“ಗಾಂಧೀಜಿಯ ಸರ್ವೋದಯ ಮತ್ತು ಸಮಸಮಾಜದ ಪರಿಕಲ್ಪನೆ”

ಗಾಂಧೀಜಿಯವರ ಬಗೆಗೆ ಚಿಂತನೆ ಹಿಂದಿಗಿಂತ ಇಂದು ಹೆಚ್ಚು ಅಗತ್ಯವೂ ಅನಿವಾರ್ಯವೂ ಆಗಿದೆ. ಇಪ್ಪತ್ತೊಂದನೇ ಶತಮಾನವು ಜಾಗತೀಕರಣದ ಯುಗವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ಜಾಗತೀಕರಣದ ಹೊಸ ಆರ್ಥಿಕ ನೀತಿಯು ಜಗತ್ತನ್ನು ಜಾಗತಿಕ ಹಳ್ಳಿಯನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ಶತಮಾನದ ಅನೇಕ ಹೊಸ ಸವಾಲುಗಳು ಮತ್ತು ಸಮಸ್ಯೆಗಳನ್ನು ಯುವಕರ ಮುಂದಿಟ್ಟಿದೆ. ಈ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಚಿಂತನೆಗಳಲ್ಲಿ ಇಂದಿನ ತಲೆಮಾರು ಉತ್ತರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಅಧಿಕವಾಗಿಯೇ ಇದೆ – ದೇವರಾಜು. ಕೆ ಮಲಾರ, ಸಹಾಯಕ ಪ್ರಾಧ್ಯಾಪಕರು.

ಗುಜರಾತ್‌ನ ಪೋರಬಂದರಿನ ಶ್ರೀಮಂತ ಬನಿಯಾ ಕುಟುಂಬದಲ್ಲಿ ಹುಟ್ಟಿದ ಮೋಹನದಾಸ ಕರಮಚಂದ ಗಾಂಧೀಜಿ, ಭಾರತ ಸೇರಿದಂತೆ ಇಡೀ ವಿಶ್ವದ ಇತಿಹಾಸದ ದಾರಿಯನ್ನೇ ಬದಲಾಯಿಸಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಬ್ರಿಟಿಷ್‌ ವಸಾಹತುಶಾಹಿಯನ್ನು ದೇಶದಿಂದ ಕಿತ್ತೊಗೆಯಲು ಅವರು ಕೈಗೊಂಡ ಒಂದೊಂದು ಹೋರಾಟವೂ ಚರಿತ್ರೆಯಲ್ಲಿ ದಾಖಲಾಗುವಂಥವು. ಗಾಂಧೀಜಿಯವರು ಈ ನೆಲದ ಬಹುದೊಡ್ಡ ವ್ಯಕ್ತಿತ್ವ. ಇವರನ್ನು ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿ ಪರಿಗಣಿಸದೆ ಈ ಜಗತ್ತು ಕಂಡ ಶ್ರೇಷ್ಟ ಚಿಂತಕರಲೊಬ್ಬರನ್ನಾಗಿ ಪರಿಭಾವಿಸುವುದು ಹೆಚ್ಚು ಸೂಕ್ತವಾದುದು. ಗಾಂಧೀಜಿಯವರ ಬಗೆಗೆ ಚಿಂತನೆ ಹಿಂದಿಗಿಂತ ಇಂದು ಹೆಚ್ಚು ಅಗತ್ಯವೂ ಅನಿವಾರ್ಯವೂ ಆಗಿದೆ. ಏಕೆಂದರೆ ಗಾಂಧೀಜಿಯವರ ಚಿಂತನೆಗಳು ಸರಳವಾಗಿಯೂ ಮುಕ್ತವಾಗಿಯೂ ಇರುವುದು. ಇಪ್ಪತ್ತೊಂದನೇ ಶತಮಾನವು ಜಾಗತೀಕರಣದ ಯುಗವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ ಜಾಗತೀಕರಣದ ಹೊಸ ಆರ್ಥಿಕ ನೀತಿಯು ಜಗತ್ತನ್ನು ಜಾಗತಿಕ ಹಳ್ಳಿಯನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದೆ. ಈ ಶತಮಾನದ ಅನೇಕ ಹೊಸ ಸವಾಲುಗಳು ಮತ್ತು ಸಮಸ್ಯೆಗಳನ್ನು ಯುವಕರ ಮುಂದಿಟ್ಟಿದೆ. ಈ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಚಿಂತನೆಗಳಲ್ಲಿ ಇಂದಿನ ತಲೆಮಾರು ಉತ್ತರವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಅಧಿಕವಾಗಿಯೇ ಇದೆ.

ಗಾಂಧೀಜಿಯವರ ಬದುಕಿನ ಹೋರಾಟ ಮತ್ತು ಚಳವಳಿಯ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ ಒಂದು ಪದವಿದೆ. ಅದೇ ʼಸರ್ವೋದಯʼ. ಗಾಂಧೀಜಿಯವರು ಈ ಪರಿಕಲ್ಪನೆಯನ್ನು ಬಹಳ ಮೆಚ್ಚಿ ಒಪ್ಪಿಕೊಂಡವರು. ಈ ಪರಿಕಲ್ಪನೆ ಗಾಂಧೀಜಿಯವರಿಗೆ ಬಂದದ್ದಾದರೂ ಎಲ್ಲಿಂದ? ಎಂಬುದನ್ನು ನೋಡಿದರೆ ಅದು ಹತ್ತೊಂಬತ್ತನೆಯ ಶತಮಾನದ ಬ್ರಿಟನ್‌ ದೇಶದವರಾದ  ಇಂಗ್ಲೀಷ್‌ ಲೇಖಕ, ಕಲಾವಿಮರ್ಶಕ,  ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರಾಗಿದ್ದ ಜಾನ್‌ ರಸ್ಕಿನ್‌ ಅವರ “Unto This Last” ಕೃತಿಯ ಓದಿನಿಂದ ಎಂಬುದು ತಿಳಿದು ಬರುತ್ತದೆ. ಈ ಕೃತಿಯನ್ನು ಅವರು ರೈಲು ಪ್ರಯಾಣ ಮಾಡುವಾಗ ಓದಿದ್ದೆಂಬುದು ಚರಿತ್ರೆಯ ಸಂಗತಿ. ಈ ಕೃತಿಯು ಗಾಂಧೀಜಿಯವರನ್ನು ಹೆಚ್ಚು ಪ್ರಭಾವಕ್ಕೊಳಗಾಗುವಂತೆ ಮಾಡಿತ್ತು. ಅದರಲ್ಲೂ ಮುಖ್ಯವಾಗಿ ಈ ಕೃತಿಯಲ್ಲಿ ಬರುವ ಮೂರು ಸಂಗತಿಗಳು ಅವರ ಮೇಲೆ ಹೆಚ್ಚು ಪ್ರಭಾವ ಬೀರಿದ್ದವು ಎಂಬುದನ್ನು ಸ್ವತಃ ಗಾಂಧೀಜಿಯವರೇ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಮೂರು ಅಂಶಗಳು ಯಾವುವು ಅಂಥ ನೋಡುವುದಾದರೆ,

