ಲಿಂಗ ಸಮಾನತೆ ಮತ್ತು ಬಸವಣ್ಣ

Most read

ಇವತ್ತು ಮೇ 10, ಜಗಜ್ಯೋತಿ ಬಸವಣ್ಣನವರ ಜಯಂತಿ. ಇಡೀ ಜಗತ್ತಿಗೆ ಕಾಯಕ ಹಾಗೂ ದಾಸೋಹ ತತ್ವಗಳನ್ನು ಕೊಟ್ಟ ಮಹಾನ್ ಚೇತನ ಜನಿಸಿದ ದಿನ. ಇಂತಹ ಸಂದರ್ಭದಲ್ಲಿ ಬಸವಾದಿ ಶರಣರು ಪ್ರತಿಪಾದಿಸಿದ ಲಿಂಗಸಮಾನತೆಯ ಕುರಿತು ಶಶಿಕಾಂತ ಯಡಹಳ್ಳಿಯವರು ಬರೆದ ಲೇಖನ ಇಲ್ಲಿದೆ.

“ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,

ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,

ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ,

ಇದಾವ ಪರಿಯಲ್ಲಿ ಕಾಡಿತ್ತು ಮಾಯೆ,

ಈ ಮಾಯೆಯ ಕಳೆವಡೆ ಎನ್ನಳವಲ್ಲ

ನೀವೆ ಬಲ್ಲಿರಿ ಕೂಡಲಸಂಗಮದೇವ”

ಬಸವಣ್ಣನವರ ಈ ವಚನ ನೆನಪಾದಾಗಲೆಲ್ಲಾ ಮನಸ್ಸು ಆಲೋಚನೆಗೆ ಪ್ರೇರೇಪಿಸುತ್ತದೆ. ಯಾಕೆಂದರೆ, ಈ ವಚನ ಮೇಲ್ನೋಟಕ್ಕೆ ಮಹಿಳೆಯರನ್ನು ಮಾಯೆಗೆ ಹೋಲಿಸಿದಂತಿದೆ ಎಂದೆನಿಸಿದರೂ ಶಬ್ದಾರ್ಥದ ವ್ಯಾಪ್ತಿ ಮೀರಿ ಅರ್ಥದ ಅಂತರಂಗದ ಆಳಕ್ಕಿಳಿದು ಅರಿತರೆ ಹೊರಹೊಮ್ಮುವ ಅರಿವಿನ ದಾರಿಯೇ ಬೇರೆಯಾಗಿದೆ. “ತಾಯಿ, ಮಗಳು, ಹೆಂಡತಿ ಪರಿಪರಿಯಾಗಿ ಕಾಡುವ ಮಾಯೆ, ಇಂತಹ ಮಾಯೆಯಿಂದ ಕಳಚಿಕೊಳ್ಳುವುದು ಸಾಧ್ಯವೇ ಇಲ್ಲ” ಎನ್ನುವ ಬ್ರಾಹ್ಮಣಿಕಲ್ ದೃಷ್ಟಿಯನ್ನು ಈ ವಚನದ ಮೇಲ್ಮಟ್ಟದ ಓದು ತಿಳಿಸುತ್ತದೆ. ಜೊತೆಗೆ ಲಿಂಗ ಸಮಾನತೆಯನ್ನು ಉಸಿರಾಗಿಸಿಕೊಂಡ ಬಸವಣ್ಣನವರಿಂದ ಇಂತಹ  ಆಲೋಚನೆ ಸಾಧ್ಯವೇ ಎನ್ನುವ ಪ್ರಶ್ನೆ ಕೂಡಾ ಕಾಡುತ್ತದೆ.

ಆದರೆ.. ಈ ವಚನದ ಮೂಲಕ ಬಸವಣ್ಣನವರು ವೈದಿಕಶಾಹಿ ಸೃಷ್ಟಿಸಿದ ʼಹೆಣ್ಣು ಮಾಯೆʼ ಎನ್ನುವ ಪರಿಕಲ್ಪನೆಯನ್ನು ಒಡೆದು ಹಾಕಿದ್ದಾರೆ. “ಹುಟ್ಟಿಗೆ ಕಾರಣಳಾದ ತಾಯಿ ಹೇಗೆ ಮಾಯೆಯಾಗಲು ಸಾಧ್ಯ? ಮೋಹದ ಮಗಳು ಮಾಯೆ ಎನ್ನುವುದು ಸುಳ್ಳು, ಜೊತೆಯಾದ ಸಂಗಾತಿ ಮಾಯೆ ಎಂದರೆ ನಂಬುವುದು ಹೇಗೆ? ಇವರೆಲ್ಲಾ ಮಾಯೆ ಅನ್ನುವುದೇ ಆದರೆ ನಮ್ಮನ್ನು ಆವರಿಸಿದ  ಆ ಆತ್ಮೀಯ ಸಂಬಂಧಗಳಿಂದ ಕಳೆದುಕೊಳ್ಳುವುದು ನನ್ನಿಂದ ಸಾಧ್ಯವಿಲ್ಲ ಎಂದು ನೀವೇ ಬಲ್ಲಿರಿ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಗಂಡು ಹೆಣ್ಣಿನ ನಡುವಿನ ಬಿಡಿಸಲಾಗದ ಅನುಬಂಧದ ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ. ಜನ್ಮಕೊಟ್ಟ ತಾಯಿಯಾಗಿ, ಪ್ರೀತಿಯ ಮಗಳಾಗಿ, ಜೊತೆನಡೆವ ಪತ್ನಿಯಾಗಿ ಪುರುಷರ ಬಾಳು ಬೆಳಗುವ ಸ್ತ್ರೀಯರನ್ನು ಮಾಯೆ ಎಂದು ನಿರಾಕರಿಸುವುದು ತಪ್ಪು ಎಂಬುದು ಬಸವಣ್ಣನವರ ಸ್ಪಷ್ಟವಾದ ಅಭಿಪ್ರಾಯ.

“ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲಾ,

ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲಾ,

ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲಾ

ಮನದ ಮುಂದಿನ ಆಸೆಯೇ ಮಾಯೆ ಕಾಣಾ ಗುಹೇಶ್ವರಾ..” ಎಂದು ವಚನಿಸುವ ಮೂಲಕ ಅಲ್ಲಮಪ್ರಭುಗಳು ವೈದಿಕಶಾಹಿ ಪರಂಪರೆಯ ಹೊನ್ನು ಹೆಣ್ಣು ಮಣ್ಣು ಮಾಯಾ ಕಲ್ಪನೆಯನ್ನೇ ಛಿದ್ರ ಗೊಳಿಸಿದರು.

“ಮೊಲೆ ಮುಡಿ ಬಂದಡೆ ಹೆಣ್ಣೆಂಬರು,

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಹೆಣ್ಣೂ ಅಲ್ಲ, ಗಂಡೂ ಅಲ್ಲ ಕಾಣ ರಾಮನಾಥ” ಎಂದು ಹೇಳುವ ಮೂಲಕ ಗಂಡು ಹೆಣ್ಣಲ್ಲಿ ಭೌತಿಕ ಬದಲಾವಣೆಗಳಿದ್ದರೂ ಭಾವಗಳಲ್ಲಿ ಬೇಧವಿಲ್ಲ ಎಂದು ದಾಸೀಮಯ್ಯನವರು ಇನ್ನೂ ಹೆಚ್ಚು ಸ್ಪಷ್ಟೀಕರಣ ಕೊಟ್ಟರು. ಲಿಂಗ ಸಮಾನತೆಯ ಪರವಾದ ಪರಮೋಚ್ಚ ಪ್ರಣಾಳಿಕೆಯ ಪ್ರತಿಪಾದನೆಗಳಾಗಿ ಶಿವಶರಣರ ವಚನ ಸಂವಿಧಾನ ಮೂಡಿ ಬಂದಿದೆ.

