ಒಕ್ಕೂಟ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹದ ಹಂಚಿಕೆಯಲ್ಲಿ  ದಕ್ಷಿಣ ರಾಜ್ಯಗಳಿಗೆ ಅನ್ಯಾಯವೇಕೆ ?

Most read

‌ThePrint ನಲ್ಲಿ ನೀಲಕಂಠನ್‌ ಆರ್‌ ಎಸ್‌ ಬರೆದ ಲೇಖನವನ್ನು ಪ್ರವೀಣ್‌ ಎಸ್‌ ಶೆಟ್ಟಿಯವರು ಕನ್ನಡಕ್ಕೆ ತಂದಿದ್ದಾರೆ. ಅವರು ಹೇಳುವಂತೆ ದಕ್ಷಿಣದ ರಾಜ್ಯಗಳು ಈಗ ಕಠಿಣ ಪರಿಸ್ಥಿತಿ ಎದುರಿಸುತ್ತಿವೆ. ಒಂದೆಡೆ ಅವರು ಸಂಸತ್ತಿನಲ್ಲಿ ತಮ್ಮ ಜನಪ್ರಾತಿನಿಧ್ಯವನ್ನು (ಸಂಸದರ ಸಂಖ್ಯೆಯನ್ನು) ತೀವ್ರ ಕಡಿಮೆಗೊಳಿಸಬಹುದಾದ ಜನಸಂಖ್ಯೆ ಆಧಾರಿತ “ಡಿಲಿಮಿಟೇಶನ್‌” ಬಗೆಗಿನ ವಿವಾದದಿಂದಾಗಿ ತಮ್ಮ ರಾಜಕೀಯ ಅಧಿಕಾರ ವ್ಯಾಪ್ತಿ ಮತ್ತು ಪ್ರಸ್ತುತತೆಯನ್ನು ಕಳೆದುಕೊಳ್ಳುವ ಭಯ ಎದುರಿಸುತ್ತಿವೆ.  ಮತ್ತೊಂದೆಡೆ, ಅವರು ಈಗಾಗಲೇ ತಮ್ಮ ತೆರಿಗೆ ಆದಾಯದ ಪಾಲನ್ನು ಭಾರೀ ಪ್ರಮಾಣದಲ್ಲಿ ಕೇಂದ್ರಕ್ಕೆ ಕಳೆದುಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಅವಾಸ್ತವ ತೆರಿಗೆ ಹಂಚಿಕೆಯ ಸಮಸ್ಯೆಯು ಇನ್ನೂ ಉಲ್ಬಣವಾಗಲಿದೆ.

ಭಾರತದ ರಾಜ್ಯ ಸರಕಾರಗಳು ಮತ್ತು ಒಕ್ಕೂಟ ಸರಕಾರದ ನಡುವಿನ ಸಂಬಂಧದ ವಿಷಯದಲ್ಲಿ ಕಳೆದ ವಾರಗಳಲ್ಲಿ ನಡೆದ ಘಟನೆಗಳು ದೇಶದಲ್ಲಿ ಸಂಚಲನ ಮೂಡಿಸಿವೆ.  ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ  ದಕ್ಷಿಣ ಭಾರತದ ಎಲ್ಲಾ  ರಾಜ್ಯಗಳ ಮುಖ್ಯಮಂತ್ರಿಗಳೂ ಸೇರಿ  ರಾಜ್ಯ ಮತ್ತು ಕೇಂದ್ರದ ನಡುವೆ ಹಣಕಾಸಿನ ಸಂಪನ್ಮೂಲ ಹಂಚಿಕೆಯ ಅಸಂಬದ್ಧತೆಯ ವಿರುದ್ಧ ದೆಹಲಿಯಲ್ಲಿ ಪ್ರತಿಭಟಿಸಿದರು.  ಹೀಗಾಗಿ ಹಣಕಾಸಿನ ಸಂಯುಕ್ತ ವ್ಯವಸ್ಥೆಯ ಕುರಿತು ಬಹುಕಾಲದಿಂದ ಬಾಕಿ ಉಳಿದಿದ್ದ ಚರ್ಚೆಯು ರಾಷ್ಟ್ರೀಯ ಮಟ್ಟದಲ್ಲಿ ಪ್ರಾರಂಭವಾಯಿತು. ಈಗಿನ ನಿಜವಾದ ಪ್ರಶ್ನೆಯೇನೆಂದರೆ ದಕ್ಷಿಣದ ರಾಜ್ಯಗಳು ಮಾತ್ರ ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಯಾಕೆ ಕೊರತೆ ಅನುಭವಿಸುತ್ತವೆ ಎಂಬುದು.