1. ಎಲ್ಲರ ಒಳಿತಿನಲ್ಲಿಯೇ ತನ್ನ ಒಳಿತು ಅಡಗಿದೆ ಎನ್ನುವುದು.

2. ವಕೀಲರ ಕೆಲಸವು ಕ್ಷೌರಿಕರಷ್ಟೇ ಮೌಲ್ಯವನ್ನು ಹೊಂದಿದೆ, ಏಕೆಂದರೆ ಎಲ್ಲಾ ಬಗೆಯ ಶ್ರಮಗಳು ಸಮಾನ ಗೌರವ ಹೊಂದಿವೆ ಎನ್ನುವುದು.

3. ಶ್ರಮಜೀವಿಗಳ ಜೀವನವೇ ಶ್ರೇಷ್ಟವಾದದ್ದು ಎನ್ನವುದು.

ಈ ಮೇಲಿನ ಅಂಶಗಳನ್ನು ಆಧರಿಸಿಯೇ ಗಾಂಧೀಜಿಯವರು ಸರ್ವೋದಯದ ಪರಿಕಲ್ಪನೆಯನ್ನು ನೀಡಿರುವಂಥದ್ದು. ಹಾಗಾದರೆ ಸರ್ವೋದಯ ಎಂಬುದರ ಅರ್ಥವೇನು? ʼಸರ್ವೋದಯʼ ಎಂದರೆ ‘ಸರ್ವರ ಉದಯ’ ಅಥವಾ ‘ಸರ್ವರ ಅಭ್ಯುದಯ’, ʼಸರ್ವರ ಕಲ್ಯಾಣʼ ಎಂದೆಲ್ಲಾ ಅರ್ಥಗಳನ್ನು ಕೊಡಬಹುದು. ಈ ಸರ್ವೋದಯ ಎಂಬ ಪದವನ್ನು 1908ರಲ್ಲಿ ತಮ್ಮ ಮೇಲೆ ಅಪಾರ ಪ್ರಭಾವ ಬೀರಿದ ಜಾನ್‌ ರಸ್ಕಿನ್‌ ಅವರ “Unto This Last”” ಕೃತಿಯನ್ನು ಓದಿದ ಮೇಲೆ ಅದನ್ನು ಗುಜರಾತಿನ ಭಾಷೆಗೆ  ಅನುವಾದಿಸಿಕೊಂಡಿದ್ದಾರೆ. ಈ ಪದ ಮೂಲತಃ ಸಂಸ್ಕೃತ ಪದ. ಸರ್ವೋದಯ ಎಂದರೆ ಎಲ್ಲರ ಏಳಿಗೆ ಎಂದರ್ಥ. ಜಾನ್‌ ರಸ್ಕಿನ್‌ ಅವರ ಚಿಂತನೆ ಒಂದು ದೇಶದ ಅಂತ್ಯದಲ್ಲಿರುವ ವ್ಯಕ್ತಿಯ ಉದಯಕ್ಕೆ ಹಾತೊರೆದರೆ, ಗಾಂಧೀಜಿಯವರು ಒಂದು ದೇಶದ ಕಡೆಯಲ್ಲಿರುವ ವ್ಯಕ್ತಿಯನ್ನೂ ದಾಟಿ ಸರ್ವರ ಉದಯಕ್ಕೆ, ಎಲ್ಲರ ಏಳಿಗೆಗೆ, ಎಲ್ಲರ ಒಳಿತಿಗೆ ಹಾತೊರೆದುದನ್ನು ಇಲ್ಲಿ ನೆನೆಯಬೇಕು. ಒಂದು ದೇಶದ ಪ್ರಗತಿ ಎಂದರೆ ಅದು ಆ ದೇಶದಲ್ಲಿನ ಸರ್ವರ ಪ್ರಗತಿಯೂ ಆಗಿರುತ್ತದೆ. ಆ ಕಾರಣಕ್ಕಾಗಿ ಸರ್ವರ ಉದಯವಾಗುವುದನ್ನು ಕಾಣುವುದು ಗಾಂಧೀಜಿಯವರ ಚಿಂತನೆಯಾಗಿತ್ತು. ಆ ಕಾರಣಕ್ಕಾಗಿ ಗಾಂಧೀಜಿಯವರು ಈ ಸರ್ವೋದಯ ಎಂಬ ಪದವನ್ನು ಬಳಸಿದರು. ಈ ಸರ್ವೋದಯ ಪದಕ್ಕೆ ವಿಶಾಲವಾದ ಅರ್ಥವಿದೆ. ಇದು ಆರ್ಥಿಕ ಆಶಯವನ್ನು ಹೊಂದಿದೆ, ಸಾಮಾಜಿಕ ಸಂಗತಿಯೂ ಆಗಿದೆ, ರಾಜಕೀಯ ರೀತಿ ನೀತಿಯನ್ನು ತಿದ್ದುವುದೂ ಆಗಿದೆ, ನೈತಿಕ ನೆಲೆಗಟ್ಟನ್ನು ಒದಗಿಸಿದೆ, ಆಧ್ಯಾತ್ಮಿಕ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ. ಹಾಗಾಗಿ ಸರ್ವೋದಯ ಎಂಬುದು ಬಹು ವ್ಯಾಪಕವಾದ ಆರ್ಥಿಕ, ಸಾಮಾಜಿಕ, ರಾಜಕೀಯ, ನೈತಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಕಂಡು ಬಂದಂತಹ ಗಾಂಧೀಜಿಯವರ ಪರಿಕಲ್ಪನೆಯಾಗಿದೆ. ಗಾಂಧೀಜಿಯವರ ಸರ್ವೋದಯ ಪರಿಕಲ್ಪನೆ ಒಂದು ಕಾರ್ಯಕ್ರಮವಾಗಿ ಅಷ್ಟೇ ಅಲ್ಲ ಬಹತೇಕ ವಿಶ್ವದ ಜನರು ಇದನ್ನು ಒಂದು ಚಳುವಳಿಯಾಗಿ ಸ್ವೀಕರಿಸಿರುವುದನ್ನು ಅರಿಯಬಹುದು. ಹಾಗಾದರೆ ಈ ʼಸರ್ವೋದಯʼ ಹೇಗೆ ಗಾಂಧೀಜಿಯವರಿಂದ ವಿವರಿಸಲ್ಪಟ್ಟದೆ.? ಎಂಬುದನ್ನು ನೋಡಿದರೆ, ಗಾಂಧೀಜಿಯವರ ಸರ್ವೋದಯ ಎಂಬ ಪದವು ಆದರ್ಶಮಯವಾದ ಸಮಾಜವನ್ನು ನಿರ್ಮಾಣ ಮಾಡುವುದು. ಗಾಂಧೀಜಿಯವರು ಯಾವ ಸಮಾಜದಲ್ಲಿ ಕ್ರಾಂತಿ, ಶೋಷಣೆರಹಿತ ಬದುಕನ್ನ ಆಶಿಸಿದ್ದರೋ ಅಲ್ಲಿ ಸರ್ವೋದಯವನ್ನು ಕಾಣಲು ಪ್ರಯತ್ನಿಸಿದ್ದರು. ಗಾಂಧೀಜಿಯವರು ಹೆಚ್ಚು ಕಡಿಮೆ ಕಾರ್ಲ್ ಮಾರ್ಕ್ಸ್‌ ಅವರ ಸಮಾಜವಾದಕ್ಕೆ  ಬದಲಿಯಾಗಿ ಬಳಸಿದ ಪದ ಇದಾಗಿದೆ. ಆ ನಿಟ್ಟಿನಲ್ಲಿ ಗಾಂಧೀಜಿಯ ʼಸರ್ವೋದಯʼ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ನಮ್ಮ ಆಸೆಗಳು ಹೇಗೆ ಗುಣಾಕಾರದಲ್ಲಿ ಹೆಚ್ಚಾಗುತ್ತಾ ಹೋಗುತ್ತವೋ ಆಗ ಆ ಆಸೆಗಳು ದುರಾಸೆಗಳಿಗೆ ಕಾರಣವಾಗುತ್ತವೆ. ಆ ದುರಾಸೆಗಳು ಲಾಭಕ್ಕೆ ನಿಲ್ಲುತ್ತವೆ. ಹೆಚ್ಚಿನ ಲಾಭ ಕೊನೆಯಲ್ಲಿ ಹಿಂಸೆಗೆ ಕಾರಣವಾಗುತ್ತದೆ. ಆ ಹಿಂಸೆ ಕೊನೆಗೆ ಕ್ರಾಂತಿಯಲ್ಲಿ ಕಂಡು ಬರುತ್ತದೆ, ವರ್ಗ ಕಲಹದಲ್ಲಿ ಕಂಡು ಬರುತ್ತದೆ. ಆ ವರ್ಗ ಕಲಹ ಕ್ರಾಂತಿಗೆ, ಕೊನೆಗೆ ರಕ್ತ ಕ್ರಾಂತಿಗೆ ಕಾರಣವಾಗುತ್ತದೆ ಎಂದ ಕಾರ್ಲ್ ಮಾರ್ಕ್ಸ್ ಅವರ ವಾದಕ್ಕೆ ಬದಲಿಯಾಗಿ ಸಾರ್ವಜನಿಕ ಧರ್ಮದರ್ಶಿತ್ವವನ್ನು ಸಹ ಗಾಂಧೀಜಿ ತಮ್ಮ ಸರ್ವೋದಯದಲ್ಲಿ ಹೆಣೆದುಕೊಂಡರು. ಗಾಂಧೀಜಿಯವರು ಕಟ್ಟಿದ ಸರ್ವೋದಯದಡಿಯಲ್ಲಿ ಬರುವ ಆದರ್ಶ ಸಮಾಜದಲ್ಲಿ ಕ್ರಾಂತಿ ಇರುವುದಿಲ್ಲ. ಎಲ್ಲ ಸಂಪತ್ತು ಭಗವಂತನಿಂದ ಸೃಷ್ಟಿಗೊಂಡಿರುವಂಥದ್ದು. ಎಲ್ಲವೂ ಎಲ್ಲರಿಗೂ ಸಮಾನವಾಗಿ ಲಭಿಸಬೇಕು ಎಂಬುದು ಗಾಂಧೀಜಿಯವರ ಸ್ಪಷ್ಟ ನಿಲುವು. ಈ ಭೂಮಿ ಮನುಷ್ಯನ ಎಲ್ಲ ಅವಶ್ಯಕತೆಗಳನ್ನು ಈಡೇರಿಸುವ ಸಾಮರ್ಥ್ಯ ಹೊಂದಿದೆ, ಆದರೆ ಅವನ ದುರಾಸೆಗಳನ್ನಲ್ಲ. ಎಂಬ ಮಾತಿನಲ್ಲಿ ಸರ್ವರಿಗೂ ಸಕಲ ಸಂಪದವು ದೊರೆತು ಸರ್ವರನ್ನೂ ಏಳಿಗೆಯತ್ತ ಕರೆದೊಯ್ಯವ ಮನೋಧೋರಣೆ ಇರುವುದು ಇಲ್ಲಿ ಗೋಚರಿಸುತ್ತದೆ.

