ಒಂದು ದೇಶದ ಪ್ರಧಾನಿಯಾದವರು ಒಕ್ಕೂಟ ವ್ಯವಸ್ಥೆಯನ್ನು ಒಂದಾಗಿಸುವ ಪ್ರಯತ್ನ ಮಾಡಬೇಕೇ ಹೊರತು ರಾಜಕೀಯ ಕಾರಣಕ್ಕಾಗಿ ದಕ್ಷಿಣ ರಾಜ್ಯಗಳ ವಿರುದ್ಧ ಉತ್ತರದ ಜನತೆಯನ್ನು ಪ್ರಚೋದಿಸುವ, ದ್ವೇಷ ಉತ್ಪಾದನೆ ಮಾಡುವಂತಹ ಒಡೆದಾಳುವ ಶಡ್ಯಂತ್ರವನ್ನು ಮಾಡಬಾರದು. ಇದರಿಂದಾಗಿ ಉತ್ತರ ಪ್ರದೇಶದ ಜನರ ಮನದಲ್ಲಿ ದಕ್ಷಿಣ ರಾಜ್ಯಗಳ ಬಗ್ಗೆ ತಿರಸ್ಕಾರ ದ್ವೇಷ ಭಾವನೆ ಮೂಡಬಹುದಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಆಗ.. ಕರ್ನಾಟಕದ ಏಕೈಕ ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶರವರು “ಕರ್ನಾಟಕದಿಂದ ಅತೀ ಹೆಚ್ಚು ತೆರಿಗೆ ಪಡೆಯುವ ಕೇಂದ್ರ ಸರಕಾರವು ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಮಲತಾಯಿ ಧೋರಣೆ ತೋರುತ್ತಿದೆ. ಕೇಂದ್ರದ ಈ ಶೋಷಣೆ ಹೀಗೇ ಮುಂದುವರೆದರೆ ದಕ್ಷಿಣ ಭಾರತದಲ್ಲಿ ಪ್ರತ್ಯೇಕತೆಯ ದ್ವನಿ ಹೆಚ್ಚಾಗುತ್ತದೆ” ಎಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇಷ್ಟು ಸಾಕಾಗಿತ್ತು ಮೋದಿಯವರಿಗೆ. ” ಅಯ್ಯೋ ನೋಡಿ, ಕಾಂಗ್ರೆಸ್ ಪಕ್ಷದವರು ದೇಶವನ್ನು ಉತ್ತರ ಹಾಗೂ ದಕ್ಷಿಣ ಎಂದು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಖಂಡ ಭಾರತವನ್ನು ಒಡೆಯುವ ಕಾಂಗ್ರೆಸ್ ಸರಕಾರ ಬೇಕಾ ಇಲ್ಲವೇ ಸದೃಢ ಭಾರತವನ್ನು ಕಟ್ಟುವ ಬಿಜೆಪಿ ಇರಬೇಕಾ” ಎಂದು ಹೋದಲ್ಲಿ ಬಂದಲ್ಲಿ ಹೇಳಿಕೆಗಳನ್ನು ಕೊಟ್ಟು ಭಾರತೀಯರನ್ನು ಭಾವನಾತ್ಮಕವಾಗಿ ಬಡಿದೆಬ್ಬಿಸಿ ಕಾಂಗ್ರೆಸ್ ಮೇಲೆ ಎತ್ತಿಕಟ್ಟುವ ಪ್ರಯತ್ನವನ್ನು ಮಾಡಿದರು.
