Saturday, December 7, 2024

ಮಕ್ಕಳಿಗೂ ತಿಳಿಯಲಿ ನೋವು, ನಿರಾಸೆ, ಕಾದು ಪಡೆವ ಆನಂದ

Most read

ಬೀಳದೆ  ನಡಿಗೆ  ಕಲಿಯಲಾರೆವು.  ಕಷ್ಟದ ದಾರಿಯಲ್ಲಿ  ಡ್ರೈವ್ ಮಾಡದಿದ್ದರೆ  ಎಂದಿಗೂ ಮೇನ್  ರೋಡಿನಲ್ಲಿ  ಡ್ರೈವ್  ಮಾಡಲಾರೆವು. ಹಾಗೆಯೇ  ಮಕ್ಕಳಿಗೆ  ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು  ಬದುಕಲ್ಲಿ  ಸವಾಲುಗಳನ್ನು  ಎದುರಿಸುವಂತೆ  ಮಾಡಲಾಗುವುದಿಲ್ಲ ಡಾ. ರೂಪಾ ರಾವ್‌, ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬಹಳ  ಜನ ಪಾಲಕರ,  ಪೋಷಕರ ಏಕೈಕ  ಕನಸು ನನ್ನ  ಮಗುವಿಗೆ  ಬಯಸಿದ್ದೆಲ್ಲಾ  ಸಿಗಬೇಕು, ನೋವಾಗಲೀ, ನಿರಾಸೆಯಾಗಲೀ ಅವರ  ಅರಿವಿಗೆ ಬರಬಾರದು.  ನಾನು ಪಟ್ಟ ಬಡತನ, ನಿರಾಕರಣೆ ಕಷ್ಟ ಮಗುವಿಗೆ  ಬರಬಾರದು ಅಂತ.

ಯಾವತ್ತಾದರೂ  ಕಂಬಳಿಹುಳ  ದಿಢೀರ್ ಎಂದು ಚಿಟ್ಟೆಯಾಗಿದ್ದು ನೋಡಿದ್ದೀರಾ? ತನ್ನ ಪೊರೆಯನ್ನು ತಾನೇ  ಕಷ್ಟಪಟ್ಟು ಒಡೆದು ಅದು ಹೊರ ಬರುತ್ತದೆ.  ಹಾಗೆ ಬಂದ ಚಿಟ್ಟೆ ಮಾತ್ರ  ಹಾರಬಲ್ಲದು.  ಇಲ್ಲವಾದರೆ  ನೆಲದ ಮೇಲೆಯೇ ಬಿದ್ದು ಒದ್ದಾಡಿ  ಸಾಯುತ್ತದೆ.

ಮೊಗ್ಗೊಂದನ್ನು  ನಾವೇ ಅರಳಿಸಿ  ಹೂ ಮಾಡಲೆತ್ನಿಸಿದರೆ  ಅದರ ಕಾಲಾವಧಿ  ಬಹಳ ಕಡಿಮೆ.

ತಾಯಿ  ಹಕ್ಕಿ  ಮೊಟ್ಟೆ  ಒಡೆದು ಬರುವ  ಹಕ್ಕಿ ಮರಿಗಾಗಿ ಕಾಯುತ್ತದೆಯೇ ಹೊರತು ಮರಿ ಮೊಟ್ಟೆಯನ್ನು  ಒಡೆಯಲು ಕಷ್ಟ  ಪಡುತ್ತದೆ ಎಂದು ತಾನೇ  ಮೊಟ್ಟೆಯನ್ನು  ಒಡೆಯುವುದಿಲ್ಲ. ಅಷ್ಟೇಕೆ ಹೊಟ್ಟೆಯಲ್ಲಿ ಮಗು ಒಂದೇ ಇದೆ ಹೆದರಿಕೊಳ್ಳುತ್ತದೆ ಎಂದು ಅವಧಿಗೆ ಮುಂಚೆ ಹೆರಿಗೆ  ಮಾಡಿಕೊಳ್ಳುವುದಿಲ್ಲ.

ಹಾಗಿದ್ದಾಗ  ಮಕ್ಕಳ ಅರಿವಿಗೆ  ಯಾವ  ನೋವು, ನಿರಾಸೆ  ನಮ್ಮ  ಕಷ್ಟಗಳೂ ತಿಳಿಯಬಾರದೆಂದು  ಬೆಳೆಸಿದರೆ ಆ ಮಕ್ಕಳು ಬೆಳೆದು ನಿಂತು  ಕೃತಜ್ಞತೆ,  ಮೆಚ್ಚುಗೆ  ಯಾವುದೂ  ಇಲ್ಲದೆ  ಬದುಕುತ್ತಾರೆ. ತಮಗೆ ಸಿಕ್ಕುತ್ತಿರುವುದನ್ನೆಲ್ಲಾ  ಟೇಕನ್ ಫಾರ್ ಗ್ರಾಂಟೆಡ್  ಆಗಿ  ತೆಗೆದುಕೊಳ್ಳುತ್ತಾರೆ. ಸಿಗದೇ ಇದ್ದುದಕ್ಕೇ  ತಮ್ಮನ್ನು ಜವಾಬ್ದಾರಿ  ಮಾಡಿಕೊಳ್ಳದೇ  ಇತರರನ್ನೋ,  ವ್ಯವಸ್ಥೆಯನ್ನೋ  ನಿಂದಿಸುತ್ತಾರೆ.