ಗಾಂಧೀಜಿಯವರ ಸರ್ವೋದಯ ಸಮಾಜದ ತತ್ವಗಳನ್ನು ಅರ್ಥಮಾಡಿಕೊಂಡಲ್ಲಿ ಮಾತ್ರ ಅವರು ಕಟ್ಟ ಬಯಸಿದ ಸಮಸಮಾಜದ ದಿಕ್ಕು ನಮಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಸರ್ವೋದಯ ಸಮಾಜದ ಮೊದಲ ಲಕ್ಷಣ ಅಥವಾ ವಾದವೆಂದರೆ, ರಾಜ್ಯರಹಿತ ಸಮಾಜವನ್ನು ಪ್ರತಿಪಾದಿಸುವುದು ಅಥವಾ  ಅನುಷ್ಠಾನಗೊಳಿಸಲು ಬಯಸುವುದು.  ಒಂದು ವೇಳೆ ರಾಜ್ಯ ಬೇಕೇ ಬೇಕು ಎಂದಾದರೆ ಗಾಂಧೀಜಿಯವರ ಪ್ರಕಾರ ಈ ನಾಲ್ಕು ಅಂಶಗಳನ್ನು ಅದು ಒಳಗೊಂಡಿರಬೇಕಾಗುತ್ತದೆ. ಅವುಗಳೆಂದರೆ, ಸತ್ಯ ಮತ್ತು ಅಹಿಂಸೆಯಿಂದ ಕೂಡಿರಬೇಕು. ಆ ರಾಜ್ಯದಲ್ಲಿ ಅಧಿಕಾರ ಒಬ್ಬ ವ್ಯಕ್ತಿಯ ಕೈಯಲ್ಲಿ ಕೇಂದ್ರೀಕೃತವಾಗಿರದೆ ಸಾರ್ವಭೌಮ ಅಧಿಕಾರ ಜನತೆಯಲ್ಲಿ ಕೇಂದ್ರೀಕೃತವಾಗಿರಬೇಕು. ಆ ರಾಜ್ಯದಲ್ಲಿರುವ ಜನರು ಯಾವುದೇ ರೀತಿಯ ತಾರತಮ್ಯವಿಲ್ಲದೆ ಎಲ್ಲರೂ ಒಂದೇ ಭಾವನೆಯಿಂದ ಸತ್ಯ ಮತ್ತು ಅಹಿಂಸೆ ಮಾರ್ಗದಲ್ಲಿ ಜೀವನ ಸಾಗಿಸುತ್ತಿರಬೇಕು. ಆ ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ‌ ಇರಬೇಕು.  ಈ ನಾಲ್ಕು ಅಂಶಗಳನ್ನು ಆಧರಿಸಿದ್ದರೆ ಅದು ಸರ್ವೋದಯ ಸಮಾಜವಾಗುತ್ತದೆ ಎನ್ನುತ್ತಾರೆ.

ಸರ್ವೋದಯದ ಮತ್ತೊಂದು ತತ್ವವೆಂದರೆ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ. ಇಲ್ಲಿ ಅಧಿಕಾರ ಯಾವ ಹಂತದಲ್ಲಿಯೂ ಕೂಡ ಕೇಂದ್ರೀಕರಣಗೊಂಡಿರಬಾರದು. ಅಂದರೆ ಅಧಿಕಾರವು ವಿಕೇಂದ್ರೀಕರಣಗೊಂಡಿರಬೇಕು. ಪ್ರಜೆಗಳ ಆಡಳಿತದಲ್ಲಿ ಎಲ್ಲರ ಭಾಗವಹಿಸುವಿಕೆ ಸಕ್ರಿಯವಾಗಿ ಪ್ರತಿ ಹಂತದಲ್ಲೂ ಇರಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರು ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಏಕೆಂದರೆ ಸ್ವಯಂ ಆಡಳಿತದಲ್ಲಿ ಅಂದರೆ ಗ್ರಾಮ ಸ್ವರಾಜ್‌ ಅನ್ನು ಕೂಡ ಇಲ್ಲಿ ಗಾಂಧೀಜಿಯವರು ಈ ಮೂಲಕ ಪ್ರತಿಪಾದಿಸುತ್ತಿದ್ದಾರೆ. ಗ್ರಾಮಗಳ ಸ್ವಾಯತ್ತತೆ- ಅಂದರೆ ಗ್ರಾಮಗಳು ಸ್ವಾವಲಂಬನೆ ಸಾಧಿಸುವುದು. ಗ್ರಾಮಗಳು ತಮ್ಮ ಅವಶ್ಯಕತೆಯನ್ನು ತಾವೇ ಪೂರೈಸಿಕೊಳ್ಳುವುದು. ಆಹಾರ, ಬಟ್ಟೆ ಇವು ಗ್ರಾಮದ ಮುಖ್ಯ ಬೇಡಿಕೆಗಳು. ಇವುಗಳಲ್ಲಿ ಗ್ರಾಮಗಳು ಸ್ವಾವಲಂಬನೆಯನ್ನು ಸಾಧಿಸಬೇಕು. ಪ್ರತಿಯೊಂದು ಮನೆಯಲ್ಲಿಯೂ ಚರಕಗಳಿರಬೇಕು ಎಂಬ ಆಶಯವನ್ನು ಪ್ರತಿಪಾದಿಸುತ್ತಾರೆ.

