ಸ್ಮರಣೆ | ಆಧುನಿಕ ನವ ನಿರ್ಮಾಣದ ಶಿಲ್ಪಿ, ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯ

Most read

ಭಾರತ ಕಂಡ ಕೆಲವೇ ಪ್ರಾತಃ ಸ್ಮರಣೀಯರಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಒಬ್ಬರು.  ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಹೆಸರು ತಂದ ಅದ್ವಿತೀಯ ತಂತ್ರಜ್ಞರು.  ಆಡಳಿತ ಪರಿಣಿತರು. ಅಗಾಧ ಪ್ರತಿಭೆ, ಶಿಸ್ತಿನ ನಡೆನುಡಿ.  ಸರಳ ಸಜ್ಜನಿಕೆಯ, ಗುಣಮಟ್ಟದ ಕಾರ್ಯವೈಖರಿಯ ಆದರ್ಶ ನವಭಾರತ ಶಿಲ್ಪಿ. ಅವರ ದೇಶಭಕ್ತಿ, ಅಪರಿಮಿತ ಉತ್ಸಾಹ, ಪ್ರಾಮಾಣಿಕತೆ, ಪ್ರಯತ್ನಶೀಲತೆ, ಪರೋಪಕಾರಿ ಗುಣ, ಮೆಚ್ಚುವಂತದ್ದು. ಇಂತಹ ಮಹನೀಯರ ಜನ್ಮದಿನ ಸೆಪ್ಟೆಂಬರ್ 15ನ್ನು ಭಾರತ, ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲಿ ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತಿದೆ. 

ಸರ್.ಎಂ. ವಿಶ್ವೇಶ್ವರಯ್ಯರ ಜನನ, ಶಿಕ್ಷಣ, ವಿವಾಹ

ಸರ್. ಎಂ.ವಿ. ಅವರು 1861ರ ಸೆಪ್ಟೆಂಬರ್ 15 ರಂದು ಇಂದಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಜನಿಸಿದರು. ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಿ ಅವರಿಗೆ ಆರು ಮಕ್ಕಳಲ್ಲಿ ಇವರು ಎರಡನೆಯವರು.  ಅವರ ಪೂರ್ವಜರು ಆಂಧ್ರಪ್ರದೇಶದ ಕರ್ನೂಲ ಜಿಲ್ಲೆಯ ಗಿದ್ದಲೂರು ತಾಲ್ಲೂಕಿನ ಮೋಕ್ಷಗುಂಡಂ ಎಂಬ ಹಳ್ಳಿಯಿಂದ ಕರ್ನಾಟಕಕ್ಕೆ ವಲಸೆ ಬಂದವರು.

ಅವರ ತಂದೆಯ ನಿಧನದ ನಂತರ ಸರ್.ಎಂ.ವಿ. ಬೆಂಗಳೂರಿಗೆ ಬಂದು, ಸೋದರ ಮಾವ ರಾಮಯ್ಯನವರ ಸಹಕಾರದಿಂದ ಶಿಕ್ಷಣ ಪಡೆದರು.  ಮೆಟ್ರಿಕ್ ಪರೀಕ್ಷೆ ಫೀ ಕಟ್ಟಲು 12 ರೂಪಾಯಿ ಇರಲಿಲ್ಲ.  ಸೋದರ ಮಾವನನ್ನೂ ಕೇಳದೆ ಮುದ್ದೇನಹಳ್ಳಿಗೆ 70 ಕಿ.ಮೀ ಕಾಲ್ನಡಿಗೆಯಿಂದ ಹೋಗಿ ತಾಯಿ ಬಳಿ ಹಣ ಕೇಳಿದರು.  ಅವರಲ್ಲಿಯೂ ಇರಲಿಲ್ಲ.  ತಾಯಿ ಮನೆಯಲ್ಲಿಯ ಪಾತ್ರೆ, ಪಗಡೆಗಳನ್ನು ಶೆಟ್ಟರ ಅಂಗಡಿಗೆ ಗಿರವಿ ಇಟ್ಟು ಹಣ ನೀಡಿದಳು.  ಪುನಃ ಬೆಂಗಳೂರಿಗೆ ಪಾದಯಾತ್ರೆಯಲ್ಲಿಯೇ ಬಂದು ಪರೀಕ್ಷೆ ಫೀ ಕಟ್ಟಿ ಪರೀಕ್ಷೆಯಲ್ಲಿ ಮೈಸೂರು ರಾಜ್ಯಕ್ಕೆ ಪ್ರಥಮ ರ್ಯಾಂಕ್‍ನಲ್ಲಿ ಪಾಸಾದರು. 

