ಮಹಿಳಾ ದೌರ್ಜನ್ಯಗಳ ಕುರಿತು ಒಂದಿಷ್ಟು ಚಿಂತನ ಮಂಥನ

Most read

ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ ಯಾವುದನ್ನೂ ಗುಲಾಮಗಿರಿಗೆ, ದೌರ್ಜನ್ಯಕ್ಕೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ ಕಂಡುಕೊಳ್ಳುವಂತಾಗಬೇಕು. ಈ ಆಶಯ ಕೇವಲ ಮಾತಾಗಿ ಉಳಿಯದೇ ಕೃತಿಯ ರೂಪದಲ್ಲಿ ಕಾರ್ಯಗತವಾಗುವೆಡೆಗೆ ನಮ್ಮ ದೃಢ ಹೆಜ್ಜೆಗಳು ಸಾಗಬೇಕಿದೆ-ರೂಪ ಹಾಸನ, ಕವಯಿತ್ರಿ.

ಇಂದು ನವೆಂಬರ್ 25. ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ! ಈ ವಿಶೇಷ ದಿನಗಳು ಹಾಗೂ ಅವುಗಳ ಆಚರಣೆಗಳ ಬಗ್ಗೆ ನನಗೆ ಅಂತಹ ಆಸಕ್ತಿಯಾಗಲೀ ಹಾಗೂ ಇದರಿಂದೆಲ್ಲಾ ಏನಾದರೂ ಬದಲಾವಣೆಯಾಗಿ ಬಿಡುತ್ತದೆಂಬ ನಂಬಿಕೆಯಾಗಲಿ ಇಲ್ಲ. ತಳಮಟ್ಟದಲ್ಲಿ ಇವುಗಳನ್ನೆದುರಿಸುವ ಕೆಲಸಗಳಾಗದೇ ಕೇವಲ ಭಾಷಣ, ಘೋಷಣೆ, ಬರಹಗಳಿಂದ ಪ್ರಯೋಜನವಾದರೂ ಏನು ಎಂಬ ನಿರಾಸೆ. ಈ ದಿನಾಚರಣೆಯೂ ಹೆಚ್ಚಾಗಿ ಕೃತಕ ವಾರ್ಷಿಕ ಆಚರಣೆಯಾಗಿಬಿಟ್ಟಿರುವ ಕಾಲದಲ್ಲಿಯೂ, ಮಹಿಳಾ ದೌರ್ಜನ್ಯಗಳ ಕುರಿತು ಒಂದಿಷ್ಟು ಚಿಂತನ ಮಂಥನಗಳಾದರೂ ಆದರೆ ಹೆಣ್ಣಿನ ಪ್ರತಿರೋಧದ ದನಿಯನ್ನು ಸಮುದಾಯಕ್ಕೆ ಮುಟ್ಟಿಸಬಹುದೆಂಬ ಸಣ್ಣ ಆಶಯದೊಂದಿಗೆ ಈ ಬರಹ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆಯನ್ನು ಮುಗಿಸಿ ಮುನ್ನಡೆದಿರುವ ಭಾರತದ ಅಂದಾಜು ಅರ್ಧದಷ್ಟಿರುವ ಹೆಣ್ಣು ಸಂಕುಲದ ಪರಿಸ್ಥಿತಿ ಈಗ ಯಾವ ಹಂತ ತಲುಪಿದೆ ಎಂಬುದನ್ನಳೆಯಲು, ಬಹುಶಃ ಈಗಲಾದರೂ ಇದು ಸೂಕ್ತ ಕಾಲಘಟ್ಟ. ಹೆಣ್ಣಿನ ಸ್ವಾತಂತ್ರ್ಯ, ಸಮಾನತೆ, ಸ್ವಾಯತ್ತೆ, ಅಸ್ಮಿತೆ, ಸುರಕ್ಷತೆ, ನೆಮ್ಮದಿಗಳನ್ನು ಗಳಿಸಬೇಕೆಂಬ ತೀವ್ರ ಹಂಬಲದಂತೆ ಸಾಧಿಸಿದ್ದೆಷ್ಟು, ಇನ್ನೂ ತಲುಪಬೇಕಿರುವ ಹಾದಿ ಎಷ್ಟು ದೂರ, ಎಷ್ಟು ದುರ್ಗಮ ಎಂಬುದರ ಅವಲೋಕನವಾದರೂ ಈಗ ಆಗಲೇಬೇಕಿದೆ. ಪಿತೃಪ್ರಾಧಾನ್ಯ ಕುಟುಂಬ, ಪುರುಷ ಕೇಂದ್ರಿತ ಸಮಾಜ, ಪುರುಷಾಳ್ವಿಕೆಯ ಕಪಿಮುಷ್ಟಿಯಲ್ಲಿ ಅನುಭವಿಸಬೇಕಾಗಿ ಬಂದಿರುವ ಅಸಮಾನತೆಯ ತಳಮಳ, ತಾರತಮ್ಯದ ಕಳವಳದೊಂದಿಗೆ ಈಗ ಮಿತಿಮೀರಿದ ದೌರ್ಜನ್ಯದ ಸಂಕಟ, ಜಾತಿ/ಮತಗಳ ಹುನ್ನಾರ, ವ್ಯಾಪಾರೀ ಜಗತ್ತಿನ ಕ್ರೌರ್ಯ, ಮುಕ್ತ ಆರ್ಥಿಕ ನೀತಿಯ ಕುತಂತ್ರ, ಭ್ರಷ್ಟತೆಯ ಗಾಳ, ರಾಜಕೀಯದ ಷಡ್ಯಂತ್ರ… ಎಲ್ಲವೂ ಸೇರಿಬಿಟ್ಟಿವೆ! ಹೀಗಿರುವಾಗ ಇವೆಲ್ಲಕ್ಕೆ ಅರಿವಿದ್ದೋ ಇಲ್ಲದೆಯೋ ಬಲಿಪಶುವಾಗಬೇಕಿರುವ ಹೆಣ್ಣು ಸಂಕುಲದ ಸ್ಥಿತಿ ಭಾರತದಲ್ಲಿ ಮತ್ತಷ್ಟು ಸೂಕ್ಷ್ಮವಾಗುತ್ತಾ ಸಾಗಿದೆ.

 ಇಂದು ಅನೇಕ ಎಳೆಯ ಕಂದಮ್ಮಗಳೂ ಪುರುಷ ವಿಕೃತಿಗೆ, ಬಲಾತ್ಕಾರಕ್ಕೆ ಸಿಲುಕಿ ನಲುಗುತ್ತಿವೆ. ಅತ್ಯಾಚಾರದ ಪ್ರಮಾಣ ಏರುತ್ತಾ ಹೋಗಿ, ಈಗ ಪ್ರತಿ 15 ನಿಮಿಷಕ್ಕೊಬ್ಬ ಹೆಣ್ಣುಮಗಳ ಅತ್ಯಾಚಾರವಾಗುವ ಹಂತ ತಲುಪಿ, ಕಳೆದೊಂದು ದಶಕದಲ್ಲಿ 1200%ರಷ್ಟು ಅತ್ಯಾಚಾರಗಳು ಹೆಚ್ಚಳವಾಗಿರುವುದು ರಾಷ್ಟ್ರೀಯ ದಾಖಲೆಯಲ್ಲಿ ಸೇರಿ ಹೋಗಿದೆ! ಇದರಲ್ಲಿ ವ್ಯಾಪಕವಾಗುತ್ತಿರುವ ಸಾಮೂಹಿಕ ಅತ್ಯಾಚಾರಗಳೂ ಸೇರಿ, ಪುರುಷ ಕ್ರೌರ್ಯದ ಹೀನತೆಗೆ ದಿಗ್ಭ್ರಾಂತಿಯಾಗುತ್ತಿದೆ. ದಾಖಲಾಗದ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಅದಿನ್ನೆಷ್ಟಿದೆಯೋ! ಇಷ್ಟೇ ಅಲ್ಲ- ಗರ್ಭದಲ್ಲೇ ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಬಿಸಾಡಲಾಗುತ್ತಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಹೆಣ್ಣುಮಕ್ಕಳ ಕಣ್ಮರೆ, ಕಳ್ಳಸಾಗಣೆ, ಮಾರಾಟ, ಆಸಿಡ್ ದಾಳಿ, ಮರ್ಯಾದಾ ಹೀನ ಹತ್ಯೆ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಜೀತ, ಬಂಡವಾಳಶಾಹಿ ಕಪಿಮುಷ್ಠಿಗೆ ಸಿಕ್ಕ ವೇಶ್ಯಾವಾಟಿಕೆ ಮತ್ತು ಅದರ ಅಸಂಖ್ಯ ರೂಪಗಳು, ಕಡಿವಾಣವಿಲ್ಲದ ಬಾಲ್ಯವಿವಾಹ, ಅನವಶ್ಯಕ ಗರ್ಭಕೋಶಗಳ ಹನನ… ಒಂದೇ ಎರಡೇ? ಈ ಪರಿಯಲ್ಲಿ ಪ್ರತಿ ಕ್ಷಣ, ಹೆಣ್ಣು ಜೀವದ ಮೇಲಿನ ದೌರ್ಜನ್ಯ ಹಾಗೂ ಕ್ರೌರ್ಯಗಳು ಅವಿರತ ಇಲ್ಲಿ ನಡೆಯುತ್ತಿವೆ.

