ನಾನು ಪ್ರಧಾನಿ ನರೇಂದ್ರ ಮೋದಿ ಟೀಕಾಕಾರ ಎನ್ನುವ ಕಾರಣಕ್ಕೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ( Lokasabha Election) ತಮ್ಮ ಪಕ್ಷದಿಂದ ಕಣಕ್ಕೆ ಇಳಿಯುವಂತೆ ಮೂರು ಪಕ್ಷಗಳು ನನ್ನ ಹಿಂದೆ ಬಿದ್ದಿವೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ( Actor Praksh Raj) ಹೇಳಿದ್ದಾರೆ.
ಕೇರಳ ಸಾಹಿತ್ಯ ಉತ್ಸವ ( Kerala Literature Festival) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗ ಚುನಾವಣೆಗಳು ಬರುತ್ತಿವೆ, ಮೂರು ರಾಜಕೀಯ ಪಕ್ಷಗಳು ನನ್ನ ಹಿಂದೆ ಬಿದ್ದಿವೆ. ನಾನು ಫೋನ್ ಸ್ವಿಚ್ ಆಫ್ ಮಾಡಿದ್ದೇನೆ. ಏಕೆಂದರೆ, ನಾನು ಆ ಬಲೆಗೆ ಬೀಳಲು ಬಯಸುವುದಿಲ್ಲ. ಅವರು, ಜನರಿಗಾಗಿಯೋ ಅಥವಾ ನನ್ನ ಸಿದ್ಧಾಂತವನ್ನು ಮೆಚ್ಚಿಯೋ ನನ್ನನ್ನು ಸ್ಪರ್ಧಿಸಿವಂತೆ ಕೇಳಿತ್ತಿಲ್ಲ. ನಾನು ಮೋದಿಯನ್ನು ಟೀಕಿಸುತ್ತೇನೆ ಎಂಬ ಕಾರಣಕ್ಕಾಗಿ ನೀವು ಉತ್ತಮ ಅಭ್ಯರ್ಥಿ’ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಇಂದು ರಾಜಕೀಯ ಪಕ್ಷಗಳು ( Political Party) ತಮ್ಮ ಧ್ವನಿಯನ್ನು ಕಳೆದುಕೊಂಡಿವೆ ಮತ್ತು ಅವುಗಳಲ್ಲಿ ಯಾವುದೇ ಸತ್ಯ ಉಳಿದಿಲ್ಲ. ಅವುಗಳಲ್ಲಿ ಅನೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹುಡುಕಲು ಹೆಣಗಾಡುತ್ತಿವೆ. ‘ಈ ದೇಶದಲ್ಲಿ ಉತ್ತಮ ಅಭ್ಯರ್ಥಿಗಳೇ ಇಲ್ಲ. ಒಂದು ಕ್ಷೇತ್ರದ ಪ್ರತಿನಿಧಿಯನ್ನು ಹುಡುಕಲು ರಾಜಕೀಯ ಪಕ್ಷಗಳು ಹೆಣಗಾಡುತ್ತಿವೆ. ನಾವು ಇಷ್ಟೊಂದು ಬಡವರೇ?’ ಎಂದು ಪ್ರಶ್ನಿಸಿದರು.
‘ನೀವು ಮೋದಿಯನ್ನು ದ್ವೇಷಿಸುತ್ತೀರಾ?’ ಎಂಬ ಪ್ರಶ್ನೆಗೆ, ‘ನಾನು ಅವರನ್ನು ದ್ವೇಷಿಸುವುದಿಲ್ಲ. ಅವರೇನು ನನಗೆ ಹೆಣ್ಣು ಕೊಟ್ಟ ಮಾವನೇ? ಅಥವಾ ಅವರೊಂದಿಗೆ ನನಗೇನಾದರೂ ಆಸ್ತಿ ವಿಷಯದಲ್ಲಿ ಜಗಳವಿದೆಯೇ? ನಾನು ಅವರಿಗೆ ಹೇಳುವುದಿಷ್ಟೇ. ನಾನೊಬ್ಬ ತೆರಿಗೆ ಪಾವತಿದಾರ (Tax Payer). ನಾನು ನಿಮಗೆ ವೇತನ ನೀಡುತ್ತಿದ್ದೇನೆ. ಆದರೆ ನೀವು ನನ್ನನ್ನು ಸೇವಕನ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದೀರಿ. ಇದೆಲ್ಲಾ ನಡೆಯೋಲ್ಲ. ನಿಮ್ಮ ಕೆಲಸ ನೀವು ಮಾಡಿ ಎಂದಷ್ಟೇ ನಾನು ಅವರಿಗೆ ಹೇಳಬಯಸುತ್ತೇನೆ’ ಎಂದು ನಟ ಹೇಳಿದ್ದಾರೆ.
ಸರ್ಕಾರವನ್ನು ಟೀಕಿಸುವ ತಮ್ಮ ಟ್ವೀಟ್‌ಗಳ ಕುರಿತು ಮಾತನಾಡುವ ಅವರು, ‘ಇದು ನನ್ನ ‘ಮನ್ ಕಿ ಬಾತ್’ ಅಲ್ಲ ಆದರೆ ನಮ್ಮ ‘ಮನ್ ಕಿ ಬಾತ್’ ಆಗಿದೆ. ಅಧಿಕಾರದಲ್ಲಿರುವ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳುವ ಅಗತ್ಯವಿದೆ. ‘ನಾನು ಅವರಿಗೆ ಮತ ಹಾಕಿದ್ದರೂ ಅಥವಾ ಅವರಿಗೆ ಮತ ಹಾಕದಿದ್ದರೂ, ಅವರು ನನಗೂ ಪ್ರಧಾನಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವ. ನೀವು ಮತ ಹಾಕಿಲ್ಲ, ನೀವು ಕೇಳಬೇಡಿ ಎಂದು ಅವರು ಹೇಳಲು ಸಾಧ್ಯವಿಲ್ಲ. ಅವರು ಪ್ರಧಾನಿ ಹುದ್ದೆಯಿಂದ ಇಳಿದ ಕ್ಷಣ, ಮುಂದೆ ಯಾರು ಆ ಹುದ್ದೆಗೆ ಏರುತ್ತಾರೋ ಅವರನ್ನು ನಾನು ಕೇಳುತ್ತೇನೆ. ನನ್ನ ಟ್ವೀಟ್‌ಗಳು ಬದಲಾಗುವುದನ್ನು ನೀವು ನೋಡುತ್ತೀರಿ. ಅವರು (Modi) ಹೋದ ನಂತರ, ಅವರು ಹೋದರೆ, ನಾನು ಅವರ ಬಗ್ಗೆ ಏಕೆ ಮಾತನಾಡುತ್ತೇನೆ?’ ಎಂದು ಅವರು ಹೇಳಿದ್ದಾರೆ.