ಯಾರು ಹಿತವರು ನಮಗೆ ಈ ಎರಡು ಒಕ್ಕೂಟಗಳೊಳಗೆ ?

Most read

ಮೋದಿ ನೇತೃತ್ವದ ಪಕ್ಷಗಳ ಸೀಟು ಗಳಿಕೆ 200 ದಾಟ ಬಾರದು. ಇಂಡಿಯಾ ಒಕ್ಕೂಟದ ಒಗ್ಗಟ್ಟು ಯಾವುದೇ ಕಾರಣಕ್ಕೂ ಮುರಿಯಬಾರದು. ಸಂವಿಧಾನ ಹಾಕಿ ಕೊಟ್ಟ ಮಾರ್ಗದಲ್ಲಿ ಈ ದೇಶ ಮುನ್ನಡೆಯುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಆಶಯದಲ್ಲಿ ಇನ್ನೂ ಹೆಚ್ಚು ಗಟ್ಟಿಗೊಂಡು ಮುಂದುವರೆಯಬೇಕು. ಅದಕ್ಕಾಗಿ ಕೋಮುವಾದಿ ಸರ್ವಾಧಿಕಾರಿ ಫ್ಯಾಸಿಸಂ ಸೋಲಲೇಬೇಕು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಈ ಚುನಾವಣೆಯಲ್ಲೂ ಮತ್ತೆ ಮೂರನೇ ಬಾರಿ ಗೆದ್ದು ಬಿಜೆಪಿ ಕೇಂದ್ರದಲ್ಲಿ ಸರಕಾರ ರಚನೆ ಮಾಡುತ್ತದಾ? ಇಲ್ಲವೇ ಆಡಳಿತ ವಿರೋಧಿ ಅಲೆಯಲ್ಲಿ ತೇಲಿಬರುವ ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಾ? ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.

ಮತ್ತೆ ಮೋದಿ ಸರಕಾರ ಬರುತ್ತೆ ಅನ್ನುವವರ ಸಮರ್ಥನೆಗಳು ಹೀಗಿವೆ.

* ಮೋದಿ ವಿಶ್ವದ ಪ್ರಬಲ ನಾಯಕ. ವಿಶ್ವಗುರು.

* ದೇಶದ ಭದ್ರತೆ ಹಾಗೂ ರಕ್ಷಣೆ ಮೋದಿಯಿಂದ ಮಾತ್ರ ಸಾಧ್ಯ.

* ಬಹುಪಕ್ಷಗಳ ಸಮ್ಮಿಶ್ರ ಸರಕಾರಕ್ಕಿಂತ ಏಕಪಕ್ಷದ ಆಡಳಿತ ದೇಶದ ಹಿತಾಸಕ್ತಿ ಕಾಪಾಡುತ್ತದೆ.

* ಹಿಂದೂ ಧರ್ಮ ರಕ್ಷಣೆ ಹಾಗೂ ಹಿಂದೂರಾಷ್ಟ್ರ ಸ್ಥಾಪನೆ ಮೋದಿಯಿಂದ ಮಾತ್ರ ಸಾಧ್ಯ.

* ಪಾಕಿಸ್ಥಾನವನ್ನು ಮಟ್ಟ ಹಾಕಲು, ಚೀನಾವನ್ನು ಎದುರಿಸಲು ಮೋದಿ ಪ್ರಧಾನಿಯಾಗುವುದು ಅನಿವಾರ್ಯ.

*  5 ಟ್ರಿಲಿಯನ್ ಡಾಲರ್ ಎಕಾನಮಿ ತಲುಪಿ ಜಗತ್ತಿನಲ್ಲೇ  ಎರಡನೇ ನಂಬರ್ ಆರ್ಥಿಕ ಬಲಾಢ್ಯ ದೇಶವನ್ನಾಗಿಸಲು ಮೋದಿ ಮತ್ತೆ ಪ್ರಧಾನಿಯಾಗಬೇಕು.

* ಕಾರ್ಪೋರೇಟ್ ಶಕ್ತಿಗಳ ಬೆಂಬಲ ಮೋದಿಯವರ ಪರವಾಗಿರುವುದರಿಂದ ಬಿಜೆಪಿ ಗೆಲುವು ನಿಶ್ಚಿತ.

* ಹೆಚ್ಚು ಮದುವೆಯಾಗಿ, ಹೆಚ್ಚು ಮಕ್ಕಳನ್ನು ಹೆತ್ತು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡು ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡಬಹುದಾದ ಮುಲ್ಮಾನರನ್ನು ಮಟ್ಟಹಾಕಲು ಮೋದಿ ಪ್ರಧಾನಿಯಾಗಲೇ ಬೇಕು.

