ಸಾಲ ಕೇಳಿ ಬ್ಯಾಂಕಿಗೆ ಹೋದಾಗ…….

Most read


ಕೈವಾರದ ಗುರುವಾರದ ಸಂತೆಯ ದಿನ ಟೆಂಪೋ ಮಾರಾಟಕ್ಕಾಗಿ ಪ್ರಚಾರ ಮಾಡುತ್ತಿದ್ದರು. ನಾನು ಹಾಗೂ ದೇವರಾಜ ಅಲ್ಲಿಗೆ ಹೋಗಿ ಪ್ರತಿನಿಧಿಯನ್ನು ಕೇಳಿ ವಿವರಗಳನ್ನು ಪಡೆದೆವು. ಹ್ಯಾಗೋ ನನ್ನ ತಮ್ಮನಿಗೆ ಡ್ರೈವಿಂಗ್‌ ಬರುತ್ತೆ, ಕಾಲೇಜು ಓದುತ್ತಿದ್ದಾನೆ, ಓದು ಅಷ್ಟಕಷ್ಟೆ, ಟೆಂಪೋ ಅವನಿಗೆ ಕೆಲಸ ನೀಡುತ್ತದೆ ಎಂದು ನಿರ್ಧರಿಸಿ ಅಲ್ಲೇ ಇದ್ದ ಕೆನರಾ ಬ್ಯಾಂಕಿಗೆ ಭೇಟಿ ನೀಡಿ ಮ್ಯಾನೇಜರ್ ಅವರನ್ನು ಕಂಡು ಪರಿಚಯ ಹೇಳಿಕೊಂಡೆ. ನಾನು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೀನಿ, ತಿಂಗಳಿಗೆ ಇಪ್ಪತ್ತೈದು ಸಾವಿರ ಸಂಬಳ ಇದೆ, ನನಗೆ ವಾಹನ ಸಾಲ ಬೇಕಾಗಿದೆ ಅದಕ್ಕೆ ಬೇಕಾದ  ಪೂರಕ ದಾಖಲೆಗಳನ್ನು ಒದಗಿಸ್ತೇನೆ, ಟೆಂಪೋ ಕೊಳ್ಳಲು ತಾವು ಆರ್ಥಿಕ ಸಹಾಯ ನೀಡಬಹುದೇ ಸಾರ್ ಎಂದು ಕೇಳಿದೆ. ಆ ಮ್ಯಾನೇಜರ್ ಅನುಮಾನದಿಂದ ನನ್ನನ್ನು ನೋಡಿ,‌ “ಕ್ಷಮಿಸಿ ಸರ್ವಿಸ್‌ ಏರಿಯಾ ನಮಗೆ ಬರೋದಿಲ್ಲ, ನೀವು ತಳಗವಾರ ಗ್ರಾಮೀಣ ಬ್ಯಾಂಕಿನಲ್ಲಿ ವಿಚಾರಿಸಿ” ಎಂದು ಅಸಮಂಜಸ ಉತ್ತರ ನೀಡಿದರು. ಅವರಲ್ಲಿ ಇನ್ನು ಹೆಚ್ಚೇನು ಮಾತು ಆಡುವಂತಿರಲಿಲ್ಲ. ಹಾಗಾಗಿ ನಿರಾಸೆಯಿಂದ ಹಿಂತಿರುಗಿದೆವು. ಅಷ್ಟೊತ್ತಿಗಾಗಲೇ ಟೆಂಪೋ ಕೊಳ್ಳುವ ಆಸೆ ಬಹುತೇಕ ಕಮರಿ ಹೋಗಿತ್ತು. ಸಾಲ ಸಿಗುತ್ತಿಲ್ಲ ಅಂತ ಟೆಂಪೋ ಮಾರಾಟ ಪ್ರತಿನಿಧಿಗೆ ಹೇಳಿದೆ. ಬ್ಯಾಂಕಿನವರು ಇಲ್ಲ ಅಂದ್ರೆ ಏನಂತೆ ನಮ್ಮದೇ ಫೈನಾನ್ಸ್ ಇದೆ ಆದರೆ ಬಡ್ಡಿ ಜಾಸ್ತಿ, ಮಾಡಿಸಿ ಕೊಡ್ತೀನಿ ಎಂದು ಆಶ್ವಾಸನೆ ನೀಡಿದರು. ಹೇಗಿದ್ದರೂ ಖಾಸಗಿ ಪೈನಾನ್ಸ್‌ನಲ್ಲಿ ಸಾಲ ಕೊಟ್ಟೇ ಕೊಡ್ತಾರೆ ಅಂತ ವಿಶ್ವಾಸದಿಂದ ನಾನಿದ್ದೆ.