ನಮ್ಮ ಸಂವಿಧಾನ ಹೇಳುವಂತೆ ಭಾರತ ದೇಶವು ಹಲವು ರಾಜ್ಯಗಳ ಒಕ್ಕೂಟವಾಗಿದೆ.  ದೇಶದಲ್ಲಿ ಸಂಪನ್ಮೂಲ ಹಂಚಿಕೆಗೆ, ಅಧಿಕಾರ ಹಂಚಿಕೆಗೆ ಮತ್ತು ನೈಜ ಅಭಿವೃದ್ಧಿಗೆ, ರಾಜ್ಯವೇ ಸರಿಯಾದ ‘ಆಡಳಿತಾತ್ಮಕ ಘಟಕವಾಗಿದೆ’. ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಈ ಮೇಲಿನ ಅಂಶಗಳಿಗಾಗಿ ರಾಜ್ಯ-ರಾಜ್ಯಗಳ ನಡುವೆ ತುಲನಾತ್ಮಕ ಸಮತೋಲನವನ್ನು ಸಾಧಿಸುವುದು ಸ್ಥಿರ ಒಕ್ಕೂಟಕ್ಕೆ ಅಗತ್ಯವಾಗಿದೆ.  ವಿಪರ್ಯಾಸವೆಂದರೆ ಹಿಂದಿನ ಕೆಲ ವರ್ಷಗಳಿಂದ ರಾಜ್ಯ ಸರಕಾರಗಳ ಮತ್ತು ಒಕ್ಕೂಟ ಸರಕಾರದ ನಡುವಿನ ಸೌಹಾರ್ದತೆ ಕ್ಷೀಣಿಸುತ್ತಿದೆ.  ರಾಜ್ಯಗಳು ತಮ್ಮದೇ ತೆರಿಗೆ ಸಂಗ್ರಹದಲ್ಲಿ ನ್ಯಾಯಯುತ ಪಾಲು ಕೇಳುವುದು ಕೂಡಾ ದೇಶದ್ರೋಹ ಅನ್ನುವ ಮಟ್ಟಿಗೆ ಈಗ ಸಂಬಂಧಗಳು ಶಿಥಿಲಗೊಂಡಿವೆ.

ದಕ್ಷಿಣದ ರಾಜ್ಯಗಳು ಈಗ ಕಠಿಣ ಪರಿಸ್ಥಿತಿ ಎದುರಿಸುತ್ತಿವೆ.  ಒಂದೆಡೆ ಅವರು ಸಂಸತ್ತಿನಲ್ಲಿ ತಮ್ಮ ಜನಪ್ರಾತಿನಿಧ್ಯವನ್ನು (ಸಂಸದರ ಸಂಖ್ಯೆಯನ್ನು) ತೀವ್ರ ಕಡಿಮೆಗೊಳಿಸಬಹುದಾದ ಜನಸಂಖ್ಯೆ ಆಧಾರಿತ “ಡಿಲಿಮಿಟೇಶನ್‌” ಬಗೆಗಿನ ವಿವಾದದಿಂದಾಗಿ ತಮ್ಮ ರಾಜಕೀಯ ಅಧಿಕಾರ ವ್ಯಾಪ್ತಿ ಮತ್ತು ಪ್ರಸ್ತುತತೆಯನ್ನು ಕಳೆದುಕೊಳ್ಳುವ ಭಯ ಎದುರಿಸುತ್ತಿವೆ.  ಮತ್ತೊಂದೆಡೆ, ಅವರು ಈಗಾಗಲೇ ತಮ್ಮ ತೆರಿಗೆ ಆದಾಯದ ಪಾಲನ್ನು ಭಾರೀ ಪ್ರಮಾಣದಲ್ಲಿ ಕೇಂದ್ರಕ್ಕೆ ಕಳೆದುಕೊಳ್ಳುತ್ತಿದ್ದಾರೆ.  ಉದಾಹರಣೆಗೆ, ದಕ್ಷಿಣ ರಾಜ್ಯಗಳು ತಮ್ಮ ಜನಸಂಖ್ಯೆಯ ನಿಧಾನ ಗತಿಯ ಬೆಳವಣಿಗೆಯ ಕಾರಣದಿಂದಾಗಿ ಕೇಂದ್ರದ ಬೊಕ್ಕಸಕ್ಕೆ ತಾವು ನೀಡುವ ಕೊಡುಗೆಗಿಂತ ಬಹಳೇ ಕಡಿಮೆ ಮೊತ್ತವನ್ನು ವಾಪಸು ಪಡೆಯುತ್ತಿದ್ದಾರೆ. ಅಂದರೆ ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣದ ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಕೇಂದ್ರ ಸರಕಾರವು ಬಹುಮಾನ ಕೊಡುವ ಬದಲು ಶಿಕ್ಷೆ ವಿಧಿಸುತ್ತಿದೆ.

ಕೇಂದ್ರ ಮತ್ತ್ತುರಾಜ್ಯಗಳ ನಡುವಿನ ಕಾರ್ಯ-ಕರ್ತವ್ಯಗಳನ್ನು ಮೂರು ವಿಷಯಗಳಾಗಿ ವಿಂಗಡಿಸಲಾಗಿದೆ.

ಮೊದಲನೆಯದು ಕೇವಲ ರಾಜ್ಯಗಳ ಅಧಿಕಾರದ ಅಡಿಯಲ್ಲಿ ಬರುವ ವಿಷಯಗಳು,

ಎರಡನೆಯದು ಕೇವಲ ಕೇಂದ್ರ ಸರಕಾರದ ಅಧಿಕಾರದಡಿ ಬರುವ ವಿಷಯಗಳು ಮತ್ತು

ಮೂರನೆಯದು ಕೇಂದ್ರ ಮತ್ತು ರಾಜ್ಯ ಸರಕಾರ  ಈ ಎರಡರ ವ್ಯಾಪ್ತಿಯಲ್ಲೂ ಬರುವ “ಜಂಟಿ ಅಥವಾ ಸಮಾನಾಂತರ” ವಿಷಯ’ಗಳು. 

