ವಿಶೇಷ | ಸಾಂವಿಧಾನಿಕ ಮೌಲ್ಯ ಸಂವಹನದ ಎನ್.ಎಸ್.ಎಸ್.

Most read

ಸಂವಿಧಾನದ ಮೌಲ್ಯಗಳು ಸಡಿಲವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎನ್.ಎಸ್.ಎಸ್.ನ ಬೆಳವಣಿಗೆಗಳಿಗೆ ಅತೀ ಮಹತ್ವವಿದೆ. ಇತ್ತೀಚೆಗೆ ಈ ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ನಡೆದಿದೆ. ನಿಜವಾದ ಮೌಲ್ಯಗಳಿಗೆ ಬದಲಾಗಿ ತಮ್ಮ ಸ್ವಂತ ಹಿತಾಸಕ್ತಿಯ ಮೌಲ್ಯಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಇದು ಯೋಜನೆ ಸ್ಥಾಪನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಈ ದೃಷ್ಟಿಯಿಂದ ಎನ್.ಎಸ್.ಎಸ್. ಮೂಲಸ್ವರೂಪನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ ಡಾ. ಗಣನಾಥ ಎಕ್ಕಾರು, ನಿಕಟಪೂರ್ವ ರಾಜ್ಯ ಎನ್.ಎಸ್.ಎಸ್. ಅಧಿಕಾರಿ.

ಇಂದು ಎನ್.ಎಸ್.ಎಸ್. ದಿನ. ಜನಪ್ರಿಯವಾಗಿರುವ ರಾಷ್ಟ್ರೀಯ ಸೇವಾ ಯೋಜನೆಯು ಹುಟ್ಟಿದ ದಿನ. ಇದನ್ನು ಎನ್.ಎಸ್.ಎಸ್. ದಿನ ಎಂದು ಕರೆಯಲಾಗುತ್ತದೆ. 1969ರಲ್ಲಿ ಗಾಂಧೀಜಿಯವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಸೆಪ್ಟೆಂಬರ್ 24 ರಂದು ಭಾರತ ಸರ್ಕಾರವು ಈ ಯೋಜನೆಯನ್ನು ಘೋಷಿಸಿ, ಅಕ್ಟೋಬರ್ 2ರಂದು ಅನುಷ್ಠಾನ ಮಾಡಿತು. ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಹೇಳುವಂತೆ, “ಸಮಾಜಸೇವೆಯ ಮನಸ್ಥಿತಿಯನ್ನು ನಿರ್ಮಿಸದ ಶಿಕ್ಷಣ ಶಿಕ್ಷಣವೇ ಅಲ್ಲ”. ಈ ದೃಷ್ಟಿಯಿಂದ ಹಲವು ಪ್ರಯೋಗಗಳನ್ನು ಮಾಡಿ, ಕೊನೆಗೆ ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಯನ್ನು ಅನುಷ್ಠಾನ ಗೊಳಿಸಲಾಯಿತು.

ಎನ್.ಎಸ್.ಎಸ್. ಎರಡು ಪ್ರಮುಖ ಉದ್ದೇಶಗಳನ್ನು ಹೊಂದಿದೆ. ಒಂದು ಶಿಕ್ಷಣದೊಂದಿಗೆ ವ್ಯಕ್ತಿ ವಿಕಸನ. ಎರಡು ಶಿಕ್ಷಣದೊಂದಿಗೆ ಸೇವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತರಗತಿ ಬೋಧನೆಗೆ ಮಹತ್ವದ ಸ್ಥಾನವಿದೆ. ಜ್ಞಾನ ಸಂವಹನವೇ ಶಿಕ್ಷಣದ ಮುಖ್ಯ ಉದ್ದೇಶ ಎಂದು ಬಹುತೇಕರು ಭಾವಿಸಿದ್ದಾರೆ. ವಿವೇಕಾನಂದರು ಹೇಳುವಂತೆ- “ವ್ಯಕ್ತಿಯ ನಿಜವಾದ ಶಕ್ತಿಯ ಅರಿವನ್ನು ಉಂಟುಮಾಡುವುದೇ ನಿಜವಾದ ಶಿಕ್ಷಣ”.  ಆದರೆ ನಮ್ಮ ತರಗತಿ ಬೋಧನೆಯ ಶಿಕ್ಷಣದಲ್ಲಿ ಅದಕ್ಕೆ ಆಸ್ಪದವಿಲ್ಲ. ಈ ದೃಷ್ಟಿಯಿಂದ ಎನ್.ಎಸ್.ಎಸ್. ನಂತರ ಪಠ್ಯಪೂರಕ ಚಟುವಟಿಕೆಗಳು ಮಹತ್ವದ್ದಾಗುತ್ತದೆ. ವಿದ್ಯಾರ್ಥಿಗಳಿಗೆ ಕೌಶಲ್ಯದ ತರಬೇತಿಯನ್ನು ಎನ್.ಎಸ್.ಎಸ್.ನಲ್ಲಿ ನೀಡಲಾಗುತ್ತದೆ.