ನಮ್ಮೀ ದೇಶದಲ್ಲಿ ಹೆಣ್ಣು ಜೀವವನ್ನು ಹಿಂಡುತ್ತಿರುವ ಹಿಂಸೆಯ ಬಗೆಗಳು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿಬಿಟ್ಟಿವೆ. ಹೆಣ್ಣು ಸಂಕುಲವನ್ನು ಭೀತಿಗೊಳಿಸುವ, ದಮನಗೊಳಿಸುವ, ನಿರ್ನಾಮಗೊಳಿಸುವ ಕರಾಳ ಹಾದಿಯಲ್ಲಿ ಭಾರತ ದಾಪುಗಾಲಿಡುತ್ತಿರುವಂತೆ ಗೋಚರಿಸುತ್ತಿದೆ! ಹೀಗಾಗಿ ಇವೆಲ್ಲವೂ ಸೇರಿ- ಈ ಅಭಿವೃದ್ಧಿಯದೆಂದೇ ಗುರುತಿಸಲಾಗುತ್ತಿರುವ ಕಾಲಘಟ್ಟದಲ್ಲೂ, ಸಮಾಜದ ಒಟ್ಟು ಅಭಿವೃದ್ಧಿ ಪರಿಕಲ್ಪನೆಯಿಂದ ಮಹಿಳೆ ದೂರವೇ ಉಳಿಯುವಂತಾಗಿರುವುದೂ ಮತ್ತು ಅವಳ ದೌರ್ಜನ್ಯ ಹಾಗೂ ಸಂಕಟದ ಮೂಲಗಳೂ ಇವೇ ಆಗಿರುವುದನ್ನು ಗುರುತಿಸಿಕೊಳ್ಳಲೇಬೇಕಿದೆ. ಈಗಲಾದರೂ ಹೆಣ್ಣಿನ ಪ್ರತಿ ಸಮಸ್ಯೆಯನ್ನು ಪ್ರತ್ಯೇಕವಾಗಿ ಮತ್ತು ಸಮಗ್ರವಾಗಿ ಅಧ್ಯಯನಕ್ಕೊಳಪಡಿಸಬೇಕಿದೆ. ಜೊತೆಗೆ ನಮ್ಮ ಮುಂದಿರುವಂತಹ ಹೆಣ್ಣು ಸಂಕುಲದ ಈ ಎಲ್ಲ ಬಹುಮುಖಿ ಸಮಸ್ಯೆಗಳಿಗೆ ಮೂಲಮಟ್ಟದಲ್ಲಿ ಪರಿಹಾರವನ್ನು ಕಂಡುಕೊಳ್ಳಲು, ಬಹು ಆಯಾಮಗಳಲ್ಲಿ ನಾವು ಯೋಚಿಸಿ ಹೆಜ್ಜೆಗಳನ್ನು ಇಡಬೇಕಿದೆ.