ರಾಜ್ಯದ ವಿಷಯಗಳಿಗೆ ಸ್ಪಷ್ಟವಾಗಿ ಸಂಬಂಧಿಸಿದ ನೀತಿ ನಿರ್ಧಾರಗಳ ವಿಷಯದಲ್ಲಿಯೂ ಈಗೀಗ ಕೇಂದ್ರ ಸರಕಾರವು ಮೂಗು ತೂರಿಸಿ ರಾಜ್ಯಗಳ ಅಧಿಕಾರವನ್ನು ಹೆಚ್ಚು ಹೆಚ್ಚು ಆಕ್ರಮಿಸಿಕೊಳ್ಳುತಿರುವ ಈ ಸಂದರ್ಭದಲ್ಲಿ ರಾಜ್ಯಗಳ ವ್ಯಾಪ್ತಿಯ ತೆರಿಗೆ ಸಂಗ್ರಹವೂ ಕೇಂದ್ರದ ಅತಿಕ್ರಮಣಕ್ಕೆ ಒಳಗಾಗುತ್ತಿರುವುದು ಆತಂಕ ಹುಟ್ಟಿಸುತ್ತಿದೆ. 

ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿ ಕೇಂದ್ರವು ಅತಿಕ್ರಮಣ ಮಾಡುತ್ತಿರುವುದು ನಿಜವಾಗಿ ಎಲ್ಲಾ ರಾಜ್ಯಗಳನ್ನು ಕೇಂದ್ರದ ಅಧೀನದ ಉಪರಾಜ್ಯವನ್ನಾಗಿ ಅರ್ಥಾತ್ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸುತ್ತಿದೆ.  ಯಾವ ಸೂತ್ರದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ ಅಥವಾ ಈ ತೆರಿಗೆ ಸಂಗ್ರಹವನ್ನು ಯಾವ ಯಾವ ದಿಕ್ಕಿಗೆ ಕಳುಹಿಸಲಾಗುತ್ತದೆ ಎಂಬುದರ ಕುರಿತ ನಿಖರ ವಿವರವನ್ನು ಕೇಂದ್ರ ಸರಕಾರವು ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಹೇಳುವುದಿಲ್ಲ, ಹಾಗಾಗಿ ರಾಜ್ಯಗಳ ಸ್ವಂತ ರಾಜಕೀಯ ಶಕ್ತಿಯು ಪೂರ್ಣ ಶಕ್ತಿಹೀನತೆಯ ಹಂತಕ್ಕೆ ಇಳಿಯುತ್ತಿದೆ. ಮೇಲಾಗಿ ತಮ್ಮನ್ನು ನಿಯಂತ್ರಿಸುವ ದೇಶದ ಆರ್ಥಿಕ ನೀತಿಗಳ ಮೇಲೆ ರಾಜ್ಯಗಳು ಯಾವುದೇ ಪ್ರಭಾವ ಅಥವಾ ಹಿಡಿತವನ್ನು ಹೊಂದಿಲ್ಲ.  ಆದುದರಿಂದ, ದಕ್ಷಿಣದ ರಾಜ್ಯಗಳು ಆತಂಕ ಮತ್ತು ಅಸಹಾಯ ಸ್ಥಿತಿ ಅನುಭವಿಸುತ್ತಿರುವುದರಲ್ಲಿ  ಆಶ್ಚರ್ಯವಿಲ್ಲ!

Pic: Google

ರಾಜ್ಯಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಮಬಲಗೊಳಿಸುವುದು ಹೇಗೆ ಮತ್ತು ಅದಕ್ಕೆ ಯಾವ ಫಾರ್ಮುಲಾ ಇದೆ  ಎಂಬುದರ ಕುರಿತು ವಿಚಾರ ವಿನಿಮಯ ಆಗಬೇಕಿದೆ.  ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಒಂದು ಸರಳ ಪರೀಕ್ಷೆಯೆಂದರೆ ತಾನು ಈಗಾಗಲೇ ಅನುಸರಿಸುತ್ತಿರುವ ಆಡಳಿತ ಮಾದರಿಯು ತನ್ನಡಿ ಬರುವ ಸ್ವ-ಆಡಳಿತದ ಘಟಕಗಳೆಲ್ಲಾ ಸರ್ವ ಸಮ್ಮತ  ಅಭಿವೃದ್ಧಿಯ ಕಡೆಗೆ ಕ್ರಮೇಣ ಸಾಗಲು ಅನುವು ಮಾಡಿಕೊಡುತ್ತದೆಯೇ ಅಥವಾ ಇಲ್ಲವೇ ಎಂಬುದು.  ಆದರೆ ಈ ಪರೀಕ್ಷೆಯಲ್ಲಿ ಈಗಿನ ಕೇಂದ್ರ ಸರಕಾರದ ಆರ್ಥಿಕ ನೀತಿಗಳು ಸಂಪೂರ್ಣ ಸೋಲುತ್ತವೆ.  ಪ್ರತಿಯೊಂದು ರಾಜ್ಯಕ್ಕೂ ತಮ್ಮ ನಾಗರಿಕರ ಆಕಾಂಕ್ಷೆಗಳನ್ನು ಪೂರೈಸಲು ಮತ್ತು ಆರ್ಥಿಕತೆಯನ್ನು ಸರಿಹೊಂದಿಸಲು ರಾಜಕೀಯ ಒಕ್ಕೂಟವು (ಕೇಂದ್ರವು) ಅನುಮತಿಸುವುದೇ ಎಂಬ ಗಹನ ಪ್ರಶ್ನೆ ಪ್ರಜಾಪ್ರಭುತ್ವದ ಒಟ್ಟಾರೆ ಆರೋಗ್ಯದ ಬಗ್ಗೆ ಬೆಳಕು ಚೆಲ್ಲಬಲ್ಲದು.  ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳಂತಹ ಅತಿ ಮುಖ್ಯ ಕ್ಷೇತ್ರಗಳ ಕುರಿತು ಪರಿಶೀಲನೆ ಪ್ರಾರಂಭಿಸಲು ಪ್ರತಿ ರಾಜ್ಯವೂ ಪ್ರಶಸ್ತವಾಗಿದೆ.  ರಾಜ್ಯದ ನಾಗರಿಕರು ತೆರಿಗೆ ಹಂಚಿಕೆಯ ಕುರಿತು ಸ್ವಯಂ-ನಿರ್ಣಯದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವಂತಾಗಬೇಕು.

ರಾಜ್ಯಗಳು ಮತ್ತು ಇತರ ಉಪಘಟಕಗಳಾದ ಜಿಲ್ಲೆ-ತಾಲೂಕುಗಳು ತಮ್ಮದೇ ಆದ ಅಭಿವೃದ್ಧಿಯ ನೀತಿಗಳನ್ನು ರೂಪಿಸಲು, ಹಾಗೂ ಆ ನೀತಿಗಳಿಗೆ ಹಣ ಒದಗಿಸಲು ಸಾಕಷ್ಟು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಧ್ಯವಾಗುವ ರೀತಿಯ  ರಾಜಕೀಯ ರಚನೆಯೇ ಭಾರತಕ್ಕೆ ಈಗ  ಬೇಕಾಗಿರುವುದು.  ಜತೆಗೆ ರಾಜ್ಯಗಳ ನೀತಿ ನಿರ್ಧಾರಗಳು ಪ್ರಜಾತಾಂತ್ರಿಕ ಮೌಲ್ಯಗಳನ್ನು ಕೂಡಾ ಉಳಿಸಿಕೊಳ್ಳುವಂತಿರಬೇಕು. ಪ್ರದೇಶ-ಪ್ರದೇಶಗಳ ನಡುವಿನ ಘರ್ಷಣೆಗಳನ್ನು ಕಡಿಮೆ ಮಾಡುವುದರೊಂದಿಗೆ ಅಭಿವೃದ್ಧಿಯನ್ನು ಗರಿಷ್ಠಗೊಳಿಸಲು ಸರಿಯಾದ ನೀತಿಯನ್ನು ರಚಿಸಬೇಕು. ಇದಕ್ಕೆ ಕೆಲಮಟ್ಟಿಗೆ ತ್ಯಾಗ ಮತ್ತು ಮರು-ಹೊಂದಾಣಿಕೆಯ ಅಗತ್ಯ ಬೀಳಬಹುದು.

ಆದರೆ ಅಂತಹ ದೇಶಗಳು ಮತ್ತು ಭಾರತದ ನಡುವೆ ಎರಡು ಪ್ರಮುಖ ವ್ಯತ್ಯಾಸಗಳಿವೆ.  ಮೊದಲನೆಯದು ಆ ದೇಶಗಳಲ್ಲಿನ ಪ್ರದೇಶಗಳ ನಡುವಿನ ವ್ಯತ್ಯಾಸವು ಭಾರತದ ಉತ್ತರ ಮತ್ತು ದಕ್ಷಿಣದ ನಡುವೆ ಇರುವಷ್ಟು ವಿಶಾಲವಾಗಿಲ್ಲ.  ಎರಡನೆಯ ಮತ್ತು ಹೆಚ್ಚು ಮುಖ್ಯವಾದ ವ್ಯತ್ಯಾಸವೆಂದರೆ – ಆ ಎಲ್ಲಾ ದೇಶಗಳಲ್ಲಿ, ಹೆಚ್ಚು ಸಮೃದ್ಧ ಪ್ರದೇಶಗಳು ಹೆಚ್ಚು ಜನಸಂಖ್ಯೆ ಸಾಂದ್ರತೆ ಹೊಂದಿವೆ ಮತ್ತು  ಅವುಗಳು ಹೆಚ್ಚು ವೇಗವಾಗಿ ನಗರೀಕರಣಗೊಳ್ಳುತ್ತಿವೆ.  ಹಾಗಾಗಿ ಬಡ ಪ್ರದೇಶದಿಂದ ಕಾರ್ಮಿಕರ ವಲಸೆಯ ಒಳಹರಿವಿನಿಂದಾಗಿ ಸಮೃದ್ಧ ಪ್ರದೇಶಗಳು ಹೆಚ್ಚಿನ ಜನಸಂಖ್ಯೆಯ ಬೆಳವಣಿಗೆಯನ್ನು ಹೊಂದಿವೆ ಮತ್ತು ಬಡ ಪ್ರದೇಶಗಳ ಜನಸಂಖ್ಯೆ ತಗ್ಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಬಡ ಪ್ರದೇಶಗಳು ಹೆಚ್ಚಿನ ಜನಸಂಖ್ಯೆ ಸಾಂದ್ರತೆ ಹೊಂದಿವೆ ಹಾಗೂ ಹೆಚ್ಚಿನ ಮಾನವ ಫಲವತ್ತತೆ ದರ (ಮಕ್ಕಳಾಗುವಿಕೆ ದರ)  ಹೊಂದಿವೆ. ಹಾಗಾಗಿ ಬಡ ಪ್ರದೇಶಗಳು ವೇಗವಾದ ಜನಸಂಖ್ಯೆಯ ಬೆಳವಣಿಗೆ ಹೊಂದುತ್ತಿವೆ.  ನಿಜವಾಗಿ ಭಾರತದಲ್ಲಿ ಒಂದು ಪ್ರದೇಶದ ಜನಸಂಖ್ಯೆಯ ಬೆಳವಣಿಗೆಯನ್ನು ಪ್ರೇರೇಪಿಸುವುದು ಸ್ಥಳೀಯರ ಮಾನವ (ಗರ್ಭಧಾರಣೆ) ಫಲವತ್ತತೆಯೇ ಹೊರತು ಹೊರಗಿನ ಕಾರ್ಮಿಕರ ವಲಸೆಯಲ್ಲ.

pic: Google

ಉದಾಹರಣೆಗೆ ಜನಸಂಖ್ಯೆ ದೃಷ್ಟಿಯಿಂದ ಉತ್ತರ ಪ್ರದೇಶವು ತೆಲಂಗಾಣಕ್ಕಿಂತ ಆರು ಪಟ್ಟು ಹೆಚ್ಚು ಜನಸಂಖ್ಯೆ ಹೊಂದಿದೆ ಮತ್ತು ತೆಲಂಗಾಣಕ್ಕಿಂತ ಹೆಚ್ಚು ಬಡತನ ಹೊಂದಿದೆ. ತೆಲಂಗಾಣದ ಜನಸಂಖ್ಯೆ ನಾಲ್ಕು ಕೋಟಿಗಿಂತಲೂ ಕಡಿಮೆಯಾದರೆ ಉತ್ತರಪ್ರದೇಶದ ಜನಸಂಖ್ಯೆ 24 ಕೋಟಿ ಇದೆ.  ಹಾಗಾಗಿ ತೆಲಂಗಾಣ ಮತ್ತು ಯು.ಪಿ ರಾಜ್ಯದ ತೆರಿಗೆ ಗಳಿಕೆಯ ಹೋಲಿಕೆ ಕಾರ್ಯಸಾಧ್ಯವಲ್ಲ ಅಥವಾ ನ್ಯಾಯಯುತವಲ್ಲ. ಆದರೂ, ಭಾರತದ ಕೇಂದ್ರ ಸರಕಾರವು ಇಂತಹಾ ಅವೈಜ್ಞಾನಿಕ ಹೋಲಿಕೆಯನ್ನೇ ಸರಿಯೆಂದು ಸಾಧಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ವರ್ಷ ಕಳೆದಂತೆ ಭಿನ್ನತೆಯ ಕಂದಕ ಮಾತ್ರ ಬೆಳೆಯುತ್ತಿದೆ.  ಈ ವಿಷಮ ಪರಿಸ್ಥಿತಿಯಲ್ಲಿ ಯಾವುದೇ ದಕ್ಷಿಣದ ರಾಜ್ಯವು ತಮ್ಮ ನಿಯಂತ್ರಣದಲ್ಲಿ ಇರದ ಉತ್ತರದ ಬಡ ರಾಜ್ಯಗಳಿಗಾಗಿ ತಮ್ಮ ರಾಜ್ಯದ ಸ್ವಂತ ಪ್ರಜೆಗಳಿಂದ ಭಾರಿ ತೆರಿಗೆ ಸಂಗ್ರಹಿಸಿ ಉತ್ತರ ಭಾರತಕ್ಕೆ ದಾನವಾಗಿ ಕೊಡಬೇಕಾಗಿ ಬಂದಿರುವಂತಹಾ ಆಸಹಾಯಕ ಪರಿಸ್ಥಿತಿಯಿಂದಾಗಿ ದಕ್ಷಿಣ ರಾಜ್ಯಗಳು ಅಸ್ತಿತ್ವದಲ್ಲಿರಲು ಆರ್ಥಿಕವಾಗಿ ಅಸಮರ್ಥವಾಗಿವೆ.  ಹಾಗಾಗಿ ರಾಜ್ಯದಿಂದ ಬರುವ ತೆರಿಗೆ ಹಣವನ್ನು ಮರು-ವಿನಿಯೋಗ ಗೊಳಿಸುವ ಕಾರ್ಯದಲ್ಲಿ ಕೇಂದ್ರ ಸರಕಾರದ ಅಧಿಕಾರವನ್ನು ಮಿತಿಗೊಳಿಸಬೇಕಿದೆ.  ರಾಜ್ಯಗಳ ಸ್ವಂತ ಪರಿಶ್ರಮದ ತೆರಿಗೆ ಸಂಗ್ರಹದ ಸ್ವಾಮಿತ್ವ ಮತ್ತು ಬಳಕೆಯ ವಿಷಯಕ್ಕೆ ಬಂದಾಗ ಅದರ ಮೇಲೆ ನೇರವಾಗಿ ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ಹೆಚ್ಚು ಅಧಿಕಾರ ಇರುತ್ತದೆಯೇ ಹೊರತು ಅದಕ್ಷ-ಅಸಮರ್ಥ ಸೋಮಾರಿಯಾದ ದೂರದ ಇನ್ನೊಂದು ರಾಜ್ಯದವರು ನಮಗಿಂತ ಹೆಚ್ಚು ಅಧಿಕಾರ ಹೊಂದಲು ಸಾಧ್ಯವಿಲ್ಲ!

ಸಮಯಸಾಧಕ ರಾಜಕೀಯ ಪಕ್ಷಪಾತಿಗಳು, ಯಾವಾಗಲೂ ಈ ಸಮಸ್ಯೆಯ ಎರಡೂ ಬದಿಯಲ್ಲಿದ್ದಾರೆ. ಸಂಪನ್ಮೂಲ ಹಂಚಿಕೆಯಲ್ಲಿನ ದಕ್ಷಿಣ ರಾಜ್ಯಗಳ  ನ್ಯಾಯಯುತ ಬೇಡಿಕೆಗಳನ್ನು ಈಗ ‘ವಿಭಾಜಕ’ ಎಂದು ದೂಷಿಸುವ ಪ್ರಧಾನಿ ನರೇಂದ್ರ ಮೋದಿಯವರು ಸ್ವತಃ ತಾವೇ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರವು ರಾಜ್ಯಗಳಿಗೆ ಅತಿ ಹೆಚ್ಚು ಸಂಪನ್ಮೂಲ ಒದಗಿಸಬೇಕು ಎಂದು ಮಾತಿನ ವರಸೆ ತೋರಿಸುತ್ತಿದ್ದರು, ಆದರೆ ಈಗ ರಾಜ್ಯಗಳಿಗಿಂತ ಕೇಂದ್ರಕ್ಕೆ ಹೆಚ್ಚು ಸಂಪನ್ಮೂಲ ಬೇಕು ಎಂಬ ವಿತಂಡ ವಾದ ಮಾಡುತ್ತಿದ್ದಾರೆ.  ಸಾಮಾನ್ಯವಾಗಿ ಸ್ವಹಿತಾಸಕ್ತಿಯ ರಾಜಕಾರಣಿಗಳು ತಾವು ಆಕ್ರಮಿಸುವ ಕುರ್ಚಿಯ ಕಡೆಗೆ ಅಧಿಕಾರದ ಮತ್ತು ಹಣಕಾಸಿನ ತಕ್ಕಡಿಯನ್ನು ವಾಲಿಸುವುದು ಪ್ರತಿನಿಧಿ ಪ್ರಜಾಪ್ರಭುತ್ವದ ಒಂದು ದೊಡ್ಡ ವಿಡಂಬನೆ. 

ಇದನ್ನೂ ಓದಿ- ದೆಹಲಿಯಲ್ಲಿ  ನಾಳೆಯ ಕರ್ನಾಟಕದ ಹೋರಾಟ ನ್ಯಾಯವೇ?

ನೇರ ತೆರಿಗೆಗಳಲ್ಲಿ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ. ಒಂದನೆಯದು ಮೂಲ ತೆರಿಗೆ ಹಾಗೂ ಎರಡನೆಯದು ತೆರಿಗೆಯ ಮೇಲೆ ಉಪ-ತೆರಿಗೆ ಅಂದರೆ ‘ಸೆಸ್ ಮತ್ತು ಸರ್ಚಾರ್ಜ್’.  ಕೇಂದ್ರವು ತಾನು ಸಂಗ್ರಹಿಸುವ ನೇರ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ, ಆದರೆ ಸೆಸ್-ಸರ್ಚಾರ್ಜನ್ನು ಕೇಂದ್ರವು ಆಯಾ ರಾಜ್ಯಗಳೊಂದಿಗೆ ಸ್ವಲ್ಪವೂ ಹಂಚಿಕೊಳ್ಳಬೇಕಾಗಿಲ್ಲ, ಅದನ್ನು ತನ್ನ ಇಷ್ಟಾನುಸಾರ ತಾನೇ ಬಳಸಬಹುದು. ಹಾಗಾಗಿ ಕೇಂದ್ರವು ನೇರ ತೆರಿಗೆಗಳನ್ನು ಏರಿಸುವುದಿಲ್ಲ, ಕೇವಲ ಸೆಸ್-ಸರ್ಚಾರ್ಜನ್ನು ಮಾತ್ರ ವರ್ಷದಿಂದ ವರ್ಷಕ್ಕೆ ಏರಿಸುತ್ತಾ ಹೋಗುತ್ತಿದೆ. ಮೊದಲು ಸೇಲ್ಸ್-ಟ್ಯಾಕ್ಸ್ (ಮಾರಾಟ ತೆರಿಗೆ) ಇದ್ದಾಗ ಈ ತೆರಿಗೆ ಸಂಗ್ರಹ ನೇರವಾಗಿ ರಾಜ್ಯದ ಬೊಕ್ಕಸಕ್ಕೆ ಹೋಗುತ್ತಿತ್ತು.  ಆದರೆ ರಾಜ್ಯಗಳ ಸೇಲ್ಸ್ ಟ್ಯಾಕ್ಸ್ ಜಾಗದಲ್ಲಿ 2017 ರಲ್ಲಿ  “ಜಿ‌ಎಸ್‌ಟಿ” ಬಂದ ಮೇಲೆ ರಾಜ್ಯಗಳ ಕೈ ಕಟ್ಟಿದಂತೆ ಆಗಿದೆ. ಯಾಕೆಂದರೆ ಜಿ‌ಎಸ್‌ಟಿ ಸಂಗ್ರಹ ಮೊದಲು ಕೇಂದ್ರದ ಕೈಗೆ ಹೋಗಿ ಅಲ್ಲಿಂದ ರಾಜ್ಯಗಳ ಕೈಗೆ ಮರು-ಹಂಚಿಕೆ  ಆಗುತ್ತದೆ.  ಜತೆಗೆ ಆದಾಯ ತೆರಿಗೆ ಮತ್ತು ಕಂಪನಿಗಳ ಉತ್ಪಾದನೆಗಳ ಮೇಲೆ ಹಾಕುವ (ಸೆಂಟ್ರಲ್ ಎಕ್ಸೈಜ್) ಉತ್ಪಾದನಾ ತೆರಿಗೆಯೆಲ್ಲಾ  ಸಂಪೂರ್ಣ ಕೇಂದ್ರದ ಬೊಕ್ಕಸಕ್ಕೆ ಹೋಗುವುದು. ಈ ಏಕಾಧಿಕಾರ ಸ್ಥಿತಿಯಲ್ಲಿ ಕೇಂದ್ರದಿಂದ ಬಹಿರಂಗ ಪಕ್ಷಪಾತ ಸಾಧ್ಯವಿದೆ. ಅಷ್ಟೇ ಅಲ್ಲ ದೇಶದ ಕೇವಲ 5% ಉದ್ಯಮಿಗಳ ಕೈಯಲ್ಲಿ ದೇಶದ 80% ಉದ್ಯಮಗಳು ಇದ್ದು ಹಿಂದಿನ ಕೆಲವು ವರ್ಷಗಳಿಂದ ಲಕ್ಷಾಂತರ-ಕೋಟಿ ಮೊತ್ತದ ಕಾರ್ಪೊರೇಟ್ ತೆರಿಗೆಯಲ್ಲಿ ರಿಯಾಯತಿ ಕೊಟ್ಟು-ಕೊಟ್ಟು ಅದನ್ನು ತುಂಬಿಸಲು ಸಾಮಾನ್ಯ ಜನರ ದಿನ ಬಳಕೆಯ ವಸ್ತುಗಳ ಮೇಲೆ ಜಿ‌ಎಸ್‌ಟಿ ಮತ್ತು ಸರ್ಚಾರ್ಜ್ ಏರಿಸಿ ರಾಜ್ಯಗಳ ಮೇಲೆ ಕೇಂದ್ರವು ಭಾರಿ ಅನ್ಯಾಯ ಮಾಡುತ್ತಿದೆ.  

ಹಣಕಾಸು ಅಯೋಗವನ್ನು ಕೇಂದ್ರ ಸರಕಾರ ರಚಿಸಿದ್ದರೂ ಅದು ಒಂದು ಸ್ವಾಯತ್ತ ಸಂಸ್ಥೆ ಎಂದು ಹೇಳಲಾಗುತ್ತಿದೆ.  ಈ ಆಯೋಗದ ಶಿಫಾರಸಿನ ಆಧಾರದಲ್ಲಿ ಕೇಂದ್ರವು ತೆರಿಗೆ ಹಂಚಿಕೆ ನೀತಿಗಳನ್ನು ರೂಪಿಸುವುದು ಕಡ್ಡಾಯ.  ಆದರೆ ಈಗಿನ ಸರಕಾರದ ಅಡಿಯಲ್ಲಿ ಯಾವುದೇ ಸ್ವಾಯತ್ತ ಸಂಸ್ಥೆ ಸ್ವತಂತ್ರವಾಗಿಲ್ಲ. ಹಾಗಿರುವಾಗ ಹಣಕಾಸು ಆಯೋಗದ ಶಿಫಾರಸು ಎಷ್ಟು ನಿಷ್ಪಕ್ಷವಾಗಿರಲು ಸಾಧ್ಯ?  ಆದರೂ ಕೇಂದ್ರವು ಹಣಕಾಸು ಆಯೋಗದ ಹೆಗಲ ಮೇಲೆ ಬಂದೂಕು ಇಟ್ಟು ತನ್ನ ಅವಾಸ್ತವ ತೆರಿಗೆ ಹಂಚಿಕೆ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿರುವುದು ಖೇದಕರ.

ಈ ಮೇಲಿನ ಸಮಸ್ಯೆಗಳಿಗೆಲ್ಲಾ ಉತ್ತರ ಸರಳವಾಗಿದೆ.  ನಮ್ಮ ರಾಜ್ಯಗಳು ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಯನ್ನು ಎಷ್ಟು ಚತುರತೆಯಿಂದ ಮಿತಿಗೊಳಿಸಬೇಕೆಂದರೆ ಈ ತೆರಿಗೆ ಸಂಪನ್ಮೂಲ ಹಂಚಿಕೆಯ ಸಮಸ್ಯೆಗಳನ್ನು ರಾಜ್ಯಗಳ ಮಟ್ಟದಲ್ಲಿಯೇ ಪರಿಹರಿಸುವಂತಾಗಬೇಕು.  ರಾಜ್ಯಗಳು ಮೊದಲು ತಮ್ಮ ಮೂಲ ಅವಶ್ಯಕತೆಗಳನ್ನು ಪೂರೈಸಬೇಕು, ಆನಂತರ ರಕ್ಷಣಾ ಮತ್ತು ವಿದೇಶ ವ್ಯವಹಾರಗಳಂತಹ ರಾಷ್ಟ್ರೀಯ ಮಟ್ಟದ ಪ್ರಮುಖ ಒಕ್ಕೂಟ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಅಗತ್ಯವಾದ ನಿಧಿಯನ್ನು ರಾಜ್ಯ ಸರಕಾರಗಳು ತಾವೇ ರವಾನಿಸುವಂತಾಗಬೇಕು. ಅಥವಾ ಕಡೆಪಕ್ಷ ರಾಜ್ಯದ ಅಧಿಕಾರದಡಿ ಬರುವ ವಿಷಯಗಳ ಮೇಲೆ ಕೇಂದ್ರವು ತಾನೇ ಖರ್ಚು ಮಾಡುತ್ತಿರುವಂತೆ ನಾಟಕ ಆಡುವುದನ್ನಾದರೂ ನಿಲ್ಲಿಸಬೇಕು.

