ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿ:  ರಾಜ್ಯ ಸರ್ಕಾರಕ್ಕೆ ನೋಟಿಸ್​ ನೀಡಿದ ಕೇಂದ್ರ

Most read

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಯ ಮೊದಲ ಹಂತವನ್ನು ಉದ್ಘಾಟನೆ ಬೆನ್ನಲ್ಲೇ ಈ ಯೋಜನೆಯಿಂದ ಪಶ್ಚಿಮ ಘಟ್ಟಕ್ಕೆ ಹಾನಿಯಾದ ಬಗ್ಗೆ ವರದಿ ಹಿನ್ನೆಲೆಯಲ್ಲಿ ಯೋಜನೆಯ ಕಾರ್ಯ ಸಾಧ್ಯತೆ ವರದಿ ಸಲ್ಲಿಸುವಂತೆ ಕೇಂದ್ರ ಅರಣ್ಯ, ಪರಿಸರ ಮತ್ತು ತಾಪಮಾನ ಸಚಿವಾಲಯ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಂಚಿಗಾನಹಳ್ಳಿಯ ಸರ್ವೆ ಸಂಖ್ಯೆ 2, 30 ಹಾಗೂ ಯಲ್ಲಾಪುರ ಗ್ರಾಮದ ಸರ್ವೆ ಸಂಖ್ಯೆ 34, 35 ಮತ್ತು 36ರ ಅರಣ್ಯ ಬಳಕೆ ಬಗ್ಗೆ ವರದಿ ನೀಡಿವಂತೆ ನೋಟಿಸ್​ನಲ್ಲಿ ತಾಕೀತು ಮಾಡಿದೆ.

2020ರಲ್ಲಿ 26 ಎಕರೆ ಅರಣ್ಯ ಬಳಕೆಗೆ ವಿಶ್ವೇಶ್ವರ ಜಲ ನಿಗಮವು ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಸಹ 2024ರ ಜುಲೈನಲ್ಲಿ ಪತ್ರ ಬರೆದಿತ್ತು. ಈ ಪ್ರಸ್ತಾವದ ಕುರಿತು ಸ್ಪಷ್ಟನೆ ಹಾಗೂ ಹೆಚ್ಚುವರಿ ಮಾಹಿತಿ ಒದಗಿಸುವಂತೆ ರಾಜ್ಯ ಅರಣ್ಯ ಇಲಾಖೆಗೆ ಕೇಂದ್ರ ಸಚಿವಾಲಯ ಸೂಚಿಸಿದೆ.

ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯ ಮೊದಲ ಹಂತಕ್ಕೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದರು. ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಯೋಜನೆ ಉದ್ಘಾಟನೆ ಮಾಡಲಾಯಿತು. ಟೇಪ್ ಕತ್ತರಿಸುವ ಮೂಲಕ ಉದ್ಘಾಟನೆ ನೆರವೇರಿಸಿದ ಸಿಎಂ, ದೊಡ್ಡನಾಗರದ 9ನೇ ಪಂಪ್​ ಹೌಸ್​​ನಲ್ಲಿ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿದರು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಸಿಎಂಗೆ ಸಾಥ್ ನೀಡಿದ್ದರು.

More articles

Latest article