ಬುಡಕಟ್ಟು ಸಮುದಾಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

Most read

ಬೆಂಗಳೂರು: ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಅರಣ್ಯ ಹಾಗೂ ಅರಣ್ಯದಂಚಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳಿಗೆ ಮನೆ, ಕುಡಿಯುವ ನೀರು, ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ರಸ್ತೆಗಳ ಅಭಿವೃದ್ಧಿಗೆ ಮತ್ತು ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಯಾವುದೇ ಅಡ್ಡಿ ಉಂಟು ಮಾಡಬಾರದು. ನಿವೇಶನ ರಹಿತರು ಒಪ್ಪಿಗೆ ಸೂಚಿಸಿದರೆ ಅವರಿಗೆ ಬೇರೆ ಕಡೆ ನಿವೇಶನ ಒದಗಿಸಿ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಅರಣ್ಯದ ಅಂಚಿನಲ್ಲಿ ಜಮೀನುಗಳನ್ನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಿವೇಶನ ಇದ್ದರೂ ಮನೆಯಿಲ್ಲದವರಿಗೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿಯಿರುವ ಪ್ರಸ್ತಾವನೆಗಳಿಗೆ ಶೀಘ್ರ ಅನುಮತಿ ನೀಡಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು.

ಮೈಸೂರು ಜಿಲ್ಲೆಯಲ್ಲಿ 215ಹಾಡಿಗಳಿದ್ದು, 49,778 ಜನರು ವಾಸಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 158 ಹಾಡಿಗಳಿದ್ದು, 27,763 ಜನರು ವಾಸಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ 228 ಹಾಡಿಗಳಿದ್ದು, 26,909 ಮಂದಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ಹಕ್ಕುಪತ್ರ ವಿತರಣೆಗೆ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಹಕ್ಕುಪತ್ರ ಹೊಂದಿದವರು ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅರ್ಹತೆ ಪಡೆಯುವ ಕುರಿತು ಕ್ರಮ ಕೈಗೊಳ್ಳಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಬುಡಕಟ್ಟು ಸಮುದಾಯದ ಅರಣ್ಯವಾಸಿಗಳಿಗೆ ವೈಯಕ್ತಿಕ ಹಕ್ಕುಪತ್ರಕ್ಕಾಗಿ 12,222 ಅರ್ಜಿ ಸ್ವೀಕರಿಸಲಾಗಿದ್ದು, 4,856 ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, 6,363 ಎಕರೆ ವಿಸ್ತೀರ್ಣದ ಜಮೀನು ಮಂಜೂರು ಮಾಡಲಾಗಿದೆ. 6,808 ಅರ್ಜಿಗಳು ತಿರಸ್ಕೃತಗೊಂಡಿದ್ದು, ವಿಲೇವಾರಿ ಮಾಡಲು ಬಾಕಿಯಿರುವ 558 ಅರ್ಜಿಗಳನ್ನು ಪರಿಶೀಲಿಸಿ ಆದಷ್ಟು ಬೇಗನೆ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.

ಆದಿವಾಸಿ ಸಮುದಾಯದ ಪದವೀಧರರಿಗೆ ಅರಣ್ಯ ಇಲಾಖೆಯಲ್ಲಿರುವಂತೆ ಆರೋಗ್ಯ ಇಲಾಖೆಯಲ್ಲೂ ಉದ್ಯೋಗದಲ್ಲಿ ಮೀಸಲಾತಿ ನೀಡಿ ಆದಿವಾಸಿ ಹಾಡಿಗಳಲ್ಲಿ ಸೂಕ್ತ ಉದ್ಯೋಗ ಒದಗಿಸುವಂತೆ ಸಮುದಾಯದ ಮುಖಂಡರು ಬೇಡಿಕೆ ಇಟ್ಟರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದರು.

More articles

Latest article