ಮೊದಲನೆಯದಾಗಿ ಹೆಣ್ಣುಮಕ್ಕಳು ಕೇವಲ ಓಟ್ ಬ್ಯಾಂಕ್‍ಗಳಾಗಿ ಅಲ್ಲ- ಎಲ್ಲ ಹಂತಗಳಲ್ಲೂ ಅರ್ಧದಷ್ಟು ರಾಜಕೀಯ ನಾಯಕತ್ವವನ್ನು ಪ್ರತಿಷ್ಠಾಪಿಸುವ ದಿಕ್ಕಿನಲ್ಲಿ ಒಗ್ಗೂಡಿ ಪ್ರಯತ್ನಿಸಬೇಕು. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ… ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಕನಿಷ್ಠ ಅರ್ಧದಷ್ಟು ತೊಡಗುವಂತಾಗಲು ಶತಾಯಗತಾಯ ಪ್ರಯತ್ನಿಸಬೇಕು. ಜೊತೆಗೆ ಸಮರ್ಪಕವಾಗಿ ಸಂವಿಧಾನದ ಸಮಾನತೆಯ ಆಶಯ ಅನುಷ್ಠಾನ ಆಗುವ ಹಾಗೆ ಮಾಡುವಂತಹ ಕಠಿಣ ಸವಾಲನ್ನು ಕೂಡ ಪ್ರಥಮ ಜವಾಬ್ದಾರಿಯಾಗಿ ನಾವು ಸ್ವೀಕರಿಸಬೇಕು.

ಎರಡನೆಯದಾಗಿ ಹೆಣ್ಣಿನ ಮೇಲಿನ ಎಲ್ಲ ಬಗೆಯ ಹಿಂಸೆ, ಕ್ರೌರ್ಯಕ್ಕೆ ತಡೆಯೊಡ್ಡಲು ಬೇಕಾದ ರಚನಾತ್ಮಕ, ಸಂಘಟನಾತ್ಮಕ, ವಿಕೇಂದ್ರೀಕೃತ ಕಾರ್ಯ ಯೋಜನೆಗಳನ್ನು ಚರ್ಚಿಸಿ, ಆಮೂಲಾಗ್ರವಾಗಿ ಸಿದ್ಧಪಡಿಸಿಕೊಳ್ಳಬೇಕು. ಜೊತೆಗೆ, ಹೆಣ್ಣು ಸಂಕುಲ ಇಲ್ಲಿ ನೆಮ್ಮದಿಯಾಗಿ, ಘನತೆ, ಗೌರವದಿಂದ ಬದುಕಲಿಕ್ಕೆ ಏನೆಲ್ಲ ಬೇಕು? ಎನ್ನುವುದರ ಕುರಿತು, ಸರ್ಕಾರದ ಎದುರಿಗೆ ಸಮಸ್ಯೆಗಳ ಪರಿಹಾರಕ್ಕೆ ಸಶಕ್ತವಾದ ಬೇಡಿಕೆಯನ್ನು ಸರಿಯಾದ ಸಮಯಗಳಲ್ಲಿ ಇಡುವಂತಹ ಕಾರ್ಯಯೋಜನೆಯನ್ನು ಸಿದ್ಧಗೊಳಿಸಬೇಕು. ಜೊತೆಗೆ ಇದನ್ನು ಆಗು ಮಾಡಲು ಸರ್ಕಾರದ ಪ್ರತಿಹಂತದ ಅನುಷ್ಠಾನದಲ್ಲಿ ಜವಾಬ್ದಾರಿಯುತ ಹೆಣ್ಣುಮಕ್ಕಳು ಸೇರ್ಪಡೆಯಾಗಲು ಬೇಕಾದಂತಹ ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಉದಾಹರಣೆಗೆ ರಾಜ್ಯ ಹಾಗೂ ಕೇಂದ್ರ ಬಜೆಟ್ ಮಂಡನೆಯ ಸಮಯದಲ್ಲಿ ಮಹಿಳಾ ತುರ್ತು ಅವಶ್ಯಕತೆಯ ಹಕ್ಕೊತ್ತಾಯಗಳು ಕಡ್ಡಾಯವಾಗಿ ಸರ್ಕಾರ ಹಾಗೂ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರಬೇಕು.