ಗಾಂಧೀಜಿಯವರಿಗೆ ತಮ್ಮದೇ ಆದ ಒಂದು ಜೀವನದರ್ಶನವಿತ್ತು. ಅವರದೇ ಆದ ಕೆಲವು ಸಾಮಾಜಿಕ ಸಿದ್ಧಾಂತಗಳಿದ್ದವು. ರಾಜ್ಯ ವ್ಯವಸ್ಥೆ ಕುರಿತು ತಮ್ಮದೇ ಆದ ಒಂದು ವಿಶಿಷ್ಟ ಕಲ್ಪನೆ ಇತ್ತು. ಗಾಂಧೀಜಿಯವರು ಪಕ್ಷಪದ್ಧತಿ ರಾಜಕಾರಣವನ್ನು ತಿರಸ್ಕರಿಸುತ್ತಾರೆ. ಏಕೆಂದರೆ ಈ ಪದ್ಧತಿ ದ್ವೇಷಕ್ಕೆ ಕಾರಣವಾಗುತ್ತದೆ ಎಂಬುದು ಇವರ ಲೆಕ್ಕಾಚಾರ. ಮುಖ್ಯವಾಗಿ ಅಗತ್ಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಬಾರದು. ಒಂದು ವೇಳೆ ಹೆಚ್ಚಿನ ಆಸ್ತಿ ಹೊಂದಿದ್ದರೆ ಆ ಆಸ್ತಿಯನ್ನು ಸ್ವಯಂ ಪ್ರೇರಣೆಯಿಂದ ಜನರ ಕಲ್ಯಾಣಕ್ಕೆ ಬಳಸುವಂಥದ್ದು. ಯಾವುದೇ ವ್ಯಕ್ತಿಯ ಆಸ್ತಿ ಹೆಚ್ಚುತ್ತಾ ಹೋದರೆ ಅದು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆ. ಆ ಕಾರಣದಿಂದ ಹೆಚ್ಚು ಆಸ್ತಿ ಹೊಂದಿದವರು ಭೂರಹಿತರಿಗೆ ತಮ್ಮ ಆಸ್ತಿಯ ಒಂದು ಭಾಗವನ್ನು ದಾನ ಮಾಡುವುದು. ಭಾರತ ಹಳ್ಳಿಗಳ ದೇಶವಾದುದರಿಂದ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡುವುದು. ಏಕೆಂದರೆ ಭಾರತದಲ್ಲಿ ಮಾನವ ಸಂಪನ್ಮೂಲ ಅಧಿಕವಾಗಿರುವುದರಿಂದ ಬೃಹತ್‌ ಕೈಗಾರಿಕೆಗಳ ಬದಲಾಗಿ ಗುಡಿ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕೆನ್ನುವುದು ಗಾಂಧೀಜಿಯವರ ಬಹುಮುಖ್ಯ ವಿಚಾರವಾಗಿತ್ತು. ಇದು ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಬಲ್ಲುದು ಎಂಬುದರಲ್ಲಿ ನಂಬಿಕೆಯಿತ್ತು. ಇದರಿಂದ ಯುವಜನತೆ ಉದ್ಯೋಗ ಹುಡುಕಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. ನಗರಗಳಿಗೆ ಬರುವ ವಲಸೆ ತಪ್ಪಿದರೆ  ವಿಪರೀತವಾಗಿ ಬೆಳೆಯುವ ನಗರೀಕರಣವನ್ನು ತಡೆಯಲು ಸಾಧ್ಯವಾಗುತ್ತದೆ. ನಗರೀಕರಣವು ಕೂಡ ದೊಡ್ಡ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲುದು. ಬೃಹತ್‌ ಕೈಗಾರಿಕೆಗಳಿಗೆ ಆದ್ಯತೆ ನೀಡಿದರೆ ಅದು ಬಂಡವಾಳಶಾಹಿ ವರ್ಗದ ಉಗಮಕ್ಕೆ ಕಾರಣವಾಗುತ್ತದೆ. ಬಂಡವಾಳಶಾಹಿ ಅಸ್ತಿತ್ವಕ್ಕೆ ಬಂದರೆ ಮತ್ತೆ ಶೋಷಣೆ ಶುರುವಾಗುತ್ತದೆ. ಹಾಗಾಗಿ ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸೂಕ್ತವಾದುದು ಎನ್ನುತ್ತಾರೆ.

ಸರ್ವೋದಯದ ಪರಿಕಲ್ಪನೆಯು ಮುಖ್ಯವಾಗಿ ಸಾಮಾಜಿಕ ಸಮಾನತೆಗೆ ಒತ್ತು ನೀಡುತ್ತದೆ. ಜಾತಿ ಮತ್ತು ಲಿಂಗ, ವರ್ಣ, ಭಾಷೆ ಇತರೆ ಯಾವುದೇ ಅಂಶಗಳಾಗಿರಬಹುದು. ಇವುಗಳ ಆಧಾರದ ಮೇಲೆ ತಾರತಮ್ಯವೆಸಗದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವುದು ಸರ್ವೋದಯದ ತತ್ವವಾಗಿದೆ. ಸಾಮಾಜಿಕ ಸಮಾನತೆಯನ್ನು ಸಮಾಜದಲ್ಲಿ ಸಾಧಿಸದೆ ಹೋದರೆ ಸಾಮಾಜಿಕ ಅಸಮಾನತೆಗೆ ಒಳಗಾದ ಜನರು ಸರ್ವತೋಮುಖ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯವಾಗುತ್ತದೆ? ಸರ್ವರ ಸಮಾನತೆ ಸಾಧಿಸದೆ ಸರ್ವೋದಯ ಸಾಧಿಸಲು ಸಾಧ್ಯವಿಲ್ಲ. ಸರ್ವೋದಯ ಪರಿಕಲ್ಪನೆಯ ಮೂಲಭೂತ ತತ್ವವೆಂದರೆ ಸಮಾಜದಲ್ಲಿ ಯಾರೊಬ್ಬರೂ ಶೋಷಣೆಗೊಳಗಾಗದೆ, ದಬ್ಬಾಳಿಕೆಗೊಳಗಾಗದೆ ಬದುಕು ನಡೆಸುವಂತಹ ಕ್ರಮ. ಸಮಾಜವು ಎಲ್ಲ ರೀತಿಯ ಶೋಷಣೆಗಳಿಂದ ಮುಕ್ತವಾಗಿರಬೇಕು. ಅಸ್ಪೃಶ್ಯತೆಯನ್ನು ಕಡುವಾಗಿ ವಿರೋಧಿಸಿದ್ದ ಗಾಂಧೀಜಿಯವರು ಅದರ ವಿರುದ್ಧ ದೊಡ್ಡ ಸಮರವನ್ನೇ ಸಾರಿದರು. ಈ ಕರಾಳ ಪಿಡುಗು ಹಿಂದೂ ಧರ್ಮಕ್ಕೆ ಅಂಟಿಕೊಂಡ ಶಾಪವೆಂದೇ ಭಾವಿಸಿದ್ದರು. ಇದನ್ನು ನಿರ್ಮೂಲನೆ ಮಾಡುವುದೇ ಸರ್ವೋದಯದ ಗುರಿಯೆಂದು ಹೇಳಿದ್ದರು. ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಇದನ್ನೂ ಓದಿ- ಮಹಾತ್ಮರ ಹಾದಿಯಲ್ಲಿನ ಮಹನೀಯರು …

