ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾಗಿದ್ದ ಜಿ. ಎಸ್ ಸಂಗ್ರೇಶಿ ಅವರನ್ನು ರಾಜ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನೂತನ ಅಧ್ಯಕ್ಷರನ್ನಾಗಿ ಜಿ.ಎಸ್. ಸಂಗ್ರೇಶಿ ಅವರನ್ನು ನೇಮಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಇದೀಗ ಸಂಗ್ರೇಶಿ ಅವರನ್ನು ರಾಜ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ಈ ಮೊದಲು ಅವರು ಮೈಸೂರು ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾಗಿದ್ದ ನಂತರ ಅವರು ನಿಯೋಜನೆ ಮೇರೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.
ಒಂದೇ ದಿನಕ್ಕೆ ಆ ಆದೇಶವನ್ನು ಹಿಂಪಡೆದು, ರಾಜ್ಯ ಸರ್ಕಾರದ ಶಿಫಾರಸಿನಂತೆ ಚುನಾವಣಾ ಆಯುಕ್ತರನ್ನಾಗಿ ಸಂಗ್ರೇಶಿ ಅವರನ್ನು ನೇಮಿಸಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಅವರ ಅಧಿಕಾರದ ಅವಧಿ ಮುಂದಿನ ಐದು ವರ್ಷಗಳವರೆಗೆ ಇರುತ್ತದೆ.
ಸದ್ಯ ಬಿಬಿಎಂಪಿ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳು ಶೀಘ್ರದಲ್ಲೇ ನಡೆಯಲ್ಲಿದ್ದು ಇದರ ಜವಾಬ್ದಾರಿ ಸಂಗ್ರೇಶಿ ಅವರ ಹೆಗಲಮೇಲಿದೆ.