Friday, October 10, 2025

ಸಿ.ಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮಹಿಳಾ ಸಂಘಟನೆಗಳಿಂದ ಜನಾಗ್ರಹ ಪತ್ರ

Most read

ಮಂಗಳೂರು, ಅಕ್ಟೋಬರ್‌ 9 : ಸೌಜನ್ಯಾ ಅತ್ಯಾಚಾರ- ಕೊಲೆ ಪ್ರಕರಣಕ್ಕೆ ಇಂದಿಗೆ 13 ವರ್ಷಗಳಾಗಿದ್ದು  ಅಪರಾಧಿಗಳು ಇನ್ನು ಕೂಡಾ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ನಡೆದ ನ್ಯಾಯಕ್ಕಾಗಿ ಜನಾಗ್ರಹ ಕಾರ್ಯಕ್ರಮದ ಭಾಗವಾಗಿ ಮಂಗಳೂರಿನ ಮಹಿಳಾ ಸಂಘಟನೆಗಳು ಜನಾಗ್ರಹ ಪತ್ರವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಡಿಸಿಯವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಲೇಖಕಿಯರೂ ಸೇರಿದಂತೆ 15 ಸಂಘಟನೆಗಳ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ಜನಾಗ್ರಹ ಪತ್ರ

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದಿರುವ ಅಸಹಜ ಸಾವುಗಳು, ಅತ್ಯಾಚಾರ, ಕೊಲೆಗಳ ಬಗ್ಗೆ ವರದಿಯಾಗುತ್ತಿರುವ ಸುದ್ದಿಗಳನ್ನು ಕೇಳಿ ನಾಗರಿಕ ಸಮಾಜಕ್ಕೆ ಆಘಾತವಾಗಿದೆ. ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯ ಎಂಬವರ ದೂರನ್ನು ಆಧರಿಸಿ ತಮ್ಮ ಸರ್ಕಾರ SIT ರಚಿಸಿ, ತನಿಖೆ ಕೈಗೊಂಡ ಕ್ರಮವನ್ನು ನಾಗರಿಕ ಸಮಾಜ ಮುಕ್ತ ಕಂಠದಿಂದ ಶ್ಲಾಘಿಸಿದೆ. ಆದರೆ ಆರಂಭದ ದಿನದಿಂದಲೂ SIT ತನಿಖೆ ಬಗ್ಗೆ ತೀವ್ರ ರಾಜಕೀಯ ಒತ್ತಡ ಸೃಷ್ಟಿಯಾಗಿದ್ದನ್ನು ಕಂಡು ನಾಗರಿಕ ಸಮಾಜದಲ್ಲಿ ಆತಂಕ ಮನೆಮಾಡಿದೆ. ದುರುದ್ದೇಶಪೂರಿತ ರಾಜಕೀಯ ಒತ್ತಡಕ್ಕೆ ತಮ್ಮ ಸರ್ಕಾರ ಮಣಿದಂತೆ ಕಾಣುತ್ತಿದ್ದು, ಕುಂಟುನೆಪಗಳನ್ನು ಮುಂದೊಡ್ಡಿ SIT ತನಿಖೆಯನ್ನು ಮೊಟಕು ಗೊಳಿಸುತ್ತಿರುವುದು ಎದ್ದು ಕಾಣುತ್ತಿದೆ. ನಮ್ಮ ಈ ಅನುಮಾನಕ್ಕೆ ಸ್ಪಷ್ಟ ಕಾರಣಗಳಿವೆ.