ಇನ್ನೊಂದು ಮುಖ್ಯವಾದ ಅಂಶವೆಂದರೆ ಧಾರ್ಮಿಕ ಸಹಿಷ್ಣುತೆ. ಪ್ರತಿಯೊಂದು ಧರ್ಮದವರು ಇತರ ಧರ್ಮದವರನ್ನು ಪರಸ್ಪರ ಗೌರವಿಸಬೇಕು. ಎಲ್ಲರೂ ಭ್ರಾತೃತ್ವ ಭಾವನೆಯಿಂದ ಜೀವನ ಸಾಗಿಸಬೇಕು. ಹಾಗಿದ್ದಲ್ಲಿ ಮಾತ್ರ ಸರ್ವೋದಯದ ಸಮಾಜದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯ ಎಂದು ನಂಬಿದ್ದರು. ಸತ್ಯ ಮತ್ತು ಅಹಿಂಸೆ ಗಾಂಧೀಜಿ ಅವರ ಜೀವನ ಮತ್ತು ದರ್ಶನದ ಮೂಲ ಮಂತ್ರಗಳಾಗಿವೆ. ಸತ್ಯ ಮತ್ತು ಅಹಿಂಸೆ ಈ ಎರಡರಲ್ಲಿ ಸತ್ಯವು ಪ್ರಮುಖವಾದ್ದರಿಂದ ಅದಕ್ಕೆ ಪ್ರಥಮ ಸ್ಥಾನ. ಗಾಂಧೀಜಿಯವರು ಸತ್ಯದ ಅನ್ವೇಷಕರಾಗಿದ್ದರಲ್ಲದೆ ಅದರ ಉಪಾಸಕರೂ ಆಗಿದ್ದರು. ತಮ್ಮ ಜೀವನದ ಆಗು ಹೋಗುಗಳೆಲ್ಲವನ್ನೂ ತಾವು ಸತ್ಯದೊಂದಿಗೆ ನಡೆಸಿದ ಪ್ರಯೋಗಗಳೆಂದೇ ಅವರು ಗ್ರಹಿಸಿದ್ದರು. ಇದರಿಂದ ಅವರಿಗೆ ಜೀವನದ ವಿಚಾರದಲ್ಲಿ ಎಂತಹ ವೈಜ್ಞಾನಿಕ ದೃಷ್ಟಿ ಇತ್ತೆಂಬುದು ಮನವರಿಕೆಯಾಗುತ್ತದೆ.

ಗಾಂಧೀಜಿ ಅವರ ಪ್ರಕಾರ ಅಹಿಂಸೆಯ ನಿಷ್ಪತ್ತಿ ಎರಡು ರೀತಿಯಲ್ಲಿದೆ. ಸಕಲ ಜೀವಾತ್ಮರೊಂದಿಗೆ ಏಕತೆಯನ್ನು ಕಂಡುಕೊಳ್ಳಬೇಕೆಂಬುದು ಒಂದು. ಇನ್ನೊಂದು ನ್ಯಾಯವಾದ ವಿಚಾರವನ್ನೇ ಆಗಲಿ ನಾವು ಅದನ್ನು ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡಲು ಯಾವ ಕಾರಣದಿಂದಲೂ ಹಿಂಸೆಯನ್ನು ಬಳಸಬಾರದೆಂಬುದು. ಇದರಲ್ಲಿ ಎರಡನೆಯದನ್ನು ಸಾಧಿಸಬೇಕಾದರೆ ಸ್ವಾರ್ಥತ್ಯಾಗ ಅತ್ಯವಶ್ಯಕ. ಸಮಸ್ತ ಜೀವಿಗೂ ಒಂದೇ. ಅವುಗಳಿಗೆ ಸಮಾನವಾದ ಆಸೆ ಆಕಾಂಕ್ಷೆಗಳಿವೆ ಎಂಬ ತತ್ವದ ಅರಿವಾದಾಗ ವ್ಯಕ್ತಿ ಸಮಾಜ ಮತ್ತು ರಾಷ್ಟ್ರಗಳ ನಡುವೆ ಪ್ರೇಮವಲ್ಲದೆ ಮತ್ತೇನೂ ಇರಲಾರದು. ಆ ಪ್ರೇಮವು ಅನ್ಯೋನ್ಯ ಸ್ನೇಹ ಸಹಕಾರ ಮತ್ತು ಪರಸ್ಪರ ಗೌರವದ ರೂಪದಲ್ಲಿ ಮೂಡಿ ಬರುತ್ತದೆ. ಪ್ರೇಮವು ಮಾನವನ ಸಹಜ ಧರ್ಮವಾಗಬೇಕು. ಏಕೆಂದರೆ ವ್ಯಕ್ತಿಗಳ ನಡುವೆ ಬೌದ್ಧಿಕ ಮತ್ತು ನೈತಿಕ ಸಂಬಂಧ ಸ್ಥಾಪಿತವಾಗಬೇಕಾದರೆ ಪ್ರೇಮ ಅತ್ಯವಶ್ಯಕ. ವ್ಯಕ್ತಿಗಳ ಹಿತಾಸಕ್ತಿಯಲ್ಲಿ ಘರ್ಷಣೆ ಕಂಡು ಬಂದಾಗಲೂ ಅದನ್ನು ಅಹಿಂಸೆ ಮಾರ್ಗದಿಂದಲೇ ಪರಿಹರಿಸಬೇಕು. ಏಕೆಂದರೆ ಅಹಿಂಸೆಯು ಸರ್ವರ ಕ್ಷೇಮ ಮತ್ತು ಪ್ರೇಮಕ್ಕೆ ಆಸರೆಯಾಗಿ ನಿಲ್ಲಬಲ್ಲುದು ಎಂಬುದನ್ನು ನಂಬಿದ್ದರು. ಅದರಂತೆ ಸದಾ ಅದನ್ನೇ ಆಶಿಸುತ್ತಿದ್ದರು.

ಗಾಂಧೀಜಿಯವರು ತಮ್ಮ ಇಡೀ ಬದುಕಿನಲ್ಲಿ ಪ್ರಾಯೋಗಿಕವಾಗಿ ಕಂಡುಕೊಂಡ ಪರಮ ಅಸ್ತ್ರಗಳೆಂದರೆ ಅವು ಅಹಿಂಸೆ ಮತ್ತು ಸತ್ಯ. ಇವುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅಷ್ಟೇ ಅಲ್ಲ ಬದುಕಿನ ಪ್ರತಿ ಹಂತದಲ್ಲೂ ಇವುಗಳು ಪ್ರಯೋಗ ಗೊಳ್ಳಬೇಕು. ಹಾಗಿದ್ದಾಗ ಮಾತ್ರ ಸರ್ವರ ಏಳಿಗೆಯೂ ಸಾಧ್ಯವಿದೆ ಎನ್ನುತ್ತಾರೆ. ಗಾಂಧೀಜಿಯವರ ಪ್ರಕಾರ ಸರ್ವೋದಯ ಸಮಾಜ ಅಂಥಹ ಸಮಾಜವನ್ನು ಗುರುತಿಸಬೇಕಾದರೆ ಅದು ಏಳು ಸಾಮಾಜಿಕ ಪಾಪಗಳಿಂದ ಮುಕ್ತವಾಗಿರಬೇಕು.