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಮದರಾಸು ವಿ.ವಿ.ಗೆ ಪ್ರಥಮ ರ್ಯಾಂಕ್, ಪದವಿಯ ಗುರುಗಳಾದ, ಪ್ರಾಂಶುಪಾಲರಾಗಿದ್ದ, ಚಾರ್ಲ್ಸ್‌ವಾಟರ್ಸ್ ಇವರ ಇಂಜಿನಿಯರ್ ಕಲಿಕೆಗೆ ಮೈಸೂರು ಸಂಸ್ಥಾನದಿಂದ ವಿದ್ಯಾರ್ಥಿ ವೇತನ ಕೊಡಿಸಿದರು. ಪುಣೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು.

ಪುಣೆಯಲ್ಲಿ ಇಂಜಿನಿಯರಿಂಗ್ ಓದುವಾಗ ‘ಸರಸ್ವತಿ’ ಜೊತೆ 1882ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ವಿವಾಹವಾಗಿ ಕುಟುಂಬ ಜೀವನ ಮತ್ತು ವಿದ್ಯಾಭ್ಯಾಸ ನಡೆಸಿದರು.  ‘ಸರಸ್ವತಿ’ ಹೆರಿಗೆ ಸಮಯದಲ್ಲಿ ಮೃತರಾದರು.  ನಾಲ್ಕು ವರ್ಷದ ನಂತರ ‘ಸಾವಿತ್ರಿ’ ಅವರೊಂದಿಗೆ ವಿವಾಹವಾದರೂ ಪ್ರಸವ ಸಂದರ್ಭದಲ್ಲಿ ಅವರೂ ಅಸು ನೀಗಿದರು.  ತಾಯಿಯ ಒತ್ತಾಯಕ್ಕೆ ಮೂರನೇ ಮದುವೆಯಾದರೂ ಉತ್ತಮ ಸಂವಹನ ಕೊರತೆಯಿಂದ ಪತ್ನಿಯಿಂದ ವಿಚ್ಛೇದಿತರಾದರು. ಆಕೆಗೆ ಜೀವನಾಂಶ ಕೊಟ್ಟರು. ಬದುಕಿನಲ್ಲಿ ‘ಮೂರು’ ಮದುವೆಗಳಾದರೂ ಸುಮಾರು ಏಳು ದಶಕಗಳ ಕಾಲ ಸರ್.ಎಂ.ವಿ. ಒಬ್ಬಂಟಿಗರಾಗಿಯೇ ಉಳಿದರು.  ಕೊನೆಯ ಕಾಲದಲ್ಲಿ ಸಹೋದರನ ಮಗ ಕೃಷ್ಣಮೂರ್ತಿಯನ್ನು ಸಾಕು ಮಗನೆಂದು ಪರಿಗಣಿಸಿ ಅವರೊಂದಿಗೆ ಬದುಕು ಸಾಗಿಸಿದರು.  1962, ಏಪ್ರಿಲ್ 24 ರಂದು ನಿಧನರಾದರು.

ಸರ್.ಎಂ.ವಿ. ಯವರ ವೃತ್ತಿ ಬದುಕಿನ ಸಾಧನೆ

ವಿಶ್ವೇಶ್ವರಯ್ಯನವರು 1885 ರಲ್ಲಿ ಬಾಂಬೆ ಪ್ರಸಿಡೆನ್ಸಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ನೇಮಕವಾದರು. 1894ರಲ್ಲಿ ಮಹಾರಾಷ್ಟ್ರದ ಧುಲಿಯಾ ನಗರದಲ್ಲಿ ಇಲಾಖೆಯ ಮುಖ್ಯಸ್ಥರಾದರು. 1903 ರಲ್ಲಿ ಪುಣೆಯ ಬಳಿಯ ಖಡಕ್ವಾಸ್ಲಾ ಅಣೆಕಟ್ಟಿನ ಸ್ವಯಂಚಾಲಿತ ವೇರ್‍ವಾಟರ್ ಪ್ಲಡ್ಗೇಟ್ಗಳ ವ್ಯವಸ್ಥೆಯನ್ನು ವಿನ್ಯಾಸ ಗೊಳಿಸಿದರು. ಇದೇ ಮಾದರಿಯನ್ನು ಗ್ವಾಲಿಯರ್ ಟೈಗ್ರಾ ಅಣೆಕಟ್ಟಿನಲ್ಲಿ ಸ್ಥಾಪಿಸಲಾಯಿತು.  ಕೊಲ್ಲಾಪುರದ ಬಳಿಯ ಲಕ್ಷ್ಮೀ ತಲಾವ್ ಅಣೆಕಟ್ಟಿನ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡಿದರು.

1907 ರಲ್ಲಿ ಬಡ್ತಿ ಹೊಂದಿ ಸೂಪರಿಂಟೆಂಡ್ ಇಂಜಿನಿಯರ್ ಆದರು. 1908 ರಲ್ಲಿ ಈ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. 1909 ರಲ್ಲಿ ಹೈದ್ರಾಬಾದ್ ನಿಜಾಮನ ಸಂಸ್ಥಾನದಲ್ಲಿ ಇಂಜಿನಿಯರ್ ಆಗಿ ಮೂಸಿ ಮತ್ತು ಇಯಾಸಿ ನದಿಗಳ ಪ್ರವಾಹದಿಂದ ಹೈದರಾಬಾದ್ ನಗರವನ್ನು ರಕ್ಷಿಸುವ ಕಾರ್ಯ ಮಾಡಿದರು.  1910-12 ರವರೆಗೆ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ, ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯಾದರು. ರೈಲ್ವೆ ಸಂಪರ್ಕ ವಿಸ್ತರಣೆ, ಕಾವೇರಿ ನದಿಗೆ ಕನ್ನಂಬಾಡಿ ಅಣೆಕಟ್ಟು ಯೋಜನೆಯ ನೀಲನಕ್ಷೆ ತಯಾರಿಸಿ, 1911 ರಲ್ಲಿ ಕನ್ನಂಬಾಡಿ ಅಣೆಕಟ್ಟು ನಿರ್ಮಾಣವೂ ಶುರುವಾಯ್ತು. ಸಿಂಧ್ ಪ್ರಾಂತ್ಯದ ಸಕ್ಕೂರ್ ನಗರಕ್ಕೆ ಸಿಂಧ್ ನದಿಯ ನೀರಿನ ಬಳಕೆ ಮುಂತಾದ ಕಾರ್ಯಗಳು ದೇಶೀ, ವಿದೇಶಿ ಇಂಜಿನಿಯರ್‌ಗಳ ಗಮನ ಸೆಳೆದವು.


 ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ್ ಒಡೆಯರ್ 1912 ರಲ್ಲಿ ಇವರನ್ನು ‘ದಿವಾನ ಪದವಿ’ಗೆ ನೇಮಿಸಿದರು.  ಸರ್.ಎಂ.ವಿ. ಕಾರ್ಯಕ್ಷಮತೆ, ಆಡಳಿತಾತ್ಮಕ ಜಾಣ್ಮೆ, ದೂರದರ್ಶಿತ್ವದಿಂದ ಅದ್ವಿತೀಯ ಸುಧಾರಣೆ, ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಆರ್ಥಿಕ ಪ್ರಗತಿ ಉತ್ತುಂಗಕ್ಕೆ ತಲುಪಿದವು. ಇವರ ಪರಿಶ್ರಮದಿಂದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿತವಾದ ಕನ್ನಂಬಾಡಿ ಅಣೆಕಟ್ಟು ಮಂಡ್ಯ, ಮೈಸೂರು ಜಿಲ್ಲೆಗಳ ಸುಮಾರು ಒಂದು ಲಕ್ಷ ಎಕರೆಗೂ ಹೆಚ್ಚು ಕೃಷಿ ಭೂಮಿಗೆ ನೀರುಣಿಸುವಲ್ಲಿ ಸಫಲವಾಯಿತು.  ಸರ್.ಎಂ.ವಿ. ಪ್ರಜಾಪ್ರತಿನಿಧಿ ಸಭೆ ಆರಂಭಿಸಿ ಮೈಸೂರು ಸಂಸ್ಥಾನಕ್ಕೆ ಜನಸ್ನೇಹಿ, ಜನಪರ ಕೆಲಸ ಆರಂಭಿಸಿದರು. 