* ಭಯೋತ್ಪಾದನೆಯನ್ನು ತಡೆಯಲು, ಆತಂಕವಾದಿಗಳನ್ನು ನಿರ್ನಾಮ ಮಾಡಲು, ಅಕ್ರಮ ವಲಸಿಗರನ್ನು ಗಡಿಪಾರು ಮಾಡಲು ಮೋದಿ ಆಡಳಿತ ಬರಲೇಬೇಕು.

* ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು, ಕಾಶಿ ಮಥುರಾಗಳಲ್ಲಿ ಮಸೀದಿ ಒಡೆದು ದೇವಸ್ಥಾನ ನಿರ್ಮಿಸಲು ಮೋದಿಯೇ ಸರ್ವಶಕ್ತ.

* ಹೆಂಡತಿ ಮಕ್ಕಳಿಲ್ಲದ ಮೋದಿ ದಿನದ 24 ಗಂಟೆಯೂ ದೇಶಕ್ಕಾಗಿ ಶ್ರಮಿಸುತ್ತಿರುವುದರಿಂದ ಅವರೇ ಮತ್ತೆ ಪ್ರಧಾನಿಯಾಗಬೇಕು.

ಹೀಗೆ.. ಮತ್ತೆ ಮೋದಿ ಪ್ರಧಾನಿ ಯಾಗಬೇಕು ಹಾಗೂ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವವರು ಕೊಡುವ ಸಮರ್ಥನೆಗಳಾಗಿವೆ. ಮೋದಿಯವರೇ ಹೇಳಿದಂತೆ ಈ ಸಲ 400 ಕ್ಕೂ ಹೆಚ್ಚು ಬಿಜೆಪಿ ಅಭ್ಯರ್ಥಿಗಳು ಗೆದ್ದು ಬರುವುದರಲ್ಲಿ ಸಂದೇಹವೇ ಇಲ್ಲವೆಂದು ವಾದಿಸುವವರೂ ಇದ್ದಾರೆ.

ಅದೇ ರೀತಿ ಮೋದಿ ವಿರೋಧಿ ಇಂಡಿಯಾ  ಪರವಾಗಿರುವವರು ಈ ಸಲ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎನ್ನುವ ಆತ್ಮವಿಶ್ವಾಸದಲ್ಲಿದ್ದಾರೆ. ಅವರ ಸಮರ್ಥನೆಗಳೇನೆಂದರೆ..

* ಆಡಳಿತ ವಿರೋಧಿ ಅಲೆ ದೇಶಾದ್ಯಂತ ಬೀಸುತ್ತಿದ್ದು ಬಿಜೆಪಿ ಸೋಲು ಖಚಿತ.

* ಈ ಸಲ ಮೋದಿ ಅಲೆ ಎಲ್ಲೂ ಇಲ್ಲದೇ ಇರುವುದರಿಂದ ಬಿಜೆಪಿಗೆ 200 ಸೀಟುಗಳನ್ನೂ ಗೆಲ್ಲುವುದು ಕಷ್ಟ.

* ದೇವರು ಧರ್ಮದಂತಹ ಭಾವನಾತ್ಮಕ ಪ್ರಚೋದನಕಾರಿ ವಿಚಾರಗಳನ್ನು ಪ್ರಸ್ತಾಪಿಸುವುದನ್ನು ಬಿಟ್ಟು ಮೋದಿ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ.

* ಎಕ್ಸ್‌ ಪ್ರೆಸ್ ರಸ್ತೆ ನಿರ್ಮಿಸಿ ಟೋಲ್ ವಸೂಲಿಗಿಳಿದಿದ್ದು, ವಂದೇ ಭಾರತ್ ರೈಲುಗಳನ್ನು ಬಿಟ್ಟು ಶ್ರೀಮಂತರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದು ಬಡವರ ಪರ ಅಭಿವೃದ್ಧಿ ಆಗಲು ಸಾಧ್ಯವಿಲ್ಲ.

* ಒಂದೇ ಒಂದು ಆಣೆಕಟ್ಟು ಕಟ್ಟಲಾಗದೇ, ಯಾವುದೇ ಸಾರ್ವಜನಿಕ ಉದ್ಯಮವನ್ನು ಸ್ಥಾಪಿಸಲಾಗದೇ ಇದ್ದ ಉದ್ಯಮಗಳನ್ನು ಮಾರಾಟ ಮಾಡಿ ಖಾಸಗಿಯವರ ಪಾಲು ಮಾಡಿದ್ದು ಅಕ್ಷಮ್ಯ.