1. ತತ್ವರಹಿತ ರಾಜಕೀಯ

2 ದುಡಿಮೆಯಿಲ್ಲದ ಸಂಪತ್ತು

3 ನೀತಿ ಹೀನ ವಾಣಿಜ್ಯ

4 ಶೀಲವಿಲ್ಲದ ಶಿಕ್ಷಣ

5. ಆತ್ಮಸಾಕ್ಷಿ ರಹಿತ ಭೋಗ

6. ಮಾನವತಾಶೂನ್ಯ ವಿಜ್ಞಾನ

7. ತ್ಯಾಗವಿಲ್ಲದ ಪೂಜೆ

ಈ ಸಪ್ತ ಸಾಮಾಜಿಕ ಪಾಪಗಳು ಒಂದು ದೇಶವನ್ನು ಅನೈತಿಕ ದಿವಾಳಿತನಕ್ಕೆ ನೂಕುವಂಥವು. ಈ ಸಪ್ತ ಪಾಪಗಳಿಂದ ಮುಕ್ತವಾದಾಗ ಮಾತ್ರ ಆ ಸಾಮಾಜ ಸರ್ವೋದಯ ಸಮಾಜವಾಗಲು ಸಾಧ್ಯ. ಅಂಥ ಸಮಾಜದಲ್ಲಿ ಸರ್ವರ ಏಳಿಗೆ ಸಾಧಿಸಲು ಸಾಧ್ಯ. ಈ ಸಪ್ತ ಪಾಪಗಳ ಸಾಗರ ದಾಟಿದವರು ಬದುಕಿನ ಶ್ರೇಷ್ಟತೆಯನ್ನು ಕಂಡುಕೊಳ್ಳಬಲ್ಲರು. ಬದುಕಿನ ಸಾರ್ಥಕತೆಯನ್ನು ಹೊಂದಬಲ್ಲರು, ಇತರರನ್ನು ಆ ಎತ್ತರದೆಡೆಗೆ ಕೊಂಡೊಯ್ಯಬಲ್ಲರು. ಸರ್ವೋದಯದ ಸಮಾಜದಲ್ಲಿ ಎಲ್ಲ ಕೆಲಸಗಳು ಶ್ರೇಷ್ಟವಾದುವು. ಹಾಗಾಗಿ ಈ ಸಮಾಜದಲ್ಲಿ ಎಲ್ಲ ಕೆಲಸಗಳಿಗೂ ಸಮಾನ ಅವಕಾಶ ಇರಬೇಕು. ಗಾಂಧೀಜಿಯವರ ಪ್ರಕಾರ ಯಾವ ಕೆಲಸವೂ ಮೇಲಲ್ಲ ಯಾವ ಕೆಲಸವೂ ಕೀಳಲ್ಲ. ಆಯಾಯ ಕೆಲಸಗಳಿಗೆ ಅದರದೇ ಮಹತ್ವವಿರುತ್ತದೆ. ಆದ ಕಾರಣ ಯಾವುದೇ ಕೆಲಸವನ್ನು ನಿರ್ವಹಿಸುವ ಯಾವ ವ್ಯಕ್ತಿಯನ್ನೇ ಆಗಲಿ ಶ್ರೇಷ್ಟರು ಕನಿಷ್ಟರು ಎಂದು ವಿಭಾಗ ಮಾಡಿ ಹೇಳುವ ಕ್ರಮವಿರಬಾರದು. ಉನ್ನತ ಶಿಕ್ಷಣ ಪಡೆದು ಹೆಚ್ಚು ವೇತನ ಪಡೆಯುವವರಿಗೆ ಹೆಚ್ಚು ಗೌರವವನ್ನು ಕಡಿಮೆ ವೇತನವನ್ನು ಪಡೆಯುವವರಿಗೆ ಅಗೌರವವನ್ನು ಕೊಡುವುದು ಸರಿಯಾದ ಕ್ರಮವಲ್ಲ. ಇದನ್ನು ಸರ್ವೋದಯ ಸಮಾಜ ತಿರಸ್ಕರಿಸುತ್ತದೆ. ಎಲ್ಲಾ ಕೆಲಸವೂ ಒಂದೇ ಎಂಬ ಭಾವನೆಯನ್ನು ಸರ್ವೋದಯ ಸಮಾಜ ಒಪ್ಪುತ್ತದೆ. ಅದನ್ನೇ ಸಮಸಮಾಜದ ಪರಿಲ್ಪನೆಯಾಗಿ ಸ್ವೀಕರಿಸುತ್ತದೆ ಎನ್ನುತ್ತಾರೆ ಗಾಂಧೀಜಿಯವರು.

ಗಾಂಧೀಜಿಯವರ ಸರ್ವೋದಯದ ಸಮಸಮಾಜದ ಕನಸನ್ನು ಕಂಡಿದ್ದ ಇಬ್ಬರು ನಾಯಕರ ಹೇಳಿಕೆಗಳನ್ನು ಇಲ್ಲಿ ದಾಖಲಿಸುವುದು ಸೂಕ್ತವೆನಿಸುತ್ತದೆ. ಗಾಂಧೀಜಿಯವರ ಸರ್ವೋದಯ ಸಮಾಜದ ಪರಿಕಲ್ಪನೆಯಲ್ಲಿ ವಿಶ್ವಾಸವಿಟ್ಟಿದ್ದ ಸಮಾಜವಾದಿ ಜಯಪ್ರಕಾಶ್‌ ನಾರಾಯಣರವರು ಹೀಗೆ ಹೇಳುತ್ತಾರೆ. “ಈ ಸಮಯದಲ್ಲಿ ಎಲ್ಲ ಸಾಮಾಜಿಕ ವಿಚಾರಧಾರೆಗಳ ಮಾರ್ಗಗಳ ತುಲನೆಯಲ್ಲಿ ಸರ್ವೋದಯದ ವಿಚಾರ ಸ್ಪಷ್ಟರೂಪದಿಂದ ಮತ್ತು ಉನ್ನತ ವಿಚಾರವಾಗಿ ಕೂಡಿದೆ. ಈ ಜಗತ್ತಿನಲ್ಲಿ ಸಮಾನತೆ, ಬಂಧುತ್ವ, ಸ್ವತಂತ್ರತಾ ಮತ್ತು ಶಾಂತಿಯ ಸ್ಥಾಪನೆ ಮಾಡುವುದಾದರೆ ಸಮಾಜವಾದ ಮುಂತಾದ ಎಲ್ಲ ವಾದಗಳು ಕೊನೆಯಲ್ಲಿ ಸರ್ವೋದಯದಲ್ಲಿ ವಿಲೀನವಾಗಲೇಬೇಕು ಇದು ನನ್ನ ದೃಢ ವಿಶ್ವಾಸ ಎನ್ನುತ್ತಾರೆ. ಹಾಗೆಯೇ ಸಮಾಜವಾದದ ಮತ್ತೊಬ್ಬ ನಾಯಕರಾದ ರಾಮಮನೋಹರ ಲೋಹಿಯ ಅವರು ”ಗಾಂಧೀಜಿಯವರ ಜೀವನ ಮತ್ತು ಗುರಿಗಳನ್ನು ಸಮಾಜವಾದದ ವಸ್ತ್ರದೊಡನೆ ನೇಯ್ದರೆ ಹೊಸ ಸಮಾಜವೊಂದು ನಿರ್ಮಾಣವಾದೀತು. ಮಾನವ ಕುಲ ಆಗ ಶಾಂತಿ ಸಭ್ಯ ಜೀವನದ ನೂತನ ಯುಗವನ್ನು ನಿರೀಕ್ಷಿಸಬಹುದು” ಎನ್ನುತ್ತಾರೆ.

ಗಾಂಧೀಜಿಯವರು ತಮ್ಮ ನಾಯಕತ್ವದಿಂದ ನಮ್ಮ ದೇಶವನ್ನು ಸ್ಫೂರ್ತಿಗೊಳಿಸಿದವರು. ಕಾಲು ಶತಮಾನದ ಅಹಿಂಸಾತ್ಮಕ ಹೋರಾಟದ ಮೂಲಕ ರಾಜಕೀಯ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟವರು. ತಾವು ಸ್ವತಃ ಅನುಷ್ಠಾನಕ್ಕೆ ತರದ ಅಥವಾ ತರಲಾರದ ಉಪದೇಶಗಳನ್ನು ಮತ್ತು ಆದರ್ಶಗಳನ್ನು ಅವರು ಎಂದೂ ಜನತೆಯ ಮುಂದಿಡಲಿಲ್ಲ. ಇದೇ ಅವರ ಯಶಸ್ಸಿಗೆ ಮುಖ್ಯ ಕಾರಣ. ಗಾಂಧೀಜಿಯವರು ಬಯಸಿದುದು ಸಾಮಾನ್ಯ ಮನುಷ್ಯನೂ ಯಾವ ಅಡೆತಡೆಯಿಲ್ಲದೆ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಬಹುದಾದ ಸಮಾಜವನ್ನು. ಬಡವರು ಶ್ರೀಮಂತರೆಂಬ ಚೂರು ಅಂತರವಿಲ್ಲದೆ ಆಳುವವರು ಅನೇಕ ವಿಶೇಷ ಹಕ್ಕು ಬಾಧ್ಯತೆಗಳನ್ನು ಹೊಂದಿ ಪ್ರಜೆಗಳ ಯಜಮಾನರಾಗದೆ ಪ್ರಜೆಗಳ ಸೇವಕರಾಗುವ ಸ್ವಾವಲಂಬಿಯಾದ ಭಾರತವನ್ನು. ಗಾಂಧೀಜಿಯವರು ಮುಖ್ಯವಾಗಿ ಸರಳತೆಯಲ್ಲಿ ನಂಬಿಕೆ ಇಟ್ಟಿದ್ದವರು. ತನ್ನ ಅವಶ್ಯಕತೆಗಿಂತಲೂ ಮಿಗಿಲಾಗಿ ಸಂಗ್ರಹಿಸುವುದಾಗಲಿ ಬಯಸುವುದಾಗಲಿ ಅವರ ಪ್ರಕಾರ ಕಳ್ಳತನವೇ ಸರಿ. ನಮಗೆ ಬೇಕಿಲ್ಲದ ವಸ್ತುವನ್ನು ನಾವು ಎಷ್ಟೇ ನ್ಯಾಯ ಮಾರ್ಗದಿಂದ ಗಳಿಸಿದ್ದರೂ ಅದು ಕದ್ದ ವಸ್ತುವಿಗೆ ಸಮಾನ ಎಂದು ತೀವ್ರವಾಗಿ ಯೋಚಿಸಿದ್ದರು. ಹೀಗೆ ಸರ್ವೋದಯ ಸಮಾಜ ಸ್ಥಾಪನೆಗೆ ಅಹಿಂಸಾ ಮಾರ್ಗ ಮತ್ತು ಸತ್ಯದ ನಿಲುವು ಅತ್ಯಗತ್ಯ ಎಂದು ಮನವರಿಕೆ ಮಾಡಿಕೊಟ್ಟರು. “ದೇವರೇ ಸತ್ಯ ಎನ್ನುವುದಕ್ಕಿಂತ ಸತ್ಯವೇ ದೇವರು” ಎನ್ನುವುದು ಸರ್ವೋದಯ ಸಮಾಜದ  ಮಹಾಮಂತ್ರವಾಗಲಿ ಎನ್ನುತ್ತಾರೆ ಗಾಂಧೀಜಿಯವರು.

ದೇವರಾಜು. ಕೆ ಮಲಾರ

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮುನಿಯಾಲು

ಇದನ್ನೂ ಓದಿ- ಇಂದು ಯುವಜನರಿಗೆ ಗಾಂಧೀಜಿ ಏಕೆ ಬೇಕು?

More articles

Latest article

Most read