ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲೆ ಮಾಡಬೇಕು ಎಂದು ನಾಲಿಗೆ ಹರಿಬಿಟ್ಟು ಮಾತಾಡಿದ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಹೆಚ್ಚಾಗುತ್ತಿದ್ದು, ಇಂದು ಈಶ್ವರಪ್ಪ ಬೆಂಗಳೂರು ನಿವಾಸಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬೆಂಗಳೂರಿನ ವಸಂತನಗರದಲ್ಲಿರುವ ಕೆ.ಎಸ್.ಈಶ್ವರಪ್ಪ ನಿವಾಸದ ಮುಂದೆ ನೆರೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು. ರಾಮಪುರ ನಾಗೇಶ್ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನಾನಿರತರನ್ನು ವಶಕ್ಕೆ ಪಡೆದ ಪೊಲೀಸರು ಅಲ್ಲಿಂದ ಹೊರಗೆ ಕರೆದೊಯ್ದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತು ಧ್ವನಿ ಎತ್ತಿದ್ದ ಸಂಸದ ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲೆ ಮಾಡಬೇಕು ಎಂದು ಕೆ.ಎಸ್.ಈಶ್ವರಪ್ಪ ಕರೆ ನೀಡಿದ್ದರು. ಕೊಲೆಗೆ ಪ್ರಚೋದನೆ ನೀಡುವ ಈ ಹೇಳಿಕೆ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.
ಈಶ್ವರಪ್ಪ ಅನಾಗರಿಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಸದ ಡಿ.ಕೆ.ಸುರೇಶ್, ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು. ಬಡವರ ಮಕ್ಕಳನ್ನ ಯಾಕೆ ಬಾವಿಗೆ ತಳ್ಳಬೇಕು..? ಬಡವರ ಮಕ್ಕಳನ್ನ ಯಾಕೆ ಎಬ್ಬಿಸ್ತೀರಾ..? ಪಕ್ಷದಲ್ಲಿ ಅವರನ್ನ ಮೂಲೆ ಗುಂಪು ಮಾಡಿದ್ದಾರೆ. ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ. ಒಂದು ವಾರದಲ್ಲಿ ಅವರಿಗೆ ಸಮಯ ನೀಡ್ತೇನೆ. ಕೆ.ಎಸ್. ಈಶ್ವರಪ್ಪಗೆ ನಾನೇ ಸಮಯ ಕೊಡ್ತೀನಿ. ಅವರೇ ಗುಂಡು ಹೊಡೆಯಲಿ ಎಂದು ಸವಾಲು ಒಡ್ಡಿದ್ದರು.
ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಬೇಕು ಎಂಬ ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಆದಿಯಾಗಿ ಕಾಂಗ್ರೆಸ್ ಮುಖಂಡರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರಲ್ಲದೆ, ಇದು ಆರ್ ಎಸ್ ಎಸ್, ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಈಶ್ವರಪ್ಪ ವಿರುದ್ಧ ಈಗಾಗಲೇ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಎನ್ ಎಸ್ ಯುಐ ಕಾರ್ಯಕರ್ತರು ದೂರು ಸಲ್ಲಿಸಿದ್ದು, ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ಈ ಬಗೆಯ ಹೇಳಿಕೆ ನೀಡುವುದು ಇದೇ ಮೊದಲೇನೂ ಅಲ್ಲ. ಪತ್ರಕರ್ತೆಯೊಬ್ಬರು ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಪ್ರಶ್ನಿಸಿದಾಗ, ಈಗ ನಿನ್ನನ್ನು ಯಾರಾದರೂ ಅತ್ಯಾಚಾರ ಮಾಡಿದರೆ ನಾನೇನು ಮಾಡಲು ಸಾಧ್ಯ ಎಂದು ಹೇಳಿ ವಿವಾದ ಎಬ್ಬಿಸಿದ್ದರು.
ಹಿಂದೆ ತೀರ್ಥಹಳ್ಳಿಯ ನಂದಿತಾ ಕೊಲೆ ಪ್ರಕರಣದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ಅವರಿಗೆ ತಮ್ಮ ಮಗಳ ಮೇಲೆ ಅತ್ಯಾಚಾರ ಆದರೂ ಜಾಗೃತಿ ಬರುವುದಿಲ್ಲವೇನೋ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿಕೆ ನೀಡಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದರು.