ ನಿಂತಿರುವ ಅದರ ಒಂದೇ ಒಂದು ಆಧಾರಸ್ತಂಭವನ್ನು ಕಡಿದುಹಾಕುತ್ತಾರಾ? ಕಾದುನೋಡಬೇಕು.
ಸದ್ಯಕ್ಕಂತೂ ಬಶರ್ ನಿರ್ಗಮನದಿಂದ ಸಿರಿಯ ಸಂಭ್ರಮದಿಂದಿದೆ. ಆದ ಆಳವಾದ ಗಾಯ ಗುಣವಾಗಲು ಬಹಳ ಕಾಲ ಬೇಕು; ನೆನಪಿನಲ್ಲಿರಲಿ, ಗುಣಪಡಿಸುವ ಉದ್ದೇಶ ಇದ್ದರೆ ಮಾತ್ರ!
ರಾ ಚಿಂತನ್
ಪತ್ರಕರ್ತರು.
ಇದನ್ನೂ ಓದಿ- http://ಇಸ್ರೇಲ್ ಇರಾನ್ ವಾರ್ – ಇರಾನ್ ಚರಿತ್ರೆ! https://kannadaplanet.com/israel-iran-war-iran-history/