ಮೂರನೆಯದಾಗಿ ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ದಮನಿಸುವ ಮನಃಸ್ಥಿತಿಯನ್ನು ಮೂಲಮಟ್ಟದಲ್ಲಿ ಬದಲಾಯಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಕುರಿತು ಸಮಗ್ರವಾಗಿ ಯೋಚಿಸಿ ಪರಿಹಾರಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಇದಕ್ಕಾಗಿ ಜಾರಿಯಾಗಿರುವ ಹತ್ತು ಹಲವು ಸರ್ಕಾರಿ ಆದೇಶಗಳನ್ನು ವಿಕೇಂದ್ರೀಕೃತ ನೆಲೆಯಲ್ಲಿ ಅನುಷ್ಠಾನಕ್ಕೆ ತರಲು ಸಮಗ್ರವಾಗಿ ಪ್ರಯತ್ನಗಳು ನಡೆಯಬೇಕು. ಶಿಕ್ಷಣದ ಭಾಗವಾಗಿ- ಪಠ್ಯ ಕ್ರಮದಲ್ಲಿ ಲಿಂಗ ಸೂಕ್ಷ್ಮತೆ ಹಾಗೂ ಲಿಂಗ ಸಂವೇದನೆಯ ಪಠ್ಯದ ಜೊತೆಗೆ ಲೈಂಗಿಕ ಶಿಕ್ಷಣವನ್ನು ಹಂತಹಂತವಾಗಿ ಅಳವಡಿಸಬೇಕು.

ಕೊನೆಯದಾಗಿ ಸ್ವತಃ ಹೆಣ್ಣುಮಕ್ಕಳು ನಾವು, ನಮ್ಮ ಕೀಳರಿಮೆಗೆ ಕಾರಣಗಳೇನು ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ- ನಮ್ಮ ದೌರ್ಬಲ್ಯ, ಸಣ್ಣತನಗಳನ್ನು ಮೆಟ್ಟಿ ನಿಂತು, ವೈಯಕ್ತಿಕತೆಯನ್ನ ಮೀರಿ, ಒಟ್ಟು ಮಹಿಳಾ ಸಂಕುಲ ಸಂಘಟಿತವಾಗಿ, ಸಶಕ್ತವಾದ ಹೆಜ್ಜೆಗಳನ್ನೂರಿ ಸಮಾಜದಲ್ಲಿ ನೆಲೆ ನಿಲ್ಲುವಂತಾಗುವ ದಾರಿಗಳನ್ನು ಕಂಡುಕೊಳ್ಳಬೇಕು. ಇದಕ್ಕಾಗಿ ಯುವಜನಾಂಗವನ್ನೂ ಒಳಗೊಂಡು, ಅವಿರತ ಚಿಂತನ ಮಂಥನಗಳು ನಡೆಯಬೇಕು. ಮುಂದಿನ ಹೆಣ್ಣು ಸಮುದಾಯ ತನ್ನ ದೇಹ, ಮನಸು, ಬುದ್ಧಿ -ಯಾವುದನ್ನೂ ಗುಲಾಮಗಿರಿಗೆ, ದೌರ್ಜನ್ಯಕ್ಕೆ ಒಡ್ಡದೇ, ಸ್ವಾಭಿಮಾನದಿಂದ, ಸ್ವಾಯತ್ತತೆಯಿಂದ, ಘನತೆಯುತವಾಗಿ ಬದುಕವಂತಾಗಲು ಪ್ರಬಲ ಬೆಳಕಿನ ದಾರಿಗಳನ್ನು ನಾವೆಲ್ಲರೂ ಒಗ್ಗೂಡಿ ಕಂಡುಕೊಳ್ಳುವಂತಾಗಬೇಕು. ಈ ಆಶಯ ಕೇವಲ ಮಾತಾಗಿ ಉಳಿಯದೇ ಕೃತಿಯ ರೂಪದಲ್ಲಿ ಕಾರ್ಯಗತವಾಗುವೆಡೆಗೆ ನಮ್ಮ ದೃಢ ಹೆಜ್ಜೆಗಳು ಸಾಗಬೇಕಿದೆ.