ಇದನ್ನೂ ಓದಿ-ದೇಶದಾದ್ಯಂತ ಪ್ರತಿಧ್ವನಿಸಿದ ಕರ್ನಾಟಕದ ಕೂಗು

ಇದಕ್ಕೆ ಉತ್ತಮ ಆರಂಭವೆಂದರೆ, ಕೇಂದ್ರದ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಪಡಿಸುವುದು ಮತ್ತು ಆ ಮೂಲಕ ಉಳಿತಾಯವಾದ ಹಣವನ್ನು ಮರಳಿ ರಾಜ್ಯಗಳಿಗೆ ಕಳುಹಿಸುವುದು.  ಜೊತೆಗೆ  “ಕೊಡ ಮಾಡುವ” ರಾಜ್ಯಗಳೊಂದಿಗೆ ಕೇಂದ್ರವು ಸಮಾಲೋಚಿಸಿ, ತೀವ್ರ ಸಂಪನ್ಮೂಲ ಬಿಕ್ಕಟ್ಟನ್ನು ಎದುರಿಸುತ್ತಿರುವ ಬಡ ರಾಜ್ಯಗಳ ಸಮೀಕರಣದ ಗರಿಷ್ಠ ಮಿತಿಯನ್ನು ನಿರ್ಧರಿಸಬಹುದು.  ಇದು ಸಾಧ್ಯವಾಗ ಬೇಕಾದರೆ ಹೊಸದಿಲ್ಲಿಯ ರಾಜಕಾರಣಿಗಳು ಸ್ವ ಇಚ್ಛೆಯಿಂದ ರಾಜ್ಯಗಳಿಗೆ ಆದಾಯ ವಿಲೆವಾರಿಯ ಅಧಿಕಾರವನ್ನು ಬಿಟ್ಟುಕೊಡಬೇಕು, ಹಾಗೂ ಕೇವಲ “ಚುನಾವಣಾ ಮತ ಬೇಟೆಗಾಗಿ” ತಾನು ಮಾತ್ರವೇ ಬಡ ರಾಜ್ಯಗಳ ಪಕ್ಷಪಾತಿ ಎಂದು ನಾಟಕೀಯವಾಗಿ ತೋರ್ಪಡಿಸುವುದನ್ನೂ ಕೇಂದ್ರ ನಿಲ್ಲಿಸಬೇಕು. ಆರ್ಥಿಕ ತಜ್ಞ ಮತ್ತು ಬಿ‌ಜೆ‌ಪಿ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿಯವರೆ ಹೇಳುವಂತೆ ಈಗ ದೇಶದ ಚುಕ್ಕಾಣಿ ಹಿಡಿದಿರುವ ಅರೆಸಾಕ್ಷರ ರಾಜಕಾರಣಿಗೆ ಅರ್ಥ ಶಾಸ್ತ್ರದ ‘ಅ’ ಕೂಡ ಗೊತ್ತಿಲ್ಲ, ಹಾಗೂ ದೇಶದ ಆರ್ಥಿಕ ನೀತಿಗಳನ್ನು ನಿರ್ಧರಿಸುವ ವಿತ್ತ ಸಚಿವೆಯು ಇತಿಹಾಸದ ಪದವೀಧರೆ.  ಹಾಗಾಗಿ, ಐತಿಹಾಸಿಕ ಕಾಲದಲ್ಲಿ ರಾಜರು, ನವಾಬರು  ರೈತರಿಂದ ಮತ್ತು ವ್ಯಾಪಾರಿಗಳಿಂದ ತಾವು  ಸುಂಕ ವಸೂಲಿ ಮಾಡುವ ವ್ಯಾಪ್ತಿ ಪ್ರದೇಶ ನಿರ್ಧರಿಸಲು ತಮ್ಮ ತಮ್ಮ ನಡುವೆ ಭೀಕರ ಯುದ್ಧ ಮಾಡುತ್ತಿದ್ದ ರೀತಿಯಲ್ಲಿಯೇ ಈಗಿನ ಪ್ರಜಾಪ್ರಭುತ್ವದ ಅಡಿಯಲ್ಲಿಯೂ ನಮ್ಮ ರಾಜ್ಯ-ರಾಜ್ಯಗಳ ನಡುವೆ ಅಂತಹದ್ದೇ ಯುದ್ಧದ ಪರಿಸ್ಥಿತಿ ಉದ್ಭವಿಸುವಂತೆ ಈ ಇತಿಹಾಸ ಪದವೀಧರೆ ವಿತ್ತ ಸಚಿವೆ ಮಾಡುತ್ತಿದ್ದಾರೇನೋ ಎಂಬ ಆತಂಕ ಮೂಡುತ್ತಿದೆ.   ಆದುದರಿಂದ ಮುಂಬರುವ ದಿನಗಳಲ್ಲಿ ಈ ಅವಾಸ್ತವ ತೆರಿಗೆ ಹಂಚಿಕೆಯ ಸಮಸ್ಯೆಯು ಇನ್ನೂ ಉಲ್ಬಣವಾಗಲಿದೆ.  ಕೊನೆಗೆ  ಅದು ರಾಜ್ಯ-ಕೇಂದ್ರಗಳ ನಡುವೆ ಸೇಡುಭರಿತ ಮೇಲಾಟವಾಗಿ ಪರಿವರ್ತನೆಗೊಂಡು ರಾಜ್ಯಗಳ ಜನಪರ ಅಭಿವೃದ್ಧಿಗೆ ಬೇಕಾಗುವ ಸಂಪನ್ಮೂಲದ ಕಡಿತಕ್ಕೆ ಕಾರಣವಾಗಬಾರದು ಎಂದು ಪ್ರಜ್ಞಾವಂತರು ಆಶಿಸುತ್ತಿದ್ದಾರೆ .   

ಮೂಲ : ನೀಲಕಂಠನ್‌ ಆರ್‌ ಎಸ್‌, ‌ThePrint

ಕನ್ನಡಕ್ಕೆ: ಪ್ರವೀಣ್‌ ಎಸ್‌ ಶೆಟ್ಟಿ, ಮಂಗಳೂರು

More articles

Latest article