ಸಂಸದ ಸುರೇಶರವರು ಕೇಳಿದ್ದು ರಾಜ್ಯಕ್ಕೆ ನ್ಯಾಯವಾಗಿ ಬರಬೇಕಾದ ತೆರಿಗೆಯನ್ನು ಕೊಡಿ ಎಂದು. ಅದಕ್ಕೆ ಬೆಚ್ಚಿಬಿದ್ದ ಮೋದಿ ದೇಶ ವಿಭಜನೆಯ ಬಣ್ಣ ಹಚ್ಚಿದರು. ರಾಜ್ಯದಿಂದ ಕೇಂದ್ರಕ್ಕೆ ಹೋಗುವ ನೂರು ರೂಪಾಯಿಯಲ್ಲಿ ಕೇವಲ ಹದಿಮೂರು ರೂಪಾಯಿ ವಾಪಸ್ ಕೊಡಲಾಗುತ್ತದೆ. ಬಾಕಿ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಲಾಗುತ್ತಿದೆ. ದಕ್ಷಿಣದ ರಾಜ್ಯಗಳ ಜಿಎಸ್ಟಿ ಕೊರತೆ ಪಾಲನ್ನೂ ನಿಲ್ಲಿಸಿದೆ. ‘ನಮ್ಮ ತೆರಿಗೆ ನಮ್ಮ ಹಕ್ಕು, ಕೇಂದ್ರ ಸರಕಾರ ಕೊಡಲೇಬೇಕು’ ಎಂದು ಸುರೇಶರವರು ಆಗ್ರಹಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಬಾಯಿ ಮುಚ್ಚಿಕೊಂಡಿದ್ದಾಗ ಒಬ್ಬ ಸಂಸದರಾದರೂ ಕನ್ನಡಿಗರ ಹಕ್ಕನ್ನು ಕುರಿತು ಧ್ವನಿ ಎತ್ತಿದ್ದು ಕರ್ನಾಟಕದ ಭಾಗ್ಯ.
ಆದರೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ತೆರಿಗೆಯಲ್ಲಾಗುತ್ತಿರುವ ತಾರತಮ್ಯದ ಕುರಿತು ಉತ್ತರಿಸುವುದನ್ನು ಬಿಟ್ಟು ‘ದೇಶ ವಿಭಜನೆಯ ಶಡ್ಯಂತ್ರ’ ಎಂದು ಬಿಂಬಿಸಿ ವಿಷಯಾಂತರ ಮಾಡುವ ಯತ್ನವನ್ನು ಮಾಡತೊಡಗಿದರು.
ಈಗ… ಉತ್ತರ ಪ್ರದೇಶದಲ್ಲಿ ಚುನಾವಣಾ ಭಾಷಣ ಮಾಡಿದ ಮೋದಿಯವರು ಏನು ಹೇಳಿದರು ಎಂಬುದನ್ನು ಗಮನಿಸಲೇ ಬೇಕಿದೆ.
“ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಉತ್ತರ ಪ್ರದೇಶದ ಕುರಿತು ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದೆ. ಕೇರಳದಲ್ಲಿ ಸನಾತನದ ವಿರೋಧಿ ಡಿಎಂಕೆ, ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದವರು ಉತ್ತರ ಪ್ರದೇಶದ ವಿರುದ್ಧ ಮಾತಾಡುತ್ತಾರೆ. ಇದನ್ನು ಉತ್ತರಪ್ರದೇಶದ ಜನ ಸಹಿಸಲು ಸಾಧ್ಯವೇ ಇಲ್ಲ.. ಯುಪಿ ಜನತೆ ಇದನ್ನು ಸಹಿಸಲು ಸಾಧ್ಯವಾ ಹೇಳಿ..” ಎಂದು ಹೇಳುವ ಮೂಲಕ ಮೋದಿ ಉತ್ತರ ಪ್ರದೇಶದವರನ್ನು ದಕ್ಷಿಣದ ರಾಜ್ಯಗಳ ವಿರುದ್ಧ ಎತ್ತಿಕಟ್ಟುವ ಹುನ್ನಾರ ಮಾಡಿದ್ದು ದೇಶ ವಿಭಜನೆಯ ಪ್ರಯತ್ನವಲ್ಲವೇ?
ಒಂದು ದೇಶದ ಪ್ರಧಾನಿಯಾದವರು ಒಕ್ಕೂಟ ವ್ಯವಸ್ಥೆಯನ್ನು ಒಂದಾಗಿಸುವ ಪ್ರಯತ್ನ ಮಾಡಬೇಕೇ ಹೊರತು ರಾಜಕೀಯ ಕಾರಣಕ್ಕಾಗಿ ದಕ್ಷಿಣ ರಾಜ್ಯಗಳ ವಿರುದ್ಧ ಉತ್ತರದ ಜನತೆಯನ್ನು ಪ್ರಚೋದಿಸುವ, ದ್ವೇಷ ಉತ್ಪಾದನೆ ಮಾಡುವಂತಹ ಒಡೆದಾಳುವ ಶಡ್ಯಂತ್ರವನ್ನು ಮಾಡಬಾರದು. ಇದರಿಂದಾಗಿ ಉತ್ತರ ಪ್ರದೇಶದ ಜನರ ಮನದಲ್ಲಿ ದಕ್ಷಿಣ ರಾಜ್ಯಗಳ ಬಗ್ಗೆ ತಿರಸ್ಕಾರ ದ್ವೇಷ ಭಾವನೆ ಮೂಡಬಹುದಾಗಿದೆ.
ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಕೇಳಿದರೆ ದೇಶ ವಿಭಜನೆಯ ಕೃತ್ಯವೆಂದು ಹುಯಿಲೆಬ್ಬಿಸುವ ಮೋದಿಯವರು ಈಗ ಮಾಡಿದ್ದಾದರೂ ಏನು? ಓಟಿಗಾಗಿ ರಾಜ್ಯಗಳನ್ನು ವಿಭಜಿಸುವ, ಸೀಟಿಗಾಗಿ ದ್ವೇಷವನ್ನು ಪ್ರಚೋದಿಸುವ ಕೆಲಸವನ್ನು ಯಾರೇ ಮಾಡಿದರೂ ಅದು ಅಕ್ಷಮ್ಯ.
ಇಂತಹ ದೇಶವಿರೋಧಿ ಭಾಷಣದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದದ್ದು ಚುನಾವಣಾ ಆಯೋಗದ ಕೆಲಸ. ಧರ್ಮಾಧಾರಿತ ಪ್ರಚೋದನೆ, ರಾಜ್ಯವಾರು ವಿಭಜನೆಯ ಹೇಳಿಕೆಗಳನ್ನು ಸಾರ್ವಜನಿಕ ಸಭೆಗಳಲ್ಲಿ ಹೇಳುತ್ತಿರುವ ಪ್ರಧಾನಿಯ ಬಾಯಿ ಮುಚ್ಚಿಸಬೇಕಾದದ್ದು ಚುನಾವಣಾ ಆಯುಕ್ತರ ಸಾಂವಿಧಾನಿಕ ಕರ್ತವ್ಯ. ಇಲ್ಲಿಯವರೆಗೂ 27 ಕ್ಕೂ ಹೆಚ್ಚು ದೂರುಗಳು ಪ್ರಧಾನಿಯ ವಿರುದ್ಧ ಚುನಾವಣಾ ಆಯೋಗದಲ್ಲಿ ದಾಖಲಾದರೂ ಏನೂ ಮಾಡದೇ ಸುಮ್ಮನಿರುವ ಆಯೋಗದ ಆಯುಕ್ತರುಗಳು ಮೋದಿ ಸರಕಾರದ ಕೈಗೊಂಬೆಗಳು ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಈಗ ದೇಶದ ಜನತೆ ಎಚ್ಚರ ಗೊಳ್ಳಬೇಕಾಗಿದೆ. ಇನ್ನೂ ಮೂರು ಹಂತಗಳ ಚುನಾವಣೆ ಬಾಕಿ ಇದೆ. ಇಂತಹ ವಿಚ್ಛಿ ದ್ರಕಾರಿ ವಿಕ್ಷಿಪ್ತ ವ್ಯಕ್ತಿಯನ್ನು ಹಾಗೂ ವಿಭಜನಕಾರಿ ಶಕ್ತಿಗಳನ್ನು ಚುನಾವಣೆಯಲ್ಲಿ ಸೋಲಿಸಲೇ ಬೇಕಿದೆ. ಒಕ್ಕೂಟ ವ್ಯವಸ್ಥೆಯನ್ನು ಉಳಿಸಿ ಕೊಳ್ಳಬೇಕಿದೆ. ಹಿಂದುತ್ವದ ವಿರುದ್ಧ ಬಹುತ್ವವನ್ನು ಗೆಲ್ಲಿಸಲೇಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಯು ಟರ್ನ್ ಹೊಡೆದ ಮೋದಿ ಮಹಾತ್ಮರಿಗೊಂದು ಪತ್ರ