ನವದೆಹಲಿ: ದೀಪಾವಳಿ ಅಂಗವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಕುಂಬಾರರು ಹಾಗೂ ಪೇಂಟಿಂಗ್ ಕೆಲಸ ಮಾಡುವವರ ಜತೆ ಮಾತುಕತೆ ನಡೆಸಿದ್ದಾರೆ. ಈ ಚರ್ಚೆಯ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
ಜನರು ತಮ್ಮ ಕೌಶಲ್ಯಕ್ಕೆ ಸೂಕ್ತ ಮನ್ನಣೆ ಪಡೆಯುವ ಹಾಗೂ ಪ್ರತಿಯೊಬ್ಬರ ಕೊಡುಗೆಯನ್ನು ಗೌರವಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಬೇಕಿದೆ. ಯಾರ ಶ್ರಮ ಭಾರತವನ್ನು ಬೆಳಗುತ್ತಿದೆಯೋ ಅವರೊಂದಿಗೆ ದೀಪಾವಳಿ!’ ಎಂದು ರಾಹುಲ್ ಬರೆದುಕೊಂಡಿದ್ದಾರೆ. ವಿಡಿಯೊದಲ್ಲಿ ತಮ್ಮ ಸೋದರಳಿಯ ರೈಹಾನ್ ರಾಜೀವ್ ವಾದ್ರಾ (ಪ್ರಿಯಾಂಕಾ ಗಾಂಧಿ ಮತ್ತು ವಾದ್ರಾ ಪುತ್ರ) ಅವರೊಂದಿಗೆ ರಾಹುಲ್ ಸಂವಹನ ನಡೆಸಿದ್ದಾರೆ.
ಮಣ್ಣಿನ ದೀಪಗಳನ್ನು ಮಾಡುವ ಕುಂಬಾರರು ಮತ್ತು ಪೇಂಟಿಂಗ್ ಮಾಡುವ ಕುಟುಂಬಗಳೊಂದಿಗೆ ಈ ದೀಪಾವಳಿಯನ್ನು ಆಚರಿಸಿದ್ದೇನೆ ಎಂದು ಹೇಳಿಕೊಂಡಿರುವ ಅವರು,ನಾನು ಅವರ ಕೆಲಸವನ್ನು ಹತ್ತಿರದಿಂದ ಇಂದು ನೋಡಿದೆ. ಅವರ ಕಸುಬು ಹಾಗೂ ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ನಾವು ಸಂಭ್ರಮದಿಂದ ಹಬ್ಬಗಳನ್ನು ಆಚರಿಸಲು ಇವರು ತಮ್ಮ ಊರು ಮತ್ತು ಕುಟುಂಬವನ್ನೇ ಮರೆತಿದ್ದಾರೆ ಎಂದಿದ್ದಾರೆ.
ಅವರು ಮಣ್ಣಿನ ಮೂಲಕ ಸಂತಸ ಮೂಡಿಸುತ್ತಾರೆ. ಇತರರ ಹಬ್ಬಗಳಿಗೆ ಬೆಳಕಾಗುತ್ತಾರೆ. ಆದರೆ ಅವರು, ಬೆಳಕಿನಲ್ಲಿ ಬದುಕು ಸಾಗಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ದೀಪಾವಳಿ ಎಂದರೆ ಬೆಳಕು. ಅಂತಹ ಹಬ್ಬ ಬಡತನ ಮತ್ತು ಅಸಹಾಯಕತೆಯ ಕತ್ತಲನ್ನು ಅಳಿಸಲಿ ಎಂದಿದ್ದಾರೆ. ರಾಹುಲ್ ಅವರು, ರೈಹಾನ್, ಮತ್ತು ಕೆಲಸಗಾರರೊಂದಿಗೆ ಜನಪತ್ ನಿವಾಸದ ಗೋಡೆಗಳಿಗೆ ಬಣ್ಣ ಬಳಿಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.