  • ಶವ ಹೊರತೆಗೆಯುವ (Exhumation) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದು ರಾಜಕೀಯ ಒತ್ತಡದಿಂದಲೇ ಹೊರತು ಯಾವುದೇ ಕಾನೂನಾತ್ಮಕ ಅಡಚಣೆಗಳಿಂದ ಅಲ್ಲವೇ ಅಲ್ಲ. ಇಂಥ ಅನೀತಿಯ ಕ್ರಮದಿಂದ ತನಿಖಾ ಪ್ರಕ್ರಿಯೆಗೆ ತೀವ್ರ ಹಿನ್ನಡೆಯಾಗಿದೆ ಎಂಬುದು ನಿರ್ವಿವಾದ ಸತ್ಯ.
  • ಚಿನ್ನಯ್ಯ ಎಂಬ ಸಾಕ್ಷಿ-ದೂರುದಾರ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಲು ಕಾರಣಗಳೇನು ? ಅಂಥ ಒತ್ತಡ ಹೇರಿದ ಶಕ್ತಿಗಳು ಯಾವುವು ಎಂಬುದನ್ನು ಸೂಕ್ತವಾಗಿ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವುದರ ಬದಲಿಗೆ ಇದನ್ನೇ ನೆಪವನ್ನಾಗಿಸಿಕೊಂಡು SIT ತನಿಖೆಯನ್ನೇ ದುರ್ಬಲ ಗೊಳಿಸುತ್ತಿರುವಂತೆ ಕಂಡು ಬರುತ್ತಿದೆ.
  • ಹೊಸ ಸಾಕ್ಷಿದಾರರು ಮುಂದೆ ಬಂದು ಅಕ್ರಮವಾಗಿ ಹೂತಿಟ್ಟ ಶವಗಳನ್ನು ತಾವು ತೋರಿಸುವುದಾಗಿ ಖುದ್ದಾಗಿ ದೂರು ಕೊಟ್ಟಿದ್ದರೂ ಸರ್ಕಾರ / SIT ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ದೂರುದಾರರು ತಮ್ಮ ಸಾಕ್ಷಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಮೆಟ್ಟಲೇರಬೇಕಾಗಿ ಬಂದಿರುವುದು ಈ SIT ತನಿಖೆಯ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
  • SIT ರಚನೆಯ ನಂತರ ಹಲವಾರು ಸಂತ್ರಸ್ತ ಕುಟುಂಬಗಳಲ್ಲಿ ಭರವಸೆ ಮೂಡಿ, ತಮ್ಮ ಕುಟುಂಬದ ಸದಸ್ಯರಿಗಾದ ಘೋರ ಅನ್ಯಾಯಗಳ ಬಗ್ಗೆ SIT ಗೆ ಅಹವಾಲು ಸಲ್ಲಿಸಿ ನ್ಯಾಯ ಕೋರಿದ್ದಾರೆ. ಆದರೂ SIT ಯಿಂದ ಸಕಾರಾತ್ಮಕ ಕ್ರಮಗಳ ಬದಲಿಗೆ ಅವರನ್ನು ತಾಂತ್ರಿಕ ಕಾರಣಗಳ ಕುಂಟು ನೆಪ ಹೇಳಿ ಸಾಗಹಾಕಲಾಗುತ್ತಿದೆ.
  • RTI ಮೂಲಕ ಬಯಲಾಗಿರುವ ಅಧಿಕೃತ UDR ದಾಖಲೆಗಳ ಪ್ರಕಾರ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳು ಕಂಡುಬಂದ ದಿನವೇ “ಅಪರಿಚಿತ” ಎಂದು ಘೋಷಿಸಿ, ತರಾತುರಿಯಲ್ಲಿ ನೂರಾರು ಶವಗಳನ್ನು ಧಫನ ಮಾಡಿರುವುದು ಬೆಳಕಿಗೆ ಬಂದಿದೆ. ಇಂಥಾ ಘನಘೋರ ಕಾನೂನುಬಾಹಿರ ಅಕ್ರಮದಲ್ಲಿ ಪೊಲೀಸರು, ಪಂಚಾಯ್ತಿ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ತಮ್ಮ ಸರ್ಕಾರ ಇಂಥಾ ಘನಘೋರ ಅಪರಾಧವನ್ನು ಮುಚ್ಚಿಹಾಕಲು ಹೊರಟಿದೆಯೆ ಎಂಬ ಗಂಭೀರ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.
  • ಈ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ದಾರುಣವಾಗಿ ಹತ್ಯೆಯಾದ ವೇದವಲ್ಲಿ, ಪದ್ಮಲತಾ, ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ – ಪ್ರಕರಣಗಳಲ್ಲಿ ಇದುವರೆಗೆ ಯಾವುದೇ ಅಪರಾಧಿಗಳು ಪತ್ತೆಯಾಗಿಲ್ಲ. ಸೌಜನ್ಯ ಎಂಬ 17 ವರ್ಷದ ವಿದ್ಯಾರ್ಥಿನಿ 2012ರ ಅಕ್ಟೋಬರ್ 9 ನೇ ತಾರೀಕು ಅತ್ಯಾಚಾರಕ್ಕೀಡಾಗಿ ಕೊಲೆಯಾಗಿ 13 ವರ್ಷಗಳೇ ಕಳೆದುಹೋಗಿವೆ. ಈ ಪ್ರಕರಣದಲ್ಲಿ ಹೆಸರಿಸಿರುವ ಸಂತೋಷ್ ರಾವ್ ಎಂಬ ಆರೋಪಿ ತಪ್ಪಿತಸ್ಥನಲ್ಲ ಎಂದು ನ್ಯಾಯಾಲಯ ಈಗಾಗಲೇ ಹೇಳಿದೆ. ಹೀಗಿರುವಾಗ, ಅಪರಾಧಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆಹಚ್ಚಿ ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕಾದುದು  ತಮ್ಮ ಸರ್ಕಾರದ ಜವಾಬ್ದಾರಿಯಾಗಿದೆ.
  • SIT ಇದುವರೆಗೂ ಯಾವುದೇ ಅಪರಾಧಿಗಳನ್ನು ಪತ್ತೆ ಹಚ್ಚಿದ್ದು ಕಂಡುಬರುತ್ತಿಲ್ಲ. ಬದಲಿಗೆ ಸಂತ್ರಸ್ತರ ಪರವಾಗಿ ನ್ಯಾಯಕ್ಕಾಗಿ ದನಿಯೆತ್ತಿದವರನ್ನು ಮತ್ತು ಸಾಕ್ಷಿದಾರರನ್ನು ಗುರಿಯಾಗಿಸಿಕೊಂಡು ಕಿರುಕುಳ ಕೊಡುತ್ತಿರುವ ನಿದರ್ಶನಗಳೇ ಕಂಡು ಬರುತ್ತಿವೆ.
  • ಸರ್ಕಾರದ ಪ್ರಮುಖರ ಹೇಳಿಕೆಗಳನ್ನು ಗಮನಿಸಿದಾಗ, ತಮ್ಮ ಸರ್ಕಾರ ಈಗ ತನಿಖೆಯನ್ನು ಅವಸರವಾಗಿ, ಕಾಟಾಚಾರಕ್ಕೆ ಮಾಡಿ ಮುಗಿಸಿ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆಯೇ ಎಂಬ ಗುಮಾನಿ ದಟ್ಟವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾವು ಈ ಕೆಳಕಂಡ ಆಗ್ರಹಗಳನ್ನು ಮುಂದಿಡುತ್ತಿದ್ದೇವೆ.