ಈಗೇನೋ ಅವರ  ಜೊತೆ  ನಾವಿರಬಹುದು. ಆದರೆ ನಂತರದ ಘಟ್ಟಗಳಲ್ಲಿ ಅವರು ತಮ್ಮನ್ನು ತಾವು  ನೋಡಿಕೊಳ್ಳಬೇಕು.  ಬದುಕೇನೂ ಹೂವಿನ ಹಾಸಿಗೆ ಅಲ್ಲ. 

ಯಾವುದೋ  ನಿರಾಸೆ,  ನಿರಾಕರಣೆ,  ನೋವು  ಅವರನ್ನು ಕಾಡಿದಾಗ,  ಅದನ್ನು ನಿಭಾಯಿಸಲಾಗದೇ  ಸಾವಿನ ಮೊರೆಯೋ,  ಯಾವುದೋ  ಗೀಳಿನ ಮೊರೆ ಅಥವಾ ಅಥವಾ ಆಂಟಿ ಸೋಶಿಯಲ್  ಜನರಾಗಿ  ಬದಲಾದರೆ  ಅದಕ್ಕೆ  ಅವರ  ಪೋಷಕರೇ  ಸಂಪೂರ್ಣ ಹೊಣೆಯಾಗುತ್ತಾರೆ. 

ಒಂದು  ಅಧ್ಯಯನದ ಪ್ರಕಾರ  ಪ್ರತಿಫಲ  ಹೊಂದಲು ಕಾಯಲು  ಸಿದ್ಧವಿಲ್ಲದ  ಮಕ್ಕಳಲ್ಲಿ  ಬಹಳಷ್ಟು ಜನ  ಹಣ ಸಂಪಾದನೆಗೆ, ಅಡ್ಡದಾರಿ ಹಿಡಿದಿದ್ದರು.

ಬೀಳದೆ  ನಡಿಗೆ  ಕಲಿಯಲಾರೆವು.  ಕಷ್ಟದ ದಾರಿಯಲ್ಲಿ  ಡ್ರೈವ್ ಮಾಡದಿದ್ದರೆ  ಎಂದಿಗೂ ಮೇನ್  ರೋಡಿನಲ್ಲಿ  ಡ್ರೈವ್  ಮಾಡಲಾರೆವು. ಹಾಗೆಯೇ  ಮಕ್ಕಳಿಗೆ  ಕಷ್ಟ, ಶ್ರಮದ ಅರಿವು ಗೊತ್ತಾಗದೇ ಬೆಳೆಸಿದರೆ ಅವರನ್ನು  ಬದುಕಲ್ಲಿ  ಸವಾಲುಗಳನ್ನು  ಎದುರಿಸುವಂತೆ  ಮಾಡಲಾಗುವುದಿಲ್ಲ.

ವಿಶೇಷವಾಗಿ ಈ 2000ನೇ ಇಸವಿಯ ನಂತರದ ಮಕ್ಕಳು ಅದೂ ನಗರ ಹಾಗೂ ಸಣ್ಣ ನಗರಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಸ್ವಾರ್ಥ, ಅಸಹನೆ, ಹಾಗೂ ಹಠ ಇವೆಲ್ಲಾ ಜಾಸ್ತಿ. ಕೆಲವರು ಈ ಜನರೇಶನ್ ಮಕ್ಕಳನ್ನು ನಾರ್ಸಿಸಿಸ್ಟ್ ಜನರೇಶನ್ ಎಂದರೆ ಇನ್ನೂ ಕೆಲವರು ಆಂಕ್ಸೈಟಿ ಜನರೇಶನ್ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಈ ಜನರೇಶನ್ ಮಕ್ಕಳ ಜೀವನ ಶೈಲಿ ಹಿಂದಿನ ಪೀಳಿಗೆಯ ಮಕ್ಕಳಿಗಿಂತ  ಮೇಲ್‌ ಸ್ತರದಲ್ಲಿದೆ. ಇದು ಅವರಿಗೆ ಇನ್ನಷ್ಟು ಮತ್ತಷ್ಟು ಹೊಸ ಆರಾಮ ಕೊಡುತ್ತದೆ ನಿಜ. ಆದರೆ ಅದು ಅವರ ಬದುಕನ್ನು ಅನುಭವಿಸಿದ ರೀತಿಯಲ್ಲಿ ಇರಬಾರದು ಅಷ್ಟೇ.

ಮಕ್ಕಳಿಗೂ ತಿಳಿಯಲಿ ಬಿಡಿ ನೋವು, ನಿರಾಸೆ, ಕಾದು ಪಡೆವ ಶ್ರಮದ ಆನಂದ.

ಡಾ ಡಾ ರೂಪಾ ರಾವ್

ಮನ:ಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ

ಬೆಂಗಳೂರು ವಾಸಿಯಾಗಿರುವ ಇವರು ಮನಃಶಾಸ್ತ್ರದಲ್ಲಿ ಹಾಗೂ ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 97408 66990

More articles

Latest article