Thursday, July 25, 2024

ಜೈಲಿನಿಂದ ಹೊರಗೆ ಬಂದ ಅರವಿಂದ ಕೇಜ್ರಿವಾಲ್:‌ ಎಎಪಿ ಕಾರ್ಯಕರ್ತರ ಹರ್ಷೋದ್ಘಾರ

Most read

ಹೊಸದಿಲ್ಲಿ: ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು ದಿಲ್ಲಿ ಮುಖ್ಯಮಂತ್ರಿ, ಎಎಪಿ ನಾಯಕ ಅರವಿಂದ ಕೇಜ್ರಿವಾಲ್‌ ಇಂದು ಮಧ್ಯಂತರ ಜಾಮೀನು ದೊರೆತ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಿಂದ ಬಿಡುಗಡೆಯಾದರು.
ನೂರಾರು ಎಎಪಿ ಕಾರ್ಯಕರ್ತರು, ಮುಖಂಡರು ಜೈಲು ಆವರಣದಲ್ಲಿ ನೆರೆದು ತಮ್ಮ ನಾಯಕನನ್ನು ಸ್ವಾಗತಿಸಿದರು.


ಅರವಿಂದ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ವಿಭಾಗೀಯ ಪೀಠ, ಜೂನ 1ರವರೆಗೆ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ. ಜೂನ್‌ 2ರಂದು ಮತ್ತೆ ಜೈಲು ಅಧಿಕಾರಿಗಳ ಮುಂದೆ ಶರಣಾಗಲು ಕೋರ್ಟ್‌ ಆದೇಶ ನೀಡಿತು.
ಜಸ್ಟಿಸ್‌ ಖನ್ನಾ ಮತ್ತು ದೀಪಾಂಕರ್‌ ದತ್ತ ಅವರನ್ನೊಳಗೊಂಡ ವಿಭಾಗೀಯ ಪೀಠ, ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿತು.


ಕೇಜ್ರಿವಾಲ್‌ ಗೆ ನೀಡಲಾಗಿರುವ ಮಧ್ಯಂತರ ಜಾಮೀನನ್ನು ಆಮ್‌ ಆದ್ಮಿ ಪಕ್ಷ ಮತ್ತು ಇತರ ಪ್ರತಿಪಕ್ಷಗಳು ಸ್ವಾಗತಿಸಿವೆ. ಪ್ರಜಾಸತ್ತೆಯನ್ನ ಉಳಿಸುವ ಹೋರಾಟಕ್ಕೆ ಈಗ ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೋರೆನ್‌ ಅವರಿಗೂ ನ್ಯಾಯ ಸಿಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಬಿಡುಗಡೆ ಅತ್ಯಂತ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ ಸಿಪಿ ಮುಖಂಡ ಶರದ್‌ ಪವಾರ್‌ ಸಹ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸಿದ್ದು, ಭಾರತದ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದು ಹೇಳಿದ್ದಾರೆ.
ಕೇಜ್ರಿವಾಲ್‌ ಅವರನ್ನು ಮಾರ್ಚ್‌ 21 ರಂದು ಬಂಧಿಸಲಾಗಿತ್ತು. ಮೇ 20ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾದ ಮರುದಿನವೇ ಕೇಜ್ರಿವಾಲ್‌ ಬಂಧನಕ್ಕೊಳಗಾಗಿದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ರಾಷ್ಟ್ರಮಟ್ಟದಲ್ಲಿ ಈ ಕುರಿತು ಟೀಕೆಗಳು ವ್ಯಕ್ತವಾಗಿದ್ದಲ್ಲದೆ, ಹಲವು ದೇಶಗಳ ರಾಜತಾಂತ್ರಿಕರು ಅಸಮಾಧಾನ ವ್ಯಕ್ತಪಡಿಸಿದ್ದನ್ನು ಸ್ಮರಿಸಿಕೊಳ್ಳಬಹುದು.

More articles

Latest article