ವೈದಿಕಶಾಹಿಯು ಮಹಿಳೆಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ ಕಾಲಘಟ್ಟದಲ್ಲಿ, ಹೆಣ್ಣು ಮಾಯೆಯೆಂದೂ, ಅದರಿಂದ ಎಚ್ಚರದಿಂದ ಇರಬೇಕೆಂದೂ ಶಾಸ್ತ್ರೋಕ್ತವಾಗಿ ಸಾರುತ್ತಿದ್ದ ಕಾಲದಲ್ಲಿ, ‘ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎಂಬ ಮನುಶಾಸ್ತ್ರದ ಮಹಿಳಾ ವಿರೋಧಿತನವನ್ನು ಆಚರಿಸುತ್ತಿದ್ದ ಸಮಯದಲ್ಲಿ ಬಸವಾದಿ ಶರಣರು ಹೆಣ್ಣು ಮಾಯೆಯಲ್ಲ ಮನುಷ್ಯಳು ಎಂದು ಲಿಂಗ ಸಮಾನತೆಯನ್ನು ಬೋಧಿಸಿ ಆಚರಣೆಯಲ್ಲೂ ತಂದರು. ಸನಾತನ ಪಂಥಗಳು ಹೆಣ್ಣನ್ನು ಮಾಯೆಯೆಂದೂ, ಕೇಡಿನ ಪ್ರತೀಕವೆಂದೂ ಜನರನ್ನು ನಂಬಿಸುತ್ತಿದ್ದ ದೇಶಕಾಲದ ಸಂದರ್ಭದಲ್ಲಿ ಲಿಂಗ ಸಮಾನತೆಯ ಸೂತ್ರವನ್ನು ಸರಳವಾಗಿ ಕಟ್ಟಿಕೊಟ್ಟ ಬಸವಾದಿ ಶರಣರು ಮನುಕುಲ ಇರುವವರೆಗೂ ಮಾದರಿಯಾಗಿದ್ದಾರೆ.

ಈ ಎಲ್ಲಾ ಶರಣರು ಕೇವಲ ಲಿಂಗ ಸಮಾನತೆಯನ್ನು ವಚನಗಳಲ್ಲಿ ಬರೆದು ಸುಮ್ಮನಾದವರಲ್ಲ. ವಚನಗಳ ಆಶಯಗಳನ್ನು ಆಚರಣೆಯಲ್ಲೂ ತಂದವರು. ಕೆಳವರ್ಗದ ಮಹಿಳೆಯರಿಗೂ ಓದು ಬರಹ ಕಲಿಯಲು ಅವಕಾಶ ಕೊಟ್ಟು ವಚನಗಳನ್ನು ಬರೆಯಲು ಪ್ರೇರೇಪಿಸಿದರು. ಇದಕ್ಕೆ ನೂರಾರು ಕಾಯಕಜೀವಿ ಸ್ತ್ರೀಯರು ಬರೆದ  ವಚನಗಳೇ ಸಾಕ್ಷಿಯಾಗಿವೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ, ಗೌರವ, ಅವಕಾಶಗಳನ್ನು ನೀಡಿದರು. ಅನುಭವ ಮಂಟಪದಲ್ಲಿ ಲಿಂಗಬೇಧವಿಲ್ಲದೆ ಎಲ್ಲರೂ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇ ಪುರಾವೆಯಾಗಿದೆ. ಯಾವ ಮನುಧರ್ಮಶಾಸ್ತ್ರ ಬಹುಸಂಖ್ಯಾತ ಶೂದ್ರರು, ದಲಿತರು, ಹಾಗೂ ಎಲ್ಲಾ ವರ್ಗದ ಸ್ತ್ರೀಯರನ್ನು ಶಿಕ್ಷಣದಿಂದ ವಂಚಿಸಿತ್ತೋ ಅದಕ್ಕೆ ಪ್ರತಿರೋಧವಾಗಿ ಅಕ್ಷರ ಜ್ಞಾನವನ್ನು ಎಲ್ಲರಿಗೂ ಹಂಚುವ ಜ್ಞಾನ ದಾಸೋಹವನ್ನು ಬಸವಣ್ಣನವರು ಆರಂಭಿಸಿದರು. ಶಿಕ್ಷಣದಲ್ಲಿ ಲಿಂಗತಾರತಮ್ಯ ಇರದೆ ಇರುವ ಹಾಗೆ ನೋಡಿಕೊಂಡರು. ಹೀಗಾಗಿ ವಚನ ಕಾಯಕದಲ್ಲಿ ಮಹಿಳೆಯರ ಭಾಗೀದಾರಿಕೆಯೂ ಹೆಚ್ಚಾಗಿತ್ತು.

ಮಹಿಳೆಯರಿಗೆ ಮಂದಿರ ಪ್ರವೇಶವನ್ನು ಮೊದಲಿನಿಂದಲೂ ಪುರೋಹಿತಶಾಹಿಗಳು ನಿಷೇಧಿಸಿದ್ದಾರೆ. ಲಿಂಗ ಸಮಾನತೆಯನ್ನು ಸಾರುವ ಸಂವಿಧಾನ ಜಾರಿಯಲ್ಲಿದ್ದರೂ ಈಗಲೂ ಸಹ ಅನೇಕ ಮಂದಿರಗಳಲ್ಲಿ ಪ್ರವೇಶ ಕಲ್ಪಿಸಿಲ್ಲ. ಸುಪ್ರೀಂ ಕೋರ್ಟ್ ಆದೇಶಿಸಿದರೂ ಶಬರಿಮಲೆ ದೇವಸ್ಥಾನದಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಹಿಳೆಯರನ್ನು ನಿರ್ಬಂಧಿಸಿರುವುದು ಉದಾಹರಣೆಯಾಗಿದೆ. ಯಾವ ದೇವಸ್ಥಾನಗಳಲ್ಲಿ ಮಹಿಳೆಯರಿಗೆ, ಶೂದ್ರ ದಲಿತ ವರ್ಗದವರಿಗೆ ಪ್ರವೇಶ ಇಲ್ಲವೋ ಅಂತಹ ವೈದಿಕಶಾಹಿ ದೇವಸ್ಥಾನಗಳನ್ನೇ ಬಸವಣ್ಣನವರು ಬಹಿಷ್ಕರಿಸಿದರು. ಪುರೋಹಿತರ ಕೈಗೊಂಬೆಯಾದ ದೇವರುಗಳ ಅಸ್ತಿತ್ವವನ್ನೇ ಪ್ರಶ್ನಿಸಿದರು. ಭಕ್ತ ಮತ್ತು ಭಗವಂತನ ನಡುವೆ ಮಧ್ಯವರ್ತಿಗಳಾದ ಬ್ರಾಹ್ಮಣ ಪುರೋಹಿತರ ಅಗತ್ಯವನ್ನೇ ಟೀಕಿಸಿದರು. ‘ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸ’ ಎನ್ನುವ ಹೊಸ ದೇಗುಲ ಪರಿಕಲ್ಪನೆಯನ್ನೇ ಹುಟ್ಟು ಹಾಕಿದರು.  ಪೂಜಾರಿ ಪುರೋಹಿತರ ಹಂಗಿಲ್ಲದೇ ಇಷ್ಟ ಲಿಂಗವನ್ನು ಕರದಲ್ಲಿಟ್ಟು ಭಗವಂತನ ಜೊತೆ ಭಕ್ತರು ನೇರವಾಗಿ ಸಂವಹನ ಮಾಡುವ ಏಕದೇವೋಪಾಸನಾ ವ್ಯವಸ್ಥೆಯನ್ನು ಜಾರಿಗೆ ತಂದರು.

ಇದರಿಂದಾಗಿ ಕಾಯಕ ಜೀವಿಗಳು ಪುರೋಹಿತರು ಹುಟ್ಟಿಸಿದ ಮೌಢ್ಯಾಚಾರಗಳ ಶೋಷಣಾ ಕೇಂದ್ರಗಳಾದ ದೇವಸ್ಥಾನಗಳಿಗೆ ಹೋಗಿ ಸಮಯ ಸಂಪನ್ಮೂಲಗಳನ್ನು ವ್ಯರ್ಥಮಾಡದೆ ಕರಸ್ಥಲದ ಲಿಂಗವನ್ನು ಪೂಜೆ ಮಾಡುವ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ಪಡೆದುಕೊಂಡರು. ದೇವಸ್ಥಾನಗಳಿಂದ ವಂಚಿತರಾದ ಮಹಿಳೆಯರಂತೂ ಧಾರ್ಮಿಕ ಗುಲಾಮಗಿರಿಯಿಂದ ಬಿಡುಗಡೆ ಹೊಂದಿ ಇಷ್ಟ ಲಿಂಗದ ಆರಾಧನೆಯಲ್ಲಿ ದೈವವನ್ನು ಕಾಣತೊಡಗಿದರು. ತಮ್ಮ ಸುಖ ದುಃಖ ಗಳನ್ನು ನೇರವಾಗಿ ಲಿಂಗದೇವರಲ್ಲಿ ಅರಿಕೆ ಮಾಡಿಕೊಂಡು ಮಾನಸಿಕವಾಗಿ ಹಗುರವಾದರು. ಹೀಗೆ ವೈದಿಕಶಾಹಿಯ ಶುಷ್ಕ ದೈವಾಚರಣೆಗಳಿಂದ ಮಹಿಳೆಯರನ್ನು ಮುಕ್ತರನ್ನಾಗಿಸಿ ಧಾರ್ಮಿಕ ಆಚರಣೆಯ ಸ್ವಾತಂತ್ರ್ಯವನ್ನು ಬಸವಣ್ಣನವರು ಒದಗಿಸಿಕೊಟ್ಟರು. ಬೇಧಗಳಿಲ್ಲದ ದಯೆ ಇರುವ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು.