*  ಕಾರ್ಪೋರೇಟ್ ಕಂಪನಿಗಳಿಗೆ ದೇಶದ ಸಂಪನ್ಮೂಲಗಳ ಲೂಟಿ ಮಾಡಲು ಅವಕಾಶ ಕೊಟ್ಟಿದ್ದು ದೇಶದ್ರೋಹದ ಕೆಲಸ.

* 55 ಲಕ್ಷ ಕೋಟಿ ಇದ್ದ ಭಾರತದ ಸಾಲವನ್ನು ಹತ್ತೇ ವರ್ಷಗಳಲ್ಲಿ 185 ಲಕ್ಷ ಕೋಟಿಗೆ ಏರಿಸಿ ದೇಶವಾಸಿಗಳ ತಲೆಯ ಮೇಲೆ ಸಾಲದ ಭಾರ ಹೊರಿಸಿದ್ದೇ ಮೋದಿಯವರ ಸಾಧನೆ.

* ದೇಶದ ಸಾಲ ಹೆಚ್ಚಿದೆ, ದೇಶದಲ್ಲಿ ಬಡತನ ತಾಂಡವವಾಡ್ತಿದೆ, ಆದರೆ ಆದಾನಿ ಅಂಬಾನಿಗಳ ಆದಾಯ ಲಕ್ಷಕೋಟಿಗಳಲ್ಲಿ ಏರ್ತಿದೆ. ಇದಕ್ಕೆಲ್ಲಾ  ಬಂಡವಾಳಿಗರ ಪರ ಮೋದಿ ಸರಕಾರದ ಆರ್ಥಿಕ ನೀತಿಗಳೇ ಕಾರಣ.

* ಪೆಟ್ರೋಲ್ ಡೀಸೆಲ್ ದರ ದುಪ್ಪಟ್ಟಾಗಿದೆ, ಗ್ಯಾಸ್ ಸಿಲಿಂಡರ್ ಬೆಲೆ ಮೂರು ಪಟ್ಟಾಗಿದೆ, ರಸಗೊಬ್ಬರಗಳ ಬೆಲೆ ಆಕಾಶಕ್ಕೇರಿದೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಜನರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ. ಇದೇ ಮೋದಿ ಸರಕಾರದ ಹತ್ತು ವರ್ಷಗಳ ಸಾಧನೆಯಾಗಿದೆ.

* ಮೋದಿ ಮಾತು ಕೊಟ್ಟಂತೆ ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿಯಾಗದೆ ಇರುವ ಕೆಲಸಗಳೇ ಕಡಿತವಾಗಿ ದೇಶಾದ್ಯಂತ ನಿರುದ್ಯೋಗ ಹೆಚ್ಚಾಗಿದೆ. ಪಕೋಡಾ ಮಾರಿ ಬದುಕಲು ಸೂಚಿಸಲಾಗಿದೆ. ನಿರುದ್ಯೋಗದಿಂದಾಗಿ ಯುವಜನರು ಸಂಕಷ್ಟದಲ್ಲಿದ್ದಾರೆ.

* ರೈತರ ಆದಾಯ ದ್ವಿಗುಣ ಮಾಡಲಾಗುತ್ತದೆ ಎಂಬ ಮೋದಿ ಭರವಸೆ ಹುಸಿಯಾಗಿದೆ. ಕನಿಷ್ಟ ಬೆಲೆಯನ್ನೂ ನಿಗದಿಪಡಿಸದೆ ರೈತರ ಸಂಕಷ್ಟಕ್ಕೆ ಮೋದಿ ಸರಕಾರ ಕಾರಣವಾಗಿದೆ.

* ಬಾಯಿ ಬಿಟ್ಟರೆ ಬರೀ ಸುಳ್ಳುಗಳನ್ನು ಹೇಳುತ್ತಾ, ಜನರನ್ನು ಭಾವತೀವ್ರತೆಗೆ ಪ್ರಚೋದಿಸಿ ಯಾಮಾರಿಸುವ ಹಾಗೂ ಕೋಮುದ್ವೇಷವನ್ನು ಹೆಚ್ಚಿಸುವತ್ತಲೇ ಮೋದಿ ಸರಕಾರ ನಿರತವಾಗಿದೆ.

ಇವು ಮೋದಿ ಹಾಗೂ ಅವರ ಸರಕಾರದ ಮೇಲೆ ಇರುವ ಆರೋಪಗಳಾಗಿವೆ ಮತ್ತು ಇವೆಲ್ಲವೂ ಸತ್ಯವೂ ಆಗಿವೆ. ಹಾಗಾಗಿ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎನ್ನುವ ಲೆಕ್ಕಾಚಾರಗಳು ಜೋರಾಗಿವೆ. ಮೋದಿ ಪರ ಹಾಗೂ ಮೋದಿ ವಿರೋಧದ ನೆಲೆಯಲ್ಲಿ ಚುನಾವಣಾ  ಸಮೀಕ್ಷೆಗಳು ಗರಿಗೆದರಿವೆ. ಆದರೆ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ ಮೋದಿಯವರಲ್ಲಾಗಲೀ ಅವರ ಸಮರ್ಥಕರಲ್ಲಾಗಲೀ ಇಲ್ಲವಾಗಿದೆ. ಮೋದಿ ನೇತೃತ್ವದ ಎನ್‌ಡಿಎ ಮಿತ್ರಕೂಟ ಹಲವಾರು ರಾಜ್ಯಗಳಲ್ಲಿ ಕನಿಷ್ಟ ತಲಾ ಹತ್ತು ಸೀಟುಗಳನ್ನಾದರೂ ಕಳೆದುಕೊಳ್ಳುತ್ತದೆ ಎಂದೇ ವಿಶ್ಲೇಷಿಸಲಾಗುತ್ತದೆ. ಎರಡನೇ ಹಂತದ ಮತದಾನದ ನಂತರ ಬದಲಾದ ಮೋದಿ ಭಾಷಣಗಳ ವರಸೆ ಹಾಗೂ ಬರೀ ಸುಳ್ಳುಗಳ ಭರವಸೆಗಳು ಈ ಮಾತುಗಳಿಗೆ ಸಾಕ್ಷಿಯಾಗಿವೆ. ತಮ್ಮ ಸರಕಾರದ ಸಾಧನೆಗಳನ್ನು ಹೇಳುವ ಬದಲಾಗಿ ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ಹಾಗೂ ಮುಸ್ಲಿಂ ದ್ವೇಷವನ್ನೇ ಸಮರ್ಥಿಸಿಕೊಂಡು ಬಂದ ಮೋದಿಯವರ ನಡೆ ನುಡಿಗಳು ಬಿಜೆಪಿ ಪಕ್ಷದ ಸೋಲಿನ ಭವಿಷ್ಯವನ್ನು ಹೇಳುವಂತಿವೆ. ಇವಿಎಂ ಪವಾಡ ನಡೆಯದೇ ಹೋದರೆ ಏನೇ ಮಾಡಿದರೂ ಬಹುಮತಕ್ಕೆ ಅಗತ್ಯವಿರುವ ಗಡಿಯನ್ನೂ ಎನ್ ಡಿ ಎ ಮೈತ್ರಿ ಕೂಟ ಪಡೆಯುವುದು ಅನುಮಾನವಾಗಿದೆ. ಪರಿಸ್ಥಿತಿ ಹೀಗಿರುವಾಗ ಮೋದಿ ಗೆಲುವಿಗೆ ಇವಿಎಂ ಮತಯಂತ್ರ ತಿರುಚುವಿಕೆ ಹಾಗೂ ಚುನಾವಣಾ ಆಯೋಗದ ದುರ್ಬಳಕೆಗಳು ಮಾತ್ರ ಸಹಾಯಕ್ಕೆ ಬರಲು ಸಾಧ್ಯವೆಂಬ ಸಂದೇಹ ಕಾಡುತ್ತಲೇ ಇದೆ.

ಅಕಸ್ಮಾತ್ 272 ರ ಗಡಿಯನ್ನು ಮೋದಿ ನೇತೃತ್ವದ ಪಕ್ಷಗಳು ದಾಟದೇ ಹೋದರೆ ಆಗ ಅಸಲಿ ಆಟ ಶುರುವಾಗುತ್ತದೆ. ಇಂಡಿಯಾ ಒಕ್ಕೂಟದ ಚಿಕ್ಕಪುಟ್ಟ ಪಕ್ಷಗಳ ಖರೀದಿ ಆರಂಭವಾಗುತ್ತದೆ. ಆಸೆ ಆಮಿಷ ಒತ್ತಡಗಳ ಮೂಲಕ ಪ್ರತಿಪಕ್ಷಗಳ ಗೆದ್ದ ಎಂಪಿಗಳನ್ನು ಸೆಳೆಯುವ, ಬೇರೆ ಪಕ್ಷಗಳನ್ನು ಒಡೆಯುವ ಅನೈತಿಕ ನಡೆಗಳು ಮುಂಚೂಣಿಗೆ ಬರುತ್ತವೆ. ಇಂಡಿಯಾ ಮೈತ್ರಿಕೂಟವನ್ನು ವಿಭಜಿಸಿ ಹೇಗಾದರೂ ಮಾಡಿ ಬಹುಮತವನ್ನು ಗಳಿಸಿ ಸರಕಾರ ರಚಿಸುವ ತಂತ್ರಗಾರಿಕೆಯನ್ನು ಮೋದಿ ಪಡೆ ಮಾಡದೇ ಇರದು.

ಹೇಗಾದರೂ ಮಾಡಿ ಮತ್ತೆ ಮೋದಿ ಸರಕಾರವೇ ಬಹುಮತ ಪಡೆದು ಅಸ್ತಿತ್ವಕ್ಕೆ ಬಂದಿದ್ದೇ ಆದರೆ ಇಡೀ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬದಲಾಗುತ್ತದೆ. ಈಗಾಗಲೇ ಆರೆಸ್ಸೆಸ್ ಸರಸಂಘದ ಅತ್ಯುಚ್ಛ ನಾಯಕರಾದ ಮೋಹನ್ ಭಾಗವತ್ ರವರು ಹೇಳಿದಂತೆ ಧಾರ್ಮಿಕ ಚೌಕಟ್ಟಿನಲ್ಲಿ ಸಂವಿಧಾನವನ್ನು ಅಳವಡಿಸುವ ಮೂಲಕ ನೂರನೇ ವರ್ಷದ ಸಂಭ್ರಮವನ್ನು ಆರೆಸ್ಸೆಸ್ ಆಚರಿಸುವುದಂತೆ. ಅಂದರೆ ಸಮಾನತೆ ಸಾರುವ ಸಂವಿಧಾನದ ವಿನ್ಯಾಸವೇ ಬದಲಾಗುವುದರಲ್ಲಿ ಸಂದೇಹವಿಲ್ಲ. ಪ್ರಜಾಪ್ರಭುತ್ವ ಮುಖವಾಡದ ಸರ್ವಾಧಿಕಾರಿ ಆಡಳಿತ ಜಾರಿಗೆ ಬರುವುದು ಗ್ಯಾರಂಟಿ. ಅಮಿತ್ ಶಾ ಹಾಗೂ ರಾಜನಾಥ ಸಿಂಗ್ ರವರು ಹೇಳಿದಂತೆ ‘ಒಂದು ದೇಶ ಒಂದು ಚುನಾವಣೆ’ ಯೋಜನೆ ಕಾರ್ಯಗತವಾಗುತ್ತದೆ. ಒಕ್ಕೂಟ ವ್ಯವಸ್ಥೆ ಹಿನ್ನೆಲೆಗೆ ಸರಿದು ಕೇಂದ್ರಿಕೃತ ಆಡಳಿತ ವ್ಯವಸ್ಥೆ ಬರುತ್ತದೆ. ಬಹುತ್ವ ಸಂಸ್ಕೃತಿಯ ಮೇಲೆ ಹಿಂದುತ್ವ ಸವಾರಿ ಮಾಡುತ್ತದೆ. ಹೀಗಾಗಿದ್ದೇ ಆದರೆ ಇಡೀ ದೇಶವಾಸಿಗಳು ಮುಂದೆ ಬಂದಿದ್ದನ್ನು ಅನುಭವಿಸಲು ಸಿದ್ದರಾಗಬೇಕಿದೆ. ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯಬೇಕಿದೆ.

ಹೀಗಾಗಬಾರದು ಎಂದರೆ ಮೋದಿ ನೇತೃತ್ವದ ಪಕ್ಷಗಳ ಸೀಟು ಗಳಿಕೆ 200 ದಾಟಬಾರದು. ಇಂಡಿಯಾ ಒಕ್ಕೂಟದ ಒಗ್ಗಟ್ಟು ಯಾವುದೇ ಕಾರಣಕ್ಕೂ ಮುರಿಯಬಾರದು. ಸಂವಿಧಾನ ಹಾಕಿ ಕೊಟ್ಟ ಮಾರ್ಗದಲ್ಲಿ ಈ ದೇಶ ಮುನ್ನಡೆಯುವಂತಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಆಶಯದಲ್ಲಿ ಇನ್ನೂ ಹೆಚ್ಚು ಗಟ್ಟಿಗೊಂಡು ಮುಂದುವರೆಯಬೇಕು. ಅದಕ್ಕಾಗಿ ಕೋಮುವಾದಿ ಸರ್ವಾಧಿಕಾರಿ ಫ್ಯಾಸಿಸಂ ಸೋಲಲೇಬೇಕು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಲೋಕಸಭಾ ಚುನಾವಣೆ 2024- ಫಲಿತಾಂಶ ಏನಾಗಬಹುದು?

More articles

Latest article