ಸಂಘಟನೆ, ಮಾತುಗಾರಿಕೆ, ಯೋಜನೆ, ಸಮುದಾಯ ಜೀವನದ ಅರಿವು ಇತ್ಯಾದಿಗಳನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಮೃದು ಕೌಶಲ್ಯಗಳನ್ನು ವಿದ್ಯಾರ್ಥಿಗಳು ವಿವಿಧ ಶಿಬಿರದ ಸಂದರ್ಭಗಳಲ್ಲಿ ರೂಢಿಸಿ ಕೊಳ್ಳುತ್ತಾರೆ. ಇದರಿಂದ ವ್ಯಕ್ತಿ ವಿಕಸನ ಅರ್ಥಾತ್ ಈಗಿನ ಪರಿಭಾಷೆಯಲ್ಲಿ ಮಾನವ ಸಂಪನ್ಮೂಲದ ಅಭಿವೃದ್ಧಿ ಸಾಧ್ಯವಾಗುತ್ತದೆ.

ಎರಡನೆಯದಾಗಿ ಸಮಾಜಸೇವೆ ಒಂದು ಸಾಮಾಜಿಕ ಜವಾಬ್ದಾರಿ. ಪ್ರತಿಕ್ಷಣವೂ ನಾವು ಸಮಾಜದಿಂದ ಪಡೆಯುತ್ತೇವೆ. ಸರಕಾರ ಅಥವಾ ಇತರ ಮೂಲಗಳಿಂದ ನಮ್ಮ ಬದುಕಿಗಾಗಿ ಹಲವು ಸೌಲಭ್ಯಗಳನ್ನು ಪಡೆಯುತ್ತೇವೆ. ಯಾರೋ ಕಟ್ಟಿದ ತೆರಿಗೆಯು ಸಾಮಾಜಿಕ ಸೌಲಭ್ಯದ ಹೆಸರಿನಲ್ಲಿ ನಮಗೆ ದೊರೆಯುತ್ತದೆ. ಹೀಗಿರುವಾಗ ನಮಗೂ ಒಂದು ಸಾಮಾಜಿಕ ಜವಾಬ್ದಾರಿ ಇದೆ. ಒಳ್ಳೆಯ ನಾಗರೀಕರಾಗಿ ವೃತ್ತಿ ಬದುಕಿನಲ್ಲಿ ಸಮಾಜಕ್ಕೆ ಏನನ್ನಾದರೂ ಮರಳಿಸುವ ಕಾರ್ಯ ಅತೀ ಅಗತ್ಯ. ಈ ಸಾಮಾಜಿಕ ಋಣವನ್ನು ತೀರಿಸುವ ಅಗತ್ಯವನ್ನು ಎನ್.ಎಸ್.ಎಸ್. ಮೂಲಕ ತಿಳಿಸಲಾಗುತ್ತದೆ. ಮಾನವೀಯ ಅರಿವು ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಇಂದು ಎನ್.ಎಸ್.ಎಸ್.ನಲ್ಲಿ ತರಬೇತಿ ಪಡೆದ ಬಹುತೇಕ ಸ್ವಯಂ ಸೇವಕರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಾವು ರೂಢಿಸಿಕೊಂಡ ವ್ಯಕ್ತಿತ್ವದ ಕಾರಣದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಎನ್.ಎಸ್.ಎಸ್. ನ ಬಹುಮುಖ್ಯ ಉದ್ದೇಶವೆಂದರೆ ಸಾಂವಿಧಾನಿಕ ಮೌಲ್ಯಗಳನ್ನು ಕರಗತ ಮಾಡಿಕೊಳ್ಳುವುದು. ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಮತ್ತು ಸಾಮಾಜಿಕ ನ್ಯಾಯ, ಸಂವಿಧಾನದ ಮೂಲ ತತ್ವಗಳು. ಎನ್.ಎಸ್.