ಸೋನಿಯಾರಿಗೆ ಮಹಿಳಾ ಸಂಘಟನೆಗಳ ಪತ್ರ | ಸೋಮಣ್ಣನವರ ಮೂರ್ಖತನದ ಪ್ರತಿಕ್ರಿಯೆ

Most read

ನಮ್ಮ ಪತ್ರ ಯಾರೂ ಹೊಸೆದಿರುವ ಕತೆಯಲ್ಲ ಎಂದು ಶ್ರೀ ಸೋಮಣ್ಣನವರಿಗೆ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ. ಇಂತಹ ಹೊಸೆಯುವ ಕೆಲಸಗಳಲ್ಲಿ ಪರಿಣತಿ ಹೊಂದಿರುವುದು ಬಿಜೆಪಿ ಮತ್ತು ಅದರ ಪರಿವಾರವೇ ಹೊರತು ನಾವಲ್ಲಜ್ಯೋತಿ ಎ. ರಾಜ್ಯ ಅಧ್ಯಕ್ಷೆ, NFIW

ಈಗೀಗ ಮಹಿಳೆಯರ ವಿರುದ್ಧ ರಾಜಕಾರಣಿಗಳು ತಮ್ಮ ನಾಲಿಗೆಗಳನ್ನು ಎಗ್ಗಿಲ್ಲದಂತೆ ಹರಿಬಿಡುತ್ತಿರುವುದು ಪಿತೃಪ್ರಧಾನ ಸಮಾಜದ ವಿಲಕ್ಷಣವನ್ನು ಎತ್ತಿ ತೋರಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಮಹಿಳೆಯರ ಕುರಿತು ಸಮಾಜದಲ್ಲಿ ಒಂದಿಷ್ಟೂ ಗೌರವವಿಲ್ಲದಂತೆ ಆಗುತ್ತಿದೆ. ಇದಕ್ಕೆ ಈಚೀಚೆಗೆ ಹಲವು ಪಕ್ಷಗಳ ರಾಜಕಾರಣಿಗಳು ನಾ ಮುಂದು, ತಾ ಮುಂದು ಎನ್ನುವಂತೆ ಪೈಪೋಟಿಗೆ ಬಿದ್ದ ಹಾಗೆ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವುದೇ ಸಾಕ್ಷಿ.

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಮಹಿಳೆಯರ ಮತ್ತು ಬಾಲಕಿಯರ ಮೇಲಿನ ಅತ್ಯಾಚಾರಗಳು ಮತ್ತು ಅಸಹಜ ಸಾವುಗಳನ್ನು ಪಾರದರ್ಶಕ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ರಾಜ್ಯದ ಮಹಿಳಾ ಸಂಘಟನೆಗಳು ಮತ್ತು ಹೋರಾಟಗಾರ್ತಿಯರು, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಮಧ್ಯಪ್ರವೇಶಿಸಲು ಕೋರಿ ಅವರಿಗೆ ಬಹಿರಂಗ ಪತ್ರ ಬರೆದಿದ್ದೆವು. ಇದರಲ್ಲಿ, ಧರ್ಮಸ್ಥಳದಲ್ಲಿ ಮಹಿಳೆಯರನ್ನು “ಕೊಂದವರು ಯಾರು?” ಎಂಬ ರಾಜ್ಯವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಬಗ್ಗೆಯೂ ತಿಳಿಸಿ, ದಶಕಗಳಿಂದ ಸಂತ್ರಸ್ತರಾಗಿರುವ ಹೆಣ್ಣುಮಕ್ಕಳ ಕುಟುಂಬಗಳಿಗೆ ನ್ಯಾಯ ಸಿಗಬೇಕೆಂದು ಹಾಗೂ ಈ ದಿಕ್ಕಿನಲ್ಲಿ ವೇದವಲ್ಲಿಯಿಂದ ಹಿಡಿದು ಪದ್ಮಲತಾ, ಯಮುನಾ, ಸೌಜನ್ಯಾರ ಹತ್ಯೆಗಳ ವರೆಗೂ ನಿಜವಾದ ಕೊಲೆಗಡುಕರು ಯಾರೆಂಬ ಪ್ರಶ್ನೆಗೆ ಉತ್ತರ ಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗಿತ್ತು. ಇದರಲ್ಲಿ ಧರ್ಮ ಮತ್ತು ಪಕ್ಷ ರಾಜಕಾರಣಗಳನ್ನು ದೂರವಿಡಲಾಗಿತ್ತು.

ಈ ಪತ್ರವು ರಾಜ್ಯದ ಮತ್ತು ರಾಷ್ಟ್ರ ಮಟ್ಟದ ಎಲ್ಲಾ ಪತ್ರಿಕೆಗಳಲ್ಲೂ ಸವಿವರವಾಗಿ ಪ್ರಕಟವಾಗಿದ್ದೇ ತಡ, ತುಮಕೂರು ಕ್ಷೇತ್ರದಿಂದ ಸಂಸದರಾಗಿರುವ ಮತ್ತು ಕೇಂದ್ರ ಸಚಿವರಾದ ಬಿಜೆಪಿಯ ಶ್ರೀ ವಿ.ಸೋಮಣ್ಣ ತಮ್ಮ ಕೊಳಕು ಬಾಯಿಯನ್ನು ತೆರೆದು ಪ್ರತಿಕ್ರಿಯಿಸುತ್ತಾ, “ಈ ಹೆಣ್ಣುಮಕ್ಕಳಿಗೆ ಯಾರೋ ಹೇಳಿಕೊಟ್ಟು ಬರೆಸಿರಬಹುದು. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಂಡ ಹೊಸೆದ ಹೊಸ ಕತೆಯಂತಿದೆ. ಇಂತಹ ಎಲ್ಲ ಕುತಂತ್ರ ಮಾಡುವುದೇ ಕಾಂಗ್ರೆಸ್‌ನವರು… ಆದರೆ ಯಾವ ಡಿ.ಕೆ.ಶಿವಕುಮಾರ್, ಯಾವ ಲಕ್ಷ್ಮಿ ಹೆಬ್ಬಾಳ್ಕರ್ ಎನ್ನುವ ಸ್ಥಿತಿಯಲ್ಲಿ ಸೋನಿಯಾ ಇದ್ದಾರೆ” ಎಂದು ತಮ್ಮ ವಿಷ ಕಾರಿದ್ದಾರೆ.

ಮಹಿಳೆಯರಿಗೆ ಸ್ವಂತದ ವಿವೇಚನೆಯ, ಆಲೋಚನೆಯ ಸಾಮರ್ಥ್ಯವೇ ಇಲ್ಲವೆಂದು ಶ್ರೀ ವಿ.ಸೋಮಣ್ಣ, ತಿಳಿದಿದ್ದಾರೆ ಎಂಬುದು ಅವರ ಹೇಳಿಕೆಯಿಂದ ಅರ್ಥವಾಗುತ್ತದೆ. ಇದು ಅವರ ಮೂರ್ಖತನದ ಪರಮಾವಧಿ ಮಾತ್ರವಲ್ಲದೆ ಒಬ್ಬ ಜನಪ್ರತಿನಿಧಿಯ ಬೇಜವಾಬ್ದಾರಿತನದ ಮಾತುಗಳೂ ಆಗಿವೆ. ಬಿಜೆಪಿಯ ಸಂಸದರಾಗಿ, ಸಚಿವರಾಗಿ ಹೀಗಲ್ಲದೆ ಇನ್ನು ಬೇರೆ ಯಾವ ರೀತಿಯಲ್ಲಿ ಮಹಿಳೆಯರ ಬಗ್ಗೆ ಅವರು ಸ್ಪಂದಿಸಬಹುದಿತ್ತು ಎನ್ನುವುದನ್ನೂ ಸಹ ನಾವು ಇದೇ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬಹುದು. ಏಕೆಂದರೆ ಅವರು ಬಿಜೆಪಿಯ ಮಹಿಳೆಯರನ್ನೂ, “ನಾಯಕಿಯರನ್ನೂ” ತಮ್ಮ ಕೈಗೊಂಬೆಗಳಂತೆ ನಡೆಸಿಕೊಳ್ಳುವುದನ್ನು ನೋಡಿದ್ದೇವೆಯೇ ಹೊರತು ಆ ಮಹಿಳೆಯರಿಗೆ ತಾವೂ ಮುಖಂಡರಾಗಿ ಮಹಿಳಾಪರವಾದ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸಲು ಅವಕಾಶವೆಲ್ಲಿ ಇರುತ್ತದೆ? ಸದಾಕಾಲ ಜಾತಿಧರ್ಮಗಳ ವಿಷ ಬೀಜವನ್ನು ಬಿತ್ತಲು ಮತ್ತು ಮಹಿಳೆಯರ ಒಗ್ಗಟ್ಟನ್ನು ಮುರಿಯುತ್ತಲೇ ಅವರ ಹಾದಿ ತಪ್ಪಿಸುವ ಬಿಜೆಪಿ ನಾಯಕರಿಗೆ, ಬೇರೆ ಎಚ್ಚೆತ್ತ ಮಹಿಳೆಯರ ಮತ್ತು ಪ್ರಗತಿಪರ ಮಹಿಳಾ ಸಂಘಟನೆಗಳ ಹೋರಾಟಗಾರ್ತಿಯರ ಸ್ವಂತ ವ್ಯಕ್ತಿತ್ವ, ಸ್ವತಂತ್ರ ಚಿಂತನೆಗಳು, ಸ್ವಾವಲಂಬಿ ನಡೆಗಳು, ಸಾಮರ್ಥ್ಯ, ಎದೆಗಾರಿಕೆ, ಅನ್ಯಾಯದ ವಿರುದ್ಧ ಹೋರಾಡುವ ಕಿಚ್ಚು ಕಾಣಿಸದೇ ಇರುವುದು ಸ್ವಾಭಾವಿಕವೇ.

ಬಹುಪಾಲು ರಾಜಕಾರಣಿಗಳು ಮಹಿಳೆಯರ ಬಗ್ಗೆ ಸೋಮಣ್ಣನವರ ಹಾಗೆ ಕೀಳಾಗಿಯೇ ಯೋಚಿಸುತ್ತಾರೆ. ಏಕೆಂದರೆ ಇವರಿಗೆ ಮನುಷ್ಯನ ಹುಟ್ಟು ಮತ್ತು ಬೆಳವಣಿಗೆಯ ಚರಿತ್ರೆಯಲ್ಲಿ ಬಹುಕಾಲ ಹೆಣ್ಣು ನಾಯಕಿಯಾಗಿ ಆವಿಷ್ಕಾರಗಳನ್ನು ಮಾಡಿದ್ದೂ ಗೊತ್ತಿಲ್ಲ, ಹಾಗೇ ಇಂದಿನ ಹೆಣ್ಣುಮಕ್ಕಳು ಅವಕಾಶ ದಕ್ಕಿದ್ದೇ ಆದಲ್ಲಿ ಅಂತರಿಕ್ಷದಿಂದ ಹಿಡಿದು ರಾಜಕಾರಣದ ತನಕ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಸಾಗುತ್ತಿರುವುದೂ ಅರಿವಿಲ್ಲ. ಕಪ್ಪೆಯಂತೆ ಕುರ್ಚಿಗಾಗಿ ಜಿಗಿಯುವ ಸೋಮಣ್ಣನಂತಹ ರಾಜಕಾರಣಿಗಳು ಇಂದಿಗೂ ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಕಡೆಗೂ ಕಣ್ಣು ಹಾಯಿಸದೆ, ಮನುವಾದದ ಗುಲಾಮರಾಗಿರುವುದು ವಿಷಾದನೀಯ. ಮುಖ್ಯವಾಹಿನಿ ಮಾಧ್ಯಮಗಳನ್ನು (ಮುದ್ರಣ ಮತ್ತು ವಿದ್ಯುನ್ಮಾನ) ಮಹಿಳೆಯರೇ ಮುನ್ನಡೆಸಿಕೊಂಡು ಹೋಗುತ್ತಿರುವ ಈ ದಿನಮಾನಗಳಲ್ಲಿ, ಮಹಿಳೆಯರಿಗೆ ಒಂದು ಪತ್ರ ಬರೆಯಲೂ ಸಹ ಬಾರದೆ, “ಯಾರೋ ಹೇಳಿ ಬರೆಸಿರಬಹುದು” ಎಂದು ಅವರು ಯೋಚಿಸುವುದು ಎಷ್ಟು ಹಾಸ್ಯಾಸ್ಪದ ಎನ್ನಿಸುತ್ತದೆ. ಅವರ ಅರಿವುಗೇಡಿತನದ ಬಗ್ಗೆ ಕೆಟ್ಟ ನಗು ಬರುತ್ತದೆ! ಸೋಮಣ್ಣನವರಿಗೆ ಅಥವಾ ಅವರಂತೆ ಯೋಚಿಸುವ ಯಾರಿಗೇ ಆಗಲಿ, ಬಹುಶಃ ಇಂತಹ ಗಂಭೀರ ವಿಷಯದ ಕುರಿತು ಪತ್ರ ಬರೆಯುವ ಸಾಮರ್ಥ್ಯ ಇಲ್ಲದಿರುವುದರಿಂದಲೇ ಆ ಆರೋಪವನ್ನು ಮಹಿಳೆಯರ ಮೇಲೆ ವರ್ಗಾಯಿಸಿದರೋ ಏನೋ! ಆದರೆ ನಾವು ಮಹಿಳೆಯರಂತೂ ಅಂತಹವರನ್ನು ಕೀಳಾಗಿ ಕಾಣುವುದಿಲ್ಲ. ಏಕೆಂದರೆ ಮನುಷ್ಯ ಪರಿಸರದ ಶಿಶು ಎಂದೇ ಅರಿತವರು ಹೇಳಿದ್ದಾರೆ. ಯಾವ ಹೆಣ್ಣಾಗಲೀ ಗಂಡಾಗಲೀ ತನಗೆ ಅವಕಾಶ ಮತ್ತು ಆರೈಕೆ ಸಿಕ್ಕಂತೆ ಬೆಳೆಯುತ್ತಾನೆ/ಳೆ.

ನಮ್ಮ ಪತ್ರ ಯಾರೂ ಹೊಸೆದಿರುವ ಕತೆಯಲ್ಲ ಎಂದು ಶ್ರೀ ಸೋಮಣ್ಣನವರಿಗೆ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ. ಇಂತಹ ಹೊಸೆಯುವ ಕೆಲಸಗಳಲ್ಲಿ ಪರಿಣತಿ ಹೊಂದಿರುವುದು ಬಿಜೆಪಿ ಮತ್ತು ಅದರ ಪರಿವಾರವೇ ಹೊರತು ನಾವಲ್ಲ. ನಾವು ಇದರಿಂದ ಕುರ್ಚಿ ಏರಬೇಕಿಲ್ಲ. ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಇಲ್ಲವೇ ಕಾಂಗ್ರೆಸ್‌ನವರ ಅಥವಾ ಇನ್ಯಾರದ್ದೇ ಕತೆ ಪುರಾಣಗಳ ಅಗತ್ಯ ನಮ್ಮ ಯಾವ ಹೋರಾಟಕ್ಕೂ ಇಲ್ಲ, ನಾವು ಅದನ್ನು ಆಲಿಸುವವರೂ ಅಲ್ಲ. ಧರ್ಮಸ್ಥಳದಲ್ಲಿ ನಡೆದಿರುವ ಹೆಣ್ಣುಮಕ್ಕಳ ಅಸಹಜ ಸಾವುಗಳ ವಿಷಯದಲ್ಲಿ ಇಷ್ಟೂ ದಶಕಗಳ ಕಾಲ ಕಾಂಗ್ರೆಸ್, ಜೆಡಿ(ಎಸ್), ಬಿಜೆಪಿ, ಮೈತ್ರಿಕೂಟದ ಸರ್ಕಾರಗಳ ಹೀಗೆ ಎಲ್ಲರ ಕತೆಗಳೂ ಒಂದು ಪುರಾಣವಾಗುವಷ್ಟು ಬೆಳೆದಿದ್ದು, ಶ್ರೀ ಸೋಮಣ್ಣನವರು ಬಹುತೇಕ ಈ ಎಲ್ಲ ಸರ್ಕಾರಗಳಲ್ಲೂ ಪಾಲುದಾರರೇ ಆಗಿದ್ದರು ಎನ್ನುವ ಸವಿನೆನಪನ್ನು ಅವರ ಮುಂದಿಡುತ್ತಿದ್ದೇವೆ! ಆದರೆ ನಾವು ಮಹಿಳೆಯರು ಅಂದಿನಿಂದಲೂ ಇಂದಿನವರೆಗೂ, ಮುಂದೆಯೂ ಒಂದೇ ಕಡೇ, ಅಂದರೆ ನ್ಯಾಯದ ಪರವಾಗಿಯೇ ಇರುತ್ತೇವೆ ಎಂದು ಯಾವ ಹೊತ್ತಿನಲ್ಲಿ ಬೇಕಾದರೂ ಎದೆತಟ್ಟಿ ಹೇಳುತ್ತೇವೆ. ಅಧಿಕಾರದಲ್ಲಿ ಯಾರೇ ಇರಲಿ, ನಾವು ಸಂತ್ರಸ್ತ ಮಹಿಳೆಯರ ಪರವಾಗಿ ನ್ಯಾಯಕ್ಕಾಗಿ ಆಗ್ರಹಿಸಲು ಬದ್ಧರಾಗಿರುತ್ತೇವೆ. ಕಾಂಗ್ರೆಸ್‌ನ ಒಳ ರಾಜಕೀಯದಲ್ಲಿ ಪ್ರವೇಶಿಸುವ ಅವಶ್ಯಕತೆ ನಮಗಿಲ್ಲ. ಅದು ಶ್ರೀ ಸೋಮಣ್ಣನವರ ಪಕ್ಷದವರ ಚಾಳಿ ಎನ್ನುವುದು ಜಗಜ್ಜಾಹೀರಾಗಿರುವ ಸಂಗತಿ.

ಶ್ರೀಮತಿ ಸೋನಿಯಾ ಗಾಂಧಿಯವರ ಮತ್ತು ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತು ತುಮಕೂರಿನ ಸಂಸದರು ಆಡಿರುವ ಮಾತೂ ಕೂಡ ಅಪ್ರಸ್ತುತವಾಗಿದ್ದು, ಅದು ಅವರೊಳಗಿನ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಸೋಮಣ್ಣನವರ ಕುರ್ಚಿಯ ದಾಹ ಈಗ ಅವರನ್ನು ಬಿಜೆಪಿಯಲ್ಲಿ ನೆಲೆಗೊಳ್ಳುವಂತೆ ಮಾಡಿದೆ. ಅವರು ಧರ್ಮ ಮತ್ತು ಪಕ್ಷ ರಾಜಕಾರಣ ಮಾಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಮಹಿಳಾ-ವಿರೋಧಿ ಹೇಳಿಕೆ ನೀಡಿರುವುದಕ್ಕೆ, ಬಿಜೆಪಿಯ ಸೈದ್ಧಾಂತಿಕ ಮೂಲವಾದ ಆರ್‌ ಎಸ್‌ ಎಸ್ ಅಗಾಧ ನಂಬಿಕೆ ಇಟ್ಟಿರುವಂತಹ ಮನುಸ್ಮೃತಿಯೊಳಗೆ ಹೆಣ್ಣಿಗೆ ಕಲ್ಪಿಸಲಾಗಿರುವ ಹೀನಾತಿಹೀನ ಸ್ಥಾನಮಾನವೇ ಕಾರಣವಾಗಿದೆ.

ನಮ್ಮಂತವರಿಗೆ ಈ ಒಂದು ಹೇಳಿಕೆಯೇ ರೊಚ್ಚಿಗೆಬ್ಬಿಸಿದೆ ಎಂದಾಗ, ದಿನನಿತ್ಯ ಇಂತಹ ಎಷ್ಟೋ ಅವಮಾನಗಳನ್ನೇ ಉಂಡು ಮಲಗುವ ಬಿಜೆಪಿ-ಸಂಘ ಪರಿವಾರದ ಮಹಿಳೆಯರು ತಮ್ಮ ಸ್ವಾಭಿಮಾನವನ್ನು ಬಿಟ್ಟು ಹೇಗೆ ಜೀವಿಸುತ್ತಿದ್ದಾರೋ ಏನೋ? ಮಾತೆತ್ತಿದರೆ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” (ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಪ್ರಸನ್ನರಾಗುತ್ತಾರೆ.) ಎಂಬ ಶ್ಲೋಕ ಜಪಿಸುವ ಬಿಜೆಪಿ ಪರಿವಾರದವರು (ಗಂಡಸರು ಮತ್ತು ಹೆಂಗಸರು), ಧರ್ಮಸ್ಥಳದಲ್ಲಿ ಕಣ್ಣಿಗೆ ರಾಚುವಂತೆಯೇ ಅಷ್ಟೆಲ್ಲಾ ಹೆಣ್ಣುಮಕ್ಕಳ ಅತ್ಯಾಚಾರ-ಕೊಲೆಗಳು ನಡೆದಿದ್ದರೂ ಮಾನವತೆಯನ್ನು ಕಳೆದುಕೊಂಡು ಬಾಯಿ ಮುಚ್ಚಿಕೊಂಡು ಹೇಗೆ ಕುಳಿತಿದ್ದಾರೋ? ಅದಕ್ಕೂ ಮಿಗಿಲಾಗಿ ಆರೋಪಿಗಳ ಪರವಾಗೇ ಹೇಗೆ ನಿರಂತರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೋ!? ಆ ದೇವತೆಗಳೇ ಉತ್ತರಿಸಬೇಕು! ಓಹ್! ಈಗ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲವಾದ್ದರಿಂದ ಆ ದೇವತೆಗಳೂ ಇರಲಿಕ್ಕಿಲ್ಲ…!!

ಜ್ಯೋತಿ ಎ. ರಾಜ್ಯ ಅಧ್ಯಕ್ಷೆ,

ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವಿಮೆನ್ (NFIW)

More articles

Latest article