ಬೆಂಗಳೂರಿನ ಪೀಣ್ಯ ಪ್ಲಾಂಟೇಷನ್ ನಲ್ಲಿ ಸಿನಿಮಾ ಸೆಟ್ ಹಾಕಲು ನೂರಾರು ಮರಗಳನ್ನು ಕಡಿದಿರುವ ಆರೋಪದ ಹಿನ್ನೆಲೆಯಲ್ಲಿ ಚಿತ್ರ ನಟ ಯಶ್ ವಿರುದ್ಧ FIR ದಖಲಿಸಲು ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
HMT ಅರಣ್ಯ ಪ್ರದೇಶದಲ್ಲಿ ಟಾಕ್ಸಿಕ್ ಸಿನಿಮಾ ಚಿತ್ರೀಕರಣಕ್ಕೆ ಅರಣ್ಯ ಪ್ರದೇಶ ಬಳಕೆ ಮಾಡುತ್ತಿದ್ದು, ಸಿನಿಮಾ ಸೆಟ್ ಹಾಕಲು ನೂರಾರು ಮರಗಳನ್ನೇ ಕಡಿದಿರುವ ಆರೋಪ ಕೇಳಿ ಬಂದಿದೆ. ಇದೀಗ ಟಾಕ್ಸಿಕ್ ಸಿನಿಮಾ ತಂಡ ಸಂಕಷ್ಟಕ್ಕೆ ಗುರಿಯಾಗಿದೆ.
ಈ ಅರಣ್ಯ ಪ್ರದೇಶದಲ್ಲಿ ಮರ ಗಿಡಗಳನ್ನು ಕಡಿದಿರುವುದು ಉಪಗ್ರಹ ಚಿತ್ರದಿಂದ ಗೋಚರಿಸುತ್ತಿದೆ.
ಎಚ್.ಎಂ.ಟಿ. ತನ್ನ ವಶದಲ್ಲಿರುವ ಅರಣ್ಯ ಭೂಮಿನ್ನು ಸಿನಿಮಾ ಚಿತ್ರೀಕರಣಕ್ಕೆ ಮತ್ತು ಖಾಲಿ ಜಾಗವನ್ನು ದಿನದ ಆಧಾರದ ಮೇಲೆ ಬಾಡಿಗೆಗೆ ನೀಡುತ್ತಿರುವುದನ್ನೂ ಗಮನಿಸಲಾಗಿದೆ. ಇನ್ನು ಕೆನರಾ ಬ್ಯಾಂಕ್ ಗೆ ಎಚ್.ಎಂ.ಟಿ. ಮಾರಾಟ ಮಾಡಿದ ಎನ್ನಲಾದ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಹೆಸರಿನ ಚಲನಚಿತ್ರಕ್ಕಾಗಿ ಹಲವು ತಿಂಗಳಿನಿಂದ ಚಿತ್ರೀಕರಣ ನಡೆಯುತ್ತಿದ್ದು, ಬೃಹತ್ ಸೆಟ್ ಹಾಕಿರುತ್ತದೆ. ಇದಕ್ಕಾಗಿ ಇಲ್ಲಿದ್ದ ನೂರಾರು ಮರ ಗಿಡ ಕಡಿಯಲಾಗಿದೆ. ನಿಯಮಾನುಸಾರ ಅನುಮತಿ ಇಲ್ಲದೆ ಇಲ್ಲದ ಮರ ಕಡಿಯುವುದು ಅದರಲ್ಲೂ ಅರಣ್ಯ ಭೂಮಿಯಲ್ಲಿ ಮರ ಗಿಡಗಳನ್ನು ಕಡಿಯುವುದು ದಂಡನೀಯ ಅಪರಾಧವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಿಂದ ಹಿಂದಿನ ಮತ್ತು ಇಂದಿನ ಉಪಗ್ರಹ ಚಿತ್ರಗಳನ್ನು ಪಡೆದು, ಎಷ್ಟು ಮರ ಕಡಿಯಲಾಗಿದೆ? ಇದಕ್ಕೆ ನಿಯಮಾನುಸಾರ ಅನುಮತಿ ಪಡೆಯಲಾಗಿದೆಯೇ ಅನುಮತಿ ಕೊಟ್ಟಿದ್ದರೆ ಅರಣ್ಯ ಭೂಮಿಯಲ್ಲಿ ಮರ ಕಡಿಯಲು ಅನುಮತಿ ನೀಡಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಲು, ಅನುಮತಿ ಇಲ್ಲದೆ ಮರ ಕಡಿದಿದ್ದಲ್ಲಿ ಅದಕ್ಕೆ ಕಾರಣರಾದ ಎಲ್ಲರ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸಚಿವರು ಸೂಚಿಸಿದ್ದಾರೆ.
ಬೆಂಗಳೂರು ಪೀಣ್ಯ ಪ್ಲಾಂಟೇಷನ್ 1 ಮತ್ತು 2ರಲ್ಲಿ ಒಟ್ಟು 599 ಎಕರ ಮೀಸಲು ಅರಣ್ಯ ಎಂದು ಗೆಜೆಟ್ ಅಧಿಸೂಚನೆ ಆಗಿದ್ದು, ಇದನ್ನು 1960ರ ದಶಕದಲ್ಲಿ ಡಿನೋಟಿಫಿಕೇಷನ್ ಮಾಡದೆ ಕಾನೂನು ಬಾಹಿರವಾಗಿ ಎಚ್.ಎಂ.ಟಿ. ಸಂಸ್ಥೆಗೆ ದಾನ, ಮಂಜೂರು ಹೆಸರಲ್ಲಿ ಹಸ್ತಾಂತರಿಸಲಾಗಿರುತ್ತದೆ. ಸುಪ್ರೀಂಕೋರ್ಟ್ ‘Once a forest is always a forest unless de-notified’ ಎಂದು ಹೇಳಿದ್ದು, ಡಿ ನೋಟಿಫಿಕೇಷನ್ ಆಗದ ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅರಣ್ಯವೇ ಆಗಿರುತ್ತದೆ. ಜೊತೆಗೆ ತನ್ನ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಎಚ್.ಎಂ.ಟಿ. ವಿವಿಧ ಸರ್ಕಾರಿ ಮತ್ತು ಖಾಸಗಿ
ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಿದ್ದು, ಇಲ್ಲಿ ಅರಣ್ಯೇತರ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಅರಣ್ಯ ಪ್ರದೇಶದಲ್ಲಿ ಮರಗಿಡಗಳನ್ನು ಕಡಿದಿರುವುದು ಉಪಗ್ರಹ ಚಿತ್ರಗಳಲ್ಲಿ ಗೋಚರಿಸುತ್ತಿದೆ ಎಂದು ಸಚಿವರು ಕಿಡಿ ಕಾರಿದ್ದಾರೆ.
ಸಚಿವ ಖಂಡ್ರೆ ಅವರು ಸೆಟ್ ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅರಣ್ಯ ಅಪರಾಧ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ.