ಎತ್ತಿನ ಹೊಳೆ ಯೋಜನೆ ಉದ್ಘಾಟನೆಗೆ ಮೊದಲನೇ ಹಂತದ ಚಾಲನೆ ಸಿಕ್ಕಿದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುದ್ದಾರೆ. ಜೊತೆಗೆ ಈ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರ ಕೈಯಿಂದಲೇ ಉದ್ಘಾಟನೆ ಮಾಡಿಸುವುದಾಗಿ ಹೇಳಿದ್ದಾರೆ.
ಸಕಲೇಶಪುರ ತಾಲ್ಲೂಕಿನ, ಕುಂಬರಡಿ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕುಂಬರಡಿ ಬಳಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪರಿಶೀಲಿಸಲು ನಾನು ಬಂದಿದ್ದೇನೆ. ಕಳೆದ ವಾರ ಅಧಿಕಾರಿಗಳು ವಿಡಿಯೋ ತೋರಿಸಿದರೂ ನಾನೇ ಖುದ್ದು ಬಂದು ನೋಡುತ್ತೇನೆ ಎಂದು ಹೇಳಿದ್ದೆ ಈಗ ಬಂದಿದ್ದೇನೆ ಎಂದು ಹೇಳಿದರು.
ಪ್ರಾಯೋಗಿಕವಾಗಿ ಎತ್ತಿನಹೊಳೆ ಯೋಜನೆಯಿಂದ ನೀರು ಎತ್ತುವ ಕಾರ್ಯಕ್ಕೆ ಚಾಲನೆ ನೀಡಿದ್ದು, ನಂತರ ಪ್ರಾಯೋಗಿಕವಾಗಿ ಹರಿಯುತ್ತಿರುವ ನೀರಿಗೆ ಬಾಗೀನ ಅರ್ಪಿಸಿ, ಶುಭ ದಿನ ನೋಡಿಕೊಂಡು ಸಿಎಂ ಅವರು ಕರೆಸಿ ಅವರ ಕೈಯಿಂದಾನೇ ಇದನ್ನು ಉದ್ಘಾಟನೆ ಮಾಡಿ ಪ್ರಾರಂಭ ಮಾಡಿಸುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರಾಜ್ಯಕ್ಕೆ ಬಹುದೊಡ್ಡ ಯೋಜನೆಯಾಗಿರುವುದರಿಂದ ಇದನ್ನು ಎಲ್ಲರನ್ನು ಕರೆಸಿ ಪರಿಶೀಲನೆ ನಡೆಸಿ ನಂತರ ಉದ್ಘಾಟನೆ ಮಾಡಿಸುತ್ತೇವೆ. ಶಾಸಕರು, ಸಚಿವರುಗಳು ಕೂಡ ಇದರಲ್ಲಿ ಇರಬೇಕು. ಎತ್ತಿನ ಹೊಳೆಗೆ ಭೂಮಿ ನೀಡಿವ ವಿಷಯದಲ್ಲಿ ಅರಣ್ಯ ಇಲಾಖೆ ಜೊತೆ ಮಾತು ಕತೆ ನಡೆಯುತ್ತಿದೆ. ಮತ್ತೊಮ್ಮೆ ಸಭೆ ಕರೆದು ನಂತರ ತೊಂದರೆಯಾಗುವುದನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಸಂಸದ ಶ್ರೇಯಸ್ಪಟೇಲ್, ಶಾಸಕರುಗಳಾದ ಕೆ.ಎಂ.ಶಿವಲಿಂಗೇಗೌಡ, ಸಿಮೆಂಟ್ ಮಂಜು, ಶರತ್ ಬಚ್ಚೇಗೌಡ, ಮಾಜಿಸಚಿವ ಟಿ.ಬಿ.ಜಯಚಂದ್ರ ಎತ್ತಿನಹೊಳೆ ಯೋಜನೆ ಮುಖ್ಯ ಇಂಜಿನಿಯರ್ ಸಣ್ಣಚಿತ್ತಯ್ಯ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಎಸ್ಪಿ ಮಹಮದ್ ಸುಜೀತಾ ಉಪಸ್ಥಿತಿಯಲ್ಲಿದ್ದರು.