1. ಧರ್ಮಸ್ಥಳದ ಫಾಸಲೆಯಲ್ಲಿ ನಡೆದಿರುವ 400ಕ್ಕೂ ಹೆಚ್ಚು ಅಸಹಜ ಸಾವುಗಳ ಬಗ್ಗೆ ಕೂಲಂಕಶವಾದ, ಗಂಭೀರವಾದ ತನಿಖೆ ನಡೆಸಲು ಸರ್ಕಾರ SIT ಗೆ ಸ್ಪಷ್ಟ ಆದೇಶ ಕೊಡಬೇಕು.

2. ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ಒಳಗೊಂಡಂತೆ ಧರ್ಮಸ್ಥಳದಲ್ಲಿ ಹತ್ಯೆಗೊಳಗಾದ ವೇದವಲ್ಲಿ, ಪದ್ಮಲತಾ, ಯಮುನಾ ಮತ್ತು ನಾರಾಯಣ ಪ್ರಕರಣಗಳಲ್ಲಿ ತಪ್ಪಿಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಸಮಗ್ರ ತನಿಖೆ ಕೈಗೊಳ್ಳುವಂತೆ SIT ಗೆ ಸ್ಪಷ್ಟ ಆದೇಶ ನೀಡಬೇಕು.

3. ಈಗ ಮುಂದೆ ಬಂದಿರುವ ಹೊಸ ಸಾಕ್ಷಿದಾರರನ್ನು ಪರಿಗಣಿಸಿ ಆಮೂಲಾಗ್ರವಾಗಿ ತನಿಖಾ ಪ್ರಕ್ರಿಯೆ ಮುಂದುವರೆಯಬೇಕು.

4. ನ್ಯಾಯಕ್ಕಾಗಿ ದನಿಯೆತ್ತುವವರಿಗೆ ಮತ್ತು ಸಾಕ್ಷಿದಾರರಿಗೆ ಕಿರುಕುಳ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಧರ್ಮಸ್ಥಳದಲ್ಲಿ ಗೂಂಡಾಗಿರಿ ಮುಂದುವರೆಸಿರುವ ದುಷ್ಟಶಕ್ತಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಘನಘೋರ ಪ್ರಕರಣಗಳಲ್ಲಿ ತಮ್ಮ ಸರ್ಕಾರ ಅಪರಾಧಿಗಳನ್ನು ಪತ್ತೆಹಚ್ಚಿ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಮೂಲಕ ಸರಕಾರ ಹಾಗೂ ಕಾನೂನು ಆಡಳಿತದಲ್ಲಿ ಜನರಿಗೆ ವಿಶ್ವಾಸ ಮೂಡುವಂತೆ ಮಾಡಬೇಕೆಂದು ಮಂಗಳೂರಿನ ಹಲವಾರು ಸಂಘಟನೆಗಳ ಮಹಿಳೆಯರು ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ.

More articles

Latest article