ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನವೆಂಬರ್ 24, 2024ರಂದು ನಡೆಸಲು ಉದ್ದೇಶಿಸಿರುವ ಕೆಸೆಟ್ ಪ್ರಾಧ್ಯಾಪಕರುಗಳ ಅರ್ಹತಾ ಪರೀಕ್ಷೆಯ ಮನೋವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆಯನ್ನು ಕೇವಲ ಆಂಗ್ಲ ಭಾಷೆಯಲ್ಲಿ ನೀಡುತ್ತಿರುವ ನಿರ್ಧಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತೀವ್ರವಾಗಿ ಖಂಡಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದಿರುವ ಡಾ.ಬಿಳಿಮಲೆ, ಪರೀಕ್ಷಾ ಪ್ರಾಧಿಕಾರದ ನಿರ್ಣಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಷ್ಟೇ ಅಲ್ಲ, ಈ ನೆಲದ ಕಾನೂನನ್ನು ಉಲ್ಲಂಘಿಸುವ ವಿಷಯವಾಗಿರುತ್ತದೆ. ಈ ಕುರಿತಂತೆ ಅದು ಕೂಡಲೇ ಕ್ರಮವಹಿಸಿ ಕನ್ನಡ ಭಾಷೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಒದಗಿಸುವುದು ಮತ್ತು ಈ ಅಚಾತುರ್ಯಕ್ಕೆ ಕಾರಣವೇನು ಎಂಬ ಕುರಿತು ವರದಿ ಸಲ್ಲಿಸುವುದು ಎಂದು ಸೂಚಿಸಿದ್ದಾರೆ.
ಒಂದು ವೇಳೆ ಆಂಗ್ಲಭಾಷೆಯಲ್ಲಿ ಮಾತ್ರ ಪರೀಕ್ಷೆಯನ್ನು ನಿರ್ವಹಿಸಿ ಕನ್ನಡ ಭಾಷಾ ವಿದ್ಯಾರ್ಥಿಗಳಿಗೆ ಅನ್ಯಾಯವಾದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ ಎಂದು ಡಾ.ಬಿಳಿಮಲೆ ಪರೀಕ್ಷಾ ಪ್ರಾಧಿಕಾರದ ಮುಖ್ಯಸ್ಥರಿಗೆ ಎಚ್ಚರಿಸಿದ್ದಾರೆ.