ಮರುದಿನ ಬೇಕಾದ ದಾಖಲೆಗಳನ್ನು ಜೋಡಿಸಿಕೊಂಡೆ. ಹಾಗೇನೆ  ಜಾಮೀನು ನೀಡಲು ಅಪ್ಪನ ಆಪ್ತರಾದ ಹನುಮಣ್ಣನವರನ್ನುಅಪ್ಪ ಕಾಡಿ ಬೇಡಿ ಒಪ್ಪಿಸಿದ್ದನು. ದಾಖಲೆ ಪತ್ರಗಳಿಗೆ ಅಪ್ಪನದು ಸಹಿಗಳೆಲ್ಲ ಮುಗಿದವು ಹನುಮಣ್ಣನದು ಸಹಿ ಆಯಿತು. ಹನುಮಣ್ಣನವರೇ, ನಿಮ್ಮ ಜಮೀನಿನ ಪಹಣಿ ಬೇಕಿತ್ತು  ಎಂದಾಗ ನನ್ನ ಪಹಣಿ ಯಾಕೆ? ಜಾಮೀನು ಹಾಕಿರೋದು ಪಹಣಿಯಲ್ಲಿ ನಮೂದಾಗುತ್ತೆ, ನಾಳೆ ಇವರು ಸಾಲ ಕಟ್ಟಲಿಲ್ಲ ಅಂದ್ರೆ ನನಗೆ ಗಂಟು ಬೀಳ್ತಿರಾ, ಬೇಕಾದರೆ ಸಹಿ ಹಾಕ್ತೇನೆ ಪಹಣಿ ಕೊಡುವುದಿಲ್ಲ ಎಂದು ಸಿಟ್ಟಾದರು. ನಾನು ದೈನ್ಯದಿಂದ ಅಣ್ಣ ಹಾಗಾಗಲಾರದು ಖಂಡಿತ ಕಂತು ಕಟ್ತೇನೆ ನನ್ನ ನಂಬಿ ಅಣ್ಣ ಎಂದು ಕೇಳಿಕೊಂಡರೂ ಹನುಮಣ್ಣನ ಮನಸ್ಸು ಕರಗದೆ ಹೋಯಿತು. ಕಂಪನಿಯ ಟೆಂಪೋ ಮಾರಾಟ ಪ್ರತಿನಿಧಿ ಬೇರೆ ಯಾರಾದರೂ ಜಾಮೀನುದಾರರು ಸಿಕ್ಕರೆ ನೋಡಿ ಸಾರ್ ಎಂದು ಹೇಳಿ ಹೊರಟು ಹೋದರು.

ಅಷ್ಟೊತ್ತಿಗಾಗಲೇ ಟೆಂಪೋ ಕೊಳ್ಳುವ ನಮ್ಮ ಪ್ರಯತ್ನಗಳ ಸುದ್ದಿ ಇಡಿ ಹಳ್ಳಿಯನ್ನು ವ್ಯಾಪಿಸಿತ್ತು. ಕೊನೆ ಕ್ಷಣದಲ್ಲಿ ಕೆಲಸ ಕೈ ಗೂಡಲಿಲ್ಲ ಎಂದು ನಿರಾಸೆ ಆಯಿತು. ಆದರೆ ನಮ್ಮಪ್ಪ ಅದ್ಯಾಕೋ ಪಟ್ಟು ಸಡಿಸಲಿಲ್ಲ. ಏನೇ ಅಗಲಿ ಟೆಂಪೋ ತರಲೇಬೇಕು ಎಂದು ಪ್ರಯತ್ನ ಮಾಡುತ್ತಲೇ ಇದ್ದನು.

ಅಪ್ಪನು ತನ್ನ ಆತ್ಮೀಯರಾದ, ವಾಹನಗಳ ಬಗ್ಗೆ ತಿಳಿದಿದ್ದ ನಾಗರಾಜಣ್ಣನನ್ನು ಕರ್ಕೊಂಡು ಟೆಂಪೋಗಾಗಿ ಹುಡುಕಾಟ ಮುಂದುವರೆಸಿದ್ದನು. ನಾಗರಾಜಣ್ಣನು ಚಿಕ್ಕಬಳ್ಳಾಪುರದಲ್ಲಿ ಕಂತು ಕಟ್ಟಲಾಗದೆ ಸೀಜಿಗೆ ಬಂದಿರುವಂತಹ ಗಾಡಿಯನ್ನು ಪತ್ತೆಹಚ್ಚಿದ. ಒಂದು ವರ್ಷದ ಗಾಡಿ, ಸಾಲ ಎಪ್ಪತ್ತೈದು ‌ಸಾವಿರ ಬಾಕಿ ಇತ್ತು, ಬಾಕಿ ಕಟ್ಟಿ ತಿಂಗಳ ಕಂತು ಕಟ್ಟಿಕೊಂಡು ಹೋಗಬೇಕಾಗಿತ್ತು. ಬೇರೆ ದಾರಿ ನನಗೆ ಇರಲಿಲ್ಲ. ಗಾಡಿ ಒಂದು ವರ್ಷದ್ದು ಅನ್ನೋದು ಬಿಟ್ಟರೆ ಬೇಡವೆನ್ನಲು ಬೇರೆ ಕಾರಣಗಳು ಇರಲಿಲ್ಲ. ಸರಿ ಒಪ್ಪಿಕೊಂಡೆ. ಮೂರೂವರೆ‌ ಲಕ್ಷಕ್ಕೆ ವ್ಯಾಪಾರ ಕುದುರಿತು. ಬಾಕಿ ಇದ್ದ ಕಂತುಗಳನ್ನು ಕಟ್ಟಿದ ನಂತರ ಗಾಡಿ ನಮಗೆ ಹಸ್ತಾಂತರಿಸಿದರು. ಗಾಡಿ ಮೊದಲಿದ್ದ ಮಾಲೀಕರ ಹೆಸರಿನಲ್ಲೇ ಇತ್ತು. ಅವರ ಹೆಸರಿನಲ್ಲೇ ಕಂತುಗಳನ್ನು ಮುಂದುವರೆಸಿಕೊಂಡು ಹೋಗಬೇಕಾಯಿತು. ಯಾವುದಕ್ಕೂ ಹಿಂದೆ ಮುಂದೆ ಯೋಚನೆ ಮಾಡದೆ ಮುಂದಡಿ ಇಟ್ಟೆ. ನನ್ನ ನಂಬಿಕೆ ಸುಳ್ಳಾಗಲಿಲ್ಲ. ಬರ್ತಿದ್ದ ಸಂಬಳದಲ್ಲಿ ಕಂತು ಕಟ್ಟುತ್ತಾ ಹೋದೆ. ಸಾಲ ತೀರಿ ಗಾಡಿ ಸ್ವಂತದ್ದಾಯಿತು.

ಈಗ‌ ಅಪ್ಪ ಇಲ್ಲ‌. ತೀರಿಕೊಂಡು ಆರು ವರ್ಷ‌ಗಳು ಉರುಳಿವೆ. ಈಗಲೂ ಅಪ್ಪನ ಸ್ನೇಹಿತರಾದ ಹನುಮಣ್ಣ ನನ್ನ ಕಣ್ಣ ಮುಂದೆ ಬಂದಾಗಲೆಲ್ಲ ಅಂದು ಪಹಣಿ ಕೊಡಲ್ಲ ಅಂತ ಎದ್ದು ಹೋದ ಘಟನೆ ಕಣ್ಣ ಮುಂದೆ ಬರುತ್ತೆ. ಹಾಗೇ ಆಯಣ್ಣ ಎದುರಿಗೆ ಸಿಕ್ಕಾಗಲೆಲ್ಲ “ನೋಡಿ ಅಣ್ಣ, ಅವತ್ತು ಟೆಂಪೋ ಕೊಳ್ಳಲು ನೀವು ಸಹಕರಿಸಲಿಲ್ಲ‌ ಆದರೆ ನಾವು ಅಲ್ಲೇ ನಿಲ್ಲಲಿಲ್ಲ. ಇಂದು ಮೂರು ಗಾಡಿಗಳಾದವು. ಟ್ರ್ಯಾಕ್ಟರ್, ಸುಮೋ, ಟೆಂಪೋ” ಎಂದು ಹೇಳಬೇಕು ಅಂತ ನಾಲಿಗೆವರೆಗೂ ಬಂದದನ್ನು ಹಾಗೆಯೇ ತಡೆ ಹಿಡಿದೆ. ಅದು ಸೂಕ್ತವಲ್ಲ ಎನ್ನುವ ಕಾರಣಕ್ಕೆ. ಸಾಲ ಕಟ್ಟುವ ಶಕ್ತಿ ಇದ್ದರೆ, ಸಾಲ ಮಾಡಲು ಯೋಚಿಸಬಾರದು. ಬಂಡವಾಳಕ್ಕೆ ಸಾಲ ಮಾಡಲೇಬೇಕು ಎಂದಾದಾಗ ಹಿಂದೆ ಮುಂದೆ ನೋಡ ಬಾರದು ಮತ್ತು ನಮ್ಮನ್ನು  ಅಲಕ್ಷಿಸುವವರ ಮುಂದೆ ನಾವು ಏನು ಅಂತ‌ ಸಾಧಿಸಿ ತೋರಿಸಬೇಕು.

ಇಂದು ನನ್ನಂತ ಅದೆಷ್ಟೋ ಯುವಕರು ಬಂಡವಾಳ ಸಿಗದೆ ಮುಂದಡಿ ಇಡಲಾಗದೆ ಅಲ್ಲೇ‌ ಕೊಳೆಯುತ್ತಿದ್ದಾರೆ. ಖಾಸಗಿ ಫೈನಾನ್ಸ್ ನವರು ಕೊಡಬಹುದಾದ ಸಾಲ ಸರಕಾರಿ ಬ್ಯಾಂಕುಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಕಂತು ಕಟ್ಟುವ ಸಾಮರ್ಥ್ಯ ಇದ್ದರೂ ಸಾಲದಿಂದ ವಂಚಿತರಾಗುವ ಯುವಕರಿಗೆ ಯಾರು ದಾರಿ ದೀಪ ಆಗುವವರು?

ಕೊನೆಯದಾಗಿ ಟೆಲಿಕಾಲರ್ಸ್ ಬಗ್ಗೆ ಒಂದು ಮಾತು. ಲೋನ್ ಬೇಕಾ ಸಾರ್ ಎಂದು ಕರೆ ಮಾಡುವ ಟೆಲಿ ಕಾಲರ್ಸಿಗೆ ನಿಜವಾಗಲೂ ನಾವು ಧನ್ಯವಾದ ಹೇಳಬೇಕು. ಯಾರ ಜಾಮೀನು ಇಲ್ಲದೆ, ಸಾಮರ್ಥ್ಯಕ್ಕೆ ತಕ್ಕಂತೆ ಅವರವರ ಕ್ರೆಡಿಟ್ ಸ್ಕೋರಿನ ಆಧಾರದ ಮೇಲೆ ಹಾಗೂ ಅವರು ಕೇಳಿದ ದಾಖಲೆಗಳನ್ನು ಒದಗಿಸಿದರೆ, ಸಾಲವನ್ನು ಕ್ಷಣಗಳಲ್ಲಿ ಯಾರ ಶಿಫಾರಸ್ಸು ಇಲ್ಲದೆ ಮಂಜೂರು ಮಾಡಿಸ್ತಾರೆ. ಒಂದೇನಪ್ಪ ಅಂದ್ರೆ ಸಾಲಕ್ಕೆ ವಿಮೆ ಮಾಡಿಸ್ತಾರೆ. ಸಾಲವನ್ನು ಕಟ್ಟದೇ ಹೋದ ಸಂದರ್ಭದಲ್ಲಿ ವಿಮೆ ಕ್ಲೈಮ್ ಮಾಡಿಕೊಳ್ತಾರೆ. ಅದೇ ಸರ್ಕಾರಿ ಬ್ಯಾಂಕುಗಳಲ್ಲಿ ಸಾಲ ಕೇಳಿದರೆ ಈಗಲೂ ಅದೇ ಕಂಠ ಪಾಠ ಮಾಡಿಸಿ ಕಳುಹಿಸ್ತಾರೆ. ಅಪ್‌ಡೇಟ್ ಆಗಬೇಕಿದೆ ಸರ್ಕಾರಿ ಬ್ಯಾಂಕುಗಳು ಇನ್ನಷ್ಟು ಮತ್ತಷ್ಟು..

ಆನಂದ ಕೈವಾರ

ಇದನ್ನೂ ಓದಿ- https://kannadaplanet.com/hi-fi-slavery-in-wifi-age/

More articles

Latest article