ಇಡೀ ಜಗತ್ತಿನಲ್ಲಿ,  ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಲಿಂಗಸಮಾನತೆಯನ್ನು ಸಾರಿದ್ದು ಬಸವಧರ್ಮ. ಅಕ್ಷರವಂಚಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟಿದ್ದು ಲಿಂಗಾಯತ ಧರ್ಮ. ಜನರಲ್ಲಿ ಮೂಢನಂಬಿಕೆಗಳನ್ನು ಬಿಟ್ಟು ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದು ಶರಣಧರ್ಮ. ಅಂಬೇಡ್ಕರ್ ವಿರಚಿತ ಭಾರತದ ಸಂವಿಧಾನದಲ್ಲಿರುವ ಸಮಾನತೆಯ ಮೂಲ ಬೇರುಗಳಿರುವುದೂ ಸಹ ಶರಣರ ವಚನ ಸಂವಿಧಾನದಲ್ಲಿ.

ಮತ್ತೆ ಸಮಾನತೆಯ ಮೇಲೆ ಸನಾತನಿ ಶಕ್ತಿಗಳು ಸವಾರಿ ಮಾಡಲು ಪ್ರಯತ್ನಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಮತ್ತೆ ಲಿಂಗತಾರತಮ್ಯ ಹಾಗೂ ವರ್ಗತಾರತಮ್ಯವನ್ನು ಹೊಂದಿರುವ ಚಾತುರ್ವರ್ಣ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹಿಂದುತ್ವವಾದಿಗಳು ಆಕ್ರಮಣಕಾರಿಯಾಗಿರುವ ಸನ್ನಿವೇಶದಲ್ಲಿ, ವಚನ ಪ್ರಣಾಳಿಕೆಯ ಸಮಾನತಾ ತತ್ವದ ಆಧಾರದಲ್ಲಿ ರಚಿತಗೊಂಡ ಭಾರತದ ಸಂವಿಧಾನವನ್ನೇ ಬದಲಿಸಿ ಮನುಸ್ಮೃತಿ ಆಧಾರದ ಸಂವಿಧಾನವನ್ನು ಜಾರಿಗೆ ತರುವ ಉದ್ದೇಶದಿಂದ  ಅಧಿಕಾರವನ್ನು ಪಡೆಯಲು ಹವಣಿಸುತ್ತಿರುವ ದುರಿತ ಕಾಲದಲ್ಲಿ ಬಸವಾದಿ ಶರಣರ ಆಶಯಗಳನ್ನು ತೀವ್ರವಾಗಿ ನೆನಪಿಸಿಕೊಳ್ಳಬೇಕಿದೆ. ಶತಾಯ ಗತಾಯ ತಾರತಮ್ಯರಹಿತ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಿದೆ. ಬಸವ ಜಯಂತಿ ಎಂಬುದು ಕೇವಲ ಬಸವಣ್ಣನವರ ವೈಭವೀಕರಣಕ್ಕೆ ಸೀಮಿತವಾಗದೆ ಬಸವಾದಿ ಶರಣರ ವರ್ಗ ಸಮಾನತೆಯ ತತ್ವಗಳನ್ನು, ಲಿಂಗಸಮಾನತೆಯ ಆಶಯಗಳನ್ನು ಮನೆ ಮನಗಳಿಗೆ ಮುಟ್ಟಿಸುವ ಪ್ರಯತ್ನವನ್ನು ಮಾಡಬೇಕಿದೆ. ಆಗ ಮಾತ್ರ ಭಾರತದ ಸಂವಿಧಾನ ಉಳಿಯಲು ಸಾಧ್ಯ. ಪ್ರಜಾಪ್ರಭುತ್ವ ಮುಂದುವರೆಯಲು ಸಾಧ್ಯ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article