ಮೈಸೂರು ಸಂಸ್ಥಾನದ ಮುಕ್ತ ಆಡಳಿತಕ್ಕೆ ಅನುಕೂಲವಾಗುವಂತೆ ಒಡಂಬಡಿಕೆಯನ್ನು ಬ್ರಿಟಿಷ್ ಸರಕಾರದೊಂದಿಗೆ ಮಾಡಿದರು.  ಬೆಂಗಳೂರಿನ ಹೆಬ್ಬಾಳದಲ್ಲಿ ಕೃಷಿ ಕಾಲೇಜನ್ನು 1913ರಲ್ಲಿ ಪ್ರಾರಂಭಿಸಿ ಕೃಷಿ ವಿಜ್ಞಾನ, ತಂತ್ರಜ್ಞಾನ ಸಂಶೋಧನೆಗೆ ನೆರವಾದರು. 1914ರಲ್ಲಿ ಮಲೆನಾಡು ಸಂರಕ್ಷಣಾ ಯೋಜನೆ, ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಾಲೇಜು, 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆರಂಭಿಸಿ ರೈತಾಪಿ ವರ್ಗದವರಿಗೆ ಸುಲಭ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಜನರಲ್ಲಿ ಉಳಿತಾಯದ ಅಭಿರುಚಿ ಬೆಳೆಸಿದರು.  1916 ರಲ್ಲಿ ಮೈಸೂರು ವಿ.ವಿ. ಸ್ಥಾಪಿಸಿ ಶಿಕ್ಷಣ ಪ್ರೇಮಿಗಳಿಗೆ ಕಲಿಕೆಯ ಸೌಭಾಗ್ಯ ಕಲ್ಪಿಸಿದರು.  1916 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಚೆಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ಮಹಿಳೆಯರಿಗಾಗಿ ಕ್ಲಬ್, ಬೆಂಗಳೂರು ಮುದ್ರಣಾಲಯ, ರಾಜ್ಯದ ಎಲ್ಲಾ ಪಟ್ಟಣಗಳಲ್ಲಿ ಪುರಸಭೆ ಆರಂಭ, ರೇಷ್ಮೆ ಸಾಬೂನು, ಗಂಧದೆಣ್ಣೆ, ಚರ್ಮದ ಉತ್ಪನ್ನಗಳ ಕಾರ್ಖಾನೆ ಸ್ಥಾಪನೆ, ಭದ್ರಾವತಿಯಲ್ಲಿ ಕಬ್ಬಿಣ-ಉಕ್ಕು ಕಾರ್ಖಾನೆ, ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಆರಂಭ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜ್, ಅಸಂಖ್ಯ ಗೃಹ ಮತ್ತು ಗುಡಿ ಕೈಗಾರಿಕೆಗಳ ಆರಂಭ, ವಿದ್ಯುತ್ ಯೋಜನೆ, ಶಿವನ ಸಮುದ್ರ ಹಾಗೂ ಶರಾವತಿ ನದಿಯಿಂದ ವಿದ್ಯುತ್ ಉತ್ಪಾದನೆ, ಆಡಿಟ್ ವ್ಯವಸ್ಥೆ, ತಾಂತ್ರಿಕ ಕಾಲೇಜು, ನಾಗರಿಕ ಮತ್ತು ಶಾಲೆಗಳ ಅಭಿವೃದ್ಧಿ ಸಮಿತಿ ಹೀಗೆ ಅನೇಕ ಮಹತ್ಕಾರ್ಯಗಳು, ಯೋಜನೆಗಳು ಸರ್.ಎಂ.ವಿ. ದೂರದರ್ಶಿತ್ವ, ನಿಸ್ವಾರ್ಥ ಭಾವದಿಂದ ಆರಂಭವಾದವು.

