ಕೆಲ ದಿನಗಳ ಹಿಂದಷ್ಟೇ ಇನ್ಫೋಸಿಸ್ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಉದ್ಯೋಗಿಗಳು ದುಡಿಯಬೇಕು ಎಂದು ಹೇಳಿದ್ದರೆ ಎಲ್&ಟಿ ಚೇರ್‌ಮನ್ ಎಸ್.ಎನ್ ಸುಬ್ರಹ್ಮಣ್ಯನ್, ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸೂಚಿಸಿದ್ದಾರೆ. ವಾರಕ್ಕೆ 70 –90 ಗಂಟೆ ಕೆಲಸ ಸರಾಗವೇ? ಸಾಫ್ಟ್ ವೇರ್ ಇಂಜಿನಿಯರ್ ಕಾವ್ಯಶ್ರೀ ಅವರ ಸ್ಪಂದನೆ ಇಲ್ಲಿದೆ.
ಅಪ್ಪನ ಮೆಡಿಕಲ್ ಚೆಕ್ ಅಪ್ ಮಾಡಿಸಬೇಕು, ವಾರದ ದಿನಗಳಲ್ಲಿ ಆಗೋದೇ ಇಲ್ಲ. ಶನಿವಾರ ಇಲ್ಲ ಭಾನುವಾರ ಅಪಾಯಿಟ್‌ಮೆಂಟ್ ತಗೋಬೇಕು.
ಅಮ್ಮ ಮಂಡಿ ನೋವು ಅಂತ ಇದ್ರು, ಆರ್ಥ್ರೈಟಿಸ್ ಇರ್ಬೇಕು rheumatologist ಅಪಾಯಿಟ್‌ಮೆಂಟ್ ತಗೋಬೇಕು. ಶನಿವಾರ ಭಾನುವಾರ ಅಪಾಯಿಟ್‌ಮೆಂಟ್ ಸಿಗೋದೇ ಕಷ್ಟ. ಒಂದ್ ತಿಂಗಳು ಮೊದಲು ಅಡ್ವಾನ್ಸ್ ಬುಕಿಂಗ್ ಮಾಡ್ಲೆ ಬೇಕು.
ಮಗುವಿನ ಶಾಲೆಯಲ್ಲಿ ಪಿ ಟಿ ಎಂ( Parent teacher meeting) ಇದೆ.
ಅಬ್ಬಬ್ಬಾ ಶನಿವಾರ ಭಾನುವಾರ ಬಂತು ಅಂತ ಅಂದ್ರೆ ಅದೆಷ್ಟೆಲ್ಲ ಜವಾಬ್ದಾರಿಗಳು ತಲೆ ಮೇಲೆ ಬೀಳುತ್ತವೆ!!
ಭಾನುವಾರದಂದು ಗಂಡ ಹೆಂಡಿರ ಮುಖ ನೋಡಿಕೊಳ್ಳುವುದು ಇರಲಿ, ಅವರ ಮುಖವನ್ನ ಅವರು ಕನ್ನಡಿಯಲ್ಲಿ ನೋಡಿಕೊಳ್ಳಲೂ ಪುರುಸೊತ್ತು ಇರಲ್ಲ.
ವಾರ ಪೂರ್ತಿ ಹತ್ತರಿಂದ ಆರು ಘಂಟೆ ಯ ತನಕ ಆಫೀಸಿನಲ್ಲಿ ಕೆಲಸ ಮಾಡಿ, ನಾಲ್ಕಾರು ಗಂಟೆ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡು ಮನೆಗೆ ಬರುವ ಹೊತ್ತಿಗೆ ಗಂಟೆ ಎಂಟಾಗಿರುತ್ತೆ.
ಊಟ ಆಯ್ತಾ ಪಾತ್ರೆ ತೊಳೆದಿಟ್ಟು ಮಲಗು.. ಇಷ್ಟೇ ಜೀವನ.
ಎಷ್ಟೋ ಸಲ ಕ್ಯಾಬ್ ನಲ್ಲೇ, ಕಾರ್ ಓಡಿಸುವಾಗಲೇ ಒಂದಷ್ಟು ಟೀಮ್ಸ್ ಕಾಲ್ ಗಳನ್ನ ಮುಗಿಸಿ ಬಿಟ್ಟಿರುತ್ತೇವೆ.
ಇಷ್ಟೆಲ್ಲಾ ದುಡಿದರೂ ಕಡೆಗೆ ಸಿಗುವ ಸಂಬಳ ಒಂದಕ್ಕೆ ಸಾಕಾದರೆ ಮತ್ತೊಂದಕ್ಕೆ ಸಾಲಲ್ಲ.
ಇನ್ನ ವರ್ಷ ವರ್ಷ ಖರ್ಚು ಹೆಚ್ಚಾಗ್ತಾ ಇರುತ್ತೆ ಹೊರತು, ಸಂಬಳ ಮಾತ್ರ ಅಷ್ಟರಲ್ಲೇ ಇರುತ್ತೆ.
ಇದರ ಮಧ್ಯೆ ಹನ್ನೆರೆಡು ಘಂಟೆ ದುಡೀರಿ, ಹದಿನಾಲ್ಕು ಘಂಟೆ ದುಡೀರಿ, ಭಾನುವಾರ ನಿಮ್ ಹೆಂಡತಿಯರ ಮುಖ ನೋಡ್ತಾ ಎಷ್ಟೊತ್ತು ಕೂತಿರ್ತೀರಿ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿಕೆ ಕೊಡುವವರಿಗೆ ಇದರ ಅರಿವು ಇರಲ್ವಾ? ಇದ್ದೇ ಇದೇ.
ಒಂದು ಸಲ ಒಂದೇ ಒಂದು ಸಲ ಅವರ ಇಮಿಡಿಯೇಟ್ ರಿಪೋರ್ಟಿಗಳ ಡೇ ಇನ್ ಎ ಲೈಫ್ ಅನ್ನ observe ಮಾಡಲಿ.
ತುಂಬಾ ಹಿಂದೆ ಒಂದು ಸಣ್ಣ ಕತೆ ಓದಿದ್ದ ನೆನಪು.
ಒಂದು ಶಾಲೆಯಲ್ಲಿ ಮಕ್ಕಳಿಗೆ ತಾವು ಏನಾಗಬೇಕು ಅಂತ ಬಯಸುತ್ತೀರಿ ಎಂದು ಒಂದು ಪ್ರಬಂಧ ಬರೆದುಕೊಂಡು ಬರಲು ಹೇಳುತ್ತಾರೆ. ಅದರಲ್ಲಿ ಎರಡನೇ ತರಗತಿಯ ಒಂದು ಮಗು ತಾನು ಲ್ಯಾಪ್ ಟಾಪ್ ಅಥವಾ ಯಾವುದಾದರೂ ಒಂದು ಗ್ಯಾಜೆಟ್ ಆಗಬೇಕು ಅನ್ನುವ ಇಚ್ಛೆ ವ್ಯಕ್ತ ಪಡಿಸುತ್ತೆ. ಅದಕ್ಕೆ ಕಾರಣವನ್ನ ಹೀಗೆ ಕೊಡುತ್ತೆ, ತನ್ನ ತಂದೆ ತಾಯಿ ಸದಾ ಕೆಲಸಗಳಲ್ಲಿ ಮಗ್ನರಾಗಿರ್ತಾರೆ ಹಾಗಾಗಿ ತಾನು ಒಂದು ಲ್ಯಾಪ್ಟಾಪ್ ಆದ್ರೆ ಸದಾ ತನ್ನ ಅಪ್ಪ ಅಮ್ಮಂದಿರ ಜೊತೆ ಇರಬಹುದು ಅಂತಾ.
ಇನ್ನೊಂದು ಕತೆಯಲ್ಲಿ ಮಕ್ಕಳು ತಮ್ಮ ತಂದೆ ಸದಾ ಕೆಲಸ ಮಾಡುತ್ತಾ ಇರೋದ್ರಿಂದ ಅವ್ರ ತಂದೆಯ ಒಂದು ಘಂಟೆಯ ಸಂಬಳ ಹಣ ಕೂಡಿಟ್ಟು ತಮ್ಮ ತಂದೆಗೆ ಕೊಡುತ್ತಾ ಅವರ ಒಂದು ಘಂಟೆಯ ಸಮಯ ಕೇಳುತ್ತಾರೆ.
ಈ ಕಥೆಗಳೆಲ್ಲ ಮಧ್ಯಮ ವರ್ಗದ ಜನರ ಕಣ್ಣಲ್ಲಿ ನೀರು ತರಿಸುತ್ತವೆ ಅಷ್ಟೇ. ಈ ದೊಡ್ಡ ಕಂಪನಿಗಳ ಸಿಇಒ, chair person ಗಳಿಗೆ ಇದರ ಬಿಸಿ ತಾಕುವುದಿಲ್ಲ.
ಅಪ್ಪನನ್ನ ನೋಡೋಕೆ ಈ ವಾರ ಹೋಗೋಣ ಮುಂದಿನ ವಾರ ಹೋಗೋಣ ಅಂತಾ ಮುಂದೂಡುವ ಹೊತ್ತಿಗೆ ಅಲ್ಲಿ ಅಪ್ಪನ ಕಾಲವಾಗಿರುತ್ತದೆ.
ಹಾಗಂತ ಎಲ್ಲಾ ಕಂಪನಿ ಗಳಲ್ಲೂ 70-90 ಘಂಟೆಗಳ ಕೆಲಸ ಇರೋದಿಲ್ಲ. ನಮಗೆಲ್ಲ ಒಮ್ಮೊಮ್ಮೆ ವಾರಗಟ್ಟಲೆ ಕೆಲಸ ಇರೋದಿಲ್ಲ, ಹಾಗಂದ ಮಾತ್ರಕ್ಕೆ ನಮ್ಮನ್ನ ಕೆಲಸದಿಂದ ತೆಗೆದು ಹಾಕಲ್ಲ.
Fortune 500 ಕಂಪನಿಗಳಲ್ಲಿ ಯಾರೂ ವಾರದ 7 ದಿನ ದುಡಿಸಿಕೊಳ್ಳಲ್ಲ. ಸಮಯ ಬಂದಾಗ ಮಾತ್ರ ಸ್ವಲ್ಪ stretch ಮಾಡುತ್ತೇವೆ. ಆದ್ರೆ ಅದಕ್ಕೆ comp off ಅಂತ ನಮಗೆ ಬೇಕಾದ ದಿನ ರಜೆ ಹಾಕಿಕೊಳ್ಳುವ ಅವಕಾಶ ಇರುತ್ತೆ.
ಅದೇ ರೀತಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಅಭಿಯಾನಗಳನ್ನ ಸಹ ಮಾಡುತ್ತಾರೆ.
ಮೆಂಟಲ್ ಹೆಲ್ತ್ ಲೀವ್ ತೆಗೆದುಕೊಳ್ಳುವ ಅವಕಾಶ ಇರುತ್ತೆ. ಇಷ್ಟೆಲ್ಲಾ ಇದ್ದರೂ ಸಹ ಈಗೀಗ ಸಾಫ್ಟ್‌ವೇರ್ ಮಂದಿಗಳಲ್ಲಿ ಖಿನ್ನತೆ, ADHD, OCD ಯಂತಹ ಮಾನಸಿಕ ತೊಂದರೆಗಳು ಹೆಚ್ಚುತ್ತಲೇ ಇವೆ.
ವಾರಕ್ಕೆ ನಲವತ್ತೈದು ಘಂಟೆ ಗಳ ಕಾಲ ಕೆಲಸ ಮಾಡಿಯೇ ಕಥೆ ಹೀಗಿದೆ. ಇನ್ನ ಎಪ್ಪತ್ತು – ತೊಂಭತ್ತು ಘಂಟೆ ಗಳ ಕೆಲಸ ಅಂತ ಅಂದ್ರೆ ಪರಿಣಾಮ ಏನಾಗಬೇಡ? ನೀವೇ ಯೋಚಿಸಿ.
ಏಕ ಪೋಷಕಿಯಾದ ನನಗೆ, ಶನಿವಾರ ಭಾನುವಾರ ಬಂತು ಅಂತಾ ಅಂದ್ರೆ ಕೈತುಂಬಾ ಕೆಲಸ. ಮಗನ ಯೋಗ ಕ್ಷೇಮ ದ ಜೊತೆಗೆ, ವಾರಕ್ಕಾಗುವಷ್ಟು meal plan ಸಿದ್ಧ ಪಡಿಸುವುದು, ಲಾಂಡ್ರಿ, ಮನೆ ಒಪ್ಪ ಮಾಡುವುದು, ಜೊತೆಗೆ ಒಂದು ನೆಮ್ಮದಿಯ ನಿದ್ರೆ.
ಅಂದ ಹಾಗೆ ಗಂಡ ಹೆಂಡತಿಯರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳದೆ ಇದ್ದರೆ ಸಂಸಾರ ನಡೆಯುವುದಾದರೂ ಹೇಗೆ? ಒಂದು ಕಡೆ ಸುಖ ಸಂಸಾರಕ್ಕೆ ನೂರ ಇಪ್ಪತ್ತೆರಡು ಸೂತ್ರಗಳು ಅಂತ ನ್ಯಾಷನಲ್ ಚಾನೆಲ್ ಗಳಲ್ಲಿ ಆದರ್ಶ ದಂಪತಿಗಳಂತೆ ಕಾಣಿಸಿಕೊಳ್ಳುವುದು, ಇನ್ನೊಂದು ಕಡೆ ವಾರದಲ್ಲಿ ಎಪ್ಪತ್ತು ಘಂಟೆ ಕೆಲಸ ಮಾಡಿ ಅಂತ ಹೇಳೋದು ಮಜಾವಾದ ವಿಷಯ.
ನಾನು ನಿಮ್ಮನ್ನು ಭಾನುವಾರ ಕೆಲಸ ಮಾಡಿಸಿಕೊಳ್ಳೋಕೆ ಆಗ್ತಾ ಇಲ್ವಲ್ಲ ಅನ್ನೋ ವಿಷಾದ ಇದೆ ಅಂತ ಕುರುಬುವ ಬಂಡವಾಳಶಾಹಿಯ ಮಾತು ಮತ್ತೆ ಮತ್ತೆ ಕೇಳುವಾಗಲೆಲ್ಲ ಇಂತಹವರ ಬಗ್ಗೆ ಮುಂದಾಲೋಚನೆ ಮಾಡಿ labour act ತಂದು ನಮಗೆಲ್ಲ ನೆಮ್ಮದಿಯಾಗಿ ಉಸಿರಾಡಲು ಅನುವು ಮಾಡಿಕೊಟ್ಟ ಅಂಬೇಡ್ಕರ್ ಅವರನ್ನ ನೆನೆಯುತ್ತೇನೆ.
ಮಹಾಭಾರತದಲ್ಲಿ ಉಪಕತೆಯೊಂದು ಬರುತ್ತೆ. ಅದರಲ್ಲಿ ಅರ್ಜುನ ಕೃಷ್ಣನಿಗೆ ಒಂದು ಸವಾಲು ಹಾಕ್ತಾನೆ ಅದೇನೆಂದರೆ, ಕೃಷ್ಣ, ನೀನು ನನಗೆ ಒಂದು ಸಾಲು ಬರೆದು ಕೊಡಬೇಕು ಅದನ್ನ ನಾನು ಸಂತೋಷದ ಸಮಯದಲ್ಲಿ ಓದಿದಾಗ ದುಃಖ ಆಗಬೇಕು ದುಃಖದ ಸಮಯದಲ್ಲಿ ಓದಿದಾಗ ಸಮಾಧಾನ ಆಗಬೇಕು ಅಂತಾ.
ಅದಕ್ಕೆ ಕೃಷ್ಣ ಹೀಗೆ ಬರೀತಾನೆ “ಈ ಸಮಯ, ಕಳೆದು ಹೋಗುತ್ತೆ”.
ಕಾವ್ಯಶ್ರೀ
ದೊಡ್ಡಬಳ್ಳಾಪುರದ ಇವರು ಸಾಫ್ಟ್‌ವೇರ್ ಇಂಜಿನಿಯರ್
ಇದನ್ನೂ ಓದಿ- ವಾರಕ್ಕೆ 70 ಗಂಟೆ ಕೆಲಸ; ನಾರಾಯಣಮೂರ್ತಿ ನೀಡಿದ ಸ್ಪಷ್ಟನೆ ಏನು?