ಪುರುಷಪ್ರಧಾನ ಸಮಾಜದ ಅಬ್ಬರದ ಪ್ರಚಾರದ ಮರೆಯಲ್ಲಿಯೇ ಕಳೆದು ಹೋದ ಒಬ್ಬ ಅಪ್ರತಿಮ ಸಾಧಕಿಯೆಂದರೆ ವಿಜ್ಞಾನಿ ಡಾ. ಬಿಭಾಚೌಧುರಿ. ಭೌತಶಾಸ್ತ್ರದಲ್ಲಿ ಪಿಹೆಚ್ಡಿಮಾಡಿದ ಪ್ರಥಮ ಭಾರತೀಯ ಮಹಿಳೆ ಇವರು.ಮರೆತು ಹೋದ ಈ ಮಹಿಳಾ ವಿಜ್ಞಾನಿಯ ಕೊಡುಗೆಗಳನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಪರಿಶೀಲಿಸಿದ್ದಾರೆ ತುಮಕೂರು ವಿ.ವಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ.
ನಮ್ಮ ದೇಶದ ಇತಿಹಾಸದಲ್ಲಿ ತಮ್ಮ ಸ್ವಯಂ ಪ್ರತಿಭೆ, ಶ್ರಮ, ತ್ಯಾಗ, ಧೈರ್ಯ ಮತ್ತು ಇಚ್ಚಾಶಕ್ತಿಯ ಬಲದಿಂದ ಸಾಧನೆ ಮಾಡಿದ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೂ, ನಾವಿನ್ನೂ ಕೂಡ ಕೆಲವು ಸಾಧಕರನ್ನು ಮಾತ್ರ ಗುರುತಿಸಿದ್ದೇವೆ. ಉಳಿದವರು ಪುರುಷ ಪ್ರಧಾನ ಸಮಾಜದ ಅಬ್ಬರದ ಪ್ರಚಾರದ ಮರೆಯಲ್ಲಿಯೇ ಕಳೆದುಹೋಗಿದ್ದಾರೆ. ಇಂತಹ ಒಬ್ಬ ಅಪ್ರತಿಮ ಸಾಧಕಿಯೆಂದರೆ ವಿಜ್ಞಾನಿ ಡಾ. ಬಿಭಾ ಚೌಧುರಿ. ಅವರು ತಮ್ಮ ಸಾಧನೆಯನ್ನು ಯಾವುದೇ ಪ್ರಚಾರದ ಹಂಗಿಲ್ಲದೆ, ಅಹಂ ಇಲ್ಲದೆ ಮೌನವಾಗಿ ಮಾಡಿದ್ದರಿಂದ ಅವರ ಪರಿಚಯ ಹೆಚ್ಚಿನ ಭಾರತೀಯರಿಗೆ ಇಲ್ಲವೆನ್ನಬಹುದು. ಅವರು ಭೌತಶಾಸ್ತ್ರದಲ್ಲಿ ಪಿಹೆಚ್ ಡಿ ಮಾಡಿದ ಪ್ರಥಮ ಭಾರತೀಯ ಮಹಿಳೆ. ಅವರ ಸಂಶೋಧನೆಗೆ ಬೇಕಾದ ಸೌಕರ್ಯಗಳು ಆಗ ಭಾರತದಲ್ಲಿ ಲಭ್ಯವಿಲ್ಲದ್ದರಿಂದ, ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ತನ್ನ ಡಾಕ್ಟರೇಟ್ ಅಧ್ಯಯನ ಮಾಡಲೆಂದು ಅಲ್ಲಿಗೆ ತೆರಳಿದರು. ಅಲ್ಲಿ ಅವರು ಕಾಸ್ಮಿಕ್ ಕಿರಣಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದರು.
1913 ರಲ್ಲಿ ಕೋಲ್ಕತ್ತಾದ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಬಿಭಾ ಅವರ ತಂದೆ ವೈದ್ಯರಾಗಿದ್ದರು. ತಾಯಿ ಬ್ರಹ್ಮ ಸಮಾಜದ ಅನುಯಾಯಿಯಾಗಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ರಾಜಬಜಾರ್ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದ ಬಿಭಾ, ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಿದ ಪ್ರಥಮ ಮಹಿಳೆ ಎನಿಸಿಕೊಂಡರು. ನಂತರ, ದೇಬೇಂದ್ರ ಮೋಹನ್ ಬೋಸ್ ಅವರ ಸಂಶೋಧನಾ ಕೇಂದ್ರ ಸೇರಿಕೊಂಡ ಬಿಭಾ, ಬೋಸ್ ಅವರ ಮಾರ್ಗದರ್ಶನದಲ್ಲಿ ತನ್ನ ಅಧ್ಯಯನ ಮುಂದುವರಿಸಿದರು. ಅವರಿಬ್ಬರೂ ಜೊತೆಯಾಗಿ ‘ಪೈ-ಮೆಸಾನ್’ ಕುರಿತಾದ ಆರಂಭಿಕ ಪ್ರಾಯೋಗಿಕ ಪುರಾವೆಗಳನ್ನು ಒದಗಿಸಿದ ಸಂಶೋಧನೆಯನ್ನು ನಡೆಸಿದರು. ಇದನ್ನು ‘ಪಿಯಾನ್’ ಎಂದು ಈಗ ಕರೆಯಲಾಗುತ್ತಿದೆ. ಇದು ಪರಮಾಣು ಶಕ್ತಿಯನ್ನು ಅರ್ಥಮಾಡಿಕೊಳ್ಳಲು ಬೇಕಾದ ನಿರ್ಣಾಯಕ ಕಣವಾಗಿದೆ. ವಿಷಾದವೆಂದರೆ, ಈ ಕಣದ ದೃಢೀಕರಣವನ್ನು ನೊಬೆಲ್ ಪ್ರಶಸ್ತಿ ಪಡೆದ ಸೆಸಿಲ್ ಪೊವೆಲ್ ಅವರ ಅಧ್ಯಯನದೊಂದಿಗೆ ಸಂಯೋಜಿಸಲಾಯಿತು. ಹೀಗೆ, ಬಿಭಾ ಅವರ ಸಂಶೋಧನೆಯು ಸಮಾನ ಬೌದ್ಧಿಕ ನೆಲೆಯಲ್ಲಿ ನಡೆದರೂ, ಅವರಿಗೆ ಪುರುಷ ವಿಜ್ಞಾನಿಗಳಿಗೆ ಸಿಕ್ಕಿದಷ್ಟು ಮನ್ನಣೆ ಸಿಗಲೇ ಇಲ್ಲ. ಇದರ ಬಗ್ಗೆ ಎಂದಿಗೂ ಅವರು ತಲೆಕೆಡಿಸಿಕೊಳ್ಳದೆ ತನ್ನ ಕೆಲಸದಲ್ಲಿ ತನ್ಮಯತೆ ಬೆಳೆಸಿಕೊಂಡರು.

ಬಿಭಾ, ತನಗೆ ಬೇಕಾದ ಸಂಶೋಧನಾ ಪರಿಕರಗಳು ಕೋಲ್ಕತ್ತಾದ ಪ್ರಯೋಗಾಲಯದಲ್ಲಿ ಲಭ್ಯವಿಲ್ಲದ್ದರಿಂದ, ಸಂಶೋಧನೆಗಾಗಿ ಲಂಡನ್ ಗೆ ತೆರಳಬೇಕಾಯಿತು. ಅಲ್ಲಿ, ತನ್ನ ಡಾಕ್ಟರೇಟ್ ಅಧ್ಯಯನಕ್ಕಾಗಿ ಪ್ಯಾಟ್ರಿಕ್ ಬ್ಲ್ಯಾಕೆಟ್ ಪ್ರಯೋಗಾಲಯಕ್ಕೆ ಸೇರಿಕೊಂಡು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾಸ್ಮಿಕ್ ಕಿರಣಗಳ ಮೇಲೆ ಅಧ್ಯಯನ ಮಾಡಲು ಪ್ರಾರಂಭಿಸಿದರು. ಹೀಗೆ, ಅವರ ಡಾಕ್ಟರೇಟ್ ಸಂಶೋಧನೆ ಕೇವಲ ವೈಯಕ್ತಿಕ ಮೈಲಿಗಲ್ಲು ಆಗದೆ, ಭಾರತದ ಮಹಿಳೆಯೊಬ್ಬರ ಗಮನಾರ್ಹ ಹೆಜ್ಜೆಗುರುತಾಗಿತ್ತು.
ತನ್ನ ಪಿಹೆಚ್ ಡಿ ಪದವಿ ನಂತರ ಭಾರತಕ್ಕೆ ಮರಳಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನಲ್ಲಿ ಬಿಭಾ ಎಂಟು ವರ್ಷಗಳ ಕಾಲ ಕೆಲಸ ಮಾಡಿದರು. ಆ ಸಮಯದಲ್ಲಿ ಅವರು ಅಮೆರಿಕಾದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಸಂಶೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ನಂತರ ಅವರು ಭೌತವಿಜ್ಞಾನ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದರು ಹಾಗೂ ನಮ್ಮ ರಾಜ್ಯದ ಕೋಲಾರ ಚಿನ್ನದ ಗಣಿ ಪ್ರಯೋಗಗಳಲ್ಲಿ ತನ್ನನ್ನು ತೊಡಗಿಸಿಕೊಂಡರು. ಆಮೇಲೆ ಅವರು ಕೋಲ್ಕತ್ತಾದ ಸಹಾ ಇನ್ಸ್ಟಿಟ್ಯೂಟ್ ನಲ್ಲಿ ಭೌತವಿಜ್ಞಾನದಲ್ಲಿ ಕೆಲಸ ಮಾಡಿದರು.
ಭಾರತದಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣ ಇನ್ನೂ ಚರ್ಚೆಯ ವಿಷಯವಾಗಿದ್ದ ಕಾಲದಲ್ಲಿ ಬಿಭಾ ಅವರ ಸಂಶೋಧನಾ ವೃತ್ತಿಜೀವನವು ಬಹುತೇಕ ಊಹಿಸಲಾಗದಂತಿತ್ತು. ಅವರು ಬದುಕಿದ್ದ ಇಪ್ಪತ್ತನೇ ಶತಮಾನದ ಆರಂಭದಲ್ಲಿ ಮಹಿಳೆಗೆ ಭೌತಶಾಸ್ತ್ರದಲ್ಲಿ ಅಥವಾ ಯಾವುದೇ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯಲು ಬುದ್ಧಿವಂತಿಕೆಗಿಂತ ಮಾನಸಿಕ ಸ್ಥೈರ್ಯದ ಅಗತ್ಯ ಹೆಚ್ಚಾಗಿತ್ತು. ಏಕೈಕ ಮಹಿಳಾ ವಿದ್ಯಾರ್ಥಿಯಾಗಿ ತರಗತಿಯಲ್ಲಿ, ಮತ್ತು ಪ್ರಯೋಗಶಾಲೆಯಲ್ಲಿ ಭಾಗವಹಿಸಬೇಕಾಗಿತ್ತು. ಮಹಿಳೆಯ ಉಪಸ್ಥಿತಿಯನ್ನು ಅನುಮಾನದಿಂದ ನೋಡುವ ಸ್ಥಳಗಳಲ್ಲಿ ತನ್ನ ಬುದ್ಧಿವಂತಿಕೆಯನ್ನು ಸಾಬೀತುಪಡಿಸಬೇಕಾಗಿತ್ತು. ಮೇರಿ ಕ್ಯೂರಿ ಒಮ್ಮೆ ಹೇಳಿದಂತೆ, “ಜೀವನದಲ್ಲಿ ಯಾವುದಕ್ಕೂ ಭಯಪಡಬೇಕಾಗಿಲ್ಲ, ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಮಾತ್ರ ಮುಖ್ಯ.” ಈ ಮಾತು ಬಿಭಾ ಚೌಧುರಿಯ ಜೀವನವನ್ನು ಚೆನ್ನಾಗಿ ವಿವರಿಸುತ್ತದೆ.
ಬಿಭಾ ಅವರ ಸಂಶೋಧನೆಯು ಅವರನ್ನು ಕಾಸ್ಮಿಕ್ ಕಿರಣ ಭೌತಶಾಸ್ತ್ರದ ಕ್ಷೇತ್ರಕ್ಕೆ ಕರೆದೊಯ್ದಿತು. ಇದು, ಭೂಮಿಯನ್ನು ತಲುಪುವ ಮೊದಲು ಗ್ಯಾಲಕ್ಸಿಗಳಾದ್ಯಂತ ಪ್ರಯಾಣಿಸುವ ಪರಮಾಣು ಕಣಗಳ ಅಧ್ಯಯನ. ಈ ಪ್ರಕಾರ, ತನ್ನ ಸಮಕಾಲೀನ ಸಮಾಜವು ತರಗತಿ ಕೋಣೆಗಳಲ್ಲಿ ಮಹಿಳೆಯರ ಸ್ಥಾನದ ಬಗ್ಗೆ ಚರ್ಚಿಸುತ್ತಿದ್ದ ಸಮಯದಲ್ಲಿ, ಬಿಭಾ ಬ್ರಹ್ಮಾಂಡದ ಕಣಗಳನ್ನು ಅಧ್ಯಯನ ಮಾಡುತ್ತಿದ್ದರು.
ಖಗೋಳ ವಿಜ್ಞಾನಿ ಮೇಘನಾದ್ ಸಹಾ ಅವರ ಮಾರ್ಗದರ್ಶನದಲ್ಲಿ, ಅವರು ಪರಮಾಣು ಕಣಗಳ ಮಸುಕಾದ ಗುರುತುಗಳನ್ನು ಪತ್ತೆಹಚ್ಚಲು ಛಾಯಾಗ್ರಹಣದ ಫಲಕಗಳೊಂದಿಗೆ ಕೆಲಸ ಮಾಡಿದರು. ಯಾವುದೇ ಡಿಜಿಟಲ್ ಉಪಕರಣಗಳು ಲಭ್ಯವಿಲ್ಲದ ಕಾಲದಲ್ಲಿ, ತನ್ನ ತಾಳ್ಮೆ ಮತ್ತು ನಿರಂತರ ಏಕಾಗ್ರತೆಯಿಂದ ಸೂಕ್ಷ್ಮದರ್ಶಕಗಳೊಂದಿಗೆ ಕಾರ್ಯ ನಿರ್ವಹಿಸಿದರು. ಇದು ಅತ್ಯಂತ ಶ್ರಮದಾಯಕ ಕೆಲಸವಾಗಿತ್ತು, ಬುದ್ಧಿಶಕ್ತಿ ಮಾತ್ರವಲ್ಲ, ಕಾಯಕದ ಶ್ರದ್ಧೆ ಅಪೇಕ್ಷಿಸುವ ಕೆಲಸವಾಗಿತ್ತು.
ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹೋಮಿ ಜೆ. ಭಾಭಾ ಮತ್ತು ಸಿ.ವಿ. ರಾಮನ್ ಅವರಂತಹ ವಿಜ್ಞಾನಿಗಳು ವೈಜ್ಞಾನಿಕ ಸಂಸ್ಥೆಗಳನ್ನು ರೂಪಿಸಿ ಯುವ ಸಂಶೋಧಕರಿಗೆ ಸ್ಪೂರ್ತಿದಾಯಕರಾಗಿದ್ದರು. ಆ ಕಾಲದಲ್ಲಿ ಮಹಿಳಾ ವಿಜ್ಞಾನಿಗಳ ಸಂಖ್ಯೆ ಬೆರಳೆಣಿಕೆಯಷ್ಟು. ಈ ನಿಟ್ಟಿನಲ್ಲಿ, ಬಿಭಾ ಅವರಂತಹ ಮಹಿಳಾ ಸಾಧಕರ ಶ್ರಮವು ಮುಂದಿನ ಪೀಳಿಗೆಯ ಮಹಿಳೆಯರಿಗೆ ಅಡಿಪಾಯವಾಗಿತ್ತು. ವಿಷಾದವೆಂದರೆ, ಅವರು ಬಹುತೇಕ ಮರೆಯಲ್ಲಿಯೇ ಉಳಿದು ಹೋದರು. ಹೀಗೆ, ಮರೆತು ಹೋದ ಮಹಿಳಾ ವಿಜ್ಞಾನಿಗಳ ಕೊಡುಗೆಗಳನ್ನು ಸಾರ್ವಜನಿಕವಾಗಿ ಮರುಪರಿಶೀಲಿಸಲು ಪ್ರಾರಂಭಿಸುವ ಬಹಳ ಹಿಂದೆಯೇ ಬಿಭಾ 1991 ರಲ್ಲಿ ನಿಧನರಾದರು. ತನ್ನ ಕೊನೆಯ ದಿನಗಳವರೆಗೂ ನಿರಂತರ ಸಂಶೋಧನೆಯಲ್ಲಿಯೇ ಜೀವನ ಕಳೆದ ಬಿಭಾ ಅವಿವಾಹಿತರಾಗಿಯೇ ಉಳಿದರು.
ಬಿಭಾ ಅವರ ವೈಜ್ಞಾನಿಕ ಸಾಧನೆಗಳು ಜನರಿಗೆ ಗೋಚರವಾಗದೆ ಇರಲು ಮುಖ್ಯ ಕಾರಣಗಳೇನು ಎಂದು ಪರಿಶೀಲಿಸಿದರೆ, ಸಾಮಾನ್ಯವಾಗಿ ವೈಜ್ಞಾನಿಕ ಮನ್ನಣೆಯು ಆವಿಷ್ಕಾರದಿಂದ ಮಾತ್ರವಲ್ಲ, ವಿಜ್ಞಾನಿಯ ಭೌಗೋಳಿಕ ಹಿನ್ನೆಲೆಯಿಂದಲೂ ರೂಪುಗೊಳ್ಳುವ ಕಾಲ ಅದಾಗಿತ್ತು. ವಸಾಹತುಶಾಹಿ ಆಡಳಿತಗಳು ಪಾಶ್ಚಿಮಾತ್ಯ ಸಂಸ್ಥೆಗಳಿಗೆ ವಿಶೇಷ ಸವಲತ್ತು ನೀಡುತ್ತಿದ್ದವು. ಇವುಗಳಿಗೆ ಹೋಲಿಸಿದರೆ, ಭಾರತೀಯ ಪ್ರಯೋಗಾಲಯಗಳು ಕಡಿಮೆ ಸಂಪನ್ಮೂಲಗಳನ್ನು ಹೊಂದಿದ್ದವು. ಅದಕ್ಕಿಂತಲೂ ವಿಶೇಷವಾಗಿ, ಮಹಿಳೆಯರ ಬೌದ್ಧಿಕ ಶ್ರಮವು ಹೆಚ್ಚಾಗಿ ಪುರುಷ ಸಹೋದ್ಯೋಗಿಗಳಿಂದ ಮರೆಮಾಡಲ್ಪಡುತ್ತಿತ್ತು. ಮನುಷ್ಯನ ಇತಿಹಾಸದಲ್ಲಿ, ಪುರುಷ-ಮಹಿಳೆಯ ಸಹಯೋಗದ ಕೊಡುಗೆಯಲ್ಲೂ ಸಹ ಪುರುಷ ಪ್ರತಿಭೆಗಳಿಗೆ ಮಾತ್ರ ಆದ್ಯತೆ ನೀಡಿರುವುದನ್ನು ಮತ್ತು ಮಹಿಳೆಯರ ಸಾಧನೆಯನ್ನು ಗೌಣವಾಗಿಸಿರುವುದನ್ನು ಗಮನಿಸಬಹುದು. ಇಂತಹ ಸಂದರ್ಭದಲ್ಲಿ ಮಹಿಳೆ ಪ್ರದರ್ಶಿಸುವ ಮೌನವು ಅವಳ ಸಹಿಷ್ಣುತೆಯ ದ್ಯೋತಕವಾಗಿರುತ್ತಿತ್ತು.
ಇಂದು, ಭಾರತವು ಮಹಿಳೆಯರ ಸಾಧನೆಯನ್ನು ಹೆಮ್ಮೆಯಿಂದ ಸಂಭ್ರಮಿಸುತ್ತಿದೆ. ದೇಶದ ಗ್ರಾಮೀಣ ಶಾಲೆಗಳ ಹುಡುಗಿಯರು ಬಾಹ್ಯಾಕಾಶ ಯಾತ್ರೆಗಳ ಕನಸು ಕಾಣುತ್ತಾರೆ. ವಿಶ್ವವಿದ್ಯಾಲಯಗಳ ಭೌತಶಾಸ್ತ್ರ ತರಗತಿಗಳಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಮಹಿಳೆಯರಿದ್ದಾರೆ. ಆದರೂ ಮಹಿಳೆಯರ ಅನುಮಾನಗಳು ಇನ್ನೂ ಹಾಗೆ ಉಳಿದಿವೆ: “ನನ್ನಿಂದ ಇದು ಸಾಧ್ಯವೇ?”, “ನನ್ನ ಕೆಲಸಕ್ಕೆ ಮಾನ್ಯತೆ ಸಿಗುತ್ತದೆಯೇ?”

ಈ ಪ್ರಶ್ನೆಗಳಿಗೆ ಬಿಭಾ ಚೌಧುರಿಯ ಜೀವನದಿಂದ ಸಿಗುವ ಉತ್ತರವೇನೆಂದರೆ, ನಮಗೆ ಅವಕಾಶಗಳನ್ನು ಯಾರೂ ನೀಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು. ಕಲ್ಪನಾ ಚಾವ್ಲಾ ಒಮ್ಮೆ ಹೇಳಿದಂತೆ, “ನಮ್ಮ ಕನಸುಗಳಿಂದ ಮೂಡುವ ಸಾಧನೆಯ ಹಾದಿಯನ್ನು ನಾವೇ ಕಂಡುಕೊಳ್ಳಬೇಕು.” ಸಾಮಾನ್ಯವಾಗಿ ಈ ಮಾರ್ಗವು ದುರ್ಗಮವಾಗಿರುತ್ತದೆ. ಅದು ನಮ್ಮಿಂದ ಮೆಚ್ಚುಗೆಯ ಅಪೇಕ್ಷೆಯಿಲ್ಲದ ನಿರಂತರ ಪ್ರಯತ್ನವನ್ನು ಬಯಸುತ್ತದೆ. ಬಿಭಾ ಚೌಧುರಿ, ತಾನು ಬಯಸಿದ ದಿಕ್ಕಿನಲ್ಲಿ ತಾನೇ ಹಾದಿ ಮಾಡಿಕೊಂಡು ಮುನ್ನೆಡೆದರು. ಇಂದು ವಿಜ್ಞಾನ ಕ್ಷೇತ್ರದಲ್ಲಿ ಅಳುಕಿನಿಂದ ಮುಂದುವರಿಯುವ ಪ್ರತಿ ಮಹಿಳೆ ಅರಿತುಕೊಳ್ಳಬೇಕಾದುದು, ಬುದ್ಧಿಶಕ್ತಿಗೆ ಲಿಂಗಬೇಧವಿಲ್ಲ.