ದಿವಾನ ಹುದ್ದೆಗೆ ರಾಜೀನಾಮೆ

ತಾವು ನಂಬಿದ ತತ್ವಗಳಿಗೆ ಬದ್ಧವಾಗಿರುವ ತಾತ್ವಿಕ ಅಂತಃಶಕ್ತಿ ಅವರಲ್ಲಿತ್ತು.  1917 ರಲ್ಲಿ ಮಹಾರಾಜರು ತೆಗೆದುಕೊಂಡ ಸರ್ ಲೆನ್ಸಿ ಮಿಲ್ಲರ್ ಆಯೋಗ ಇವರಿಗೆ ಇಷ್ಟವಾಗಲಿಲ್ಲ.  ಸರಕಾರಿ ಹುದ್ದೆಗೆ ನೇಮಿಸುವಾಗ ಜಾತಿ-ಮತಗಳ ಆಧಾರದ ಮೇಲೆ ಮಾಡಬೇಕು ಎಂಬುದಾಗಿತ್ತು. ನಮ್ಮ ದೇಶದಲ್ಲಿ ‘ಮೀಸಲಾತಿ’ ಶುರುವಾಗಿದ್ದೇ ‘ಮಿಲ್ಲರ್ ಆಯೋಗ’ ದಿಂದ. ಈ ಮೀಸಲಾತಿ ಪದ್ಧತಿಯನ್ನು ಸರ್.ಎಂ.ವಿ. ಒಪ್ಪಲಿಲ್ಲ.  ವ್ಯಕ್ತಿಯೊಬ್ಬನ ಅರ್ಹತೆ, ಪ್ರತಿಭೆ, ಕಾರ್ಯಕ್ಷಮತೆ ಆತನ ಉದ್ಯೋಗಕ್ಕೆ ಮಾನದಂಡವಾಗಬೇಕೇ ಹೊರತು, ಜಾತಿಯಾಧಾರಿತ ಮೀಸಲಾತಿ ತಪ್ಪು ಎಂಬ ಅಭಿಪ್ರಾಯ ಮಹಾರಾಜರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯ್ತು.  1918 ಡಿಸೆಂಬರ್ 9 ರಂದು ‘ದಿವಾನ ಹುದ್ದೆಗೆ’ ರಾಜೀನಾಮೆ ನೀಡಿದರು. ರಾಜೀನಾಮೆಯ ನಂತರ ದೇಶ-ವಿದೇಶಗಳಲ್ಲಿ ಅವರ ಪ್ರತಿಭೆ, ಪರಿಣತಿ, ವ್ಯಕ್ತಿತ್ವಕ್ಕೆ ಇಂಬು ಸಿಕ್ಕಿತು. ಅವರ ಸೇವೆ ಮುಂದುವರೆಯಿತು.

ವಿಶ್ವೇಶ್ವರಯ್ಯನವರು ಬರೆದ ಗ್ರಂಥಗಳು 

ಭಾರತದ ಪುನರ್ ನಿರ್ಮಾಣ 1920 ರಲ್ಲಿ ಲಂಡನ್ನಿನಲ್ಲಿ ಪ್ರಕಟವಾಯಿತು.  1919-20 ಹತ್ತು ತಿಂಗಳು ಲಂಡನ್‍ನಲ್ಲಿ ವಾಸವಿದ್ದರು.  1934 ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ಯೋಜನೆ ಮತ್ತು 1951ರಲ್ಲಿ ನನ್ನ ವೃತ್ತಿ ಜೀವನದ ನೆನಪುಗಳು (ಆಗ ಸರ್.ಎಂ.ವಿ.ಗೆ 90 ವರ್ಷಗಳಾಗಿದ್ದವು),  1960 ರಲ್ಲಿ ʼಕನ್ನಡಕ್ಕೆ ಕಪನೀಪತಿ ಭಟ್ಟರುʼ 2005 ರಲ್ಲಿ ಅಂಕಿತ ಪ್ರಕಾಶನದಿಂದ ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಗೊಂಡಿತು. 