ಹೆಣ್ಣಿನ ಘನತೆ ಮತ್ತು ಅಸ್ಮಿತೆಯನ್ನು ಚೂರಾಗಿಸಲು ಸುತ್ತಲೂ ಕತ್ತಿ ಹಿರಿದು ನಿಂತಿರುವ ಹಲ ಬಗೆಯ ದುಷ್ಟ ಶಕ್ತಿಗಳನ್ನೂ ಎದುರಿಸುವ ವಿಧಾನಗಳನ್ನು ಅನಾದಿಯಿಂದ ಹೆಜ್ಜೆ ಹೆಜ್ಜೆಗೂ ಹುಡುಕುತ್ತಲೇ ಬಂದಿದ್ದೇವೆ. ಆದರೆ ಈಗದನ್ನು ಮತ್ತಷ್ಟು ತೀವ್ರವೂ, ಸೂಕ್ಷ್ಮವೂ, ಹರಿತವೂ ಆಗಿಸಲೇಬೇಕಿದೆ. ಸಮತ್ವ ಮತ್ತು ಸಮತೋಲನದ ಘನತೆಯ ಕನಸಿನ ಸಾಕಾರಕ್ಕಾಗಿ ಹೆಣ್ಣಿನ ಮೇಲಿನ ಹಿಂಸೆ ಹಾಗೂ ಕ್ರೌರ್ಯವನ್ನು ಹಿಮ್ಮೆಟ್ಟಿಸುವ ದಾರಿಗಳನ್ನು ತುರ್ತಾಗಿ ಕಂಡುಕೊಳ್ಳಲೇಬೇಕಿದೆ. ಇಲ್ಲದಿದ್ದರೆ ಮನುಷ್ಯ ಸಂಕುಲಕ್ಕೇ ಉಳಿಗಾಲವಿಲ್ಲ! ಹೀಗಾಗಿ ಪ್ರತಿ ಹೆಣ್ಣಿಗೆ ಸಂಬಂಧಿಸಿದ ಯಾವುದೇ ಪ್ರತ್ಯೇಕ ಘಟನೆಯನ್ನೂ ಬಿಡಿ ಘಟನೆಯಾಗಿ ನೋಡಲೂಬೇಕು, ಅದನ್ನು ಎದುರಿಸುತ್ತಾ ಕಾಲ ಮತ್ತು ಇತಿಹಾಸದ ಪ್ರಕ್ರಿಯೆಯೊಂದಿಗೆ ಇಡಿಯಾಗಿ, ಸಮಗ್ರವಾಗಿ ಅರ್ಥೈಸಿಕೊಳ್ಳಲೂಬೇಕು. ಹೀಗಾದರಷ್ಟೇ ಅದರ ಹಿಂದಿನ ಪುರುಷ ಪ್ರಾಧಾನ್ಯತೆಯ ಸೂಕ್ಷ್ಮ ಕುಣಿಕೆಗಳು ಗೋಚರಿಸಲು ಸಾಧ್ಯ. ಜೊತೆಗೆ ಅದರಿಂದ ಬಿಡುಗಡೆಯ ದಾರಿ ಹುಡುಕಲೂ ಪ್ರಯತ್ನಿಸಲು ಸಾಧ್ಯ.