ಎಸ್. ಶಿಬಿರಗಳಲ್ಲಿ ಎಲ್ಲಾ ಧರ್ಮ, ಜಾತಿ, ಲಿಂಗಗಳ ಸ್ವಯಂಸೇವಕರು ಭಾಗವಹಿಸುತ್ತಾರೆ. ಹಲವಾರು ದಿನಗಳ ಕಾಲ ಒಟ್ಟಾಗಿ ಬದುಕುತ್ತಾರೆ. ಅಲ್ಲಿ ಎಲ್ಲರೂ ಸಮಾನರು. ಯಾರೂ ಶ್ರೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ ಎಂಬ ತತ್ವವನ್ನು ಅಳವಡಿಸಲಾಗುತ್ತದೆ. ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲರಿಗೂ  ಭಾಗವಹಿಸುವ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲಾಗುತ್ತದೆ. ಎಲ್ಲೂ ತಾರತಮ್ಯವನ್ನು ನೋಡುವುದಿಲ್ಲ. ಈ ವ್ಯವಸ್ಥೆ ಎಲ್ಲರಿಗೂ ವ್ಯಕ್ತಿತ್ವ ಬೆಳೆಯಲು ಸಹಾಯ ಮಾಡುತ್ತದೆ. ಎಲ್ಲಾ ಧರ್ಮ, ಜಾತಿ, ಲಿಂಗದ ಸ್ವಯಂ ಸೇವಕರಲ್ಲಿ ಸಹೋದರತೆಯ ಮನೋಭಾವವನ್ನು ಹುಟ್ಟುಹಾಕಲು ಎನ್.ಎಸ್.ಎಸ್. ಚಟುವಟಿಕೆಗಳು ಮತ್ತು ಶಿಬಿರಗಳು ಸಹಕಾರಿಯಾಗುತ್ತದೆ. ಪರೋಕ್ಷವಾಗಿ ಸಂವಿಧಾನದ ಪ್ರಮುಖ ತತ್ವಗಳನ್ನು ಬೋಧಿಸಲಾಗುತ್ತದೆ. ಈ ಕಾರಣದಿಂದ ಕೆಲವು ಸಂಕುಚಿತ ಉದ್ದೇಶಗಳನ್ನು ಹೊಂದಿರುವ ಸಂಘಟನೆಗಳಿಗೆ ಎನ್.ಎಸ್.ಎಸ್. ಇಷ್ಟವಾಗುವುದಿಲ್ಲ.

ಸಂವಿಧಾನದ ಮೌಲ್ಯಗಳು ಸಡಿಲವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಎನ್.ಎಸ್.ಎಸ್.ನ ಬೆಳವಣಿಗೆಗಳಿಗೆ ಅತೀ ಮಹತ್ವವಿದೆ. ಇತ್ತೀಚೆಗೆ ಈ ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ರಾಷ್ಟ್ರಮಟ್ಟದಲ್ಲಿ ನಡೆದಿದೆ. ನಿಜವಾದ ಮೌಲ್ಯಗಳಿಗೆ ಬದಲಾಗಿ ತಮ್ಮ ಸ್ವಂತ ಹಿತಾಸಕ್ತಿಯ ಮೌಲ್ಯಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಇದು ಯೋಜನೆ ಸ್ಥಾಪನೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ. ಈ ದೃಷ್ಟಿಯಿಂದ ಎನ್.ಎಸ್.ಎಸ್. ಮೂಲಸ್ವರೂಪನ್ನು ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ.

ಡಾ. ಗಣನಾಥ ಎಕ್ಕಾರು

ನಿಕಟಪೂರ್ವ ರಾಜ್ಯ ಎನ್‌ ಎಸ್‌ ಎಸ್‌ ಅಧಿಕಾರಿ

(ಮೊ: 9964583433)


ಇದನ್ನೂ ಓದಿ- ಲಾಡು ಪ್ರಕರಣ | ಚಿಲ್ಲರೆ ರಾಜಕಾರಣ?

More articles

Latest article