ಸರ್.ಎಂ.ವಿ.ಗೆ ಸಂದ ಪ್ರಶಸ್ತಿ-ಪುರಸ್ಕಾರಗಳು

ಕೃಷ್ಣರಾಜ ಸಾಗರ ಜಲಾಶಯ

ಮುಂಬೈ ಪ್ರಾಂತಕ್ಕೆ ಪ್ರಥಮವಾಗಿ ಇಂಜಿನಿಯರಿಂಗ್ ಪಾಸಾಗಿದ್ದಕ್ಕೆ 1883 ರಲ್ಲಿ ಜೇಮ್ಸ್ ಬರ್ಕಲೇ ಬಂಗಾರದ ಪದಕ,  1904 ರಲ್ಲಿ ಮುಂಬೈ ವಿ.ವಿ. ಫೆಲೋ ಆಗಿ ನೇಮಿಸಿ ಗೌರವಿಸಿದ ಗವರ್ನರ್, 1904 ರಲ್ಲಿ ಲಂಡನ್ನಿನ ಇಂಜಿನಿಯರಿಂಗ್ ಇನ್ಸ್ಟಿಟ್ಯೂಟ್‌ ಗೌರವ ಸದಸ್ಯತ್ವ, 1906 ರಲ್ಲಿ ಬ್ರಿಟಿಷ್ ಸರಕಾರದಿಂದ ಕೈಸರ್-ಎ-ಹಿಂದ್ ಪ್ರಶಸ್ತಿ ಪದಕ, 1911 ರಲ್ಲಿ ಬ್ರಿಟಿಷ್ ಸರಕಾರದಿಂದ ಸಿ.ಐ.ಇ. ಪದವಿ (ಕಂಪಾನಿಯನ್ ಆಫ್ ಇಂಡಿಯನ್ ಎಂಪೈರ್), 1915 ರಲ್ಲಿ ಬ್ರಿಟಿಷ್ ಸರಕಾರದಿಂದ ಕೆ.ಸಿ.ಐ.ಇ. ಪದವಿ (ನಂತರದ ದಿನಗಳಲ್ಲಿ ಈ ಪದವಿಗೆ ‘ಸರ್’ ಪದವಿ ಎಂದು ಕರೆಯುವುದು ವಾಡಿಕೆ ಆಯ್ತು).  1921 ರಲ್ಲಿ ಕಲ್ಕತ್ತಾ ವಿ.ವಿ. ಯಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ, 1946 ರಲ್ಲಿ ತಮ್ಮ 86 ನೇ ವಯಸ್ಸಿನಲ್ಲಿ ಅಖಿಲ ಭಾರತ ನಿರ್ಮಾಪಕರ ಸಂಘದ ನಿಯೋಗದ ಅಧ್ಯಕ್ಷರಾಗಿ ಅಮೇರಿಕಾ, ಯೂರೋಪ್, ಕೆನಡಾ ದೇಶಗಳಿಗೆ ಭೇಟಿಕೊಟ್ಟರು. 1955 ರಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಮೊದಲ ಕನ್ನಡಿಗ ಸರ್.ಎಂ.ವಿ.

ಮಹಿಳೆಯರ ಸಬಲೀಕರಣಕ್ಕೆ ಸರ್.ಎಂ.ವಿ. ಸಲಹೆ.