ದೇಶದ ವಿಜ್ಞಾನ ಕ್ಷೇತ್ರವು ಕೆಲವು ಪ್ರಸಿದ್ಧ ಹೆಸರುಗಳಿಂದ ಮಾತ್ರ ನಿರ್ಮಿಸಲ್ಪಟ್ಟಿಲ್ಲ. ಅದರಲ್ಲಿ ನಿರಂತರ ಪ್ರಯತ್ನ ಮಾಡುತ್ತಲೇ ಬಂದಿರುವ ಅಸಂಖ್ಯಾತ ಸಂಶೋಧಕರು ಇದ್ದಾರೆ. ಮಹಿಳೆಯರು ಕೂಡ ಇದ್ದಾರೆ. ಸಮಾಜವು ಅವರನ್ನು ಅಡುಗೆಮನೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಸೂಚಿಸಿದಾಗ, ಅವರು ಪ್ರಯೋಗಾಲಯಗಳನ್ನು ಪ್ರವೇಶಿಸುವ ಧೈರ್ಯ ಮಾಡಿ ಜ್ಞಾನಲೋಕಕ್ಕೆ ಕೊಡುಗೆ ನೀಡಿದ್ದಾರೆ. ಬಿಭಾ ಅವರ ಕುರಿತು ಹೇಳುವುದಾದರೆ, ಗ್ಯಾಲಕ್ಸಿಗಳನ್ನು ದಾಟುವ ಕಣಗಳನ್ನು ಅಧ್ಯಯನ ಮಾಡಿದ ಮಹಿಳೆ, ವಿಜ್ಞಾನ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಪಡೆಯಲು ಸಾಮಾಜಿಕ ಗಡಿಗಳನ್ನು ದಾಟಬೇಕಾಗಿತ್ತು ಎಂಬುದು ವಿಷಾದನೀಯ.
ಕೊನೆಯದಾಗಿ, ಇಂದು ಮಹಿಳೆಯರ ಸಬಲೀಕರಣಗೊಳಿಸುವ ಬಗ್ಗೆ ನಾವು ಮಾತನಾಡುವಾಗ, ಹೆಣ್ಣುಮಕ್ಕಳನ್ನು ನಿರ್ಬಂಧಗಳನ್ನು ಮೀರಿ ಕನಸು ಕಾಣುವಂತೆ ಪ್ರೋತ್ಸಾಹಿಸುವಾಗ, ನಾವು ಬಿಭಾ ಚೌಧುರಿಯಂತಹ ಮಹಿಳಾ ಸಾಧಕರು ಹಾಕಿದ ಭದ್ರ ಅಡಿಪಾಯದ ಮೇಲೆ ನಿಲ್ಲುತ್ತೇವೆ. ಅದಕ್ಕಾಗಿ, ನಾವಿಂದು ನಮ್ಮ ಇತಿಹಾಸ ಅಧ್ಯಯನದಲ್ಲಿ ಮತ್ತು ಪಠ್ಯಪುಸ್ತಕಗಳಲ್ಲಿ ಅವರನ್ನು ಮತ್ತು ಇತರ ವಿಶಿಷ್ಟ ಮಹಿಳಾ ಸಾಧಕರ ಹೆಸರನ್ನು ಬೆಳಕಿಗೆ ತರುವ ಮೂಲಕ, ನಾವು ಒಬ್ಬ ಶ್ರೇಷ್ಠ ವಿಜ್ಞಾನಿಯನ್ನು ಗೌರವಿಸುವುದಕ್ಕಿಂತ ಹೆಚ್ಚಿನದನ್ನು ಮಾಡುತ್ತೇವೆ. ಈ ಮೂಲಕ ಭಾರತೀಯ ವಿಜ್ಞಾನದ ಇತಿಹಾಸದಲ್ಲಿ ಲಿಂಗ ಸಮತೋಲನವನ್ನು ಸ್ಥಾಪಿಸುತ್ತೇವೆ.
ಡಾ. ಜ್ಯೋತಿ
ಸಹಾಯಕ ಪ್ರಾಧ್ಯಾಪಕರು,ಇಂಗ್ಲಿಷ್ ವಿಭಾಗ, ತುಮಕೂರು ವಿ ವಿ
ಇದನ್ನೂ ಓದಿ- ನಿರ್ಭೀತೆ ನ್ಯಾಯವಾದಿ ತೀಸ್ತಾ ಸೆಟಲ್ವಾಡ್