ಕೊನೆಗೂ ಈ ಎಲ್ಲಾ ಅಗೋಚರ ಗಾಳಗಳು, ದಾಳಗಳು ತಂದೊಡ್ಡುವ ಸಂಕಟ, ಸೃಷ್ಟಿಸುತ್ತಿರುವ ದಾರುಣತೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವಾಗಿ ನಮ್ಮ ಕಣ್ಣ ಮುಂದಿನ ಗುರಿಯಾಗಿ ಕಾಣುವುದು- ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾಗಿ, ಪ್ರಜಾಪ್ರಭುತ್ವದ ಸಾಕಾರಕ್ಕೆ ದಿಕ್ಕಾಗಿರುವ ಸಕಲ ಜೀವಪರವಾದ ನಮ್ಮ ಸಂವಿಧಾನ! ಅದೊಂದು ಭರವಸೆ. ಸಮಾಧಾನ. ಎಷ್ಟೇ ಕಷ್ಟವಾದರೂ ಅದೇ ದಾರಿ…! ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಹಾದಿಯ ನಡೆ ಕಠಿಣ. ಆದರೆ ಸಂವಿಧಾನದ ಗುರಿ ಮುಟ್ಟುವ ಹಾದಿ ಕಠೋರ! ಅಂದು ಕಷ್ಟವಾದರೂ ಹೊರಗಿನವರನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಒದ್ದೋಡಿಸಬಹುದಿತ್ತು. ಅದಕ್ಕೆ ಎಲ್ಲರೂ ಒಗ್ಗೂಡುವ ಸಾಧ್ಯತೆ ಇತ್ತು. ಏಕೆಂದರೆ ಅವರು ನಮ್ಮವರಲ್ಲ! ಶತ್ರುಗಳು! ಆದರೆ ಇಂದು, ಒಳಗಿನ ನಮ್ಮವರೆನಿಸಿಕೊಂಡವರೊಡನೆ ಈ ನಿತ್ಯದ ಹಲ ಬಗೆಯ ಆಂತರಿಕ ಹೋರಾಟವು ಅತ್ಯಂತ ಯಾತನಾದಾಯಕ, ಸೂಕ್ಷ್ಮ ಮತ್ತು ಕ್ಲಿಷ್ಟಕರ. ಹಾಗೆಂದೇ ಈ ಗುರಿ ಸೇರಲು ಹೊಸ ಬಗೆಯ, ರಚನಾತ್ಮಕ, ಕ್ರಿಯಾಶೀಲ ನಡೆಗಳನ್ನು, ತಂತ್ರಗಳನ್ನು ನಾವು ಕಲಿಯುತ್ತಾ ಸಾಗಬೇಕಿದೆಯಷ್ಟೇ. ಇದರೊಂದಿಗೆ ಹೆಣ್ಣಿನ ಪ್ರತಿ ಸಮಸ್ಯೆಯನ್ನೂ ರಾಜಕೀಯಗೊಳಿಸಿ [ಪೊಲಿಟಿಸೈಸ್] ಮುಖ್ಯವಾಹಿನಿಯ ಗಮನ ಸೆಳೆಯುವುದೂ ಅಷ್ಟೇ ಮುಖ್ಯವಾಗಿದೆ. ಆದರೆ ಹೆಣ್ಣುಸಂಕುಲಕ್ಕೆ ನಿಸರ್ಗದತ್ತವಾಗಿ ದಕ್ಕಿದ ಪ್ರೀತಿ, ಕಾರುಣ್ಯ, ಅಂತಃಕರಣವನ್ನು ಒಂದಿಷ್ಟೂ ಕಳೆದುಕೊಳ್ಳದಂತೆ, ಈ ರೂಕ್ಷ ಪಯಣದಲ್ಲಿ ಧೃತಿಗೆಡದೇ ಹೆಜ್ಜೆಯಿಡಬೇಕಿರುವುದು ಅತ್ಯಂತ ಮುಖ್ಯವಾದುದು. ಈ ಎಚ್ಚರ ಅನುಕ್ಷಣ ನಮ್ಮನ್ನು ಕಾಯಬೇಕಿದೆ.

ರೂಪ ಹಾಸನ

ಇವರು ಕನ್ನಡ ಕಾವ್ಯಲೋಕದ ಸೂಕ್ಷ್ಮ ಸಂವೇದನೆಯ ಕವಯಿತ್ರಿ ಹಾಗೂ ಕಳೆದ ಎರಡೂವರೆ ದಶಕದಿಂದ ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸುತ್ತಿರುವವರು.

ಇದನ್ನೂ ಓದಿ- ವಿಶ್ವ ಪುರುಷರ ದಿನ ವಿಶೇಷ | ಪುರುಷತ್ವದ ಒತ್ತಡ

More articles

Latest article