ಮಹಿಳೆಯರ ಸಬಲೀಕರಣವು ವಿದ್ಯೆಯಿಂದ ಮಾತ್ರ ಸಾಧ್ಯವೆಂದು 1917 ರಲ್ಲಿ ಮೈಸೂರಿನಲ್ಲಿ ಮಹಾರಾಣಿ ಕಾಲೇಜನ್ನು ಪ್ರಥಮ ದರ್ಜೆಗೆ ಏರಿಸಿ ಪದವಿ ಶಿಕ್ಷಣ ವಸತಿ ಗೃಹಗಳನ್ನು ಆರಂಭಿಸಿದರು.  1913 ರಲ್ಲಿ ಬೆಂಗಳೂರಿನ ಮಹಿಳಾ ಸೇವಾ ಸಮಾಜಕ್ಕೆ ನಿವೇಶನ ಮಂಜೂರು ಮಾಡಿ, 1916 ರಲ್ಲಿ ಮಹಿಳೆಯರಿಗೆ ಕುಟುಂಬ ನಿರ್ವಹಣಾ ಶಾಸ್ತ್ರ ಕುರಿತು ಪಾಠ ಹೇಳಿಸಲು ತಮ್ಮ ಸಂಬಳದಿಂದ ಪ್ರತಿ ತಿಂಗಳು 20 ರೂಪಾಯಿ ದೇಣಿಗೆ ಕೊಡುತ್ತಿದ್ದರು.

ಸರಳತೆ, ಹೃದಯ ವೈಶಾಲ್ಯ ವ್ಯಕ್ತಿತ್ವದ ಸರ್.ಎಂ.ವಿ.

ಅಪಾರ ಜೀವನ ಪ್ರೀತಿ, ಬಿಡುವಿಲ್ಲದ ಬದುಕು, ಶಿಸ್ತುಬದ್ಧತೆ, ಹಾಸ್ಯಪ್ರಜ್ಞೆ, ಬಡತನದ ಹಿನ್ನಲೆಯಿಂದ ಬಂದ ವಿಶ್ವೇಶ್ವರಯ್ಯನವರು ತಮ್ಮ ಬದುಕಿನ ಹಾದಿಯಲ್ಲಿ ಇಷ್ಟೆಲ್ಲಾ ಸಾಧನೆ ಹೇಗೆ ಮಾಡಿದರು ಎಂದು ತಿಳಿಯುವುದೇ ಅವರ ವ್ಯಕ್ತಿತ್ವ ದರ್ಶನ.  ಅವರ ಜೀವನಾದರ್ಶನ. ಅವರ ಕಾರ್ಯವೈಖರಿ, ವ್ಯಕ್ತಿತ್ವ, ಆದರ್ಶಗಳನ್ನು ನಾವು ಪಾಲಿಸಬೇಕು. ಶಿಸ್ತುಬದ್ಧತೆ ನಮ್ಮ ಬದುಕಿನ ಭಾಗವಾಗಬೇಕು.  ಅಂದಾಗ ಪ್ರಸ್ತುತ ವ್ಯವಸ್ಥೆಯ ಕೊಳೆ, ರಾಡಿ ತೊಳೆಯುವುದು ಸಾಧ್ಯ.  ಅವರು ದಿವಾನರಾಗಿದ್ದಾಗ ಹರಿಜನ-ಗಿರಿಜನ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ವ್ಯವಸ್ಥೆ ಮಾಡಿದರು. 

ದೇಶದ ಹೊರಗೂ ಅವರ ಸೇವೆ ಇರುವುದನ್ನು ನಾವೆಲ್ಲರೂ ಸ್ಮರಿಸಬೇಕು. ಪ್ರತಿಭೆ, ಚಾರಿತ್ರ್ಯ, ಸಹನಶೀಲತೆ, ಸಂಯಮ, ಪ್ರಾಮಾಣಿಕತೆ, ನಿಸ್ವಾರ್ಥತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಅವರ ಬದುಕು ನಮಗೆ ಆದರ್ಶವಾದುದು.  ಆರೋಗ್ಯವಂತ ಸಮಾಜಕ್ಕೆ ಪೂರಕವಾದುದು.

ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ

ವಿಶ್ರಾಂತ ಪ್ರಾಧ್ಯಾಪಕರು,

ಇದನ್ನೂ ಓದಿ- ಪ್ರಜಾಪ್ರಭುತ್ವ ಆಶಯವೂ ಪುಸ್ತಕ ಲೋಕದ ನಿರ್ಲಕ್ಷ್ಯವೂ

More articles

Latest article